Saturday, December 11, 2010

ಎಂಜಲು ಎಲೆಯ ಮೇಲೆ ಉರುಳು

ಇಂದಿನ ಪೇಪರ್ ನಲ್ಲಿ (ಪ್ರಜಾವಾಣಿ, ೧೧.೧೨.೨೦೧೦) ) ಎಂಜಲು ಎಲೆಯ ಮೇಲೆ ಉರುಳುವ ದಯನೀಯ ಘಟನೆಯ ಬಗ್ಗೆ ಓದಿ ವಿಷಾದವಾಯಿತು. ನಾನು ಹುಟ್ಟಿದ ಊರು ಕುಕ್ಕೆ ಸುಬ್ರಹ್ಮಣ್ಯದ ಹತ್ತಿರದ ಪಂಜ ಎಂಬ ಹಳ್ಳಿ, ಓದಿದ್ದು ಸುಬ್ರಹ್ಮಣ್ಯದಲ್ಲಿ . ನಾನು ಚಿಕ್ಕವನಿದ್ದಾಗ ವಾಂತಿ ಮಾಡಿದೆ ಅಂತ ನನ್ನ ಅಮ್ಮ ಸುಬ್ರಹ್ಮಣ್ಯದಲ್ಲಿ .ಎಂಜಲು ಎಲೆಯ ಮೇಲೆ ಉರುಳುವ ಹರಕೆ ಹೇಳಿಕೊಂಡಿದ್ದರಂತೆ. ನಾನು ದೊಡ್ಡವನಾದಾಗ ಅಮ್ಮ ಅದನ್ನು ನೆನಪಿಸಿ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡೆಸೆದ ಎಂಜಲು ಎಳೆಯಲ್ಲಿ ಉರುಳಲು ಒತ್ತಾಯಿಸುತ್ತಿದ್ದರು. ನಾನು ಮೌನವಾಗಿ ಆದರೆ ದಿಟ್ಟವಾಗಿ ನಿರಾಕರಿಸಿದೆ. ನನ್ನ ಮೌನ ಮತ್ತು ಪ್ರತಿಭಟನೆ ಅಮ್ಮನ ಆತಂಕವನ್ನು ತೀವ್ರವಾಗಿ ಹೆಚ್ಚಿಸುತಿತ್ತು. ಕೊನೆಗೊಮ್ಮೆ ಅದು ತೀರ ಅತಿರೇಕಕ್ಕೆ ಹೋದಾಗ ನಾನು ಅಮ್ಮನಿಗೆ ' ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ' ಎಂದೆ. ಅಮ್ಮ ಕೊನೆಗೂ ಮಗನನ್ನು ಆರಿಸಿಕೊಂಡರು. ಅಮ್ಮನ ಆಯ್ಕೆಯ ಮೂಲಕ ನಾನು ಬದುಕಿಕೊಂಡೆ.
ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಎಂಜಲು ಸೇವೆಯನ್ನು ಬಹಿಷ್ಕರಿಸಿ ಮಾನವನ ಘನತೆಯನ್ನು ಎತ್ತಿ ಹಿಡಿಯಬೇಕು