ಹಳೆಗನ್ನಡದ ಬಹುರೂಪೀ ನಿರೂಪಣೆಗಳು
ವಿದ್ಯಾರ್ಥಿ
ದಿಸೆಯಿಂದಲೂ ಹಳಗನ್ನಡ ಸಾಹಿತ್ಯಕ್ಕೆ ನಮ್ಮ ಪ್ರವೇಶವಾದದ್ದು ನಾವು ಓದಿದ ವಿವಿಧ ಸಾಹಿತ್ಯ
ಚರಿತ್ರೆಗಳ ಮೂಲಕ ಅವುಗಳಲ್ಲಿ ಕಾದಂಬರಿಯ ಹಾಗೆ ಓದಿಸಿಕೊಂಡು ಹೋಗುವ ರಂ. ಶ್ರೀ. ಮುಗಳಿ ಅವರ
ಸಾಹಿತ್ಯ ಚರಿತ್ರೆ ನಮಗೆಲ್ಲಾ ಇಷ್ಟವಾಗಿತ್ತು. ಇದರ ಜೊತೆಗೆ ಕನ್ನಡದ ಹಳಮೆಯ ಬಗ್ಗೆ ಬಹಳ
ಉತ್ಸಾಹದಿಂದ ಬರೆಯುವ ಬಹುಭಾಷಾ ಪಂಡಿತ ಮಂಜೇಶ್ವರ ಗೋವಿಂದ ಪೈಗಳು, ಅನೇಕ ವರ್ಷಗಳ ಶ್ರಮ ಸಾಧ್ಯ ದುಡಿತದ ಪರಿಣಾಮವಾಗಿ
ಸಿದ್ಧಗೊಂಡ ಕನ್ನಡ ಕವಿಚರಿತ್ರೆಯ ಮೂರು ಬೃಹತ್ ಸಂಪುಟಗಳ ಮೂಲಕ ಸಾವಿರಾರು ಕವಿಗಳ ಬಗೆಗೆ ಮೊದಲ
ಬಾರಿಗೆ ಅತ್ಯದ್ಭುತ ಮಾಹಿತಿ ನೀಡಿ, ಕನ್ನಡದ
ಬಗ್ಗೆ ನಾವೆಲ್ಲ ಹೆಮ್ಮೆ ಪಟ್ಟುಕೊಳ್ಳುವ ಹಾಗೆ ಮಾಡಿದ ಆರ್ ನರಸಿಂಹಾಚಾರ್ ಅವರು, ‘ಕನ್ನೆಡ
ಮಾತು ತಲೆ ಎತ್ತುವ’ ಹಾಗೆ ಮಾಡಿದ ಬಿ ಎಂ ಶ್ರೀಕಂಠಯ್ಯ, ಸುಲಲಿತ ಓದಿಗೆ ಹೆಸರುವಾಸಿಯಾದ ಟಿ ಎಸ್ ವೆಂಕಣ್ಣಯ್ಯ
ಅವರ ಕನ್ನಡ ಸಾಹಿತ್ಯ ಚರಿತ್ರೆ, ಪರೀಕ್ಷೆಯಲ್ಲಿ
ಉತ್ತರ ಬರೆಯಲು ಬಹಳ ಸಹಾಯ ಮಾಡುತ್ತಿದ್ದ ತ. ಸು. ಶಾಮರಾಯ ಅವರ ಸಂಕ್ಷಿಪ್ತ ಕನ್ನಡ ಸಾಹಿತ್ಯ
ಚರಿತ್ರೆ, ವಿದ್ವಾಂಸ ಎಂ. ಮರಿಯಪ್ಪ ಭಟ್ ಅವರ
ಪ್ರಾಚೀನ ಕನ್ನಡ ಸಾಹಿತ್ಯ, ಮಾರ್ಕ್ಸ್ ವಾದೀ ಚಿಂತನಾ ಚೌಕಟ್ಟಿನಲ್ಲಿ ಸಿ.
ವೀರಣ್ಣ ಅವರು ಬರೆದ ಕನ್ನಡ ಸಾಹಿತ್ಯ: ಚಾರಿತ್ರಿಕ ಬೆಳವಣಿಗೆ, ಸಂಪುಟ-1, ಮೊದಲಾದ
ಅನೇಕ ಬಗೆಯ ಸಾಹಿತ್ಯ ಚರಿತ್ರೆಗಳು ಹಳಗನ್ನಡದ ಬಗೆಗಣ ನಮ್ಮ ತಿಳುವಳಿಕೆಯನ್ನು ವಿಸ್ತರಿಸಿ
ಕಟ್ಟಿದುವು. ಇವುಗಳ ಜೊತೆಗೆ ಕಿಟೆಲ್, ಕೆ. ವೆಂಕಟರಾಮಪ್ಪ, ಬಿ ಎಲ್ ರೈಸ್, ಇ ಪಿ ರೈಸ್, ಎಂ ಎ
ದೊರೆಸ್ವಾಮಿ ಅಯ್ಯಂಗಾರ್, ತಿ ತಾ ಶರ್ಮ, ಮೊದಲಾದವರು ಬರೆದ ಲೇಖನ ಮತ್ತು ಪುಸ್ತಕಗಳು
ಹಳಗನ್ನಡದ ಕುರಿತ ನಮ್ಮ ಅನೇಕ ಸಂಶಯಗಳನ್ನು
ಪರಿಹರಿಸಿದ್ದುವು. ಆನಂತರದ ದಿನಗಳಲ್ಲಿ ಕೆಲವು ಸಂಸ್ಥೆಗಳೂ ಸಾಹಿತ್ಯ ಚರಿತ್ರೆಯನ್ನು ಬರೆಯಲು
ಆರಂಭಿಸಿದುವು. ಇದರಲ್ಲಿ ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಸಿದ್ಧಪಡಿಸಿದ ಸಾಹಿತ್ಯ
ಚರಿತ್ರೆಯ ಸಂಪುಟಗಳು ಬೃಹತ್ತಾಗಿದ್ದು ಹಳಗನ್ನಡದ ಬಗೆಗಣ ನಮ್ಮ ಪ್ರೀತಿ ಅಭಿಮಾನವನ್ನು
ಹೆಚ್ಚಿಸಿದುವು. ಅದರಲ್ಲೂ ಬೆಂಗಳೂರು ವಿಶ್ವವಿದ್ಯಾಲಯವು ಪ್ರಕಟಿಸಿದ ಸಾಮಾನ್ಯನಿಗೆ ಸಾಹಿತ್ಯ
ಚರಿತ್ರೆ ಮಾಲಿಕೆಯ ಹತ್ತು ಸಂಪುಟಗಳು ವಿಶೇಷವಾಗಿ ನಮ್ಮ ಕವಿಗಳನ್ನು ಹಾಗೂ ಅವರ ರಚನೆಗಳನ್ನು
ಜನಸಾಮಾನ್ಯರಿಗೆ ತಲುಪಿಸುವ ವಿಶಿಷ್ಟ ಪ್ರಯತ್ನವಾಗಿತ್ತು. ಇದಾದ ಆನಂತರ ದೊಡ್ಡ ಮಟ್ಟದಲ್ಲಿ
ಸಾಹಿತ್ಯ ಚರಿತ್ರೆ ಪ್ರಕಟವಾಗಿದ್ದು ನನ್ನ ಗಮನಕ್ಕೆ ಬಂದಿಲ್ಲ.
ಈ ಸಾಹಿತ್ಯ
ಚರಿತ್ರೆಗಳು ಸುದೀರ್ಘವಾದ ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ಬಗೆ ಬಗೆಯಲ್ಲಿ ವಿಭಜಿಸಿಕೊಂಡು
ವಿವರಿಸಲು ಪ್ರಯತ್ನಿಸಿವೆ. ಅವರಲ್ಲಿ ಕೆಲವರು ಧಾರ್ಮಿಕ ನೆಲೆಯಿಂದ ವಿಭಜಿಸಿದರೆ, ಮತ್ತೆ ಕೆಲವರು
ಭಾಷಿಕ ಆಧಾರದಿಂದ ವಿಭಜಿಸಿದರು, ಮತ್ತೆ ಕೆಲವರು ಅವೆರಡನ್ನೂ ಮಿಶ್ರಮಾಡಿದರು. ಇವುಗಳಲ್ಲಿ ಕವಿ ಕೇಂದ್ರಿತವಾಗಿ ಪಂಪಪೂರ್ವ ಯುಗ,
ಪಂಪಯುಗ, ಬಸವಯುಗ ಮತ್ತು ಕುಮಾರವ್ಯಾಸ ಯುಗವೆಂದು ವಿಭಜನೆ ಮಾಡಿದ್ದ ರಂ ಶ್ರೀಗಳು ನಮಗೆ
ಪ್ರಿಯರಾಗಿದ್ದರು. ಈ ವಿಭಜನೆಗೆ ತ ಸು ಶಾಮರಾಯರು ಹರಿಹರ ಯುಗವೆಂಬ ಇನ್ನೊಂದು ಘಟಕವನ್ನು ಸೇರಿಸಿ
ಹರಿಹರನಿಗೆ ಮಹತ್ವಿಕೆ ತಂದಿತ್ತರು.
ಈ ಬಗೆ ಬಗೆಯ
ಸಾಹಿತ್ಯ ಚರಿತ್ರೆಗಳ ಜೊತೆಗೆ 20ನೇ
ಶತಮಾನದುದ್ದಕ್ಕೂ ಕನ್ನಡದ ಅನೇಕ ಕವಿಗಳ
ಪಠ್ಯಗಳನ್ನು ಶ್ರಮವಹಿಸಿ ಸಂಪಾದಿಸಿ, ಪ್ರಕಟಿಸಲಾಯಿತು. ಅದೊಂದು
ಬಹಳ ದೊಡ್ಡ ಕೆಲಸ. ಹೀಗೆ ಸಂಪಾದಿಸಲಾದ ಪಠ್ಯಗಳ
ಆರಂಭದಲ್ಲಿ ದೊರೆಯುವ
ವಿಸ್ತಾರವಾದ ಪ್ರಸ್ಥಾವನೆಗಳು ಸಾಹಿತ್ಯ
ಚರಿತ್ರೆಯ ತುಣುಕುಗಳ
ಹಾಗೆ ಇವೆ. ಬಿ ಎಲ್
ರೈಸ್, ಎಸ್ ಜಿ ನರಸಿಂಹಾಚಾರ್, ಡಿ ಎಲ್ ನರಸಿಂಹಾಚಾರ್, ಬೆಳ್ಳಾವೆ ವೆಂಕಟನಾರಾಯಣಪ್ಪ,, ಕೆ ಜಿ ಕುಂದಣಗಾರ,
ಟಿ ಎಸ್
ವೆಂಕಣಯ್ಯ, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್, ಎಲ್ ಬಸವರಾಜು,
ಫ ಗು
ಹಳಕಟ್ಟಿ, ಆರ್ ಸಿ ಹಿರೇಮಠ, ಎಂ ಚಿದಾನಂದ ಮೂರ್ತಿ, ಎಂ ಎಂ ಕಲಬುರ್ಗಿ,
ಸಾ ಶಿ
ಮರುಳಯ್ಯ, ಎಸ್ ವಿದ್ಯಾಶಂಕರ, ಆರ್ ವೈ ಧಾರವಾಡಕರ್, ವೃಷಭೇಂದ್ರ ಸ್ವಾಮಿ, ವರದರಾಜ ರಾವ್, ಶ್ರೀನಿವಾಸ ಹಾವನೂರು, ಹಂ ಪ ನಾಗರಾಜಯ್ಯ,
ಹಾ ಮಾ ನಾಯಕ, ಟಿ ವಿ ವೆಂಕಟಾಚಲ ಶಾಸ್ತ್ರಿ, ಜಿ
ವೆಂಕಟಸುಬ್ಬಯ್ಯ, ಜಿ ಎಸ್
ಶಿವರುದ್ರಪ್ಪ, ಮೊದಲಾದ ಘನ
ವಿದ್ವಾಂಸರು ಕನ್ನಡ ಪಠ್ಯಗಳ ಮೇಲೆ ಬರೆದ ಲೇಖನಗಳು ಅತ್ಯಂತ ಮಹತ್ವದವೂ, ತೀಕ್ಷ್ಣ
ಒಳನೋಟಗಳುಳ್ಳವೂ ಆಗಿದ್ದು ನಮ್ಮನ್ನೆಲ್ಲ ಗಾಢವಾಗಿ ಪ್ರಭಾವಿಸಿದುವು.
ಈ ಎಲ್ಲಾ
ಪ್ರಯತ್ನಗಳೂ ಅಂದಂದಿನ ಅಗತ್ಯಗಳಿಗೆ ತಕ್ಕಂತೆ ಸಿದ್ಧವಾದ ಸಂಪುಟಗಳು, ಪ್ರಸ್ಥಾವನೆಗಳು ಹಾಗೂ ಲೇಖನಗಳು. ಸ್ಥೂಲವಾಗಿ ಇವು ಪರಿಚಯಾತ್ಮಕ, ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕವಾಗಿದ್ದುವು.
ಕವಿಯ ಮನೆತನ, ಗುರು
ಪರಂಪರೆ, ಕಾಲ ನಿರ್ಣಯ, ದೇಶ ಪರಿಚಯ, ಆಶ್ರಯದಾತನ
ಬಗ್ಗೆ ಮಾಹಿತಿ, ಕವಿಯ
ವ್ಯಕ್ತಿತ್ವ, ಕವಿಕಾವ್ಯ
ಪ್ರಶಂಸೆ, ಮತ್ತು ಅವನ ಕೃತಿಗಳ ಸ್ಥೂಲ
ಪರಿಚಯ-ಇವಿಷ್ಟು ಸಾಮಾನ್ಯವಾಗಿ ಇಲ್ಲಿ ಕಂಡು ಬರುವ ವಿಚಾರಗಳು. ಶ್ರೀ ಸಾಮಾನ್ಯನಿಗೆ ಸಾಹಿತ್ಯ
ಸಂಪುಟಗಳಲ್ಲಿ ವಿವರಗಳು ಸರಳವೂ ಸಂಕ್ಷಿಪ್ತವೂ ಆಗಿದ್ದರೆ, ಬೃಹತ್ ಸಂಪುಟಗಳಲ್ಲಿ ಅವು
ವಿವರಣಾತ್ಮಕವೂ ವಿಶ್ಲೇಷಾಣತ್ಮಕವೂ ಆಗಿರುತ್ತಿದ್ದುವು.
ಈ ಎಲ್ಲಾ
ಪ್ರಯತ್ನಗಳನ್ನು ಒಟ್ಟಾರೆಯಾಗಿ ಗಮನಿಸಿದಾಗ ನಮಗೆ ಹಳಗನ್ನಡದ ಕವಿಗಳು ಪರಿಚಯವಾದ ರೀತಿಯಲ್ಲಿ
ಒಂದು ಬಗೆಯ ಏಕತಾನತೆ ಇದೆ ಎಂದು ಈಗ ತೋರುತ್ತಿದೆ. ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಯ
ಸಂಪುಟಗಳು ಒಂದೇ ಬಗೆಯಲ್ಲಿ ರಚಿತವಾಗಿವೆ ಎಂದು ತೀವ್ರವಾಗಿ ಅನ್ನಿಸುತ್ತಿದೆ. ಈಗಾಗಲೇ ನಾನು
ಹೇಳಿರುವಂತೆ, ಅವು ಕವಿಯ
ಕಾಲ, ದೇಶ, ಕುಟುಂಬದ ವಿವರಗಳನ್ನು ನೀಡುವುದರ ಜೊತೆಗೆ ಕವಿಯ
ಕೃತಿಗಳ ಬಗೆಗೆ ಸಂಕ್ಷಿಪ್ತವಾಗಿಯೋ ಇಲ್ಲ ಸವಿವರವಾಗಿಯೋ ವಿವರ ನೀಡುತ್ತವೆ. ಬಹುಮಟ್ಟಿಗೆ
ವಡ್ಡಾರಾಧನೆಯಿಂದ ಆರಂಭವಾಗುವ ಕನ್ನಡ ಸಾಹಿತ್ಯ ಚರಿತ್ರೆಯು ಮೈಸೂರು ಅರಸರ ಕಾಲದಲ್ಲಿ ರಚಿತವಾದ
ಕೃತಿಗಳನ್ನು ವಿವರಿಸುವದರೊಂದಿಗೆ ಮುಕ್ತಾಯವಾಗುತ್ತದೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು
ಬರೆಯುವವರು ನವೋದಯದಿಂದ ಆರಂಭಿಸಿ ದಲಿತ - ಬಂಡಾಯ ಸಾಹಿತ್ಯಗಳನ್ನು ಪರಿಚಯಿಸುವದರೊಂದಿಗೆ ಅದನ್ನು
ಕೊನೆಗೊಳಿಸುತ್ತಾರೆ. ಅಂದರೆ ಬಹುಮಟ್ಟಿಗೆ ನಮ್ಮ ಸಾಹಿತ್ಯ ಚರಿತ್ರೆಗಳು ಕೃತಿಯೊಂದನ್ನು
ಅಂತಿಮವೆಂದು ಪರಿಭಾವಿಸಿಕೊಂಡು ರಚಿತವಾಗಿವೆ. ಈ ವಿಮರ್ಶೆಯು ಪಠ್ಯವೊಂದರ ಅಂತಸ್ಥ ಗುಣಗಳನ್ನು
ಸೂಕ್ಷ್ಮವಾಗಿ ತೆರೆದಿಡುತ್ತದೆ. ಪಠ್ಯದ ಭಾಷೆ, ಛಂದಸ್ಸು, ವಸ್ತು ನಿರ್ವಹಣೆ ಮೊದಲಾದುವುಗಳನ್ನು
ಅವು ಸಮರ್ಥವಾಗಿ ವಿಶ್ಲೇಷಿಸುತ್ತವೆ. ಆದರೆ ನಿರ್ದಿಷ್ಠ ಪಠ್ಯವೊಂದು ಕಾಲ ಕಾಲಕ್ಕೆ ಬದಲಾಗುತ್ತಾ, ಹೊಸ ರೂಪ ಧರಿಸಿ ಬೆಳೆಯುತ್ತಾ, ಬಹುರೂಪಿಯಾಗಿ, ಸುಸ್ಥಿರವಾಗಿ
ಮುಂದುವರೆದುಕೊಂಡು ಬರುವ ಕ್ರಮವನ್ನು ಉಪೇಕ್ಷಿಸುತ್ತದೆ. ಇದನ್ನು ಚಾರಿತ್ರಿಕವಾಗಿ
ಅರ್ಥಮಾಡಿಕೊಳ್ಳುದರಿಂದ ನಮಗೆ ತುಂಬ ಪ್ರಯೋಜನವಿದೆ ಎಂದು ನಾನು ಭಾವಿಸುತ್ತೇನೆ.
ನಾವೀಗ ನಮಗೆ
ಲಭ್ಯವಾಗಿರುವ ಸಾಹಿತ್ಯ ಚರಿತ್ರೆಗಳು ಹಾಗೂ ವಿದ್ವಾಂಸರಿಂದ ಸಂಪಾದಿತವಾದ ಮೂಲ ಪಠ್ಯಗಳ ಮೂಲಕ
ಹಳಗನ್ನಡ ಸಾಹಿತ್ಯಕ್ಕೆ ಪ್ರವೇಶ ಮಾಡುತ್ತೇವೆ, ಪಠ್ಯಗಳನ್ನು ಓದುತ್ತೇವೆ, ಚರ್ಚಿಸುತ್ತೇವೆ ಮತ್ತು ಕೆಲವು ಪ್ರಭಾವೀ ಸಾಲುಗಳನ್ನು
ನೆನಪಿಟ್ಟು ಕೊಳ್ಳುತ್ತೇವೆ. ಹಾಗಾದರೆ ಸಾಹಿತ್ಯ ಚರಿತ್ರೆಗಳು
ಸಿದ್ಧವಾಗುವ ಮುನ್ನ, ಅಥವಾ ಗ್ರಂಥ ಸಂಪಾದನಾ ಶಾಸ್ತ್ರ ಬೆಳೆಯುವ ಮುನ್ನ ನಮ್ಮ ಹಳಗನ್ನಡ ಸಾಹಿತ್ಯವು
ಜನರನ್ನು ಹೇಗೆ ತಲುಪುತ್ತಿತ್ತು? ಅಂದರೆ ಆಧುನಿಕ ಪೂರ್ವ ಯುಗದಲ್ಲಿ, ಶ್ರೀವಿಜಯ,
ಶಿವಕೋಟ್ಯಾಚಾರ್ಯ, ಚಾವುಂಡರಾಯ, ಪಂಪ, ಪೊನ್ನ, ರನ್ನ, ನಾಗಚಂದ್ರ, ದುರ್ಗಸಿಂಹ,
ನಾಗವರ್ಮ,
ನೇಮಿಚಂದ್ರ, ಜನ್ನ, ಹರಿಹರ, ರಾಘವಾಂಕ, ಮೊದಲಾದವರ ರಚನೆಗಳು ಜನಮಾನಸದಲ್ಲಿ ಉಳಿದು ಬಂದ ಬಗೆ
ಹೇಗೆ ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ ನಮಗೆ ನಮ್ಮ ಹಳಗನ್ನಡ ಸಾಹಿತ್ಯ ಪರಂಪರೆಯ ಬಗೆಗೆ ಹೊಸ ಒಳನೋಟಗಳು
ದೊರೆಯುವ ಸಾಧ್ಯತೆಗಳಿವೆ. ಈ ಅರ್ಥದಲ್ಲಿ ಅದು ಕಾಲ, ವ್ಯಕ್ತಿ, ಸಮುದಾಯಗಳು ಮತ್ತು ಪ್ರದೇಶಗಳು ನಿರ್ದಿಷ್ಟ ಪಠ್ಯವೊಂದನ್ನು
ಮರು ರೂಪಿಸಿಕೊಳ್ಳುತ್ತಾ , ಬಹುರೂಪಿಯಾಗಿ ಬೆಳೆಯುತ್ತಾ, ಉಳಿದುಕೊಂಡ ಬಂದ ರೀತಿಗಳ ಪರಿಶೀಲನೆಯೂ
ಹೌದು.
ಕೆಲವು
ಉದಾಹರಣೆಗಳ ಮೂಲಕ ಮೇಲಿನ ಮಾತನ್ನು ಇನ್ನಷ್ಟು ಸ್ಪಷ್ಟಪಡಿಸಬಹುದು.
ಕಾವ್ಯ
ಒನಕೆವಾಡಾದ ಪರಿ:
ಐದನೇ
ಶತಮಾನದಿಂದ ಎಂಟನೇ ಶತಮಾನದ ನಡುವಣ ಅವಧಿಯನ್ನು ನಾವು ಪೂರ್ವದ ಹಳಗನ್ನಡದ ಕಾಲ ಎಂದು ಸಾಹಿತ್ಯ
ಚರಿತ್ರೆಯಲ್ಲಿ ಗುರುತಿಸುತ್ತೇವೆ. ಈ ಅವಧಿಯಲ್ಲಿ ಅನೇಕ ಉತ್ತಮ ಕೃತಿಗಳು ಕನ್ನಡದಲ್ಲಿ
ಸೃಷ್ಟಿಯಾಗಿರುವುದಕ್ಕೆ ಸಾಕಷ್ಟು ಪ್ರಮಾಣಗಳಿದ್ದರೂ ಅಂಥ ಕೃತಿಗಳು ದೊರೆಯದೆ ಏನೂ ಹೇಳುವಂತಿಲ್ಲ.
ಕ್ರಿಸ್ತ ಶಕ 840ರಲ್ಲಿ
ರಚಿತವಾಗಿದೆ ಎನ್ನಲಾದ ಶ್ರೀ ವಿಜಯನ ಕವಿರಾಜ ಮಾರ್ಗಂನಲ್ಲಿ ಈ ಕೆಳಗಿನ ಗದ್ಯ ಲೇಖಕರ ಹೆಸರುಗಳು ದೊರಕುತ್ತವೆ.-
ವಿಮಳೋದಯ ನಾಗಾರ್ಜುನ
ಸಮೇತ ಜಯಬಂಧು ದುರ್ವಿನೀತಾದಿಗಳೀ
ಕ್ರಮದೊಳ್ ನೆಗೞ್ಚಿ
ಗದ್ಯಾಶ್ರಮಪದಗುರುತಾಪ್ರತೀತಿಯಂ ಕೆಯ್ಕೊಂಡರ್
ಅದೇ
ಕೃತಿಯಲ್ಲಿ ಈ ಕೆಳಗಿನ ಪದ್ಯ ಲೇಖಕರ ಹೆಸರು ದೊರಕುತ್ತದೆ-
ಪರಮ ಶ್ರೀವಿಜಯಕವೀ
ಶ್ವರ ಪಂಡಿತಚಂದ್ರ ಲೋಕಪಾಲಾದಿಗಳಾ
ನಿರತಿಶಯವಸ್ತುವಿಸ್ತರ
ವಿರಚನೆ ಲಕ್ಷ್ಯಂ ತದಾದ್ಯಕಾವ್ಯಕ್ಕೆಂದುಂ
ಇವರಲ್ಲಿ ಕೆಲವರಾದರೂ
ಕನ್ನಡದಲ್ಲಿಯೇ ಬರೆದವರು ಎಂಬುದನ್ನು ಎಂ ಎಂ ಕಲಬುರ್ಗಿ ಅಂತಹ ಮೇಧಾವಿ ಸಂಶೋಧಕರು ಬಲವಾಗಿ
ಸ್ಥಾಪಿಸಿದ್ದಾರೆ. ಈ ಹೆಸರುಗಳಲ್ಲದೆ ತಂಬೂಲಾಚಾರ್ಯ, ಶ್ಯಾಮಕುಂದಾಚಾರ್ಯ, ಸೈಗೊಟ್ಟ ಶಿವಮಾರ,
ಅಸಗ, ಗುಣನಂದಿ, ಒಂದನೇ
ಗುಣವರ್ಮ ಮೊದಲಾದವರ ಹೆಸರುಗಳು ಕನ್ನಡ ಸಾಹಿತ್ಯ ಪರಂಪರೆಯುದ್ದಕ್ಕೂ ಕಂಡು ಬಂದರೂ ಅವರ ಕೃತಿಗಳು
ದೊರೆತಿಲ್ಲ. ಆದರೆ ಜೈನ ಲೇಖಕರಾದ ಇವರ ಬರೆಹಗಳು ಸುಮಾರು 16ನೇ ಶತಮಾನ
ಅಂದರೆ ಮೂಡಬಿದಿರೆಯ ರತ್ನಾಕರ ವರ್ಣಿಯವರೆಗೆ ಅನೇಕರ ಮೇಲೆ ಗಾಢ ಪರಿಣಾಮ ಬೀರಿದೆ ಎಂಬುದಕ್ಕೆ
ಉಪಲಬ್ಧ ಕೃತಿಗಳಲ್ಲಿ ಸಾಕಷ್ಟು ಆಧಾರಗಳಿವೆ. ಕನ್ನಡಿಗರ ಹೆಮ್ಮೆಗೆ ಕಾರಣನಾದ ರಾಷ್ಟ್ರಕೂಟ ಅರಸ
ಅಮೋಘವರ್ಷ ನೃಪತುಂಗನ ಗುರುವಾಗಿದ್ದ ಜಿನಸೇನಾಚಾರ್ಯನ ಪೂರ್ವ ಪುರಾಣ ಮತ್ತು ಮಹಾಪುರಾಣಗಳೇ ಅನೇಕ ಹಳಗನ್ನಡ
ಮತ್ತು ನಡುಗನ್ನಡ ಕಾವ್ಯಗಳಿಗೆ ಆಕರಗಳಾದುವು. ಈ ಎರಡೂ ಜೈನ ಪುರಾಣಗಳನ್ನು ಪಂಪನಿಂದ
ರತ್ನಾಕರವರ್ಣಿ ವರೆಗೆ ಕನ್ನಡದ ಕವಿಗಳು ಹೇಗೆ ಮರುಸೃಷ್ಟಿ ಮಾಡಿಕೊಂಡರೆಂಬುದನ್ನು ನಾವಿನ್ನೂ
ಸರಿಯಾಗಿ ಅಧ್ಯಯನ
ಮಾಡಿಲ್ಲ. ಒಂದು
ಅಂದಾಜಿನ ಪ್ರಕಾರ ಸುಮಾರು 450 ಕವಿಗಳು 520ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡದಲ್ಲಿ
ಬರೆದಿದ್ದಾರೆ. ಮೇಲೆ ಉಲ್ಲೇಖಿಸಲಾದ ಪ್ರಾಚೀನ ಕನ್ನಡ ಕವಿಗಳಲ್ಲಿ ಗಜಾಷ್ಟಕವನ್ನು ಬರೆದ ಸೈಗೊಟ್ಟ
ಶಿವಮಾರನನ್ನು ಇಲ್ಲಿ ವಿಶೇಷವಾಗಿ ಗಮನಿಸಬೇಕು. ಶಿವಮಾರನು ಪಶ್ಚಿಮ ಗಂಗ ವಂಶಕ್ಕೆ ಸೇರಿದ ಅರಸ.
ಇತಿಹಾಸ ತಜ್ಞರ ಪ್ರಕಾರ ಈತನ ಕಾಲ ಸುಮಾರು ಕ್ರಿಸ್ತ ಶಕ 830.
ವ್ಯಾಕರಣ, ನೀತಿ ಶಾಸ್ತ್ರ,
ಬಿಲ್ವಿದ್ಯೆ, ಕಾವ್ಯ, ಅಶ್ವ
ಶಾಸ್ತ್ರ, ಮೊದಲಾದ ವಿದ್ಯೆಗಳಲ್ಲಿ ಪರಿಣಿತನಾದ
ಈತನ ಗಜಾಷ್ಟಕ ಕೃತಿಯು ‘ಒನಕೆವಾಡು’ ಆಗಿ ಜನಪ್ರಿಯವಾಗಿತ್ತೆಂದು ಶಿವಮೊಗ್ಗ ಜಿಲ್ಲೆಯ
ಹುಮಚದ ಪಂಚಬಸ್ತಿ ಶಾಸನ ಕೊಂಡಾಡುತ್ತದೆ. ಈ ‘ಒನಕೆವಾಡು’
ಎಂಬುದು ಕುಟ್ಟುವ ಪದಗಳಾಗಿ ತ್ರಿಪದಿ ಛಂದಸ್ಸಿನಲ್ಲಿ ಇಂದಿಗೂ ಪ್ರಚಲಿತದಲ್ಲಿರುವ ಒಂದು ಜನಪದ
ಪ್ರಕಾರ. ಬಾದಾಮಿ ಶಾಸನದ ಕಾಲದಿಂದಲೂ (ಕ್ರಿಸ್ತ ಶಕ 750)
ಕನ್ನಡಿಗರಿಗೆ
ಆಪ್ತವಾಗಿದ್ದ ಈ ಛಂದೋ ಪ್ರಕಾರದಲ್ಲಿ ಗಜಾಷ್ಟಕವು ಮರುಸೃಷ್ಟಿ ಹೊಂದಿತೆಂಬ ವಿಚಾರವು ಬಹಳ
ಮುಖ್ಯವಾದುದು. ಮರು ಸೃಷ್ಟಿ ಆಗಿಲ್ಲ ಎಂದು ವಾದಿಸುವುದಾದರೂ,
ಗಜಾಷ್ಟಕವು
ಒನಕೆವಾಡಾಗಿ ಪರಿವರ್ತನೆ ಹೊಂದಿದ ರೀತಿ ಮಾತ್ರ ಹಳಗನ್ನಡ ಪಠ್ಯಗಳು ಉಳಿದು ಬಂದ ಬಗೆಯ ಕುರಿತು
ನಮಗೆ ಹೊಸ ಒಳನೋಟಗಳನ್ನು ನೀಡುತ್ತದೆ. ಆ ಕಾಲದ ಪಠ್ಯಗಳು ಕಾಲದ ಬದಲಾವಣೆಯೊಟ್ಟಿಗೆ ಬದುಕುಳಿಯಲು
ಹೊಸ ಹಾದಿಗಳನ್ನು ಕಂಡು ಹುಡುಕಿಕೊಳ್ಳುತ್ತಿದ್ದುವು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಅಭಿಜಾತ ಪರಂಪರೆಯ ಅತ್ಯುತ್ತಮ ಮರು ಸೃಷ್ಟಿಗಳು:
ಪೂರ್ವದ
ಹಳಗನ್ನಡದ ಕಾಲಘಟ್ಟವನ್ನು ದಾಟಿ ಮುಂದೆ ಬಂದರೆ ನಮಗೆ ಸಾಹಿತ್ಯದ ವಸ್ತು, ತಂತ್ರ ಮತ್ತು ಭಾಷೆಯ ದೃಷ್ಟಿಯಿಂದ ಬಹಳ ಶ್ರೀಮಂತವಾದ
ಹಳಗನ್ನಡದ ಪಠ್ಯಗಳು ದೊರೆಯುತ್ತವೆ. ಈ ಕಾಲಘಟ್ಟದಲ್ಲಿಯೇ ಶ್ರೀವಿಜಯ ( ಕವಿರಾಜಮಾರ್ಗಂ, ಕ್ರಿಸ್ತ
ಶಕ 840), ಶಿವಕೋಟ್ಯಾಚಾರ್ಯ ( ವಡ್ಡಾರಾಧನೆ, ಕ್ರಿಸ್ತ ಶಕ
860), ಚಾವುಂಡರಾಯ ( ತ್ರಿಷಷ್ಟಿಲಕ್ಷಣಮಹಾಪುರಾಣಂ,
ಕ್ರಿಸ್ತ ಶಕ 975) , ಪಂಪ (
ಆದಿಪುರಾಣ, ವಿಕ್ರಮಾರ್ಜುನ ವಿಜಯಂ, ಕ್ರಿಸ್ತ ಶಕ 950),
ಪೊನ್ನ (
ಶಾಂತಿ ಪುರಾಣ, ಕ್ರಿಸ್ತ ಶಕ 960) , ರನ್ನ (
ಅಜಿತನಾಥ ಪುರಾಣ, ಸಾಹಸ ಭೀಮ ವಿಜಯಂ, ಕ್ರಿಸ್ತ ಶಕ 990)
ಒಂದನೆಯ
ನಾಗವರ್ಮ ( ಕರ್ಣಾಟ ಕಾದಂಬರಿ, ಛಂದೋಂಬುಧಿ; ಕ್ರಿಸ್ತಶಕ 1100) ನಾಗಚಂದ್ರ ( ರಾಮಚಂದ್ರಚರಿತ ಪುರಾಣಂ, ಮಲ್ಲಿನಾಥ
ಪುರಾಣಂ; ಕ್ರಿಸ್ತ ಶಕ 1100) ನಯಸೇನ (
ಧರ್ಮಾಮೃತ; ಕ್ರಿಸ್ತ ಶಕ 1100), ಎರಡನೆಯ
ನಾಗವರ್ಮ ( ವರ್ಧಮಾನ ಪುರಾಣ ಮತ್ತು ಕರ್ನಾಟಕ ಭಾಷಾಭೂಷಣಂ, ಕ್ರಿಸ್ತ ಶಕ 1145) ಬ್ರಹ್ಮಶಿವ
( ಸಮಯಪರೀಕ್ಷೆ, ಕ್ರಿಸ್ತ ಶಕ 1150) , ದುರ್ಗಸಿಂಹ ( ಕರ್ಣಾಟಕ ಪಂಚತಂತ್ರ; ಕ್ರಿಸ್ತ
ಶಕ 1030) ಚಂದ್ರರಾಜ ( ಮದನ ತಿಲಕ; ಕ್ರಿಸ್ತ ಶಕ 1040), ಶ್ರೀಧರಾಚಾರ್ಯ ( ಜಾತಕ ತಿಲಕ, ಕ್ರಿಸ್ತ ಶಕ 1050), ಶಾಂತಿನಾಥ ( ಸುಕುಮಾರ ಚರಿತ; ಕ್ರಿಸ್ತ ಶಕ 1070), ಕರ್ಣಪಾರ್ಯ (ನೇಮಿನಾಥಪುರಾಣ ಮತ್ತು ವೀರೇಶಚರಿತೆ; ಕ್ರಿಸ್ತ ಶಕ
1150)
ಮೊದಲಾದವರು ಅತ್ಯುತ್ತಮ ಕೃತಿಗಳನ್ನು
ರಚಿಸಿದರು. ಕಾಲದ ದೃಷ್ಟಿಯಿಂದ ಸ್ವಲ್ಪ ಮುಂದೆ
ಇದ್ದ ಕವಿ ಚಕ್ರವರ್ತಿ ಜನ್ನನನ್ನು
( ಯಶೋಧರ ಚರಿತೆ ಮತ್ತು ಅನಂತನಾಥ ಪುರಾಣಂ; ಕ್ರಿಸ್ತ ಶಕ 1200) ಹಳಗನ್ನಡ ಕವಿ ಎಂದೇ ಗುರುತಿಸಲಾಗುತ್ತದೆ.
ಈ ಎಲ್ಲಾ ಕವಿಗಳು ಅವರಿಗಿಂತ ಹಿಂದಿನ ಕಾಲದಲ್ಲಿದ್ದ ಸಂಸ್ಕೃತ ಅಥವಾ ಪ್ರಾಕೃತ ಪಠ್ಯಗಳಿಂದ ಸಾಕಷ್ಟು
ಪ್ರೇರಣೆ ಪಡೆದಿದ್ದರು. ಆದರೆ ಅವನ್ನು ಕನ್ನಡದ ಓದುಗರಿಗಾಗಿ ಪುನರ್ ಸೃಷ್ಟಿಸುವಾಗ ಅಗತ್ಯದ ಬದಲಾವಣೆಗಳನ್ನು
ಮಾಡಿಕೊಂಡರು. ಕೆಲವನ್ನು ಸೇರಿಸಿದರು, ಕೆಲವನ್ನು ಬಿಟ್ಟರು. ಹೀಗೆ ಸೇರಿಸಿದ ಮತ್ತು ಬಿಟ್ಟ ಕತೆಗಳೇ ಕನ್ನಡದ ಕಥನಗಳ ಸ್ವರೂಪವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.
ಈ ನಿಟ್ಟಿನಲ್ಲಿ ನಮ್ಮ ಅಧ್ಯಯನಗಳು ಮುಂದುವರೆಯಬೇಕಾಗಿವೆ.
ಹಳೆಗನ್ನಡ
ಎಂಬ ಮಹತ್ವದ ಕಾಲಘಟ್ಟದಲ್ಲಿ ಪ್ರಕಟವಾಗಿರುವ
ಮಹಾಭಾರತ ಆಧಾರಿತ ಕನ್ನಡ ಕಾವ್ಯಗಳನ್ನು ಉದಾಹರಣೆಗೆಂದು ಗಮನಿಸೋಣ. ವ್ಯಾಸನ ಭಾರತವನ್ನು ಪಂಪನು
ತನ್ನ ಅಸಾಧಾರಣ ಪ್ರತಿಭೆಯಿಂದ ‘ವಿಕ್ರಮಾರ್ಜುನ
ವಿಜಯಂ’ ಆಗಿ ಮರುಸೃಷ್ಟಿಸಿದ. ಹಾಗೆ
ಮರುಸೃಷ್ಟಿಸುವಾಗ ಪಂಪನು ತನ್ನ ಭಾರತ ಹೇಗಿರುತ್ತದೆ ಎಂಬ ಬಗ್ಗೆ ತಾನೇ ಒಂದು ಮುನ್ನುಡಿ ಬರೆದುಕೊಳ್ಳುತ್ತಾನೆ-
‘ಕತೆ
ಪಿರಿದಾದೊಡಂ ಕತೆಯ ಮೆಯ್ಗಿಡಲೀಯದೆ
ಮುಂ ಸಮಸ್ತಭಾರತಮನಪೂರ್ವಮಾಗಿ
ಸಲೆ ಪೇಳ್ದ ಕವೀಶ್ವರರಿಲ್ಲ
ವರ್ಣಕಂ ಕತೆಯೊಳಡಂಬಡಂ ಪಡೆಯೆ
ಪೇಳ್ವೊಡೆ ಪಂಪನೆ ಪೇಳ್ಗುಂ’.
ಪಂಪನನ್ನು
ಓದಿದವರಿಗೆ ಇದನ್ನು ಬಿಡಿಸಿ ಹೇಳಬೇಕಾಗಿಲ್ಲ. ‘ ವ್ಯಾಸ ಮುನೀಂದ್ರರುಂದ್ರ ವಚನಾಮೃತವಾರ್ಧಿಯಂ ಈಸುವ’
ಕೆಲಸದ ನಡುವೆಯೂ ಪಂಪ ತನಗೆ ಬೇಕಾದಂತೆ ತನ್ನ ಕಥನವೊಂದನ್ನು ಸಿದ್ಧಪಡಿಸಿ ಕನ್ನಡಿಗರಿಗೆ
ಉಣಪಡಿಸಿದ. ಸಂಸೃತದಲ್ಲಿದ್ದ ವ್ಯಾಸನ ಮಹಾ
ಮಹಾಭಾರತವು ಹೀಗೆ ಕನ್ನಡ ಭಾರತವಾಗಿ, ವಿಕ್ರಮಾರ್ಜುನವಿಜಯವಾಗಿ
ಹೊಸ ರೂಪ ಧರಿಸಿ ಬದುಕುಳಿಯಿತು.
ಹೊಸ ಕಥನಗಳು
ಸಿದ್ಧಗೊಳ್ಳುವುದೇ ಹೀಗೆ. ವಸಾಹತು ಕಾಲಘಟ್ಟದಲ್ಲಿ ವ್ಯಾಸರು ಬರೆದ ಮಹಾಭಾರತದ ನೂರಾರು
ಪಠ್ಯಗಳನ್ನು ಸಂಗ್ರಹಿಸಿ, ಅವುಗಳಿಂದ 'ಒಂದು ಅಧಿಕೃತ'
ಮಹಾಭಾರತವನ್ನು
ಸಿದ್ಧಪಡಿಸಿಕೊಡಲು ಬ್ರಿಟಿಷರು ಪ್ರಖ್ಯಾತ ಸಂಸ್ಕತ
ವಿದ್ವಾಂಸರಾಗಿದ್ದ ಶ್ರೀ ವಿಷ್ಣು ಎಸ್. ಸೂಕ್ತಂಕರ್ ಅವರನ್ನು 1919ರಲ್ಲಿ ಕೇಳಿಕೊಂಡಿದ್ದರು. ಸೂಕ್ತಂಕರ್ ಅವರು ಪಿ. ವಿ
ಕಾಣೆ, ಆರ್ ಡಿ.ಕರಮರ್ಕರ್, ವಿ.ಜಿ.ಪರಾಂಜಪೆ,
ವಿಂಟರ್ನೀಟ್ಜ ಮೊದಲಾದ ಸಮರ್ಥ ವಿದ್ವಾಂಸರ ತಂಡದೊಂದಿಗೆ ಸುಮಾರು 45 ವರ್ಷಗಳ ಕಾಲ ದುಡಿದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ
ಪ್ರದೇಶಗಳಲ್ಲಿ ಲಭ್ಯವಿದ್ದ ಸುಮಾರು 1129 ಹಸ್ತ ಪ್ರತಿಗಳನ್ನು ಸಂಗ್ರಹಿಸಿದ್ದರು.
ಅವೆಲ್ಲವುಗಳನ್ನು ಅಧ್ಯಯನ ಮಾಡಿ 'ಮೂಲಕ್ಕೆ
ಹತ್ತಿರ ಅನ್ನಬಹುದಾದ ಪಠ್ಯವೊಂದನ್ನು ಸಿದ್ಧಪಡಿಸಿ, ಅದನ್ನು ಪೂನಾದ
ಭಂಡಾರ್ಕಾರ್ಸ್ ಓರಿಯಂಟಲ್ ರಿಸರ್ಚ ಇನ್ಸ್ಟಿಟ್ಯೂಟ್ನಿಂದ ಪ್ರಕಟಿಸಲಾಯಿತು. (1966).
ಹಾಗೆ
ಪ್ರಕಟಿಸುವಾಗ ಸೂಕ್ತಂಕರ್ ಅವರು ಬರೆದ ಬಹಳ ಮಹತ್ವದ ವಾಕ್ಯವೊಂದು ಇಂತಿದೆ- "ವ್ಯಾಸರು
ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ, ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ
ಅಷ್ಟೆ'. ನಾವೀಗ ಮಾಡಬೇಕಾಗಿರುವುದು ಹಲವು
ಕಥನಗಳಿಂದ ಒಂದು ಕಥನವನ್ನು ಸಿದ್ಧಪಡಿಸುವ ಕೆಲಸವನ್ನಲ್ಲ. ಬದಲಾಗಿ ಒಂದು ಕಥನವು ಹಲವು ಕಥನಗಳಾಗಿ
ಮರುಸೃಷ್ಟಿಕೊಂಡ ಬಗೆಯನ್ನು ತಿಳಿಯುವುದು. ಕುತೂಹಲದ ವಿಷಯವೆಂದರೆ, ನಮ್ಮ ದೇಶದಲ್ಲಿ ವಿವಿಧ ಭಾಷೆಗಳು ಮತ್ತು ಸಮುದಾಯಗಳು
ಕಾವ್ಯವನ್ನು ತಮಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತವೆ ಎಂಬುದನ್ನು ನಾವೀಗ
ಮರೆತುಬಿಟ್ಟಿರುವುದು. ತನ್ನ ಕಾಲದ, ಸಮುದಾಯದ, ಪ್ರದೇಶದ
ಮತ್ತು ನಿರೂಪಕನ ಅಗತ್ಯಗಳಿಗೆ ಅನುಗುಣವಾಗಿ
ಇಲ್ಲಿ ಕಾವ್ಯಗಳನ್ನು ಮತ್ತೆ ಮತ್ತೆ ಬರೆಯಲಾಗುತ್ತದೆ. ಡಿ ಎಲ್ ನರಸಿಂಹಾಚಾರ್ ಅವರು ಸಂಪಾದಿಸಿದ
ವಡ್ಡಾರಾಧನೆಯಲ್ಲಿ ಅವರು ಗಮನಿಸಿದ ವಿಭಿನ್ನ ಪಠ್ಯಗಳೆಲ್ಲವೂ ಒಂದೊಂದು ಸ್ವತಂತ್ರ ಸೃಷ್ಟಿಯೇ
ಹೌದು. ಪಂಪನ ಭಾರತವು ಅಂಥದ್ದೊಂದು ಪ್ರಯತ್ನ. ಈ
ಮರುಸೃಷ್ಟಿಯಿಂದ ಕನ್ನಡವೂ ಬದುಕಿತು, ಸಂಸ್ಕೃತವೂ
ಉಳಿಯಿತು.
ಆದರೆ
ಹಳಗನ್ನಡ ಮಹಾಭಾರತ ಸಾಹಿತ್ಯ ಪರಂಪರೆಯು ಅಲ್ಲಿಗೇ ನಿಲ್ಲುವುದಿಲ್ಲ. ಪಂಪನ ವಿಕ್ರಮಾರ್ಜುನ ವಿಜಯದ
13ನೇ ಆಶ್ವಾಸದಿಂದ ಪ್ರೇರಣೆ ಪಡೆದ
ಕವಿಚಕ್ರವರ್ತಿ ರನ್ನನು ಅದನ್ನೇ ಒಂದು ಸ್ವತಂತ್ರ ಕಾವ್ಯವನ್ನಾಗಿ ಪರಿವರ್ತಿಸಿ ‘ಸಾಹಸ ಭೀಮ
ವಿಜಯಂ’ ಬರೆದ. ಹಾಗೆ ಬರೆಯುವಾಗ ಪಂಪನಿಗಿಂತ ಭಿನ್ನವಾದ ಒಂದು ಧೋರಣೆಯನ್ನು ತಾನು
ಅನುಸರಿಸುವುದಾಗಿ ಹೇಳಿಕೊಂಡ-
ಒಳಪೊಕ್ಕು ನೋಡೆ
ಭಾರತದೊಳಗಣ ಕಥೆಯೆಲ್ಲಂ
ಈ ಗದಾಯುದ್ಧದೊಳ್ ಅಂತು ಒಳಗೊಂಡಿತ್ತು ಎನೆ
ಸಿಂಹಾವಲೋಕನ ಕ್ರಮದಿನ್
ಅರಿಪಿದಂ ಕವಿರತ್ನಂ
ಪಂಪನ ಒಂದು ಆಶ್ವಾಸವು
ಹೀಗೆ ಒಂದು ಕಾವ್ಯವೇ ಆಗಿಬಿಡುವಾಗ ರನ್ನನು ಬೇಕಾದಷ್ಟು ತೆಗೆದುಕೊಳ್ಳುತ್ತಾನೆ, ಕೆಲವನ್ನು ಬಿಡುತ್ತಾನೆ ಮತ್ತು ಕೆಲವನ್ನು ತನಗೆ ಬೇಕಾದಂತೆ
ಮಾರ್ಪಡಿಸಿಕೊಳ್ಳುತ್ತಾನೆ.
ಉದಾಹರಣೆಗೆ
ರನ್ನನು ತನ್ನ ಕೃತಿಯಲ್ಲಿ ತನ್ನ ಆಶ್ರಯದಾತ
ಅರಸನಾದ ಸತ್ಯಾಶ್ರಯನನ್ನು ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಮಾಡಿ, ಕೊನೆಗೆ
ಅವನಿಗೇ ಪಟ್ಟ ಕಟ್ಟುತ್ತಾನೆ. ಹೀಗಾಗಿ ಹಲವು ಐತಿಹಾಸಿಕ ಘಟನೆಗಳು ಪುರಾಣ ಕಾವ್ಯದಲ್ಲಿ ಪ್ರವೇಶ
ಪಡೆಯುತ್ತದೆ. ಜೊತೆಗೆ ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಗದಾಯುದ್ಧದ ಭಾಗವನ್ನಷ್ಟೇ ಮುಖ್ಯ
ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಲ್ಲಿ
ಮಂಡಿಸುತ್ತದೆ. ಪಂಪನ ಹಾಗೇ ರನ್ನನೂ ತನ್ನ ಕಾವ್ಯಕ್ಕೊಂದು ಮುನ್ನುಡಿ ಬರೆದುಕೊಳ್ಳುವುದು ಹೀಗೆ-
ಬೆಳಗುವ ಸೊಡರೊಳ್ ಸೊಡರಂ
ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು ಮೆಱೆವನಿಱಿವಬೆಡಂಗಂ
ಬೆಳಗಿ ಪಲರ್ ಕೊಂಡುಪೋಗೆಯುಂ ಕುಂದದೆ ಪ
ಜ್ಜಳಿಸುವವೊಲ್ ಜಗಮೆಲ್ಲಂ
ಕೊಳಲುಂ ತವದಿತ್ತು ಮೆಱೆವನಿಱಿವಬೆಡಂಗಂ
ಎನಿಸಿದ ಸತ್ಯಾಶ್ರಯದೇ
ವನೆ ಪೃಥ್ವೀವಲ್ಲಭಂ ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ ಮಹಾಕವಿ ರನ್ನಂ
ವನೆ ಪೃಥ್ವೀವಲ್ಲಭಂ ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ ಮಹಾಕವಿ ರನ್ನಂ
ಕೃತಿ ನೆಗೞ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ
ಈ ಕುರಿತು
ಕನ್ನಡದಲ್ಲಿ ಸಾಕಷ್ಟು ವಿಮರ್ಶೆ ಪ್ರಕಟ ಆಗಿರುವುದರಿಂದ ಇಲ್ಲಿ ನಾನದನ್ನು ಇನ್ನಷ್ಟು ವಿಸ್ತರಿಸಲು
ಹೋಗುವುದಿಲ್ಲ. ಮರು ಸೃಷ್ಟಿಯ ಕಡೆಗೆ ಓದುಗರ ಗಮನ ಸೆಳೆಯುವುದಷ್ಟೇ ಇಲ್ಲಿನ ಉದ್ದೇಶ.
ಹಳಗನ್ನಡದಲ್ಲಿ
ಮಹಾಭಾರತದ ಹಾಗೆ ರಾಮಾಯಣಕ್ಕೆ ಸಂಬಂಧಿಸಿದಂತೆ ಎರಡು ಕಾವ್ಯಗಳು ರಚಿತವಾಗಿವೆ. ಮೊದಲನೆಯದು
ಪೊನ್ನನ ಭುವನೈಕ್ಯ ರಾಮಾಭ್ಯದಯ (ಕ್ರಿ. ಶ. ಸು 950),
ಹಾಗೂ
ಎರಡನೆಯದು ನಾಗಚಂದ್ರನ ರಾಮಚಂದ್ರ ಚರಿತ ಪುರಾಣ (ಕ್ರಿ. ಶ. ಸು 1100). ಈ ಎರಡೂ ಕೃತಿಗಳು ವಿಮಲಸೂರಿ ಮತ್ತು ರವಿಷೇಣರು
ಆರಂಭಿಸಿದ ಜೈನ ರಾಮಾಯಣದ ಎರಡು ಪರಂಪರೆಗಳನ್ನು ಕನ್ನಡದಲ್ಲಿ ಪುನರ್ ಸೃಷ್ಟಿಸಿದುವು. ನಾಗಚಂದ್ರನು ಪಂಪನಿಂದ ಆರಂಭವಾದ ಲೌಕಿಕ-ಆಗಮಿಕ
ವಿಭಜನೆಯನ್ನು ಕಟ್ಟುನಿಟ್ಟಾಗಿ ಅನುಸರಿಸದೆ ತಾನು ಬರೆದ ರಾಮಾಯಣವನ್ನು ಚರಿತವೂ ಹೌದು, ಪುರಾಣವೂ ಹೌದು ಎಂದು ಘೋಷಿಸಿದ. ಈ ಅರ್ಥದಲ್ಲಿ ಆತನ
ರಾಮಾಯಣವು ಆಗಮಿಕ ಕಾವ್ಯಗಳ ಹಾಗೆ ಪೂರ್ತಿ ಪುರಾಣವೂ ಅಲ್ಲ,
ಲೌಕಿಕ
ಕಾವ್ಯಗಳ ಹಾಗೆ ಪೂರ್ತಿ ವಿಜಯವೂ ಅಲ್ಲ. ಇದು ಇನ್ನೊಂದು ಬಗೆಯ ಪುನರ್ ಸೃಷ್ಟಿಯೇ ಆಗಿದೆ.
ಹಳಗನ್ನಡ
ಕಾಲಘಟ್ಟದಲ್ಲಿ ರಚನೆಯಾದ ಮಹಾಭಾರತಗಳಾಗಲೀ, ರಾಮಾಯಣಗಳಾಗಲೀ, ಅಥವಾ ಆಗಮಿಕ ಕಾವ್ಯಗಳೇ ಆಗಲಿ, ಪಂಡಿತ ವರ್ಗಕ್ಕೆ ಪ್ರಿಯವಾದ ಕಾವ್ಯಗಳೇ ಆಗಿದ್ದುವು.
ಹಳಗನ್ನಡ ಕವಿಗಳೂ ಆಗಮಿಕ ಹಾಗೂ ಲೌಕಿಕ ವಿದ್ಯೆಗಳಲ್ಲಿ ಬಹುವಾದ ಪರಿಶ್ರಮ ಹೊಂದಿದ್ದರು. ಹಿರಿಯ
ವಿದ್ವಾಂಸರಾದ ಟಿ ವಿ ವೆಂಕಟಾಚಲ ಶಾಸ್ತ್ರಿ ಅವರು ‘ ಆದಿ ಪುರಾಣದ
ಕಥಾಭಾಗದಲ್ಲಿ ಮಹಾಬಳನೆಂಬುವನ ಬಗೆಗೆ ಹೇಳುತ್ತಾ ಬರೆದಿರುವ ‘ ಪರಿಸಮಾಪ್ತ ಸಕಳ ಕಳಾ ವಿಜ್ಞಾನನುಂ ಅಧಿಗತ
ಶೇಷಶಾಸ್ತ್ರನುಂ, ಪರಿಣತ ಸಕಳ
ಶಸ್ತ್ರನುಮಾಗಿ’ ಎಂದಿರುವ ಮಾತನ್ನು ಅವನಿಗೇ ಅನ್ವಯಿಸಿದರೂ ಒಪ್ಪುತ್ತದೆ’ ಎಂದು ಪಂಪನ ಬಗ್ಗೆ ಹೇಳುತ್ತಾರೆ ( ಪಂಪ ಸಂಪುಟ, ಪುಟ 31).
ಸಂಸ್ಕೃತ, ಪ್ರಾಕೃತ ಭಾಷೆಗಳಲ್ಲಿ ಇದ್ದ ಜೈನ ಪುರಾಣಗಳು, ಆಗಮಗಳು, ಶಾಸ್ತ್ರಗಳು
ಇವನ್ನೆಲ್ಲ ತಲಸ್ಪರ್ಷಿಯಾಗಿ ಅಧ್ಯಯನ ಮಾಡಿದ್ದ ಹಳಗನ್ನಡ ಕವಿಗಳು ಇವುಗಳ ಜೊತೆ ಜೊತೆಗೆ ಸಂಗೀತ, ನೃತ್ಯ, ಚಿತ್ರ, ಶಿಲ್ಪ, ವೈದ್ಯ , ರಾಜನೀತಿ, ಸ್ಮರ ತಂತ್ರ, ಮೊದಲಾದ ವಿದ್ಯೆಗಳನ್ನೂ ಕಲಿತಿದ್ದರು. ವ್ಯಾಸ,
ವಾಲ್ಮೀಕಿ, ಕಾಳಿದಾಸ, ಭಾರವಿ,
ಶ್ರೀಹರ್ಷ, ಮಾಘ, ಬಾಣ ಭಟ್ಟ, ಭವಭೂತಿ, ಅಶ್ವಘೋಷ, ಭಾಸ ಮೊದಲಾದ
ಸಂಸ್ಕೃತದ ಮಹಾ ಕವಿಗಳನ್ನು ಇವರೆಲ್ಲರೂ ಆಳವಾಗಿ ಅಧ್ಯಯನ
ಮಾಡಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಇವುಗಳೆಲ್ಲದರ ಪರಿಣಾಮವಾಗಿ ಅವರು ಸುಮಾರು
ಎರಡು ಶತಮಾನಗಳ ಕಾಲ ಪ್ರೌಢ ಕಾವ್ಯ ರಚನೆ ಮಾಡಿದರು. ಭಾಷೆಯ ಶಾಸ್ತ್ರೀಯ ಬಳಕೆ, ವಿಭಿನ್ನ ಛಂದೋರೂಪಗಳು, ವಿವಿಧ ಅಲಂಕಾರಗಳ ಪರಿಣಾಮಕಾರೀ ಬಳಕೆ, ರಸಭಾವಗಳ ಅಭಿವ್ಯಕ್ತಿ, ಧ್ವನಿಯುಕ್ತತೆ,
ನಾಟಕೀಯ ಗುಣ, ಪಾತ್ರ ಮತ್ತು ಸನ್ನಿವೇಶ ರಚನೆಗಳ ಕೌಶಲ, ವಸ್ತು ಸಂವಿಧಾನ ನಿಪುಣತೆ, ಹಾಗೂ ಲೋಕ ಜ್ಞಾನದ ವಿಷಯಗಳಲ್ಲಿ ಹಳಗನ್ನಡದ ಕವಿಗಳು
ಇನ್ನಿಲ್ಲದ ಸಾಧನೆ ಮಾಡಿದ್ದಾರೆ. ಕಾವ್ಯ-ಶಾಸ್ತ್ರ ಪರಿಣತರಿಗೆ ತುಂಬ ಸಂತೋಷ ನೀಡಬಲ್ಲ ಈ
ರಚನೆಗಳು ಕನ್ನಡ ಅಭಿಜಾತ ಸಾಹಿತ್ಯದ ಗರಿಮೆಯನ್ನು ಬಹಳ ಎತ್ತರಕ್ಕೆ ಏರಿಸಿವೆ.
ಹಾಡುವವರ ಹಾಗೂ ಕೇಳುವವರ ಕಡೆಗೆ ಹೊರಳಿಕೊಂಡ ಕನ್ನಡ ಕಾವ್ಯ:
ಹಳಗನ್ನಡದಲ್ಲಿ
ರಚನೆಯಾದ ಮಹಾಭಾರತ, ರಾಮಾಯಣ
ಮತ್ತು ಇತರ ಆಗಮಿಕ ಕಾವ್ಯಗಳು ಮಧ್ಯಕಾಲೀನ ಸಂದರ್ಭದಲ್ಲಿ ಹೊಸರೂಪ ಪಡೆದುಕೊಂಡುವು. ಈ ನಡುವೆ
ಕರ್ನಾಟಕವು ವಚನ ಚಳವಳಿಗೆ ಸಾಕ್ಷಿಯಾಯಿತು. ವಚನಚಳುವಳಿಯು ಭಾಷೆಯ ಬಗ್ಗೆ ಕ್ರಾಂತೀ ಕಾರೀ
ನಿಲುವನ್ನು ತಾಳಿತು. ಅಲ್ಲಿಯ ವರೆಗೆ ಪಂಡಿತ ಮಾನ್ಯವಾದ ಭಾಷೆ ಮತ್ತು ಛಂದೋರೂಪುಗಳನ್ನು
ವಚನಕಾರರು ಅತ್ಯಂತ ಸರಳಗೊಳಿಸಿ ಸಾಮಾನ್ಯ ಜನರನ್ನು ತಲುಪಲು ಪ್ರಯತ್ನಿಸಿ ಯಶಸ್ವಿಯಾದರು. ಅನುಭವ
ಮಂಟಪದಲ್ಲಿ ಸೇರಿದ್ದರು ಎನ್ನಲಾದ ವಚನಕಾರರಲ್ಲಿ ಹೆಚ್ಚಿನವರು ತಳವರ್ಗಕ್ಕೆ ಸೇರಿದವರು ಎಂಬುದರ
ಕುರಿತು ನಮಗೆ ಇವತ್ತು ಯಾವ ಸಂಶಯವೂ ಉಳಿದಿಲ್ಲ. ಈ ಚಳುವಳಿಯ ಆನಂತರ ಬಂದ ಕವಿಗಳೆಲ್ಲರೂ
ಕಾವ್ಯವನ್ನು ಜನಮುಖಿಗೊಳಿಸಿದರು.
ಪಂಪನ ಆನಂತರ
ವ್ಯಾಸ ಭಾರತವನ್ನು ಅಷ್ಟೇ ಸಮರ್ಥವಾಗಿ ಮತ್ತೆ ಬರೆದ ಕುಮಾರವ್ಯಾಸನು ಹೇಳಿದ ಈ ಕೆಳಗಿನ ಮಾತನ್ನು
ಗಮನಿಸೋಣ-
ವೀರ ನಾರಾಯಣನೆ ಕವಿ ಲಿಪಿ
ಕಾರ ಕುವರ ವ್ಯಾಸ ಕೇಳುವ
ಸೂರಿಗಳು ಸನಕಾದಿಗಳು ಜಂಗಮ ಜನಾರ್ಧನರು
ಚಾರು ಕವಿತೆಯ ಬಳಕೆಯಲ್ಲ ವಿ
ಚಾರಿಸುವಡಳವಲ್ಲ ಚಿತ್ತವ
ಧಾರು ಹೋ ಸರ್ವಜ್ಞರಾದರು ಸಲುಗೆ ಬಿನ್ನಪವ
ಇಲ್ಲಿ
ಕುಮಾರವ್ಯಾಸನು ಸನಕಾದಿ ವಿದ್ವಾಂಸರ ನಡುವೆ ‘ಜಂಗಮ ಜನಾರ್ಧನ’ರನ್ನೂ ಸೇರಿಸಿದ್ದಾನೆ. ಅಂದರೆ
ಇದೀಗ ಕಾವ್ಯದ ಗ್ರಾಹಕರು ಬದಲಾಗಿದ್ದಾರೆ ಎಂದಾಯಿತು. ಆದರೆ ಲಿಪಿ ತಿಳಿಯದ ಜಂಗಮ ಜನಾರ್ಧನರು
ಕಾವ್ಯವನ್ನು ಓದುವ ಬಗೆ ಹೇಗೆ? ಅದಕ್ಕಾಗಿ ಕುಮಾರವ್ಯಾಸನು ‘ಕೇಳುವ ಸೂರಿಗಳು’
ಎಂಬ
ಪದವನ್ನು ಬಳಸಿದ್ದಾನೆ. ಇವರು ಓದುವ ಸೂರಿಗಳಲ್ಲ.
ಮೂಲ ಭಾರತದಲ್ಲೂ ಜನಮೇಜಯನಿಗೆ ಕತೆಯನ್ನು ಹೇಳಲಾಗುತ್ತದೆ. ಹಾಗೆ ಇಲ್ಲಿಯೂ ಜಂಗಮ
ಜನಾರ್ಧನರಿಗೆ ಕಾವ್ಯವನ್ನು ‘ಕೇಳಿಸಲಾಗುತ್ತ’ದೆ.
ಪಂಪಾದಿಗಳು
ಬರೆದ ಓದುವ ಕಾವ್ಯವು ಹೀಗೆ ಕೇಳುವ ಕಾವ್ಯವಾಗಿ ಮರು ಸೃಷ್ಟಿ ಹೊಂದಿತು. ಜನರು ಕುಳಿತು ಕೇಳುವುದಕ್ಕಾಗಿ,
ಕಾವ್ಯವನ್ನು ಹಾಡಲು ಅನುಕೂಲವಾಗುವಂತೆ ಬರೆಯಲಾಯಿತು. ಕುಮಾರವ್ಯಾಸ ಈ ಕುರಿತು ಹೀಗನ್ನುತ್ತಾನೆ-
ತಿಳಿಯ ಹೇಳುವೆ ಕೃಷ್ಣ ಕತೆಯನು
ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮ ಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ
ಈ ‘ಪಂಚಮ ಶ್ರುತಿ’ಯೇ ಕಾರಣವಾಗಿ ಇವತ್ತಿಗೂ ಕರ್ನಾಟಕ
ಭಾರತ ಕಥಾ ಮಂಜರಿಯು ಜನಮಾನಸದಲ್ಲಿ ಉಳಿದಿದೆ. ಈ ಕಾವ್ಯದ ಜೊತೆಗೆ ಬಂದ ರಾಘವಾಂಕನ ಹರಿಶ್ಚಂದ್ರ
ಕಾವ್ಯ, ಲಕ್ಷ್ಮೀಶನ ಜೈಮಿನಿ ಭಾರತ, ತೊರವೆಯ ನರಹರಿಯ ತೊರವೆ ರಾಮಾಯಣ ಮೊದಲಾದ ನಡುಗಾಲದ
ಕನ್ನಡ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಲು ಅನುಕೂಲವಾಗುವಂತೆ ಬರೆಯಲಾಯಿತು. ಶರ, ಕುಸುಮ, ಭೋಗ ಭಾಮಿನಿ, ಪರಿವರ್ಧಿನಿ ಮತ್ತು ಮತ್ತು ವಾರ್ಧಕ ಷಟ್ಪದಿಗಳು ಎಲ್ಲ ಕಾವ್ಯಗಳನ್ನೂ
ಆವರಿಸಿಕೊಂಡವು. ಇದರಲ್ಲಿಯೂ ಭಾಮಿನಿ ಷಟ್ಪದಿಯು ಕನ್ನಡಿಗರ ಹೃದಯಕ್ಕಿಳಿಯಿತು. ಇದರಲ್ಲಿ ಆರು ಸಾಲುಗಳಿರುತ್ತವೆ. ಮೂರನೆಯ ಮತ್ತು ಆರನೆಯ ಸಾಲುಗಳಲ್ಲಿ ಏಳು ಮಾತ್ರೆಗಳ ಮೂರುಗಣಗಳು ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ಏಳು ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ,
ಏಳು ಮಾತ್ರೆಗಳ ಗಣಗಳು ಕಡ್ಡಾಯವಾಗಿ ೩+೪ ಮಾದರಿಯಲ್ಲಿರಬೇಕು.
ಅಂದರೆ ೩ ಮಾತ್ರೆಯ ಗಣದ ನಂತರ ೪ ಮಾತ್ರೆಯ ಗಣವು ಬಂದು, ಒಟ್ಟು ಏಳು ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ
ಕೂಡಿರುತ್ತದೆ.
ಉದಾಹರಣೆಗೆ ಗದುಗಿನ ಭಾರತದ ಈ ಪ್ರಸಿದ್ಧ
ಪದ್ಯವನ್ನು ಗಮನಿಸಬಹುದು-
ವೇದಪುರುಷನ
ಸುತನ ಸುತನ ಸ
ಹೋದರನ
ಹೆಮ್ಮಗನ ಮಗನ ತ
ಳೋದರಿಯ
ಮಾತುಳನ ಮಾವನನತುಳಭುಜಬಲದಿ
ಕಾದು
ಗೆಲಿದನನಣ್ಣನವ್ವೆಯ
ನಾದಿನಿಯ
ಜಠರದಲಿ ಜನಿಸಿದ
ನಾದಿಮೂರುತಿ
ಸಲಹೊ ಗದುಗಿನ ವೀರನಾರಯಣ
ಈ ಪದ್ಯವನ್ನು
ಕೆಳಗಿನಂತೆ ಗಣಗಳಾಗಿ ವಿಭಜಿಸಬಹುದು-
ವೇದ|
ಪುರುಷನ | ಸುತನ| ಸುತನ ಸ
ಹೋದ|ರನ ಹೆ|ಮ್ಮಗನ|
ಮಗನ ತ
ಳೋದ|ರಿಯ ಮಾ|ತುಳನ| ಮಾವನ|ನತುಳ|ಭುಜಬಲ|ದಿ
ಕಾದು|
ಗೆಲಿದನ|ನಣ್ಣ|ನವ್ವೆಯ
ನಾದಿ|ನಿಯ ಜಠ|ರದಲಿ| ಜನಿಸಿದ
ನಾದಿ|ಮೂರುತಿ | ಸಲಹೊ| ಗದುಗಿನ | ವೀರ|ನಾರಯ|ಣ
ಭಾಮಿನಿಯ ಗಣವಿಂಗಡಣೆ
ಇಂತಿದೆ-
೩
| ೪ | ೩ | ೪
೩
| ೪ | ೩ | ೪
೩
| ೪ | ೩ |೪ | ೩
| ೪ | -
೩
| ೪ | ೩ | ೪
೩
| ೪ | ೩ | ೪
೩|೪|೩|೪|೩|೪|-
ಭಾಮಿನಿಯ ನಡೆಯು
ಕನ್ನಡಿಗರಿಗೆ ಬಹಳ ಇಷ್ಟವಾಗಿದೆ. ತೊರವೆಯ
ನರಹರಿಯ ರಾಮಾಯಣ ( ಕ್ರಿ ಶ 1500), ಭೀಮ ಕವಿಯ ಬಸವ
ಪುರಾಣ ( ಕ್ರಿ ಶ 1369) , ಚಾಮರಸನ ಪ್ರಭುಲಿಂಗಲೀಲೆ ( ಕ್ರಿ ಶ 1430), ಕನಕದಾಸನ ನಳಚರಿತೆ (
ಕ್ರಿ ಶ 1450) ಭಾಮಿನೀ ಷಟ್ಪದಿಯಲ್ಲಿ ರಚಿತವಾದ ಜನಪ್ರಿಯ ಕಾವ್ಯಗಳು. ಈ ಕಾವ್ಯಗಳೆಲ್ಲ ಮುಂದೆ
17-18ನೇ ಶತಮಾನದಲ್ಲಿ ಯಕ್ಷಗಾನ ಪ್ರಸಂಗಗಳಾಗಿ ಮರು ಹುಟ್ಟು ಪಡೆದುವು. ಈ ಹಿನ್ನೆಲೆಯಲ್ಲಿ ಕನ್ನಡ
ಕಥನ ಪರಂಪರೆಗೆ ಭಾಮಿನಿಯ ಕೊಡುಗೆ ಬಹಳ ಮಹತ್ವದ್ದು ಎಂದು ಹೇಳಬಹುದು. ರಾಮಚಂದ್ರ ಗುರು ಶಿಷ್ಯ ಕವಿ ಕಂಠೀರವನು ( ಖ್ರಿಸ್ತ ಶಕ
1525) ತನ್ನ ಆದಿತ್ಯ ಪುರಾಣ ಎಂಬ ಕೃತಿಯಲ್ಲಿ ಭಾಮಿನಿಯನ್ನು ಕೊಂಡಾಡಿದ್ದು ಹೀಗೆ-
ಆರು ಕಾಲುಗಳಿಂದ ನಡೆವಳು
ಮೂರು ಹೆಜ್ಜೆಗಳಿಂದ ರಂಜಿಸಿ
ಸಾರಿ ಡಂಗುರ ಹೋಯ್ಸಿ ಕವಿಗಳಿಗಾನೆ ನೆರವೆಂದು
ತೋರದುಕ್ತಿಯನಧಿಕ ವೇಗದಿ
ತೋರಿ ಸೊಬಗನು ಬೀರಿ ಸುಖವನು
ಸೂರೆಗೊಟ್ಟಳು ಕೇಳ್ದರಿಗೆ ಕೃತಿ ಭಾಮಿನೀರನ್ನೆ
ಈ ಹಂತದಲ್ಲಿ ಒಂದು ಕ್ಷಣ ನಿಂತು, ಕನಕದಾಸರ
ನಳಚರಿತೆಯನ್ನು ವಿಶೇಷವಾಗಿ ಗಮನಿಸಬೇಕು. ಕನಕದಾಸನು ನಳಚರಿತೆಯನ್ನು ಭಾಮಿನೀ ಷಟ್ಪದಿಯಲ್ಲಿ ಬರೆಯಲು
ಆರಂಭಿಸಿದಾಗ ಅವನಿಗೆ ಕಾವ್ಯವನ್ನು ‘ಕೇಳುವ’ ಜನರ
ಬಗ್ಗೆ ಸ್ಪಷ್ಟವಾದ ತಿಳುವಳಿಕೆಯಿತ್ತು. ಏಕೆಂದರೆ ನಳಚರಿತೆಯು ಮೂಲತ: ಕೇಳುವ ಕತೆಯೇ. ಮಹಾಭಾರತದ
ವನಪರ್ವದಲ್ಲಿ ನಳನ ಕತೆಯನ್ನು ಬೃಹದೀಶ್ವನು ಧರ್ಮರಾಜನಿಗೆ ಹೇಳುತ್ತಾನೆ. ಆದರೆ ಕನಕ ಇದರಲ್ಲಿ
ಸ್ವಲ್ಪ ಬದಲಾವಣೆ ಮಾಡಿ, ಬೃಹದೀಶ್ವನ ಜಾಗದಲ್ಲಿ ರೋಮಶ ಮುನಿಯನ್ನು ತರುತ್ತಾನೆ.
‘ ಕೌಂತೇಯನಿಗೆ
ರೋಮಶ ಮಹಾಮುನಿ ರಾಯ ವಿಸ್ತರಿಸಿದನು ನಳಭೂವರನ ಕತೆಯನು’ ಎಂದು ಕನಕ ಹೇಳುತ್ತಾನೆ. ಇಷ್ಟು ಮಾತ್ರವಲ್ಲದೆ
ಕನಕನು ಕತೆ ಹೇಳುವ ಪರಂಪರೆಯನ್ನು ಮತ್ತಷ್ಟು ವಿಸ್ತರಿಸುತ್ತಾನೆ. ಅವನ ಪ್ರಕಾರ ರೋಮಶನು ನಳನ ಕತೆಯನ್ನು
ಕೇಳಿದ್ದು ಸೂತ ಮುನಿಗಳಿಂದ. ಸೂತಮುನಿಗಳು ಹೇಳಿದ ಕತೆಯನ್ನು ಅಗಸ್ತ್ಯರು ಕೇಳಿಸಿಕೊಳ್ಳುತ್ತಾರೆ,
ಮತ್ತು ಅಗಸ್ತ್ಯರು ಈ ಕತೆಯನ್ನು ಶ್ರೀರಾಮನಿಗೂ ಹೇಳುತ್ತಾನೆ.
‘ಸೂತಮುನಿ ಹೇಳಿದನು
ಮೌನಿ ವ್ರಾತದಲಿಯಾಗಸ್ತ್ಯಮುನಿ ಸಂ ಪ್ರೀತಿಯಿಂದರುಹಿದನು ರಘುನಂದನನೊಳೀ ಕತೆಯ’ ( 18)
ಹೀಗೆ ಜನಪದ ಕತೆಗಳ ಹಾಗೇ ಮೌಖಿಕವಾಗಿ
ಉಳಿದು ಬಂದ ನಳನ ಕತೆಯನ್ನು ಕನಕನು ಕನ್ನಡಿಗರಿಗೆ ಹೇಳುವ ಮೂಲಕ ಅಖಿಲಭಾರತ ಕಥನ ಪರಂಪರೆಯನ್ನು ಕನ್ನಡಕ್ಕೆ ಜೋಡಿಸಿಬಿಡುತ್ತಾನೆ. ಹಾಗೆ ನೋಡಿದರೆ, ನಳನ ಕತೆಗೆ ಮೊದಲಿಂದಲೂ ಭಾರತೀಯರು
ಮನಸೋತಿದ್ದಾರೆ. ನಳ ದಮಯಂತಿಯರ ಕುರಿತು ಬರೆಯಲಾದ ಕೆಲವು ಕೃತಿಗಳ ಹೆಸರುಗಳನ್ನು ಈ ಕೆಳಗೆ
ನೀಡಲಾಗಿದೆ-
1.
ಶ್ರೀಹರ್ಷನ ನೈಷಧೀಯ ಚರಿತೆ ( ಸಂಸ್ಕೃತ, 12ನೇ ಶತಮಾನ,
)
2.
ತ್ರಿವಿಕ್ರಮ ಭಟ್ಟನ ನಳ ಚಂಪು ( ಸಂಸ್ಕೃತ, 10ನೇ
ಶತಮಾನ)
3.
ಚಾವುಂಡರಸನ ನಳ ಚರಿತ್ರೆ ( ಕನ್ನಡ, ಕ್ರಿಸ್ತ ಶಕ
1300)
4.
ಶ್ರೀನಾಥನ ಶೃಂಗಾರ ನೈಷಧಮು ( ತೆಲುಗು, ಕ್ರಿಸ್ತಶಕ
1440)
5.
ಕನಕದಾಸನ ನಳಚರಿತ್ರೆ ( ಕನ್ನಡ, ಕ್ರಿಸ್ತಶಕ
1500)
6.
ಕೆಂಪಣ್ಣ ಗೌಡನ ನಳಚರಿತ್ರೆ ಯಕ್ಷಗಾನ ( ಕ್ರಿಸ್ತಶಕ
1550).
7.
ಧ್ವಜಪುರದ ನಾಗಪ್ಪಯ್ಯನ ನಳದಮಯಂತಿ ಯಕ್ಷಗಾನ ( ಕ್ರಿಸ್ತಶಕ
1850)
8.
ಗಳಗನಾಥರ ‘ಕಲಿ ಬಾಧಾ ನಿವಾರಕವಾದ ರಹಸ್ಯ -ನಳ ಚರಿತ್ರೆ
( ಕ್ರಿಸ್ತಶಕ ಸಉಮಾರು 1900)
9.
ಉಣ್ಣಯಿ ವಾರಿಯಾರ್ ಅವನ ನಳ ಚರಿತಮ್ ( ಮಲೆಯಾಳಂ,
17ನೇ ಶತಮಾನ)
10.
ರಘುನಾಥ ನಾಯಕುಡು ಅವನ ನಳಚರಿತಮು ( ತೆಲುಗು, ಕ್ರಿಸ್ತಶಕ 1630)
11.
ರಘುನಾಥ ಪಂಡಿತನ ನಳದಮಯಂತಿ ಸ್ವಯಂವರ ( ಮರಾಠೀ,
17ನೇ ಶತಮಾನ)
12.
ಪ್ರೇಮಾನಂದನ ನಳಾಖ್ಯಾನ ( ಗುಜರಾತಿ, ಕ್ರಿಸ್ತಶಕ
1630).
13.
ಪುಗಳೇಂದೀ ಪುಳುವಾರ್ ಅವರ ನಳವೆಂಬ ( ತಮಿಳು, 12ನೇ ಶತಮಾನ)
14.
ಅಬು ಫಯಾಜ್ ಅವರ ನಳದಮನ್ ( ಪರ್ಶಿಯನ್, ಕ್ರಿಸ್ತಶಕ 1500) ಇತ್ಯಾದಿ.
ಕನಕದಾಸನದೂ ಸೇರಿದಂತೆ, ಮೇಲಿನ ಹೆಚ್ಚಿನೆಲ್ಲಾ ರಚನೆಗಳು
ಮಧ್ಯಕಾಲೀನ ಭಾರತದಲ್ಲಿಯೇ ಯಾಕೆ ರಚಿತಗೊಂಡವು ಎಂಬ ಪ್ರಶ್ನೆಯನ್ನು ಹಾಕಿಕೊಂಡು ನಾವು ಈ ಕುರಿತಾದ
ಅಧ್ಯಯನಗಳನ್ನು ಮುಂದುವರೆಸಬೇಕಾಗಿದೆ. ‘ಶನಿ ಕಾಟ’ವು ಭಾರತೀಯರನ್ನು ಬಹುವಾಗಿ ಕಾಡಿದೆಯೇ ಎಂಬ ಪ್ರಶ್ನೆಯನ್ನೂ
ಇಲ್ಲಿಯೇ ನಾವು ಕೇಳಿಕೊಳ್ಳಬಹುದು. ತಮಿಳುನಾಡಿನ ತಿರುನಲ್ಲೂರಿನಲ್ಲಿ ನಳನ ಕತೆಯೊಡನೆ ಜೋಡಿಸಿಕೊಂಡ
ಶನಿ ದೇವಸ್ಥಾನವೊಂದಿರುವುದನ್ನು ಇಲ್ಲಿ ನೆನೆಸಿಕೊಳ್ಳಬಹುದು. ಜೊತೆಗೆ ನಳನ ಕತೆಯು ಕವಿಗಳಿಗೆ ಯಾಕೆ
‘ಚರಿತೆ’ಯಾಗಿಯೇ ಕಂಡಿದೆ? ಮತ್ತು ಪುರಾಣವಾಗಿಲ್ಲ?
ಎಂದೂ ಕೇಳಿಕೊಳ್ಳಬೇಕಾಗಿದೆ.
ನಳನ ಕತೆಯು ಶಿಷ್ಟಸಾಹಿತ್ಯದಲ್ಲಿ ಜನಪ್ರಿಯವಾಗಿರುವಂತೆಯೇ
ದೇಶದಾದ್ಯಂತ ವಿವಿಧ ಭಾಷೆಯ ಜಾನಪದದಲ್ಲಿಯೂ ಪ್ರಚಲಿತದಲ್ಲಿರುವುದನ್ನು ಇಲ್ಲಿಯೇ ಗಮನಿಸಬಹುದು. ಉತ್ತರಪ್ರದೇಶದಲ್ಲಿ
ಹಾಗೂ ರಾಜಸ್ಥಾನದಲ್ಲಿ ಅತ್ಯಂತ ಜನಪ್ರಿಯವಾಗಿರುವ ಧೋಲಾ ಮಾರು ಹಾಗೂ ರಾಜಾ ಪ್ರಥಮ್ ಮಹಾಕಾವ್ಯಗಳು,
ಚತ್ತೀಸಗಡ್ ನಲ್ಲಿರುವ ಪಂಡ್ವಾನೀ ದಮಯಂತಿ ಕಥಾ, ಪಂಜಾಬೀ ಭಾಷೆಯ ನಳ್ ದಮಯಂತೀ ಕಥಾ, ಹಿಮಾಲಯ ಪರ್ವತಶ್ರೇಣಿಯ ತಳಭಾಗದಲ್ಲಿರುವ ರಾಜಾ ನಲ್ ಕಥನ
ಕಾವ್ಯ, ಆಂಧ್ರದ ಹರಿಕತೆ, ಕರ್ನಾಟಕದ ಯಕ್ಷಗಾನ, ಕೇರಳದ ಕಥಕ್ಕಳಿ ಹೀಗೆ ದೇಶದ ಜಾನಪದವು ನಳನ ಕತೆಯನ್ನು
ಪುನಾರಾಚಿಸಿಕೊಂಡು ಮುಂದುವರೆಸಿಕೊಂಡು ಬಂದಿದೆ. 20ನೆಯ ಶತಮಾನದ 70ರ ದಶಕದಲ್ಲಿ ನಳದಮಯಂತಿ ಯಕ್ಷಗಾನವು
ಬಹಳ ಜನಪ್ರಿಯವಾಗಿತ್ತು. ಮಲ್ಪೆ ರಾಮದಾಸ ಸಾಮಗ ( ನಳ) ಕೋಳ್ಯೂರು ರಾಮಚಂದ್ರ ರಾವ್ ( ದಮಯಂತಿ) ಅಳಿಕೆ
ರಾಮಯ್ಯ ರೈ ( ಋತುಪರ್ಣ), ಮಿಜಾರು ಅಣ್ಣಪ್ಪ ( ಬಾಹುಕ) ಮೊದಲಾದ ಮಹಾನ್ ಕಲಾವಿದರನ್ನು ಒಳಗೊಂಡ ನಳ
ದಮಯಂತಿ ಪ್ರಸಂಗವನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ನಿರಂತರವಾಗಿ ಒಂದು ವರ್ಷಗಳ ಕಾಲ ಆಡಿದ್ದು,
ನಾನದನ್ನು ಐದು ಬಾರಿ ನೋಡಿದ್ದೆ. ಹೀಗೆ ಒಂದು ಕತೆಯನ್ನು
ಕನ್ನಡವೂ ಸೇರಿದಂತೆಇಡೀ ದೇಶವೇ ಮತ್ತೆ ಮತ್ತೆ ಹೇಳಿಕೊಂಡು ಬಂದ ರೀತಿಯನ್ನು ಯಾರಾದರೂ ಗಂಭೀರವಾಗಿ
ಅಭ್ಯಾಸ ಮಾಡಬೇಕಾಗಿದೆ. ಕನಕನ ಇತರ ಕೃತಿಗಳಾದ ಮೋಹನ ತರಂಗಿಣಿ, ರಾಮಧಾನ್ಯ ಚರಿತೆ, ಕೀರ್ತನೆಗಳು,
ಮತ್ತು ಹರಿಭಕ್ತಿ ಸಾರವು ‘ಹೇಳುವ’ ಮತ್ತು ‘ಕೇಳುವ’ ಕಾವ್ಯವಾಗಿ ಮರು ಸೃಷ್ಟಿ ಹೊಂದಿತು. ಜನರು
ಕೇಳುವುದಕ್ಕಾಗಿ, ಕಾವ್ಯವನ್ನು ಸುಶ್ರಾವ್ಯವಾಗಿ
ಹಾಡಲು ಅನುಕೂಲವಾಗುವಂತೆ ಈ ಕಾವ್ಯಗಳನ್ನು ಬರೆಯಲಾಗಿದೆ. ಅದಕ್ಕಾಗಿ
ಆತನು ಆಯ್ದುಕೊಂಡ ಭಾಮಿನಿ ಷಟ್ಪದಿ, ಸಾಂಗತ್ಯ ಮತ್ತು ಕೀರ್ತನೆ ರೂಪಗಳು ಇಂದಿಗೂ ಜನರಿಗೆ
ಹತ್ತಿರವಾದ ಛಂದೋರೂಪಗಳು.
ಭಾಮಿನಿಯ
ಹಾಗೆ ಕನ್ನಡಿಗರಿಗೆ ಇಷ್ಟವಾದ ಇನ್ನೊಂದು ಛಂದೋರೂಪವೆಂದರೆ ವಾರ್ಧಕ ಷಟ್ಪದಿ. ರಾಘವಾಂಕನಿಂದಲೇ ( ಕ್ರಿಸ್ತ ಶಕ
1230) ಆರಂಭವಾದ ಈ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. ೧ ,೨, ೪, ಮತ್ತು ೫ನೆಯ ಸಾಲುಗಳು ಸಮನಾಗಿದ್ದು, ಅಲ್ಲಿ
ಐದು ಮಾತ್ರೆಯ ನಾಲ್ಕು ಗಣಗಳಿರುತ್ತವೆ. ಮೂರು ಮತ್ತು ಆರನೆಯ ಪಾದಗಳಲ್ಲಿ ಐದು ಮಾತ್ರೆಯ ಆರು ಗಣಗಳಗಳಿದ್ದು,
ಕೊನೆಯಲ್ಲಿ ಒಂದು ಗುರು ಇರುತ್ತದೆ. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.
ಉದಾಹರಣೆ:
ಬಲ್ಗಯ್ಯ
ನೃಪರಂಜಿ ತಡೆಯದೆರಘೂದ್ವಹನ
ಸೊಲ್ಗೇಳಿ
ನಮಿಸಲಿಳೆಯೊಳ್ ಚರಿಸುತಧ್ವರದ
ನಲ್ಗುದುರೆ
ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು
ಪುಲ್ಗಳ
ಪಸುರ್ಗೆಳಸಿ ಪೊಕ್ಕಡಾ ತೋಟಗಾ
ವಲ್ಗೆ
ತನ್ನೊಡನಾಡಿಗಳಕೂಡಿ ಲೀಲೆ ಮಿಗೆ
ಬಿಲ್ಗೊಂಡು
ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು
ಇದರ
ವಿಂಗಡಣೆ ಕೆಳಗಿನಂತಿದೆ-
ಬಲ್ಗಯ್ಯ
| ನೃಪರಂಜಿ | ತಡೆಯದೆರ | ಘೂದ್ವಹನ
ಸೊಲ್ಗೇಳಿ
| ನಮಿಸಲಿಳೆ | ಯೊಳ್ ಚರಿಸು | ತಧ್ವರದ
ನಲ್ಗುದುರೆ
| ಬಂದು ವಾ | ಲ್ಮೀಕಿಯನಿ | ಜಾಶ್ರಮದ | ವಿನಿಯೋಗ | ದು ಪವನದೊ| ಳು
ಪುಲ್ಗಳಪ
| ಸುರ್ಗೆಳಸಿ | ಪೊಕ್ಕಡಾ | ತೋಟಗಾ
ವಲ್ಗೆತ
| ನ್ನೊಡನಾಡಿ | ಗಳಕೂಡಿ | ಲೀಲೆಮಿಗೆ
ಬಿಲ್ಗೊಂಡು
| ನಡೆತಂದ | ವಂಕಂಡ | ನರ್ಚಿತಸು | ವಾಜಿಯಂ | ವೀರಲವ | ನು
ಗಣವಿಭಾಗ
ಮಾಡಿದರೆ-
೫ | ೫
| ೫
| ೫
೫ | ೫
| ೫
| ೫
೫ | ೫
| ೫
| ೫
| ೫
| ೫
| -
೫ | ೫
| ೫
| ೫
೫ | ೫
| ೫
| ೫
೫ | ೫
| ೫
| ೫
| ೫
| ೫
|-
ರಾಘವಾಂಕನ ಪ್ರಸಿದ್ಧ ಕಾವ್ಯಗಳಾದ ಹರಿಶ್ಚಂದ್ರಕಾವ್ಯ, ಸಿದ್ಧರಾಮಪುರಾಣ,
ಮತ್ತು ಸೋಮನಾಥ ಚಾರಿತ್ರ ಹಾಗೂ ಕನ್ನಡಿಗರ ಮನಗೆದ್ದ ಲಕ್ಷ್ಮೀಶನ ಜೈಮಿನಿ ಭಾರತವು ವಾರ್ಧಿಕ ಷಟ್ಪದಿಯಲ್ಲಿಯೇ
ರಚಿತವಾಗಿದೆ. ಪದ್ಮಣಾಂಕನ ಪದ್ಮರಾಜ ಪುರಾಣ ( ಕ್ರಿಶ
1400), ಲಕ್ಕಣ ದಂಡೇಶನ ಶಿವತತ್ವ ಚಿಂತಾಮಣಿ ( ಕ್ರಿ ಶ 1600), ವಿರೂಪಾಕ್ಷಪಂಡಿತನ ಚನ್ನಬಸವಪುರಾಣ ( ಕ್ರಿ ಶ 1584), ಸಿಂಗಿ ರಾಜನ
ಸಿಂಗಿರಾಜ ಪುರಾಣ ( ಕ್ರಿಶ 1500), ಮಂಗರಸನ ( ಕ್ರಿಶ 1508) ಸೂಪ ಶಾಸ್ತ್ರ, ಅದೃಶ್ಯ ಕವಿಯ ( ಕ್ರಿಶ 1580) ಪ್ರೌಢರಾಯನ
ಕಾವ್ಯ, ಮೊದಲಾದ ಕೃತಿಗಳು ವಾರ್ಧಿಕ ಷಟ್ಪದಿಯಲ್ಲಿ
ರಚಿತವಾದ ಇತರ ಪ್ರಸಿದ್ಧ ಕಾವ್ಯಗಳು. ಕನ್ನಡ ಕಥನ ಪರಂಪರೆಗೆ ವಾರ್ಧಿಕ ಷಟ್ಪದಿಯ ಕೊಡುಗೆಯೂ
ಮಹತ್ತರವಾದುದು.
ಕನ್ನಡ
ಕಾವ್ಯಗಳನ್ನು ಜನರ ಹತ್ತಿರ ಕೊಂಡೊಯ್ದ ಇನ್ನೊಂದು ಛಂದೋರೂಪವೆಂದರೆ ಸಾಂಗತ್ಯ. ಅಂಶ ಗಣಗಳ ಸಾಂಗತ್ಯವು ಮೂಲತಹ ಜನಪದ ಪರಂಪರೆಗೆ ಸೇರಿದ್ದು, ಬಹುಮಟ್ಟಿಗೆ
ತ್ರಿಪದಿಯ ವಿಸ್ತರಣೆಯಾಗಿದೆ. ತ್ರಿಪದಿಯಲ್ಲಿ ಒಟ್ಟು ಮೂರು ಸಾಲುಗಳಿದ್ದರೆ, ಸಾಂಗತ್ಯದಲ್ಲಿ
ನಾಲ್ಕು ಸಾಲುಗಳಿರುತ್ತವೆ. ಮೊದಲ ಸಾಲು ಹಾಗೂ ಮೂರನೇ ಸಾಲು ಸಮವಾಗಿರುತ್ತವೆ. ಹಾಗೇ ಎರಡನೇ ಸಾಲು ಹಾಗೂ ನಾಲ್ಕನೇ ಸಾಲು ಕೂಡಾ ಸಮವಾಗಿರುತ್ತವೆ. ಅಂತ್ಯಪ್ರಾಸ ಬಳಕೆ ಸಾಮಾನ್ಯ.
ನಾಲ್ಕು ಸಾಲುಗಳಿರುತ್ತವೆ. ಮೊದಲ ಸಾಲು ಹಾಗೂ ಮೂರನೇ ಸಾಲು ಸಮವಾಗಿರುತ್ತವೆ. ಹಾಗೇ ಎರಡನೇ ಸಾಲು ಹಾಗೂ ನಾಲ್ಕನೇ ಸಾಲು ಕೂಡಾ ಸಮವಾಗಿರುತ್ತವೆ. ಅಂತ್ಯಪ್ರಾಸ ಬಳಕೆ ಸಾಮಾನ್ಯ.
ಸಾಂಗತ್ಯದ ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣು ಗಣಗಳಿರುತ್ತವೆ.
ಎರಡನೇ ಸಾಲಿನಲ್ಲಿ ಎರಡು ವಿಷ್ಣು ಹಾಗೂ ಒಂದು ಬ್ರಹ್ಮಗಣವಿರುತ್ತದೆ. ಅದರ ವಿನ್ಯಾಸ ಹೀಗಿದೆ.
ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
ವಿಷ್ಣು |ವಿಷ್ಣು |ಬ್ರಹ್ಮ
ವಿಷ್ಣು |ವಿಷ್ಣು |ವಿಷ್ಣು |ವಿಷ್ಣು
ವಿಷ್ಣು |ವಿಷ್ಣು |ಬ್ರಹ್ಮ
ಸಾಂಗತ್ಯ ಹಾಡುಗಬ್ಬದ ಪ್ರಕಾರಕ್ಕೆ ಸೇರಿದ್ದರಿಂದ ಅರ್ಥ ಸ್ವಾರಸ್ಯಕ್ಕಾಗಿ ಮತ್ತು ಹಾಡಿನ ಸೌಲಭ್ಯಕ್ಕಾಗಿ ವಿಷ್ಣುಗಣದ ಸ್ಥಾನದಲ್ಲಿ ಬ್ರಹ್ಮವೋ ರುದ್ರವೋ ಬ್ರಹ್ಮಗಣದ ಸ್ಥಾನದಲ್ಲಿ ವಿಷ್ಣುವೋ ರುದ್ರವೋ ಪರ್ಯಾಯವಾಗಿ ಬರುವುದುಂಟು. ಯಕ್ಷಗಾನಗಳಲ್ಲಿ ಸಾಂಗತ್ಯವನ್ನು ಅಷ್ಟತಾಳ, ಆದಿ ತಾಳ, ಏಕ ತಾಳ, ಝಂಪೆ ತಾಳ, ತ್ರಿವುಡೆ ತಾಳ, ರೂಪಕ ತಾಳ-ಹೀಗೆ ಹಲವು ತಾಳಗಳಲ್ಲಿ ಹಾಡುತ್ತಾರೆ. ಕಥನಗಳ ನಿರೂಪಣೆಗೆ ಸಾಂಗತ್ಯದಷ್ಟು ಒಳ್ಳೆಯ ಮಟ್ಟು ಬೇರೆ ಇಲ್ಲ.
ಕನ್ನಡ ಸಾಹಿತ್ಯದ
ಪ್ರಥಮ ಸಾಂಗತ್ಯಕೃತಿಯೆಂದು ವಿದ್ವಾಂಸರು ಅಬಿಪ್ರಾಯಪಟ್ಟಿರುವ ದೇಪರಾಜನ ಸೊಬಗಿನ ಸೋನೆ ( ಕ್ರಿ ಶ
1410) ಒಂದು ವಿಶಿಷ್ಟ ರೀತಿಯದು. ಈ ಕೃತಿಯಲ್ಲಿನ ಪ್ರತಿಯೊಂದು ಪದ್ಯದಲ್ಲಿಯೂ ಬ್ರಹ್ಮಗಣಗಳಿಗೆ
ಪರ್ಯಾಯವಾಗಿ ವಿಷ್ಣುಗಣಗಳನ್ನು ಬಳಸಲಾಗಿದೆ.
ಶಿಶುಮಾಯಣನ ತ್ರಿಪುರ ದಹನ
ಸಾಂಗತ್ಯ ಮತ್ತು ಅಂಜನಾಚರಿತ್ರೆ,( ಕ್ರಿ ಶ 1300), ಮೂರನೆಯ ಮಂಗರಸನ ನೇಮಿಜಿನೇಶ ಸಂಗತಿ, ಪ್ರಭಂಜನಚರಿತೆ,
ಶ್ರೀಪಾಲ ಚರಿತೆಗಳು ( ಕ್ರಿ ಶ 1508), ನಂಜುಂಡನ
ರಾಮನಾಥಚರಿತೆ ( ಕ್ರಿ ಶ 1520), ಕನಕದಾಸರ
ಮೋಹನತರಂಗಿಣಿ ( ಕ್ರಿ ಶ 1550), ರತ್ನಾಕರವರ್ಣಿಯ ಭರತೇಶವೈಭವ ( ಕ್ರಿ ಶ 1557), ಚಿಕುಪಾಧ್ಯಾಯನ
ಯಾದವಗಿರಿ ಮಹಾತ್ಮೆ ( ಕ್ರಿ ಶ 1672), ಧರಣಿಪಂಡಿತನ ಬಿಜ್ಜಳರಾಯಚರಿತೆ ( ಕ್ರಿ ಶ 1660), ಚದುರ
ಚಂದ್ರಮನ ಕಾರ್ಕಳದ ಗೋಮ್ಮಟೇಶ್ವರಚರಿತೆ ( ಕ್ರಿ ಶ 1640) ಸಿದ್ಧಕವಿಯ ಸಿರುಮನ ಸಾಂಗತ್ಯ,( ಕ್ರಿ
ಶ 1700), ಗೋವಿಂದ ವೈದ್ಯನ ಕಂಠೀರವ ನರಸರಾಜವಿಜಯ
( ಕ್ರಿ ಶ 1650), ಸಂಚಿಯ ಹೊನ್ನಮ್ಮನ ಹದಿಬದೆಯ ಧರ್ಮ ( ಕ್ರಿ ಶ 1675), ಮೊದಲಾದುವು ಪ್ರಸಿದ್ಧ
ಸಾಂಗತ್ಯ ಕಾವ್ಯಗಳು.
ಈ
ಎಲ್ಲಾ ಛಂದೋ ರೂಪಗಳು ದೊಡ್ಡ ಸಂಖ್ಯೆಯಲ್ಲಿದ್ದ
ಸಾಮಾನ್ಯ ಕನ್ನಡಿಗರನ್ನು ಹಾಡಿನ ಮೂಲಕ ತಲುಪಲು ಕವಿಗಳು ಮಾಡಿದ ಮಹಾನ್ ಪ್ರಯತ್ನಗಳೇ ಆಗಿವೆ.
ನಡುಗನ್ನಡ
ಕಾಲಘಟ್ಟದಲ್ಲಿ ಬಂದ ಇತರ ರಾಮಾಯಣ ಕೃತಿಗಳಾದರೂ ಅಷ್ಟೆ. ಅವು ನಾಗಚಂದ್ರ ಹಿಡಿದ ಪಂಡಿತರ
ಹಾದಿಯನ್ನು ಬಿಟ್ಟು ‘ಜಂಗಮ ಜನಾರ್ಧನರ’ ನ್ನು ತಮ್ಮ ಕೇಂದ್ರದಲ್ಲಿರಿಸಿಕೊಂಡ ಕಥನಗಳು. ಕುಮುದೇಂದುವಿನ 'ಕುಮುದೇಂದು
ರಾಮಾಯಣ' (ಕ್ರಿ ಶ 1270), ನಾಗರಾಜನ 'ಪುಣ್ಯಾಸ್ರವ'
(ಕ್ರಿ ಶ 1270), ದೇವಪ್ಪನ 'ರಾಮವಿಜಯ' (ಕ್ರಿ
ಶ 1331), ಚಂದ್ರಶೇಖರನ 'ರಾಮಚಂದ್ರ ಚರಿತ (ಕ್ರಿ
ಶ 1700), ದೇವಚಂದ್ರನ 'ರಾಮಕಥಾವತಾರ' (ಕ್ರಿ
ಶ 1800) ಮೊದಲಾದ ಜೈನ ರಾಮಾಯಣಗಳ ಸ್ವರೂಪವೇ ಬೇರೆ.
ಚಾಮರಾಜನ 'ರಾಮಾಯಣ' (ಕ್ರಿ. ಶ. 1630),
ತಿಮ್ಮರಸನ 'ಮಾರ್ಕಾಂಡೇಯ ರಾಮಾಯಣ' (ಕ್ರಿ ಶ 1650), ಮಲ್ಲರಸನ 'ದಶಾವತಾರ ಚರಿತೆ' (ಕ್ರಿ ಶ 1680), ಶಂಕರನಾರಾಯಣನ 'ಆಧ್ಯಾತ್ಮ ರಾಮಾಯಣ' (ಕ್ರಿ ಶ 1700) ಮತ್ತಿತರ ಕೃತಿಗಳು
ಮಧ್ಯಕಾಲೀನ ಕರ್ನಾಟಕದಲ್ಲಿ ಸಾಮಾನ್ಯ ಕನ್ನಡಿಗರನ್ನು ಭಿನ್ನ
ರೀತಿಯಲ್ಲಿ ತಲುಪಲು ನಡೆಸಿದ ಪ್ರಯತ್ನಗಳೆಂಬುದನ್ನು ಮರೆಯಬಾರದು.
ಕನ್ನಡ ಕಾವ್ಯ- ಗಮಕವಾಗಿ ಮರು ಸೃಷ್ಟಿ:
ವಿವಿಧ
ಛಂದೋರೂಪಗಳಲ್ಲಿ ಹಾಡಲು ಅನುಕೂಲವಾಗುವಂತೆ ಮರುಸೃಷ್ಟಿಸಿಕೊಂಡ ಕನ್ನಡ ಕಾವ್ಯಗಳನ್ನು ಸಾಮಾನ್ಯ
ಜನರಿಗೆ ಮುಟ್ಟಿಸುವಲ್ಲಿ ಗಮಕವು ಪ್ರಧಾನ ಪಾತ್ರ ವಹಿಸಿದೆ. ಗಮಕವು ಸಾಹಿತ್ಯಕ್ಕೆ ಸಂಗೀತವನ್ನು
ಬೆರೆಸಿ ಅದರ ಮಾಧುರ್ಯವನ್ನು ಇಮ್ಮಡಿಗೊಳಿಸಿತು.
ಪ್ರಾಚೀನ
ಸಂಗೀತ ಶಾಸ್ತ್ರಜ್ಞನಾದ ಶಾರ್ಙ್ಗದೇವನು (ಕ್ರಿ ಶ 1230)
ತನ್ನ ಸಂಗೀತ
ರತ್ನಾಕರ ಗ್ರಂಥದಲ್ಲಿ ತಿಳಿಸಿರುವಂತೆ, ‘ಕೇಳುಗರಿಗೆ
ಸುಖವೀಯುವ ರೀತಿಯಲ್ಲಿ ಸ್ವರಗಳನ್ನು ಕಂಪಿಸುವುದೇ ಗಮಕ’,
ವಾಚಸ್ಪತ್ಯ
ಕೋಶದ ಪ್ರಕಾರ, ‘ಸ್ಪಷ್ಟಪಡಿಸುತ್ತ, ಯಾವುದು ಮೂರ್ಛನಾದಿ (ಇಲ್ಲಿ ಮೂರ್ಛನಾ ಎಂದರೆ
ಸಂಗೀತದಲ್ಲಿ ಸಪ್ತಸ್ವರಗಳ ಏರಿಳಿತಗಳ ಆಲಾಪನೆ. ಗಮಕ ಕಲೆಯಲ್ಲಿ ಪದ್ಯಗಳನ್ನು ಹಾಡುವಾಗ, ಆಯಾ ಸನ್ನಿವೇಶ-ರಸ-ಧ್ವನಿಗಳಿಗೆ ಸಂಬಂಧಿಸಿದಂತೆ ಆಯಾ
ರಾಗಗಳಲ್ಲಿ ವಾಚಿಸುವುದರಿಂದ ಅದ್ಭುತ ಪರಿಣಾಮ ಮನದ ಮೇಲಾಗುವುದೆಂಬುವ ಅಂಶ) ಲಕ್ಷಣಗಳಿಂದ
ತನ್ನನ್ನೇ ಹೊಂದಿಸುವುದೋ ಅದು ಗಮಕ’. ನಿಜಗುಣಶಿವಯೋಗಿ
( ಕ್ರಿ ಶ 1500) ತನ್ನ ವಿವೇಕ ಚಿಂತಾಮಣಿ ಕೃತಿಯಲ್ಲಿ -
‘ತಾನಮಾನಂದೋಱಿ
ವಿಶ್ರಮಣನನಱಿದು ಪದನಂ ವ್ಯಕ್ತಿಗೈದು ಕೇಳ್ವರ ಕಿವಿಗೊಳಿಸಿ ಮೃದುಮಧುರ ವರ್ಣೋಚ್ಚಾರಣಂ ಮಾಳ್ಪರ್
ಗಮಕಿಗಳ್’ ಎನ್ನುತ್ತಾನೆ.
ವಾಲ್ಮೀಕಿಯು ಬರೆದ ರಾಮಾಯಣವನ್ನು ಕುಶ ಲವರು ಹಾಡಿ, ವಶಿಷ್ಠರ ಆಶ್ರಮದಲ್ಲಿದ್ದ ಎಲ್ಲ ಮುನಿಗಳಿಗೆ
ದಾಟಿಸಿದ್ದನ್ನು ವಿದ್ವಾಂಸರು ಈಗಾಗಲೇ ಗುರುತಿಸಿದ್ದಾರೆ. ಕನ್ನಡ ಶಾಸನಗಳು ಗಮಕವನ್ನು
ಕೊಂಡಾಡಿರುವುದನ್ನು ಆರ್ ನರಸಿಂಹಾಚಾರ್ಯರೇ ಮೊದಲಾದ ವಿದ್ವಾಂಸರು ಗುರುತಿಸಿದ್ದಾರೆ.
ಕೆಳಗಿನ
ಶಾಸನದಲ್ಲಿ ಕವಿಯನ್ನೂ ಗಮಕಿಯನ್ನೂ ಒಟ್ಟೊಟ್ಟಿಗೇ ಪ್ರಶಂಸಿಸಲಾಗಿದೆ.
ಕವಿಗಮಕಿ ವಾದಿ ವಾಗ್ಮಿಗ
ಳವಿವೇಕದ ದೆಸೆಯನರಿಯರಾಶ್ರಿತ ಜನಮು
ತ್ಸವದಿಂ ಬೇಡಲ್ಕೀವರ್
ಸವಿಲಾಸಿಗಳ್ತೆ ಶಿವೆಯಗೇರಿಯನೂರ್ವರ್
(ಶಾಸನ
ಪದ್ಯಮಂಜರಿ-ಪುಟ 147, ಪದ್ಯ 862)
ಪಂಪನ
ವಿಕ್ರಮಾರ್ಜುನ ವಿಜಯದಲ್ಲಿ ಬರುವ ಮಾತುಗಳನ್ನು ಗಮನಿಸೋಣ-
ಕವಿ ಗಮಕಿ ವಾದಿ ವಾಗ್ಮಿ
ಪ್ರವರರ ಪಂಡಿತರ ನೆಗೞ್ದ ಮಾತಱಿವರ ಸ
ಬ್ಬವದವರೊಡನಂತೆಸೆದ
ನ್ನವಾಸದೋಲಗದೊಳಿರ್ಪನಾಗಳ್ ಹರಿಗಂ
ಇಲ್ಲಿಯೂ ಕವಿ ಮತ್ತು ಗಮಕಿಗಳನ್ನು ಒಟ್ಟಿಗೇ
ಉಲ್ಲೇಖಿಸಲಾಗಿದೆ.
ಪೊನ್ನನು ತನ್ನ ಶಾಂತಿಪುರಾಣ ಕಾವ್ಯದಲ್ಲಿ ತನ್ನನ್ನು ಪ್ರಶಂಸೆ
ಮಾಡಿಕೊಂಡಿರುವ ಸಂದರ್ಭದ ಪದ್ಯವೊಂದರಲ್ಲಿ ಗಮಕಿಯ ವಿಚಾರ ಹೀಗೆ ನಿರೂಪಣೆಗೊಂಡಿದೆ :
ಇದಿರ್ಗೆ ಬರೆ ಪೊನ್ನಿಗಂ ಕಿಡಿ
ಸದಿರಂ ಕವಿ ಗಮಕಿ ವಾದಿ ವಾಗ್ಮಿಗಳ ಕವಿ
ತ್ವದ ಗಮಕಿತ್ವದ ವಾದಿ
ತ್ವದ ವಾಗ್ಮಿತ್ವದ ಪೊಡರ್ಪುಮಂದರ್ಪಮುಮಂ
ಹರಿಹರ ತನ್ನ
ನಂಬಿಯಣ್ಣನ ರಗಳೆಯಲ್ಲಿ ನಂಬಿಯಣ್ಣನು ‘ಗೇಯಗೋಷ್ಠಿ, ಗಮಕಿತ್ವದ ವಾಗ್ಮಿವೃಂದದೊಳ್’ ಇದ್ದನೆಂದು ಹೇಳುತ್ತಾನೆ. ವಾರ್ಧಿಕ ಷಟ್ಪದಿಯ
ಸಾಧ್ಯತೆಗಳೆಲ್ಲವನ್ನೂ ಸೂರೆಗೊಂಡ ಲಕ್ಷ್ಮೀಶನಲ್ಲಿ ಸ್ಪಷ್ಟವಾಗಿ ಕವಿಗಮಕಿಗಳ ಕುರಿತ ಚಿತ್ರಣ
ದೊರೆಯುತ್ತದೆ. ದುರ್ಗಸಿಂಹ ತನ್ನ ಕನ್ನಡ ಪಂಚತಂತ್ರದಲ್ಲಿ ಶ್ರೀಮಾದಿರಾಜ ಎಂಬುವವನನ್ನು ‘ ಕವಿಗಮಕಿವಾದಿ ವಾಗ್ಮಿ ಪ್ರವರನೆಂದು’ ಕೊಂಡಾಡುತ್ತಾನೆ.
ಗಮಕಿಗಳಿಗೆ
ಗುರುವಾದ ಕುಮಾರವ್ಯಾಸನೇ ಹೀಗೆ ಹೇಳಿದ್ದಾನೆ-
ನುಡಿದು ತಲೆದೂಗಿಸುವಮರೆಗ |
ನ್ನಡಕೆ ಹಾಹಾಯೆನಿಸಿ ಮೆಚ್ಚನು
ಪಡೆವ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು ||
(ಕುಮಾರವ್ಯಾಸಭಾರತ - ಸಂಧಿ 8 - ಪದ್ಯ 38)
ಹಾಡಲೆಂದೇ
ಬರೆಯಲಾದ ಕನಕದಾಸರ ಮೋಹನತರಂಗಿಣಿ ಯಲ್ಲಿ ಈ ಕೆಳಗಿನ ಸಾಲುಗಳು ಬರುತ್ತವೆ (3-40)-
ರವಿ ಸಿದ್ಧಾನ್ತ ಪಾಠಕರಷ್ಟಭಾಷಾ |
ಕವಿ ಗಮಕಿಗಳು ತಾರ್ಕಿಕರು |
ವಿವಿಧ ವಿದ್ವತ್ಸಭೆ ನೆಱೆದುದು ಲಲಿತಾ ಭಾರ್ಗವಿಯ
ಕಾಂತನ ಪುರದೊಳಗೆ
ಶಿವ ಪಾರಮ್ಯವನ್ನು ಮೆರೆದ ಭೀಮ ಕವಿಯ ಬಸವಪುರಾಣದಲ್ಲಿ
ಕವಿಗಮಕಿವಾದಿ ವಾಗ್ಮಿಗಳ ಸಂಪುರ್ಣ ಚಿತ್ರಣವಿದೆ.
ಪುರಂದರದಾಸರ
ಒಂದು ಕೀರ್ತನೆಯಲ್ಲಿ
ತಾಳ ಬೇಕು | ತಕ್ಕ ಮೇಳ
ಬೇಕು
ಶಾಂತ ವೇಳೆ ಬೇಕು-ಗಾನವ ಕೇಳಬೇಕೆನ್ನುವಗೆ
ಎಂಬ ವಿವರಣೆ ಬರುತ್ತದೆ.
ಒಡೆಯರ ಕಾಲದ
ಗೋವಿಂದ ವೈದ್ಯನು ತನ್ನ ಚಂಪೂ ಕೃತಿ ಕಂಠೀರವ ನರಸರಾಜ ವಿಜಯದಲ್ಲಿ ‘ಗಮಕಿಗಳು ರಂಜಿಸಿದರು’ ಎನ್ನುತ್ತಾನೆ. ಅಂದರೆ, ಅವನ ಕಾಲಕ್ಕೆ ಹಾಡುವ ಗಮಕಿಗಳಿದ್ದರು ಎಂಬುದು ಇದರ
ಸೂಚನೆ. ಭಾರತಿನಂಜನ ಮೂಲಕ ರಾಜನು ಇಡೀ ಕಾವ್ಯವನ್ನೆ ಹಾಡಿಸಿದನಂತೆ. ಹೀಗೆಯೇ ರತ್ನಾಕರವರ್ಣಿಯ
ಭರತೇಶ ವೈಭವದಲ್ಲಿಯೂ ‘ದಂಡಿಗೆ ಮಿಡಿಯುತ್ತ ಗಮಕಿ ಹಾಡಿದಳೆಂಬುವ’ ಅಂಶವು ಧ್ವನಿತಗೊಂಡಿದೆ.
ಹೀಗೆ
ಕನ್ನಡದ ಬಹುತೇಕ ಕವಿಗಳು ಗಮಕಿಗಳನ್ನು ತಮ್ಮ ಜೊತೆಗಾರರಾಗಿಯೇ ಇರಿಸಿಕೊಂಡಿದ್ದಾರೆ. ತಮ್ಮ
ಕಾವ್ಯವನ್ನು ಜನರಿಗೆ ಮುಟ್ಟಿಸುವವರು ಗಮಕಿಗಳು ಎಂಬ ವಿಷಯದಲ್ಲಿ ಹಳಗನ್ನಡ ಹಾಗೂ ನಡುಗನ್ನಡ
ಕವಿಗಳ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ.
ಗಮಕದ
ಕುರಿತು ಕನ್ನಡೆ ವಿಶ್ವಕೋಶ ಹೀಗೆ ಹೇಳುತ್ತದೆ- ‘ ಈ ಎಲ್ಲ
ಅಂಶಗಳನ್ನೂ ಗಮನಿಸಿ, ಶ್ರದ್ಧಾಭಕ್ತಿಯಿಂದ
ಕವಿಕೃತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ, ಅದರ ಸಂಪುರ್ಣ
ರಸಭಾವಗಳು ಶ್ರೋತೃಗಳಲ್ಲಿ ಉದ್ಬೋಧವಾಗುವಂತೆ ಮಾಡುವ ಗಮಕಿ ನಿಜವಾಗಿ ಆ ಹೆಸರಿಗೆ
ತಕ್ಕವನಾಗುತ್ತಾನೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತವೇ ಮೊದಲಾದ ನವರಸಗಳೂ ಮೂಡಿಬರುವಂತೆ ಮಾಡುವುದು
ನಿಜವಾದ ವಾಚನ ವೈಖರಿಯ ಅಗ್ಗಳಿಕೆ. ಯತಿ, ಗಣ, ಪ್ರಾಸ ಇತ್ಯಾದಿಗಳನ್ನೂ ಷಟ್ಪದಿ, ಸಾಂಗತ್ಯ, ರಗಳೆ, ಶತಕ, ತ್ರಿಪದಿ, ಕಂದ ಮೊದಲಾದ ಛಂದೋವೈವಿಧ್ಯವನ್ನೂ ಗಮಕಿ ಅರಿತಿರಬೇಕು.
ಸುಶ್ರಾವ್ಯವಾಗಿ ವಾಚನ ಮಾಡಲು ಶ್ರುತಿ, ಗತಿಗಳನ್ನು
ಅನುಸರಿಸಬೇಕು. ಸುಕಂಠದಿಂದ ಸ್ಫುಟವಾಗಿ ಕಾವ್ಯದ ನುಡಿಯನ್ನು ನಾಲಗೆಯಲ್ಲಿ ಕುಣಿಸಬೇಕು. ತಾನು
ಆನಂದಪಟ್ಟು ವಾಚಿಸಿದಲ್ಲಿ ಕೇಳುವವರಿಗೂ ಆನಂದವಾಗುವುದು. ಅವರ ಹೃದಯವೂ ಮಿಡಿಯುವುದು. ಶ್ರುತಿಭೇದ, ರಾಗಭೇದ, ಸಂಗೀತದ
ಸ್ವರಸ್ಥಾಯಿ, ಗಮಕ, ವರ್ಣ, ಕೃತಿಯ
ಜೀವಾಳ - ಇವನ್ನು ತಿಳಿದುಕೊಳ್ಳದಿದ್ದರೆ ಗಮಕ ಹಿತವಾಗಿರುವುದಿಲ್ಲ. ಇನ್ನು ತಾಳದ ವಿಷಯ. ಪದ್ಯದ
ಸಹಜವಾದ ಗತಿ, ಲಯ, ಏರಿಳಿತಗಳ ಕಡೆ ಗಮನವಿರಬೇಕು. ಎಲ್ಲಿ ಮುರಿಯಬೇಕು, ಎಲ್ಲಿ ನಿಲ್ಲಿಸಬೇಕು, ಎಲ್ಲಿ ನೆರವಲು ಮಾಡಬೇಕು ಎಂಬುದನ್ನರಿತು ಅರ್ಥವಾಗುವಂತೆ
ಜಾಗೃತಿಯಿಂದ ಪದಗಳ ಜಾಡು ಹಿಡಿಯಬೇಕು. ವಾಚಿಸುವಾಗಲೇ ಅರ್ಥ ಮೂಡಬೇಕು. ಅಭಿನಯದ ಮುದ್ರೆಗಳ ಪರಿಚಯ
ಪಡೆದುಕೊಂಡು ಸಮಯವರಿತು ಅವನ್ನು ಪ್ರಯೋಗ ಮಾಡುವುದು ಲೇಸು. ಸರಾಗದಿಂದ ಸುಮ್ಮನೆ ವಾಚನ ಮಾಡುವುದೂ
ಗಮಕವೇ.
ಕನ್ನಡ
ಸಾಹಿತ್ಯದಲ್ಲಿ ಬಗೆಬಗೆಯ ಕಾವ್ಯ ರಚನೆಯಾಗಿರುವುದರಿಂದ ಅವನ್ನು ಗಮಕಿಸುವ ರೀತಿಯೂ ಬಗೆಬಗೆಯಾಗಿದೆ.
ಅದರ ಪ್ರಯೋಗವನ್ನು ಗಮಕಿಯಾದವನು ಸಾಧಿಸಬೇಕಾಗಿದೆ. ಮೊದಲು ಹಳೆಯ ಚಂಪುಕಾವ್ಯವನ್ನು ನೋಡಬಹುದು.
ಅದರಲ್ಲಿ ಗದ್ಯ, ಪದ್ಯ
ಮಿಶ್ರವಾಗಿರುತ್ತದೆ; ಕಂದ, ವೃತ್ತಗಳಿರುತ್ತವೆ. ಗದ್ಯವನ್ನು ಸ್ಫುಟವಾಗಿ
ಸರಾಗವಾಗಿ ಓದಬೇಕು. ಅನೇಕ ವೃತ್ತಗಳಿಗೆ ಹಾಗೂ ಕಂದಕ್ಕೆ ತಾಳವಿಲ್ಲ. ಲಯವುಂಟು. ಅರ್ಥ ಕೆಡದಂತೆ, ನಿಲುಗಡೆ ಅರಿತು ಸೂಕ್ತ ರಾಗಗಳನ್ನು ಸಂಯೋಜಿಸಿ
ಹಾಡಿದಾಗ ಮನರಂಜನೆಯಾಗುವುದು. ಆದಿಕವಿ ಪಂಪನ ಸಮಸ್ತಭಾರತವನ್ನೂ ಮಹಾಕವಿ ರನ್ನನ ಗದಾಯುದ್ಧವನ್ನೂ
ವಾಚಿಸುವ ಬಗೆಯನ್ನು ಅರಿತುಕೊಳ್ಳಬೇಕು; ಜನ್ನನ
ಯಶೋಧರ ಚರಿತೆ ಬರಿ ಕಂದಗಳಲ್ಲಿ ಬಂದಿದೆಯಾದರೂ ಸುಲಲಿತವಾಗಿದೆ, ಸುನಾದಮಯವಾಗಿದೆ. ವಿವಿಧ ರಾಗಗಳಲ್ಲಿ ಅದನ್ನು
ಗಮಕಿಸಬಹುದು.
ಷಟ್ಪದಿ ಕಾವ್ಯಗಳಲ್ಲಿ
ಕುಮಾರವ್ಯಾಸನ ಮಹಾಭಾರತ ಗಮಕಿಗಳ ಭಾಗ್ಯನಿಧಿ ಎನಿಸಿದೆ. ಕುಮಾರವಾಲ್ಮೀಕಿಯ ತೊರವೆ ರಾಮಾಯಣಕ್ಕೆ
ಅನಂತರದ ಸ್ಥಾನ. ಇವೆರಡೂ ತುಂಬ ಜನಪ್ರಿಯವಾಗಿವೆ. ಭಾರತ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು ವಾಚನ ಮಾಡಿ ನಾಡಿನಾದ್ಯಂತ
ಇವನ್ನು ಪ್ರಚಾರ ಮಾಡಿದ್ದಾರೆ. ಜನಸಾಮಾನ್ಯರು ಗುರುತಿಸಬಲ್ಲ ನವರಾಗಗಳೇ ಸಾಕು. ಆದ್ದರಿಂದ
ಗಮಕಿಗೂ ಸಂಗೀತಾಭ್ಯಾಸ ಬಹಳ ಮುಖ್ಯ. ರಾಗಗಳ ಪರಿಚಯ, ಅವುಗಳನ್ನು
ಇಂಪಾಗಿ ಹಾಡುವ ಯೋಗ್ಯತೆ ಅವನಿಗಿರಬೇಕಾಗುತ್ತದೆ. ಸಾಹಿತ್ಯದಲ್ಲಿ ಅಡಗಿರುವ ನವರಸಗಳನ್ನು
ಗುರುತಿಸಿ ಅದನ್ನು ಪೋಷಿಸುವ ರಾಗಶಕ್ತಿಯನ್ನು ಗಮಕಿ ಗಳಿಸಿರಬೇಕಾಗುತ್ತದೆ.
ಛಂದಸ್ಸಿನ
ವಿಚಾರಕ್ಕೆ ಬಂದರೆ ಕವಿಯು ತನ್ನ ಕೃತಿಯ ಪದ್ಯಗಳನ್ನು ಯಾವ ತಾಳಗತಿಯಲ್ಲಿ ನಡೆಸಿದ್ದಾನೆಂಬ ಅರಿವು
ಗಮಕಿಗೆ ಅಗತ್ಯ. ತಾಳಯುತವಾಗಿ ವಾಚಿಸುವುದು ರೂಢಿಯಲಿಲ್ಲದಿದ್ದರೂ ಕವಿಕೃತಿಯನ್ನು ವಾಚಿಸುವಾಗ
ತಾಳಕ್ಕೆ ಆಧಾರವಾದ ಗತಿಯನ್ನು ಗುರುತಿಸಿ ಆ ಗತಿಯನ್ನು ಮೆರೆಸಬೇಕು. ಕವಿಗೆ ಸ್ಫೂರ್ತಿ, ಆವೇಶ ಬಂದಾಗ ಅವನ ಮಾತೂ ಲಯಬದ್ಧವಾಗುತ್ತದೆ, ರಾಗಬದ್ಧವಾಗುತ್ತದೆ. ಆಗ ಅವನ ಪದ್ಯಗಳು ಒಂದು ಗತಿಯಲ್ಲಿ
ಅಳವಡುವಂತಾಗುತ್ತದೆ. ಅದನ್ನರಿತು ಗಮಕಿ ವಾಚಿಸಿದರೆ ವಾಚನದ ವೈಶಿಷ್ಟ್ಯ ಹೆಚ್ಚಾಗುವುದರೊಂದಿಗೆ
ಕೃತಿಯ ಆಸ್ವಾದವೂ ಹೆಚ್ಚುತ್ತದೆ’.
ಹೀಗೆ
ಗಮಕಿಗಳು ಕನ್ನಡ ಕಾವ್ಯಗಳನ್ನು ಮರು ಸೃಷ್ಟಿಸಿ ಜನರಿಗೆ ತಲುಪಿಸಿದ್ದಾರೆ. ಸುಶ್ರಾವ್ಯತೆ, ಕಾವ್ಯದ ಅರ್ಥವಂತಿಕೆ, ರಸಾನುಭವ, ಭಾಷಾಸೌಂದರ್ಯ
ಇವೆಲ್ಲದರ ಸಮರ್ಥ ಅಭಿವ್ಯಕ್ತಿಗೆ ಪೂರಕವಾದ ರಾಗ ಭಾವಗಳನ್ನು ಅಳವಡಿಸಿಕೊಂಡ ಗಮಕಿಗಳು ಆ ಮೂಲಕ
ಕನ್ನಡ ಕಾವ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ.
ರಾಜರ
ಆಸ್ಥಾನಗಳಲ್ಲಿ ಪಂಡಿತರಿಗೆ, ಕವಿಗಳಿಗೆ, ಸಂಗೀತಗಾರರಿಗೆ,
ನೃತ್ಯಕಲಾವಿದರಿಗೆ
ಮಾನ್ಯತೆಗಳಿದ್ದಂತೆಯೇ ಗಮಕಿಗಳಿಗೂ ಅತ್ಯುತ್ತಮ ಸ್ಥಾನಗಳಿದ್ದವು.
ಆದರೆ
ಹಳಗನ್ನಡ-ನಡುಗನ್ನಡ ಕಾಲಘಟ್ಟಗಳಲ್ಲಿ ಯಾವ ಗಮಕಿಗಳು ನಮ್ಮ ಕಾವ್ಯಗಳನ್ನು ಹಾಡುತ್ತಿದ್ದರು ಎಂಬ
ಕುರಿತು ಸದ್ಯಕ್ಕೆ ನಮ್ಮಲ್ಲಿ ಮಾಹಿತಿಗಳಿಲ್ಲ. ಸಾವಿರಾರು ಸಂಖ್ಯೆಯಲ್ಲಿರುವ ಕನ್ನಡ ಶಾಸನಗಳಲ್ಲಿ
ಇಂಥವರ ಬಗ್ಗೆ ಮಾಹಿತಿಗಳಿದ್ದರೂ ಇರಬಹುದು. ಆದರೆ 19-20ನೆಯ ಶತಮಾನದ
ಅವಧಿಯಲ್ಲಿ ಕರ್ನಾಟಕದಲ್ಲಿ ಗಮಕ ಕಲೆ, ಕಾವ್ಯವಾಚನ
ಕ್ಷೇತ್ರದಲ್ಲಿ ಶ್ರಮಿಸುತ್ತ ಈ ಪ್ರಾಚೀನ ಕಲೆಯನ್ನು ನಾಡಿನಾದ್ಯಂತ ಪ್ರಸಾರ ಮಾಡಿದ ಹಿರಿಯರನೇಕರು
ಮಾಹಿತಿ ನಮಗೆ ದೊರೆಯುತ್ತದೆ. 1935ರಷ್ಟರ
ಹಿಂದೆ ಭಾರತಕ್ಕೆ ಬಂದ ಡಚ್ ಸಂಗೀತ ಶಾಸ್ತ್ರಜ್ಞ ಅರ್ನಾಲ್ಡ್ ಬಾಕೆಯು ಬೆಳಗಾವಿಯಲ್ಲಿ ರನ್ನನ
ಗದಾಯುದ್ಧವನ್ನು ರಾಗವಾಗಿ ಹಾಡುವುದನ್ನು ದಾಖಲಿಸಿದ್ದಾನೆ.. ಅಭಿನವ ಕಾಳಿದಾಸರೆಂದು
ಪ್ರಸಿದ್ಧರಾಗಿದ್ದ ಬಸವಪ್ಪಶಾಸ್ತ್ರಿಗಳು (1843-91)
ಗಮಕ
ಕಲಾಕ್ಷೇತ್ರದಲ್ಲಿ ದೊಡ್ಡ ಹೆಸರು. ಇವರ ಗಮಕ ವಾಚನವನ್ನು ಕುರಿತಂತೆ ಹಿರಿಯ ವಿದ್ವಾಂಸರಾದ ಆರ್.
ನರಸಿಂಹಾಚಾರ್ಯರು ಹೀಗೆ ಹೇಳಿದ್ದಾರೆ- ‘ ನನಗೆ ತಿಳಿದ
ಹಾಗೆ ಭಾರತವನ್ನು ಈಚೆಗೆ ಚೆನ್ನಾಗಿ ಓದುತ್ತಿದ್ದವರು ಮೈಸೂರಿನಲ್ಲಿದ್ದ ಸುಪ್ರಸಿದ್ಧ
ಬಸವಪ್ಪಶಾಸ್ತ್ರಿಗಳು. ಇವರು ಮೈಸೂರು ಶ್ರೀಮನ್ಮಹಾರಾಜರ ಆಸ್ಥಾನದಲ್ಲಿ ಕವಿಗಳಾಗಿದ್ದು ಅಭಿನವ
ಕಾಳಿದಾಸ ಎಂಬುವ ಬಿರುದು ಪಡೆದಿದ್ದವರು. ಇವರಷ್ಟು ಚೆನ್ನಾಗಿ ಭಾರತವನ್ನು ಓದಿದವರನ್ನು ನಾನು
ಕಂಡಿಲ್ಲ’.
ಬಸವಪ್ಪಶಾಸ್ತ್ರಿಗಳ
ಶಿಷ್ಯೆ ಹಾಡಿನ ನಾಗಮ್ಮ ಉತ್ತಮ ಗಮಕಿಯೆನಿಸಿಕೊಂಡಿದ್ದರು. ಇನ್ನೂ ಎಷ್ಟು ಶಿಷ್ಯರನ್ನು
ಶಾಸ್ತ್ರಿಗಳು ತಯಾರು ಮಾಡಿದ್ದರೆಂಬುದು ಸ್ಪಷ್ಟವಾಗಿ ತಿಳಿದಿಲ್ಲ.
ಆನಂತರದ
ಕಾಲಘಟ್ಟದಲ್ಲಿ ಗಮಕದಲ್ಲಿ ಹೆಸರಾದವರು ಸಂಗೋಬಿಂದೂರಾಯರು (1877-1969).
ಅವರು ಭಾರತದ
ಬಿಂದೂರಾಯರೆಂದೇ ಪ್ರಸಿದ್ಧರಾಗಿದ್ದರು. ಸಾಹಿತ್ಯಕ್ಕೆ ಒತ್ತುಗೊಟ್ಟು ಸಂಗೀತವನ್ನು ರಸಭಾವಕ್ಕಾಗಿ
ಮಾತ್ರ ಅಳವಡಿಸಿಕೊಳ್ಳುತ್ತ ಕಾವ್ಯವನ್ನು ಕೇಳುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುತ್ತಿದ್ದ
ಬಿಂದೂರಾಯರ ‘ಕುಮಾರವ್ಯಾಸ
ಭಾರತ ಸಾರೋದ್ಧಾರ’ ಎಂಬ
ಕೃತಿಯು ಇಂದು ಗಮಕಿಗಳಿಗೆ ಆಕರ
ಗ್ರಂಥವಾಗಿದೆ. ಅವರ ಹಾದಿಯಲ್ಲಿ ಹೆಜ್ಜೆ ಹಾಕಿದ
ಮೈಸೂರಿನ ಭಾರತದ ಕೃಷ್ಣರಾಯರು, ಶಕುಂತಲಾಬಾಯಿ, ಪಾಂಡುರಂಗ ರಾವ್,
ಎಂ.ಎಸ್.
ಚಂದ್ರಶೇಖರಯ್ಯ, ಧಾರವಾಡದ
ಸುಪ್ರಸಿದ್ಧ ಗವಾಯ್ ಗುರುರಾವ್ ದೇಶಪಾಂಡೆ ಮೊದಲಾದವರು ಗಮಕ ಕಲೆಯನ್ನು ಉಳಿಸಿ ಬೆಳೆಸಿದವರು. ಹೊಸ
ರೀತಿಯಲ್ಲಿ ಹಾಡುತ್ತಿದ್ದ ಭಾರತ ಕೃಷ್ಣರಾಯರ ಕುರಿತು ಮಹಾ ಕವಿ ಕುವೆಂಪು ಅವರು ‘ ಹಾಡಿದನು ಗಮಕಿ,
ನಾಡು
ನಲಿದುದು ರಸದ ಕಡಲಿನಲಿ ಧುಮುಕಿ’ ಎಂದು
ಪ್ರಶಂಸಿಸಿದ್ದಾರೆ.
ಮೈಸೂರಿನಲ್ಲಿದ್ದ
ತಲಕಾಡು ಮಾಯಿಗೌಡರು, ಜವಳಿ ಅಂಗಡಿ
ತಮ್ಮಯ್ಯ ನವರು, ಅನೇಕ
ಗ್ರಂಥಗಳನ್ನು ಬರೆದ ಮೈಸೂರು ರಾಘವೇಂದ್ರರಾಯರು, ಕಳಲೆ ಸಂಪತ್ಕುಮಾರಾಚಾರ್ಯರು, ದೇವುಡು ನರಸಿಂಹಶಾಸ್ತ್ರೀ ಅವರು, ಮೈ.ಶೇ. ಅನಂತಪದ್ಮನಾಭರಾವ್ , ಜೋಳದರಾಶಿ ದೊಡ್ಡನಗೌಡರು, ಅನಂತಪದ್ಮನಾಭಯ್ಯ,
ಕೆ.ಎ.
ವೆಂಕಟಸುಬ್ಬಯ್ಯ ವ್ಯಾಖ್ಯಾನಕಾರ ಕ.ಲಿ. ವೈದ್ಯನಾಥನ್, ಮಾಲೂರಿನ
ಟಿ. ವೆಂಕಟಪ್ಪನವರು, ಗಮಕ
ರೂಪಕಗಳೆಂಬ ಹೊಸ ಪ್ರಕಾರವನ್ನು ಸೃಜಿಸಿದ ಹು.ಮ. ರಾಮಾರಾಧ್ಯರು, ಸರೋಜಮ್ಮ ಅನಂತರಾಮಯ್ಯ, ಮತ್ತೂರಿನ ರಾಮಾಶಾಸ್ತ್ರಿಗಳು, ಲಕ್ಷ್ಮೀಕೇಶವ ಶಾಸ್ತ್ರಿಯವರು, ಮತ್ತೂರು ಕೃಷ್ಣಮೂರ್ತಿಯವರು ಹೀಗೆ ಸುಮಾರು 500 ಕ್ಕೂ ಹೆಚ್ಚಿನ ಸಂಖ್ಯೆಯ ಗಮಕಿಗಳು ಕನ್ನಡ
ಕಾವ್ಯಗಳನ್ನು ಗಮಕದ ಮೂಲಕ ಉಳಿಸಿದ್ದಾರೆ, ಕನ್ನಡ
ಸಾಹಿತ್ಯ ಚರಿತ್ರೆಯಲ್ಲಿ ಇವರಿಗೆ ಅರ್ಹವಾದ ಸ್ಥಾನವೊಂದು ಸಿಗಲೇ ಬೇಕು.
ಕರಾವಳಿ
ಕರ್ನಾಟಕದ ಅನೇಕ ಕಡೆಗಳಲ್ಲಿ ಮದುವೆಯಾಗ ಬಯಸುವ ಹುಡುಗನೊಬ್ಬ ಜೈಮಿನಿ ಭಾರತ, ತೊರವೆ ರಾಮಾಯಣ
ಅಥವಾ ಕುಮಾರವ್ಯಾಸ ಭಾರತದ ಕೆಲವು ಹಾಡುಗಳನ್ನು ಹಾಡಬಲ್ಲವನಾದರೆ ಮಾತ್ರ ಅವನಿಗೆ ಹುಡುಗಿ
ದೊರೆಯುತ್ತಿತ್ತು. ಗಮಕಕ್ಕೆಂದೇ ಕರ್ನಾಟ ಭಾರತ ಕಥಾಮಂಜರಿಯ ಸಂಕ್ಷಿಪ್ತ ಆವೃತ್ತಿಯೊಂದನ್ನು
ಸಂಪಾದಿಸಲಾಗಿದೆ.
ಹೀಗೆ
ಗಮಕದಲ್ಲಿ ಮತ್ತು ಗಮಕಕ್ಕಾಗಿ ಮರುಸೃಷ್ಟಿಯಾದ ಪಠ್ಯಗಳನ್ನು ನಾವು ಇನ್ನಷ್ಟೇ ಆಳವಾಗಿ ಅಧ್ಯಯನ
ಮಾಡಬೇಕಾಗಿದೆ.
ಗಮಕದಿಂದ ಹರಿಕತೆಯ ಕಡೆಗೆ:
ಕಾವ್ಯಗಳನ್ನು ಕುಳಿತು ಹಾಡುತ್ತಾ ಅದಕ್ಕೆ ಸರಳವಾದ
ಅರ್ಥ ವಿವರಣೆ ಮಾಡುವ ಜನರನ್ನು ತಲುಪಿದ ಗಮಕ ಪರಂಪರೆಯನ್ನು ಹರಿಕತಾ ಪರಂಪರೆಯು ಇನ್ನಷ್ಟು
ವಿಸ್ತರಿಸಿತು. ಹರಿಕತೆಯು ಒಂದು ಅರೆ ಜಾನಪದ ಕಲೆ.
ಕನ್ನಡ
ಶಾಸನಗಳಲ್ಲಿ ಹಾಗೂ ಕಾವ್ಯಗಳಲ್ಲಿ ಹರಿಕತೆಯ ಉಲ್ಲೇಖ ಬರುತ್ತದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ
ಹರಿಕತೆ ನಡೆಯುತ್ತದೆ. ಹೆಸರು ಸೂಚಿಸುವಂತೆ ಇದು ವೈಷ್ಣವ ಪರಂಪರೆಗೆ ಸೇರಿದ್ದರೂ ಅದರಲ್ಲಿ
ಹೇರಳವಾಗಿ ಶಿವ ಕತೆಗಳೂ ಸೇರಿಕೊಂಡಿದ್ದುವು. 12ನೆಯ ಶತಮಾನದ
ಶೈವ ಗುರುಗಳೊಬ್ಬರು ಶಿವಧರ್ಮ ಕಥಾಕಥನ ಮಾಡುತ್ತಿದ್ದರೆಂದು ಡಾ. ಚಿದಾನಂದ ಮೂರ್ತಿ ಅವರು ತಮ್ಮ
ಹೊಸತು ಹೊಸತು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕಥಾ ಕಥನವು ಹರಿಕತೆಯೋ ತಿಳಿಯದು. ಏನಿದ್ದರೂ
ಹರಿಕತೆಯ ಬಗ್ಗೆ ನಿರ್ವಿವಾದವಾದ ಉಲ್ಲೇಖ ದೊರೆಯುವುದು 15ನೇ ಶತಮಾನದ
ಹರಿದಾಸರಾದ ಶ್ರೀಪಾದ ರಾಯರಲ್ಲಿ. ‘ತಾಳ
ತಂಬೂರಿಗಳಿಂದ ಕಾಲ ಗೆಜ್ಜೆ ದನಿಗಳಿಂದ’ ಎಂಬ ಅವರು
ಸಾಲು ಹರಿದಾಸರೊಬ್ಬರ ವರ್ಣನೆಯೇ ಆಗಿದೆ.
ಪುರಂದರ
ದಾಸರಂತೂ ಹರಿಕತೆ ಕೇಳಲು ಬಂದ ಸಾಮಾನ್ಯ ಪ್ರೇಕ್ಷಕರ ಒಳ್ಳೆಯ ವಿವರ ನೀಡುತ್ತಾರೆ-
ಹರಿಕತೆ ಕೇಳುವ ಪರಿಜನರು ಈ
ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವವರು
ನೆಲ್ಲು ಒಣಗಲಿಲ್ಲ, ಹಲ್ಲು ನೋವು ಘನ್ನ
ಕಲ್ಲು ಹೋಗದು ಎನ್ನ ಕೈಲೆಂದು
ಫುಲ್ಲ ನಾಭನ ಕತೆ ಪೂರೈಸಿ ಕೇಳದೆ
ಕಲ್ಲ ಗೋವಿನ ಹಾಲ ಕರುವು ಬಯಸುವಂತೆ
ಅವರ
ಇನ್ನೊಂದು ಕೀರ್ತನೆಯಲ್ಲಿ ಹರಿಕತೆ ಆ ಕಾಲಕ್ಕೆ ಎಷ್ಟೊಂದು ಜನಪ್ರಿಯವಾಗಿತ್ತೆಂಬುದರ ಕುರಿತು
ಸೂಚನೆ ನೀಡುತ್ತದೆ-
ಪರರ ನಿಂದೆಗಳ ಬಿಡದೆ ಕಾಪಾಡುವ
ಮರೆತನೆ ಮನೆಯ ಬಾಗಿಲು ಹಾಕಲು
ಕರುವ ಕಟ್ಟಲಿಕೆ ಮರೆತು ಬಂದೆನೆಂಬ ಈ
ಪರಿಯ ಪುರಾಣಕ್ಕೆ ನೆರೆದು ಕುಳ್ಳಿರುವರು
ಕನಕದಾಸರು
ಕೂಡಾ ‘ಮುಟ್ಟಬೇಡ ಮುಟ್ಟ ಬೇಡ ಮುರಹರ ದಾಸರನು, …ಹರಿಕತಾ ಪ್ರಸಂಗದವರನು’ ಎಂದು ಹೇಳುತ್ತಾನೆ. ಹರಿಕತೆ ಕೇಳಲು ಬಂದ ಜನರು
ಪಾದರಕ್ಷೆಗಳು ಕಳುವಾಗುತ್ತಿದ್ದುದನ್ನು ವಿಜಯದಾಸರೂ ಉಲ್ಲೇಖಿಸಿದ್ದಾರೆ. ( ಪಾಪೋಸು ಪೋದುವಲ್ಲಾ
). ಕ್ರಿಸ್ತ ಶಕ 1650 ರಲ್ಲಿದ್ದ
ಶಾಂತವೀರ ದೇಶಿಕನು ತನ್ನ ಶಿವಲಿಂಗ ಚಾರಿತ್ರ್ಯ ದಲ್ಲಿ ಭಕ್ತರ ಮನೆಗಳಲ್ಲಿ ಹಾಗೂ
ರಾಜಾಸ್ಥಾನಗಳಲ್ಲಿ ಪುರಾತನರ ಕಥನ ನಡೆಯುತ್ತಿದ್ದುದನ್ನು ಸ್ಮರಿಸಿಕೊಂಡಿದ್ದಾನೆ.
ಈ
ಹರಿದಾಸರುಗಳು ಕನ್ನಡ ಕಾವ್ಯಗಳನ್ನು ಮರುಸೃಷ್ಟಿಸಿ ಜನರಿಗೆ ತಲುಪಿಸಿದ ರೀತಿಯ ಕುರಿತು ನಾವು
ಇನ್ನಷ್ಟೇ ಗಂಭೀರವಾದ ಅಧ್ಯಯನ ನಡೆಸಬೇಕಾಗಿದೆ. ಹೆಚ್ಚಿನ ಹರಿದಾಸರಿಗೆ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಹಾಗೂ ತೊರವೆಯ ರಾಮಾಯಣವೇ ಮೂಲ ಆಕರ.
ಅದರಿಂದ ಸ್ತುತಿ ಪದ್ಯಗಳನ್ನೂ ಮುಖ್ಯ ಕತಾಭಾಗಗಳನ್ನು ಆಯ್ದುಕೊಳ್ಳುವ ಇವರು ಕತೆಯನ್ನು ಪ್ರಸ್ತುತ
ಪಡಿಸುವಾಗ ಅದಕ್ಕೆ ಬೇಕಾದಲ್ಲಿಂದ ಉಪ ಕತೆಗಳನ್ನು ಸೇರಿಸಿಕೊಳ್ಳುತ್ತಿದ್ದರು. ಈ ಉಪಕತೆಗಳು
ಹಳಗನ್ನಡದಿಂದಲೋ, ನಡುಗನ್ನಡಗಳಿಂದಲೋ, ಇಲ್ಲ ಸಮಕಾಲೀನ ಸಮಾಜದಿಂದಲೋ ಬರಬಹುದಿತ್ತು. ಹೀಗಾಗಿ
ನಿರೂಪಣೆಯಲ್ಲಿ ಕನ್ನಡ ಕಾವ್ಯಗಳು ಹಿಗ್ಗಿ ವಿಸ್ತಾರವಾಗುತ್ತಿದ್ದುವು. ಹಂಪಿಯಲ್ಲಿ ನಾನು ಭೇಟಿ
ಮಾಡಿದ ಲಕ್ಷ್ಮಣದಾಸ ಎಂಬ ಹರಿದಾಸರೊಬ್ಬರು ಹೇಳುತ್ತಿದ್ದ ಹರಿಕತೆ ಹಾಡುಗಳಲ್ಲಿ ಶಿಶುನಾಳ ಶರೀಫರ
ತತ್ವಪದಗಳೊಂದಿಗೆ ಪುರಂದರದಾಸರ ಕೀರ್ತನೆಯ ಸಾಲು ಸೇರಿಕೊಂಡು, 'ಕೂಡಲ ಸಂಗಮದೇವಾ' ಎಂದು ಕೊನೆಗೊಳ್ಳುತ್ತಿತ್ತು. ಜೆ ಎನ್ ಯುವಿನ ಕನ್ನಡ
ಅಧ್ಯಯನ ಪೀಠದಲ್ಲಿ ನಾನು ಆಯೋಜಿಸಿದ ರನ್ನನ ಗದಾಯುದ್ಧ ಕುರಿತ ಹರಿಕತೆಯಲ್ಲಿ ಹರಿದಾಸರಾದ ಡಾ.
ಲಕ್ಷ್ಮಣ ದಾಸರು ಕುವೆಂಪು, ಬೇಂದ್ರೆ, ಬಸವಣ್ಣ, ಪುರಂದರದಾಸ ಮೊದಲಾದವರ ರಚನೆಗಳನ್ನು
ಗದಾಯುದ್ಧದೊಂದಿಗೆ ಸಮ್ಮಿಳಿತಗೊಳಿಸಿದ್ದರು. ಸುಮಾರು ಒಂದು ಸಾವಿರ ವರ್ಷಗಳ ಅವಧಿಯಲ್ಲಿ ರಚಿತವಾದ ನೂರಾರು ಪಠ್ಯಗಳಿಂದ
ತಮಗೆ ಬೇಕಾದ ಸಾಲುಗಳನ್ನು ಆರಿಸಿಕೊಂಡು ನಮ್ಮ ಕಾಲಕ್ಕೆ ಬೇಕಾದ ಪಠ್ಯವೊಂದನ್ನು ಹರಿಕತೆಯವರು
ಸೃಜಿಸುತ್ತಾರೆ. ಕುಮಾರವ್ಯಾಸ, ಜೈಮಿನಿ
ಭಾರತ, ತೊರವೆ ರಾಮಾಯಣ, ಪ್ರಭುಲಿಂಗ ಲೀಲೆ,
ವಚನಗಳು, ದಾಸರು ಕೀರ್ತನೆಗಳು, ಜನಪದ ಹಾಡುಗಳೆಲ್ಲ ಹರಿದಾಸರ ನಿರೂಪಣೆಯೊಂದರಲ್ಲಿ
ಸಮ್ಮಿಳಿತವಾಗುವ ಸೋಜಿಗವೊಂದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಂಭವಿಸಿದೆ. ನಾನು ಎಂಟನೆ ತರಗತಿ
ಓದುತ್ತಿದ್ದಾಗ (1968) ದಕ್ಷಿಣ
ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಪ್ರೌಢ ಶಾಲೆಗೆ ಆಗಮಿಸಿದ್ದ ಹರಿದಾಸ ಭದ್ರಗಿರಿ
ಅಚ್ಚುತದಾಸರು ಗದಾಯುದ್ಧ ಹರಿಕತೆ ಮಾಡಿದ್ದರು.
ಅದರಲ್ಲಿ ಪಂಪನ ಕಾವ್ಯದ ಸಾಲುಗಳೊಂದಿಗೆ ಮುಂದಿನ ಅನೇಕ ಮಹಾಭಾರತಗಳ ಸಾಲುಗಳೆಲ್ಲ ಸೇರಿಕೊಂಡದ್ದನ್ನು
ನಾನು ಆ ಮೇಲಿನ ದಿನಗಳಲ್ಲಿ ನೆನಪಿಸಿಕೊಂಡೆ. ಹಾಗೆ ನೋಡಿದರೆ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ
ಬೆಳೆದ ನನಗೆ ಕನ್ನಡ ಸಾಹಿತ್ಯಕ್ಕೆ ಪ್ರವೇಶ ದೊರೆತದ್ದೇ ಹರಿಕತೆಗಳ ಮೂಲಕ
ಕನ್ನಡ
ಕಾವ್ಯಗಳು ಮಧ್ಯಕಾಲೀನ ದೇವಳಗಳ ಗೋಡೆಗಳಲ್ಲಿ:
ಈ ಗಮಕ
ಮತ್ತು ಹರಿಕತೆಗಳು ಹೆಚ್ಚಾಗಿ ನಿರೂಪಣೆಗೊಳ್ಳುತ್ತಿದ್ದುದು ಭಕ್ತರ ಮನೆಗಳಲ್ಲಿ ಹಾಗೂ
ದೇವಸ್ಥಾನಗಳಲ್ಲಿ. ಅದು ಈಗಲೂ ಹಾಗೆಯೇ ಮುಂದುವರಿದಿದೆ, ಮತ್ತು
ಶಾಲೆಗಳು ಅದಕ್ಕೆ ಸೇರಿಕೊಂಡಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಸುಳ್ಯದ
ಚನ್ನಕೇಶವ ದೇವಸ್ಥಾನ, ಕುಕ್ಕೆ
ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರಿನ
ಮಹಾಲಿಂಗೇಶ್ವರ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಹರಿಕತೆಗಳಿಗೆ ನಾನು ತಪ್ಪದೆ ಹೋಗುತ್ತಿದ್ದೆ.
ಇಲ್ಲಿ ಸೇರುತ್ತಿದ್ದ ಜನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆ, ಜಗಲಿಗಳೂ ದೇವಸ್ತಾನಗಳ ನವರಂಗಗಳೂ ವಿಸ್ತರವಾಗುತ್ತಾ
ಹೋದುವು. ಈ ಅರ್ಥದಲ್ಲಿ ಕನ್ನಡ ಕಾವ್ಯವು
ಪರೋಕ್ಷವಾಗಿ ಗಮಕ ಮತ್ತು ಹರಿಕತೆಗಳ ಮೂಲಕವಾಗಿ ಮಧ್ಯಕಾಲೀನ ಕರ್ನಾಟಕದ ವಾಸ್ತು ಮತ್ತು
ಶಿಲ್ಪದೊಡನೆ ಸಂಬಂಧ ಸಾಧಿಸಿದೆ. ದೇವಳಗಳ ಅಲಂಕರಣಶೀಲ ಸೂಕ್ಷ್ಮ ಕೆತ್ತನೆಗಳಲ್ಲಿ ಕನ್ನಡ
ಕಾವ್ಯಗಳಿವೆ.
ಮಧ್ಯಕಾಲೀನ ದೇವಾಲಯಗಳ
ಬಾಗಿಲುವಾಡಗಳ ಹಾಗೂ ಹೊರ ಗೋಡೆಗಳಲ್ಲಿ ರಾಮಾಯಣ ಮತ್ತು ಮಹಾಭಾರತಗಳ ಪಾತ್ರಗಳು
ಕಾಣಿಸಿಕೊಂಡಿರುವುದು ಕುಮಾರವ್ಯಾಸ ಭಾರತ ಹಾಗೂ ತೊರವೆ ರಾಮಾಯಣಗಳಿಂದಲೇ ಎಂಬ ಬಗ್ಗೆ ನನ್ನಲ್ಲಿ
ಯಾವ ಸಂಶಯವೂ ಇಲ್ಲ. ಸುಂದರ ಹೂಬಳ್ಳಿಗಳು, ಲತಾಗುಲ್ಮಗಳು,
ಅವುಗಳ
ಮಧ್ಯೆ ಸೂಕ್ಷ್ಮ ಪ್ರಾಣಿಪಕ್ಷಿಗಳು, ವಿರಳವಾಗಿ
ಕಾಣಿಸುವ ದೇವಗಣ-ಮಾನವಗಣಗಳ ಕೆತ್ತನೆಗಳು ಪಂಪನ ಕಾವ್ಯದಲ್ಲೂ ಕಂಡುಬರುತ್ತವೆ. ದೇವಸ್ಥಾನಗಳ ಒಳಗೆ ತುಂಬ ಹೊತ್ತು
ಕುಳಿತು ಗಮಕವನ್ನೋ ಹರಿಕತೆಯನ್ನೋ ಕೇಳಲು ಅನುಕೂಲವಾಗುವಂತೆ ದೇವಾಲಯದ ಒಳಭಾಗಕ್ಕೆ ಸಾಕಷ್ಟು ಗಾಳಿ
ಬೆಳಕುಗಳನ್ನು ಪೂರೈಸಲು ಕ್ರಮಗಳನ್ನು ಕೈಗೊಳ್ಳಲಾಯಿತು. ಅದಕ್ಕಾಗಿ ಮುಖಮಂಟಪದ ಗೋಡೆಗಳ
ಮೇಲ್ಭಾಗದಲ್ಲಿ ಕಲ್ಲಿನ ಜಾಲಂಧ್ರಗಳನ್ನು ಇರಿಸಲಾಯಿತು. ಈ ಜಾಲಂದ್ರಗಳದ್ದೇ ಒಂದು ಕತೆ. ಅದರಲ್ಲಿ
ಕಾಣಿಸುವ ಹಕ್ಕಿ, ಬಳ್ಳಿಗಳು ಕಾವ್ಯಗಳಲ್ಲಿಯೂ ಜಾಗ ಪಡೆದಿವೆ. ದೇವಾಲಯಗಳ ಹೊರವಲಯದ
ನಕ್ಷತ್ರಾಕಾರದ ತಲವಿನ್ಯಾಸದ ಮೇಲೆ ನಿಂತಿರುವ ಗೋಡೆಗಳಲ್ಲಿ ಬಗೆ ಬಗೆಯ ಶಿಲ್ಪಗಳನ್ನು
ಕೆತ್ತಲಾಯಿತು. ಗುಡಿಗೆ ಬಂದ ಭಕ್ತರು ಗೋಡೆಗಳ
ಹೊರಮೈ ಮೇಲೆ ರೂಪಿಸಲಾಗಿದ್ದ ಅಪೂರ್ವ ಸೌಂದರ್ಯಯುತ ದೇವ ದೇವಿಯರ ಪ್ರತಿಮೆಗಳನ್ನೂ, ಪೌರಾಣಿಕ
ಘಟನೆಗಳನ್ನೂ ನೋಡುತ್ತಾ ಕಾವ್ಯದ ಸೊಬಗನ್ನು ಮತ್ತೆ ಸವಿಯಬಹುದಾಗಿತ್ತು.
ಒಟ್ಟು ದೇವಾಲಯದ ಸುತ್ತಲೂ ಗೋಡೆಯ ಕೆಳಭಾಗದಲ್ಲಿ
ಮುಂಚಾಚಿದ ಪಟ್ಟಿಕೆಗಳ ಮೇಲೆ ಆನೆ, ಕುದುರೆ
ಸವಾರರು, ಲತಾ ತೋರಣ, ಸಿಂಹಮುಖ, ಮತ್ತೆ ಅದರ
ಮೇಲೆ ಕಣ್ಣಿನ ಎತ್ತರದಲ್ಲಿರುವ ಪಟ್ಟಿಕೆಗಳಲ್ಲಿ ರಾಮಾಯಣ,
ಮಹಾಭಾರತ, ಭಾಗವತ ಮತ್ತಿತರ ಪೌರಾಣಿಕ ಕಥೆಗಳು ಮತ್ತು
ವಿರಳವಾಗಿಯಾದರೂ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಜೀವನಗಳನ್ನು ನಿರೂಪಿಸಿರುವ ಮಾನವರ
ಚಿತ್ರಗಳನ್ನೂ ಬಿಡಿಸಲಾಗಿರುತ್ತದೆ. ಈ ಪಟ್ಟಿಕೆಗಳಲ್ಲಿ ಕಾಣ ಸಿಗುವ ಪಂಚ ತಂತ್ರದ
ಕತೆಗಳು ದುರ್ಗ ಸಿಂಹನ ಪಂಚ ತಂತ್ರದಿಂದಲೇ ಬಂದಿರಬೇಕು ಎಂದು ನಾನು ಭಾವಿಸುತ್ತೇನೆ. ಕನಕ ದಾಸ ಬರೆಯುವುದು
ಹೀಗೆ-
ಮುರಿಮುರಿದ ಕೊತ್ತಳವ
ಸಾಲಿನ
ಪರುಠವದ ಹುಲಿಮುಖದ
ಬಾಗಿಲ
ಮಿರುಪಮಣಿವಜ್ರದ
ಕವಾಟದ ಗಂಧವಟ್ಟಿಗೆಯ
ಉರುತರದ ವೇದಿಕೆಯ
ಹೇಮದ
ಮೆರೆವ ಸೋಪಾನಗಳ
ನೆಲೆಯು
ಪ್ಪರಿಗೆಗಳ ಮೇಲೆಸೆವ
ಕಲಶದ ಕಾಂತಿ ರಂಜಿಸಿತು
ಇವತ್ತಿಗೆ ಕೂಡಾ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಮಂಡ್ಯ
ಮತ್ತು ಮೈಸೂರು ಜಿಲ್ಲೆಗಳಲ್ಲಿ ಉಳಿದು ಬಂದಿರುವ ಕೆಲವು ದೇವಸ್ಥಾನಗಳಲ್ಲಿ ಕನ್ನಡ ಕಾವ್ಯ
ಮರುಸೃಷ್ಟಿ ಹೊಂದಿದ ಬಗೆಯನ್ನು ನಾವು ಎಚ್ಚರದಿಂದ ಅಭ್ಯಾಸ ಮಾಡಬೇಕಾಗಿದೆ. ಆ ಕಾಲದಲ್ಲಿ
ಹುಟ್ಟಿಕೊಂಡ ಜೈನ ಬಸದಿಗಳೂ ಕೂಡಾ ಕನ್ನಡ ಜೈನ ಪುರಾಣಗಳಿಂದ ಪ್ರಭಾವಿತವಾಗದೇ ಉಳಿಯಲು
ಸಾಧ್ಯವಿಲ್ಲ. ಶ್ರವಣ ಬೆಳಗೊಳಕ್ಕೂ, ಚಾವುಂಡ
ರಾಯನಿಗೂ, ವಡ್ಡಾರಾಧನೆಗೂ ಹಾಗೂ ತ್ರಿಶಷ್ಟಿ
ಶಲಾಕಾ ಮಹಾಪುರಾಣಕ್ಕೂ ಇರುವ ಸಂಬಂಧವನ್ನು ನಾವೀಗ ಸೂಕ್ಷ್ಮವಾಗಿ ವಿವರಿಸಿಕೊಳ್ಳಬೇಕಾಗಿದೆ.
ಕನ್ನಡದಲ್ಲಿ ಅನೇಕ ತೀರ್ಥಂಕರರು ಆಗಮಿಕ ಕಾವ್ಯದ
ನಾಯಕರಾಗಿದ್ದಾರೆ. ಅದೇ ತೀರ್ಥಂಕರರು ಕನ್ನಡದ ಬಸದಿಗಳಲ್ಲಿ ಮರುಸೃಷ್ಟಿ ಹೊಂದಿದ್ದಾರೆ.
ಕಾರ್ಕಳದಲ್ಲಿರುವ ನೇಮಿನಾಥ ಬಸದಿಗೂ, ಗೊಮ್ಮಟನಿಗೂ, ಆದಿ ಪುರಾಣ ಹಾಗೂ ಭರತೇಶ ವೈಭವಕ್ಕೂ ಇರುವ ಅಂತರ್
ಸಂಬಂಧಗಳನ್ನು ನಾವು ಮರೆಯುವಂತಿಲ್ಲ. ಧರ್ಮಸ್ಥಳದಲ್ಲಿ ಗೊಮ್ಮಟ ಪ್ರತಿಷ್ಠಾಪನೆ ಮಾಡುವ
ಸಂದರ್ಭದಲ್ಲಿ ಪಂಪನ ಆದಿಪುರಾಣದ ಕೊನೆಯ ಭಾಗವನ್ನು ಯಕ್ಷಗಾನವನ್ನಾಗಿ ಮರು ರೂಪಿಸಲಾಯಿತು.
ಶಿಲ್ಪದ
ಹಾಗೆಯೇ ರಾಮಾಯಣ ಮತ್ತು ಮಹಾಭಾರತ ಸಂಬಂಧೀ ವರ್ಣ ಚಿತ್ರಗಳು ಕೂಡಾ ದೇವಾಲಯಗಳ ಒಳ ಗೋಡೆಗಳಲ್ಲಿ
ಕಾಣಿಸಿಕೊಂಡುವು. ಹಂಪಿಯ ವಿರೂಪಾಕ್ಷ ದೇವಸ್ತಾನದ ನವರಂಗದ ಮೇಲ್ಭಾಗದಲ್ಲಿ ಕಾಣಿಸುವ ಗಿರಿಜಾ
ಕಲ್ಯಾಣದ ಚಿತ್ರಕ್ಕೂ ಅಲ್ಲಿಯೇ ಓಡಾಡಿಕೊಂಡಿದ್ದ ಹರಿಹರನ ಗಿರಿಜಾ ಕಲ್ಯಾಣ ಕಾವ್ಯಕ್ಕೂ ಸಂಬಂಧವೇ
ಇಲ್ಲವೆಂದು ಹೇಳುವುದಾದರೂ ಹೇಗೆ? ಈ ಕುರಿತು ಕೂಡಾ ನಮ್ಮ ಅಧ್ಯಯನಗಳು ಗಮನ ಹರಿಸಬೇಕಾಗಿದೆ.
ಕುಣಿಯುವ ಕನ್ನಡ ಕಾವ್ಯಗಳು:
ಸಾಹಿತ್ಯ
ಚರಿತ್ರೆಕಾರರು ಸಾಮಾನ್ಯವಾಗಿ ಕತ್ತಲ ಯುಗ ಎಂದು ಕರೆಯುವ 17 ಮತ್ತು 18ನೇ ಶತಮಾನದಲ್ಲಿ ನೂರಾರು ಸಂಖ್ಯೆಯ ಯಕ್ಷಗಾನ
ಪ್ರಸಂಗಗಳು ರಚಿತವಾದುವು. ಈ ಯಕ್ಷಗಾನ ಪ್ರಸಂಗಗಳು ನಡುಗನ್ನಡ ಕಾವ್ಯಗಳನ್ನು ರಂಗಭೂಮಿಗೆ
ಅಳವಡಿಸಲು ಮಾಡಿದ ಸಾಹಸಗಳೆಂಬುದನ್ನು ಅರಿತರೆ, ಅವು ಸಾಹಿತ್ಯೆ ಚರಿತ್ರೆಕಾರರು ಹೇಳುವ ಕತ್ತಲ
ಯುಗದ ಬೆಳಕಿಂಡಿಗಳ ಹಾಗೆ ಕಾಣುತ್ತವೆ.
‘ಪ್ರಸಂಗ’ ಎಂದರೆ ಘಟನೆ ಎಂದರ್ಥ. ನಿರ್ದಿಷ್ಟ ಯಕ್ಷಗಾನ
ಪ್ರಸಂಗವು ಒಂದು ಘಟನೆಯ ಸುತ್ತ ಕೇಂದ್ರೀಕೃತವಾಗಿರುತ್ತದೆ. ಉದಾ: ಪಂಚವಟಿ ಪ್ರಸಂಗವು ರಾಮ,
ಲಕ್ಷಣ, ಮತ್ತು ಸೀತೆಯರು ದಂಡಕಾರಣ್ಯಕ್ಕೆ ಪ್ರವೇಶ ಮಾಡಿ ಪರ್ಣಕುಟಿಯೊಂದನ್ನು ಕಟ್ಟಿಕೊಂಡಲ್ಲಿಂದ
ಆರಂಭವಾಗಿ ಖರ ಧೂಷಣರ ಸಂಹಾರದೊಂದಿಗೆ ಕೊನೆಯಾಗುತ್ತದೆ. ಕೃಷ್ಣ ಸಂಧಾನ ಪ್ರಸಂಗವು ಕೃಷ್ಣನು ಧರ್ಮರಾಯನ ಸೂಚನೆಯಂತೆ ಹಸ್ತಿನಾಪುರಕ್ಕೆ
ಹೋಗಿ ದುರ್ಯೋಧನನ ಆಸ್ಥಾನದಲ್ಲಿ ಸಂಧಾನ ಮುರಿಯುವ ಭಾಗಕ್ಕೆ ಸೀಮಿತವಾಗಿರುತ್ತದೆ.
ಇದೇ ರೀತಿ ವಾಲಿ ವಧೆ, ಅಂಗದ
ಸಂಧಾನ, ಭೀಷ್ಮ ಪರ್ವ, ವಸ್ತ್ರಾಪಹಾರ,
ಕರ್ಣಾವಸಾನ ಮೊದಲಾದ
ಅನೇಕ ಪ್ರಸಂಗಗಳಿವೆ. ಪ್ರಸಂಗದಲ್ಲಿರುವ ಘಟನೆಗಳನ್ನು
ರಂಗದಲ್ಲಿ ಹಾಡು, ಕುಣಿತ, ಮಾತು ಮತ್ತು ವೇಷ-ಭೂಷಣಗಳನ್ನು ಬಳಸಿ ಅಪಾರವಾಗಿ ವಿಸ್ತರಿಸಲಾಗುತ್ತದೆ. ಈ ಕುರಿತು ಯಕ್ಷಗಾನ ಪ್ರಸಂಗ ಕರ್ತರಲ್ಲಿ ಒಬ್ಬರಾದ
ರಾಘವ ನಂಬಿಯಾರರು ಹೀಗನ್ನುತ್ತಾರೆ: ‘ಪ್ರಸಂಗ
ಮೂಲತಃ ಒಂದು ಗೀತ ರೂಪಕ. ಆದರೆ, ಉದ್ದೇಶ ಸರಸ
ಸಂಭಾಷಣೆಯಿಂದ ಕೂಡಿದ ಸೊಗಸಾದ ರಂಗಪ್ರದರ್ಶನವನ್ನು ಏರ್ಪಡಿಸುವುದು. ಕರ್ನಾಟಕದ ಕೆಲವು ಕಡೆಗಳಲ್ಲಿ
ಲಿಖಿತವಾಗಿ ಕಾಣಿಸುವ, ಕರಾವಳಿ
ಹಾಗೂ ಮಲೆನಾಡಿನ ಭಾಗಗಳಲ್ಲಿ ಆಶು ವಚನಗಾರಿಕೆಯಲ್ಲಿ ಕಾಣಿಸುವ ಸಂಭಾಷಣೆಯಿಂದ ಯಕ್ಷಗಾನದ ರಂಗಕೃತಿ
ಗದ್ಯಪದ್ಯ ಮಿಶ್ರಿತವಾದ ದೃಶ್ಯ ಕಾವ್ಯಕ್ಕೆ ಸೇರಬೇಕು.’ ವಿದ್ವಾಂಸರಾದ
ಟಿ. ಕೇಶವಭಟ್ಟರ ಅಭಿಪ್ರಾಯ ಹೀಗಿದೆ : ‘ಯಕ್ಷಗಾನ
ಕಲೆ ಪ್ರಾಯೋಗಿಕವಾಗಿ ತಾಳಮದ್ದಳೆ, ಆಟಗಳ
ರೂಪದಲ್ಲಿ ರಾತ್ರಿ ಜಾಗರಣೆಯ ಸುಮಾರು ಎಂಟು ಗಂಟೆ ಅವಧಿಯ ಕಾರ್ಯಕ್ರಮದ ವಿವಿಧ ರಸಾತ್ಮಕ
ಕಥಾವಸ್ತುವನ್ನು ಒಳಗೊಂಡಿರುತ್ತದೆ. ಇಂತಹ ಒಂದೊಂದು ಪರಿಪೂರ್ಣ ಕಥಾತ್ಮಕ ಪದಗಳ ಕೃತಿಯನ್ನು
ಪ್ರಸಂಗ ಎನ್ನುವರು. ಯಕ್ಷಗಾನ ಸಾಹಿತ್ಯವು ದಾಸಸಾಹಿತ್ಯಕ್ಕಿಂತ ಪ್ರಬುದ್ಧ ಹಾಗೂ ಪ್ರಾಚೀನ
ಕಲೆಯಾಗಿ ಕಂಡು ಬರುತ್ತದೆ. ರಾಗ ತಾಳಬದ್ಧ ಕೀರ್ತನೆಗಳ ರೂಪದಲ್ಲಿ ಭಕ್ತಿ ಸಾಹಿತ್ಯವನ್ನು
ನಿರ್ಮಿಸಿರುವ ಶಿವದಾಸರು, ಹರಿದಾಸರು, ಜಿನಭಕ್ತರು ಬಲುಮಟ್ಟಿಗೆ ಯಕ್ಷಗಾನ ಪದಗಳನ್ನೇ
ಅನುಸರಿಸಿದಂತೆ ಕಂಡು ಬರುತ್ತದೆ’. ಏನೇ ಇರಲಿ, ನಮಗಿಲ್ಲಿ
ಮುಖ್ಯವಾದ ವಿಚಾರವೆಂದರೆ, ಹೆಚ್ಚಿನ ಯಕ್ಷಗಾನ ಪ್ರಸಂಗಗಳು ಕುಮಾರವ್ಯಾಸ ಭಾರತ
ಮತ್ತು ತೊರವೆ ರಾಮಾಯಣಗಳನ್ನು ಆಧರಿಸಿ ಬರೆದುವುಗಳಾಗಿವೆ. ಪ್ರಸಿದ್ಧ ಯಕ್ಷಗಾನ ಪ್ರಸಂಗ ಕರ್ತನಾದ
ಕುಂಬಳೆ ಪಾರ್ತಿಸುಬ್ಬನು (1750-1830) ಈ ಕೆಳಗಿನ
ಎಂಟು ರಾಮಾಯಣದ ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದು ಇವಕ್ಕೆ ತೊರವೆರಾಮಾಯಣವೇ ಮೂಲ ಪ್ರೇರಣೆ-
1. ಪುತ್ರಕಾಮೇಷ್ಟಿ – ಸೀತಾಕಲ್ಯಾಣ
2. ಶ್ರೀರಾಮ ಪಟ್ಟಾಭಿಷೇಕ
3. ಪಂಚವಟಿ
4. ಸೀತಾಪಹಾರ
5. ವಾಲಿಸಂಹಾರ
6. ಉಂಗುರ ಸಂಧಿ (ಚೂಡಾಮಣಿ)
7. ಸೇತು ಬಂಧನ (ವಿಭೀಷಣ ನೀತಿ) ಮತ್ತು
8. ಅಂಗದ ಸಂಧಾನ
ಇವಲ್ಲದೆ
ತೊರವೆ ರಾಮಾಯಣವನ್ನೇ ಪ್ರಧಾನವಾಗಿ ಆಧರಿಸಿ ಈ ಕೆಳಗಿನ ಯಕ್ಷಗಾನ ಪ್ರಸಂಗಗಳು ರಚಿತವಾಗಿವೆ-
1. ಯಕ್ಷಗಾನ ದಶರಥೋತ್ಪತ್ತಿ
ಸುಮಿತ್ರಾ ಸ್ವಯಂವರ : ಸಾರಡ್ಕ ಶಂಭಟ್ಟ
2. ಯಕ್ಷಗಾನ ಅಹಲ್ಯಾಶಾಪ
ಮತ್ತು ವಾನರಾಭ್ಯುದಯ : ನಗಿರೆ ಸುಬ್ರಹ್ಮಣ್ಯ
3. ಯಕ್ಷಗಾನ ಲವಕುಶರ
ಕಾಳಗ : ಬಲಿಪ ನಾರಾಯಣ ಭಾಗವತ
4. ಯಕ್ಷಗಾನ
ಕುಂಭಕರ್ಣಾದಿ ಕಾಳಗ : ?
5. ಯಕ್ಷಗಾನ
ಅತಿಕಾಯ ಕಾಳಗ : ಹಟ್ಟಿಯಂಗಡಿ ರಾಮಭಟ್ಟ
6. ಯಕ್ಷಗಾನ
ಕಾಲನೇಮಿ ಕಾಳಗ : ಅಜ್ಞಾತಕವಿ
7. ಯಕ್ಷಗಾನ
ಮಕರಾಕ್ಷ ಕಾಳಗ : ಜತ್ತಿ ಈಶ್ವರ ಭಾಗವತ
8. ಯಕ್ಷಗಾನ
ಇಂದ್ರಜಿತು ಕಾಳಗ: ಅಜ್ಞಾತಕವಿ
9. ಯಕ್ಷಗಾನ
ಮಾರಿಮುಖನ ಕಾಳಗ: ಪರಮೇಶ್ವರ
10. ಯಕ್ಷಗಾನ
ಮೈರಾವಣ ಕಾಳಗ: ಅಜಪುರದ ವೆಂಕಟ
11. ಯಕ್ಷಗಾನ
ರಾವಣವಧೆ : ಕಾಸರಗೋಡು ಸುಬ್ರಾಯ ಪಂಡಿತ
12. ಯಕ್ಷಗಾನ
ಶ್ರೀರಾಮ ನಿಜಪಟ್ಟಾಭಿಷೇಕ : ಅಲೆಟ್ಟಿ ರಾಮಣ್ಣ ಶಗ್ರಿತ್ತಾಯ
13. ಯಕ್ಷಗಾನ
ಅಶ್ವಮೇಧಯಾಗ: ಅಜ್ಞಾತಕವಿ
ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿಯಿಂದ ಒಂದಲ್ಲಒಂದು ರೀತಿಯಲ್ಲಿ ಪ್ರೇರಣೆ ಪಡೆದ ಯಕ್ಷಗಾನ ಪ್ರಸಂಗಗಳು ಈ ಕೆಳಗಿನಂತಿವೆರಚಿತವಾಗಿವೆ-
1.
ಯಕ್ಷಗಾನ ಭೀಷ್ಮೋತ್ಪತ್ತಿ : ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
2.
ಯಕ್ಷಗಾನ ಭೀಷ್ಮವಿಜಯ : ಹಲಸಿನಹಳ್ಳಿ
ನರಸಿಂಹಶಾಸ್ತ್ರಿ
3.
ಯಕ್ಷಗಾನ ಕರ್ಣ ಪಟ್ಟಾಭಿಷೇಕ: ಸೀತಾನದಿ ಗಣಪಯ್ಯ ಶೆಟ್ಟಿ
4.
ಯಕ್ಷಗಾನ ಆದಿಪರ್ವ : ಅಜ್ಞಾತಕವಿ
5.
ಯಕ್ಷಗಾನ ಭಾರತದ ಗುರುಕುಲ : ಕೆ.ಪಿ. ವೆಂಕಪ್ಪಶೆಟ್ಟಿ
6.
ಯಕ್ಷಗಾನ ದ್ರೌಪದಿ ಸ್ವಯಂವರ : ಕವಿ ಹಟ್ಟಿಯಂಗಡಿ ರಾಮಭಟ್ಟ
7.
ಯಕ್ಷಗಾನ ದ್ರೌಪದಿ ಸ್ವಯಂವರ : ಕವಿ: ದೇವಿದಾಸ
8.
ಸುಭದ್ರಾ ಕಲ್ಯಾಣ : ಹಟ್ಟಿಯಂಗಡಿ
ರಾಮಭಟ್ಟ
9.
ಯಕ್ಷಗಾನ ಖಾಂಡವವನ ದಹನ : ಗಣಪಯ್ಯ
10.
ಯಕ್ಷಗಾನ ರಾಜಸೂಯಾಧ್ವರ : ಬಿಷ್ಟಪ್ಪ
11.
ಯಕ್ಷಗಾನ ಇಂದ್ರಕೀಲಕ : ಬ್ರಹ್ಮಾಪುರದ ವಿಷ್ಣುಭಾಗವತ
12.
ಯಕ್ಷಗಾನ ಚಿತ್ರಸೇನಕಾಳಗ ಯಾ
ಘೋಷಯಾತ್ರೆ:- ದೇವಿದಾಸ
13.
ಯಕ್ಷಗಾನ ಕೃಷ್ಣಸಂಧಾನ (ಭೀಷ್ಮಪರ್ವ
ಸಹಿತ) : ದೇವಿದಾಸ
14.
ಯಕ್ಷಗಾನ ಭೀಷ್ಮಾರ್ಜುನರ ಕಾಳಗ : ಹಲಸಿನಹಳ್ಳಿ ನರಸಿಂಹಶಾಸ್ತ್ರಿ
15.
ಯಕ್ಷಗಾನ ಅಭಿಮನ್ಯು ಕಾಳಗ ಮತ್ತು
ಸೈಂಧವ ವಧೆ : ದೇವಿದಾಸ
16.
ಯಕ್ಷಗಾನ ದ್ರೋಣಪರ್ವ: ಉಡುಪಿ
ರಾಜಗೋಪಾಲಾಚಾರ್ಯ
17.
ಯಕ್ಷಗಾನ ಕರ್ಣಪರ್ವ: ಗೇರೆಸೊಪ್ಪೆ
ಶಾಂತಪ್ಪಯ್ಯ
18.
ಯಕ್ಷಗಾನ ಗದಾಪರ್ವ: ಅಜ್ಞಾತಕವಿ
19.
ಯಕ್ಷಗಾನ ಸಾಹಸ ಭೀಮವಿಜಯ (ಗದಾಯುದ್ಧ):
ಕೆ.ಪಿ. ವೆಂಕಪ್ಪಶೆಟ್ಟಿ
20.
ಯಕ್ಷಗಾನ ಕರ್ಣಾರ್ಜುನ ಕಾಳಗ : ಪಾಂಡೇಶ್ವರ
ವೆಂಕಟ
21.
ಯಕ್ಷಗಾನ ವಿರಾಟಪರ್ವ: ಅಜಪುರ ವಿಷ್ಣು
ಈ ಯಕ್ಷಗಾನ
ಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಾಗಿಯೇ ಎತ್ತಿಕೊಂಡು ಅವುಗಳನ್ನು ಅಲ್ಪ
ಸ್ವಲ್ಪ ಮಾರ್ಪಡಿಸಿ ಪ್ರಸಂಗ ರೂಪದಲ್ಲಿ ರಂಗಭೂಮಿಗೆ ಅಳವಡಿಸಿದರು. ಡಿ. ಎಸ್. ಶ್ರೀಧರ್
ಅಭಿಪ್ರಾಯ ಪಡುವಂತೆ ‘ಯಕ್ಷಗಾನ
ಪ್ರಸಂಗವೆಂಬುದು ಸಂಪೂರ್ಣ ಸ್ವತಂತ್ರ ಕಾವ್ಯವಲ್ಲ. ನಮ್ಮ ಕವಿಗಳು ಒಂದಿಲ್ಲೊಂದು ರೀತಿಯಿಂದ
ಕುಮಾರವ್ಯಾಸ, ಲಕ್ಷ್ಮೀಶ, ಕುಮಾರ ವಾಲ್ಮೀಕಿ ಮುಂತಾದವರ ಕೃತಿಗಳಲ್ಲಿ ಬರುವ
ಕತೆಗಳನ್ನು ಆಧರಿಸಿ ಪ್ರಸಂಗ ರಚಿಸಿದರು. ಕೆಲವೆಡೆ ಅವರದೇ ಪದ್ಯಗಳನ್ನು ನೇರವಾಗಿ
ಬಳಸುತ್ತಿದ್ದರು. ಆಯಾ ಸಂದರ್ಭಗಳಲ್ಲಿ ಆಯಾ ಕವಿಗಳ ಭಾಗವೇ ಸಮರ್ಥ ಎನ್ನುವ ಒಪ್ಪಿಕೊಳ್ಳುವ
ಮನೋಭಾವವೇ ಇದಕ್ಕೆ ಕಾರಣ ಹೊರತು ಕೃತಿ ಚೌರ್ಯದ ಕೆಟ್ಟ ಸಂಪ್ರದಾಯ ಈ ಕವಿಗಳಿಗಿದ್ದಂತಿಲ್ಲ.
ಕಾವ್ಯಾಭ್ಯಾಸದ ಪರಿಣಾಮವಾಗಿ ಯಕ್ಷಗಾನದಲ್ಲಿಯೂ ಅದೇ ಹಳೆಯ ವರ್ಣನೆಗಳು, ಹಳೆಯ ಕಾವ್ಯ ಧೋರಣೆಗಳು ನುಸುಳಿಕೊಂಡಿವೆ.
ಪ್ರಯೋಗಶೀಲ ಯಕ್ಷಗಾನ ಕವಿಗಳು ( ಮುದ್ದಣನಂಥವರು )
ಅಲ್ಲಲ್ಲಿ ಕಂಡು ಬಂದರೂ ವಿಶೇಷ ಯಶಸ್ಸು ಅವರಿಗೆ ದೊರೆತಂತಿಲ್ಲ’. ಯಕ್ಷಗಾನ ವಿದ್ವಾಂಸರೂ ಕಲಾವಿದರೂ ಆಗಿರುವ ಡಾ. ಪ್ರಭಾಕರ
ಜೋಷಿಯವರು ನಡುಗನ್ನಡ ಪಠ್ಯಗಳು ಹಾಗೂ ಯಕ್ಷಗಾನಗಳ ನಡುವಣ ಸಂಬಂಧಗಳ ಕುರಿತು ಈ ಮುಂದಿನಂತೆ ಹೇಳಿದ್ದಾರೆ-
‘ತಮಗೆ ಲಭ್ಯವಿದ್ದ ಒಂದೋ ಹಲವೋ ಮೂಲದಿಂದ ಕತೆಯನ್ನು ತೆಗೆದುಕೊಂಡು ಆ ಮೂಲದ ಆಶಯದೊಂದಿಗೆ ಪದ್ಯರೂಪದಲ್ಲಿ
ಕತ3ೆ ಹೇಳುವುದು ಹೆಚ್ಚಿನ ಪ್ರಸಂಗಗಳ ಕ್ರಮವಾಗಿದೆ. ಹಾಗಾಗಿ ಅಲ್ಲಿ ವೈಶಿಷ್ಟ್ಯವೇನಿದ್ದರೂ ಬಂಧಗಳ
ಪದ ಪ್ರಯೋಗಗಳ ಮತ್ತು ರಂಗ ಅನ್ವಯದ ವಿಷಯಗಳಲ್ಲಿ . ಹೀಗಾಗಿ ಪಾರ್ತಿ ಸುಬ್ಬನ ರಚನೆಗಳಿಂದ ತೊಡಗಿ,
ಜತ್ತಿ ಈಶ್ವರ ಭಾಗವತರ ರಚನೆಗಳ ವರೆಗೂ ಹಿಂದಿನ ಕಾವ್ಯವನ್ನೇ ಹೆಚ್ಚು ಕಡಿಮೆ ತದ್ವತ್ತಾಗಿ ಅನುಸರಿಸಿ,
ಕತೆಯನ್ನು ಹಾಡುಗಳಾಗಿ ಪ್ರಸಂಗರೂಪದಲ್ಲಿ ಬರೆದುದು ಕಾಣುತ್ತದೆ. ಪಾರ್ತಿ ಸುಬ್ಬನಿಗೆ ತೊರವೆ ರಾಮಾಯಣ
ಮತ್ತು ಕಥಕ್ಕಳಿ ರಾಮಾಯಣಗಳು ಆಕರಗಳು. ರಾಮಾಯಣ ಪ್ರಸಂಗಗಳನ್ನು ಬರೆದ ಹೆಚ್ಚಿನ ಯಕ್ಷಗಾನದ ಕವಿಗಳಿಗಳು
ತೊರವೆಯನ್ನು ಅನುಸರಿಸಿದ್ದಾರೆ. ಅದೇ ರೀತಿ ಯಕ್ಷಗಾನ ಮಹಾಭಾರತ ಪ್ರಸಂಗಗಳಲ್ಲಿ ಹಲವಕ್ಕೆ ಕುಮಾರವ್ಯಾಸ
ಭಾರತವು ಆಕರ. ಪಾಂಡವಾಶ್ವಮೇಧ ಪ್ರಸಂಗಗಳಿಗೆ ಲಕ್ಷ್ಮೀಶನ ಜೈಮಿನಿ ಭಾರತವು ನೇರ ಆಧಾರ, ಆಕರ. ಇದೇ
ಪರಂಪರೆಯಲ್ಲಿರುವ ಕೃಷ್ಣ ಸಂಧಾನವು ಮುಖ್ಯವಾಗಿ ಕುಮಾರವ್ಯಾಸ ಭಾರತದ ಸಂಗ್ರಹಾನುವಾದದಂತಿದೆ. ( ಕೃಷ್ಣ
ಸಂಧಾನ 1999)
ಕುಂಬಳೆಯ
ಪಾರ್ತಿಸುಬ್ಬ (1620), ಗೆರೆಸೊಪ್ಪೆ
ಶಾಂತಪ್ಪಯ್ಯ, ಅಳಿಯ
ಲಿಂಗರಾಜ, ಕಡಂದಲೆ ರಾಮರಾವ್, ದೇವಿದಾಸ, ಮುದ್ದಣ, ಹಟ್ಟಿಯಂಗಡಿ
ರಾಮಭಟ್ಟ, ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ಕೀರಿಕ್ಕಾಡು ವಿಷ್ಣು ಮಾಸ್ತರ್, ಅಮೃತ ಸೋಮೇಶ್ವರ,
ಬಲಿಪ
ನಾರಾಯಣ ಭಾಗವತ, ಅಗರಿ
ಶ್ರೀನಿವಾಸ ಭಾಗವತ, ಹೊಸ್ತೋಟ
ಮಂಜುನಾಥ ಭಟ್, ರಾಘವ
ನಂಬಿಯಾರ್, ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ರಾಮದಾಸ ಸಾಮಗ, ಗೆರೆಸೊಪ್ಪೆ ಶಾಂತಪ್ಪಯ್ಯ, ಧ್ವಜಪುರದ ನಾಗಪ್ಪಯ್ಯ, ಸಂಕಯ್ಯ ಭಾಗವತ,
ಬಳಕಿನ
ವಿಷ್ಣ್ವಯ್ಯ, ಸೀತಾನದಿ
ಗಣಪಯ್ಯ ಶೆಟ್ಟಿಮುಂತಾದ ಯಕ್ಷಗಾನ ಕವಿಗಳು ತೊರವೆ ರಾಮಾಯಣ,
ದಶಾವತಾರ
ಚರಿತ್ರೆ, ಹನುಮದ್ ರಾಮಾಯಣ, ಮತ್ತಿತರ ನಡುಗನ್ನಡ ಪಠ್ಯಗಳನ್ನು ಯಕ್ಷಗಾನ
ಪ್ರಸಂಗಗಳಾಗಿ ಮಾರ್ಪಡಿಸಿದಾಗ ಕಲಾವಿದರಿಗೆ ಪುರಾಣ ಪಾತ್ರಗಳನ್ನು ರಂಗದ ಮೇಲೆ ಅಭಿನಯಿಸುವ ಅವಕಾಶ
ಲಭಿಸಿತು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಕರ್ನಾಟ ಭಾರತ ಕಥಾಮಂಜರಿ, ತೊರವೆ ರಾಮಾಯಣ ಮೊದಲಾದ ಕಾವ್ಯಗಳ ಪಾತ್ರಗಳು ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ರಂಗ ಭೂಮಿಗೆ
ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು. ಜಾತಿ ಮತಗಳ ಬೇಧವಿಲ್ಲದೆ ಅವುಗಳನ್ನು ಲಕ್ಷಾಂತರ ಜನ ನೋಡುವಂತಾಯಿತು.
ಯಕ್ಷಗಾನದ ಇನ್ನೊಂದು ಪ್ರಕಾರವಾದ ತಾಳಮದ್ದಳೆಯಲ್ಲಿ ಕಲಾವಿದರು ಭಾಗವತರ ಹಾಡಿಗೆ ಕುಳಿತು ಅರ್ಥ
ಹೇಳುತ್ತಾರೆ. ಈ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಯಕ್ಷಗಾನ ಕಲಾವಿದರನೇಕರು
ತೊರವೆ ರಾಮಾಯಣದ ಪದ್ಯಗಳನ್ನೋ, ಕುಮಾರವ್ಯಾಸ ಭಾರತದ ಪದ್ಯಗಳನ್ನೋ ಎಲ್ಲೆಂದರಲ್ಲಿ ಗುನುಗುನುಸಿಕೊಂಡು
ಓಡಾಡುತ್ತಿರುವುದನ್ನು ಯಾರಾದರೂ ಗಮನಿಸಬಹುದು. ಕುಮಾರವ್ಯಾಸ ಭಾರತದ ಉದ್ಯೋಗ ಪರ್ವವನ್ನಾಧರಿಸಿದ, 'ಕೃಷ್ಣ ಸಂಧಾನ'
ಪ್ರಸಂಗವು
ಯಕ್ಷಗಾನ ಮತ್ತು ತಾಳಮದ್ದಳೆಗಳ ಮೂಲಕ ಲಕ್ಷಾಂತರ ಪ್ರಯೋಗಗಳನ್ನು ಕಂಡಿದ್ದು
ಅಸಂಖ್ಯ ಪ್ರೇಕ್ಷಕರನ್ನು ತಲುಪಿದೆ.
ಯಕ್ಷಗಾನ
ಪ್ರಸಂಗಗಳನ್ನು ಪದೇ ಪದೇ ಓದುವವರಿಗೆ ಮತ್ತು ಪ್ರದರ್ಶನ ನೋಡುವವರಿಗೆ ಪ್ರಸಂಗಗಳ ಪದ್ಯಗಳು
ಬಾಯಿಪಾಠ ಬಂದುಬಿಡುತ್ತವೆ. 1980ರ ದಶಕದ
ವರೆಗೂ ಉಡುಪಿ, ದ.ಕ. ಕಾಸರಗೋಡು ಜಿಲ್ಲೆಗಳ ಬಹುತೇಕ
ಜನರ ಬಾಯಲ್ಲಿ ಪ್ರಸಂಗ ಪದ್ಯಗಳು ನರ್ತಿಸುತ್ತಿದ್ದವು. ಯಕ್ಷಗಾನ ಹಾಡುಗಳನ್ನು ಎಲ್ಲಾ ಧರ್ಮೀಯರು
ತಮ್ಮ ಮನೆಗಳಲ್ಲಿ ಕೇಳುತ್ತಿದ್ದರು. ಬಸ್ಸು
ಕಾರುಗಳಲ್ಲಿ ಪ್ರಯಾಣ ಮಾಡುವಾಗ ನಡುಗನ್ನಡ ಸಾಹಿತ್ಯಿಕ ಪಠ್ಯಗಳು ಹೊಸ ರೂಪ ಪಡೆದು ಕಿವಿಗೆ
ಬೀಳುತ್ತಿದುದು ಸಣ್ಣ ಸಂಗತಿಯೇನೂ ಅಲ್ಲ. ಈ ಹಾಡುಗಳು ಮೂಲತಃ ಕನ್ನಡ ಕಾವ್ಯ ಪರಂಪರೆಯಿಂದ ಬಂದಿದೆ
ಎಂಬ ತಿಳುವಳಿಕೆ ಕೇಳುಗರಿಗೆ ಇಲ್ಲದೇ ಹೋದರೂ, ಯಕ್ಷಗಾನ ಪ್ರಸಂಗಗಳ ಮೂಲಕ ಹಳಗನ್ನಡ ಮತ್ತು ನಡುಗನ್ನಡ
ಕಾವ್ಯಗಳು ಸಾಮಾನ್ಯ ಜನರಿಗೆ ತಲುಪಿದ ರೀತಿ ಮಾತ್ರ ಅಸಾಮಾನ್ಯವಾದುದು.
ಯಕ್ಷಗಾನ
ಪ್ರಸಂಗಗಳಲ್ಲಿ ಮರು ಸೃಷ್ಟಿಗೊಂಡ ಕನ್ನಡ ಕಾವ್ಯಗಳ ಬಗೆಗೂ ಸೂಕ್ಷ್ಮವಾದ ಅಧ್ಯಯನ ನಡೆದಿಲ್ಲ.
ಇವತ್ತಿಗೆ ಯಕ್ಷಗಾನದ ಎರಡು ಪ್ರಬೇಧಗಳಾದ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ನಿರಂತರವಾಗಿ ಆರು
ತಿಂಗಳುಗಳ ವರೆಗೆ ನಿರಂತರ ಪ್ರದರ್ಶನ ನೀಡುತ್ತಿರುವ ಸುಮಾರು 35 ಯಕ್ಷಗಾನ ಮೇಳಗಳಿವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ಹವ್ಯಾಸಿ ಮೇಳಗಳಿವೆ. ಇವೆಲ್ಲವುಗಳ
ಒಟ್ಟು ಪ್ರದರ್ಶನ ಸಂಖ್ಯೆ ವರ್ಷಕ್ಕೆ ಸುಮಾರು 10000ಕ್ಕೂ
ಹೆಚ್ಚು. ಮೇಲೆ ಹೇಳಿದ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 2000 ಕ್ಕೂ
ಹೆಚ್ಚು ಕಲಾವಿದರಿದ್ದಾರೆ. ಏನಿಲ್ಲವೆಂದರೂ ಸುಮಾರು 500000 ಕ್ಕೂ
ಹೆಚ್ಚು ಜನ ಇವತ್ತಿಗೂ ವರ್ಷಕ್ಕೊಂದು ಯಕ್ಷಗಾನವಾದರೂ
ನೋಡುತ್ತಾರೆ. ಯಕ್ಷಗಾನದ ಹೆಸರಿನಲ್ಲಿ ಸುಮಾರು 10 ಕೋಟಿ
ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಯಕ್ಷಗಾನ ಮೇಳ ಸ್ಥಾಪಿಸಲು ಸಾಲ
ಕೊಡಲು ಹಿಂಜರಿಯುತ್ತಿಲ್ಲ. ದೇಶ ವಿದೇಶಗಳಲ್ಲಿ ಇಂದಿಗೆ ದೊಡ್ಡ ಸಂಖ್ಯೆಯಲ್ಲಿ ಯಕ್ಷಗಾನಗಳು
ಪ್ರ್ರದರ್ಶನಗೊಳ್ಳುತ್ತಿವೆ. ಶಾಲಾ ವಾರ್ಷಿಕೋತ್ಸವ, ಕಂಬಳ, ಕೋಳಿಕಟ್ಟ, ಜಾತ್ರೆ
ಇತ್ಯಾದಿಗಳ ಸಂದರ್ಭಗಳಲ್ಲಿ ತಾಳಮದ್ದಳೆಗಳನ್ನೂ ಏರ್ಪಡಿಸಲಾಗುತ್ತಿದೆ.
ಯಕ್ಷಗಾನದ
ದೊಡ್ಡ ಕಲಾವಿದರೆಲ್ಲರೂ ಹಳಗನ್ನಡ
ಹಾಗೂ ನಡುಗನ್ನಡ ಕಾವ್ಯಗಳನ್ನು ಗಂಭೀರವಾಗಿಯೇ ಅಭ್ಯಸಿಸಿದವರಾಗಿದ್ದಾರೆ. ಹಿರಿಯ ಕಲಾವಿದರುಗಳಾದ
ಶೇಣಿ ಗೋಪಾಲಕ್ಕøಷ್ಣ ಭಟ್ಟ, ಮಲ್ಪೆ ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ,
ಪೆರ್ಲ
ಕೃಷ್ಣ ಭಟ್ಟ, ಡಾ.
ಪ್ರಭಾಕರ ಜೋಷಿ, ಉಡುವೆಕೋಡಿ
ಸುಬ್ಬಪ್ಪಯ್ಯ, ಮೂಡಂಬೈಲು
ಗೋಪಾಕೃಷ್ಣ ಶಾಸ್ತ್ರಿ, ಕೆರೆಮನೆ
ಮಹಾಬಲ ಹೆಗಡೆ, ಶಂಭು ಹೆಗಡೆ, ತೆಕ್ಕಟ್ಟೆ ಆನಂದ ಮಾಸ್ತರರು, ಮತ್ತಿತರ ಮಹಾ ಕಲಾವಿದರಿಗೆ ಪಂಪ ಭಾರತ, ರನ್ನನ ಗದಾಯುದ್ಧ,
ನಾಗಚಂದ್ರನ
ರಾಮಚಂದ್ರ ಚರಿತ ಪುರಾಣ, ಕುಮಾರವ್ಯಾಸ
ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಮೊದಲಾದ ಮಹಾ ಕಾವ್ಯಗಳ ಬಗ್ಗೆ ಆಳವಾದ ತಿಳುವಳಿಕೆಯಿತ್ತು.
ತಮ್ಮ ಪಾತ್ರ ನಿರ್ವಹಣೆಯ ಸಂದರ್ಭದಲ್ಲಿ ಅವರು ಈ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಗಿಯೇ
ಉದ್ಧರಿಸುತ್ತಿದ್ದರು. ಶೇಣಿ ಗೋಪಾಲಕೃಷ್ಣ ಭಟ್ಟರಂತೂ ನಾಗಚಂದ್ರನ ದುರಂತ ರಾವಣನನ್ನೂ ಅಷ್ಟೇ
ಸಮರ್ಥವಾಗಿ ರಂಗಕ್ಕೆ ತರುತ್ತಿದ್ದರು. ಕುಂಬಳೆ ಸುಂದರ ರಾಯರು ಕುಮಾರವ್ಯಾಸನ ಉದ್ಯೋಗ ಪರ್ವದ
ಕರ್ಣನನ್ನು ಹಾಗೆಯೇ ರಂಗದಲ್ಲಿ ಅಭಿವ್ಯಕ್ತಿಸುತ್ತಿದ್ದರು. ಪ್ರಭಾಕರ ಜೋಷಿಯವರ
ಅರ್ಥಗಾರಿಕೆಯಲ್ಲಿ ಕನ್ನಡ ಕಾವ್ಯಗಳ ಸಾಲು ಎಲ್ಲೆಂದರಲ್ಲಿ ಪ್ರತ್ಯಕ್ಷವಗುವುದುಂಟು. ಆಧುನಿಕ
ಪಾರ್ತಿಸುಬ್ಬ ಎಂಬ ಬಿರುದಿಗೆ ಪಾತ್ರರಾದ ಕನ್ನಡ ಪ್ರಾಧ್ಯಾಪಕ ಶ್ರೀ ಅಮೃತ ಸೋಮೇಶ್ವರ ಅವರು ಬರೆದ
20ಕ್ಕೂ ಹೆಚ್ಚಿನ ಪ್ರಸಂಗಗಳಲ್ಲಿ
ಪ್ರಾಚೀನ ಕನ್ನಡ ಸಾಹಿತ್ಯದ ಅನೇಕ ಅಂಶಗಳನ್ನು ಮರು ಸೃಷ್ಟಿಸಿ ಭಟ್ಟಿ ಇಳಿಸಲಾಗಿದೆ.
ಕನ್ನಡ
ಕಾವ್ಯಗಳನ್ನು ಓದಲಾಗದ ಜನರಿಗೆ ಕನ್ನಡ ಕಾವ್ಯಗಳನ್ನು ತಲುಪಿಸಿದ ಕೀರ್ತಿ ಗಮಕಿಗಳಿಗೆ, ಹರಿದಾಸರಿಗೆ ಮತ್ತು ಯಕ್ಷಗಾನ ಪ್ರಸಂಗಕರ್ತರಿಗೆ ಹಾಗೂ
ಕಲಾವಿದರಿಗೆ ಸಲ್ಲಬೇಕು. ನನಗೆ ವೈಯಕ್ತಿಕವಾಗಿ
ಕನ್ನಡ ಕಾವ್ಯಕ್ಕೆ ಪ್ರವೇಶ ದೊರೆತದ್ದೇ ಭದ್ರಗಿರಿ ಕೇಶವ ದಾಸ, ಅಚ್ಯುತ ದಾಸ,
ಮಲ್ಪೆ
ಶಂಕರನಾರಾಯಣ ಸಾಮಗ, ಶೇಣಿ
ಗೋಪಾಲಕೃಷ್ಣ ಭಟ್ಟ, ಕುಂಬಳೆ
ಸುಂದರ ರಾವ್, ಕೋಳ್ಯೂರು
ರಾಮಚಂದ್ರ ರಾವ್ ಮೊದಲಾದವರ ಮೂಲಕ.
ಹೀಗೆ
ಹಳಗನ್ನಡ ಸಾಹಿತ್ಯಿಕ ಪಠ್ಯಗಳು ಬಹುರೂಪಿಗಳಾಗಿ ವಿಸ್ತಾರಗೊಂಡಿವೆ, ಹಾಗೆ ವಿಸ್ತಾರಗೊಂಡು ಇವತ್ತಿನ ವರೆಗೆ ಬದುಕುಳಿದಿವೆ.
ಇವುಗಳನ್ನು ಹೊಸ ಎಚ್ಚರದಿಂದ ನಾವೀಗ ಅಭ್ಯಾಸ ಮಾಡಬೇಕಾಗಿದೆ. ಅದಕ್ಕೊಂದು ಹೊಸ ವಿಧಾನವನ್ನೂ
ರೂಪಿಸಿಕೊಳ್ಳಬೇಕಾಗಿದೆ.
ಇಂದಿನ
ತುರ್ತು ಅವಶ್ಯಕತೆಗಳು:
ಹೀಗೆ
ಹಳಗನ್ನಡ ಮತ್ತು ನಡುಗನ್ನಡ ಪಠ್ಯಗಳು ಪರಿವರ್ತನೆಯಗುತ್ತಾ,
ಹೊಸ ರೂಪ
ಧರಿಸಿಕೊಂಡು ಇವತ್ತಿನವರೆಗೆ ಉಳಿದುಕೊಂಡಿವೆ. ಇವನ್ನು ನಾವು ಇಂದಿನ ಅಗತ್ಯಗಳಿಗೆ ಹೊಂದಿಸಿಕೊಂಡು
ಉಳಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ.
ಈಗ ಸಮಾಜ
ವೇಗವಾಗಿ ಬದಲಾಗುತ್ತಿದೆ. ಮಾನವಿಕಗಳು ಪತನಮುಖಿಯಾಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಬೌದ್ಧಿಕತೆ
ಕಳೆಗುಂದುತ್ತಿದೆ. ಇಂಥ ದಯನೀಯ ಸಂದರ್ಭದಲ್ಲಿ ನಾವು ಹಳಗನ್ನಡವನ್ನು ಕಟ್ಟಿಕೊಂಡು ಏನು ಮಾಡಬೇಕು? ನಮ್ಮ ಪಂಪ, ರನ್ನಾದಿ ಆದ್ಯರಿಗೆ ಕಿವಿಗೊಡುವವರು ಯಾರು? ಹೊರಗಿನವರನ್ನು ಬಿಡೋಣ. ನಮ್ಮ ಕನ್ನಡ ಅಧ್ಯಾಪಕರಲ್ಲಿ
ಎಷ್ಟು ಜನರು ಹಳಗನ್ನಡವನ್ನು ಓದಬಲ್ಲರು? ಅವರಲ್ಲಿ
ಎಷ್ಟು ಜನರು ಈ ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸರಿಯಾಗಿ
ಯಾರು ಮಾರ್ಗದರ್ಶನ ಮಾಡಬಲ್ಲರು? ಹಳಗನ್ನಡ
ತಿಳಿದವರ ಸಂಖ್ಯೆ ದಿನದಿಂದ ದಿನಕ್ಕೆ
ಕ್ಷೀಣಿಸುತ್ತಿದೆ. ಹಳಗನ್ನಡದಲ್ಲಿ ಯಾವ ಬಗೆಯ ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ, ನಮ್ಮ ಇಂದಿನ ತುರ್ತು ಅಗತ್ಯಗಳೇನು? ಎಂಬುದನ್ನು ವಿಸ್ತಾರವಾದ ಓದಿನ ಮೂಲಕ ಗ್ರಹಿಸಿ
ಅದನ್ನು ಸಮರ್ಥವಾಗಿ ವಿವರಿಸಿ ಹೇಳಬಲ್ಲ ವಿದ್ವಾಂಸರ ಸಂಖ್ಯೆಯೂ ಇವತ್ತು ಬೆರಳೆಣಿಕೆಯಲ್ಲಿದೆ. ಈ
ಹಿನ್ನೆಲೆಯಲ್ಲಿ ಕೂಡಲೇ ಆಗಬೇಕಾದ ಎರಡು ಕೆಲಸಗಳ ಕಡೆಗೆ ನಿಮ್ಮ ಗಮನವನ್ನೆ ಸೆಳೆದು ಈ ಲೇಖನವನ್ನು
ಮುಗಿಸುತ್ತೇನೆ-
1. ಅನ್ಯ ಭಾಷೆಗಳಿಗೆ ಅನುವಾದಗಳು: ಜಾಗತೀಕರಣದ ಸಂದರ್ಭದಲ್ಲಿ ಹಳಗನ್ನಡ
ಪಠ್ಯಗಳನ್ನು ಅನ್ಯ ಭಾಷೆಗಳಿಗೆ ಅನುವಾದಿಸುವ ಕೆಲಸ, ಅದರಲ್ಲೂ
ಮುಖ್ಯವಾಗಿ ಇಂಗ್ಲಿಷಿಗೆ ಅನುವಾದಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಪಂಪ, ರನ್ನ, ನಾಗಚಂದ್ರ, ಜನ್ನ, ಮೊದಲಾದ ಮಹತ್ವದ ಹಳಗನ್ನಡ ಕೃತಿಗಳ
ಕುರಿತು ಇಂಗ್ಲಿಷಿನಲ್ಲಿ ಕನಿಷ್ಠ ಮಾಹಿತಿಗಳೂ ಲಭಿಸುತ್ತಿಲ್ಲ. ಹೀಗಾಗಿ ಕನ್ನಡದ ಸಾಹಿತ್ಯ
ಪರಂಪರೆಯ ಕುರಿತು ರಾಷ್ಟ್ರ ಮಟ್ಟದಲ್ಲಾಗಲೀ ಅಂತಾರಾಷ್ಟ್ರೀಯ ಮಟ್ಟದಲ್ಲಾಗಲೀ ಯಾವುದೇ ಚರ್ಚೆಗಳು
ನಡೆಯುತ್ತಿಲ್ಲ. ಈ ವಿಷಯದಲ್ಲಿ ಬಾಂಗ್ಲಾ, ತಮಿಳು ಮತ್ತು ತೆಲುಗು ಸಾಹಿತ್ಯ ನಮ್ಮಿಂದ ಬಹಳ
ಮುಂದಿವೆ.
2. ಅತ್ಯಾಧುನಿಕವಾದ ಒಂದು ಜಾಲತಾಣ: ನಮ್ಮ ಎಲ್ಲ ಹಳಗನ್ನಡ ಪಠ್ಯಗಳೂ
ನವೀತರವಾದ ಜಾಲತಾಣದಲ್ಲಿ ತಕ್ಷಣವೇ ಲಭಿಸುವಂತೆ ಮಾಡಬೇಕು. ಈ ಜಲತಾಣವು ಸುಮ್ಮನೆ ಪಠ್ಯಗಳನ್ನು
ವೆಬ್ಗೆ ಹೊತ್ತು ಹಾಕುವ ಕೆಲಸವಲ್ಲ. ಬದಲು ಅದೊಂದು ಮುಕ್ತ ಮತ್ತು ಸ್ವತಂತ್ರವಾದ ಓದಿನ
ತಾಣವಾಗಿರಬೇಕು. ಅಲ್ಲಿ ಎಲ್ಲ ಪಠ್ಯಗಳು ಸುಲಭವಾಗಿ ದೊರೆಯಬೇಕು, ಎಲ್ಲ ಕವಿಗಳ ಮಾಹಿತಿ ಇರಬೇಕು, ಹಳಗನ್ನಡದ ಬಗೆಗೆ ನಡೆದ ಸಂಶೋಧನೆಗಳ ಮಾಹಿತಿ ಇರಬೇಕು
ಮತ್ತು ಹಳಗನ್ನಡ ಪದಕೋಶ ಇರಬೇಕು. ಈ ಎಲ್ಲಾ ಪದಗಳು ಬಳಕೆಯಾದ ಸಂದರ್ಭವನ್ನು ಅದು ಎತ್ತಿ
ತೋರಿಸುವಂತಿರಬೇಕು. ಲಭ್ಯವಿದ್ದ ಕಡೆಗಳಲ್ಲೆಲ್ಲ ಗಮಕ, ಹರಿಕತೆ, ಯಕ್ಷಗಾನಗಳನ್ನು ಅದಕ್ಕೆ ಜೋಡಿಸಿ ವಿಸ್ತಾರವಾದ
ಹಳಗನ್ನಡ ಲೋಕವನ್ನು ಸೃಜಿಸಬೇಕು. ಹಳಗನ್ನಡ ಸಾಹಿತ್ಯವನ್ನು ಸಂಶೋಧನೆಗೆ ಮುಕ್ತವಾಗಿ ತೆರತೆದಿಡುವ
ಕೆಲಸ ಬೇಗನೇ ಆಗಬೇಕಾದ್ದು ಇಂದಿನ ತುರ್ತು ಅಗತ್ಯಗಳಲ್ಲೊಂದು.
ಅನುಬಂಧ:
ಮೇಲಿನ ಾಲೋಚನೆಗಳನ್ನು
ಗಮನದಲ್ಲಿರಿಸಿಕೊಂಡು, ಜೆ ಎನ್ ಯು ಕನ್ನಡ ಧ್ಯಯನ ಪೀಠವು 2019ರ ಫೆಬ್ರವರಿ 16ರಂದು ರನ್ನನ
ಗದಾಯುದ್ಧವನ್ನು ಕೇಂದ್ರದಲ್ಲಿರಿಸಿಕೊಂಡು ‘ಪಠ್ಯವೊಂದರ ಪಯಣ’ ಎಂಬ ಕಾರ್ಯಕ್ರಮವನ್ನು ಆಯೋಜಿಸಿತು
ಕವಿಚಕ್ರವರ್ತಿ ರನ್ನ ಕನ್ನಡ ಸಾಹಿತ್ಯದ ಕ್ಷಾತ್ರಯುಗವಾದ ೧೦ನೇ ಶತಮಾನದಲ್ಲಿ ಬೆಳಗಿದ ಕವಿರತ್ನ. ಅವನ ಗದಾಯುದ್ಧಕಾವ್ಯ ಹಳಗನ್ನಡದ ಅಪೂರ್ವಸಾಧನೆ ಮತ್ತು ಅನರ್ಘರತ್ನ. ವ್ಯಾಸಮಹಾಭಾರತದ ಕುರುಕ್ಷೇತ್ರ ಸಂಗ್ರಾಮದಲ್ಲಿ ಅರ್ಧದಿನ ನಡೆದ ಕಥೆಯನ್ನು ಸ್ವೀಕರಿಸಿ ಒಂದು ಮಹಾಕಾವ್ಯ ನಿರ್ಮಿಸಿದರನ್ನನ ಪ್ರತಿಭೆ ಅಸಾಮಾನ್ಯ. ಸಿಂಹಾವಲೋಕನದ ಕ್ರಮದಲ್ಲಿ ಮಹಾಭಾರತದ ಕಥೆಯನ್ನು ನಿರೂಪಿಸಿದ ರೀತಿ ಆಶ್ಚರ್ಯಕರ. ರನ್ನನ ಗದಾಯುದ್ಧವನ್ನು ಓದುತ್ತಿದ್ದರೆ ಒಂದು ನಾಟಕವನ್ನು ನೋಡಿದ ಅನುಭವ ಉಂಟಾಗುತ್ತದೆ. ಅಲ್ಲಿರುವುದು ಗದ್ಯಪದ್ಯಗಳೇ ಆದರೂ ಅವು ಸಂಭಾಷಣಾ ಶೈಲಿಯಲ್ಲಿರುತ್ತವೆ.ಒಂದೊಂದು ಪಾತ್ರವೂ ನಾಟಕದ ಪಾತ್ರಗಳಂತೆ ಮಾತನಾಡುತ್ತದೆ, ಅಭಿನಯಿಸುತ್ತದೆ. ಭಾಸನ 'ಊರುಭಂಗ', ಭಟ್ಟನಾರಾಯಣನ 'ವೇಣೀಸಂಹಾರ'ಪ್ರೇರಣೆಯಾಗಿದ್ದರೂ ರನ್ನ ತನ್ನದೇ ಆದ ಪ್ರತಿಭೆಯಿಂದ ಅನೇಕ ಸನ್ನಿವೇಶಗಳನ್ನು ಕಲ್ಪಿಸಿದ್ದಾನೆ. ಪಾತ್ರಗಳ ಚಿತ್ರಣಕ್ಕೆ ಹೊಸ ಮೆರಗನ್ನು ನೀಡಿದ್ದಾನೆ.ಗದಾಯುದ್ಧಕಾವ್ಯ ಒಂದು ಪಠ್ಯವಾಗಿಮಾತ್ರವಲ್ಲದೆ ಒಂದು ಸಂಪ್ರದಾಯವಾಗಿ ಜೀವಂತವಾಗಿದೆ.
ಹೊಸ ರೀತಿಯಲ್ಲಿ ಬಿಡುಗಡೆ:
ಕನ್ನಡ ಅಭಿಜಾತ ಪರಂಪರೆಯ ಕೃತಿಗಳು ಕಾಲ ಮತ್ತು ದೇಶಗಳ ಚೌಕಟ್ಟುಗಳಲ್ಲಿ ಸ್ಥಗಿತವಾಗಿ ಉಳಿದಿಲ್ಲ. ಕುಮಾರವ್ಯಾಸನು ಕಾವ್ಯದ ಕೇಳುಗರ ಪಟ್ಟಿಯಲ್ಲಿ ‘ ಜಂಗಮ ಜನಾರ್ಧನರ’ನ್ನೂ ಸೇರಿಸಿದ್ದಾನೆ. ನಮ್ಮ ಕಾವ್ಯಗಳು ಜಂಗಮ ಜನಾರ್ಧನರನ್ನು ತಲುಪಿದ್ದು ಹೇಗೆ ಎಂದು ಕೇಳಿಕೊಂಡರೆ ನಮ್ಮಲ್ಲಿಜನಪ್ರಿಯವಾಗಿದ್ದ ಗಮಕ ಪರಂಪರೆಯ ಬಗ್ಗೆ ಒಂದು ತಿಳುವಳಿಕೆ ಮೂಡುತ್ತದೆ. ಹಾಡಲು ಅನುಕೂಲವಾಗುವಂತೆ ಮರುಸೃಷ್ಟಿಕೊಂಡ ಕನ್ನಡ ಕಾವ್ಯಗಳನ್ನುಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ಗಮಕವು ಪ್ರಧಾನ ಪಾತ್ರ ವಹಿಸಿದೆ. ಇದನ್ನು ಬಲ್ಲ ಎಲ್ಲ ಕವಿಗಳೂ ‘ಕವಿ-ಗಮಕಿ’ಗಳಿಗೆ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ.ಮುಂದೆ ಹರಿಕತಾ ಪರಂಪರೆಯು ಗಮಕ ಪರಂಪರೆಯನ್ನು ತನ್ನೊಡನೆ ಜೋಡಿಸಿಕೊಂಡು, ಕನ್ನಡ ಕಾವ್ಯಗಳನ್ನು ಮತ್ತಷ್ಟು ವಿಸ್ತರಿಸಿತು. ಈ ಹರಿದಾಸರುಗಳುಕನ್ನಡ ಕಾವ್ಯಗಳನ್ನು ಮರುಸೃಷ್ಟಿಸಿ ಜನರಿಗೆ ತಲುಪಿಸಿದ ರೀತಿಯ ಕುರಿತು ನಾವು ಇನ್ನಷ್ಟೇ ಗಂಭೀರವಾದ ಅಧ್ಯಯನ ನಡೆಸಬೇಕಾಗಿದೆ. ಮುಂದೆ 17 ಮತ್ತು18ನೇ ಶತಮಾನದಲ್ಲಿ ಕನ್ನಡ ಕಾವ್ಯಗಳನ್ನೇ ಆಧರಿಸಿ ಬರೆಯಲಾದ ನೂರಾರು ಸಂಖ್ಯೆಯ ಯಕ್ಷಗಾನ ಪ್ರಸಂಗಗಳು ಕಾಣಿಸಿಕೊಂಡುವು. ಈ ಯಕ್ಷಗಾನಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಾಗಿಯೇ ಎತ್ತಿಕೊಂಡು, ಅವುಗಳನ್ನು ಅಲ್ಪ ಸ್ವಲ್ಪ ಮಾರ್ಪಡಿಸಿ ಪ್ರಸಂಗ ರೂ¥ Àದಲ್ಲಿರಂಗಭೂಮಿಗೆ ಅಳವಡಿಸಿದರು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕಕಾವ್ಯಗಳು ರಂಗ ಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು. ಅವುಗಳನ್ನು ಲಕ್ಷಾಂತರ ಜನ ನೊಡುವಂತಾಯಿತು.
ಈ ಚಿಂತನಾಕ್ರಮವನ್ನು ಆಧರಿಸಿ ಗದಾಯುದ್ಧ ಪುಸ್ತಕ ಬಿಡುಗಡೆಯನ್ನು ವಿಶಿಷ್ಟವಾಗಿ ಆಯೋಜಿಸಲಾಯಿತು. ಆದಿನ ರನ್ನನ ಗದಾಯುದ್ಧದ ಕೃತಿಯಇಂಗ್ಲಿಷ್ ಅನುವಾದವನ್ನು ಜೆ ಎನ್ ಯುವಿನ ಪ್ರಾಧ್ಯಾಪಕರಾದ ಪ್ರೊ. ವೆಂಕಟಾಚಲ ಹೆಗಡೆ ಅವರು ಬಿಡುಗಡೆಗೊಳಿಸಿದರು. ಅನುವಾದಕರಾದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮ್ಮೇಲ್ ಶೆರೋನ್ ಅವರು ಮೂಲಕೃತಿ ಹಾಗೂ ಅನುವಾದದ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಿದರು. ವಿಜಯಪುರದಶ್ರೀ ಕೃಷ್ಣ ಕೊಲ್ಲಾರ ಕುಲಕರ್ಣಿ ಹಾಗೂ ಬೆಂಗಳೂರಿನ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ರನ್ನನ ಗದಾಯುದ್ಧವನ್ನು ಗಮಕದಲ್ಲಿ ಪ್ರಸ್ತುತ ಪಡಿಸಿದರೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದರಾದ ಡಾ. ಲಕ್ಷ್ಮಣದಾಸರು ತಮ್ಮ ತಂಡದೊಂದಿಗೆ ಗದಾಯುದ್ಧವನ್ನು ಹರಿಕತೆ ರೂಪದಲ್ಲಿ ಮಂಡಿಸಿದರು. ಕೊನೆಯಲ್ಲಿ ಪ್ರಖ್ಯಾತವಾದ ಕೆರೆಮನೆ ಇಡಗುಂಜಿ ಮೇಳದ ಕಲಾವಿದರು ಗದಾಯುದ್ಧ ಯಕ್ಷಗಾನ ಪ್ರಸಂಗವನ್ನೂ ಪ್ರದರ್ಶಿಸಿದರು.
ಹೀಗೆ 10ನೇ ಶತಮಾನದ ಒಂದು ಪಠ್ಯವು ಬಹುರೂಪಿಯಾಗಿ ವಿಸ್ತಾರಗೊಳ್ಳುತ್ತಾ ಇವತ್ತಿನ ವರೆಗೆ ಬದುಕುಳಿದ ಬಗೆಯ ಚೋದ್ಯವನ್ನು ಸಂಶೋಧಕರಿಗೆಪ್ರಸ್ತುತಗೊಳಿಸಲಾಯಿತು. ಅಭಿಜಾತ ಕೃತಿಗಳನ್ನು ಅಧ್ಯಯನ ಮಾಡುವ ಸುಮಾರು 250 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕಾರ್ಯಕ್ರಮದಿಂದ ಪ್ರೇರಣೆ ಪಡೆದರು. ಈ
ಕಾರ್ಯಕ್ರಮದ ವಿವರಗಳನ್ನು ಕೆಳಗೆ ನೀಡಿದ ಕೊಂಡಿಯ ಮೂಲಕ ನೀವು ನೋಡಬಹುದು:
1. ಗದಾಯುದ್ದಂ ಪುಸ್ತಕ
ಬಿಡುಗಡೆ ಸಮಾರಂಭದ ಸಭಾ ಕಾರ್ಯಕ್ರಮ: ( ಭಾಷಣಕಾರರು: ಡಾ. ವೆಂಕಟಾಚಲ ಹೆಗಡೆ, ಆರ್. ವಿ. ಎಸ್ ಸುಂದರಂ ಮತ್ತು ಅಮ್ಮೇಲ್ ಶೆರೋನ್)
2. ಗಮಕ ಕಾರ್ಯಕ್ರಮ: (
ಗಮಕಿ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ವ್ಯಾಖ್ಯಾನ ಶ್ರೀ ಕೃಷ್ಣ ಕುಲಕಣೀ)
4. ಯಕ್ಷಗಾನ ಕಾರ್ಯಕ್ರಮ:
( ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ)
2 comments:
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ
jayakumarcsj@gmail.com
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
Post a Comment