Friday, April 26, 2019

ಕನ್ನಡ ಕಥನಗಳು







ಕನ್ನಡ ಕಥನಗಳು


ಪುರುಷೋತ್ತಮ ಬಿಳಿಮಲೆ



2019
ಅಹರ್ನಿಷಿ ಪ್ರಕಾಶನ



ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಆರೋಗ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ಹರಿತಗೊಳಿಸಲು ಶೈಕ್ಷಣಿಕ ಸಂವಾದಗಳನ್ನು ನಾವು ಪ್ರೋತ್ಸಾಹಿಸುತ್ತಿರಬೇಕು.  ಬೌದ್ದಿಕತೆ ಕಳೆಗುಂದುತ್ತಿರುವಾಗ ನಾಡು ಸಂಪನ್ನಗೊಳ್ಳುವುದಿಲ್ಲ, ದೇಶ ಪ್ರಗತಿಯಾಗುವುದಿಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ.
                                                                              ಪು ಬಿ
.ಪುರುಷೋತ್ತಮ ಬಿಳಿಮಲೆಯವರು ( 1955)  ಸುಳ್ಯತಾಲೂಕಿನ ಪಂಜದವರು. ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆದ ಅವರು 1979ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನೂ, 1984ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡರು. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಡಾ.ಬಿಳಿಮಲೆಯವರು 1998ರಿಂದ ದೆಹಲಿಯ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಿರ್ದೇಶಕರಾಗಿ ಕೆಲಸ ಮಾಡಿ, ಇದೀಗ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ.

ಮೆಕೆಂಜಿ ಕೈಫಿಯತ್ತುಗಳು, ಲಿಂಗರಾಜನ ಹುಕುಂ ನಾಮೆ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡು ಕಟ್ಟು, ಜನ ಸಂಸ್ಕೃತಿ, ಬಹುರೂಪ, ಮೆಲುದನಿ ಇವರ ಪ್ರಮುಖ ಕೃತಿಗಳು.  ಹೀಬ್ರೂ, ವಸೆದಾ, ನ್ಯೂಯಾರ್ಕ್, ವಾಷಿಂಗ್ಟನ್, ಟೆಕ್ಸಾಸ್, ಲಂಡನ್, ಗೆಂಟ್, ಹೊನುಲುಲು, ದುಬಾಯಿ, ಕತಾರ್, ಮೊದಲಾದ ಕಡೆಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತು ಪ್ರಬಂಧ ಮಂಡಿಸಿರುವ ಡಾ. ಬಿಳಿಮಲೆಯವರು ಯಕ್ಷಗಾನ ಕಲಾವಿದರೂ ಹೌದು . ಕರ್ನಾಟಕ ಜಾನಪದ ಅಕಾಡೆಮಿ, ಸಾಹಿತ್ಯ ಅಕಾಡೆಮಿ ಹಾಗೂ   ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಾಯವಾಗಿವೆ.
ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು. ಅನೇಕ ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ, ದಲಿತರ, ಮಹಿಳೆಯರ ಮತ್ತು ಅಲ್ಪ ಸಂಖ್ಯಾಕರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯ, ಬದುಕು ಮತ್ತು ಹೋರಾಟಗಳ ನಡುವೆ ವ್ಯತ್ಯಾಸಗಳನ್ನು ಕಂಡವರಲ್ಲ. ಭಾರತೀಯ ಜಾನಪದವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಅದರ ಮೂಲಕ ಭಾರತೀಯ ಸಂಸ್ಕೃತಿಯ ಅಧ್ಯಯನಕ್ಕೆ ಹೊಸ ವಿಸ್ತಾರ ತಂದುಕೊಟ್ಟಿದ್ದಾರೆ.

ಪರಿವಿಡಿ
ಪ್ರಕಾಶಕರ ಮಾತು
ಸ್ವಗತ

1.    ಬದಲಾಗುತ್ತಿರುವ ಕಥನಗಳು
2.    ಹಳೆಗನ್ನಡದ ಬಹುರೂಪೀ ನಿರೂಪಣೆಗಳು
3.      ಭಕ್ತಿ ಪರಂಪರೆ ಮತ್ತು ಕರ್ನಾಟಕ ಜಾನಪದ.
4.      ಕನ್ನಡ ಸಂಶೋಧನೆ ಹಿಡಿಯಬೇಕಿರುವ ಹೊಸ ಹಾದಿಗಳು
5.    ಅರೆಭಾಷೆಯ ಸಬಲೀಕರಣದ ಸುತ್ತ ಮುತ್ತ
6.    ಎ ಕೆ ರಾಮಾನುಜನ್ ಅವರ ಫೋಕ್ ಟೇಲ್ಸ್ ಫ್ರಂ ಇಂಡಿಯಾ  
7.    ಭಾರತದ ದಶದಿಕ್ಕುಗಳ ಕಥನಗಳು



ಸ್ವಗತ

1

1979ರಿಂದ ನಾನು ಅಧ್ಯಾಪಕನಾಗಿ ದುಡಿಯುತ್ತಿದ್ದೇನೆ. ಕಳೆದ 40 ವರ್ಷಗಳಲ್ಲಿ ಜಗತ್ತು ತೀವ್ರವಾಗಿ ಬದಲಾಗುತ್ತಿರುವುದಕ್ಕೆ ಸಾಕ್ಷಿಯಾಗುತ್ತಿದ್ದೇನೆ. ಈ ಬದಲಾಗುತ್ತಿರುವ ವಿಶ್ವದ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆ ಬರುವಂತೆ ಕೆಲಸ ಮಾಡಬೇಕು ಎಂಬುದು ನನ್ನ ನಂಬಿಕೆ. ಭಾಷೆಯ ಮೇಲೆ ವಿದ್ಯಾರ್ಥಿಗಳಿಗೆ ಹಿಡಿತ ಬರಬೇಕು ಮತ್ತು ಅವರ ಯೋಚನಾ ಶಕ್ತಿ ತೀಕ್ಷ್ಣಗೊಳ್ಳಬೇಕು ಎಂಬುದು ನನ್ನ ಕನಸು.  ಪಂಪನನ್ನು ಓದುವುದು ಎಂದರೆ, ವಿಕ್ರಮಾರ್ಜುನ ವಿಜಯವನ್ನು ಹಾಗೂ ಆದಿ ಪುರಾಣವನ್ನು ಅದೆಷ್ಟೇ ಕಷ್ಟವಾದರೂ ಓದುವುದು. ಆನಂತರ ಪಂಪನ ಬಗ್ಗೆ ಪ್ರಕಟವಾದ ಹತ್ತಾರು ಪುಸ್ತಕಗಳನ್ನೂ ನೂರಾರು ಲೇಖನಗಳನ್ನೂ ಸಂಗ್ರಹಿಸಿ ಅವುಗಳನ್ನು ಅಧ್ಯಯನ ಮಾಡುವುದು ಮತ್ತು ವಿದ್ವಾಂಸರೊಡನೆ ಅವುಗಳ ಬಗ್ಗೆ ಚರ್ಚಿಸುವುದು. ಕೊನೆಯಲ್ಲಿ ಪಂಪನ ಬಗ್ಗೆ ತಾನು ಬದುಕುತ್ತಿರುವ ಕಾಲದ ಗತ್ಯಗಳಿಗನುಗುಣವಾಗಿ ತನ್ನದೇ ಆದ ಸ್ವಂತ ತೀರ್ಮಾನವೊಂದನ್ನು ತೆಗೆದುಕೊಂಡು ಲೇಖನವೊಂದನ್ನು ಬರೆಯುವುದು ಅಥವಾ ಮುಂದಕ್ಕೆ ಸಾಗುವುದು. ಈ ಅರ್ಥದಲ್ಲಿ ಸಾಹಿತ್ಯ ಕೃತಿಗಳ ಅಧ್ಯಯನವು ಯಾವತ್ತೂ ಓದುವ, ಆಲೋಚಿಸುವ, ಮತ್ತು ಸಂಭ್ರಮಿಸುವ ಕೆಲಸ.

ಆದರೆ ಈಗ ಕಾಲ ಬದಲಾಗಿದೆ. ಅದೊಂದು ಸಹಜ ಪ್ರಕ್ರಿಯೆ. ಬದಲಾದ ಕಾಲಘಟ್ಟದಲ್ಲಿ ತಂತ್ರಜ್ಞಾನವು ಮೇಲ್ಗೈ ಸಾಧಿಸಿ ಓದುವ ಸಂಭ್ರಮವನ್ನು ಕಡಿಮೆ ಮಾಡಿದೆ. ವಿದ್ಯಾರ್ಥಿಗಳು ಮೂಲ ಪಠ್ಯಗಳನ್ನು ಓದದೆ ಗೈಡ್ ಗಳನ್ನು ಆಶ್ರಯಿಸುತ್ತಿದ್ದಾರೆ. ವಿಶ್ವವಿದ್ಯಾಲಯಗಳು ನಡೆಸುವ ಪ್ರವೇಶ ಪರೀಕ್ಷೆಗಳಲ್ಲಿ ಭಾಷೆ ಮತ್ತು ವಿವೇಚನಾಶೀಲತೆಯನ್ನು ಪರೀಕ್ಷಿಸಲು ಅವಕಾಶವೇ ಇಲ್ಲವಾಗಿದೆ. ಗಣಿತದ ವಸ್ತುನಿಷ್ಠತೆಯು ಭಾಷೆಯ ಜೀವಂತಿಕೆಯನ್ನು ತಿಂದು ಹಾಕಿದೆ. ಕುಮಾರವ್ಯಾಸನ ಕಾಲ ಯಾವುದು ಎಂದು ಕೇಳಿ, ಮೂರು ಉತ್ತರ ಕೊಟ್ಟು ಒಂದನ್ನು ಗುರುತಿಸಲು ಹೇಳಿದರೆ, ವಿದ್ಯಾರ್ಥಿಯು ಕುಮಾರವ್ಯಾಸನ ಬಗೆಗೆ ಏನು ಹೇಳಿದಂತಾಯಿತು? ಸರಿ ಅಥವಾ ತಪ್ಪುಗಳಿಗೆ ಸಾಹಿತ್ಯ ಹಾಗೂ ತತ್ವ ಶಾಸ್ತ್ರಗಳ ಕ್ಷೇತ್ರದಲ್ಲಿ ಯಾವ ಮನ್ನಣೆಯೂ ಇಲ್ಲ. ಸೀತೆಯನ್ನು ಕಂಡು ಆಕೆಯ ಚೆಲುವಿಗೆ ಮನಸೋತ ರಾವಣನ್ನು ಕುರಿತು ನಾಗಚಂದ್ರನು ‘ಅಬ್ಧಿಯುಮೋರ್ಮೆ ಕಾಲವಶದಿಂ ಮರ್ಯಾದೆಯಂ ದಾಂಟದೇ’ ಎಂದು ಉದ್ಘರಿಸುತ್ತಾನೆ. ಅಷ್ಟಾವಂಕ ಕೊಳಕ ಎಂದು ದೂತಿ ಹೇಳುವಾಗ ಜನ್ನನ ಅಮೃತಮತಿಯು – ‘ಕರಿದಾದೊಡೆ ಕತ್ತುರಿಯಂ. ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ,  ಸ್ವರಚಾಪಮನಿಳಿಕಯ್ವರೆ,  ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೈಯೊಳ್.’  ಎಂದು ಪಿಸುಗುಟ್ಟುತ್ತಾಳೆ.  ಈಗಿನ ದಿನಗಳಲ್ಲಿ ಒಳ್ಳೆಯ ಪುಸ್ತಕಗಳನ್ನು ಓದಬೇಕಾಗಿಲ್ಲ, ಬರೆಯುವ ಅಗತ್ಯವೂ ಇಲ್ಲವೆಂಬಂತೆ ಸಾರ್ವಜನಿಕಾಭಿಪ್ರಾಯಗಳನ್ನೂ ಮೂಡಿಸಲಾಗುತ್ತಿದೆ. ವ್ಯಾಸ, ವಾಲ್ಮೀಕಿ, ಕಾಳಿದಾಸ, ಬಾಣ, ಅಶ್ವಘೋಷ, ಪಂಪ, ಬಸವಣ್ಣ, ಅಕ್ಕ, ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆಯವರು ಬರೆದ ನಾಡಲ್ಲಿ ಇಂದು  ಲೇಖಕರು ಹಾಸ್ಯಕ್ಕೆ ವಸ್ತುವಾಗುತ್ತಿದ್ದಾರೆ.  ಹೀಗೆ ಭಾಷೆ ಮತ್ತು ತತ್ವ ಶಾಸ್ತ್ರಗಳು ಪತನಮುಖಿಯಾಗುತ್ತಿರುವ ಹೊತ್ತು ಈ ಪುಸ್ತಕ ಪ್ರಕಟವಾಗುತ್ತಿದೆ. ಏನಿಲ್ಲವೆಂದರೂ ಈ ಕೆಲಸ  ನನಗೆ ಓದುವ ಮತ್ತು ಬರೆಯುವ ಸಂತಸವನ್ನು ಕೊಟ್ಟಿದೆ. 


2

ಕಳೆದ ಸುಮಾರು 20 ವರ್ಷಗಳಿಂದ ದೆಹಲಿಯಲ್ಲಿರುವ ನನಗೆ ಕನ್ನಡವು ಒಂದು ಭಾವುಕ ವಿಷಯ. ಅದರ ಬಗ್ಗೆ ಹೆಚ್ಚು ವಿಮರ್ಶಾತ್ಮಕವಾಗಿ ಯೋಚಿಸಲು ಮತ್ತು ಬರೆಯಲು ನನಗೆ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಕ್ಷಣ ಕ್ಷಣವೂ ದೆಹಲಿಯೊಡನೆ ಕರಗಿ ಹೋಗುತ್ತಿರುವ ಹೊತ್ತಲ್ಲಿ, ಹಿಂದಿ ಭಾಷೆಯು ತನ್ನೆಲ್ಲಾ ಶಕ್ತಿಯೊಡನೆ ಪ್ರಹಾರ ಮಾಡುತ್ತಿರುವ ಸಂದರ್ಭದಲ್ಲಿ ಕನ್ನಡದ ನೆನಪುಗಳಿಗೆ ಗಾಢವಾಗಿ ಅಂಟಿಕೊಂಡು ಕುಳಿತಿರುವುದನ್ನು ಒಂದು ಬಗೆಯ ಪ್ರತಿಭಟನೆಯೆಂದೇ ನಾನು ಪರಿಕಲ್ಪಿಸಿಕೊಂಡಿದ್ದೇನೆ. ಇಲ್ಲಿ ಬೇಕಾದಂತೆ ಕನ್ನಡದ ಪುಸ್ತಕಗಳು ಸಿಗುವುದಿಲ್ಲ.  ಹಿಂದಿಯನ್ನೂ ಇಂಗ್ಲಿಷನ್ನೂ ಮಾತಾಡಲೇಬೇಕಾಗುತ್ತದೆ.  ಹೀಗೆ ಬದುಕುವಾಗ ಮತ್ತು ಮಾತಾಡುವಾಗ, ಕನ್ನಡದೊಳಕ್ಕೆ ಹಿಂದಿ ನುಸುಳಿಬಿಡುತ್ತದೆ. ಇಂಗ್ಲಿಷಿನೊಳಗೆ ಕನ್ನಡ ಹಣಕುತ್ತದೆ. ಲೋಧಿ ಎಸ್ಟೇಟಿನ ಹುಲ್ಲುಗಾವಲಿನಲ್ಲಿ ಕುಳಿತಾಗ ನನ್ನೂರಿನ ಬಂಟಮಲೆ ಕಾಡು ನೆನಪಿಗೆ ಬರುತ್ತದೆ. ಯಮುನಾ ನದಿ ದಾಟುವಾಗ ಕಾವೇರಿ ಬೇಡವೆಂದರೂ ನೆನಪಾಗುತ್ತದೆ. ವಾರವಿಡೀ ದುಡಿತದಲ್ಲಿ ಮೈಮರೆಯುವ ನಾನು ರವಿವಾರ ಊರಿಗೆಲ್ಲ ಫೋನ್ ಮಾಡಿ ಕನ್ನಡದಲ್ಲಿ ಅವರ ಕ್ಷೇಮ ಸಮಚಾರ ವಿಚಾರಿಸುತ್ತೇನೆ. ಅವರೂ ದೆಹಲಿಯ ಬಗ್ಗೆ ವಿಚಾರಿಸುತ್ತಾರೆ. ದಿನಾ ರೊಟ್ಟಿ ಸಬ್ಜಿ ತಿನ್ನುವ ನಾನು ಯಾವಾಗಲೋ ಒಮ್ಮೆ ನೀರ್ ದೋಸೆ, ಕೋರಿ ರೊಟ್ಟಿಗಾಗಿ ಹಾತೊರೆಯುತ್ತೇನೆ. ಹೀಗೆ ಕರ್ನಾಟಕ ಮತ್ತು ದೆಹಲಿಯ ನಡುವೆ ಓಲಾಡುತ್ತಿರುವ ನನ್ನ ನಿಜವಾದ ಅಸ್ಮಿತೆ ಎಲ್ಲಿದೆ? ಕರ್ನಾಟಕದಲ್ಲಿಯೋ, ದೆಹಲಿಯಲ್ಲಿಯೋ? ಅಥವಾ ಅವರಡರ ಮಿಶ್ರಣದಲ್ಲಿಯೋ? ನನ್ನ ತಾಯ್ನುಡಿ ಕೇವಲ ಮನೆಮಾತಾಗಿ ಉಳಿದಾಗ ಅದನ್ನು ಶೈಕ್ಷಣಿಕ ಭಾಷೆಯಾಗಿ ಪರಿವರ್ತನೆಗೊಳಿಸಿಕೊಳ್ಳುವುದು ಹೇಗೆ? ಕರ್ನಾಟಕದ ಹೊರಗಡೆಯೇ ಬಹುಕಾಲ ಬದುಕಿದ್ದ ಎ ಕೆ ರಾಮಾನುಜನ್ ಅವರ ಕವಿತೆಯೊಂದು ಇಂತಿದೆ- 

ಮಂಗೋಲಿಯಾದಲ್ಲಿ ಒಬ್ಬ ರಾಜ ಇದ್ದನಂತಲ್ಲ
ಅವನು ಯಾವುದೋ ದೂರದೇಶಕ್ಕೆ ದಂಡೆತ್ತಿ ಹೋದಾಗ
ಅಲ್ಲೊಂದು ಹೊಸ ಹಕ್ಕಿ ಹಾಡ ಕೇಳಿಸಿ
ಆ ಹಾಡು ನನಗೆ ಬೇಕು ಎಂದು
ಹಾಡಿಗೆಂದು ಹಕ್ಕಿ ಹಿಡಿದು
ಹಕ್ಕಿಯ ಜೊತೆ ಗೂಡೆತ್ತಿ
ಗೂಡಿನಡಿ ರೆಂಬೆ
ರೆಂಬೆಗೆ ಕೊಂಬೆ
ಕೊಂಬೆಗೆ ಮರ
ಮರದಡಿಯ ಬೇರು
ಬೇರು ಸುತ್ತಿನ ಹೆಂಟೆ ಮಣ್ಣು
ಆ ಊರು, ನೀರು, ಹಿಂಗಾರು
ಆ ಪ್ರದೇಶ, ಆ ಇಡೀ ರಾಜ್ಯ
ಎಲ್ಲ ಹೊತ್ತು ಹಾಕಬೇಕು ಎನಿಸಿ
ಇದ್ದ ಬಿದ್ದ ಆನೆ ಕುದುರೆ ರಥ
ಸೈನ್ಯ ಎಲ್ಲ ಕೂಡಿಸಿ
ಇಡೀ ರಾಜ್ಯವನ್ನೆಲ್ಲ ಗೆದ್ದು
ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡು
ಮನೆಗೇ ಹೋಗಲಿಲ್ಲ

ತಾಯ್ನಾಡಿನಿಂದ ದೂರ ಹೋದ ವ್ಯಕ್ತಿಯ ಬದುಕಿಗೆ ಬರೆದ ಭಾಷ್ಯವಿದು.  ಈ ಭಾವ ಎಲ್ಲರದೂ ಆಗಬೇಕಿಂದಿಲ್ಲ. ವ್ಯಾಪಾರಕ್ಕೆಂದೇ ಓಡಾಡುವ ಮಂದಿಗಳಿಗೆ ಭಾಷೆಯ ಹಂಗಿಲ್ಲ. ಅವರ ಉದ್ದೇಶ ಹಣ ಮಾಡುವುದಾದ್ದರಿಂದ ಅವರಿಗೆಲ್ಲ ಈ ಸೂಕ್ಷ್ಮಗಳು ಅರ್ಥವಾಗುವುದೂ ಕಡಿಮೆಯೇ. ಇಂಥ ಕೋಮಲ  ಪರಿಸ್ಥಿತಿಯಲ್ಲಿ ಬದುಕುತ್ತಿರುವ ನನ್ನಂಥ ಕನ್ನಡಿಗರು ಸಾಂಸ್ಕೃತಿಕವಾಗಿ ಕೆಲವು ಬಗೆಯ ಬಿಕ್ಕಟ್ಟುಗಳನ್ನು ಸದಾ ಇದಿರಿಸುತ್ತಲೇ ಇರುತ್ತೇವೆ. ಕರ್ನಾಟಕಕ್ಕೆ ಹೋದಾಗ ನಾವು ಅಲ್ಲಿನ ಬಹುಸಂಖ್ಯಾಕ ಜನವರ್ಗದ ಭಾಗವಾಗಿರುತ್ತೇವೆ. ಆದರೆ ವಾಪಾಸು ದೆಹಲಿಗೋ ಮುಂಬಾಯಿಗೋ ವಾಪಾಸು ಬಂದಾಗ ನಾವು ಭಾಷಾ ಅಲ್ಪ ಸಂಖ್ಯಾಕರಾಗಿಬಿಡುತ್ತೇವೆ. ಹಲವು ಸಂಸ್ಕೃತಿಗಳನ್ನು ಹಾದು ಹೋಗುವ ಬಿಕ್ಕಟ್ಟುಗಳ ನಡುವೆ ನಮ್ಮ ಉಸಿರಾಟ.  ಇದೊಂದು ತ್ರಿಶಂಕು ಸ್ಥಿತಿ. ಒಮ್ಮೆ ಕಳೆದುಕೊಳ್ಳುವ, ಇನ್ನೊಮ್ಮೆ ಪಡೆದುಕೊಳ್ಳುವ ಸ್ಥಿತಿಯನ್ನು ನಾವು ಸದಾ ಅನುಭವಿಸುತ್ತಲೇ ಇರುತ್ತೇವೆ. ಈ ಸಂಕಟಗಳಿಂದ ಪಾರಾಗುವ ಕೆಲವು ಬಗೆಗಳಲ್ಲಿ ಕನ್ನಡ ಪುಸ್ತಕಗಳನ್ನು ಓದುವುದು ಮುಖ್ಯವಾದುದು ಎಂದು ನನ್ನ ನಂಬಿಕೆ. 
3
ಹಾಗೆ ನೋಡಿದರೆ, ಕನ್ನಡಿಗರ ಹೊರನಾಡಿನ ವಲಸೆ ತುಂಬಾ ಕಡಿಮೆ. ಭಾರತ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದ ಜನ ರಾಜ್ಯ ಬಿಟ್ಟು ಹೊರಗೆ ಹೋಗುವುದೇ ಇಲ್ಲ ಎಂದು ತೋರುತ್ತದೆ. ಚೆನ್ನೈ, ಕೊಲ್ಕತಾ, ಮುಂಬೈ ಮತ್ತು ದೆಹಲಿ ನಗರಗಳನ್ನು ಪರಿಶೀಲಿಸಿದರೆ, ಅಲ್ಲಿ ಬೇರೆ ಭಾಷೆಯ ಜನರ ಸಂಖ್ಯೆಯೊಡನೆ ಕನ್ನಡಿಗರನ್ನು ಹೋಲಿಸುವಂತೆಯೇ ಇಲ್ಲ. ಉದಾಹರಣೆಗೆ ದೆಹಲಿಯಲ್ಲಿ ಸುಮಾರು ಒಂದು ಲಕ್ಷದ 20 ಸಾವಿರ ತಮಿಳರು ವಾಸಿಸುತ್ತಿದ್ದರೆ, ಸುಮಾರು 90 ಲಕ್ಷ ತೆಲುಗರಿದ್ದಾರೆ. ಮಲೆಯಾಳಿಗಳ ಸಂಖ್ಯೆ ಸುಮಾರು 65 ಸಾವಿರವಾದರೆ, ಕನ್ನಡಿಗರ ಸಂಖ್ಯೆ ಕೇವಲ 15 ಸಾವಿರ. ಈ 15 ಸಾವಿರದಲ್ಲಿ ಶೇಕಡಾ 50ರಷ್ಟು ಜನ ತುಳುನಾಡಿನವರೆಂದರೆ, ಕರ್ನಾಟಕದ ಇತರೆಡೆಯ ಜನರ ವಲಸೆಯ ಬಗ್ಗೆ ಒಂದು ಬಗೆಯ ತಿಳುವಳಿಕೆ ಮೂಡೀತು.  
ಇದನ್ನು ಒಂದು ಅಪರಾಧವೆಂದು ಹೇಳುತ್ತಿಲ್ಲ. ಹಾಗೆ ನೋಡಿದರೆ, ಕರ್ನಾಟಕದ ಜನರು ಹೊರಗಡೆಯಿಂದ ವಲಸೆ ಬಂದ ಜನರನ್ನು ಸ್ವಾಗತಿಸಿದ್ದೇ ಹೆಚ್ಚು. ಇದು ಕರ್ನಾಟಕದ ಮಣ್ಣಿನ ಒಂದು ಗುಣ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ, ಕನ್ನಡದ ಮೊದಲ ಗದ್ಯ ಕೃತಿಯಾದ ‘ವಡ್ಡಾರಾಧನೆ (ರಚನೆ: ಶಿವಕೋಟ್ಯಾಚಾರ್ಯ, ಕಾಲ ಕ್ರಿ.ಶ. 840 )ಯಲ್ಲಿನ ಭದ್ರ ಬಾಹುಭಟಾರರ ಕತೆ. ಈ ಜನಪ್ರಿಯ ಕತೆಯ ಪ್ರಕಾರ, ಚಂದ್ರಗುಪ್ತ ಮೌರ್ಯನ ಆಡಳಿತ ಕಾಲದಲ್ಲಿ ( ಕ್ರಿ ಪೂ 340)  ಉತ್ತರ ಭಾರತದಲ್ಲಿ 12ವರ್ಷಗಳ ಕಾಲ ಭೀಕರ ಬರಗಾಲ ಬರುತ್ತದೆ. “ಹನ್ನೆರಡು ವರ್ಷಗಳವರೆಗೆ ಈ ನಾಡೊಳು ಅನಾವೃಷ್ಟಿಯಾಗಿ ಮಹಾರೌದ್ರ ಪ್ರಸವವಾಗಿ, ಮಧ್ಯದೇಶವೆಲ್ಲವೂ ಪಾಳುಬಿದ್ದು, ನಾಡೊಳಿರುವ ಋಷಿಗಳಿಗೆ ವೃತ ಭಂಗವಾಗುವುದರಿಂದಾಗಿ ದಕ್ಷಿಣಾ ಪಥಕ್ಕೆ ಹೋಗೋಣ ಎಂದು ಭದ್ರಬಾಹು ಭಟಾರರು ಸಲಹೆ ನೀಡುತ್ತಾರೆ. ಆ ಪ್ರಕಾರ, ಭದ್ರಬಾಹು ಭಟಾರರು ಸಂಪ್ರತಿ ಚಂದ್ರಗುಪ್ತರ ಜೊತೆಗೆ ದಕ್ಷಿಣಾ ಪಥಕ್ಕೆ ವಲಸೆ ಬಂದು, ಕೊನೆಗೆ ಈಗಣ ಶ್ರವಣಬೆಳಗೊಳಕ್ಕೆ ಬಂದು (ಆಗಣ ಹೆಸರು:ಕಳ್ಬಪ್ಪು ನಾಡು) ನೆಲೆ ನಿಲ್ಲುತ್ತಾರೆ. ಆಶ್ಚರ್ಯವೆಂದರೆ, ಆ ಕಾಲದ ದಕ್ಷಿಣ ಭಾರತದ ಚರಿತ್ರೆಯನ್ನು ಅವಲೋಕಿಸಿದರೆ, ಕರ್ನಾಟಕದ ಈ ಭೂಭಾಗಕ್ಕಿಂತ ತಮಿಳುನಾಡಿನ ಚೋಳಮಂಡಲ-ತಂಜಾವೂರು ಪ್ರದೇಶ ಎಲ್ಲ ರೀತಿಯಿಂದಲೂ ಹೆಚ್ಚು ಫಲವತ್ತಾಗಿತ್ತು. ಆದರೆ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರ ಬಾಹುಭಟಾರರು ವಲಸೆಗೆ ಆಯ್ದುಕೊಂಡದ್ದು ತಮಿಳುನಾಡಿನ ಆ ಫಲವತ್ತಾದ ಭಾಗವನ್ನಲ್ಲ, ಬದಲು ಕನ್ನಡ ಭಾಷಾ ಪ್ರದೇಶವನ್ನು. ಮುಂದೆ ಪ್ರಾಕೃತವನ್ನು ಬಿಟ್ಟು ಕನ್ನಡವನ್ನು ಆಯ್ದುಕೊಂಡ ಜೈನರು ಕನ್ನಡವನ್ನೂ ಬೆಳೆಸಿದರು, ಜೈನ ಧರ್ಮವನ್ನೂ  ವಿಸ್ತರಿಸಿಕೊಂಡರು. ಈ ಜೈನ ಧರ್ಮವು ಪಂಪ, ಪೊನ್ನ, ರನ್ನ, ಚಾವುಂಡರಾಯ, ಕಂತಿ, ಅತ್ತಿಮಬ್ಬೆ, ಜನ್ನ, ರತ್ನಾಕರ ವರ್ಣಿ ಮೊದಲಾದ ಅತ್ಯಂತ ಮಹತ್ವದ ಬರೆಹಗಾರರನ್ನು ಕೊಟ್ಟದ್ದು ನಮಗೆಲ್ಲಾ ತಿಳಿದೇ ಇದೆ. ಅವರು ಕರ್ನಾಟಕವನ್ನು “ಜೈನಧರ್ಮದ ಆಡುಂಬೊಲಂ ಮಾಡಿಕೊಂಡರು ಎಂದು ಶಾಸನವೊಂದು ಕೊಂಡಾಡುತ್ತದೆ.
ಜೈನ ಧರ್ಮಕ್ಕೂ ಸ್ವಲ್ಪ ಪೂರ್ವದಲ್ಲಿದ್ದ ಬೌದ್ಧ ಧರ್ಮದ ಕತೆಯಾದರೂ ಇಷ್ಟೇ. ಅಶೋಕ ಚಕ್ರವರ್ತಿಯು ತಾನು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದ ಆನಂತರ, ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡ. ಪ್ರಖ್ಯಾತ ಐತಿಹಾಸಿಕ ಸ್ಥಳಗಳಾದ, ಸನ್ನತಿ, ಕೊಪ್ಪಳ, ಮಸ್ಕಿ, ಬ್ರಹ್ಮಗಿರಿ, ಕದರಿ ಮೊದಲಾದ ಪ್ರದೇಶಗಳೆಲ್ಲ ಇಂದಿಗೂ ಗತಕಾಲದ ಬೌದ್ಧ ಧರ್ಮದ ಚರಿತ್ರೆಯನ್ನು ಹಾಡುತ್ತಿವೆ. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕರ್ನಾಟಕದ ಮಣ್ಣಿಗೆ ಬಂದು ನೆಲೆಸಿದರು. ಮಧ್ಯಕಾಲೀನ ಕರ್ನಾಟಕವು ಮುಸ್ಲಿಮರಿಗೆ ಆಸರೆ ನೀಡಿದರೆ ಆಧುನಿಕ ಕರ್ನಾಟಕವು ಕ್ರಿಶ್ಚಿಯನ್ ಮಿಷನರಿಗಳನ್ನು ಸ್ವಾಗತಿಸಿತು. 
ಹೀಗೆ ಕರ್ನಾಟಕವು ತನ್ನ ಚರಿತ್ರೆಯುದ್ದಕ್ಕೂ ಹಲವು ಬಗೆಯ ಧರ್ಮಗಳನ್ನೂ, ಜನಾಂಗಗಳನ್ನೂ , ಸಮುದಾಯಗಳನ್ನೂ ತನ್ನತ್ತ ಆಕರ್ಷಿಸುತ್ತಲೇ ಬಂದಿದೆ. ಇಂದಿಗೂ ಉತ್ತರ ಭಾರತದ ಸಾವಿರಾರು ಜನರು ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಎಲ್ಲವನ್ನೂ ಒಳಗೊಳ್ಳುವ ಕರ್ನಾಟಕದ ಗುಣ ಬಹಳ ವಿಶೇಷವಾದುದು, ಮತ್ತು ಈ ನಿಟ್ಟಿನಲ್ಲಿ ಅದು ದೇಶದ ಇತರ ರಾಜ್ಯಗಳಿಗಿಂತ ತುಂಬಾ ಭಿನ್ನವಾದ ರಾಜ್ಯವಾಗಿದೆ.
ಹೀಗೆ ಕರ್ನಾಟಕದ ಒಳ ಹರಿವನ್ನು ಗಮನಿಸಿದರೆ, ಅದರ ಹೊರ ಹರಿವು ಇಲ್ಲವೆಂಬಷ್ಟು ಕಡಿಮೆ. ಆರನೆಯ ವಿಕ್ರಮಾದಿತ್ಯನು ( 1076-1126)  ತಕ್ಕ ಮಟ್ಟಿಗೆ ತನ್ನ ರಾಜ್ಯವನ್ನು ಉತ್ತರದ ಕಡೆ ವಿಸ್ತರಿಸಿಕೊಂಡಿದ್ದ. ಆತನ ಕಾಲದಲ್ಲಿ ಸುಮಾರು 600 ಕುಟುಂಬಗಳು ಉತ್ತರ ಭಾರತದಲ್ಲಿ  ನೆಲೆಸಿದವು ಎಂದು ಹೇಳಲಾಗುತ್ತಿದೆ. ಈ ಕುಟುಂಬಗಳು ಇದೀಗ ಗಂಗಾನದಿ ಬಯಲಲ್ಲಿ ಪೂರ್ತಿಯಾಗಿ ಹಿಂದಿ ಭಾಷಿಕರಾಗಿ ಪರಿವರ್ತನೆ ಹೊಂದಿರಬೇಕು. ಕನಿಷ್ಠ ಒಂದು ಸಾವಿರ ವರ್ಷಗಳ ಹಿಂದೆ, ಉತ್ತರ  ಭಾರತಕ್ಕೆ ವಲಸೆ ಹೋಗಿ, ಗಂಗಾ ನದಿ ದಂಡೆಯಲ್ಲಿ ನಲೆಸಿರುವ ಕೆಲವಾದರೂ ಕನ್ನಡಿಗರನ್ನು ಪತ್ತೆ ಹಚ್ಚಿ, ಅವರ ನೆನಪುಗಳಿಗೆ ಕಿವಿಗೊಟ್ಟರೆ, ಚರಿತ್ರೆಯ ಗಾಲಿಯನ್ನು ಹಿಂದಕ್ಕೆ ಒಯ್ಯಬಹುದು. ಇದೇ ರೀತಿ ಬೆಳಕಿನ ನಗರವೆಂದೇ ಪ್ರಖ್ಯಾತವಾದ ವಾರಣಾಸಿಗೆ ಕರ್ನಾಟಕದಿಂದ ನಿರಂತರವಾಗಿ ಜನ ಹೋಗಿದ್ದಾರೆ. ಹಾಗೆ ಹೋದವರಲ್ಲಿ ಹಲವರು ಕಾಶಿಯಲ್ಲಿಯೇ ನೆಲೆನಿಂತಿದ್ದಾರೆ ಮತ್ತು ಮನೆಯಲ್ಲಿ ಇವತ್ತಿಗೂ ಚೂರು ಪಾರು ಕನ್ನಡವನ್ನು ಉಳಿಸಿಕೊಂಡು ಬಂದಿದ್ದಾರೆ. ಇದೇ ರೀತಿ ಬಿಹಾರ, ಬಂಗಾಳ, ನೇಪಾಳ, ಹರಿದ್ವಾರ, ತಿರುವನಂತಪುರಂ, ಮದುರೈ, ಕಂಚಿ, ತಿರುಪತಿ, ಛತ್ತರ್‍ಪುರ್, ಅಹ್ಮದಾಬಾದ್  ಮೊದಲಾದೆಡೆಗಳಲ್ಲಿರುವ ಧಾರ್ಮಿಕ ಮತ್ತು ಇತರ ಪ್ರದೇಶಗಳಲ್ಲಿ ಬೆರಳೆಣಿಕೆಯ ಕನ್ನಡಿಗರಿದ್ದಾರೆ. ಆದರೆ  ಅವರೆಲ್ಲ ಆಯಾ ಊರಿನ ಸಂಸ್ಕೃತಿಯಲ್ಲಿ ಲೀನವಾಗಿದ್ದಾರೆ. ಅವರಿಗೆ ಕರ್ನಾಟಕ, ಕನ್ನಡ ಸಂಸ್ಕೃತಿಗಳ ಬಗೆಗೆ ಯಾವ ಕುತೂಹಲವೂ ಇಲ್ಲ.
ಕನ್ನಡಿಗರ ಈಹೊರಹೋಗದ’ ಗುಣಕ್ಕೆ ಪೂರಕವಾಗಿ ಕನ್ನಡ ಸಾಹಿತ್ಯವೂ ವರ್ತಿಸಿಕೊಂಡು ಬಂದಿದೆ. ಆರಂಭದಿಂದಲೂ ಅದು ಬೇರೆ ಭಾಷೆಗಳಿಂದ ತನಗೆ ಬೇಕಾದ್ದನ್ನು ಮುಕ್ತವಾಗಿ ತೆಗೆದುಕೊಂಡು ಬೆಳೆದಿದೆ. ಶ್ರೀವಿಜಯ, ಶಿವಕೋಟ್ಯಾಚಾರ್ಯ, ಪಂಪ, ರನ್ನ, ನಾಗಚಂದ್ರ, ದುರ್ಗಸಿಂಹ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ, ನರಹರಿ, ಮೊದಲಾದವರು ತಮಗೆ ಬೇಕಾದ್ದನ್ನು ನಿಸ್ಸಂಕೋಚವಾಗಿ ಬೇಕಾದಲ್ಲಿಂದ ಆಮದು ಮಾಡಿಕೊಂಡು, ಕನ್ನಡವನ್ನು ಬೆಳೆಸಿದರು. 19-20ನೇ ಶತಮಾನದಲ್ಲಿ ಶೇಕ್ಸಪಿಯರ್, ಕಾಳಿದಾಸ, ಶೂದ್ರಕ, ಬಂಕಿಂಚಂದ್ರ ಮೊದಲಾದವರೊಡನೆ ಇಂಗ್ಲಿಷಿನ ರೋಮ್ಯಾಂಟಿಕ್ ಕವಿಗಳೂ, ರಶಿಯಾದ ಕ್ರಾಂತೀಕಾರೀ ಸಾಹಿತ್ಯವೂ ಕನ್ನಡಕ್ಕೆ ಬಂದಿದೆ. ಈಗಲೂ ಜಗತ್ತಿನಾದ್ಯಂತದಿಂದ ಕನ್ನಡಕ್ಕೆ ಹೇರಳವಾಗಿ ಸಾಹಿತ್ಯ ಕೃತಿಗಳು ಅನುವಾದವಾಗಿ ಬರುತ್ತಿವೆ. ಭಾರತದ ಬೇರಾವ ಭಾಷೆಗಳಿಗೂ ಮಟ್ಟಿನಲ್ಲಿ ಅನುವಾದಗಳು ಬರುತ್ತಿಲ್ಲ.
ವೇಗದಲ್ಲಿ ಕನ್ನಡದ ಕೃತಿಗಳು ಬೇರೆ ಭಾಷೆಗೆ ಅನುವಾದಗೊಳ್ಳುತ್ತಿವೆಯೇ? ಖಂಡಿತಾ ಇಲ್ಲ. ಕನ್ನಡದ ಆಂತರಿಕ ಸತ್ವವನ್ನು ಭಾರತದ ವಿವಿಧ ಭಾಷೆಗಳಿಗೆ ಮತ್ತು ಇಂಗ್ಲಿಷಿಗೆ ಸಮರ್ಥವಾಗಿ ಪರಿಚಯಿಸುವ ಕೆಲಸ ದೊಡ್ಡ ಮಟ್ಟದಲ್ಲಿ ನಡೆದೇ ಇಲ್ಲ. ನಮ್ಮ ಶಿವಕೋಟಿ, ಪಂಪ, ಚಾವುಂಡರಾಯ, ನಾಗಚಂದ್ರ, ನಯಸೇನ, ಕೇಶೀರಾಜ, ಚಾಮರಸ, ರತ್ನಾಕರ ವರ್ಣಿ, ಜನ್ನ, ಹರಿಹರ, ಕುಮಾರವ್ಯಾಸ, ಕುವೆಂಪು, ಮಾಸ್ತಿ, ಬೇಂದ್ರೆ, ಶಂಭಾ ಜೋಷಿ, ಶಿವರಾಮ ಕಾರಂತ, ಮಾಸ್ತಿ, ಕೆ ಎಸ್ ನರಸಿಂಹಸ್ವಾಮಿ, ನಿರಂಜನ, ಗೋಪಾಲಕೃಷ್ಣ ಅಡಿಗ, ಲಂಕೇಶ್, ತೇಜಸ್ವಿ, ಶೇಣಿ ಗೋಪಾಲಕೃಷ್ಣ ಭಟ್,  ಮೊದಲಾದವರ ಬಗ್ಗೆ ಕರ್ನಾಟಕದ ಹೊರಗಿನ ಜನಕ್ಕೆ ಏನೇನೂ ತಿಳಿದಿಲ್ಲ. ಗೂಗಲ್ಗೆ ಹೋಗಿಪಂಪ ಎಂದು ಕೇಳಿದರೆ ಕೇವಲ ಎರಡು ಉಲ್ಲೇಖಗಳು ಸಿಗುತ್ತವೆ. ಆದರೆ ತಿರುಕ್ಕುರುಳ್ ಎಂದು ಕೇಳಿದರೆ ಎರಡು ಲಕ್ಷಕ್ಕೂ ಹೆಚ್ಚು ಉಲ್ಲೇಖಗಳು ಪ್ರತ್ಯಕ್ಷವಾಗುತ್ತವೆ. ಹಾಗೆಯೇ ಕುವೆಂಪು ಎಂದು ಕೇಳಿದರೆ ನಾಲ್ಕೈದು, ಪ್ರೇಮಚಂದ್ ಎಂದು ಕೇಳಿದರೆ ಐದಾರು ಲಕ್ಷ ಉಲ್ಲೇಖಗಳು ಕಣ್ಣೆದುರು ಬರುತ್ತವೆ. ಸಮಸ್ಯೆಯಿಂದ ನಾವು ಹೊರಗೆ ಬರಬೇಕಾದರೆ ಸಮರೋಪಾದಿಯಲ್ಲಿ ಅನುವಾದ ಕಾರ್ಯವನ್ನು ಕೈಗೆತ್ತಿಕೊಳ್ಳುವುದೊಂದೇ ಹಾದಿ. ಅನುವಾದಕರಿಗೆ ಅತ್ಯುತ್ತಮ ಸಂಭಾವನೆ ನೀಡಿ, ದೇಶ ವಿದೇಶಗಳ ಪ್ರಖ್ಯಾತ ಪ್ರಕಾಶರ ಮೂಲಕ  ನಮ್ಮ ಅನುವಾದಗಳು ಪ್ರಕಟಗೊಂಡು ಓದುಗರನ್ನು ತಲುಪಬೇಕು. ಹೊರನಾಡಿನಲ್ಲಿನ ಕರ್ನಾಟಕದ ದುರ್ಬಲ ಪ್ರತಿನಿಧೀಕರಣವನ್ನು ನಾವು ಸಬಲೀಕರಣಗೊಳಿಸದೇ ಹೋದರೆ, ಕನ್ನಡ ಇನ್ನಷ್ಟು ದುರ್ಬಲವಾಗುತ್ತದೆ.
4
1992ರಲ್ಲಿ ನಾನು ಮಂಗಳೂರು ವಿಶ್ವವಿದ್ಯಾಲಯ ಬಿಟ್ಟ ಮೇಲೆ ನನ್ನ ಬರವಣಿಗೆ ಕಡಿಮೆಯಾಯಿತು. ಅದಕ್ಕೆ ಕಾರಣ ನಾನು  ಕನ್ನಡ ಪರ ಸಂಘ ಸಂಸ್ಥೆಗಳನ್ನು ಕಟ್ಟಲು ದುಡಿಯಲಾರಂಭಿಸಿದ್ದು. ಕನ್ನಡ ವಿಶ್ವವಿದ್ಯಾಲಯದ ಆರಂಭದ ಆರು ವರ್ಷಗಳ ಕಾಲ  (1992-1998) ವಿಶ್ವವಿದ್ಯಾಲಯವನ್ನು ಭದ್ರವಾದ ತಳಹದಿಯ ಮೇಲೆ ಕಟ್ಟಲು ಡಾ. ಚಂದ್ರಶೇಖರ ಕಂಬಾರ, ಕೆ ವಿ ನಾರಾಯಣ ಅಂತವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದೆ. ಕೆಲಸ ಪ್ರಾಮಾಣಿಕವಾಗಿತ್ತಾದರೂ ಅದನ್ನು ಸಂಬಂಧಿಸಿದವರಿಗೆ ಸಾಬೀತು ಮಾಡಿ ತೋರಿಸುವಲ್ಲಿ ವಿಫಲನಾದ್ದರಿಂದ ನಾನು ವಿಶ್ವವಿದ್ಯಾಲಯವನ್ನೇ ಬಿಡಬೇಕಾಯಿತು. ಮುಂದೆ 16 ವರ್ಷಗಳ ಕಾಲ (1999-2015) ದೆಹಲಿಯ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನಲ್ಲಿ  ಸಂಸ್ಥೆಯ ನಿರ್ದೇಶಕನಾಗಿ ದುಡಿದೆ. ಅವಧಿಯಲ್ಲಿ ದೇಶ ವಿದೇಶಗಳನ್ನು ಸುತ್ತಿದೆನಾದರೂ ಒಂದೆಡೆ ಕುಳಿತು ಕನ್ನಡದಲ್ಲಿ ಬರೆಯುವ ಅವಕಾಶ ಒದಗಲೇ ಇಲ್ಲ.  ನಡುವೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಪದವಿ (2004-2008) ನನಗೆ ದೊರೆಯಿತು. ಅವಧಿಯಲ್ಲಿ ಸಂಘಕ್ಕೊಂದು ಸಾಂಸ್ಕøತಿಕ ಸಮುಚ್ಚಯ ನಿರ್ಮಾಣಗೊಳ್ಳಲು ತುಂಬಾ ದುಡಿಯಬೇಕಾಯಿತು.
ಮುಂದೆ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕನಾಗಿ ಸೇರಿಕೊಂಡು ( 2015ರಿಂದ)  ಅಲ್ಲಿ ಕನ್ನಡ ಕಟ್ಟುವ ಕೆಲಸ ಆರಂಭಿಸಿದೆ. ಕನ್ನಡಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯವಾದ ಒಂದು ಮನ್ನಣೆ ದೊರಕುವಂತೆ ಮಾಡಲು ಕನ್ನಡ ಪೀಠ ಶ್ರಮಿಸುತ್ತಿದೆ. ಶೈಕ್ಷಣಿಕ ಮಹತ್ವದ ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು, ದೇಶ- ವಿದೇಶಗಳ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸುವುದು,   ಕನ್ನಡದ ಮುಖ್ಯ ಲೇಖಕರನ್ನು ಅಖಿಲಭಾರತ ಮಟ್ಟದ ಇತರ ಲೇಖಕರೊಂದಿಗೆ ಇರಿಸಿ ತೌಲನಿಕವಾಗಿ ಚರ್ಚಿಸುವುದು, ಕನ್ನಡದ ಅಭಿಜಾತ ಸಾಹಿತ್ಯ ಪರಂಪರೆಗೆ ಸೇರಿದ, ಕವಿರಾಜಮಾರ್ಗ, ವಡ್ಡಾರಾಧನೆ, ಗದಾಯುದ್ಧ ಮೊದಲಾದ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸುವುದು, ತುಳು-ಕೊಡವ ಭಾಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು,  ಹೊರನಾಡಲ್ಲಿರುವ ಕನ್ನಡಿಗರಿಗೆ ಮತ್ತು ಒಳನಾಡಿನಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಯಲು ಅನುಕೂಲವಾಗುವಂತೆ ಆನ್ ಲೈನ್ ಕನ್ನಡ ಕಲಿಕೆಗೆ ಹೊಸಬಗೆಯ ಅಂತರ್ಜಾಲವೊಂದನ್ನು ಸಿದ್ಧಪಡಿಸುವುದು. ಕರ್ನಾಟಕ ಸಂಸ್ಕøತಿಯ ವಿವಿಧ ಮುಖಗಳನ್ನು ಜೆ ಎನ್ ಯು ವಿಗೆ ಪರಿಚಯಿಸುವ ಕೆಲಸ ಮಾಡುವುದು, ಕನ್ನಡ ಸಂಸ್ಕೃತಿಯ ವಿವಿಧ ಆಯಾಮಗಳ  ಬಗ್ಗೆ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸುವುದು, ಇತ್ಯಾದಿ ಕೆಲಸಗಳನ್ನು ಈಗ ಕನ್ನಡ ಪೀಠ ಮಾಡುತ್ತಿದೆ.
ಬಗೆಯ ಕೆಲಸಗಳಿಂದಾಗಿ ಹೆಚ್ಚು ಬರೆಯಲಾಗಲಿಲ್ಲ, ನಿಜ. ಆದರೆ ಕನ್ನಡಕ್ಕಾಗಿ ಉಪಯುಕ್ತವಾದ ಸಂಘ ಸಂಸ್ಥೆಗಳನ್ನು ಸ್ಥಾಪಿಸಲು ದುಡಿಯುವುದು ಒಂದು ಲೇಖನವನ್ನೋ,  ಪುಸ್ತಕವನ್ನೋ ಬರೆದಷ್ಟೇ ಮುಖ್ಯ ಎಂದು ನಾನು ಉದ್ದಕ್ಕೂ ಭಾವಿಸಿಕೊಂಡೇ ಬಂದಿದ್ದೇನೆ.
ಆದರೂ ಬರೆದದ್ದು ಕಡಿಮೆಯಾಯಿತೋ ಎಂಬ ಪಾಪ ಪ್ರಜ್ಞೆ ಆಗಾಗ ಕಾಡುತ್ತಲೇ ಇದೆ. ಇದರಿಂದ ಪಾರಾಗಲಾದರೂ ಕೆಲವು ಪುಸ್ತಕಗಳನ್ನು ಈಗ ಬರೆಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಕೆಲಸ ಮಾಡುತ್ತಿರುವ ಯುವ ಸಂಶೋಧಕರನ್ನು ಮುಖ್ಯವಾಗಿ ಗಮನದಲ್ಲಿರಿಸಿಕೊಂಡು ಪ್ರಸ್ತುತ ಪುಸ್ತಕ ಪ್ರಕಟವಾಗುತ್ತಿದೆ.
ಹೊರನಾಡಿನಲ್ಲಿದ್ದರೂ ವಿಚಾರ ಸಂಕಿರಣಕ್ಕೆ ದೆಹಲಿಯಿಂದ ಕರೆಯಿಸಿಕೊಂಡು ಇಲ್ಲಿನ ಲೇಖನಗಳನ್ನು ಬರೆಯಿಸಿದ ಗೌರವಾನ್ವಿತರಾದ ಸಬೀಹಾ, ಮಲ್ಲಿಕಾ ಘಂಟಿ, ಕಾ ತಾ ಚಿಕ್ಕಣ್ಣ, ಮನು ಬಳಿಗಾರ್, ಮತ್ತು ವೆಂಕಟೇಶ್ ಇಂದ್ವಾಡಿ  ಅವರಿಗೆ ನಾನು ಕೃತಜ್ಞನಾಗಿದ್ದೇನೆ .
ಈ ಪುಸ್ತಕವನ್ನು ಪ್ರೀತಿಯಿಂದ ಪ್ರಕಟಿಸುತ್ತಿರುವ ನಿಡುಗಾಲದ ಸಂಗಾತಿ ಅಕ್ಷತಾ ಹುಂಚದಕಟ್ಟೆ ಅವರಿಗೆ ನಾನು ಅಭಾರಿಯಾಗಿದ್ದೇನೆ.
ಪುರುಷೋತ್ತಮ ಬಿಳಿಮಲೆ



No comments: