Friday, April 26, 2019

ಅರೆಭಾಷೆಯ ಸಬಲೀಕರಣದ ಸುತ್ತ ಮುತ್ತ


ಅರೆಭಾಷೆಯ ಸಬಲೀಕರಣದ ಸುತ್ತ ಮುತ್ತ

ಪ್ರಸ್ತುತ ಸಂಪ್ರಬಂಧಕ್ಕೆ ಪ್ರಧಾನವಾಗಿ ಮೂರು ಉದ್ದೇಶಗಳಿವೆ-
1.    ಅರೆಭಾಷೆಯಂಥ ಸಣ್ಣ ಭಾಷೆಯನ್ನು ದೇಶದ ಜನಗಣತಿಯ ಸಂದರ್ಭದಲ್ಲಿರಿಸಿ ಚರ್ಚಿಸುವುದರ ಮೂಲಕ ಸಣ್ಣ ಭಾಷೆಗಳ ಸಬಲೀಕರಣದ ಸಮಸ್ಯೆಗಳತ್ತ ಬೆಳಕು ಚೆಲ್ಲುವುದು.
2.    ಅರೆಭಾಷೆಯ ಚಾರಿತ್ರಿಕ ಬೆಳವಣಿಗೆ ಮತ್ತು ಅದರ ಅನನ್ಯತೆಯನ್ನು ಪರಿಶೀಲಿಸುವುದು ಮತ್ತು
3.    ಅರೆಭಾಷೆಯ ಸಬಲೀಕರಣಕ್ಕೆ ಕೆಲವು ಸಲಹೆಗಳನ್ನು ನೀಡುವುದು.
ನಮ್ಮ ದೇಶದಲ್ಲಿ ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಸಲಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ 1951ರಲ್ಲಿ  ಜನಗಣತಿ ನಡೆದಿದ್ದರೂ, ಕಾರಣಾಂತರಗಳಿಂದ ಅದರ ವರದಿಗಳು ಸಮರ್ಪಕವಾಗಿರಲಿಲ್ಲ. ಹಾಗಾಗಿ 1961ರ ಜನಗಣತಿಯನ್ನೇ ಇವತ್ತು ನಾವು ಅಧಿಕೃತವೆಂದು ಪರಿಗಣಿಸುತ್ತೇವೆ. ಮುಂದೆ 1971, 1981, 1991 ಮತ್ತು 2001ರಲ್ಲಿ ಜನಗಣತಿ ನಡೆಸಲಾಗಿತ್ತು. 2011ರಲ್ಲಿ ಮತ್ತೆ ಜನಗಣತಿ ನಡೆಸಲಾಗಿತ್ತಾದರೂ ಯಾವುದೋ ಕಾರಣಕ್ಕೆ ಅದರ ಫಲಿತಾಂಶಗಳನ್ನು ಬಹಳಕಾಲದವರೆಗೆ ಬಹಿರಂಗಗೊಳಿಸಿರಲಿಲ್ಲ. ಇದೀಗ ಮುಂದಿನ ಜನಗಣತಿ 2021ರಲ್ಲಿ ನಡೆಯುವ ಕೇವಲ ಮೂರು ವರುಷಗಳ ಮುನ್ನ 2011ರ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿದೆ. ಸರಕಾರ ತಾನೇ ಸಂಗ್ರಹಿಸಿದ ಮಾಹಿತಿಗಳನ್ನು ವರ್ಗೀಕರಿಸಿ ಸಾರ್ವಜನಿಕರೆದುರು ಮಂಡಿಸಲು ಏಳು ವರ್ಷಗಳನ್ನು ತೆಗೆದುಕೊಂಡಿದೆ ಎಂಬ ಅಂಶವು ಡಿಜಿಟಲ್ ಭಾರತಕ್ಕೆ ಒಳ್ಳೆಯ ಹೆಸರೇನನ್ನೂ ತಂದುಕೊಡದು. ಜೊತೆಗೆ ಈ ಕೆಲಸ ಎಷ್ಟು ಸಂಕೀರ್ಣವಾದುದು ಮತ್ತು ಕ್ಲಿಷ್ಟಕರವಾದುದು  ಎಂಬುದೂ ಇದರಿಂದ ಸ್ಪಷ್ಟವಾಗುತ್ತದೆ.
ಏನೇ ಇರಲಿ, ತಡವಾಗಿಯಾದರೂ ಅತ್ಯಂತ ಅಮೂಲ್ಯವಾದ ಮಾಹಿತಿಗಳು  ಇದೀಗ ನಮಗೆ ಲಭ್ಯವಿದೆ. ಇದರಲ್ಲಿರುವ ಭಾಷಾ ಸಂಬಂಧಿಯಾದ ಕೆಲವು   ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡು ಅರೆಭಾಷೆಯ ಕಡೆಗೆ ನಿಮ್ಮ ಗಮನ ಸೆಳೆಯುವುದು ಈ ಪ್ರಬಂಧದ ಈ ಭಾಗದ ಉದ್ದೇಶವಾಗಿದೆ. 
ಭಾಷೆಗೆ ಸಂಬಂಧಿಸಿದಂತೆ 1971ರಿಂದಲೂ ಕೇಂದ್ರ ಸರಕಾರ ಒಂದು ಧೋರಣೆಯನ್ನು ಸ್ಪಷ್ಟವಾಗಿ ಅನುಸರಿಸುತ್ತಲೇ ಬಂದಿದೆ. ಅದೆಂದರೆ 10 ಸಾವಿರ ಮತ್ತು ಅದಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳನ್ನು ಮಾತ್ರ ಅದು ವಿಶ್ಲೇಷಣೆಗೆ ಬಳಸಿಕೊಳ್ಳುತ್ತದೆ. ಈ ನಿಲುವಿನಿಂದಾಗಿ  ನಮ್ಮ ದೇಶದ ಅನೇಕ ಸ್ವತಂತ್ರ ಭಾಷೆಗಳ ಹೆಸರುಗಳು ( ಉದಾ: ಕೊರಗ ಭಾಷೆ) ಇಲ್ಲಿ ಲಭ್ಯವಾಗುವುದೇ ಇಲ್ಲ. ಉಪಭಾಷೆಗಳನ್ನೂ ಅದು ಗಮನಿಸುವುದಿಲ್ಲ. ಕಾರಣ, ಅರೆಭಾಷೆ, ಹವ್ಯಕ ಭಾಷೆ, ಕುಂದಾಪುರ ಕನ್ನಡದಂಥ ಭಾಷೆಗಳ ಬಗೆಗೆ ಯಾವ ವಿವರಗಳೂ ದೊರೆಯುವುದಿಲ್ಲ. ಈ ಮಿತಿಯೊಳಗೆ 2011ರ ಜನಗಣತಿಯು ಒಟ್ಟು 19569 ಭಾಷೆಗಳನ್ನು ಮಾತೃಭಾಷೆಗಳೆಂದು ಮನ್ನಿಸುತ್ತದೆ. ಅಚ್ಚರಿಯೆಂದರೆ 2001ರ ಜನಗಣತಿಯು ಕೇವಲ 1636 ಭಾಷೆಗಳನ್ನು ಮಾತ್ರ ಪಟ್ಟಿ ಮಾಡುತ್ತದೆ. ಕೇವಲ 10 ವರ್ಷಗಳಲ್ಲಿ ಸುಮಾರು 18 ಸಾವಿರ ಭಾಷೆಗಳು ಹೆಚ್ಚಾಗಲು ಸರಕಾರವು ತನ್ನ ಕೆಲವು ಮಾನದಂಡಗಳನ್ನು ಬದಲಾಯಿಸಿದ್ದೇ ಕಾರಣ. ಈ ಬಗೆಯ ಬದಲಾದ ಮಾನದಂಡಗಳಿಂದಾಗಿ ನಾವು ಇದುವರೆಗೆ ಮಾತೃಭಾಷೆಗಳ ಬಗ್ಗೆ ತೆಗೆದುಕೊಂಡ ಅನೇಕ ತೀರ್ಮಾನಗಳು ಹಾಸ್ಯಾಸ್ಪದವಾಗಿಬಿಟ್ಟವು.  ಒಟ್ಟಾರೆಯಾಗಿ ಇದರ ಅರ್ಥವಿಷ್ಟೆ- ಸರಕಾರಗಳು ಒದಗಿಸುವ ಅಂಕಿ ಅಂಶಗಳನ್ನು ಆಧರಿಸಿ ನಾವು ಭಾಷೆಯೊಂದರ ಅಭಿವೃದ್ಧಿಯ ಬಗೆಗೆ ಏನಾದರೂ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕಷ್ಟ. 2011ರ ಜನಗಣತಿಯ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆ 40. ಒಂದು ಲಕ್ಷಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 60. 10 ಸಾವಿರಕ್ಕಿಂತ ಹೆಚ್ಚು ಜನರು ಮಾತಾಡುವ ಭಾಷೆಗಳ ಸಂಖ್ಯೆಯು 122.
2011ರ ಜನಗಣತಿಯು ವರದಿ ಮಾಡಿದ ಪ್ರಕಾರ 19569 ಮಾತೃ ಭಾಷೆಗಳಲ್ಲಿ ಸ್ವತಂತ್ರ ಭಾಷೆಗಳು ಸಂಖ್ಯೆ ಒಟ್ಟು 121. ಇದರಲ್ಲಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳ ಸಂಖ್ಯೆ ಕೇವಲ 22. ಆದರೆ ಅದು ದೇಶದ ಒಟ್ಟು 96.71 ಶೇಕಡಾ ಜನರನ್ನು (117,11,03,853 ಕೋಟಿ ) ಪ್ರತಿನಿಧಿಸುತ್ತದೆ. ಈಗ ಸಂವಿಧಾನದ ಮನ್ನಣೆ ಪಡೆಯಲು ಕಾದು ಕುಳಿತಿರುವ ಸ್ವತಂತ್ರ ಭಾಷೆಗಳ ಸಂಖ್ಯೆ ಒಟ್ಟು 99. ಆದರೆ ಇದು ದೇಶದ 3.29 (39751124 ಕೋಟಿ) ಶೇಕಡಾ ಜನರನ್ನು ಮಾತ್ರ ಪ್ರತಿನಿಧಿಸುತ್ತದೆ.
ಈ ಅಂಕಿ ಅಂಶಗಳು 2001ರ ಜನಗಣತಿಯಿಂದ ತುಂಬ ಬೇರೆಯಾಗಿಯೇನೂ ಇಲ್ಲ. ಅಲ್ಲಿ 8ನೇ ಪರಿಚ್ಛೇದಕ್ಕೆ ಸೇರಬೇಕಾದ ಭಾಷೆಗಳ ಸಂಖ್ಯೆಯನ್ನು 100 ಎಂದು ಹೇಳಲಾಗಿದೆ. 2011ರ ಜನಗಣತಿಯಲ್ಲಿ ಸಿಮ್ಟೆ ಮತ್ತು ಪರ್ಶಿಯನ್ ಭಾಷೆಗಳನ್ನು (10 ಸಾವಿರ ಜನರ ಭಾಷೆಯಾಗಿರದೇ ಇರುವುದರಿಂದ) ತೆಗೆದು ಹಾಕಿ, ಅಲ್ಲಿಗೆ ಮಾವೋ ಭಾಷೆಯನ್ನು ಸೇರಿಸಲಾಗಿದೆ. 
8ನೇ ಪರಿಚ್ಛೇದಕ್ಕೆ ಸೇರಿರುವ ಭಾಷೆಗಳಲ್ಲಿ ಹಿಂದಿಯು 52,83,47,193 ಕೋಟಿ ಜನರನ್ನು ಹೊಂದಿದ್ದು ( ಶೇಕಡಾ 43.63) ಪ್ರಥಮ ಸ್ಥಾನದಲ್ಲಿದೆ. 4,3706512 ಜನರನ್ನು ಹೊಂದಿರುವ ( ಶೇಕಡಾ 3.61) ಕನ್ನಡವು ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಬಂಗಾಲಿ ( ಶೇಕಡಾ 8.3), ಮರಾಠೀ( ಶೇಕಡಾ 6.86) , ತೆಲುಗು ( ಶೇಕಡಾ 6.70), ತಮಿಳು ( ಶೇಕಡಾ 5.70), ಗುಜರಾತೀ ( ಶೇಕಡಾ 4.58) ಮತ್ತು ಉರ್ದು ( ಶೇಕಡಾ 4.19) ಭಾಷೆಗಳು ಸಂಖ್ಯಾ ದೃಷ್ಟಿಯಿಂದ ಕನ್ನಡಕ್ಕಿಂತ ಮೇಲಿವೆ. ಸಂಸ್ಕೃತವನ್ನು ಮಾತೃಭಾಷೆಯೆಂದು ದಾಖಲಿಸಿದವರ ಸಂಖ್ಯೆ ಒಟ್ಟು 24821 ಮಾತ್ರ. ಕರ್ನಾಟಕದ ಒಟ್ಟು ಜನಸಂಖ್ಯೆ 6,10,95,297 ಆಗಿದ್ದು ಇದರಲ್ಲಿ  43706512  ತಮ್ಮ ಮಾತೃಭಾಷೆಯನ್ನು ಕನ್ನಡವೆಂದು ಅಂಗೀಕರಿಸಿಕೊಂಡಿದ್ದಾರೆ. ಉಳಿದ 2154853  ಜನರು ಕರ್ನಾಟಕದಲ್ಲಿರುವ ಬೇರೆ ಭಾಷೆಯವರಾಗಿದ್ದಾರೆ. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಒಂದು ನಿರ್ದಿಷ್ಟ ಭಾಷೆಯನ್ನು ಆಡುವವರ ಸಂಖ್ಯೆಯಲ್ಲಿ ಕಂಡು ಬರುವ ಏರಿಳಿತಗಳು. 1971ರಿಂದ 2011ರ ಅಂಕಿ ಅಂಶಗಳನ್ನು ಗಮನಿಸಿದರೆ, ಕನ್ನಡ ಮಾತಾಡುವವರ ಸಂಖ್ಯೆಯಲ್ಲಿ ಅತ್ಯಂತ ಕಡಿಮೆ ಎಂದರೆ ಸರಾಸರಿ ಶೇಕಡಾ 3.75 ಮಾತ್ರ ಏರಿಕೆ ಆಗಿದೆ. ಇದು ಹಿಂದಿಯಲ್ಲಿ ಸರಾಸರಿ ಶೇಕಡಾ 42 ಆಗಿದ್ದರೆ ತಮಿಳಿನಲ್ಲಿ ಶೇಕಡಾ ಆರು ಆಗಿದೆ. ಈ ವಿಷಯದಲ್ಲಿ ತುಳುವರು ಕನ್ನಡಕ್ಕಿಂತ ಮುಂದಿದ್ದು ಶೇಕಡಾ ಒಂಬತ್ತು  ಏರಿಕೆ ತೋರಿಸಿದ್ದಾರೆ. ಜನಗಣತಿಯ ಪ್ರಕಾರ ಒಟ್ಟು ತುಳುವರ ಸಂಖ್ಯೆ 18,46,427 ಮಾತ್ರ.
ಈ ನಡುವೆ, 19569 ಮಾತೃ ಭಾಷೆಗಳಿರುವ ಭಾರತದಲ್ಲಿ ಇದೀಗ ಕೇವಲ 22 ಭಾಷೆಗಳನ್ನು ಸಂವಿಧಾನದ ಎಂಟನೆ ಪರಿಚ್ಛೇದಕ್ಕೆ ಸೇರಿಸಿ ಅವುಗಳನ್ನು ಸಬಲೀಕರಣಗೊಳಿಸಲು ಯತ್ನಿಸಲಾಗಿದೆ. ಭಾಷೆಯೊಂದು ಯಾವುದೇ ರಾಜ್ಯದ ಅಧಿಕೃತವಾದ ಭಾಷೆಯೆಂದು ಘೋಷಿಸಲ್ಪಟ್ಟಾಗ ಅದು ಸಹಜವಾಗಿ ಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ. ಇದು ಕಾರಣವಾಗಿ ಭಾರತೀಯ ಸಂವಿಧಾನ ಅಸ್ತಿತ್ವಕ್ಕೆ ಬಂದಾಗ 14 ಭಾಷೆಗಳನ್ನು ಪಟ್ಟಿಗೆ ಸೇರಿಸಲಾಯಿತು. ಮುಂದೆ 1967ರಲ್ಲಿ ಸಿಂಧಿ, 1992ರಲ್ಲಿ ಕೊಂಕಣಿ, ಮಣಿಪುರಿ, ಮತ್ತು ನೇಪಾಲಿ ಭಾಷೆಗಳನ್ನು ಸೇರಿಸಲಾಯಿತು. ಆದರೆ 2003ರಲ್ಲಿ ಭಾರತದ ಸಂವಿಧಾನದಲ್ಲಿ ಬದಲಾವಣೆ ಮಾಡಿ, ಯಾವುದೇ ರಾಜ್ಯದ ಆಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಗಳನ್ನು ಸೇರಿಸಲಾಯಿತು. ಈ ನಾಲ್ಕು ಭಾಷೆಗಳು ಕೇವಲ ಅರ್ಹತೆಯಿಂದ ಸೇರಿವೆ ಎಂದೇನೂ ಭಾವಿಸಬೇಕಾಗಿಲ್ಲ. ಡೋಗ್ರಿ ಭಾಷೆಯ ಹಿಂದೆ ಮಹಾರಾಜಾ ಕರಣ್ ಸಿಂಗ್ ಮತ್ತು ಹೊತ್ತಿ ಉರಿಯುತ್ತಿರುವ ಕಾಶ್ಮೀರ ಸಮಸ್ಯೆ ಸೇರಿಕೊಂಡಿತ್ತು.  ಅಸ್ಸಾಂಗೆ ಭೇಟಿ ನೀಡಿದ್ದ ಆಗಣ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರತ್ಯೇಕ ಬೋಡೋ ಲ್ಯಾಂಡ್ ಕೇಳುತ್ತಿರುವ ಬೋಡೋ ಬುಡಕಟ್ಟಿನ ಜನರನ್ನು ಮೆಚ್ಚಿಸಲು ಬೋಡೋ ಭಾಷೆಗೆ ಮನ್ನಣೆ ನೀಡುವ ಕೆಲಸ ಮಾಡಿದರು. ಮೈಥಿಲಿ ಭಾಷೆಯ ಹಿಂದೆ ಆಗಣ ಗೃಹ ಸಚಿವ ಶ್ರೀ ಎಲ್ ಕೆ ಅದ್ವಾನಿ ಅವರ ಕೆಲಸಗಳಿತ್ತು  ಮತ್ತು ಸಂತಾಲಿ ಭಾಷೆಯ ಹಿಂದೆ ಪಶ್ಚಿಮ ಬಂಗಾಳ ಸರಕಾರದ ಒತ್ತಡವಿತ್ತು.  ಈ 22 ಭಾಷೆಗಳಲ್ಲದೆ ಇತರ ಅನೇಕ ಭಾಷೆಗಳು ಎಂಟನೇ ಪರಿಚ್ಛೇದಕ್ಕೆ ಸೇರಬಯಸಿದಾಗ, ಅಂಥ ಭಾಷೆಗಳನ್ನು ಕೇಂದ್ರ ಸರಕಾರವು 2004ರಲ್ಲಿ  ಸೀತಾಕಾಂತ ಮಹಾಪಾತ್ರ ಸಮಿತಿಗೆ ಒಪ್ಪಿಸಿತು.  ಈ ಸಮಿತಿಯು ಎಂಟನೇ ಪರಿಚ್ಛೇದಕ್ಕೆ ಸೇರಲು ಹೋರಾಡುತ್ತಿರುವ ತುಳು, ಕೊಡವ, ಭೋಜಪುರಿ, ರಾಜಸ್ಥಾನಿ,  ಮೊದಲಾದ ಭಾಷೆಗಳೂ ಸೇರಿದಂತೆ  ಒಟ್ಟು 39 ಭಾಷೆಗಳನ್ನು ಪಟ್ಟಿ ಮಾಡಿ, ಕೊನೆಗೆ ಏನೂ  ಸಾಧಿಸಲಾಗದೆ ಕೈ ಕಟ್ಟಿ ಕುಳಿತುಕೊಂಡಿತು. ಈ ನಡುವೆ ಭಾಷೆಯ ಅಳಿವು ಉಳಿವುಗಳ ಬಗ್ಗೆ  ಎಚ್ಚರ ಮೂಡುತ್ತಿದ್ದಂತೆ ಇದೀಗ ಮತ್ತೆ 60 ಭಾಷೆಗಳು ತಮ್ಮ ಧ್ವನಿ ಎಬ್ಬಿಸಿ, ಹೋರಾಟ ನಡೆಸಲು ಸಜ್ಜಾಗುತ್ತಿವೆ. ಈ ಹೊರಾಟಗಳನ್ನು ಸವಾಲಾಗಿ ಸ್ವೀಕರಿಸಲು ಸಿದ್ಧವಿಲ್ಲದ ಕೇಂದ್ರ ಸರಕಾರವು ಎಂಟನೆಯ ಪರಿಚ್ಛೇದದ ಕೆಲವು ಸವಲತ್ತುಗಳನ್ನೇ ಇದೀಗ ಕಡಿತಗೊಳಿಸಲು ಆರಂಭಿಸಿದೆ. ಉದಾಹರಣೆಗೆ, ಕೇಂದ್ರ ಲೋಕಸೇವಾ ಆಯೋಗವು ಎಂಟನೇ ಪರಿಚ್ಛೇದದಲ್ಲಿ ಹೊಸದಾಗಿ ಸೇರುವ ಭಾಷೆಗಳಲ್ಲಿ ಇದೀಗ ಪರೀಕ್ಷೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಪ್ರತಿ ಭಾಷೆಗೊಂದು ದೂರದರ್ಶನ ವಾಹಿನಿಯನ್ನು ತೆರೆಯಲು ತಮ್ಮಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ ಎಂದು ಪ್ರಸಾರ ಭಾರತಿ ಸ್ಪಷ್ಟ ಪಡಿಸಿದೆ. ಭಾರತದ ಸಣ್ಣ ನೋಟುಗಳಲ್ಲಿ ಅಷ್ಟೊಂದು ಹೆಸರುಗಳನ್ನು ಪ್ರಕಟ ಮಾಡುವುದಾದರೂ ಹೇಗೆ ಎಂದು ರಿಸರ್ವ ಬ್ಯಾಂಕ್ ಹೇಳಿದೆ. ಅನೇಕ ಭಾಷೆಗಳಲ್ಲಿ  ಪರೀಕ್ಷೆಗಳನ್ನು ನಡೆಸಲು ಬೇಕಾದ ವಿದ್ವಾಂಸರಿಲ್ಲ ಎಂದು ಯು ಪಿ ಎಸ್ ಸಿ ಭಾವಿಸಿದೆ. ವಿದ್ವಾಂಸರು ಸೃಷ್ಟಿಯಾಗುವ ಹಾಗೆ ಸರಕಾರ ಏನು ಕ್ರಮ ಕೈಗೊಂಡಿದೆ ಎಂದು ಯಾರಾದರೂ  ಕೇಳಿದರೆ ಯಾರೂ ಉತ್ತರ ಕೊಡುವುದಿಲ್ಲ. ಸರಕಾರಕ್ಕೆ ಸಣ್ಣ ಭಾಷೆಗಳ ಸಬಲೀಕರಣ ಪ್ರಕ್ರಿಯೆಯ ಬಗ್ಗೆ ಯಾವ ಆಸಕ್ತಿಯೂ ಇಲ್ಲ. ಭಾಷೆಗಳ ಬಗೆಗೆ ತಿಳುವಳಿಕೆ ಇಲ್ಲದ ಅದಕ್ಷ ಅಧಿಕಾರಿಗಳ ಮತ್ತು ಮುನ್ನೋಟವಿಲ್ಲದ ರಾಜಕಾರಣಿಗಳ ಸಂಲಗ್ನದಲ್ಲಿ ಭಾರತದ ಅನೇಕ ಭಾಷೆಗಳು ಅವಸಾನದಂಚಿಗೆ ಚಲಿಸುತ್ತಿವೆ. ಈ ನಡುವೆ ಯೂನೆಸ್ಕೋವು ಸಿದ್ಧಪಡಿಸಿದ ಭಾಷೆಗಳ ಜಾಗತಿಕ ಭೂಪಟವು ಭಾರತದಲ್ಲಿನ 172 ಭಾಷೆಗಳನ್ನು ಅಪಾಯದ ಅಂಚಿನಲ್ಲಿರುವ  ಭಾಷೆಗಳೆಂದೂಅದರಲ್ಲಿ 101 ಭಾಷೆಗಳನ್ನು ಅತೀವ ಅಪಾಯದಲ್ಲಿರುವ ಭಾಷೆಗಳೆಂದೂ 71 ಭಾಷೆಗಳನ್ನು ಎಲ್ಲ ಬಗೆಯ ಅಪಾಯಗಳಿಗೆ ಬಲಿಯಾಗುತ್ತಿರುವ ಭಾಷೆಗಳೆಂದೂ ಗುರುತಿಸಿದೆ.  (Christopher Moseley, ed., 2010)
ಆಶ್ಚರ್ಯವೆಂದರೆ ಇಷ್ಟೊಂದು ಸಮಸ್ಯೆಗಳಿದ್ದರೂ ಸರಕಾರ ಅದರ ಕಡೆಗೆ ಗಂಭೀರವಾಗಿ ಗಮನ ಕೊಡದಿರುವುದು. ಜಗತ್ತಿನ ಅರ್ಧದಷ್ಟು ಭಾಷೆಗಳನ್ನು ಹೊಂದಿರುವ ಭಾರತಕ್ಕೆ ಒಂದು ಸಮರ್ಪಕವಾದ ಭಾಷಾ ನೀತಿಯೇ ಇಲ್ಲ.  ಈಚೆಗೆ ಬಿಡುಗಡೆಯಾದ ಹೊಸ ಶಿಕ್ಷಣ ನೀತಿಯು ಹಿಂದೀ ಭಾಷೆಯ ಅಭಿವೃದ್ಧಿಗೆ ಪೂರಕವಾಗುವ ಅನೇಕ ಸೂಚನೆಗಳನ್ನು ಕೊಡುತ್ತದೆ. ಆದರೆ ಉಳಿದ ಭಾಷೆಗಳ ಬಗ್ಗೆ ನಿರ್ಲಕ್ಷ್ಯ ತೋರುತ್ತಾ, ಅವುಗಳ ಅಭವೃದ್ಧಿಯ ಹೊಣೆ ರಾಜ್ಯ ಸರಕಾರದ್ದು ಎಂದು ಹೇಳುತ್ತದೆ. ಆದರೆ ಕರ್ನಾಟಕ ರಾಜ್ಯವು ಕನ್ನಡವನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡಬೇಕೆಂದು ಹೊರಟಾಗ ಶಿಕ್ಷಣ ಮಾಧ್ಯಮದ ಹಕ್ಕನ್ನು ಸುಪ್ರಿಂ ಕೋರ್ಟು ಪೋಷಕರಿಗೂ ಮಕ್ಕಳಿಗೂ ನೀಡಿದೆ. ಇದರಿಂದ ಸಮಸ್ಯೆ ಇನ್ನಷ್ಟು ಜಟಿಲವಾಗಿದೆ.
ಆದರೆ ಈ ಕುರಿತು ಭಾರತದಲ್ಲಿ ದೊಡ್ಡ ಮಟ್ಟದ ಚರ್ಚೆಗಳೇ ನಡೆಯುತ್ತಿಲ್ಲ. ಕೋಮುವಾದ, ಧರ್ಮ, ಜಾತಿ, ಚುನಾವಣೆ, ದನ ಇತ್ಯಾದಿಗಳ ಕುರಿತು ಜನರು ತಲೆಕೆಡಿಸಿಕೊಂಡಷ್ಟು ಭಾಷೆಗಳ ಸಾವಿಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಸಣ್ಣ ಭಾಷೆಗಳನ್ನಾಡುವ ಜನರಲ್ಲಿಯೂ ತಮ್ಮ ಮಾತೃ ಭಾಷೆಗಳ ಬಗೆಗೆ ಅಭಿಮಾನ ಕಡಿಮೆಯಾಗಿ, ಇಂಗ್ಲಿಷಿನ ಮೇಲೆ ಮೋಹ ಹೆಚ್ಚಾಗುತ್ತಲಿದೆ. ಹೀಗೆ ಭಾರತದಲ್ಲಿ ಸುಮಾರು ಮೂರು ಕೋಟಿಯ ಅರುವತ್ತು ಲಕ್ಷ ಜನಗಳ ಮಾತೃ ಭಾಷೆಗಳು ಇಂದು ಪತನಮುಖಿಯಾಗಿವೆ. ಭಾಷಾವಾರು ಪ್ರಾಂತ್ಯಗಳ ರಚನೆಯಾದಾಗ ಪ್ರಭಾವೀ ಪ್ರಾದೇಶಿಕ ಭಾಷೆಗಳಿಗೇನೋ ಮಹತ್ವ ಬಂದುವುಆದರೆ ಈ ಹಂತದಲ್ಲಿ ಪ್ರಾದೇಶಿಕ ಭಾಷೆಗಳ ಆಶ್ರಯದಲ್ಲಿರುವ, ಆದರೆ ಯಾವುದೇ ರಾಜ್ಯದ ಅಧಿಕೃತ ಭಾಷೆಗಳಲ್ಲದ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾದುವು. ಸಣ್ಣ ಭಾಷೆಗಳನ್ನು ಅನೇಕ ರಾಜ್ಯ ಸರಕಾರಗಳು ತಮ್ಮ ರಾಜ್ಯದ ಅಧಿಕೃತ ಭಾಷೆಗಳೆಂದು ಯಾಕೆ ಘೋಷಿಸುತ್ತಿಲ್ಲಆಂಧ್ರ ಪ್ರದೇಶವು ತೆಲುಗುವಿನ ಜೊತೆಗೆ ಉರ್ದುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು , ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉರ್ದು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು,  ದೆಹಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉರ್ದುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿವೆ. ಇದು ಹೌದಾದರೆ, ಕರ್ನಾಟಕವು ಕೊಡವ ತುಳು ಭಾಷೆಗಳನ್ನು ಕರ್ನಾಟಕದ ಅಧಿಕೃತ ಭಾಷೆಗಳೆಂದು ಯಾಕೆ ಮಾನ್ಯ ಮಾಡಬಾರದು? ಹಾಗೆ ಮಾನ್ಯ ಮಾಡದೇ ಇರುವುದರಿಂದ ಕೇಂದ್ರ ಸರಕಾರಕ್ಕೆ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಾಗಿದೆ.  ಇವುಗಳನ್ನು ಸೂಕ್ಷ್ಮವಾಗಿ ಮತ್ತು ವಿವರವಾಗಿ ಗಮನಿಸಿದರೆ ಭಾರತದ ಭಾಷಾ ರಾಜಕೀಯದ ಬಗೆಗೆ ಕೆಲವು ಒಳನೋಟಗಳು ದೊರೆಯುತ್ತವೆ.
ಇಂತ ಬೆಳವಣಿಗೆಗಳ ನಡುವೆ ಅರೆ ಭಾಷೆಯಂತಹ ಸಣ್ಣ, ಆದರೆ ಸುಂದರ ಭಾಷೆಯನ್ನು ಸಬಲೀಕರಣಗೊಳಿಸುವುದು ಯಾರು ಮತ್ತು ಹೇಗೆ? ಅಥವಾ ಅದರ ಗತ್ಯವಿದೆಯೇ? ಪ್ರೊ . ಕುಶಾಲಪ್ಪ ಗೌಡರು 1970ರಷ್ಟು ಹಿಂದೆ ನಮಗೆ ಹಾಕಿ ಕೊಟ್ಟ ಹಾದಿಯಲ್ಲಿ ಈಗ ಮುಂದುವರೆಯುವುದು ಹೇಗೆ? ಇಂಥ ಪ್ರಶ್ನೆಗಳೇ ಆ ಹಿರಿಯರಿಗೆ ನಾವು ಸಲ್ಲಿಸುವ ಅತಿ ದೊಡ್ಡ ಗೌರವ ಎಂದು ನಾನು ಭಾವಿಸುತ್ತೇನೆ. 
 ಅರೆಭಾಷೆಯ ಚಾರಿತ್ರಿಕ ಹಿನ್ನೆಲೆ ಮತ್ತು ಅನನ್ಯತೆ:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ವಿಟ್ಲಮತ್ತು ಬೆಳ್ತಂಗಡಿ ಪರಿಸರದಲ್ಲಿ ಹಾಗೂ  ಕೊಡಗಿನ ಭಾಗಮಂಡಲ ಪರಿಸರದಲ್ಲಿ ಪ್ರಚಲಿತದಲ್ಲಿರುವ ಅರೆಭಾಷೆಯು ಕನ್ನಡದ ಒಂದು ಸಾಮಾಜಿಕ ಉಪಭಾಷೆಯೆಂದು ಇದುವರೆಗೆ ಹೇಳುತ್ತಾ ಬರಲಾಗಿದೆ (ಕುಶಾಲಪ್ಪ ಗೌಡ 1970). ಒಂದು ನಿರ್ದಿಷ್ಟ ಪ್ರದೇಶಕ್ಕೆ ಈ ಭಾಷೆಯು ಒಳಪಟ್ಟಿದ್ದರಿಂದ ಇದನ್ನು ಪ್ರಾದೇಶಿಕ ಉಪಭಾಷೆ ಎಂದರೂ ನಡೆಯುತ್ತದೆ.   ಈ ಭಾಷೆಯಲ್ಲಿ ಇಂದಿಗೂ ಕಾಣಸಿಗುವ ಕೆಲವು ವಿಶಿಷ್ಟ ಪದಗಳು ಮತ್ತು ಉಚ್ಚಾರಣೆಯು ಸುಮಾರು 1500 ವರ್ಷಗಳಿಗಿಂತ ಹೆಚ್ಚು  ಪ್ರಾಚೀನವಾದುವು. ಕೆಲವು ಸ್ವರಗಳು ಮತ್ತು ವ್ಯಂಜನಗಳು ಪುನಾರಚಿತ ಪ್ರಾಗ್ದ್ರಾವಿಡ ಭಾಷೆಯಲ್ಲಿದ್ದಂತೆಯೂ  ಭಾಸವಾಗುತ್ತದೆ.
 ಹೀಗೆ ಪ್ರಾಚೀನ ಭಾಷೆಯ ಗುಣಗಳನ್ನು ಹೊಂದಿರುವ ಅರೆಭಾಷೆಯು ಈಗ ನಾವು ಮಾತಾಡುವ ರೂಪದಲ್ಲಿ ಕಾಣಿಸಿಕೊಂಡು ಹೆಚ್ಚೆಂದರೆ ಐದು ಶತಮಾನಗಳು ಕಳೆದಿರಬೇಕು ಅಷ್ಟೆ. ಏಕೆಂದರೆ ಅರೆಭಾಷೆಯನ್ನು ಪ್ರಧಾನವಾಗಿ ಮಾತಾಡುವ ಗೌಡ ಸಮುದಾಯದ ಜನರು ಸುಳ್ಯ, ವಿಟ್ಲ, ಪುತ್ತೂರು, ಬೆಳ್ತಂಗಡಿ ಪರಿಸರದ ಮೂಲ ನಿವಾಸಿಗಳೇನೂ ಅಲ್ಲ. ಅವರು ಈಗಣ ಹಾಸನ ಪರಿಸರದಲ್ಲಿರುವ ಕೆಂಚಮ್ಮನ ಹೊಸಕೋಟೆ ಮತ್ತು ಐಗೂರು ಪರಿಸರದಿಂದ ಕರಾವಳಿಯ ಕಡೆಗೆ ವಲಸೆ ಬಂದಿದ್ದಾರೆ.  ಹಾಸನ ಜಿಲ್ಲೆಯ ಸಕಲೇಶಪುರ, ಮಂಜರಾಬಾದ್, ಮಾರನಹಳ್ಳಿ, ಗೊರೂರು, ಹೊಸಕೋಟೆಕುಮಾರಿಹಳ್ಳಿ, ದೇವರಬೆಟ್ಟ, ಎಡೆಕುಮೇರಿಹೆತ್ತೂರುಪಾಳ್ಯಆಲೂರುಕುಂದೂರುಎಸಳೂರು ಮೊದಲಾದ ಪ್ರದೇಶಗಳೇ  ಸುಳ್ಯ ಪರಿಸರದ ಗೌಡರಿಗೆ ಮೂಲಸ್ಥಾನ. ಅಲ್ಲಿಂದ ವಲಸೆ ಬಂದಾಗ ಇವರೆಲ್ಲ  ಅಲ್ಲಿನ ದೈವಗಳಾದ ಏಳೂರು ಮುನಿಸ್ವಾಮಿ, ಕಾಲಭೈರವ, ಸಬ್ಬಮ್ಮ, ಕೆಂಚಮ್ಮ ಮೊದಲಾದ ದೈವಗಳನ್ನು  ತಮ್ಮೊಂದಿಗೇ ಕರೆತಂದಿದ್ದಾರೆ. ಆ ಪ್ರದೇಶದಿಂದ ಸುಳ್ಯ ಕಡೆಗೆ ಯಾಕೆ ಗೌಡರು ವಲಸೆ ಬಂದರು ಎಂಬುದರ ವಿವರ ಈ ಸಂಪ್ರಬಂಧದ ಉದ್ದೇಶಕ್ಕೆ ಹೊರತಾದುದು.  ಈ ವಲಸೆಯ ಕಾಲಘಟ್ಟವನ್ನು ನಿರ್ದಿಷ್ಟವಾಗಿ ಹೇಳುವುದೂ ಕಷ್ಟ.  ಆದರೂ ಈ ವಲಸೆಯ ಕಾಲ ಘಟ್ಟವನ್ನು ಪರಿಶೀಲಿಸುವುದು ಅರೆಭಾಷೆಯ ಚರಿತ್ರೆಯನ್ನು ಬರೆಯಲು ಅನುಕೂಲವಾಗುತ್ತದೆ.
ಐಗೂರು ಸೀಮೆಗೆ ಸೇರಿದ ಹೊಸಕೋಟೆಯಲ್ಲಿ ಕೆಂಚಮ್ಮ ದೇವರ ದೇವಸ್ಥಾನವಿದ್ದು ಅದು ಹೊಸಕೋಟೆ ಕೆಂಚಮ್ಮ ಎಂದು ಪ್ರಸಿದ್ಧಿ ಪಡೆದಿದೆ. ಕ್ರಿ.ಶ. 1350ರ ಸುಮಾರಿನಲ್ಲಿ ಹರಿಹರನು ಈ ದೇವಳವನ್ನು ಕಟ್ಟಿದ್ದಾನೆಂದು ಹೇಳಲಾಗಿದೆ. . (ಲಕ್ಷ್ಮೀನರಸಿಂಹ ಶಾಸ್ತ್ರೀ, 1936, 59). ಈ ದೇವಸ್ಥಾನವನ್ನು ಕಟ್ಟಿದ ಆನಂತರವಷ್ಟೇ ಒಕ್ಕಲಿಗರು ಸುಳ್ಯ ಪರಿಸರಕ್ಕೆ ವಲಸೆ ಹೋಗಿರಬೇಕು, ಏಕೆಂದರೆ ಸುಳ್ಯ ಸೀಮೆಯ ಗೌಡರಿಗೆ ಕಟ್ಟೆ ಮನೆಯಾದ ಕೂಜುಗೋಡಿನವರಿಗೆ  ಹೊಸಕೋಟೆ ಕೆಂಚಮ್ಮನೇ ಮನೆದೇವರು. ಎಡಮಂಗಲದ ಸಮೀಪದಲ್ಲಿರುವ ಮಾಗಣೆ ಗೌಡರ ಮನೆತನವಾದ ಏನಡ್ಕದವರಿಗೂ      ಕೆಂಚಮ್ಮನೇ ಕುಲದೇವರು. ಈ ಎರಡೂ ಮನೆತನದವರು ನಾಯರ್ ಬಳಿಯವರಾಗಿದ್ದು  ಸುಳ್ಯ ಪರಿಸರದ  ಗೌಡರಿಂದ ಪ್ರತಿಷ್ಠಿತ ಮನೆತನಗಳೆಂದು ಮಾನ್ಯತೆ ಪಡೆದಿವೆ. ಅಲ್ಲಿರುವ ಕೆಂಚಮ್ಮ ದೇವರಿಗೆ ಗೌಡರು ಭಯ ಭಕ್ತಿಯಿಂದ ಹರಿಕೆ ಒಪ್ಪಿಸುತ್ತಾರೆ. ಇಲ್ಲಿ ಹಣದ ರೂಪದಲ್ಲಿ ಬಿದ್ದ ಹರಿಕೆಯನ್ನು ಹೊಸಕೋಟೆ ಕೆಂಚಮ್ಮನಿಗೆ ವರ್ಷಕ್ಕೊಂದು ಬಾರಿ ಕಳುಹಿಸಿಕೊಡಲಾಗುತ್ತಿತ್ತು. ವಿಶೇಷ ಸಂದರ್ಭದಲ್ಲಿ ಗೌಡರು ಹೊಸಕೋಟೆ ಕೆಂಚಮ್ಮನಿಗೆ ಈಗಲೂ  ನೇರ ಹರಿಕೆ ಹೊರುತ್ತಾರೆ. ಭೌಗೋಳಿಕವಾಗಿ ತುಂಬ ವ್ಯತ್ಯಾಸ ಇರುವ ಹೊಸಕೋಟೆ ಮತ್ತು ಸುಳ್ಯ ಪರಿಸರಕ್ಕೆ ಇಂತಹ ಧಾರ್ಮಿಕ ಸಂಬಂಧ ಇರುವುದಕ್ಕೆ ಮೂಲ ಕಾರಣ ವಲಸೆಯೇ ಆಗಿದೆ.  ಕ್ರಿ.ಶ. 1350ರಲ್ಲಿ ಹೊಸಕೋಟೆ ದೇವಸ್ಥಾನ ರಚಿತವಾಗಿ, ಎಷ್ಟೋ ವರ್ಷಗಳ ಅನಂತರವಷ್ಟೇ ಈ ವಲಸೆ ಕಾರ್ಯಕ್ರಮ ನಡೆದಿರಬಹುದು. ಏಕೆಂದರೆ ಆ ದೇವರು ಗೌಡರ ಮೇಲೆ ನಿರ್ಣಾಯಕ ಪ್ರಭಾವ ಬೀರಿದೆ. ಕ್ರಿ.ಶ. 1550ರ ಹೊತ್ತಿಗೆ  ಸುಳ್ಯ ಸೀಮೆಯೂ, ಐಗೂರು ಸೀಮೆಯೂ ಒಟ್ಟಾಗಿಯೇ ವಿಜಯನಗರದ ಅಂಕಿತಕ್ಕೆ ಒಳಪಟ್ಟಿದ್ದರಿಂದ ಈ ವಲಸೆಗೆ ರಾಜಕೀಯ ವಿರೋಧವಿರಲಿಲ್ಲ.
ಸುಳ್ಯ ಪರಿಸರದಲ್ಲಿದ್ದ ಗೌಡರ ಬಗ್ಗೆ ಅತ್ಯಂತ ಪ್ರಾಚೀನ ಉಲ್ಲೇಖ ನೀಡುವ ಲಿಖಿತ ಆಧಾರವೆಂದರೆ ಕ್ರಿ.ಶ. 1683ರ ಸುಬ್ರಹ್ಮಣ್ಯದ ಶಾಸನ. ಈ ಶಾಸನದಲ್ಲಿ ಬರುವ ಗಾವುಂಡುಪದ ಸ್ಥಾನ ಸೂಚಕವಾಗಿರದೆ ಸ್ಪಷ್ಟವಾಗಿ ಜಾತಿ ಸೂಚಕವಾಗಿದ್ದು, ಕೂಜುಗೋಡು ಕಟ್ಟೆಮನೆಯವರನ್ನು ಕುರಿತಾಗಿದೆ.   ಕ್ರಿ.ಶ. 1665ರ ಸುಬ್ರಹ್ಮಣ್ಯದ ಶಾಸನದ ಪ್ರಕಾರ ಐಗೂರು ಸೀಮೆಯ ಪ್ರಮುಖ ಸ್ಥಳಗಳು ಕುಕ್ಕೇ ದೇವಳಕ್ಕೆ ಉಂಬಳಿಯಾಗಿ ದೊರಕಿದ್ದುವು.  ಈ ಕಾರಣದಿಂದ ಐಗೂರು ಪ್ರಾಂತ್ಯದ ಜನರು ಬಿಸಿಲೆ ಘಟ್ಟವನ್ನಿಳಿದು ಸುಬ್ರಹ್ಮಣ್ಯಕ್ಕೆ ಬಂದು ಹರಿಕೆ ಒಪ್ಪಿಸಲೇ ಬೇಕಾಗಿತ್ತು. ಈ ಧಾರ್ಮಿಕ ಪ್ರೇರಣೆ ಕೂಡಾ ವಲಸೆಗೆ ಕಾರಣವಾಗಿದ್ದಿರಬಹುದು. ಶಿರಾಡಿ ಭೂತದ ಪಾಡ್ದನದ ಪ್ರಕಾರ ಆ ಭೂತವು ಘಟ್ಟದಿಂದ ಇಳಿದು ಬಂಗಾಡಿ ಸೀಮೆಗೆ ಬಂದಿದೆ. ಅಲ್ಲಿ ಕಾರಣಿಕ ತೋರಿಸಿ, ಗುಡಿ ಕಟ್ಟಿಸಿಕೊಂಡುದೈವ ಅಂತ ಹೇಳಿಸಿಕೊಂಡು, ಕಡಬ ಮಾರ್ಗವಾಗಿ ಪಂಜ ಸಾವಿರ ಸೀಮೆಗೆ ಬಂದಿದೆ. ಪಂಜ ಸೀಮೆಯಿಂದ ಮತ್ತೆ ಸುಳ್ಯಕ್ಕೆ ದಾಟಿದೆ. ಭೂತ-ಚಲಿಸಿದ ಈ ದಾರಿಯು ಗೌಡರು ಪಸರಿಸಿದ್ದಕ್ಕೆ ದಿಕ್ಸೂಚಿಯಂತಿದೆ.  ಐಗೂರು ಸೀಮೆಯಿಂದ ಬಂಗಾಡಿ ಸೀಮೆಗೆ ಬಂದ ಗೌಡರು ನಿಧಾನವಾಗಿ ಕಡಬ ಪರಿಸರಕ್ಕೆ ಒತ್ತರಿಸಿಕೊಂಡಿರಬಹುದು. ಆದರೆ ಏನೆಕಲ್ಲಿನಲ್ಲಿ ವಿಶೇಷ ಆರಾಧನೆಗೆ ಒಳಪಡುವ ಬಚ್ಚನಾಯ್ಕನ ಪಾಡ್ದನದಲ್ಲಿರುವ ಪ್ರಕಾರ. ಆ ಭೂತವು ಕಾಗನೂರಿನಿಂದ ಬಿಸಿಲೆ ಘಟ್ಟ ಇಳಿದು ಸುಬ್ರಹ್ಮಣ್ಯಕ್ಕೆ ಬಂದಿದೆ.  ಐಗೂರು ಸೀಮೆಯ  ಒಣಗೂರುಎಂಬ ಚಿಕ್ಕ ಉರಿನಲ್ಲಿರುವ ಸಬ್ಬಮ್ಮದೇವರಿಗೆ ಸುಳ್ಯ ಪರಿಸರದಿಂದ ಹರಿಕೆ ಸಂದಾಯವಾಗುತ್ತದೆ. ಗೌಡರು ತಮ್ಮ ಮದುವೆಯಲ್ಲಿ ಒಣಗೂರು ಸಬ್ಬಮ್ಮನಿಗೆಂದು ನಾಲ್ಕಾಣೆ ದುಡ್ಡು ಕಟ್ಟಿಡುತ್ತಾರೆ. ಕಟ್ಟಿಮನೆಯವರು ಈ ಹಣವನ್ನು ಸಂಗ್ರಹಿಸಿ ಒಣಗೂರಿಗೆ ಕಳುಹಿಸುತ್ತಾರೆ. ಮದುವೆಯಲ್ಲಿ ಈ ಹರಿಕೆ ಹಣವನ್ನು ಕಟ್ಟುವಾಗ ಹೇಳುವ ಹಾಡು ಇಲ್ಲಿ ಗಮನಾರ್ಹ. ಆ ಹಾಡಿನಲ್ಲಿ ಘಟ್ಟದಲ್ಲಿ ಹುಟ್ಟಿ ಬೆಳೆದ ಹೆಣ್ಣೊಬ್ಬಳು ತುಳುನಾಡಿಗೆ ಬಂದದ್ದರ ಬಗ್ಗೆ ಮಾಹಿತಿಯಿದೆ.  ಸುಳ್ಯ ಪರಿಸರದ ಸೋಣಂಗೇರಿ, ನಿಡುಬೆ, ಮತ್ತು ಕೂತ್ಕುಂಜಗಳಲ್ಲಿ ಸಣ್ಣ ಪ್ರಮಾಣದಲ್ಲಿ ಸಬ್ಬಮ್ಮ ದೇವರಿಗೆ ಪೂಜೆ ನಡೆಯುತ್ತದೆ. ಶೃಂಗೇರಿಗೆ ಸುಳ್ಯ ಕಡೆಯಿಂದ ಗೌಡರು ಬರೆದಿರುವ ಕಡತಗಳಲ್ಲಿ ಕಾಣಸಿಗುವ ಹೆಸರುಗಳಾದ ತಿಮ್ಮೇಗೌಡ, ಪುಟ್ಟೇಗೌಡ, ಅಮ್ಮತಾಯಿ, ಕುಂಇಕ್ಕ, ಕುಂಬೆತ್ತಿ, ಚಿನ್ನೇಗೌಡ, ದೇವಪ್ಪ, ಸುಬ್ಬೇಗೌಡ, ಕಾಳಮ್ಮ, ಸುಬ್ಬಮ್ಮ, ಅಂಮಣ ಗೌಡ, ಈರೇಗೌಡ, ಬಡ್ಕಣ ಗೌಡ ಮೊದಲಾದುವು ಐಗೂರು ಸೀಮೆಯ ಹೆಸರುಗಳು ಕೂಡಾ ಹೌದು. 
ಇವುಗಳೆಲ್ಲವನ್ನು ಗಮನಿಸಿದರೆ ನಾವು ಈ ಕೆಳಗಿನ ತೀರ್ಮಾನಗಳಿಗೆ ಬರಬಹುದು-
1.            ಕ್ರಿ.ಶ. 1350ಕ್ಕೂ ಹಿಂದೆ ಐಗೂರು ಸೀಮೆಯಿಂದ ಸುಳ್ಯ ಪರಿಸರಕ್ಕೆ ಗೌಡರು ವಲಸೆ ಬಂದಿರಲಾರರು. ಹೊಸಕೋಟೆ ಕೆಂಚಮ್ಮನ ಆರಾಧನೆ ಇದಕ್ಕೆ ಬಲವಾದ ಸಾಕ್ಷಿ. 
2.            ಕ್ರಿ.ಶ. 1660ರ ರಿಂದ ಐಗೂರು ಸೀಮೆಯು ಸುಬ್ರಹ್ಮಣ್ಯ ದೇವಸ್ಥಾನದ ಧಾರ್ಮಿಕ ಹಿಡಿತಕ್ಕೆ ಸಿಕ್ಕಿತ್ತು. ಅದೇ ಸಮಯದಲ್ಲಿ ಐಗೂರಿನಲ್ಲಿ ಒಕ್ಕಲಿಗರಿಗೆ ಉಪಟಳ ನೀಡಲಾಗುತ್ತಿತ್ತು. ಜೊತೆಗೆ ಸುಳ್ಯ ಪರಿಸರ ಮತ್ತು ಐಗೂರು ಪರಿಸರಗಳು ವಿಜಯನಗರದ ಆಳ್ವಿಕೆಯ ಅಂಕಿತಕ್ಕೆ ಒಳಪಟ್ಟಿದ್ದುವು. ಇದು ವಲಸೆಯನ್ನು ಹೆಚ್ಚು ಮಾಡಿರಬೇಕು.
3.            ಕ್ರಿ.ಶ. 1680ಕ್ಕಾಗುವಾಗ ಸುಬ್ರಹ್ಮಣ್ಯ ಪರಿಸರದಲ್ಲಿ ಸಾಕಷ್ಟು ಸಂಖ್ಯೆಯ ಗೌಡರಿದ್ದರು. ಇದಕ್ಕೆ ಸುಬ್ರಹ್ಮಣ್ಯ ಶಾಸನವೇ ಸಾಕ್ಷಿ.
4.            ಅನೇಕ ಭೂತಗಳ ಪಾಡ್ದನಗಳ ಪ್ರಕಾರ ಅವೆಲ್ಲ ಘಟ್ಟ ಇಳಿದು ಸುಳ್ಯ ಪರಿಸರಕ್ಕೆ ಬಂದಿವೆ. ಬಚ್ಚನಾಯ್ಕ ಮತ್ತು ಶಿರಾಡಿ ಭೂತದ ಪಾಡ್ದನಗಳು ಸ್ಪಷ್ಟ ಉದಾಹರಣೆಗಳಾಗಿವೆ.
ಈ ಕಾರಣಗಳಿಂದ ಕ್ರಿ.ಶ. ಸು. 1450 ಮತ್ತು 1600ರ ನಡುವಿನ ಅವಧಿಯಲ್ಲಿ ಈ ವಲಸೆ ಕಾರ್ಯಕ್ರಮ ನಡೆದಿದೆಯೆಂದು ಹೇಳಬಹುದು. 16ನೇ ಶತಮಾನದ್ದೆನ್ನಲಾದ ಕೋಟಿ ಚೆನ್ನಯಪಾಡ್ದನದ ಕಥೆಯು ಪಂಜ ಪರಿಸರದಲ್ಲಿ ನಡೆದಿದ್ದರೂ ಅದರಲ್ಲಿ ಯಾವುದೇ ಗೌಡರ ಉಲ್ಲೇಖವಿಲ್ಲ. ಆ ಕಾಲದಲ್ಲಿ ಗೌಡರು ಇನ್ನೂ ಪ್ರಭಾವಶಾಲಿಗಳಾಗಿ ಬೆಳೆಯದಿದ್ದುದೇ ಇದಕ್ಕೆ ಕಾರಣವಿರಬಹುದು. ಇದು ಹೌದಾದರೆ ಅರೆಭಾಷೆಯ ಚರಿತ್ರೆಯನ್ನು ಏನು ಮಾಡಿದರೂ ಕ್ರಿಸ್ತಶಕ 1500ಕ್ಕಿಂತ ಹಿಂದೆ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ.
ಕೊಡಗಿಗೆ ಅರೆಭಾಷೆ:
ಕ್ರಿ.ಶ. 1680ರಲ್ಲಿ ಸುಬ್ರಹ್ಮಣ್ಯ ಪರಿಸರದಲ್ಲಿದ್ದ ಗೌಡರು ಮುಂದಿನ ನೂರು ವರ್ಷಗಳಲ್ಲಿ ಸುಳ್ಯದಾದ್ಯಂತ ಪಸರಿಸಿಕೊಂಡದ್ದಲ್ಲದೆ, ತೊಡಿಕಾನ ಮಾರ್ಗವಾಗಿ ಭಾಗಮಂಡಲದತ್ತಲೂ ಚಲಿಸಿದ್ದಾರೆ ಎಂಬುದಕ್ಕೆ ಆಧಾರಗಳಿವೆ. 
ಕ್ರಿ.ಶ. 1807ರಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗನ್ನು ಸಂದರ್ಶಿಸಿದ ಬುಕನನ್ ಅವನು ಇತರ ಸೀಮೆಗಳಿಂದ ಬಲಾತ್ಕಾರವಾಗಿ ಜನರನ್ನು ಕರೆದುಕೊಂಡು ಬಂದು ಕೊಡಗಿನಲ್ಲಿ ನೆಲೆ ನಿಲ್ಲಿಸಿದ ವೀರರಾಜೇಂದ್ರನ ಬಗೆಗೆ ಪ್ರಸ್ತಾಪಿಸಿದ್ದಾನೆ. (ಬುಕನನ್ 1807) ಟಿಪ್ಪುವಿನೊಡನೆ ಹೋರಾಡುವಾಗ ಕೊಡಗಿನ ಅನೇಕರು ಸತ್ತದ್ದಲ್ಲದೆ, ಅನೇಕ ಕೊಡವರು ಟಿಪ್ಪುವಿನ ಕೈಸೆರೆಯಾಗಿ ಶ್ರೀರಂಗ ಪಟ್ಟಣಕ್ಕೆ ರವಾನಿಸಲ್ಪಟ್ಟಿದ್ದಾರೆ. (ಕೃಷ್ಣಯ್ಯ 1970, 24) ಈ ಹಿನ್ನೆಲೆಯಲ್ಲಿ ಕೊಡಗಿನ ಅರಸನು ಬಹಳ ಜನ ಕೃಷಿಕರನ್ನು ಕೊಡಗಿಗೆ ಸುಳ್ಯ ಪರಿಸರದಿಂದ ಕರೆಯಿಸಿಕೊಳ್ಳಬೇಕಾಯಿತು.
ಇದಕ್ಕೆ ಪೂರಕವಾಗುವ ಇನ್ನೊಂದು ಅಂಶವಿದೆ. ಟಿಪ್ಪುವಿನ ವಿರುದ್ಧವಾಗಿ ಇಂಗ್ಲಿಷರು ಹೋರಾಡುತ್ತಿದ್ದಾಗ, ವೀರರಾಜೇಂದ್ರನು (1791-1809) ಇಂಗ್ಲೀಷರಿಗೆ ಸಹಾಯ ಮಾಡಿದನು. ಈ ಸಹಾಯಕ್ಕೆ ಕೃತಜ್ಞರಾದ ಇಂಗ್ಲಿಷರು ಅರಸನಿಗೆ ಘಟ್ಟದ ಕೆಳಗಣ ಕೆಲವು ಸೀಮೆಗಳನ್ನು ಉಂಬಳಿಯಾಗಿ ಬಿಟ್ಟುಕೊಟ್ಟರು. ಕ್ರಿ.ಶ. 1804ರ ಇಸ್ತಿಹಾರಿನಿಂದ ಇದು ಸ್ಪಷ್ಟವಾಗುತ್ತದೆ-  
‘ಕುಮಾರಧಾರ ನದಿಗೆ ದಕ್ಷಿಣ ದಿಕ್ಕಿನಲ್ಲಿ ಇರುವಂತಹ ಕೆಲವು ಮಾಗಣೆಗಳ ಬೀರಿಸು ವಿಂಗಡಿಸಿ ಕೊಡಗಿನ ತಾಲೂಕಿಗೆ ಸೇರಿಸಿಕೊಳ್ಳುವಂತೆ ಹುಕುಂ ಬರೆದು ಕಳುಹಿಸಿದನು. ಆಮೇರೆಗೆ ಕಚೇರಿ ತಾಲೂಕಿನಿಂದ ವಿಂಗಡಿಸಿ ಇರುವ ಮಾಗಣೆಗಳ ವಿವರ-ಬೆಳ್ಳಾರೆ ಮಾಗಣೆ  ವಂದಕ್ಕೆ ದರೋಬಸ್ತು ಗ್ರಾಮ ಮೂವತ್ತೇಳು. ನರಿಮೊಗರು ಮಾಗಣಿ ವಂದಕ್ಕೆ ಗ್ರಾಮ ವಂದು, ಅಡೂರು ಮಾಗಣೆ . . . .’ (ಕೊಡಗಿನ ಇತಿಹಾಸ ಪುಟ: 336-37).
ಇಸ್ತಿಹಾರಿನಲ್ಲಿ ಹೇಳಲಾಗಿರುವ ಎಲ್ಲಾ ಪ್ರದೇಶಗಳಲ್ಲಿಯೂ ಗೌಡರು ಬಹುಸಂಖ್ಯಾಕರು.   ಈ ಕಾರಣದಿಂದ ಸುಳ್ಯ ಸೀಮೆಯ ಜನರ ಮೇಲೆ ಕೊಡಗಿನ ಅರಸನಿಗೆ ರಾಜಕೀಯ ಹಿಡಿತವಿತ್ತು. ಹೀಗಾಗಿ ಗೌಡರ ಕೊಡಗಿನ ವಲಸೆ ನಿರಾತಂಕವಾಗಿ ನಡೆಯುವಂತಾಯಿತು. 1980ರ ದಶಕದಲ್ಲಿ ನಾನು ನಡೆಸಿದ ಕಾರ್ಯದಲ್ಲಿ ಲಭ್ಯವಾದ ಮಾಹಿತಿಗಳ ಪ್ರಕಾರ ಸುಮಾರು ಸುಳ್ಯ ಪರಿಸರದ ಸುಮಾರು  96 ಮನೆಗಳಿಂದ ಜನರು ಕೊಡಗಿಗೆ ವಲಸೆ ಹೋಗಿದ್ದಾರೆ. ಕೊಡಗಿನ ಭಾಗಮಂಡಲ ಪರಿಸರದಲ್ಲಿ ಹೀಗೆ ನೆಲನಿಂತ  ಗೌಡರು ಸುಳ್ಯ ಪರಿಸರದಲ್ಲಿ ತಮ್ಮ ಮನೆತನಗಳಿಗೆ  ಇದ್ದ ಹೆಸರುಗಳನ್ನೇ ಅಲ್ಲಿಯೂ ಉಳಿಸಿಕೊಂಡಿದ್ದಾರೆ. ಉದಾಹರಣೆಗೆ  ಕಾನಡ್ಕ , ದೋಳ್ಪಾಡಿ, ಕೆದಂಬಾಡಿ     , ಕುಕ್ಕನೂರು, ಕೋಡಿಮನೆ, ಮೊಟ್ಟೆಮನೆ, ಗುಡ್ಡೆಮನೆ, ಮಡ್ತಿಲ, ಅಮೈ, ಕುದ್ಕುಳಿ, ಸಂಪ್ಯಾಡಿ, ಉಡ್ಡೋಳಿ, ಉಳುವಾರು, ಕುಯಿಂತೋಡು, ಬಪ್ಪನ ಮನೆ, ದಿಡ್ಪೆ,  ಪಾಂಡನ, ಕೊಪ್ಪಡ್ಕ, ಮಲ್ಲಾರ, ನಿಡುಬೆ, ಬಾಕಿಲ ಮಾವೋಜಿ, ಬಾನಡ್ಕ, ಪೈಕ ಇತ್ಯಾದಿ. ಇವುಗಳಲ್ಲಿ ಕೆಲವು ಮನೆತನಗಳು  ಈಗಲೂ ಪರಸ್ಪರ ಸಂಬಂಧ ಉಳಿಸಿಕೊಂಡಿವೆ.
ಕೊಡಗಿನ ರಾಜಕೀಯ ಪರಿಸ್ಥಿತಿ ಮತ್ತು ಬುಕನನನ ಬರಹವನ್ನು ಗಮನಿಸಿದರೆ ಈ ವಲಸೆಯು ಕ್ರಿ.ಶ. 1800ರ ಸುಮಾರಿನಲ್ಲಿ ನಡೆಯಿತೆಂದು ಖಚಿತವಾಗಿ ಹೇಳಬಹುದು. ಕ್ರಿ.ಶ. 1805ರಲ್ಲಿ ವೀರರಾಜೇಂದ್ರನು ಗೌಡರಿಗೆ  ಭೂಮಿ ಹಕ್ಕನ್ನು ಕೊಟ್ಟಿದ್ದರ ಕುರಿತು ದಾಖಲೆಗಳಿವೆ.  ಉದಾಹರಣೆಗೆ ಎರಡನ್ನು ಇಲ್ಲಿ ಕೊಡಲಾಗಿದೆ-
1.    ಶ್ರೀಮಂತರು ಅರಮನೆ ಶೀಮೆ ವಳಿತವಾದ ಶೆಟ್ಟಿ ಮಾನಿನಾಡು ಪೈಕಿ ಕುಂದಚ್ಚೇರಿ ಗ್ರಾಮದಲ್ಲಿ ಇರುವ ಸುಳ್ಯದ ಸೀಮೆ ಕೆದಂಪಾಡಿ ತುಳುವರ ಸಣ್ಣಗೆ ಅಪ್ಪಣೆ ದಯಪಾಲಿಸಿದ ಸನದು-ಬುದಿನಿರೂಪ ಅದಾಗಿ ಯೀಗ ನಿಗೆ ಹೊಸ್ತಾಗಿ ಗಟ್ಟಿ ಜಂಮಕ್ಕೆ ಟಪ್ಪಣೆ ಕೊಡಿಯಿಸಿರುವುದು. . . . ಯೀ ನಾಡು ಯಿದೆ ಗ್ರಾಮದಲ್ಲಿ ಕುಳನಷ್ಟವಾದ ಬೆಳ್ಳಿ ಮುಕ್ಕಾಬಿ ಭೂಮಿ 1ರ ಲೆಕ್ಕವಾದ ಗದ್ದೆ 2ಕ್ಕೆ ಪ್ರಾಕು ಕೇಳಿ ಭಟ್ಟಿ 300ಕ್ಕೆ ಅಳತೆಯಾದದ್ದು. ವೀರರಾಜೇಂದ್ರ ಅಂಗುಲ 28ಕ್ಕೆ ವೀರರಾಜೇಂದ್ರ ಗಜ 1 ಅಂಥಹಾ ಗಜ 8ಕ್ಕೆ ಅಳತೆಕೋಲು ಇಟ್ಟು ಅಳತೆಯಾದ ಕೋಲು 5538ಕ್ಕೆ ಭತ್ತ ಬರುವ ಹತ್ತ ಬ..ಯೀ ಭೂಮಿಯನ್ನು ನಿಂನ ಪುತ್ರ ಪೌತ್ರ ಪಾರಾಪರ್ಯವಾಗಿ ಜಂಮವಾಗಿ ಅನುಭವಿಸಿಕೊಂಡು ಯೀ ಭೂಮಿಯಿಂದ ಅರಮನೆಗೆ ಬರತಕ್ಕ ಉಂಬಳಿ ಕಾಣಿಕೆಯನ್ನು ಕಾಲಕಾಲಂಪ್ರತಿಯಲ್ಲು ಅರಮನೆಗೆ ಒಪ್ಪಿಸುತ್ತ ಸ್ವಾಮಿ ಕಾರ್ಯ ಮುಖ್ಯವಾಗಿ ನಡಕೊಳ್ಳುವುದಾಗಿಯೆಂಬ ನನದು ನಿರೂಪಕ್ಕೆ ಅಪ್ಪಣಿ. . . (ಕೊಡಗಿನ ಇತಿಹಾಸ, ಪುಟ: 341-42).

2.    ಶ್ರೀಮಂತರ ಅರಮನೆ ಶೀಮೆವಳಿತನವಾದ ಮುತ್ತಾರು ಮುಡಿ ಗ್ರಾಮದಲ್ಲಿಯಿರುವ ಸುಳ್ಯದ ಸೀಮೆ ಅರಂತೋಡು ಮಾಗಣಿ ಪಾರೆಮಜಲು ತುಳುವರ ತಿಂಮಪುಗೆ ಅಪ್ಪನೆ ದಯಪಾಲಿಸಿದ ಸನದು ಬುದಿ ನಿರೂಪ-ಅದಾಗಿ ಯೀಗ ನಿನಗೆ ಹೊಸ್ತಾಗಿ ಜಯಕ್ಕೆ ಯಿದೆ ಗ್ರಾಮದಲ್ಲಿ ಕುಳನಚ್ಚವಾಗಿರುವ ಕೂಸಕಂಡರ ಭೂಮಿ 250 ಭಟ್ಟಿ ಬೆಳಂಚಟ್ಟಿ ಭೂಮಿ 250 ಭಟ್ಟಿ. . . ಯೀ ಭೂಮಿಯನ್ನು ನಿನ್ನ ಪತ್ರ ಪೌತ್ರ ಪಾರಂಪರ್ಯವಾಗಿ ಬಂದುವಾಗಿ ಅನುಭವಿಸಿಕೊಂಡು ಸ್ವಾಮಿ ಕಾರ್ಯ ಮುಖ್ಯವಾಗಿ ನಡಕೊಳ್ಳುವುದಾಗಿ ಅಪ್ಪಣೆ. . . . (ಕೊಡಗಿನ ಇತಿಹಾಸ, ಪುಟ: 341-42).

ಇದೇ ರೀತಿ ದಬ್ಬಡ್ಕದ ಬೆಳಿಯಬೆಳಕಜೆ ಸುಬ್ಬಯ್ಯ, ಪೆರಾಲು ಮೋಂಟಉಳುವಾರು ಕೃಷ್ಣ, ದೇರಜೆ ಸುಬ್ಬು ಮೊದಲಾದವರಿಗೆ ಭೂಮಿ ದೊರಕಿದ್ದಕ್ಕೆ ಆಧಾರಗಳಿವೆ. ‘ಕುಳ’ ನಷ್ಟವಾಗಿರುವ (ಮೊದಲು ಅಲ್ಲಿ ಜನ ಇದ್ದು ಅನಂತರ ಇಲ್ಲವಾದದ್ದೆಂಬ ಅರ್ಥ ಕುಳ ಪದಕ್ಕಿದೆ) ಜಮೀನಿನಲ್ಲಿ ಕೃಷಿ ಮಾಡಲು ಇವರೆಲ್ಲರನ್ನೂ ಅಲ್ಲಿಗೆ ಕರೆಯಿಸಿಕೊಳ್ಳಲಾಗಿದೆ. 1836ರ ಲಿಂಗರಾಜನ ಹುಕುಂ ನಾಮೆಯು ಹೀಗೆ ಬಂದವರು ಐದು ವರ್ಷಗಳ ಕಾಲ ಭೂಮಿ ತೆರಿಗೆ  ಕಟ್ಟಬೇಕಾಗಿಲ್ಲವೆಂಬ ಆದೇಶವನ್ನು ನೀಡಿದೆ. ಗಮನಿಸಬೇಕಾದ ಅಂಶವೆಂದರೆ ಈ ದಾಖಲೆಗಳಲ್ಲಿ ತುಳುವರಎಂಬ ಪದ ಪ್ರಯೋಗವಾಗಿದೆ. ಇದನ್ನು ‘ತುಳುಭಾಷಿಕ’ ಎಂಬರ್ಥದಲ್ಲಿ ಗ್ರಹಿಸದೆ ‘ತುಳುನಾಡಿನವ’ ಎಂಬ ಅರ್ಥದಲ್ಲಿಯೇ ಭಾವಿಸಿಕೊಳ್ಳುವುದು ಸೂಕ್ತ. ಏಕೆಂದರೆ ಕೆದಂಬಾಡಿ ಮತ್ತು ಪಾರೆಮಜಲಿನವರು ಈಗಲೂ ಎರಡೂ ಕಡೆ ಅರೆಭಾಷೆಯನ್ನೇ ಆಡುತ್ತಾರೆ.
ಪ್ರಸ್ತುತ ಕೊಡಗಿನ ವಾತಾವರಣಕ್ಕನುಗುಣವಾಗಿ ಅಲ್ಲಿನ ಗೌಡರು ತಮ್ಮ ಸಂಸ್ಕೃತಿ  ಮತ್ತು ಭಾಷೆಯನ್ನು ಬೆಳೆಸಿಕೊಂಡಿದ್ದಾರೆ.  ಕೊಡಗಿನ ಅರೆಭಾಷೆಯನ್ನು ಸುಳ್ಯ ಕಡೆಯ ಅರೆಭಾಷೆಯ ಪ್ರಾದೇಶಿಕ ರೂಪವೆಂದು ಖಚಿತವಾಗಿ ಗುರುತಿಸಬಹುದು. ಗಮನಿಸಬೇಕಾದ ಒಂದು ಮುಖ್ಯ   ಅಂಶವೆಂದರೆ, ಐಗೂರು ಪರಿಸರದಿಂದ ಶನಿವಾರ ಸಂತೆಯ ಮೂಲಕವಾಗಿ ಸೋಮವಾರಪೇಟೆ ಕಡೆಗೆ ವಲಸೆ ಹೋದ ಗೌಡರು ಅರೆಭಾಷಿಕರಲ್ಲ.
ವಿಷಯ ಈಗ ಸ್ಪಷ್ಟವಾಗುತ್ತಿದೆ. ಕೆಂಚಮ್ಮನ ಹೊಸಕೋಟೆ, ಐಗೂರು ಪರಿಸರದಲ್ಲಿ ಆಗಲೂ ಅರೆಭಾಷೆ ಇರಲಿಲ್ಲ. ಈಗಲೂ ಇಲ್ಲ. ಹೀಗಾಗಿ ಅರೆಭಾಷೆಯು ಆ ಪರಿಸರದಿಂದ ಸುಳ್ಯ ಪರಿಸರಕ್ಕೆ ಗೌಡರು ವಲಸೆ ಹೋದ ಆನಂತರವೇ ಸೃಷ್ಟಿಯಾದ ಭಾಷೆ ಎಂದು ಹೇಳಬಹುದು.  ಅದು ಯಾಕೆ, ಹೇಗೆ ಸೃಷ್ಟಿಯಾಯಿತು ಎಂಬುದರ ಬಗ್ಗೆ ನಮ್ಮ ಸಂಶೋಧನೆಗಳು ಈಗ ಮುಂದುವರೆಯಬೇಕು.
ಅರೆಭಾಷೆಯ  ಸ್ಥೂಲ ಪರಿಚಯ:
ಪ್ರಸ್ತುತ ಲೇಖನದ ಆರಂಭದಲ್ಲಿ ಹೇಳಿದಂತೆ, ಅರೆಭಾಷೆಯಲ್ಲಿ ಅತಿ ಪ್ರಾಚೀನ ಪದಗಳಿವೆ. ಅದರ ಧ್ವನಿಮಾ ವಿನ್ಯಾಸ ಕನ್ನಡಕ್ಕಿಂತ ಭಿನ್ನವಾಗಿದೆ.  ಇದರ ಅಖ್ಯಾತ ವಿಭಕ್ತಿಗಳ ಪ್ರಸರಣವನ್ನು ಗಮನಿಸಿಕೊಂಡು, ಅರೆಭಾಷೆಯು ಉತ್ತರ ದ್ರಾವಿಡ ಭಾಷಾ ಗುಂಪಿಗೆ ಸೇರಿದ, ಸುಮಾರು 22 ಲಕ್ಷ ಜನ ಮಾತಾಡುತ್ತಿರುವ, ಬಲೂಚಿಸ್ಥಾನದ  ಬ್ರಾಹೂಯಿಯ ಅನಂತರದ ಸ್ಥಾನವನ್ನು ಪಡೆಯುತ್ತದೆಂದು ಖ್ಯಾತ ವಿದ್ವಾಂಸ ಎಸ್.ಎ. ಷಣ್ಮುಗಂ ಅವರು ಅಭಿಪ್ರಾಯಪಟ್ಟಿದ್ದಾರೆ. (Shanmugam 1982)
ಅದೇನೇ ಇದ್ದರೂ ಈ ಭಾಷೆಯು ಧ್ವನಿ, ವ್ಯಾಕರಣ, ಪದಕೋಶ ಮುಂತಾದ ನೆಲೆಗಳಲ್ಲಿ  ತನ್ನದೇ ಆದ ಕೆಲವು ವೈಶಿಷ್ಟ್ಯಗಳನ್ನು ತೋರಿಸುತ್ತಿರುವುದು ಮಹತ್ವದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಪ್ರೊ.ಕುಶಾಲಪ್ಪ ಗೌಡರು ( 1970)  ಮಾಡಿದ ಕೆಲಸವು ಅಸಾಮಾನ್ಯವಾದುದು. 14 ಸ್ವರಗಳು ಮತ್ತು 22 ವ್ಯಂಜನಗಳನ್ನು ಧ್ವನಿಮಾಗಳೆಂದು ನಿರ್ಧರಿಸಿರುವ ಅವರು ಶಿಷ್ಟ ಕನ್ನಡದಲ್ಲಿಲ್ಲದ ಆದರೆ ಅರೆಭಾಷೆಯಲ್ಲಿ ಮಾತ್ರ ಕಾಣ ಸಿಗುವ –
1.    ಮಧ್ಯೋನ್ನತ ( ಉದಾ : ಅಡ್‍ಕೆ, ಅಗ್‍ಟೆಚಗ್ ಟೆ, ಅವ್ ಕೆ ಇತ್ಯಾದಿ)
2.    ಮಧ್ಯ ಮಧ್ಯ ( ಉದಾ : ಕ್ ಯಿ, ನ್‍ಡಿಗ್ಂಡ್ ಕ್ ಮ್ಮು ಇತ್ಯಾದಿ)
3.    ಪೂರ್ವ ನಿಮ್ನ  ( ಉದಾ : ಎಮ್ಮೆ, ತಂಗೆ, ಬಾವೆಹೆಬಗ ಇತ್ಯಾದಿ)
4.    ಪಶ್ಚ  ನಿಮ್ನ ( ಉದಾ : ಒಳೊ, ಕೋಟೆ, ನೋಡೊಮೊ ಇತ್ಯಾದಿ)
ಸ್ವರಗಳನ್ನು ಗುರುತಿಸಿದ್ದಾರೆ. ಮಧ್ಯೋನ್ನತ, ಮಧ್ಯ ಮಧ್ಯ, ಪೂರ್ವ ನಿಮ್ನ, ಪಶ್ಚ ನಿಮ್ನಗಳಿಗೆ ಅರೆಭಾಷೆಯಲ್ಲಿ ದೀರ್ಘ ರೂಪಗಳಿಲ್ಲ.
ವ್ಯಂಜನಗಳಲ್ಲಿ ಙ ಮತ್ತು ಞ ಗಳು ಅರೆ ಬಾಷೆಯಲ್ಲಿ ಧ್ವನಿಮಾಗಳಾಗಿಯೇ ಉಳಿದಿರುವುದೊಂದು ವಿಶೇಷವೇ ಸರಿ.  ಮಙ, ಕುಞಇತ್ಯಾದಿ. ಇದಕ್ಕೂ ಮಿಗಿಲಾಗಿ ಇವಕ್ಕೆ ದ್ವಿತ್ವ ರೂಪವೂ ಇದೆ. ಉದಾ: ಮಙ್ಙಣೆ,  ಹಞ್ಞ , ಕುಞ್ಙ ಮುಳ್ಳುಙ್ಙ ಇತ್ಯಾದಿ.
ವ್ಯಂಜನಗಳಲ್ಲಿ ಇವತ್ತಿಗೂ ಅನುನಾಸಿಕಗಳು ಉಳಿದುಕೊಂಡಿವೆ.  ಉದಾ: ತಾಙ್ಗ್ , ಬೇಙ್ಕೆ , ನೂಙ್ಕು, ಮೂಙ್ಗು ಇತ್ಯಾದಿ.
ವ್ಯಾಕರಣ ರಚನೆಯನ್ನು ಗಮನಿಸಿದರೆ, ಪ್ರಥಮ ಪುರುಷ ಸರ್ವನಾಮದಲ್ಲಿ ಪುಲ್ಲಿಂಗ ಮತ್ತು ನಪುಂಸಕ ಲಿಂಗ, ಎಂಬ ಎರಡು ವ್ಯತ್ಯಾಸ ಮಾತ್ರ ಕಂಡು ಬರುತ್ತದೆ. ಸ್ತ್ರೀ ಲಿಂಗಕ್ಕೆ ಪ್ರತ್ಯೇಕ ರೂಪ ಇಲ್ಲ. ಬಹುವಚನದಲ್ಲಿ ಪುಲ್ಲಿಂಗ ಮತ್ತು ನಪುಂಸಕ ಲಿಂಗಕ್ಕೆ ವ್ಯತ್ಯಾಸ ಇಲ್ಲ.
ಕ್ರಿಯಾಪದಗಳಲ್ಲಿ ವಿಶೇಷವಾಗಿ ಅರೆಭಾಷೆಯು ಮೂರು ಕಾಲಕ್ಕೂ ಪ್ರತ್ಯೇಕ ರೂಪಗಳನ್ನು ಹೊಂದಿರುವುದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ. (ಏಕೆಂದರೆ ಹೆಚ್ಚಿನ ಕನ್ನಡದಲ್ಲಿ ಎರಡೇ ಕಾಲವನ್ನು ಸೂಚಿಸುವ ಕ್ರಿಯಾಪದಗಳಿವೆ. ಪೂರ್ಣ ಕ್ರಿಯಾಪದಗಳಲ್ಲಿ ವರ್ತಮಾನದ ರೂಪವೇ ಭವಿಷ್ಯತ್ತಿನ ಅರ್ಥದಲ್ಲಿ ಬಳಕೆಯಾಗುತ್ತದೆ.

ಉತ್ತಮ ಪುರುಷ :
ಏಕವಚನ                  ಬಹುವಚನ
ಭೂತಕಾಲ                             ಬಂದೆ                          ಬಂದೊ
ವರ್ತಮಾನಕಾಲ                   ಬನ್ನೆ                           ಬಂದವೆ
ಭವಿಷ್ಯತ್ ಕಾಲ                     ಬಾವೆ                           ಬಾವೊ
ಮಧ್ಯಮ ಪುರುಷ
ಏಕವಚನ                              ಬಹುವಚನ
ಭೂತಕಾಲ                 ಬಂದೆಬಂದ                         ಬಂದರಿ
ವರ್ತಮಾನಕಾಲ       ಬಂದ  ಬಂದಿಯ                    ಬಂದರೆ
ಭವಿಷ್ಯತ್‍ಕಾಲ          ಬಾವ                                       ಬಾವೆರಿ

ಪ್ರಥಮ ಪುರುಷ
ಏಕವಚನ                              ಬಹುವಚನ
ಭೂತಕಾಲ                 ಬಾತ್                                      ಬಂದೋ
ವರ್ತಮಾನಕಾಲ       ಬಂದದೆ                                   ಬಂದವೆ
ಭವಿಷ್ಯತ್‍ಕಾಲ          ಬಾದು                                     ಬಾವೊ
ಉಳಿದಂತೆ ಕೆಲವು ಗುಣಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು-
1.    ಅರೆಭಾಷೆಯಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲ.      
2.    ಅವರ್ಗೀಯ ವ್ಯಂಜನಗಳಲ್ಲಿ ‘ ಸ ’ ಮಾತ್ರ
3.    ಇ ಮತ್ತು ಉ ಸ್ವರಗಳ ಮಧ್ಯೆ ಒಂದು ಸ್ವರ ಇದೆ. 
4.    ಎ ಮತ್ತು ಒ ಸ್ವರಗಳ ಮಧ್ಯೆ ಒಂದು ಸ್ವರ ಇದೆ.
5.     ‘ಎ’ಕಾರಕ್ಕಿಂತ ಕೆಳಗಣ ಒಂದು ಸ್ವರ ಇದೆ.
6.    ‘ಒ’ ಕಾರಕ್ಕಿಂತ ಕೆಳಗಣ ಒಂದು ಸ್ವರ ಇದೆ.  
7.    ಬಹುವಚನ ರೂಪಗಳಲ್ಲಿ ‘ಗ’ವು ಕನ್ನಡದ ‘ಗಳು’  ಅರ್ಥವನ್ನು ನೀಡುತ್ತದೆ.   
8.    ಕೆಲವು ರೂಪಗಳು ಬಹುವಚನವಿದ್ದಾಗಲೂ ಅವು ಏಕವಚನದ ಅರ್ಥದಲ್ಲಿಯೇ   ಬಳಕೆಯಾಗುತ್ತದೆ. 
9.     ‘ಅಮೊ’ ‘ಉದು’ ‘ಉವೊ’ ಎಂಬ ಪ್ರತ್ಯಯಗಳು ಧಾತುವಿಗೆ ಸೇರಿ ಸಂಭಾವನಾರ್ಥಕ ಕ್ರಿಯಾಪದಗಳಾಗುತ್ತವೆ.
10. ಪದಾದಿಯ ದೀರ್ಘಾಕ್ಷರ ಕ್ರಿಯಾಪದಗಳಿಗೆ  ಅನುಸ್ವಾರ ಬರುತ್ತದೆ. ಹೀಗಾಗಿ ಹಳಗನ್ನಡ ಕ್ರಿಯಾರಚನೆಗಳ ಮಾದರಿ ಅರೆಭಾಷೆಯಲ್ಲಿ  ಇನ್ನೂ ಉಳಿದಂತಾಗಿದೆ. 
11. ಭಿನ್ನವಾದ ಅನೇಕ ಕ್ರಿಯಾರಚನೆಗಳು ಈ ಭಾಷೆಯಲ್ಲಿದೆ. ಉದಾ: ನೇಚ್ ( ಎತ್ತು), ಚೋಂಪು ( ಎರಡು ) ಇತ್ಯಾದಿ
12. ಹಳಗನ್ನಡದ ಕೆಲವು ಸಬಿಂದುಕ ಪದಗಳು ಅರೆಭಾಷೆಯಲ್ಲಿ ಹಾಗೇ ಉಳಿದಿದೆ. ಉದಾ:  ಅಡಂಗು, ಕಲಂಕ್ ಇತ್ಯಾದಿ.        
13. ಕೆಲವು ಹಳಗನ್ನಡ ಪದಗಳು ಅದೇ ರೂಪದಲ್ಲಿ ಉಳಿದಿದೆ. ಉದಾ:- ಕೊತ್ತಿ, ಕೂಸು, ಗಡ, ಹೈದ ಇತ್ಯಾದಿ.
14. ವರ್ತಮಾನ ಕಾಲದ ಕ್ರಿಯಾಪದಗಳು ಸಂಕ್ಷೇಪವಾಗಿರುತ್ತದೆ. ಉದಾ: ಹೋಕು ( ಹೋಗಬೇಕು), ಬರುತ್ತೇನೆ ( ಬನ್ನೆ).  ತನ್ನೆ (ತರುತ್ತೆನೆ). ಇತ್ಯಾದಿ
ಅರೆಭಾಷೆಯ ಈ ಅಪೂರ್ವ ಗುಣಗಳ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯಬೇಕಾಗಿದೆ.
ಕೊಡಗಿನಲ್ಲಿ ಬಳಕೆಯಲ್ಲಿರುವ ರೆಭಾಷೆಯ ಬಗ್ಗೆ ಅಧ್ಯಯನ ನಡೆಸಿರುವ ಡಾ. ಲಾವಣ್ಯ ಅವರು ಹೀಗೆ ಹೇಳುತ್ತಾರೆ-
‘ಅರೆ ಭಾಷೆಯಲ್ಲಿನ ಗಾದೆಗಳು, ಒಗಟುಗಳು, ನುಡಿಗಟ್ಟುಗಳು, ಬಂಧುವಾಚಕಗಳು, ಸಂಬೋಧನಾ ರೂಪಗಳು, ವ್ಯಕ್ತಿಯ ಹೆಸರುಗಳು, ಮನೆಹೆಸರುಗಳು, ಬಾಲಭಾಷೆ ಹೀಗೆ ಭಾಷಾ ಬಳಕೆಯ ವಿವಿಧ ನೆಲೆಗಳನ್ನು ಕುರಿತು ಇಲ್ಲಿ ಚರ್ಚಿಸಲಾಗಿದೆ. ಕೆಲವು ಉದಾಹರಣೆಗಳನ್ನು ನೋಡಬಹುದು.
 ಗಾದೆಗಳು:- “ಕೊತ್ತಿ ತಲೆಲಿ ದೀಪ ಇಟ್ಟಂಗೆ”  , “ಕಾಡು ಕೋಳಿಗುಟ್ಟು ಸನಿ ಚಂಗ್ರಾಂದಿ”  ಇತ್ಯಾದಿ.
ಒಗಟುಗಳು:- “ಕಣ್ಣ್ ಕಾಣದ ಅಜ್ಜ ಪಾಲದಾಟುದು”- ಜಿಗಣೆ (ಉಂಬುಳು)  
 “ಗಂಟೆವಳಗೆ ನಾಲಗೆ ನಾಲಗೆ ಒಳಗೆ ಕುಸುಮ”(ಚಕ್ಕೋತನ ಹಣ್ಣು.)
ಬಂಧುವಾಚಕಗಳು:   ದೊಡ್ಡ ಮಾಂವ’(  ತಾಯಿಯ ಹಿರಿಯ ಸಹೋದರ. ಸಣ್ಣ ಮಾಂವ’  ( ತಾಯಿಯ ಎರಡನೇ ಸಹೋದರ.), ಕುಂಞ ಮಾಂವ’ ( ತಾಯಿಯ ಕಿರಿಯ ಸಹೋದರ).
ಸಂಬೋಧನಾ ರೂಪಗಳು: ಮಙ ( ಮಗ),  ಮಗ (ಮಗಳು), ಚಾಂಪಾ( ಕುಟುಂಬದ ಹಿರಿಯ ಸದಸ್ಯ)   ಇತ್ಯಾದಿ.’
ಈ ಮಾತುಗಳು ಸುಳ್ಯ ಪರಿಸರದ ಅರೆಭಾಷೆಗೂ ಅನ್ವಯವಾಗುತ್ತದೆ.

ಅರೆಭಾಷೆ- ಕೆಲವು ಗೊಂದಲಗಳು.
ಅರೆಭಾಷೆಯು ಉಪಭಾಷೆಯೇ?
ಅರೆಭಾಷೆಯನ್ನು ಕನ್ನಡದ ಸಾಮಾಜಿಕ ಉಪಭಾಷೆಯೆಂದೇ ಭಾಷಾ ಶಾಸ್ತ್ರಜ್ಞರು ಗುರುತಿಸಿದ್ದಾರೆ.  ಆದರೆ ಪ್ರೊ. ಕುಶಾಲಪ್ಪ ಗೌಡರು 1970ರಷ್ಟು ಹಿಂದೆ ಗುರುತಿಸಿರುವಂತೆ ಅರೆಭಾಷೆಯು ಕನ್ನಡಕ್ಕಿಂಥ ಹಲವು ವಿಷಯಗಳಲ್ಲಿ ಭಿನ್ನವಾಗಿದೆ. ಈ ನಿಟ್ಟಿನಲ್ಲಿ ಅರೆಭಾಷೆಯು ಒಂದು ಉಪಭಾಷೆಯೋ ಅಥವಾ ಸ್ವತಂತ್ರ ಭಾಷೆಯೋ ಎಂಬ ಕುರಿತು ನಾವೀಗ ಹೊಸ ಚರ್ಚೆಯನ್ನು ಆರಂಭಿಸಲು ಸಾಧ್ಯವಿದೆ.
ಮೂಲತ: ಉಪಭಾಷೆ ಎಂಬ ಪದವು ಗ್ರೀಕ್ ಮೂಲದ ಡಯಲೆಕ್ಟ್  ಪದಕ್ಕೆ ಸಂವಾದಿಯಾಗಿ ಸೃಷ್ಟಿಯಾಗಿದೆ. 16 ನೆಯ ಶತಮಾನದ ಇಂಗ್ಲಿಷ್ ವಿದ್ವಾಂಸರು ಈ ಪದವನ್ನು ಶಿಷ್ಟೇತರ ಜನ ಅಥವಾ ಅವಿದ್ಯಾವಂತರು ಆಡುವ ಭಾಷಾ ಪ್ರಬೇಧ ಎಂಬರ್ಥದಲ್ಲಿ ಬಳಸಿದ್ದಾರೆ. ಉಪಭಾಷೆಯೆಂದಾಗ ಪ್ರಧಾನಭಾಷೆಯೊಂದಿದೆ ಎನ್ನುವ ಅರ್ಥ ತಾನೇ ತಾನಾಗಿ ಬರುತ್ತದೆ. ಸ್ಥೂಲವಾಗಿ ನೋಡಿದಾಗ ಅರೆಭಾಷೆಗೆ ಕನ್ನಡ ಪ್ರಧಾನ ಭಾಷೆಯೇ ಹೌದು . ಆದರೆ ಸೂಕ್ಷ್ಮವಾಗಿ ನೋಡಿದಾಗ ಅರೆಭಾಷೆಯು ಸುಳ್ಯ ಪರಿಸರದ ಬೇರೆ ಬೇರೆ ಭಾಗಗಳು, ಬೆಟ್ಟಗಳು, ಹಳ್ಳಗಳು, ದಟ್ಟವಾದ ಕಾಡು  ಇತ್ಯಾದಿ ಪ್ರಾಕೃತಿಕ ಕಾರಣಗಳಿಂದ ಚಾರಿತ್ರಿಕವಾಗಿ ತುಂಬ ಬೇರೆಯಾಗಿಯೇ ಬೆಳೆದಿರುವುದು ಗಮನಕ್ಕೆ ಬರುತ್ತದೆ. ಇಲ್ಲಿಯ ಜನರಿಗೆ ಇತರೆಡೆಯ ವಿಭಾಗಗಳಲ್ಲಿನ ಜನರ ಸಂಪರ್ಕ ಇತ್ತೀಚಿನವರೆಗೆ ಬಹಳ ಕಡಿಮೆ ಇದ್ದುದರಿಂದ ಅರೆಭಾಷೆಯಯಲ್ಲಿಯ  ವೈಲಕ್ಷಣ್ಯಗಳು ಹೆಚ್ಚುತ್ತಾ ಹೋಗಿವೆ. ಹೀಗಾದಾಗ ಸಹಜವಾಗಿಯೇ ಅದರ ಉಪಭಾಷಾ ಗುಣಗಳು ಕಡಿಮೆಯಾಗುತ್ತಾ ಹೋಗಿದೆ. ಇದು ಸ್ವತಂತ್ರ ಭಾಷೆಯ ಲಕ್ಷಗಳಿಗೆ ಮೈಗೊಟ್ಟಿದೆ.   
ಹಾಗೆ ನೋಡಿದರೆ ಅರೆಭಾಷೆಯು ಕನ್ನಡದ ಮೂಗಿನಡಿಗೆ ನೇರವಾಗಿ ಬಂದು ನೂರು ನೂರಿಪ್ಪತ್ತು  ವರುಷಗಳಿಗಿಂತ ಹೆಚ್ಚು ಆದ ಹಾಗೆಯೇ ಇಲ್ಲ. ಅರೆ ಭಾಷೆಯನ್ನು ಪ್ರಧಾನವಾಗಿ ಆಡುವ ಗೌಡರು ಸುಳ್ಯ ಪರಿಸರಕ್ಕೆ ಬಂದು 600 ವರ್ಷಗಳಿಗಿಂತ ಹೆಚ್ಚಾಗಿಲ್ಲ. ಹಾಗೆ ವಲಸೆಬಂದಾಗ ಇಲ್ಲಿದ್ದ ಮಲೆಕುಡಿಯರಾಗಲೀ, ದಲಿತರಾಗಲೀ ಮಾತಾಡುತ್ತಿದ್ದುದು ತುಳುವನ್ನೇ. ಆನಂತರದ ಕಾಲದಲ್ಲಿ ಆಡಳಿತಾತ್ಮಕವಾಗಿ ಅದು ಕೊಡಗು ಮತ್ತು ತುಳುನಾಡಿನ ನಡುವೆ ಓಲಾಡುತ್ತಿದ್ದರೂ ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಅದು ತುಳುನಾಡಿನ ಭಾಗವೇ ಆಗಿತ್ತು. ಅರೆಭಾಷಿಕರು ಬಹಳ ಕಾಲ ತಮ್ಮ ತಮ್ಮಲ್ಲೇ ಹೆಚ್ಚಾಗಿ ವ್ಯವಹಾರಗಳನ್ನು ನಡೆಸುತ್ತಾ ಬಂದಿರುವುದರಿಂದ ಆ ಭಾಷೆಯು ತನ್ನ ವಿಶಿಷ್ಟತೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದಿದೆ. ಇದರಿಂದಾಗಿ ಅರೆಭಾಷೆಯಲ್ಲಿ ಉಪಭಾಷೆಯ ಲಕ್ಷಣಗಳಿಗಿಂತ ಹೆಚ್ಚಾಗಿ ಸ್ವತಂತ್ರ ಭಾಷೆಯ ಲಕ್ಷಣಗಳೇ ಹೆಚ್ಚು ಕಾಣಿಸುತ್ತವೆ. ಕೋಟ, ಕೊಡವ, ಮುಂಡ, ತೋಡ, ಕುಇ, ನಾಯ್ಕಿ, ಗದಬ ಮೊದಲಾದ ಭಾಷೆಗಳು ಸ್ವತಂತ್ರ ದ್ರಾವಿಡ ಭಾಷೆಗಳೇ ಹೌದಾಗಿದ್ದರೆ ಬಹುಶ:  ಅರೆಭಾಷೆಯೂ ಒಂದು ಸ್ವತಂತ್ರಭಾಷೆಯೇ ಹೌದು. ಜಾನಪದ ಅಧ್ಯಯನಗಳ ಆರಂಭಿಕ ಹಂತದಲ್ಲಿ ನಾವು ಪಾಠಾಂತರ ಎಂಬ ಪದವನ್ನು ಬಳಸುತ್ತಿದ್ದೆವು. ಅಂದರೆ ಯಾವುದೋ ಒಂದು ಮೂಲ ಪಾಠದಿಂದ ಸಿಡಿದು ಪ್ರತ್ಯೇಕಗೊಂಡ ಪಾಠ ಇರಬೇಕು ಎಂಬರ್ಥದಲ್ಲಿ ಆ ಪದ ಬಳಕೆಯಾಗುತ್ತಿತ್ತು. ಆದರೆ ಈಗ ನಾವು ಎಲ್ಲಾ ಪಠ್ಯಗಳನ್ನೂ ಸ್ವತಂತ್ರ ಪಠ್ಯಗಳೆಂದೇ ಕರೆಯುತ್ತೇವೆ. ಹಾಗೆಯೇ ಭಾಷೆಯ ಕುರಿತೂ ನಾವು ಹೊಸ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗಿದೆ. ಮುಖ್ಯ ಹಾಗೂ ಸ್ವತಂತ್ರ ಭಾಷೆಗಳೇ ಪತನಮುಖಿಯಾಗುತ್ತಿರುವ ಇಂದಿನ  ಸಂದರ್ಭದಲ್ಲಿ ಉಪಭಾಷೆಗಳನ್ನು ಯಾರು ಕೇಳುತ್ತಾರೆ?. ಹಾಗಾಗಿ  ಕುರಿತು ನಮ್ಮ ಸಂಶೋಧನೆಗಳು ಇನ್ನಷ್ಟು ಮುಂದುವರೆಯಬೇಕು. 
ಪ್ರಾಚೀನ ಗ್ರೀಸ್ ನಲ್ಲಿ ಇದ್ದ ನಾಲ್ಕು ಉಪಭಾಷೆಗಳಲ್ಲಿ ರಾಜಕೀಯ ಕಾರಣಗಳಿಂದಾಗಿ ಅಥೆನ್ಸಿನ ಭಾಷೆ ಪ್ರಬಲವಾಗಿ, ಶಿಷ್ಟಭಾಷೆಯೆನಿಸಿಕೊಂಡಿತು. ಈಗಿನ ಇಟಾಲಿಯನ್ ಭಾಷೆ ಹಿಂದೆ ರೋಮ್ ನಗರದ ಸುತ್ತ ಮುತ್ತ ಆಡುತ್ತಿದ್ದ ಲ್ಯಾಟಿನ್ನಿನ ಒಂದು ಉಪಭಾಷೆಯೇ ಆಗಿತ್ತು. ಇಂಗ್ಲೆಂಡಿನಲ್ಲಿ ಲಂಡನ್ ಮತ್ತು ಆಕ್ಸಫರ್ಡ್ ಇಂಗ್ಲಿಷ್ ಭಾಷೆಯೇ ಶಿಷ್ಟಭಾಷೆಯೆನಿಸಿಕೊಂಡಿದೆ. ಹೀಗೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿಂದಾಗಿ ಒಂದು ಪ್ರದೇಶದ ಭಾಷೆ ಮೇಲ್ಮೆಯನ್ನು ಪಡೆಯುತ್ತದೆ. ಈ ಅಂಶವನ್ನು ಅರೆಭಾಷಿಕರು ಯಾವತ್ತೂ ಮರೆಯಬಾರದು.
ಅರೆಭಾಷೆ: ಹೆಸರಿನ ಸಮಸ್ಯೆಗಳು
ಸುಳ್ಯ ಪರಿಸರದ ಗೌಡ ಸಮುದಾಯದ ಪ್ರಧಾನ ಭಾಷೆ ಅರೆಭಾಷೆ. ಹಾಗಂತ ಎಲ್ಲ ಗೌಡರೂ ಅರೆಭಾಷೆ ಮಾತಾಡುತ್ತಾರೆ ಎಂದೇನೂ ಅಲ್ಲ. ತುಳು ಮಾತಾಡುವ ಗೌಡರೂ ಇದ್ದಾರೆ. ಅರೆಭಾಷೆಯು ಗೌಡರಿಗೆ ಸೀಮಿತವಾಗಿದೆ ಎಂದೂ ಭಾವಿಸಬೇಕಾಗಿಲ್ಲ. ದಲಿತರು, ಮಲೆಕುಡಿಯರು, ಮುಸಲ್ಮಾನರು, ಬ್ರಾಹ್ಮಣರು ಮತ್ತಿತರರು ಕೂಡಾ ಈ ಭಾಷೆಯನ್ನು ಅಗತ್ಯ ಬಿದ್ದಾಗ ಮಾತಾಡುತ್ತಾರೆ. ಸಂಶೋಧನಾ ಕ್ಷೇತ್ರದಲ್ಲಿ ಈ ಭಾಷೆಗೆ ಗೌಡ ಕನ್ನಡಎಂಬ ಅಧಿಕೃತ ಹೆಸರನ್ನು ಪ್ರೊ. ಎಂ. ಮರಿಯಪ್ಪ ಭಟ್ಟರು ಮೊದಲು ಬಳಕೆ ತಂದರು (ಕುಶಾಲಪ್ಪ ಗೌಡ 1967) ಇದರಿಂದ ಅನಂತರದ ಶಾಸ್ತ್ರೀಯವಾದ ಅಧ್ಯಯನಗಳಲೆಲ್ಲ ಅರೆಭಾಷೆಯನ್ನು   ಗೌಡ ಕನ್ನಡವೆಂದೇ ಗುರುತಿಸಲಾಗಿದೆ ( ಕುಶಾಲಪ್ಪ ಗೌಡ 1970, ಪುರುಷೋತ್ತಮ ಬಿಳಿಮಲೆ 1984, ವಿಶ್ವನಾಥ ಬದಿಕಾನ 1992). ಆದರೆ ಜನರ ನಡುವೆ ಇವತ್ತಿಗೂ ಉಳಿದುಕೊಂಡಿರುವ ಪದವೆಂದರೆ ಅರೆಭಾಷೆಯೇ ಆಗಿದೆ. ಈ ಪದವನ್ನೂ ಕೂಡಾ ಬೇರ್ಯಾರೋ, ಯಾವುದೋ ಕಾಲಘಟ್ಟದಲ್ಲಿ ಬಳಕೆಗೆ ತಂದಂತೆ ತೋರುತ್ತದೆ. ಏಕೆಂದರೆ ಈ ಭಾಷೆಯನ್ನು ಬಳಸುವವರಿಗೆ ಇದು ಅರೆ ಅಥವಾ ಅರ್ಧ ಭಾಷೆ ಆಗಿರಲು ಸಾಧ್ಯವಿಲ್ಲ. ನಾ ಹೋನೆ, ನಾ ಬನ್ನೆ, ನಾ ಕುದ್ದನೆ, ನೀ ಹೋಕು, ಅಂವ ಬಾಕು, ಮೊದಲಾದ ವಾಕ್ಯಗಳು ಅದನ್ನು ಬಳಸುವವರಿಗೆ ಪೂರ್ಣ ಅರ್ಥ ಕೊಡುವ ವಾಕ್ಯಗಳೇ ಆಗಿದ್ದು  ಅದರಲ್ಲಿ ಸಂವಹನದ ಸಮಸ್ಯೆ ಏನೂ ಇಲ್ಲ. ಇದು ಹೌದಾದರೆ, ಕನ್ನಡ ಮಾತಾಡುವ ಅಧಿಕಾರಿಗಳು ಯಾರೋ ಈ ಭಾಷೆಯನ್ನು ಕನ್ನಡದೊಡನೆ ಹೋಲಿಸಿ, ಇದನ್ನು ‘ಅರೆಭಾಷೆ’ ಅಥವಾ ‘ಅರೆ ಕನ್ನಡ’ ಎಂದು ಕರೆದಿರುವ ಸಾಧ್ಯತೆಯೇ ಹೆಚ್ಚು. ನನ್ನ ಪ್ರಕಾರ ಇದು 1871ರಲ್ಲಿ ಮೈಸೂರಿನಲ್ಲಿ ನಡೆದ ಮೊದಲ ಜನಗಣತಿಯ ಸಂದರ್ಭದಲ್ಲಿ ಇದು ನಡೆದಿದೆ.   ಎ.ಡಬ್ಲ್ಯೂ.ಸಿ. ಲಿಂಡ್ಸೆ ಹಾಗೂ.   ಅಂದಿನ ದಿವಾನರಾಗಿದ್ದ ಸಿ. ರಂಗಾಚಾರಿಯವರು ಇದನ್ನು ಅರೆ ಕನ್ನಡವೆಂದು ಕರೆದಿರುವ ಬಗ್ಗೆ ಕೆಲವು ಸೂಚನೆಗಳಿವೆ. ಈ ನಿಟ್ಟಿನಲ್ಲಿ ನಮ್ಮ ಸಂಶೋಧನೆಗಳು ಇನ್ನಷ್ಟು ಮುಂದುವರೆಯಬೇಕಾಗಿದೆ.  ಉಳಿದಂತೆ ಕರಾವಳಿಯಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ ಮಿಶನರಿಗಳಾಗಲೀ, ವಸಾಹತು ಕಾಲದ ಅಧಿಕಾರಿಗಳಾಗಲೀ, ಆ ಕಾಲದಲ್ಲಿ ತಯಾರಾದ ಗಜೆಟಿಯರ್ ಗಳಲ್ಲಾಗಲೀ ಅರೆ ಭಾಷೆಯ ಬಗ್ಗೆ ಉಲ್ಲೇಖಗಳೇ ಇಲ್ಲ.
ಶೈಕ್ಷಣಿಕ ವಲಯಗಳಲ್ಲಿ ಇದೀಗ ಈ ಭಾಷೆಯನ್ನು ಗೌಡ ಕನ್ನಡವೆಂದೂ, ಅರೆಭಾಷೆಯೆಂದೂ, ಅರೆಬಾಸೆಯೆಂದೂ ಕರೆಯುತ್ತಿದ್ದೇವೆ. ಪ್ರೊ.ಕುಶಾಲಪ್ಪ ಗೌಡರು ಸರಿಯಾಗಿಯೇ ಗುರುತಿಸಿದಂತೆ ಈ ಭಾಷೆಯಲ್ಲಿ ಕೇವಲ ಸ ಇದೆ, ಶ ಮತ್ತು ಷ ಇಲ್ಲ. ‘ಅವಂಗೆ ಬಾಸೆ ಉಟ್ಟಯಾ?’ ‘ಬಾಸೆ ಇಲ್ಲದಂವ’,  ಎಂಬಂಥ ಪ್ರಯೋಗಗಳಲ್ಲಿಯೂ ಸ ಇದೆ. ಮಹಾಪ್ರಾಣವಂತೂ ಇಲ್ಲ. ಇದನ್ನು ಗಮನಿಸಿದರೆ ಅರೆಭಾಷೆಗಿಂತ ಅರೆಬಾಸೆಯೇ ಜನಭಾಷೆಯಾಗಿ ಪ್ರಚಲಿತದಲ್ಲಿರುವಂತೆ ತೋರುತ್ತದೆ. ಭಾಷೆಯೊಂದರ ಹೆಸರಿನ ಈ ಗೊಂದಲವನ್ನೂ ನಾವೀಗ  ಪರಿಹರಿಸಿಕೊಳ್ಳಬೇಕಾಗಿದೆ.
ಅರೆಭಾಷೆಯ ಸಬಲೀಕರಣದತ್ತ: 
ಈಚೆನ ದಿನಗಳಲ್ಲಿ ಅರೆಭಾಷೆಯ ಕುರಿತು ಒಂದು ಬಗೆಯ ಎಚ್ಚರ ಮೂಡುತ್ತಿದೆ. ಕರ್ನಾಟಕದ ಅನೇಕ ಭಾಷೆಗಳಿಗೆ ದೊರಕದ ಅಕಾಡೆಮಿಯು ಅರೆಭಾಷೆಗೆ ದೊರಕಿದೆ. ಇದರ ಪೂರ್ಣ ಪ್ರಯೋಜನ ಅರೆಭಾಷೆಗೆ ಆಗಬೇಕು. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವು ಸಲಹೆಗಳನ್ನು ನೀಡಲಾಗಿದೆ.
1.    ಬಹಳ ವರ್ಷಗಳ ಕಾಲ ಅಣ್ಣಾಮಲೈಯಲ್ಲಿ ಇದ್ದು, ವಿಶ್ವಖ್ಯಾತಿಯ ಭಾಷಾ ಶಾಸ್ತ್ರಜ್ಞರೊಡನೆ ಕೆಲಸ ಮಾಡಿ, ಮುಂದೆ ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ನಿವೃತ್ತರಾದ ಪ್ರೊ. ಕೋಡಿ ಕುಶಾಲಪ್ಪ ಗೌಡರು ಇಂಗ್ಲಿಷಿನಲ್ಲಿ ಬರೆದ ಗೌಡ ಕನ್ನಡ ಕೃತಿಯು ಅರೆಭಾಷೆಗೋ ಕನ್ನಡಕ್ಕೋ ಅನುವಾದವಾದಬೇಕು. ಅದು ಅರೆಭಾಷೆಯ ಬಗೆಗಣ ನಮ್ಮ ಅರಿವಿನ ವಲಯಗಳನ್ನು ಗಮನಾರ್ಹವಾಗಿ ವಿಸ್ತರಿಸುತ್ತದೆ. 
2.    ಅರೆಭಾಷೆಯ ಜನಗಣತಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಬೇಕು.  ಪ್ರೊ.ಕುಶಾಲಪ್ಪ ಗೌಡರು 1970 ರಲ್ಲಿ ಅರೆಭಾಷಿಕರ ಸಂಖ್ಯೆಯು ಸುಮಾರು 60 ಸಾವಿರದಷ್ಟಿದೆ ಎಂದು ಹೇಳಿದ್ದಾರೆ. ಈಗ ಅವರ ಸಂಖ್ಯೆ ಎಷ್ಟು? ಭಾಷೆಯ ಏರಿಳಿತಗಳ ಶೇಕಡಾವಾರು ತಿಳುವಳಿಕಯು ಭಾಷೆಯೊಂದರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವಲ್ಲಿ ಬಹಳ ಸಹಕಾರಿಯಾಗುತ್ತದೆ.
3.    ಭಾಷೆಯೊಂದನ್ನು ಜಾತಿಗೆ ಸೀಮಿತವಾಗಿರಿಸುವುದರಿಂದ ಹೆಚ್ಚು ಪ್ರಯೋಜನ ಆಗದು. 1971 ರ ಜನಗಣತಿಯಲ್ಲಿ 37, 86,899 ಜನ ಸಂತಾಲೀ ಭಾಷೆಯನ್ನಾಡುತ್ತಿದ್ದರು. 2001ಕ್ಕೆ ಈ ಸಂಖ್ಯೆಯ 64,69,600ಕ್ಕೆ ಏರಿ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ಪಡಕೊಂಡಿತು. 2011ರ ಜನಗಣತಿಯ ಪ್ರಕಾರ ಸಂತಾಲಿ ಭಾಷೆಯನ್ನಾಡುವವರ ಸಂಖ್ಯೆಯು 73,68,193ಕ್ಕೆ ಏರಿದೆ. ಇದು ಭಾಷೆಯ ಬೆಳವಣಿಗೆಯಲ್ಲಿ ಶೇಕಡಾ 100 ರ ಪ್ರಗತಿಯನ್ನು ತೋರಿಸುತ್ತದೆ. ಈ ಅವಧಿಯಲ್ಲಿ ಸಂತಾಲೀ ಬುಡಕಟ್ಟಿನ ಜನರ ಸಂಖ್ಯೆಯಲ್ಲಿ ಕೇವಲ ಶೇಕಡಾ ಒಂದರ ಬೆಳವಣಿಗೆ ಆಗಿದೆ. ಇದರ ಅರ್ಥ ಏನೆಂದರೆ, ಸಂತಾಲೀ ಬುಡಕಟ್ಟಿನ ಭಾಷೆಯು ತನ್ನ ಸಮುದಾಯಕ್ಕೆ ಸೀಮಿತವಾಗದೆ , ವಿಸ್ತಾರವಾಗಿ ಬೆಳೆದಿರುವುದು. ಅರೆಭಾಷೆಯು ಕೂಡಾ ತನ್ನ ಜಾತಿಯ ಗಡಿ ರೇಖೆಗಳನ್ನು ಮೀರಿ ಬೆಳೆದಾಗ ಮಾತ್ರ ಅದು ವೇಗವಾಗಿ ಬೆಳೆಯುತ್ತದೆ.
4.    ಹವ್ಯಕ ಭಾಷೆಯ ಕುರಿತು ಪ್ರೊ ಎಂ ಮರಿಯಪ್ಪ ಭಟ್, ಪ್ರೊ ಡಿ. ಎನ್ ಶಂಕರ್ ಭಟ್, ಪ್ರೊ ಚಂದ್ರಶೇಖರ್ ಭಟ್, ಹೆಲನ್-ಇ-ಉಲ್‍ರಿಚ್ ಮತ್ತು ಜೋಹಾನ್-ವಾನ್-ಡರ್ ಮೊದಲಾದವರು ಮಹತ್ವದ ವಿಚಾರಗಳನ್ನು ಈಗಾಗಲೇ ಮಂಡಿಸಿದ್ದಾರೆ. ಇದೇ ರೀತಿಯಲ್ಲಿ ಅರೆಭಾಷೆಯಲ್ಲಿ ಸಂಶೋಧನೆ ಮಾಡಬಯಸುವ ಸಂಶೋಧಕರಿಗೆ ಒಳ್ಳೆಯ ಶಿಷ್ಯವೇತನ ದೊರಕುವಂತಾಗಬೇಕು. ಅರೆಭಾಷೆಯ ಬಗ್ಗೆ ಅನ್ಯಭಾಷಿಕರು ಮಾಡುವ ಅಧ್ಯಯನಗಳಿಗೆ ವಿಶೇಷ ಮಹತ್ವ ಇರುತ್ತದೆ.
5.    ಅರೆಭಾಷೆಯ ಕೆಲವು ಅತ್ಯುತ್ತಮ ಪದಗಳು ಸುಳ್ಯ ಪರಿಸರದ ಸ್ಥಳನಾಮಗಳಲ್ಲಿ ಇನ್ನೂ ಉಳಿದಿಕೊಂಡು ಬಂದಿರುವಂತಿದೆ. ಅಜ್ಜಾವರ, ಬಾಳಿಲ, ಬಾಕಿಲ, ಪನ್ನೆ, ಕಳ್ಮಕಾರ್, ಬಳ್ಪ, ಕನ್ನರಪಾಡಿ, ಕಮಿಲ, ಗುತ್ತಿಗಾರು, ಆಲೆಟ್ಟಿ, ಪೂನಡ್ಕ, ಗೂನಡ್ಕ, ಚೆಂಬು, ಪೆರಾಜೆ,  ಬೆಳ್ಳಾರೆ, ಚನಿಲ, ಬಳ್ಳಕ್ಕ, ಐನೇಕಿದು, ಕಳಂಜ, ಪಂಜ, ಕೂತ್ಕುಂಜ, ಕೇನ್ಯ, ಕಕ್ಯಾನ, ಸಂಪಾಜೆ, ಮೊಗ್ರ, ಸಂಪ್ಯ, ಏನೆಕಲ್ಲು, ಮೊದಲಾದ ಪದಗಳು ಗಹನವಾದ ಅರ್ಥವನ್ನು ಹೊಂದಿವೆ, ಪ್ರಾಚೀನ ದ್ರಾವಿಡ ರೂಪಗಳನ್ನೂ ಅವು ಕಾಪಾಡಿಕೊಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಸುಳ್ಯ ಪರಿಸರದ ಸ್ಥಳನಾಮಗಳ ವಿವರಣಾತ್ಮಕ ಸಾಂಸ್ಕೃತಿಕ ಪದಕೋಶವೊಂದು ತಯಾರಾಗಬೇಕು. 
6.    ಅರೆಭಾಷೆಯಲ್ಲಿ ಹೆಚ್ಚು ಹೆಚ್ಚು ಸೃಜನಶೀಲ ಕೃತಿಗಳು ಬರಬೇಕು. ಪ್ರೊ. ಕುಶಾಲಪ್ಪ ಗೌಡರು ಬರೆದ ಅರೆಭಾಷೆಯ ಮಹಾಭಾರತವು ಈ ನಿಟ್ಟಿನಲ್ಲಿ ಮಾಡಿದ ಮಹಾಪ್ರಯತ್ನವಾಗಿದೆ. ತರುಣ ಗೆಳೆಯ ಲೋಕೇಶ್ ಊರುಬೈಲು ಅವರು ಸಾಮಾನ್ಯ ಜನರಲ್ಲಿ ಬಳಕೆಯಲ್ಲಿರುವ ಅರೆಭಾಷೆಯನ್ನು ಬಳಸಿ ‘ಗುಬ್ಬಿ ಗೂಡು’ ಕಾದಂಬರಿ ಬರೆದಿದ್ದಾರೆ. ಕರುಣಾಕರ ನಿಡಿಂಜಿಯವರು ಬರೆದ ‘ನೀಲಿದಾರಿ’ ಕವನ ಸಂಕಲನದ’ ಹೀಗೊಂದುಟ್ಟು ಸತ್ಯ’ ಕವನವು ಮಂಗಳೂರು ವಿಶ್ವವಿದ್ಯಾಯದ ಪಠ್ಯಪುಸ್ತದಲ್ಲಿ ಸ್ಥಾನ ಪಡಕೊಂಡಿದೆ. 
7.    ಇಂಥ ಮಹತ್ವದ ಕೆಲಸಗಳ ಜೊತೆಗೆ ಅರೆಭಾಷೆಗೆ ಬೇರೆ ಭಾಷೆಯ ಸೃಜನಶೀಲ ಕೃತಿಗಳು ಅನುವಾದಗೊಳ್ಳಬೇಕು. ಕನ್ನಡದ ಮತ್ತು ಬೇರೆ ಭಾಷೆಯ ಅತ್ಯುತ್ತಮ ಕೃತಿಗಳು ( ಉದಾಹರಣೆಗೆ ಕುವೆಂಪು ಅವರ ಎರಡು ಬೃಹತ್ ಕಾದಂಬರಿಗಳು, ನಿರಂಜನ ಅವರು ಬರೆದ ಕಲ್ಯಾಣಪ್ಪ, ಅಪರಂಪಾರ ಕಾದಂಬರಿಗಳು, ಗುತ್ತಿಗಾರಿನ ಕತೆಯಾದ ಶಿವರಾಮ ಕಾರಂತರ ಬೆಟ್ಟದ ಜೀವ, ಗುಡ್ಡಮನೆ ಅಪ್ಪಯ್ಯ ಗೌಡರು ಮತ್ತು ಕೆದಂಬಾಡಿ ಜತ್ತಪ್ಪ ರೈಗಳ ಬೇಟೆಯ ನೆನಪುಗಳು, ಜ ಬ ಚೆಟ್ಟಿಮಾಡ ಅವರ ಹಳಬರ ಜೋಳಿಗೆ, ಕೊಳಂಬೆ ಪುಟ್ಟಣ್ಣ ಗೌಡರ ಕಾಲೂರ ಚೆಲುವೆ ಇತ್ಯಾದಿ ಕೃತಿಗಳು) ಅರೆ ಭಾಷೆಗೆ ಸಮರ್ಥವಾಗಿ ಅನುವಾದಗೊಳ್ಳಬೇಕು. ಈ ಕೆಲಸ ಭಾಷೆಯ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು
ಅರೆ ಭಾಷೆಯ ಸಂವೇದನೆಗಳನ್ನು ಇನ್ನಷ್ಟು ಸೂಕ್ಷ್ಮಗೊಳಿಸುತ್ತವೆ.
8.    ಅರೆಭಾಷೆಯನ್ನು  ಇವತ್ತು ಸಾಂಸ್ಕೃತಿವಾಗಿ ಉಳಿಸಿಕೊಂಡು ಬರುತ್ತಿರುವ ಎರಡು ನಿರೂಪಣೆಗಳೆಂದರೆ ಕತೆಗಳು ಮತ್ತು ಸ್ಥಳನಾಮಗಳು. ಡಾ.ವಿಶ್ವನಾಥ ಬದಿಕಾನ ಅವರು  ಅರೆಭಾಷೆಯ ಸುಮಾರು 120 ಜನಪದ ಕತೆಗಳನ್ನು ಈಗಾಗಲೇ  ಸಂಗ್ರಹಿಸಿದ್ದಾರೆ. ಅವುಗಳಲ್ಲಿ  100 ಕತೆಗಳಿಗೆ ವರ್ಗ ಮತ್ತು ಆ ಕತೆಗಳಿಗೆ 320 ಆಶಯಗಳನ್ನು ಗುರುತಿಸಿ ಗೌಡ ಕನ್ನಡದ ಜನಪದ ಕಥೆಗಳು ವರ್ಗ ಮತ್ತು ಆಶಯ ಸೂಚಿಎಂಬ ಸಂಶೋಧನ ಕೃತಿಯನ್ನು ಸಿದ್ಧಪಡಿಸಿದ್ದಾರೆ.  ಇದರಲ್ಲಿ ಅವರು   ಏಳು ಹೊಸ ಉಪವರ್ಗಗಳನ್ನು ಗುರುತಿಸಿ ಅರೆಭಾಷೆಯ ಕತೆಗಳಲ್ಲಿ ಜಾಣ ನರಿಯು ಜಾಣತನ ಮಾಡಲು ಹೋಗಿ ಕೊನೆಗೆ ತಾನೇ ಸತ್ತುಹೋಗುವ ರೀತಿಯು ಅರೆ ಭಾಷೆಯ ಅಜ್ಜಿಕತೆಗಳ ಅನನ್ಯತೆಯನ್ನು ಸಾರುತ್ತವೆ ಎಂದು ವಾದಿಸಿದ್ದಾರೆ. 
ಅರೆಭಾಷೆಯ ಅಜ್ಜಿ ಕತೆಗಳಲ್ಲಿ ಎದ್ದು ಕಾಣುವ ವಿಶೇಷ  ಗುಣಗಳೆಂದರೆ ಕತೆಗಳ ಒಡಲಲ್ಲಿರುವ ಕ್ರಿಯಾಶೀಲತೆ ಮತ್ತು ನಾಟಕೀಯತೆ. ಇವು ಕತೆಯ ಕೇಳುಗರನ್ನು ಸುಮ್ಮನೆ ನಿಷ್ಕ್ರಿಯವಾಗಿ ಕತೆ ಕೇಳಲು ಬಿಡದೆಸಕ್ರಿಯರಾಗಿರಲು ಒತ್ತಾಯಿಸುತ್ತದೆ. ಉದಾಹರಣೆಗೆ ಈ ಕತೆಯ ನಿರೂಪಣೆ ಗಮನಿಸಿ- 
ಒಂದು ಮೊಲಕ್ಕೆ ಈಚೆ ಕಾಡ್‍ಲಿ ಮೇದ್ ಮೇದ್ ಅದ್ಕೆ  ಅಲ್ಲಿ ಎಲ್ಲಾ ಮುಗ್ತ್.  ತಿಂಡಿ  ತಿನಸ್, ಹುಲ್ಲು ಎಲ್ಲಾ.  ಆಚೆಕರೆಗೆ ಹೊಕ್ಕು. ಹೇಂಗೆ ಹೋದು ಮೊಲಂಗೆ ಎಲ್ಲ ದಾಟಿಕೆ ಆದೆಯೊ’?
ಕೊನೆಯ ಪ್ರಶ್ನೆಗಳು ಕೇಳುಗನ್ನು ಉತ್ತರಿಸಲು ಪ್ರೇರೇಪಿಸುತ್ತವೆ. ಇದು ಒಂದು ಬಗೆಯಾದರೆ, ಇನ್ನೊಂದು ಬಗೆಯ ನಿರೂಪಣೆಯಲ್ಲಿ ಕಥನ ಕ್ರಿಯೆಯಲ್ಲಿಯೇ ನಾಟಕೀಯತೆಯಿದೆ. ಉದಾಹರಣೆಗೆ- 

ಒಬ್ಬನೇ ಹಾಡ್ತನ ಹೇಳಿಕೊಣೊಕ್, ಡೋಲ್  ಬೊಟ್ಟಿಕನಕ್, ಗಗ್ಗರ ಆಡಿಸಿಕೊಣೊಕ್, ನಿನ್ನ ಗಾನದೆತ್ತ್ ಸತ್ತರೆ ಡೋಲ್ ಗಗ್ಗರ ಕೇಳ್ವಂತ ಹೇಳ್ತ್.  ಇಂವ ಡೋಲ್ ಗಗ್ಗರ ಎಲ್ಲ ಕೊಟ್ಟತ್.  ಕುಂಡತ್ ತಕನ್ತ್ ಬಾತ್.  ಬೇಲಿಕರೆಲಿ ನಿಂತ್‍ಕಂಡ್ - ನಾಕತ್ತಿಲಿ ಗೆದ್ದೆ ಥೈ ಥಕ್ಕ ಥೈಂತ ಹೇಳಿ ಕುಣೀದು. ಎತ್ತ್ ಲಿ  ಗೆದ್ದೆ ಥೈ  ಥಕ ಥೈಗಾನದೆತ್ತಿಲಿ ಗೆದ್ದೆ ಥೈ ಥಕ ಥೈಡೋಲ್ ಗಗ್ಗರಲಿ ಗೆದ್ದೆ ಥೈ ಥಕ ಥೈಂತ ಹೇಳಿ ಕುಣ್ದತ್ ಆತ್.’ 
ಈ ಕ್ರಿಯಾತ್ಮಕತೆಯೇ ಅರೆಭಾಷೆ ಅಜ್ಜಿಕತೆಗಳ ಜೀವ ಎನ್ನಬಹುದು. ಕನ್ನಡದ ಕತೆಗಳಲ್ಲಿ ಈ ಗುಣ ಇರುವುದು ಹೌದಾದರೂ ಅರೆಭಾಷೆಯಲ್ಲಿ ಅದು ಹೆಚ್ಚಿಗೆ ಇದೆ. 

ಕತೆಗಳ ಮುಕ್ತಾಯವೂ ವಿಶಿಷ್ಟವಾಗಿರುತ್ತದೆ.  ಇದು ಕೇಳುಗನನ್ನು ಸಕ್ರಿಯವಾಗಿ ಒಳಗೊಳ್ಳುವ ತಂತ್ರಗಾರಿಕೆಯನ್ನು ಹೊಂದಿದೆ. ಉದಾಹರಣೆಗೆ- 

ಕುರೆ ಹೀಂಗೆ ಮಾಡ್ತ್. ಹಂಞ ಗುಂಡಿ ತೆಗೆಕನ ಒಂದು ಹೂಂಸ್ ಹೋತ್. ಮತ್ತೆ ಹಂಞ ಗುಂಡಿ ತೆಗಿಕನ ಮತ್ತೊಂದು ಹೂಂಸ್ ಹೋತ್. ಮತ್ತೆ ಅದರಲ್ಲಿ  ಕುದರ್ ಕನ  ಮೂರನೆ ಹೂಂಸ್ ಹೋಗಿ ಸತ್ತ್ ಹೋತ್.  ಅದಕ್ಕೆ ಮಣ್ಣು ಮುಚ್ಚಿ ನಾವು ಬರೋಮಾ ?’ 
ನಾಯಿಗ ಹೊನ್ಕಿ ಹಾರಿ ಬಿದ್ದ್ ಓಡ್ರೆ ಇವರ ಕೆಬಿ ಎಲ್ಲ ಹರ್ದೇ ಹೋತ್.  ಇವ್ ಕತ್ತಿ ಬೆಡಿನ ಹೆಗ್‍ಲಿಗೆ ಹಾಕಿದೊ ಕೆಬಿಗೆ ಕೈ ಹಿಡ್ಕೊಂಡೊ. ಮನೆಗೆ ಹೋದೊ.  -ಇವರ  ಹೋಗಿ ನೀವ್ ನೋಡಿಕಂಡ್ ಬರಕಡ’. ಈ ಗುಣಗಳು ತುಳು ಜನಪದ ಕತೆಗಳಲ್ಲಿ ಕೂಡಾ ಹೆಚ್ಚು ಕಾಣಿಸುತ್ತದೆ.  

ಗದ್ಯ ಪದ್ಯ ಸಂಮಿಶ್ರಗೊಂಡರೆ ಅದನ್ನು ಚಂಪೂ ಎಂದು ನಾವು ಕರೆಯುತ್ತೇವೆ. ಕನ್ನಡಕ್ಕೆ ಚಂಪೂಕಾವ್ಯಗಳ ಅತಿ ದೊಡ್ಡ ಪರಂಪರೆಯೇ ಇದೆ. ಅರೆಭಾಷೆಯಲ್ಲಿ ಚಂಪೂ ಶೈಲಿಯನ್ನು ಹೋಲುವ ಅನೇಕ ಜನಪದ  ಕತೆಗಳಿವೆ. ಕೆಳಗಿನ ಭಾಗವನ್ನು ಗಮನಿಸಿ-

ಕೊಡ್‍ಂತ ಹೇಳ್ತ್‍ಗಡ.
ಬಾಳೆಪಾಪಕ್
ನೂಲ ಕೈ ತಾಂಗಾಕ್
ಅಳೆತ್ತರ ಕೆಂಡಕೂಡ್ ಅಲ್ಲಿ ಬಂದ್
ಸತ್ಯ ಹೇಳ್ನೆಂತ ಹೇಳ್ತ್‍ಗಡ
ಅಲ್ಲಿಂದ ಸೀದ ಕುದ್ಕಣ್ಣನ ಮನೆಗೆ ಹೋತ್‍ಗಡ. ಅಲ್ಲಿ ಹೋಕನ
ಹಬ್ಬಾಂತ ಬಾರ
ಹೊಸ್ತೂಂತ ಬಾರ
ಇಂದೇಕೆ ಬಂದೆ ಚೋರೆಕ್ಕಾ
ನೀರ್ ಚಾಪೆ ತನ್ನಿರೋ ಮಕ್ಕಳಿರಾಂತ ಹೇಳ್ತ್‍ಗಡ ನಿನ್ನ ನೀರ್‍ಚಾಪೆ ತೆಗ್ದ್ ಬೆಂಕಿಗೆ ಇಟ್ಟ್ ನನ್ನ ಮಕ್ಕಳ ತಿಂದ್‍ದರ ವಿಚಾರ್ಸಿಕೊಡ್‍ಂತ ಹೇಳ್ತ್‍ಗಡ. 
ಪದ್ಯ ಗದ್ಯ ಮಿಶ್ರಣದ ಇಂತ ಕತೆಗಳು ಅರೆಭಾಷೆಯ ಸತ್ವ ಶಕ್ತಿಯನ್ನು ಮನಗಾಣಿಸಬಲ್ಲುವು ಮಾತ್ರವಲ್ಲ, ಚಂಪೂಕಾವ್ಯಗಳ ಅಧ್ಯಯನಗಳಿಗೆ ಬೇಕಾದ ಕೆಲವು ಹೊಸ ಒಳನೋಟಗಳನ್ನೂ ಕೊಡಬಲ್ಲುವು. 
9.    ಅರೆ ಭಾಷೆಯಲ್ಲಿ ಕಲಾಪ್ರದರ್ಶನಗಳು:  ಯಕ್ಷಗಾನ-ತಾಳ ಮದ್ದಳೆ, ನಾಟಕಗಳು ಅರೆ ಭಾಷೆಯಲ್ಲಿ ನಡೆಯಬೇಕು. ಸಮಕಾಲೀನ ಭಾಷೆಯೊಂದು ರಂಗಭೂಮಿಗೆ ಬಂದಾಗ ಅದರ ಚಹರೆಯಲ್ಲಿ ತೀವ್ರ ಬದಲಾವಣೆ ಗೋಚರಿಸುತ್ತದೆ. ರಾಮನ ವೇಷಧಾರಿಯು ಅರೆ ಭಾಷೆಯಲ್ಲಿ ಅರ್ಥ ಹೇಳಿದರೆ, ಭಾಷೆಯು ಪುರಾಣದ ಎತ್ತರಕ್ಕೆ ಏರಿ, ಹೊಸ ವಿಸ್ತಾರವನ್ನು ಪಡೆದುಕೊಳ್ಳುತ್ತದೆ. ಸುಳ್ಯದವರೇ ಆದ ಶ್ರೀ ಜೀವನರಾಂ ಅವರ ನಿರ್ದೇಶನದಲ್ಲಿ  ಕುವೆಂಪು ಅವರು ಬರೆದ ಶೂದ್ರ ತಪಸ್ವಿ ನಾಟಕವನ್ನು ಅರೆ ಭಾಷೆಯಲ್ಲಿ ಆಡಿಸಿ ನೋಡಿದರೆ ಇದು ಸ್ಷಷ್ಟವಾಗುತ್ತದೆ. ರಂಗಾಯಣದ ಶ್ರೀಮತಿ ಗೀತಾ ಮೋಂಟಡ್ಕ ಅವರು ಗಿರೀಶ ಕಾರ್ನಾಡರ ಹಯವದನವನ್ನು ಅರೆ ಭಾಷೆಯಲ್ಲಿ ಮಾಡಿಸುವಂತೆ ನಾವು ದುಂಬಾಲು ಬೀಳಬೇಕು. ಸಂಪಾಜೆಯ ಪ್ರಸಿದ್ಧ ತಾಳಮದ್ದಳೆ ಕಲಾವಿದರಾದ ಶ್ರೀ ಜಬ್ಬಾರ್ ಸಮೋ ಅವರು ಅರೆ ಭಾಷೆಯಲ್ಲಿ ವಾಲಿಯ ಅರ್ಥ ಹೇಳುವಂತಾದಾಗ ಭಾಷೆ ನಿಜಕ್ಕೂ ಬೆಳೆಯತ್ತದೆ. ವ್ಯಾವಹಾರಿಕ ಭಾಷೆಯನ್ನು ಕಲೆಗಳು ಮುರಿದು ಮತ್ತೆ ಕಟ್ಟುತ್ತವೆ, ಆಗ ಭಾಷೆ ಬೆಳೆಯುತ್ತದೆ. 
10. ಅರೆ ಭಾಷೆಯ ಬಗ್ಗೆ ಸಂಶೋಧನೆ: ಅರೆ ಭಾಷೆಯ ಹುಟ್ಟು, ಬೆಳವಣಿಗೆ ಮತ್ತು ಕಾರ್ಯಗಳ ಕುರಿತು ಸಂಶೋಧನಾತ್ಮಕವಾದ ಉಪಯುಕ್ತ ಗೃಂಥವೊಂದು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟವಾಗಬೇಕು. ಯಾವುದೇ ಭಾಷೆಯ ಅಸ್ತಿತ್ವವನ್ನು ಪ್ರಚುರಗೊಳಿಸಲು ಇಂಥ ಕೆಲಸಗಳ ಅಗತ್ಯವಿದೆ. 
11. ಅಜ್ಜಿ ಕತೆಗಳ ಸಂಗ್ರಹ ಮತ್ತು ಪ್ರಕಟಣೆ: ಅರೆ ಭಾಷೆಯ ಅಜ್ಜಿ ಕತೆಗಳ ವ್ಯಾಪಕ ಸರ್ವೇಕ್ಷಣೆ ನಡೆದು ಅವುಗಳ ಸಂಗ್ರಹ ಮತ್ತು ಪ್ರಕಟಣೆಯ ಕೆಲಸ ನಡೆಯಬೇಕು. ಸಂಗ್ರಹಿಸಿದ ಕತೆಗಳು ನಮ್ಮ ಕಾಲದ ಅರೆ ಭಾಷೆಯನ್ನು ದಾಖಲಿಸುವುದರಿಂದಾಗಿ ಅವುಗಳನ್ನು ನಾಶವಾಗದಂತೆ ಸಂಗ್ರಹಿಸಿಡಬೇಕು. 
12. ಅರೆ ಭಾಷೆಯ ಐತಿಹ್ಯಗಳ ಸಂಗ್ರಹ : ಪೂಮಲೆ, ಬಂಟಮಲೆ, ಕೋಳಿಕ್ಕ ಮಲೆ, ಎಲಿಮಲೆ, ಕರಿಮಲೆ, ಕುಮಾರ ಪರ್ವತ, ಕನಕ ಮಜಲು, ಕಾಂತ ಮಂಗಲ, ಭೋಗಾಯನ ಕೆರೆ, ಮೊದಲಾದ ಅನೇಕ ಪ್ರಾಕೃತಿಕ ಅದ್ಭುತಗಳ ಬಗೆಗೆ ದೊರೆಯುವ ಐತಿಹ್ಯಗಳನ್ನು ಸಂಗ್ರಹಿಸಿ, ಅರೆ ಭಾಷೆಯಲ್ಲಿ ಪ್ರಕಟಿಸಬೇಕು. ನಂಬಿಕೆ ಮತ್ತು ಪುರಾಣಗಳ ನಡುವಣ ಐತಿಹ್ಯಗಳ ಭಾಷೆಯು ಭಿನ್ನ ಮತ್ತು ಚೇತೋಹಾರಿ. ಅಮೈ ಎಂಬಲ್ಲಿ ಹಿರಿಯರೊಬ್ಬರು ಪೂಮಲೆ ಬಗ್ಗೆ ಹೇಳಿದ ನಿರೂಪಣೆಯೊಂದು ಸುಮಾರು 30 ವರ್ಷಗಳ ಆನಂತರವೂ ನನ್ನ ಕಿವಿಯಲ್ಲಿ ಅನುರಣಿಸುತ್ತಿದೆ. 
13. ಸ್ಥಳನಾಮಗಳ ಅಧ್ಯಯನ: ಅರೆ ಭಾಷಿಕ ಸಮುದಾಯಗಳು ವಾಸಿಸುವ ಪ್ರದೇಶಗಳಲ್ಲಿ ಅನೇಕ ಕುತೂಹಲಕರ ಸ್ಥಳನಾಮಗಳಿವೆ. ಶ್ರೀ ಮಂಜೇಶ್ವರ ಗೋವಿಂದ ಪೈ ಅವರು ಬ್ರಹ್ಮಗಿರಿಯ ಅಶೋಕನ ಶಾಸನದಲ್ಲಿ ದೊರಕಿದ ಇಸಿಲ ಪದವನ್ನು ಕನ್ನಡದ ಮೊದಲ ಉಪಲಬ್ಧ ಪದವೆಂದು ಹೇಳಿದ್ದಾರೆ. ಈ ಪದಕ್ಕೆ ಹತ್ತಿರವಾಗಿರುವ ಕಮಿಲ, ಜತ್ತಿಲ, ಪಾಣತ್ತಿಲ, ಕಾನತ್ತಿಲ ಮೊದಲಾದ ಹೆಸರುಗಳು ನಮ್ಮ ನಡುವೆ ಇಂದಿಗೂ ಪ್ರಚಲಿತದಲ್ಲಿವೆ. ಶಂ ಭಾ ಜೋಷಿ ಅವರು ಕನ್ನರು ಎಂಬ ಜನರಿಂದ ಕನ್ನಡ-ಕರ್ನಾಟಕ ಬಂತೆಂದು ಹೇಳಿದ್ದಾರೆ. ಇದು ಹೌದಾದರೆ ನಮ್ಮಲ್ಲಿ ಕನ್ನರ ಪಾಡಿಯೇ ಇದೆಯಲ್ಲ? ನಡೋಳಿ, ಪೂನಡ್ಕ, ಕಕ್ಯಾನ, ಬಳ್ಪ, ಪಂಜ, ಕೂತ್ಕುಂಜ ಮೊದಲಾದ ಅನೇಕ  ಅಮೂಲ್ಯ ಸ್ಥಳನಾಮಗಳನ್ನು ಸಂಗ್ರಹಿಸಿ, ಅವುಗಳನ್ನು ಭಾಷಾ ವೈಜ್ಷಾನಿಕವಾಗಿ ವಿಂಗಡಿಸಿ, ವಿಶ್ಲೇಷಿಸುವ ಕೆಲಸ ಆಗಬೇಕು. 
ಇವು ಕೆಲವು ಸಲಹೆಗಳಷ್ಟೆ. ಭಾಷೆ ಬೆಳೆಯಬೇಕಾದರೆ, ಅದಕ್ಕೆ ಘನತೆ ತಂದುಕೊಡುವ ಕೆಲಸ ಆ ಭಾಷೆಯಲ್ಲಿ ನಡೆಯಬೇಕು. ಆಗ ನಮ್ಮ ಮಕ್ಕಳೂ ಕೂಡಾ ಅದರ ಬಗ್ಗೆ ಗಮನ ಹರಿಸುತ್ತಾರೆ.

ಸಮಾರೋಪ:
ಹೀಗೆ ಭಾಷೆಯು ಬಹುಮುಖಿಯಾಗಿ ಬೆಳೆಯುತ್ತಾ ಸಬಲವಾಗಬೇಕು. ಶಿಕ್ಷಣ, ವ್ಯಾಪಾರ, ಸಾಮಾಜಿಕ ಜಾಲತಾಣ, ಅಭಿವೃದ್ಧಿ ಚಟುವಟಿಕೆಗಳು  ಧಾರ್ಮಿಕ ಚಟುವಟಿಕೆಗಳು ಮತ್ತು ಮಾಧ್ಯಮಗಳಲ್ಲಿ ನಿಸ್ಸಂಕೋಚವಾಗಿ ಅದು ಬಳಕೆಯಾಗಬೇಕು. ಅರೆಭಾಷೆಯಲ್ಲಿ ಪಠ್ಯ ಪುಸ್ತಕಗಳು ರಚನೆಯಾಗಬೇಕು. ಬೇರೆ ಜಾತಿಯ ಜನರು ಈ ಭಾಷೆಯನ್ನು ಆಡಿದರೆ ಅವರಿಗೆ ಸೂಕ್ತ ಮನ್ನಣೆಯೋ ಗೌರವವೋ ದೊರೆಯಬೇಕು. ಅರೆಭಾಷಾ ಅಕಾಡೆಮಿಯು ಅನ್ಯಜಾತಿಯವರನ್ನು ಒಳಗೊಳ್ಳುವಷ್ಟು ಉದಾರವಾಗಬೇಕು.  ಮದುವೆ ಮೊದಲಾದ  ಸಾಮಾಜಿಕ ಆಚರಣೆಗಳಲ್ಲಿ ಕನ್ನಡ ಅಥವಾ ಸಂಸ್ಕತದ  ಪ್ರವೇಶ ನಿಲ್ಲಬೇಕು. ಸುದ್ದಿ ವಾಹಿನಿಗಳಲ್ಲಿ ಅರೆ ಭಾಷೆಗೆ ಅವಕಾಶ ಇರಬೇಕು. 24000 ಜನರಿರುವ ಸಂಸ್ಕೃತದಲ್ಲಿ  ವಾರ್ತಾ ಪ್ರಸಾರ ಆಗಬಹುದಾದರೆ, ಲಕ್ಷಾಂತರ ಜನ ಮಾತಾಡುವ ಅರೆ ಭಾಷೆಯಲ್ಲಿ ಸುದ್ದಿ ಪ್ರಸಾರ ಯಾಕೆ ಆಗಬಾರದು? ನೈಜೀರಿಯಾದ ಭಾಷಾ ಶಾಸ್ತ್ರಜ್ಞನಾದ ಉವಾಜೆಯು ವಾದಿಸಿದಂತೆ ಮೊದಲು ಸಣ್ಣ ಭಾಷೆಗಳಲ್ಲಿ ಬೌದ್ಧಿಕ ಚಟುವಟಿಗೆಳು ಹೆಚ್ಚು ಹೆಚ್ಚು ನಡೆಯಬೇಕು.
ಅಂಥ ಕೆಲಸಗಳು ಅರೆಭಾಷೆಯಲ್ಲಿ ಆಗಲಿ ಎಂದು ನಾನು ಆಶಿಸುತ್ತೇನೆ.
ಪರಾಮರ್ಶನ ಗ್ರಂಥಗಳು
1.    ಪುರುಷೋತ್ತಮ ಬಿಳಿಮಲೆ 1984, ಸುಳ್ಯ ಪರಿಸರದ ಗೌಡ ಜನಾಂಗದ ಸಾಂಸ್ಕೃತಿಕ ಅಧ್ಯಯನ (ಪ್ರಕಟಿತ), ಕನ್ನಡ ವಿಭಾಗ: ಮಂಗಳೂರು ವಿಶ್ವವಿದ್ಯಾಲಯ
2.    ವಿಶ್ವನಾಥ ಬದಿಕಾನ 1994, ಗೌಡ ಕನ್ನಡ ಜನಪದ ಕತೆಗಳ ವರ್ಗ ಮತ್ತು ಆಶಯ ಸೂಚಿ; ಮಂಗಳೂರು: ಮದಿಪು ಪ್ರಕಾಶನ
3.    ವಿಶ್ವನಾಥ ಬದಿಕಾನ 2016, ಅರೆಬಾಸೆನ ಻ಜ್ಜಿ ಕತೆಗ; ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಂಘ
4.      Andronov, Michail. 1966. Materials for a Bibliography of Dravidian Linguistics. Kuala Lumpur: Dept. of Indian Studies, Universiti Malaya.
5.      Bloch, Jules. 1954 The Grammatical Structure of Dravidian Languages. Poona: Deccan College Handbook Series.
6.      Burrow, T. and M. B. Emeneau. A Dravidian Etymological Dictionary. Second edition, 1984. Oxford, the Clarendon press. 
7.      Caldwell, R. 1856 (rep. 1961). A Comparative Grammar of the Dravidian or South-Indian Family of Languages. Madras: University of Madras.
8.      Christopher Moseley, Atlas of the world Languages 1994, UNESCO
9.      David Crystal 2000, Language death; Cambridge university press
10.  David Harrison 2008, When Languages Die: The Extinction of the World's Languages and the Erosion of Human Knowledge; Oxford University Press.
11.  David Netle 2007, Vanishing Voices: The Extinction of the World's Languages; Oxford University Press.
12.  Gautam Kumar Bera 2017, ENDANGERED CULTURES AND LANGUAGES IN INDIA, Spectrum Publications
13.  Kushalappa gowda 1970, Gowda Kannada; Annamalainagar:  Annamalai University
14.  Lenore A Grenoble and Lindsey J Whaley (Editors) 1998, Endangered Languages: Language Loss and Community Response; Cambridge University press
15.  Schiffman, Harold F. and Carol M. Eastman, (eds.) Dravidian Phonological Systems. Seattle: Institute for Comparative and Foreign Area Studies and University of Washington Press, 1975.
16.  Schiffman, Harold. 1984. A Reference Grammar of Spoken Kannada. Seattle: University of Washington Press.
17.  Shanmugam, S. V. 1971. Dravidian Nouns (a comparative study). (Annamalai University Department of Linguistics, Publication No. 25.) Annamalainagar: Center of Advanced Study in Linguistics.
18.  Zvelebil, K. 1970. Comparative Dravidian Phonology. Mouton: the Hague.




No comments: