Sunday, December 24, 2017

ಸಂವಿಧಾನದ ಬದಲಾವಣೆ:

ಸಂವಿಧಾನದ ಬದಲಾವಣೆ: ಕೆಲವು ಮಾತುಗಳು.
ಸ್ವಾತಂತ್ರ್ಯ ದೊರೆತ ಇಷ್ಟು ವರ್ಷಗಳ ಆನಂತರ ಭಾರತದ ಸಂವಿಧಾನದ ಬಗ್ಗೆ ಗಂಭೀರವಾದ ಚರ್ಚೆಗಳು ನಡೆಯುತ್ತಿವೆ. ಇದೊಂದು ಒಳ್ಳೆಯ ಬೆಳವಣಿಗೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ತನ್ನನ್ನು ಘನತೆಯಿಂದ ಬದುಕಲು ಅವಕಾಶ ಮಾಡಿಕೊಡುವ ಸಂವಿಧಾನದ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇರುವುದು ಅಪೇಕ್ಷಿತ.
ಈ ನಡುವೆ ಕೆಲವರು ಸ್ವಾರ್ಥಕ್ಕಾಗಿ ಸಂವಿಧಾನವನ್ನು ಬದಲಾಯಿಸುವ ಕುರಿತು ಸರಳವಾದ ಮತ್ತು ಬೇಜವಾಬ್ದಾರೀ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅದಕ್ಕೆ ನಾಡಿನಾದ್ಯಂತ ಭಾವುಕವಾದ ಪ್ರತಿಕ್ರಿಯೆಯೂ ಪ್ರಕಟವಾಗುತ್ತಿದೆ. ಭಾರತೀಯ ಸಂವಿಧಾನವು ಇವತ್ತು ದಲಿತರ ಮತ್ತು ಹಿಂದುಳಿದವರ ಶ್ರದ್ಧೆಯ ಕೇಂದ್ರವಾಗಿ ಕಾಣಿಸಿಕೊಳ್ಳುವುದರಿಂದ ಸಮಸ್ಯೆ ಇನ್ನೂ ಜಟಿಲವಾಗುತ್ತಿದೆ. ಭಾರತದ ಮುಂದುವರಿದ ಜಾತಿಗಳ ಜನರಿಗೆ ಮಾರ್ಗದರ್ಶನ ಮಾಡಲು ಭಗವದ್ಗೀತೆಯೂ ಸೇರಿದಂತೆ ಅನೇಕ ಪವಿತ್ರ ಗ್ರಂಥಗಳಿವೆ. ಆದರೆ ಅಕ್ಷರವಿಲ್ಲದ ದೊಡ್ಡ ಜನಸಮುದಾಯಕ್ಕೆ ಸಿಕ್ಕಿದ ಮೊದಲ ಮಾರ್ಗದರ್ಶಕ ಗ್ರಂಥವೆಂದರೆ ಸಂವಿಧಾನವೇ. ಅದನ್ನು ಅವರು ಸುಲಭದಲ್ಲಿ ಬಿಟ್ಟುಕೊಡಲಾರರು, ಬಿಟ್ಟುಕೊಡಬಾರದು.
1950ರಿಂದ ಈಚೆಗೆ ಭಾರತದ ಸಂವಿಧಾನದಲ್ಲಿ ಒಟ್ಟು 101 ತಿದ್ದುಪಡಿಗಳನ್ನು (ಆರ್ಟಿಕಲ್ 368ರಲ್ಲಿ ಸೂಚಿಸಿದ ಮಾರ್ಗದರ್ಶಕ ಸೂತ್ರಗಳ ಪ್ರಕಾರ) ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸರಳ ಅನುಮೋದನೆ ಪಡೆದು ರಾಷ್ಟ್ರಪತಿಗಳ ಅಂಕಿತ ದೊರೆತರೆ ತಿದ್ದುಪಡಿ ಸುಲಭ ಸಾಧ್ಯವಾಗುತ್ತದೆ. ಆದರೆ 1973ರ ಪ್ರಖ್ಯಾತವಾದ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರಿಂ ಕೋರ್ಟ್ ನೀಡಿದ ಮಹತ್ವದ ತೀರ್ಮಾನದಲ್ಲಿ ಮೊದಲಬಾರಿಗೆ ಭಾರತೀಯ ಸಂವಿಧಾನದ ಮೂಲಭೂತ ಆಶಯಗಳನ್ನು ಗುರುತಿಸಿ, ಅದರಲ್ಲಿ ತಿದ್ದುಪಡಿ ಮಾಡುವ ಹಕ್ಕು ಸಂಸತ್ತಿಗೆ ಇಲ್ಲವೆಂದು ಘೋಷಿಸಿತು. ಆರ್ಟಿಕಲ್ 368ನ್ನು ಆಧರಿಸಿ ಸಂಸತ್ತು ಸಂವಿಧಾನಕ್ಕೆ ‘ಧಕ್ಕೆ ಉಂಟು ಮಾಡುವ’, ‘ಸಂವಿಧಾನವನ್ನು ದುರ್ಬಲಗೊಳಿಸುವ’, ‘ನಾಶಮಾಡುವ’, ‘ ಬದಲಾಯಿಸುವ’ ಕೆಲಸಗಳನ್ನು ಮಾಡಬಾರದೆಂದು ಅದು ಸೂಚನೆ ನೀಡಿತು. ಸಂವಿಧಾನ ರಕ್ಷಣೆಯಲ್ಲಿ ಈ ತೀರ್ಮಾನವು ಇದುವರೆಗೆ ಮಹತ್ವದ ಭೂಮಿಕೆಯನ್ನು ನಿಭಾಯಿಸಿದೆ. ಹೀಗಾಗಿ ಒಟ್ಟು 101 ತಿದ್ದುಪಡಿಗಳನ್ನು ತರಲಾಗಿದ್ದರೂ ಅದರಿಂದ ಸಂವಿಧಾನದ ಪ್ರಸ್ಥಾವನೆಯಲ್ಲಿ (ಪ್ರಿಯೇಂಬಲ್ ) ವಿವರಿಸಲಾದ ಮೂಲ ಆಶಯಕ್ಕೆ ಯಾವತ್ತೂ ಧಕ್ಕೆ ಬಂದಿಲ್ಲ.
ಭಾರತದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗಗಳ ನಡುವಣ ಸಂಘರ್ಷ ನಮಗೆಲ್ಲ ತಿಳಿದೇ ಇದೆ. ಕೇಶವಾನಂದ ಭಾರತಿ ಪ್ರಕರಣದಲ್ಲಿ ನೀಡಿದ ತೀರ್ಮಾನಕ್ಕೆ ಬೆದರಿದ ಇಂದಿರಾ ಗಾಂಧಿ ಸರಕಾರ 1976ರಲ್ಲಿ ಮಾಡಿದ 42ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ಸಂವಿಧಾನವನ್ನು ಬೇಕಾದಂತೆ ಬದಲಾಯಿಸಲು ಬೇಕಾದ ಮಿತಿಯಿಲ್ಲದ ಅಧಿಕಾರವನ್ನು ಪಡೆದುಕೊಳ್ಳುವ ಪ್ರಕ್ರಿಯೆಗೆ ಮುಂದಾಯಿತು. ಆದರೆ ಸುಪ್ರೀಂ ಕೋರ್ಟ್ ಅದನ್ನು ಮುಂದೆ ಬಹುಮತದಿಂದ ರದ್ದು ಪಡಿಸಿತು. ಆ ಮೂಲಕ ಸುಪ್ರೀಂ ಕೋರ್ಟ್ ಭಾರತದಲ್ಲಿ ಸಂವಿಧಾನವೇ ಅಂತಿಮ, ಸಂಸತ್ತು ಅಲ್ಲ ಎಂಬ ಸಂದೇಶವನ್ನು ನಾಡಿಗೆ ರವಾನಿಸಿತು.
ಸದ್ಯದ ಪರಿಸ್ಥಿತಿಯಲ್ಲಿ ಸಂವಿಧಾನವನ್ನು ಸಮಗ್ರವಾಗಿ ಬದಲಾಯಿಸುವುದು ಅಷ್ಟೇನೂ ಸುಲಭವಲ್ಲ. ಜೊತೆಗೆ ಅನೇಕ ಮಿತಿಗಳ ನಡುವೆಯೂ ಶಾಸಕಾಂಗಕ್ಕಿಂತ ನ್ಯಾಯಾಂಗವೇ ಸಂವಿಧಾನವನ್ನು ರಕ್ಷಿಸುವಲ್ಲಿ ಹೆಚ್ಚು ಆಸಕ್ತಿ ತೋರಿರುವುದು ಸಂತೋಷದ ಸಂಗತಿಯಾಗಿದೆ.