ಬದಲಾಗುತ್ತಿರುವ ಕಥನಗಳು
ಭಾರತವು ಕತೆಗಳ ದೇಶ. ಅದು 'ಚರಿತ್ರೆ' ಅಥವಾ 'ಇತಿಹಾಸ' ವನ್ನು ಕೂಡಾ ಕತೆಯ ರೂಪದಲ್ಲಿಯೇ ನೆನಪಿನಲ್ಲಿರಿಸಿಕೊಂಡಿರುತ್ತದೆ ಮತ್ತು ಹಾಗೆಯೇ ಮುಂದುವರಿಸಬಯಸುತ್ತದೆ. ಪದಶಃ ನೋಡಿದಾಗ 'ಕಥೆ'ಗೆ ಹೇಳಿದ್ದು,
ನಿರೂಪಿಸಿದ್ದು ಎಂಬ ಅರ್ಥವಿದೆ. ಭಾಷೆಯಲ್ಲಿ ನಿರೂಪಣೆ
ಮಾಡಿದ್ದೇ ಕಥನಗಳು.
ಕಥನಗಳಿಲ್ಲದ ಭಾಷೆಗಳೇ
ಇಲ್ಲ. ಭಾರತದಲ್ಲಿ
ಅವುಗಳ ಸಂಖ್ಯೆ
ಹೆಚ್ಚು. ಇಲ್ಲಿನ
ವಿವಿಧ ಸಮುದಾಯಗಳು,
ಪ್ರಾದೇಶಿಕ ವೈವಿಧ್ಯಗಳು,
ಸುದೀರ್ಘ ಕಾಲಾವಧಿ
ಮತ್ತು ವಿಶಿಷ್ಟ
ಪ್ರತಿಭೆಗಳು ಕಥನಗಳಿಗೆ
ಬಹುರೂಪತೆಯನ್ನು ತಂದು ಕೊಟ್ಟಿವೆ. ಜನಪದ ಕತೆಯೊಂದರಲ್ಲಿ ಬಡವನೊಬ್ಬನಿಗೆ ದೇವರು ಪಾತ್ರೆಯೊಂದನ್ನು ಕೊಟ್ಟು,
ಇದರಲ್ಲಿ ಏನು ಹಾಕಿದರೂ ಎರಡಾಗುತ್ತದೆ, ಬೇಕಾದ್ದನ್ನು ಹಾಕಿ, ಬೇಕಾದಷ್ಟು ಹೆಚ್ಚು
ಮಾಡಿಕೊಂಡು ಸುಖವಾಗಿ
ಬಾಳು ಎಂಬ ವರ ನೀಡುತ್ತಾನೆ.
ಇದು ಭಾರತದ ಬಹುರೂಪೀ ಕಥನಗಳಿಗೊಂದು ರೂಪಕ. ಇಲ್ಲಿ ಎಲ್ಲಾ ನಿರೂಪಣೆಗಳು ಮತ್ತೆ ಮತ್ತೆ ಮರುಸೃಷ್ಟಿಯಾಗುತ್ತಾ ಹೋಗುತ್ತವೆ.
ವ್ಯಾಸನ ಮಹಾಭಾರತವನ್ನೇ 1129 ರೀತಿಯಲ್ಲಿ
ಬರಕೊಂಡ ಭಾರತ ನಮ್ಮದು. ಇದರಲ್ಲಿ
ಜನಪದ ಭಾರತಗಳನ್ನೂ
ಸೇರಿಸಿಕೊಂಡರೆ ಅವುಗಳ ಸಂಖ್ಯೆಯು ಲಕ್ಷಕ್ಕಿಂತಲೂ ಹೆಚ್ಚಾಗುತ್ತದೆ. ಒಂದು ಭಾಷೆಯ ಕಥನಕಾರರಿಗೆ
ದ್ರೌಪದಿ ಮುಖ್ಯವಾದರೆ,
ಇನ್ನೊಂದು ಕಡೆಯ ನಿರೂಪಣೆಗಳಲ್ಲಿ ಭೀಮನಿಗೇ
ಒತ್ತು. ಮತ್ತೆ ಕೆಲವರಿಗೆ ಕೃಷ್ಣ ಬೇಕಾದರೆ, ಹಲವರಿಗೆ
ದುರ್ಯೋಧನನ ಮೇಲೆ ಮಮತೆ. ಹೀಗೆ ಇಡೀ ದೇಶವೇ ತನಗೆ ಬೇಕಾದಂತೆ
ಕಾವ್ಯವನ್ನು ಬರೆದುಕೊಳ್ಳುತ್ತದೆ. ಹಾಗಂತ ಈ ಗುಣವು ಕಾವ್ಯಕ್ಕೆ ಮಾತ್ರ ಸೀಮಿತವಾಗಿದೆ ಎಂದೇನೂ
ಭಾವಿಸಬೇಕಾಗಿಲ್ಲ. ಯಾವುದೋ
ಅವಶೇಷ, ಪಳೆಯುಳಿಕೆ,
ವಸ್ತು-ಸ್ಥಳ, ಕೆರೆ, ಕಟ್ಟೆ, ಗುಡ್ಡ, ಬೆಟ್ಟ, ಬಂಡೆ, ದಿನ್ನೆ,
ಉಡುಗೆ-ತೊಡುಗೆ,
ಆಯುಧ, ಪ್ರಾಣಿ,
ಸಸ್ಯ, ಮನುಷ್ಯ-ಹೀಗೆ ಎಲ್ಲವೂ
ಕತೆಯಾಗಿಯೇ ನಿರೂಪಣೆಗೊಳ್ಳುತ್ತದೆ. ಯಾವುದು
ಬೇಕಾದರೂ ಕತೆಗೆ ಕಾರಣವಾಗಬಹುದು. ಹಂಪಿಯಲ್ಲಿರುವ ಸುಗ್ರೀವ
ಗುಹೆಯ ಎದುರಿಗೆ,
ಬಂಡೆಯಲ್ಲಿ ಬಿಳಿಯದಾದ
ಗೆರೆಗಳ ಉದ್ದನೆಯ
ಸಾಲಿದೆ. ಅದು ಸೀತೆಯ ಸೆರಗೆಂದು
ಜನ ಭಾವಿಸುತ್ತಾರೆ. ಅದೇ ರೀತಿ, ಮಂಡ್ಯ ಜಿಲ್ಲೆಯ
ಬೆಳ್ಳೂರಿನ ಸಮೀಪದ ಅನಂತಗಿರಿಯಲ್ಲಿ 'ಭೀಮನ ಹೆಜ್ಜೆ ಇದೆ. ಪಶ್ಚಿಮ ಘಟ್ಟದ ಭಾಗವಾದ ಚಾರ್ಮಾಡಿಗೆ
ತಾಗಿಕೊಂಡಂತೆ ಇರುವ ದಿಡುಪೆ ಸಮೀಪ ‘ಪಾಂಡವರೇ ನೆಟ್ಟ ಬಾಳೆಗಿಡಗಳು’ ಇವೆ. ಹೀಗೆ ದೊಡ್ಡ ಕಲ್ಲಿದ್ದರೆ ಅದು ಭೀಮನ ಕಲ್ಲಾಗುತ್ತದೆ, ಕೆರೆಯಿದ್ದರೆ ಜಟಾಯು ತೀರ್ಥವಾಗುತ್ತದೆ, ಬೂದಿ ಗುಡ್ಡೆಯಿದ್ದರೆ ಅದು ವಾಲಿಕುಂಡವಾಗುತ್ತದೆ, ಗುಹೆಯಿದ್ದರೆ ಅದು ಬಕಾಸುರನ ಗುಹೆಯಾಗುತ್ತದೆ. ಕಾಡಿದ್ದರೆ, ಅದು ಪಾಂಡವರು ವನವಾಸವನ್ನು
ಕಳೆದ ಜಾಗವಾಗುತ್ತದೆ, ಬಯಲಿದ್ದರೆ,
ಅಲ್ಲಿ ಭರತ ತಂದಿರಿಸಿದ ರಾಮನ ಪಾದುಕೆಗಳಿರುತ್ತವೆ.
ಈ ಬಗೆಯ ಕಥನಗಳ ನಿರೂಪಕನಿಗೆ
ತಾನು ನಿರೂಪಿಸುತ್ತಿರುವುದು ನಿಜವಾದದ್ದನ್ನೇ ಎಂಬುದರ
ಬಗ್ಗೆ ಯಾವ ಸಂಶಯವೂ ಇರುವುದಿಲ್ಲ.
ನಿರೂಪಕನ ಪೀಠಿಕಾ
ರೂಪದ ಮಾತಿನಿಂದಲೇ
ಅದು ಸ್ಪಷ್ಟವಾಗುತ್ತದೆ. ಸರಿಯಾದ
ಸ್ಥಳ, ನಿರ್ದಿಷ್ಟ
ಸಮಯ ಮತ್ತು ವ್ಯಕ್ತಿಯ ಬಗ್ಗೆ ಯಾವ ಆತಂಕವೂ
ಇಲ್ಲದೆ, ತಡವರಿಕೆಯೂ
ಇಲ್ಲದೆ ವಿಷಯ ಮಂಡನೆ ಮಾಡುವ ಆತ, ಕಣ್ಣೆದುರು
ಇರುವ ಭೌತಿಕ ಅಧಾರಗಳಿಂದಲೇ ಅದನ್ನು
ಇನ್ನಷ್ಟು ಗಟ್ಟಿಗೊಳಿಸುತ್ತಾನೆ. 'ಇವೆಲ್ಲ
ಸಾಮಾನ್ಯ ಜನರಿಗೂ
ತಿಳಿದಿರುತ್ತದೆ. ಕಣ್ಣಿದ್ದವರಿಗೆ ಕಾಣುತ್ತದೆ.
ನಿಮಗಿನ್ನೂ ತಿಳಿದಿಲ್ಲವೇ ಎಂಬ ಧಾಟಿಯಲ್ಲಿ ಆತನ ಕಥನದ ನಿರೂಪಣೆ
ಇರುತ್ತದೆ. ಜೊತೆಗೆ
ತನ್ನ ಕಣ್ಣ ಮುಂದಿರುವ ಆಧಾರವನ್ನು
ಮತ್ತೆ ಮತ್ತೆ ಆತ ನಿರೂಪಣೆಯ
ನಡುವೆ ಉಲ್ಲೇಖಿಸುತ್ತಲೇ ಇರುತ್ತಾನೆ.
ಇದರಿಂದಾಗಿ ನಿರೂಪಣೆಯಲ್ಲಿರಬಹುದಾದ ಅಮೂರ್ತ
ಅಂಶಗಳೆಲ್ಲಾ ಗೌಣವಾಗಿಬಿಡುತ್ತವೆ. ‘ಅದು ಅಲ್ಲಿ ಇರುವುದರಿಂದಲೇ ನಾನದನ್ನು
ನಂಬಿದೆ, ಇಲ್ಲದಿದ್ದರೆ ನಾನೆಲ್ಲಿ
ನಂಬುತ್ತಿದ್ದೆ. ನನಗೂ ನಿಮ್ಮ ಹಾಗೆ ಆಧಾರವಿಲ್ಲದೆ ನಂಬಲಿಕ್ಕೆ
ಆಗುವುದಿಲ್ಲ' ಎಂದು ಹೇಳುವ ಮೂಲಕ ಆತ ತನ್ನ ನಿರೂಪಣೆಯನ್ನು ನಿಲ್ಲಿಸುತ್ತಾನೆ. ಈ ಬಗೆಯ ಮುಕ್ತಾಯವು
ಆತ ನಿರೂಪಿಸಿದ
ಕಥನವನ್ನು ಇನ್ನಷ್ಟು
ಬಲಪಡಿಸುತ್ತದೆ.
ನಾನು ಇಂಥ ಕಥನಗಳನ್ನು ಕೇಳುತ್ತಲೇ
ಬೆಳೆದವನು. ನನಗೆ ನೆನಪು ಹುಟ್ಟುತ್ತಿದ್ದಾಗ ಬಂಟಮಲೆಯ
ದಟ್ಟವಾದ ಕಾಡಿನೊಳಗಿದ್ದ ಸಣ್ಣ ಗುಡಿಸಲಿನೊಳಗೆ ಅಮ್ಮ ಕತೆ ಹೇಳುತ್ತಿದ್ದರು. ಸುತ್ತ ಕತ್ತಲೆ. ಕಪ್ಪೆಗಳ
ವಟ ವಟ ಸದ್ದು. ಭಯ ಬೀಳಿಸುವ ಆಳುಪಕ್ಕಿಯ
ಆರ್ತನಾದದಂತಿದ್ದ ಕೂಗು. ಹೆಚ್ಚೇನೂ ಬೆಳಕು ಚೆಲ್ಲದೆ ಸಣ್ಣಗೆ
ಉರಿಯುತ್ತಿದ್ದ ಚಿಮಿಣಿ
ದೀಪ. ಅಲ್ಲಿ ಹುಟ್ಟಿಕೊಂಡ ಕತೆಯೊಂದು
ಹೀಗಿತ್ತು-
‘ಒಂದೂರಲ್ಲಿ ಒಬ್ಬ ತಪಸ್ಸು ಮಾಡುತ್ತಿದ್ದನಂತೆ. ಅವನ ಹೆಸರು ಜನಕ ಮುನಿ. ನಮ್ಮ ಮನೆಯ ಹಾಗಿರುವ ಅವನ ಸಣ್ಣ ಗುಡಿಸಲಿನ
ಎದುರಿಗೆ ಒಂದು ದೊಡ್ಡ ಮರವಿತ್ತು.
ಆ ಮರದಲ್ಲಿ
ದಿನಾ ಒಂದು ಕಪ್ಪು ಕಾಗೆ ಕುಳಿಕೊಂಡು ಕಾ ಕಾ ಎಂದು ಕೂಗುತ್ತಿತ್ತು. ಅದರಿಂದ
ರುಷಿಗೆ ತೊಂದರೆಯಾಗುತ್ತಿತ್ತು. ಅವ ಕೈಯೆತ್ತಿ ಓಡಿಸಿದರೆ,
ಅದು ಮತ್ತೆ ಬಂದು ಮರದಲ್ಲಿ
ಕುಳಿತು ಕೂಗುತ್ತಿತ್ತು. ಒಂದು ದಿನ ಜನಕ ಹೇಳಿದ- ‘ಯಾರು ಕಾಗೆಯನ್ನು
ಕೊಲ್ಲುವರೋ ಅವರಿಗೆ
ನನ್ನ ಮುದ್ದು ಮಗಳಾದ ಸಿರಿ ಸೀತಾಮು
ದೇವಿಯನ್ನು ಮದುವೆ ಮಾಡಿ ಕೊಡುತ್ತೇನೆ’
ಅಂತ. ಬಹಳ ದಿನದವರೆಗೆ ಕಾಗೆ ಕೊಲ್ಲಲು ಯಾರೂ ಬರಲಿಲ್ಲ. ಒಂದು ದಿನ ರಾಮ ಮತ್ತು ಲಕ್ಷ್ಮಣ
ದೇವರು ಬೇಟೆಗೆ
ಹೊರಟವರು ಕಾಡಿನಲ್ಲಿದ್ದರು. ಜನಕ ಹೇಳಿದ್ದನ್ನು ಕೇಳಿಸಿಕೊಂಡರು. ಲಕ್ಷ್ಮಣ
ದೇವರು ಬಹಳ ಬೇಗ ಮುಂದೆ ಹೋದರು, ರಾಮ ದೇವರು ಹಿಂದೆ ಉಳಿದರು. ಲಕ್ಷ್ಮಣ
ದೇವರು ಮರನೋಡಿ
ಕಾಗೆಗೆ ಗುರಿಯಿಟ್ಟು
ಹೊಡೆದರು. ಕಾಗೆ ನೆಲಕ್ಕೆ ಬಿತ್ತು.
‘ತಗೋ ಸೀತೆಯ’ ಅಂದರು ಜನಕ ಮುನಿಗಳು. ಆದರೆ ಲಕ್ಷ್ಮಣ
ದೇವರು ತೆಗೆದುಕೊಳ್ಳದೆ ತಲೆ ಕೆಳಗೆ ಹಾಕಿದರು.
‘ಸಿರಿ ಸೀತಾಮು
ದೇವಿ ನನಗಲ್ಲ, ಅಣ್ಣ ರಾಮ ದೇವರಿಗೆ’ ಎಂದರು ಮೆಲ್ಲಗೆ. ಜನಕ ಮುನಿ ಒಪ್ಪಲಿಲ್ಲ.
ಇಬ್ಬರೂ ಜೋರು ಜಗಳಾಡಿದರು. ಕೊನೆಗೆ
ಲಕ್ಷ್ಮಣ ದೇವರು ಕೈ ಚಾಚಿ ಬೊಗಸೆಯಲ್ಲಿ ಸೀತಾಮು
ದೇವಿಯನ್ನು ಪಡೆದರು.
ಅಣ್ಣ ರಾಮನಿಗೆ
ಕೊಡಲೆಂದು ಹಿಂದೆ ನಡೆದರು. ಹಾದಿಯಲ್ಲಿ
ಸೀತಾಮು ದೇವರು ಲಕ್ಷ್ಮಣನಿಗೆ ಹೇಳಿದರು-
‘ನನಗೂ ದಾರಿ ದೂರವಾಗಿದೆ, ಕಾಲು ಬಚ್ಚಿದೆ, ಆರಾಮ ಮಾಡಬೇಕು.’.
ಲಕ್ಷ್ಮಣ ದೇವರು ಒಪ್ಪಿದರು. ಹಾಸು ಬಂಡೆ ಹುಡುಕಿದರು,
ಚಿಗುರೆಲೆ ತಂದರು, ಚೆಂದವಾಗಿ ಎಲೆ ಹರಡಿದರು. ಸೀತಾಮು
ದೇವರು ಅದರ ಮೇಲೆ ಮೊದಲು ಕುಳಿತರು, ಮತ್ತೆ ಹಾಗೇ ಚಿಗುರೆಲೆ
ಮೇಲೆ ಮಲಗಿದರು.
ಗಾಳಿ ಜೋರಾಗಿ
ಬೀಸಿತು. ಸೀತಾಮು
ದೇವಿಯ ಎದೆಯ ಮೇಲಿನ ಸೆರಗು ಗಾಳಿಗೆ ಹಾರಿತು.
ಲಕ್ಷ್ಮಣ ದೇವರು ಕಸಿವಿಸಿಗೊಂಡರು. ಕೈಯಲ್ಲಿ
ಸೀರೆಯನ್ನು ಎದೆಯ ಮೇಲೆ ಎಳೆಯದಾದರು.
ಕೊನೆಗೆ ಮಂಡಿಯೂರಿ
ಕುಳಿತು ತುಟಿಯಿಂದ
ಸೀರೆ ಸರಿಪಡಿಸಿದರು. ಸೀತಾಮು ದೇವರ ಇದಿರು ಲಕ್ಷ್ಮಣ
ದೇವರು ಮಕ್ಕಳಾದರು.
ಮತ್ತೆ ಇಬ್ಬರೂ
ರಾಮ ದೇವರ ಭೇಟಿ ಮಾಡಿದರು.
ಹಾದಿಯಲಿ ಸೆರಗು ಹಾರಿದ ಕತೆಯನ್ನು ರಾಮನಿಗೆ ಹೇಳಲೇ ಬೇಡವೇ ಎಂದು ಲಕ್ಷ್ಮಣ ದೇವರು ಚಿಂತೆ ಮಾಡಿದರು.
ಕೊನೆಗೆ ಹೇಳಿದರು.
‘ ಚಿಂತೆ ಬೇಡ, ನೀನು ಹಾಗೆ ಮಾಡುವಾಗ ನಾನು ಹಕ್ಕಿಯಾಗಿ ಮರದ ಮೇಲೆ ಕುಳಿತು
ನೋಡುತ್ತಿದ್ದೆ’ ಎಂದರು ರಾಮ ದೇವರು.
ಹೀಗೆ ಕತೆ ಮುಂದುವರಿಯುತ್ತಿದ್ದಾಗ ಯಾವುದೋ
ಘಟ್ಟದಲ್ಲಿ ನಾನು ನಿದ್ದೆಗೆ ಜಾರುತ್ತಿದ್ದೆ. ಮರುದಿನ
ಅಮ್ಮನೊಂದಿಗೆ ಬಂಟಮಲೆಯ
ಕಾಡಿನೊಳಗೆ ಬಿದಿರಕ್ಕಿ ಆಯಲು ಹೋದಾಗ ಕಂಡ ಹಕ್ಕಿಗಳು, ಮರಗಳು, ಚಿಗುರೆಲೆ, ಹಾಸು ಬಂಡೆಗಳು ರಾತ್ರಿಯ
ರಾಮನ ಕತೆಯನ್ನು
ನೆನಪಿಗೆ ತಂದು ಕಾಡೆಲ್ಲ ರಾಮಾಯಣವಾಗುತ್ತಿತ್ತು.
ಇದಾದ ಎಷ್ಟೋ ವರ್ಷಗಳ ಆನಂತರ ಸುಳ್ಯ ಸಮೀಪದ ಪೂಮಲೆ ಬೆಟ್ಟದ
ಬುಡದಲ್ಲಿ ಹರಿಯುತ್ತಿರುವ ಪುಟ್ಟ ತೊರೆಯ ದಂಡೆಯಲ್ಲಿ
ವಾಸಿಸುತ್ತಿದ್ದ ಅಜ್ಜಯ್ಯ ಒಬ್ಬರನ್ನು
ಭೇಟಿಯಾಗಿದ್ದೆ.
‘ಅಜ್ಜಾ, ಒಂದು ಕತೆ ಹೇಳಿ’ ಅಂದೆ.
‘ಹಾಗೆಲ್ಲ ಕತೆ ಹೇಳುವುದುಂಟೇ? ಈಗ ಊಟ ಮಾಡಿ ಮಲಗಿ, ಮುಂಜಾನೆ ಕೋಳಿಕೂಗುವ
ಹೊತ್ತಿಗೆ ತಯಾರಾಗಿ,
ಕತೆ ಹೇಳುತ್ತೇನೆ’
ಅಂದರು.
ಸರಿ. ಹಾಗೇ ಮಾಡಿದೆ. ಬೆಳಗ್ಗೆದ್ದು ನೋಡುವಾಗ
ಅಜ್ಜ ಯ್ಯ ಆಗಲೇ ಸ್ನಾನ ಮಾಡಿ, ಹಣೆಗೆ ಭಸ್ಮ ಬಳಿದು, ಬಿಳಿ ಬಟ್ಟೆ ಉಟ್ಟುಕೊಂಡು ಕತೆ ಹೇಳಲು ತಯಾರಾಗಿ
ಕುಳಿತಿದ್ದರು.
ಕಥನಗಳಿಗೊಂದು ಸಮಯ, ಸಂದರ್ಭ ಬೇಕೇ ಎಂದು ಯೋಚಿಸಿ
ನಾನು ಅವಕ್ಕಾಗಿದ್ದೆ.
ಅವರು ಹೇಳಿದರು.
‘ ಏನು ಹಾಗೆ ನೋಡುತ್ತೀರಿ, ಕತೆ ಹೇಳುತ್ತೇನೆ, ನೀವು ಬರ್ಕೊಳ್ಳಿ, ಬರ್ಕೊಳ್ಳಿ,
ಮತ್ತೆ ಸರಿಯಾಗಿ
ಬರ್ಕೊಳ್ಳಿ’
ನಾನು ಸಾವರಿಸಿಕೊಂಡು ಬರೆದುಕೊಳ್ಳಲು ತಯಾರಾದೆ.
ಮೌಖಿಕ ಕಥನಗಳು
ಅಕ್ಷರಕ್ಕೆ ದಾಟಿಕೊಳ್ಳುವ ಮುಂಜಾವದ
ಕ್ಷಣಗಳವು.
ಅಜ್ಜ ಹೇಳತೊಡಗಿದರು-
‘ ಓ ಅಲ್ಲಿ ಕಾಣುತ್ತಿದೆಯಲ್ಲ, ಪೂಮಲೆ ಬೆಟ್ಟ, ಅದರ ಹೆಸರು ಹೇಗೆ ಬಂದಿದೆ ನಿನಗೆ ಗೊತ್ತೋ?’
‘ಇಲ್ಲ’
‘ಹಾಗಾದರೆ ಬರ್ಕೊಳ್ಳಿ’
‘ಸರಿ, ನೀವು ಹೇಳಿ’
‘ಹಿಂದೆ ರಾಮ ದೇವರು, ಲಕ್ಷ್ಮಣ
ಮತ್ತು ಸೀತಾ ದೇವಿಯರೊಂದಿಗೆ ವನವಾಸಕ್ಕೆ
ಹೋದರು. ಅಲ್ಲಿ ಚಿನ್ನದ ಜಿಂಕೆ ಕಂಡು ಸೀತೆಗೆ
ಮೋಹ ಬಂತು. ಅದು ಬೇಕು ಅಂತ ಹಠ ಹಿಡಿದಳು. ಜಿಂಕೆ ಹಿಡಿಯಲು ರಾಮ ದೇವರು ಹೋದರು. ಎಷ್ಟೊತ್ತಾದರೂ ರಾಮ ಬಾರದ್ದನ್ನು ಕಂಡು ಲಕ್ಷ್ಮಣ ದೇವರೂ ರಾಮನನ್ನು ಹುಡುಕಿಕೊಂಡು ದೂರ ಹೋದರು. ಆಗ ರಾವಣ ಮುನಿ ವೇಷದಲ್ಲಿ ಬಂದು ಸೀತೆಯನ್ನು ಅಪಹರಿಸಿಕೊಂಡು ವಿಮಾನದಲ್ಲಿ
ಹೋದ.
ಈಗ ರಾವಣ ತನ್ನನ್ನು ಕದ್ದುಕೊಂಡು
ಹೋದ ಎಂಬ ವಿಷಯವನ್ನು ರಾಮನಿಗೆ
ತಿಳಿಸುವುದು ಹೇಗೆ?
ಕೊನೆಗೆ ಸೀತಮ್ಮ
ಒಂದು ಉಪಾಯ ಮಾಡಿದರು. ತನ್ನ ತಲೆಯಲ್ಲಿದ್ದ ಹೂಮಾಲೆಯನ್ನು ತೆಗೆದು
ವಿಮಾನದಿಂದ ಕೆಳಕ್ಕೆ
ಎಸೆದಳು.
ಹಾಗೆ ಹೂಮಾಲೆ
ಬಿದ್ದ ಜಾಗವೇ ಈ ಪೂಮಲೆ ಬೆಟ್ಟ’
‘ಸರಿಯಾಗಿ ಬರ್ಕೊಂಡ್ರಾ
ಇಲ್ವಾ?
‘ಬರ್ಕೊಂಡೆ’
ಬೆಳಕೇರುವವರೆಗೂ ಅಜ್ಜನ ಕತೆ ಸಾಗಿತ್ತು.
ಕಾಡಿನಲ್ಲಿ ಸೀತೆ ಮಲ್ಲಿಗೆ ಹೂ ಬೆಳೆಸಿದ್ದು, ಬಂಡೆ ಮೇಲೆ ಕುಳಿತು
ಋಷಿಪತ್ನಿಯರಿಗೆ ಕತೆ ಹೇಳಿದ್ದು, ಹಾಸುಗಲ್ಲಿನ
ಮೇಲೆ ರಾಮ ತನ್ನ ಪಾದದ ರೇಖೆ ಮೂಡಿಸಿದ್ದು...ಯಾವುದೋ ಪುಟ್ಟ ಹಕ್ಕಿಗೆ ಸೀತೆ ತನ್ನ ಹೆಸರನ್ನೇ
ಇಟ್ಟದ್ದು.. ಹೀಗೆ ಅದು ಬೆಳೆಯುತ್ತಲೇ ಇತ್ತು.
ಮುಂದೆ ನಾನು ಪೂಮಲೆ ಸುತ್ತಿದಾಗಲೆಲ್ಲ ನನಗೆ ಕಂಡದ್ದು ಸೀತೆ ಎಸೆದ ಮಲ್ಲಿಗೆ
ಹೂವಿನ ಎಸಳುಗಳು. ಕೇಳಿದ್ದೆಲ್ಲ ಸೀತೆ ಹಕ್ಕಿಯ ಹಾಡುಗಳು.
ಈ ಬಗೆಯ ಕಥನಗಳು ಕಾಲ ಸಾಗಿದಂತೆಲ್ಲ ಬದಲಾಗುತ್ತಲೇ ಹೋದುವು.
1990ರ ದಶಕದಲ್ಲಿ
ನಾನು ಮಂಗಳೂರಿನ
ಸಮೀಪದ ಉಚ್ಚಿಲದ
ಕಡಲ ಕಿನಾರೆಯಲ್ಲಿ ವಾಸಿಸುತ್ತಿದ್ದೆ. ಒಂದು ದಿನ ಸಾಯಂಕಾಲ
ಖಾವಿ ಶಾಲು ಹಾಕಿಕೊಂಡ ಹುಡುಗರ
ಗುಂಪೊಂದು ಮನೆಗೆ ಬಂತು.
ಒಬ್ಬ ಹೇಳಿದ.
‘ ನಾವು ಅಯೋಧ್ಯೆಯಲ್ಲಿ ರಾಮನಿಗೆ
ದೇವಸ್ಥಾನ ಕಟ್ಟ ಬೇಕಾಗಿದೆ. ಅದಕ್ಕಾಗಿ
ಈ ಇಟ್ಟಿಗೆಯನ್ನು ಅಲ್ಲಿಗೆ
ಕಳಿಸಬೇಕು. ಪ್ರಸಾದ
ತಗೊಳ್ಳಿ, ಹಣ ಕೊಡಿ’
‘ಯಾವ ರಾಮನಿಗೆ
ನೀವು ಅಲ್ಲಿ ದೇವಸ್ಥಾನ ಕಟ್ಟುತ್ತೀರಿ?
‘ಏನು ಹಾಗಂದರೆ?
ನೀವು ಹಿಂದೂ ಅಲ್ಲವೇ?. ಬಾಬ್ರಿ
ಮಸೀದಿ ನಮ್ಮ ಜಾಗ.
ಅವರಲ್ಲೊಬ್ಬ ಸಣ್ಣ ಭಾವಚಿತ್ರವೊಂದನ್ನು ತೆಗೆದು
ನನ್ನ ಮುಂದೆ ಹಿಡಿದ.
ನಾನು ದಿಟ್ಟಿಸಿ
ನೋಡಿದೆ.
ಅದು ಉಗ್ರ ಸ್ವರೂಪೀ ರಾಮನ ಚಿತ್ರವಾಗಿತ್ತು, ಕೈಯಲ್ಲಿ
ಹೆದೆಯೇರಿಸಿದ ಬಿಲ್ಲು,
ಮುಖದಲ್ಲಿ ರೌದ್ರ ಭಾವ, ಯಾರನ್ನೋ ಕೊಲ್ಲುವ
ತವಕ. ರಕ್ಷಕ ರಾಮ ಸರ್ವನಾಶಕ್ಕೆ ಸಿದ್ಧನಾಗಿರುವಂತೆ ತೋರಿತು.
ಬಂಟಮಲೆಯ ಬುಡದಲ್ಲಿದ್ದ ನನ್ನ ಗುಡಿಸಲಿನ ಗೋಡೆಯಲ್ಲಿ
ನೇತಾಡುತ್ತಿದ್ದ ಹರಕಲು ಕ್ಯಾಲಂಡರಿನ ಸೌಮ್ಯ ಸ್ವರೂಪೀ
ರಾಮ ಬದಲಾಗಿದ್ದ.
ಬಂದ ಜನರ ಹಾವ ಭಾವ, ಭಾಷೆ ನೋಡಿದಾಗ
ಕಥನ ಬದಲಾಗಿದೆ
ಅಂತನ್ನಿಸಿತು. ರಾಮಾಯಣದ
ಅವರ ಹೊಸ ಕಥನದಲ್ಲಿ ಅಮ್ಮನಿರಲಿಲ್ಲ, ಅಜ್ಜನಿರಲಿಲ್ಲ, ಹಕ್ಕಿಗಳಿರಲಿಲ್ಲ, ಹೂವಿನ ಎಸಳುಗಳೂ ಇರಲಿಲ್ಲ.
ಕಾಲ ಬದಲಾದಂತೆ
ಹಳೆಯವು ನಶಿಸಿ, ಹೊಸ ಕಥನಗಳು
ಹುಟ್ಟಿಕೊಳ್ಳುತ್ತವೆ. ನಿಧಾನವಾಗಿ
ಅವು ತಾವು ಹುಟ್ಟಿ ಬೆಳೆದ ಪರಿಸರವನ್ನೇ ನಿಯಂತ್ರಿಸುವಷ್ಟು ಪ್ರಬಲವಾಗಿ
ಬೆಳೆಯುತ್ತವೆ. ಅವಕ್ಕೆ
ರಾಜಕೀಯ ಬೆಂಬಲ ದೊರೆತಾಗ ಅವು ಸ್ಥಳ, ಕಾಲ ಮತ್ತು ಸಮುದಾಯ
ಬದ್ಧತೆಗಳನ್ನು ಮೀರಿ ಸಾರ್ವತ್ರಿಕವಾದಂತೆ ಕಾಣುತ್ತವೆ.
ಹಳೆಯ ಕಥನಗಳು
ಮಾನವ ಮತ್ತು ಪ್ರಕೃತಿಯ ಸಂಯೋಜನೆಯಲ್ಲಿ ಹಸನಾಗಿ
ರೂಪುಗೊಳ್ಳುತ್ತಿದ್ದುವು. ಇಲ್ಲಿನ
ಮಾನವ ಲೋಕದಲ್ಲಿ
ಭಾಗವಹಿಸುವ ಗಂಡು ಮತ್ತು ಹೆಣ್ಣುಗಳ
ನಡುವೆ ಅಂತಹಾ ವ್ಯತ್ಯಾಸ ವೇನೂ ಇರುವುದಿಲ್ಲ. ಕೋಟಿ ಚೆನ್ನಯ
ಪಾಡ್ದನದಲ್ಲಿ ಗಂಡು ಮತ್ತು ಹೆಣ್ಣು
ಹಕ್ಕಿಗಳು ರೆಕ್ಕೆ
ಜೋಡಿಸಿ ಮೊಟ್ಟೆಯನ್ನು ಸಾಗಿಸುವ
ಹಾಗೆ, ಮತ್ತು ಅಣ್ಣ ಕಲ್ಕುಡನಿಗಾದ ಅನ್ಯಾಯಕ್ಕೆ
ತಂಗಿ ಕಲ್ಲುರ್ಟಿ
ಸೇಡು ತೀರಿಸಿಕೊಳ್ಳುವ ಹಾಗೆ. ಅದೇ ರೀತಿಯಲ್ಲಿ
ಪ್ರಕೃತಿಯಲ್ಲಿರುವ ಪ್ರಾಣಿಗಳು
ಮತ್ತು ಪಕ್ಷಿಗಳು
ಕೂಡಾ ಕಥನಗಳಲ್ಲಿ
ಸಮ ಬಗೆಯ ಜವಾಬ್ದಾರಿಯನ್ನು ಹೊರುತ್ತವೆ.
ಜನಪದ ಕಥನವೊಂದರಲ್ಲಿ ಬಿಕ್ಕಟ್ಟಿನಲ್ಲಿರುವ ಹುಡುಗಿಯೊಬ್ಬಳು ಮನೆಯಿಂದ
ಹೊರಗೆ ಹೋಗಲು ಇಲಿ ಮರಿ ಸಹಕರಿಸುತ್ತದೆ. ಹೊರಗೆ ಹೋದ ಆಕೆ ಕೆರೆ ಬದಿಯ ಮರವೇರುತ್ತಾಳೆ. ಆಗ ಮರ ತಾನೇ ಬೆಳೆಯುತ್ತಾ ಬೆಳೆಯುತ್ತಾ
ಆಕೆಯನ್ನು ಚಂದ್ರಲೋಕ್ಕೆ ಕಳಿಸಿಬಿಡುತ್ತದೆ.
ಆದರೆ ಈಚಿನ ಕಥನಗಳು ಪ್ರಕೃತಿಯ
ಒಳಗೊಳ್ಳುವಿಕೆಯನ್ನು ತಿರಸ್ಕರಿಸಿ
ಕೇವಲ ಮಾನವ ಕೇಂದ್ರಿತವಾಗಿ ಬೆಳೆಯುತ್ತಿವೆ. ಇದಕ್ಕೆ
ಬಹಳ ಮುಖ್ಯವಾದ
ಕಾರಣವೆಂದರೆ ಆಧುನಿಕ
ಮನುಷ್ಯ ಸ್ಪರ್ಧಾತ್ಮಕ ಆರ್ಥಿಕತೆಯ
ಹಿಂದೆ ಬಿದ್ದಿರುವುದು. ಹೇಗಾದರೂ
ಹಣ ಸಂಪಾದಿಸುವುದೇ ಜೀವನದ ಗುರಿಯೆಂಬ ಹೊಸ ಕಥನವನ್ನು ಸಮಕಾಲೀನ
ಜಗತ್ತು ಒಪ್ಪಿಕೊಂಡಂತಿದೆ. ಇಂಥಲ್ಲಿ ಸಹಜವಾಗಿಯೇ
ಚಿಂತನೆಗಳನ್ನು ಉದ್ದೀಪಿಸುವ,
ಮಾನವತೆಯನ್ನು ಬೆಳೆಸುವ,
ಪ್ರಕೃತಿಯನ್ನು ಪ್ರೀತಿಸುವ
ಹಾಗೆ ಮಾಡುವ, ಸಹಮಾನವರನ್ನು ತನ್ನಂತೆಯೇ
ಪರಿಭಾವಿಸಲು ಕಲಿಸುವ
ಕಥನಗಳಿಗೆ ಮಹತ್ವ ಕಡಿಮೆಯಾಗುತ್ತದೆ. ಈ ನಡುವೆ, ಇಂಥ ವಿಷಯಗಳ ಕುರಿತು
ತಿಳುವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು
ಸರಕಾರಗಳೂ ಮರೆತಿವೆ,
ಶಿಕ್ಷಣ ಸಂಸ್ಥೆಗಳೂ
ಮರೆತಿವೆ. ಜನರ ನೈತಿಕತೆಯನ್ನು ಹೆಚ್ಚಿಸಲು,
ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು,
ಪ್ರಜಾಪ್ರಭುತ್ವದ ಬೇರುಗಳನ್ನು
ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು
ತೀಕ್ಷ್ಣಗೊಳಿಸಲು ಸರಕಾರಗಳು
ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ ವರ್ತಮಾನ
ಕಾಲದಲ್ಲಿ ಸರಕಾರಗಳೇ
ಅಂಥ ಪ್ರಕ್ರಿಯೆಗಳಿಗೆ ವಿರೋಧವಾಗಿವೆ.
ಸಾಮಾಜಿಕ ಜಾಲತಾಣಗಳೂ
ಸೇರಿದಂತೆ, ಮಾಧ್ಯಮಗಳು
ಸೃಷ್ಟಿಸುತ್ತಿರುವ ಹೊಸ ಕಥನಗಳು ಬಹುಮಟ್ಟಿಗೆ
ಮಾನವ ವಿರೋಧಿಯಾಗಿವೆ, ದ್ವೇಷವನ್ನು
ಕಲಿಸುತ್ತಿವೆ. ಜೊತೆಗಿರುವ
ಮನುಷ್ಯರನ್ನು ಅಪಹಾಸ್ಯ
ಮಾಡುತ್ತವೆ. ದೇಶದ ನೇತಾರರೆಂದು ಘೋಷಿಸಿಕೊಂಡವರು ದೇಶಕ್ಕೆ
ಕಟ್ಟಿಕೊಡುವ ಕಥನಗಳು
ಮನುಕುಲಕ್ಕೇ ಮಾರಕವಾಗಿವೆ.
ಇದರ ಒಟ್ಟು ಪರಿಣಾಮವೋ ಎಂಬಂತೆ
ಭಾರತದಲ್ಲಿ ಈಗ ಸ್ವಕೇಂದ್ರಿತ ಕಥನಗಳೇ
ಮೇಲುಗೈ ಪಡೆದು, ನಾನು ಆರಂಭದಲ್ಲಿ
ಹೇಳಿದ ಸಮೂಹ ಕೇಂದ್ರಿತ ಬೌದ್ಧಿಕತೆ
ಕಳೆಗುಂದುತ್ತಿದೆ. ಸಮಕಾಲೀನ
ಭಾರತವು ಹೀಗೆ ಮನುಷ್ಯತ್ವವನ್ನೇ ಗೌಣಗೊಳಿಸುತ್ತಿರುವಾಗ ಅದನ್ನು
ದಿಟ್ಟವಾಗಿ ಇದಿರಿಸುವ
ಎಚ್ಚರವನ್ನೂ ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತೋರಿಸುತ್ತಿಲ್ಲವಾದ್ದರಿಂದ ಪಾರಂಪರಿಕ
ಕಥನಗಳ ಅವನತಿ ಅನಿವಾರ್ಯವಾಗುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆಗಳನ್ನೇ ಗಮನಿಸೋಣ. ಶಿಕ್ಷಣದ ಪಠ್ಯಕ್ರಮ,
ಮಾಧ್ಯಮ, ಸಂಶೋಧನೆ/ಅಧ್ಯಯನ, ಬೋಧನಾ ವಿಧಾನ ಮತ್ತು ಮೌಲ್ಯಮಾಪನಗಳು ಇವತ್ತು
ತೀವ್ರವಾದ ಬದಲಾವಣೆಗಳಿಗೆ ಒಳಗಾಗುತ್ತಿವೆ. ಜ್ಞಾನದ
ಅಂತಾರಾಷ್ಟ್ರೀಯಕರಣವು ಇವತ್ತಿನ
ಅಗತ್ಯ ಎಂಬ ಹೊಸ ಕಥನವನ್ನು
ಆರಂಭಿಸಿದವರು ಬಹುರಾಷ್ಟ್ರೀಯ ಉದ್ಯಮಿಗಳು.
ಅದನ್ನು ಹೆಚ್ಚು
ವಿಮರ್ಶಿಸದೆ ಜಗತ್ತು
ಒಪ್ಪಿಕೊಂಡಿತು. ತೊಂಭತ್ತರ ದಶಕದಿಂದೀಚೆಗಣ ಉದಾರೀಕರಣ,
ಜಾಗತೀಕರಣ, ಖಾಸಗೀಕರಣ,
ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು
ಜನರನ್ನು ಇಂಥ ಕಥನವೊಂದನ್ನು ಸಾಧ್ಯ ಮಾಡಿತು. ‘ ವಿಶ್ವದ ಕುರಿತಾದ
ಭಾರತದ ತಿಳುವಳಿಕೆಗಳಿಗಾಗಿ ಹಾಗೂ ಭಾರತದ ಕುರಿತಾಗಿ
ವಿಶ್ವದ ತಿಳುವಳಿಕೆಗಾಗಿ ಈ ಅಂತಾರಾಷ್ಟ್ರೀಯಕರಣ ಪ್ರಕ್ರಿಯೆ
ಅಗತ್ಯ’ ಎಂದು ಸಹಜವಾಗಿ ಅನೇಕರು
ಭಾವಿಸಿದರು. ಇದರ ತಕ್ಷಣದ
ಪರಿಣಾಮ ಎಂದರೆ, ‘ಅನುತ್ಪಾದಕ’ ವಸ್ತುವಾಗಿದ್ದ ಶಿಕ್ಷಣ ಕ್ಷೇತ್ರವು
ಲಾಭದಾಯಕ ಉದ್ದಿಮೆಯಾಗಿ ಮಾರ್ಪಾಡಾದದ್ದು. ಹಣ ಮಾಡುವ ಸೂಚನೆ ದೊರೆಯುತ್ತಿದ್ದಂತೆಯೇ ದೊಡ್ಡ ಮಟ್ಟದಲ್ಲಿ ಖಾಸಗೀ ವಿಶ್ವವಿದ್ಯಾಲಯಗಳು, ಡೀಮ್ಡ್
ವಿಶ್ವವಿದ್ಯಾಲಯಗಳು, ಮತ್ತು ವಿದೇಶಿ ವಿಶ್ವವಿದ್ಯಾಲಯಗಳು ಎಲ್ಲೆಂದರಲ್ಲಿ ತಲೆ ಎತ್ತಿದುವು. ಅಮೇರಿಕಾ,
ಆಸ್ಟ್ರೇಲಿಯಾ, ನ್ಯೂಜಿಲೇಂಡ್ ಮೊದಲಾದ
ದೇಶಗಳು ಶಿಕ್ಷಣ ಸಂಸ್ಥೆಗಳ
ಮೂಲಕವೇ ತಮ್ಮ ಬೊಕ್ಕಸಗಳಿಗಳಿಗೆ ಬಿಲಿಯನ್
ಡಾಲರ್ ಗಳ ಸಂಪಾದನೆ ಮಾಡಿ, ಶಿಕ್ಷಣವು ಹೇಗೆ ಒಂದು ಲಾಭದಾಯಕ
ಉದ್ದಿಮೆ ಎಂಬುದನ್ನು
ಜಗತ್ತಿಗೇ ತೋರಿಸಿಕೊಟ್ಟರು. ಈ ವಿಷಯದಲ್ಲಿ ಭಾರತವೂ
ಹಿಂದೆ ಬೀಳಲಿಲ್ಲ.
10ನೇ ಪಂಚವಾರ್ಷಿಕ
ಯೋಜನೆಯಲ್ಲಿ ಉನ್ನತ ಶಿಕ್ಷಣವನ್ನು ‘ಕೈಗಾರಿಕೆಗಳಲ್ಲಿ ಒಂದು’ ಎಂದು ಎಂದು ಭಾರತ ಘೋಷಿಸಿತು.
ಈ ಯೋಜನೆಯ
ಭಾಗವಾಗಿ ಶಿಕ್ಷಣದಲ್ಲಿ ಹಲವು ಬದಲಾವಣೆಗಳು ಕ್ಷಿಪ್ರವಾಗಿ ಕಾಣಿಸಿಕೊಂಡವು. ಅದರಲ್ಲಿ
ಮುಖ್ಯವಾಗಿ, 2020ನೇ ಇಸವಿಯ ಹೊತ್ತಿಗೆ
ಭಾರತದ ಬಹುತೇಕ
ವಿಶ್ವವಿದ್ಯಾಲಯಗಳಲ್ಲಿ ವಿದೇಶೀ
ವಿದ್ಯಾರ್ಥಿಗಳು ವ್ಯಾಸಂಗ
ಮಾಡಲಿದ್ದಾರೆ. ಈ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ
ಪಠ್ಯಕ್ರಮ, ಅಧ್ಯಯನದ
ಅವಧಿ ಮತ್ತು ಮೌಲ್ಯಮಾಪನ ವಿಧಾನಗಳಲ್ಲಿ ಸೂಕ್ತವಾದ
ಬದಲಾವಣೆಗಳನ್ನು ಮಾಡಿಕೊಳ್ಳಲು ದೇಶ ತಯಾರಾಗುತ್ತಿದೆ. ಜೊತೆಗೆ
ಅಧ್ಯಯನ ಮಾಡಲು ಆಗಮಿಸುವ ವಿದ್ಯಾರ್ಥಿಗಳು ವಿಭಾಗಗಳ
ಗೋಡೆಗಳನ್ನು ನಿಧಾನವಾಗಿ
ಒಡೆಯುವ ಸೂಚನೆಗಳೂ
ದೊರೆತಿವೆ. ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ
ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿ ವಿನಿಮಯ
ಕಾರ್ಯಕ್ರಮಗಳು ಜ್ಯಾರಿಗೆ
ಬರಲಾರಂಭಿಸಿವೆ. ಅತ್ಯುತ್ತಮ ಶಿಕ್ಷಣದ
ರಫ್ತಿಗಾಗಿ ವಿಶೇಷ ವಲಯಗಳ ಸ್ಥಾಪನೆಯಾಗುತ್ತಲಿದೆ.
ಮೇಲಿನ ಬದಲಾವಣೆಗಳು
ಶಿಕ್ಷಣದ ಸ್ವರೂಪವನ್ನು ಅಮೂಲಾಗ್ರವಾಗಿ ಬದಲಾಯಿಸುತ್ತಿವೆ. ಪರಿಣಾಮವಾಗಿ,
ಇಂದು ಶಿಕ್ಷಣವು
ಒಂದು ರಾಜ್ಯದ,
ಒಂದು ವಿಶ್ವವಿದ್ಯಾಲಯದ, ಅಥವಾ ಒಂದು ದೇಶದ ಗಡಿಗೆ ಸೀಮಿತವಾಗಿ
ಉಳಿಯದೆ, ‘ಸೀಮಾತೀತ’ ವಾಗುತ್ತಿದೆ.
ಸ್ಥಳೀಯ ಸಾಂಸ್ಕೃತಿಕ
ಮತ್ತು ಪ್ರಾದೇಶಿಕ ವಿಶಿಷ್ಟತೆಗಳೆಲ್ಲ ಮರೆಸಿ, ‘ವಾಸನೆ ಬಣ್ಣ ರಹಿತವಾದ’ ಏಕರೂಪದ
ವ್ಯವಸ್ಥೆಯೊಂದು ಜ್ಯಾರಿಗೆ
ಬರುತ್ತಿದೆ. ಆರ್ಥಿಕ
ಕೇಂದ್ರಿತ ಮಾರುಕಟ್ಟೆಯ
ಧ್ಯೇಯ ಧೋರಣೆಗಳು
ಸರಕಾರದ ಮೂಲಕವೇ
ಜನರನ್ನು ನಿಯಂತ್ರಿಸುತ್ತಿವೆ. ಯಾರು, ಯಾವ ಪಠ್ಯವನ್ನು
ಓದಬೇಕು, ಯಾವ ವ್ಯಾಸಂಗಕ್ಕೆ ಮಾರುಕಟ್ಟೆಯಲ್ಲಿ ಅಧಿಕ ಬೇಡಿಕೆ ಇದೆ? ಎಂಬುದನ್ನು ಗಮನಿಸಿ
ಹೊಸ ಹೊಸ ಕೋರ್ಸುಗಳು ಶರವೇಗದಲ್ಲಿ
ಆರಂಭವಾಗುತ್ತಿವೆ. ಇಂಥ ಕಡೆ ಮಾನವಿಕಗಳನ್ನು ಕೇಳುವವರಿಲ್ಲವಾಗಿದೆ. ನಮ್ಮದೇ ಆದ ಹಳೆಯ ಕಥನಗಳು
ಮೂಲೆ ಸೇರಿವೆ.
ಭಾಷೆ, ಸಾಹಿತ್ಯ
ಮತ್ತು ಸಂಸ್ಕೃತಿಗಳ
ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಮಾತನ್ನು
ಯಾರೂ ಕೇಳುತ್ತಿಲ್ಲ. ಇಂಥ ಬೆಳವಣಿಗೆಗಳು ನಾಗರೀಕತೆಯ
ಸುದೀರ್ಘ ವಿಕಾಸ ಕ್ರಮದಲ್ಲಿ ಕಪ್ಪು ಅಧ್ಯಾಯವೆಂದು ಸದಾ ದಾಖಲಾಗುತ್ತಲೇ ಬಂದಿದೆ.
No comments:
Post a Comment