Tuesday, April 3, 2018

Political speeches


ರಾಜಕೀಯ ಭಾಷಣಗಳನ್ನು ಕೇಳುವುದು ನನ್ನ ಇಷ್ಟದ ಹವ್ಯಾಸಗಳಲ್ಲೊಂದು. ಚೆನ್ನೈಯಲ್ಲಿ ಎಂ ಎ ಮಾಡುತ್ತಿದ್ದಾಗ ಮೆರಿನಾ ಬೀಚಲ್ಲಿ ಎಂ ಜಿ ಆರ್, ಕರುಣಾನಿಧಿ ಮೊದಲಾದವರ ಅದ್ಭುತವಾದ ವಾಗ್ಝರಿಗೆ ಮನಸೋಲುತ್ತಿದ್ದೆ. ಅವರು ತಮ್ಮ ಭಾಷಣಗಳಲ್ಲಿ ಪ್ರಾಚೀನ ತಮಿಳು ಸಾಹಿತ್ಯವನ್ನು ಉಲ್ಲೇಖಿಸುತ್ತಿದ್ದ ರೀತಿಯು ಈಗಲೂ ನನ್ನ ನೆನಪಿನಲ್ಲಿದೆ. 1980ರ ದಶಕದಲ್ಲಿ ಪುಸ್ತಕವೊಂದನ್ನು ಸಂಪಾದಿಸುತ್ತಿದ್ದ ಹೊತ್ತು ಶಿವಮೊಗ್ಗದ ಗೆಳೆಯ ತೀ ನಂ ಶಂಕರನಾರಾಯಣರಿಂದ ಶ್ರೀ ಯಡಿಯೂರಪ್ಪ ಅವರ ಭಾಷಣಗಳ ಮೇಲೆ ಲೇಖನವೊಂದನ್ನು ಬರೆಸಿದೆ. ಆ ಕಾಲದ ಹೋರಾಟಗಾರ ಯಡ್ಯೂರಪ್ಪ ಅವರು ಬಳಸುತ್ತಿದ್ದ ಕನ್ನಡದಲ್ಲಿನ ಕಿಚ್ಚು ನನಗೆ ತುಂಬಾ ಇಷ್ಟವಾಗುತ್ತಿತ್ತು. ಜೆ ಎಚ್ ಪಟೇಲರ ಭಾಷಣಗಳಲ್ಲಿ ಬೌದ್ಧಿಕ ಪಕ್ವತೆ ಇತ್ತು. ಕಾಫ್ಕಾ, ಕಮೂಗಳೆಲ್ಲ ಅವರ ಭಾಷಣಗಳಲ್ಲಿ ಹಾದು ಹೋಗುತ್ತಿದ್ದರು. ಅದ್ಭುತ ಮಾತುಗಾರ ಯು ಆರ್ ಅನಂತಮೂರ್ತಿ ಅಂತವರೇ ಪಟೇಲರ ಇದಿರು ಸಪ್ಪಗೆ ಕಾಣುತ್ತಿದ್ದರು. ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣವು ಕವಿತೆಯ ಗುಣವನ್ನು ಹೊಂದಿದ್ದರೆ, ಈಗಿನ  ಪ್ರಧಾನ ಮಂತ್ರಿ ಶ್ರೀ ಮೋದಿಯವರು ತಮ್ಮ ಭಾಷಣಗಳಿಂದಲೇ ಭಾರತೀಯರ ಮನಗೆದ್ದರು.

ಈಗ ಚುನಾವಣಾ ಸಮಯ. ಶ್ರೀ ಯಡಿಯೂರಪ್ಪ ಅವರ ಭಾಷಣಗಳಲ್ಲಿ ಹಿಂದಿನ ಕಿಚ್ಚು ಕಾಣುತ್ತಿಲ್ಲ.  ಕುಮಾರಸ್ವಾಮಿ ಅವರು ಒಳ್ಳೆಯ ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ನೆನಪಿನಲ್ಲಿ ಇಟ್ಟುಕೊಂಡರೂ ಯಾಕೋ ಅವರದು ಅಳುಮುಖ. ಹೋರಾಟದ, ವಿಸ್ತಾರವಾದ ಓದಿನ ಶಕ್ತಿ ಮತ್ತು ಲವಲವಿಕೆ ಅವರ ಕನ್ನಡದಲ್ಲಿ ಇದ್ದಂತಿಲ್ಲ. ಈ ನಡುವೆ ಶ್ರೀ ಸಿದ್ದರಾಮಯ್ಯನವರು ತಮ್ಮ ಭಾಷಣದ ರೀತಿಯನ್ನೇ ಬದಲಾಯಿಸಿಕೊಂಡಂತಿದೆ. ಭಾಷೆಯನ್ನು ಬಳಸುವಾಗ ಕಂಡುಬರುವ ಆತ್ಮವಿಶ್ವಾಸ, ಹೋರಾಟ ಮಾತ್ರ ತಂದುಕೊಡಬಹುದಾದ ಎದೆಗಾರಿಕೆ, ವಿರೋಧಿಗಳ ಮೇಲೆ ಮಾಡುವ ಆಕ್ರಮಣ, ತುಸು ವ್ಯಂಗ್ಯ ಇತ್ಯಾದಿಗಳಿಂದ ಅವರ ಭಾಷಣಗಳು ಜನಪ್ರಿಯವಾಗಿರುವುದು ಜನರ ಚಪ್ಪಾಳೆ, ಸಿಳ್ಳೆ ಇತ್ಯಾದಿಗಳಿಂದ ಸ್ಪಷ್ಟವಾಗುತ್ತಿದೆ ( ಇದು ವೋಟಾಗಿ ಪರಿವರ್ತನೆಯಾಗುವುದೋ ತಿಳಿದಿಲ್ಲ).
ಕನ್ನಡ ಭಾಷೆಯು ಚುನಾವಣಾ ಸಂದರ್ಭಗಳಲ್ಲಿ ಹೊಸದಾಗುವ ಬಗೆಯನ್ನು ನಾವು ಇನ್ನಷ್ಟೇ ಅಧ್ಯಯನ ಮಾಡಬೇಕಾಗಿದೆ.