ಕನ್ನಡ ಸಂಶೋಧನೆ
ಹಿಡಿಯಬೇಕಿರುವ ಹೊಸ ಹಾದಿಗಳು
ಈ ಸಂಪ್ರಬಂಧಕ್ಕೆ ಮುಖ್ಯವಾದ ಎರಡು ಉದ್ದೇಶಗಳಿವೆ. ಅವುಗಳೆಂದರೆ-
1. ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕನ್ನಡ ಸಂಶೋಧನೆಗಳ ಗುಣಮಟ್ಟ ಪತನಮುಖಿಯಾಗಿವೆ ಎಂಬ ಪೂರ್ವಗ್ರಹೀತದ ಹಿನ್ನೆಲೆಯಲ್ಲಿ ಅವುಗಳನ್ನು ವರ್ತಮಾನದ ಅಗತ್ಯಗಳ ಚೌಕಟ್ಟಿನಲ್ಲಿರಿಸಿ ಪುರೋಗಾಮಿಯಾಗಿಸಲು ಬೇಕಾದ ಕೆಲವು ಸೂಚನೆಗಳನ್ನು ನೀಡುವುದು.
2.
ಕನ್ನಡ ಸಂಶೋಧನೆಯೂ ಸೇರಿದಂತೆ ಸಮಾಜವಿಜ್ಞಾನಗಳು ಒಟ್ಟೂ ಭಾರತೀಯ ಸಂದರ್ಭದಲ್ಲಿ ಹಾಗೂ ಜಾಗತಿಕ ಸಂದರ್ಭದಲ್ಲಿ ಇದಿರಿಸುತ್ತಿರುವ ಸಮಸ್ಯೆಗಳತ್ತ ಬೆಳಕು ಚೆಲ್ಲುವುದು.
ಕೆಲವು ಉನ್ನತ ಶಿಕ್ಷಣ ಕೇಂದ್ರಗಳೂ ಸೇರಿದರೆ ಕರ್ನಾಟಕದಲ್ಲಿ ಸುಮಾರು 43 ಪ್ರಮುಖ ಸಂಶೋಧನಾ ಕೇಂದ್ರಗಳಿವೆ, ಇಲ್ಲಿ ಸಂಶೋಧನೆ ಮಾಡುತ್ತಿರುವವರ ಸಂಖ್ಯೆ ಸುಮಾರು 5000. ಇದು ಕರ್ನಾಟಕದ ಒಟ್ಟು ಜನ ಸಂಖ್ಯೆಯ ಶೇಕಡಾ 0.008 ಆಗಿದೆ. ಈ ವಿಷಯದಲ್ಲಿ ರಾಷ್ಟ್ರೀಯ ಸರಾಸರಿ ಶೇಕಡಾ 0.6 ಆಗಿದ್ದು ಕರ್ನಾಟಕ ರಾಜ್ಯವು ರಾಷ್ಟ್ರೀಯ ಸರಾಸರಿಗಿಂತ ಬಹಳ ಹಿಂದಿದೆ. ಹೀಗೆ ಸಂಖ್ಯಾ ದೃಷ್ಟಿಯಿಂದ ಹಿಂದೆ ಬಿದ್ದಿರುವ ಕರ್ನಾಟಕವು ಸಂಶೋಧನೆಯ ಗುಣ ಮಟ್ಟದ ದೃಷ್ಟಿಯಿಂದಲೂ ಮಹತ್ವದ್ದೇನನ್ನೂ ಸಾಧಿಸುತ್ತಿಲ್ಲ. ಭಾಷೆ ಮತ್ತು ಸಾಹಿತ್ಯದ ಕುರಿತಾದ ನಮ್ಮ ಸಂಶೋಧನೆಗಳು ರಾಷ್ಟ್ರೀಯ ಮಟ್ಟದಲ್ಲಾಗಲೀ ಅಂತಾರಾಷ್ಟ್ರೀಯ ಮಟ್ಟದಲ್ಲಾಗಲೀ ಹೆಸರು ಮಾಡಿದ್ದನ್ನು ನಾವು ಇತ್ತೀಚಿನ ದಿನಗಳಲ್ಲಿ ಕೇಳಿದ್ದು ಬಹಳ ಕಡಿಮೆ.
ಪ್ರೊ. ಷ. ಶೆಟ್ಟರ್ ಅವರಂಥ ಕೆಲವು ಅಪವಾದಗಳನ್ನು ಹೊರತು ಪಡಿಸಿದರೆ ಒಟ್ಟಾರೆಯಾಗಿ ಕನ್ನಡ ಸಂಶೋಧನೆಯು ಇಂದು ತನ್ನ ಹಿರಿಮೆಯನ್ನು ನಿರ್ವಿವಾದವಾಗಿ ಕಳೆದುಕೊಂಡಿದೆ. ಸಂಶೋಧನೆಯ ಭಾಷೆಯು ಜಡವಾಗಿದೆ. ಸಂಶೋಧನಾ ವಿಧಾನಗಳು ವರ್ತಮಾನದ ಅಗತ್ಯಗಳಿಗೆ ಪೂರಕವಾಗಿ ತನ್ನನ್ನು ಹೊಸದುಗೊಳಿಸಿಕೊಳ್ಳದೆ ನಿರ್ಜೀವವಾಗಿವೆ.
ಸಂಶೋಧನೆಗೆ ಆಯ್ದುಕೊಳ್ಳುವ ವಸ್ತುಗಳು ಯಾವುದೇ ಸವಾಲುಗಳನ್ನು ಸ್ವೀಕರಿಸದೆ ಸರಳವಾಗಿದ್ದು ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸುತ್ತಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಸಂಶೋಧನೆಗಳು ಪತನಮುಖಿಯಾಗುತ್ತಿರುವುದರ ಬಗ್ಗೆ ಗಂಭೀರವಾದ ಚರ್ಚೆಗಳೂ ನಡೆಯುತ್ತಿಲ್ಲ. ನನಗೆ ಮೌಲ್ಯಮಾಪನಕ್ಕೆ ಬರುವ ಪಿಎಚ್.ಡಿ ಮಹಾಪ್ರಬಂಧಗಳಲ್ಲಿ ಸಾಮಾನ್ಯವಾಗಿ ಪುಟಕ್ಕೆರಡರಂತೆ ಅಕ್ಷರ ತಪ್ಪುಗಳಿರುತ್ತವೆ. ಲೇಖಕರ ಹೆಸರುಗಳನ್ನೇ ಸರಿಯಾಗಿ ಬರೆದಿರುವುದಿಲ್ಲ.
ಉಲ್ಲೇಖಗಳನ್ನು ಹೇಗೆ ಮಾಡಬೇಕೆಂಬ ತಿಳುವಳಿಕೆ ಇರುವುದಿಲ್ಲ. ಆರಿಸಿಕೊಂಡ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಅಧ್ಯಯನಗಳ ಓದು ಮತ್ತು ಅವುಗಳ ವಿಮರ್ಶಾತ್ಮಕ ವಿಶ್ಲೇಷಣೆ ಬಹುಮಟ್ಟಿಗೆ ಕಾಣೆಯಾಗಿರುತ್ತವೆ. ಪಾರಿಭಾಷಿಕ ಪದಗಳ ಬಳಕೆಯಲ್ಲಿ ಅಸ್ಪಷ್ಟತೆ ಹಾಗೂ ಗೊಂದಲ ಎಲ್ಲೆಂದರಲ್ಲಿ ಕಂಡು ಬರುತ್ತದೆ. ಅತ್ಯಂತ ಅವೈಜ್ಞಾನಿಕವಾದ ರೀತಿಯಲ್ಲಿ ಆಕರ ಸೂಚಿಗಳನ್ನು ಕೊಡಲಾಗುತ್ತದೆ. ಇವಕ್ಕೆಲ್ಲ ಕಲಶವಿಟ್ಟಂತೆ ಸಂಶೋಧನಾ ವಿದ್ಯಾರ್ಥಿಗಳಲ್ಲಿ ಕಂಡು ಬರುವ ಅಸಡ್ಡೆ ಮತ್ತು ದುರಹಂಕಾರ ಯಾವುದೇ ಬಗೆಯ ಚರ್ಚೆಗಳನ್ನು ಕೂಡಾ ಸಾಧ್ಯಮಾಡುತ್ತಿಲ್ಲ.
ಕುತೂಹಲದ ವಿಷಯವೆಂದರೆ ನಮ್ಮ ಶಿಕ್ಷಣ ಕ್ರಮದ ಯಾವ ಹಂತದಲ್ಲೂ ಸಂಶೋಧನೆಯನ್ನು ಪ್ರೋತ್ಸಾಹಿಸುವ ಪಠ್ಯಕ್ರಮವಿಲ್ಲ. ಮದರಾಸು, ಮುಂಬಯಿ ಮತ್ತು ಕೊಲ್ಕತ್ತಾದಂಥಹ ಹಳೆಯ ವಿಶ್ವವಿದ್ಯಾಲಯಗಳಲ್ಲಿ 1970ರ ದಶಕದ ಕೊನೆಯವರೆಗೆ ಎಂ.ಎ ಪಠ್ಯಕ್ರಮದಲ್ಲಿ ಪುಟ್ಟ ಸಂಶೋಧನಾ ಪ್ರಬಂಧವನ್ನು ಬರೆಯುವುದು ಕಡ್ಡಾಯವಾಗಿತ್ತು. ಆಮೇಲೆ ಅದು ಯಾಕೋ ನಿಂತು ಹೋಯಿತು. ಎಂ ಎ ಮುಗಿಸಿದ ತಕ್ಷಣ ಸಂಶೋಧನೆಗೆ ನೇರವಾಗಿ ಧುಮುಕುವ ವಿದ್ಯಾರ್ಥಿಗಳಿಗೆ ಸಂಶೋಧನೆಯ ಪ್ರಾಥಮಿಕ ತಿಳಿವಳಿಕೆಗಳು ಇರುವುದಾರೂ ಹೇಗೆ?
ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯು ಜಿ ಸಿ) ಸಂಶೋಧನೆಗಳ
ಸ್ವಾತಂತ್ರ್ಯವನ್ನೂ ಕಸಿದುಕೊಳ್ಳಲಾರಂಭಿಸಿದೆ. ಯಾವ
ಬಗೆಯ ಸಂಶೋಧನೆಗಳಿಗೆ ಆದ್ಯತೆ ನೀಡಬೇಕೆಂಬ ಸೂಚನೆಯನ್ನು ಅದು ಈಗಲೇ ನೀಡಿದೆ. ವಿಶ್ವ ವಿದ್ಯಾಲಯಗಳ ಪ್ರವೇಶ ಪರೀಕ್ಷೆಯಲ್ಲಿ ಅನುಸರಿಸಲಾಗುತ್ತಿರುವ
ಬಹು ಆಯ್ಕೆಯ ಪ್ರಶ್ನಾ ವಿಧಾನವು (Multiple Choice questions-MCQ) ವಿದ್ಯಾರ್ಥಿಗಳ ಯೋಚನಾ ಶಕ್ತಿಯನ್ನು
ಕೊಲೆ ಮಾಡುತ್ತದೆ. ನಿರಂತರ ಬದಲಾಗುತ್ತಿರುವ ವಿಶ್ವದ ಪರಿಕಲ್ಪನೆಗೆ
ಸರಿಯಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆ ಬರುವಂತೆ ಸಂಶೋಧನಾ ಮಾರ್ಗದರ್ಶಕರು ಕೆಲಸ ಮಾಡಬೇಕು.
ಸಂಶೋಧಕರಿಗೆ ಭಾಷೆಯ ಮೇಲೆ ಹಿಡಿತ ಬರುವಂತೆ ಅವರನ್ನು ರೂಪಿಸಬೇಕು. ಕುವೆಂಪುವನ್ನು ಓದುವುದೆಂದರೆ
ಅವರು ಬರೆದ ಕೃತಿಗಳನ್ನು ಓದುವುದು, ಅವುಗಳ ಬಗ್ಗೆ ಚರ್ಚಿಸುವುದು, ವಿಚಾರ ವಿಮರ್ಶೆ ಮಾಡುವುದು, ಮತ್ತು
ಕೊನೆಯಲ್ಲಿ ವಿಸ್ತಾರವಾದ ಒಂದು ಪ್ರಬಂಧವನ್ನು ಬರೆಯುವುದು. ಅದೊಂದು ಓದಿನ ಬರವಣಿಗೆಯ ಸಂಭ್ರಮ. ಅದರೆ
ಈಗಣ ಪ್ರವೇಶ ಪರೀಕ್ಷೆಯು ಮಾನವಿಕಗಳನ್ನು ಗಣಿತ ಶಾಸ್ತ್ರ ಮಾಡುತ್ತಿದೆ. ಇದರಲ್ಲಿ ಒಂದು ಪ್ರಶ್ನೆಗೆ
ಒಂದೇ ಉತ್ತರ. ಇದು ತತ್ವಶಾಸ್ತ್ರದ ಸಾವು, ಭಾಷೆಯ ಸಾವು, ಚಿಂತನಾ ಶಕ್ತಿಯ ಕೊಲೆ. ಇಂಥ ಕಡೆ ಸಂಶೋಧನೆಯನ್ನು
ಬೆಳೆಸಲು ನಾವು ತುಂಬಾ ಕೆಲಸ ಮಾಡಬೇಕಾಗುತ್ತದೆ.
ಭಾರತದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಪಿಎಚ್. ಡಿ ಅಧ್ಯಯನಕ್ಕೆ ಗರಿಷ್ಠ ಐದು ವರ್ಷಗಳನ್ನು ನಿಗದಿ ಮಾಡಿ ಅದರಲ್ಲಿ ಎರಡು ವರ್ಷಗಳನ್ನು ಎಂ. ಫಿಲ್ ಅಧ್ಯಯನಕ್ಕೆ ಇಟ್ಟಿರುತ್ತಾರೆ. ಈ ಎರಡು ವರ್ಷಗಳಲ್ಲಿ ಸಂಶೋಧನಾ ವಿಧಾನಗಳನ್ನು ಗಂಭೀರವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಯೊಬ್ಬ ತನ್ನ ಅಧ್ಯಯನ ಕ್ಷೇತ್ರದ ಕುರಿತು ಸಾಕಷ್ಟು ತಿಳಿವಳಿಕೆಯನ್ನು ಪಡೆದಿರುತ್ತಾನೆ. ಕೆಲವು ಮಾದರಿ ಸಂಪ್ರಬಂಧಗಳನ್ನು ಬರೆಯುತ್ತಾನೆ. ಒಂದೆರಡು ವಿಚಾರ ಸಂಕಿರಣಗಳಲ್ಲಿ ಇತರ ವಿದ್ಯಾರ್ಥಿಗಳೆದುರು ತಾನು ಬರೆದ ಪ್ರಬಂಧಗಳನ್ನು ಮಂಡಿಸುತ್ತಾನೆ. ಇಷ್ಟೆಲ್ಲಾ ಆದ ಮೇಲೆ ಸಂಶೋಧನೆ ತನ್ನ ಮನೋಸ್ಥಿತಿಗೆ ಒಗ್ಗುವುದಿಲ್ಲವೆಂದು ಕಂಡರೆ ಅದನ್ನು ಬಿಟ್ಟು ಬೇರೆಡೆಗೆ ತೆರಳಲು ಒಂದು ಅವಕಾಶವೂ ಅವನಿಗೆ ಒದಗುತ್ತದೆ.
ಇದು ನಿರ್ವಿವಾದವಾಗಿ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಕನ್ನಡದ ಸಂದರ್ಭದಲ್ಲಿ ಈ ಬಗೆಯ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಜೊತೆಗೆ ಎಂ. ಫಿಲ್ ನ್ನು ಉದ್ಯೋಗದ ಜೊತೆಗೆ ತಳಕು ಹಾಕಿ, ಅದರಿಂದ ಏನೂ ಪ್ರಯೋಜನ
ಇಲ್ಲವೆಂಬಂತೆ ವಾದಿಸಲಾಗುತ್ತಿದೆ.
ಎಂ. ಫಿಲ್ ನ್ನು ನಾವು ಜೋಡಿಸಬೇಕಾದದ್ದು ಸಂಶೋಧನೆಯ ಜೊತೆಗೇ ಹೊರತು ಉದ್ಯೋಗದೊಂದಿಗೆ ಅಲ್ಲ,
ಈ ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸರಿಯಾಗಿ ಮಾರ್ಗದರ್ಶನ ಮಾಡಬಲ್ಲ ಯೋಗ್ಯತೆ ಇರುವ ಅಧ್ಯಾಪಕರ ಸಂಖ್ಯೆಯೂ ಕರ್ನಾಟಕದಲ್ಲಿ ಕಡಿಮೆಯಾಗುತ್ತಿದೆ. ತಾವು ಕೆಲಸ ಮಾಡಬಯಸುವ ಕ್ಷೇತ್ರದಲ್ಲಿ ಯಾವ ಬಗೆಯ ಸಂಶೋಧನೆಗಳು ನಡೆದಿವೆ ಮತ್ತು ನಡೆಯುತ್ತಿವೆ, ನಮ್ಮ ಇಂದಿನ ತುರ್ತು ಅಗತ್ಯಗಳೇನು? ಎಂಬುದನ್ನು ವಿಸ್ತಾರವಾದ ಓದಿನ ಮೂಲಕ ಗ್ರಹಿಸಿ ಅದನ್ನು ತನ್ನ ಸಂಶೋಧನಾ ವಿದ್ಯಾರ್ಥಿಗೆ ಸಮರ್ಥವಾಗಿ ಹೇಳಬಲ್ಲ ಅಧ್ಯಾಪಕರ ಸಂಖ್ಯೆ ಇವತ್ತು ಬೆರಳೆಣಿಕೆಯಲ್ಲಿದೆ. ಈ ನಡುವೆ ಅಧ್ಯಾಪಕರ ನಡುವಣ ಪರಸ್ಪರ ಶೈಕ್ಷಣಿಕ ಸಂಬಂಧಗಳು ಎಷ್ಟು ಕುಸಿದು ಹೋಗಿವೆಯೆಂದರೆ ಸಮಾನಾಸಕ್ತಿಯ ವಿದ್ವಾಂಸರ ಜೊತೆಗೆ ಕೂಡಾ
ಯಾವುದೇ ಬಗೆಯ ಅರ್ಥಪೂರ್ಣವಾದ ಸಂವಾದಗಳೂ ನಡೆಯುತ್ತಿಲ್ಲ. ತಮ್ಮ ವಿಶ್ವವಿದ್ಯಾಲಯದ ಪರಿಧಿಗಳನ್ನು ವಿಸ್ತರಿಸಿಕೊಂಡು ಬೇರೆಡೆಗೆ ಇರುವ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡುವ ಸಂಶೋಧಕರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ತಾನು ಕೆಲಸ ಮಾಡುತ್ತಿರುವ ಸಂಶೋಧನಾ ಕ್ಷೇತ್ರದ ಭವಿಷ್ಯವೇನು? ಅದನ್ನು ತನ್ನ ಸಂಶೋಧನೆಯ ಮೂಲಕ ಹೇಗೆ ವಿಸ್ತರಿಸಬಹುದು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳದ ಹೊರತು ತನ್ನ ಸಂಶೋಧನೆಯ ಬಗೆಗೆ ಸಂಶೋಧಕನಿಗೇ ಗೌರವ ಹುಟ್ಟಲಾರದು. ಹೀಗೆ ನೂರಾರು ಪ್ರಶ್ನೆಗಳ ಮೂಲಕ ಮತ್ತು ನಿರಂತರವಾದ ಸಂವಾದಗಳ ಮೂಲಕ ಬೆಳೆಯಬೇಕಾದ ಸಂಶೋಧನೆಗಳು ಏಕ ಪಕ್ಷೀಯವಾದ ಹಾದಿ ಹಿಡಿಯುತ್ತಾ ಸೊರಗುತ್ತಿವೆ. ವಸಾಹತು ಕಾಲದಲ್ಲಿ ನಾವೇ ಕಟ್ಟಿಕೊಂಡ ಗೋಡೆಗಳನ್ನು ಒಡೆಯಬೇಕಾಗಿರುವ ನಾವು ಅದಕ್ಕೆ ವ್ಯತಿರಿಕ್ತವಾಗಿ ಗೋಡೆಗಳನ್ನು ಇನ್ನಷ್ಟು ಭದ್ರಗೊಳಿಸಿಕೊಂಡು ಮುಂದುವರಿಯುತ್ತಿರುವುದು ಅಪೇಕ್ಷಣೀಯವಲ್ಲ.
ಈ ಕ್ಷೇತ್ರದ ಇನ್ನೊಂದು ಸಮಸ್ಯೆಯೆಂದರೆ ಕೆಲವರು ಯಾವುದೋ ಕಾರಣಕ್ಕೆ ಸಂಶೋಧನೆಯನ್ನು ಆರಂಭಿಸುತ್ತಾರೆ. ಅದಕ್ಕಾಗಿ ಶ್ರಮ ಪಟ್ಟು ಕೆಲಸವನ್ನೂ ಮಾಡುತ್ತಾರೆ. ಆನಂತರ ಇದ್ದಕ್ಕಿದ್ದಂತೆ ಸಂಶೋಧನಾ ಕ್ಷೇತ್ರವನ್ನೇ ಬಿಟ್ಟು ಮೌನವಾಗಿಬಿಡುತ್ತಾರೆ. ನನ್ನದೇ ಕೆಲವು ಸಂಶೋಧನಾ ವಿದ್ಯಾರ್ಥಿಗಳಿಗೆ ನಾನು ಸಾಕಷ್ಟು ಸಮಯ ನೀಡಿದ್ದುಂಟು. ಪುಸ್ತಕಗಳನ್ನು ಒದಗಿಸಿದ್ದುಂಟು.
ಆದರೆ ಪದವಿ ದೊರಕಿದ ಮೇಲೆ ಅವರು ಒಂದು ಲೇಖನವನ್ನೂ ಬರೆಯದೇ ಹೋದರು. ಸಂಶೋಧನೆಯೆಂಬುದು ನಿರಂತರವಾದ ಒಂದು ಪ್ರಕ್ರಿಯೆ ಎಂಬ ತಿಳಿವಳಿಕೆ ನಮ್ಮಲ್ಲಿ ಮೂಡದ ಹೊರತು ಆ ಕ್ಷೇತ್ರ ಅಭಿವೃದ್ಧಿಯಾಗದು.
ಸ್ಥೂಲ ಹಿನ್ನೆಲೆ:
ಹಾಗೆ ನೋಡಿದರೆ ಕನ್ನಡ ಸಂಶೋಧನೆಗೆ ಒಳ್ಳೆಯ ತಳಹದಿಯೇನೋ ಇದೆ. ಈಸ್ಟ್ ಇಂಡಿಯಾ ಕಂಪನಿಯ ನೌಕರನಾಗಿ 1762ರಲ್ಲಿ ಭಾರತಕ್ಕೆ ಬಂದ ಬುಕ್ನನ್. 1783ರಲ್ಲಿ ಕರ್ನಾಟಕ ಪ್ರವೇಶಿಸಿದ ಲೆ.ಕ. ಮೆಕೆಂಜಿ,
ಶ್ರೀರಂಗಪಟ್ಟಣದ ಪತನದ ಅನಂತರ, ಆ ಘಟನೆಯ ಬಗ್ಗೆ ಹುಟ್ಟಿಕೊಂಡ ಲಾವಣಿಯೊಂದನ್ನು 1803ರಲ್ಲಿ ಸಂಗ್ರಹಿಸಿದ ಜಾನ್ ಲೇಡನ್, 1816ರಲ್ಲಿ ಕನ್ನಡ ಗಾದೆ, ಒಗಟು, ಮತ್ತು
ನಂಬಿಕೆಗಳನ್ನು ಸಂಗ್ರಹಿಸಿದ ಅಬ್ಬೆ ದುಬಾಯಿ,
3,000 ಕನ್ನಡ ಗಾದೆಗಳಿರುವ ಬೃಹತ್ ಸಂಪುಟವನ್ನು 1847ರಲ್ಲಿ ಪ್ರಕಟಿಸಿದ ಮೋಗ್ಲಿಂಗ್, ದಾಸರ ಪದಗಳ ಮೌಖಿಕ ರೂಪಗಳನ್ನು 1831ರಷ್ಟು ಹಿಂದೆ ಸಂಗ್ರಹಿಸಿದ ಗೋವರ್, 1873 ರಲ್ಲಿಯೇ ಕನ್ನಡಕ್ಕೊಂದು ನಿಘಂಟು ನೀಡಿದ ಕಿಟೆಲ್, 1885 ರಲ್ಲಿ
17 ಐತಿಹಾಸಿಕ ಲಾವಣಿಗಳನ್ನು, ನಾಲ್ಕು ದಂಡಕಗಳನ್ನು, ನಾಲ್ಕು ಜೋಗುಳದ ಹಾಡುಗಳನ್ನು ಸಂಗ್ರಹಿಸಿದ ಜೆ.ಎಫ್. ಫ್ಲೀಟ್, ಜನಪದ ಕತೆಗಳ ಕಡೆಗೆ 1881ರಲ್ಲಿಯೇ ಮುಖ ಮಾಡಿದ ಮೇರಿ ಫ್ರಿಯರೆ, 1875ರಲ್ಲಿ ಭೂತಾರಾಧನೆಯ ಬಗೆಗೆ ಲೇಖನ ಪ್ರಕಟಿಸಿದ ವಾಲ್ಹೌಸ್, 1892ರಲ್ಲಿ ಇಪ್ಪತ್ತೊಂದು ಪಾಡ್ಡನಗಳನ್ನು ಸಂಕಲಿಸಿ ಪ್ರಕಟಿಸಿದ ಎ.ಸಿ. ಬರ್ನೆಲ್ ಮೊದಲಾದ ಪಾಶ್ಚಾತ್ಯ ವಿದ್ವಾಂಸರು ಮಾಡಿದ ಕೆಲಸಗಳು ಇಂದಿಗೂ ನಮಗೆ ಸಂಶೋಧನೆಯ ಮೂಲ ಆಕರಗಳಾಗಿ ಸಹಕರಿಸುತ್ತಲಿವೆ. ಅವರ ಕೆಲಸಗಳ ಮೂಲ ಉದ್ದೇಶಗಳು ಏನೇ ಇದ್ದಿರಲಿ, ಇವತ್ತು ಅವು ಆ ಮೂಲ ಉದ್ದೇಶಗಳನ್ನೂ ಮೀರಿ ಕನ್ನಡ ಸಂಶೋಧನೆಗೆ ಭದ್ರ ತಳಪಾಯವನ್ನು ನಿರ್ಮಿಸಿಕೊಟ್ಟಿವೆ.
ಈ
ವಿದ್ವಾಂಸರುಗಳ ಮುಖ್ಯ ಉದ್ಧೇಶ ಸಂಶೋಧನೆಯಾಗಿರಲಿಲ್ಲ. ಅವರಲ್ಲಿ ಹೆಚ್ಚಿನವರು ಅಧಿಕಾರಿಗಳು. ಮೆಕೆಂಜಿಯು
ಟಿಪ್ಪೂವಿನ ವಿರುದ್ಧ ಜನರನ್ನು ಸಂಘಟಿಸಲೆಂದೇ ಬಂದಿದ್ದ. ಆದರೆ ಆತ ಆ ಮುಖ್ಯ ಕೆಲಸದೊಂದಿಗೆ 1568 ಹಸ್ತಪ್ರತಿಗಳನ್ನು ಸಂಗ್ರಹಿಸಿದನೆಂದು ದಾಖಲೆಗಳಿವೆ (ಪುರುಷೋತ್ತಮ ಬಿಳಿಮಲೆ 1985). ಜೊತೆಗೆ
ಶಾಸನಗಳನ್ನೂ, ನಾಣ್ಯಗಳನ್ನೂ, ಭೂಪಟಗಳನ್ನೂ ಆತ ಸಂಗ್ರಹಿಸಿದ. ಹಳಗನ್ನಡ ಮತ್ತು ನಡುಗನ್ನಡದ ಅನೇಕ ಪಠ್ಯಗಳು ವಿದೇಶೀ ವಿದ್ವಾಂಸರ ಸತತ ಪ್ರಯತ್ನಗಳಿಂದ ಬೆಳಕಿಗೆ ಬಂದುವು. 19ನೇ ಶತಮಾನದ ಕೊನೆಯ ಭಾಗ ಮತ್ತು 20ನೆಯ ಶತಮಾನದ ಮೊದಲ ಭಾಗದಲ್ಲಿ ಈ ವಿದ್ವಾಂಸರುಗಳು ಆರಂಭ ಮಾಡಿದ ನಿಘಂಟು ಶಾಸ್ತ್ರ, ಶಾಸನ ಶಾಸ್ತ್ರ, ಹಸ್ತ ಪ್ರತಿ ಸಂಪಾದನೆ, ಗ್ರಂಥ ಸಂಪಾದನೆ, ಮತ್ತು ಜಾನಪದ ಕೆಲಸಗಳು ನಮ್ಮ ಮುಖ್ಯ ಸಂಶೋಧನೆಗಳ ವಸ್ತು ಮತ್ತು ವಿಧಾನಗಳನ್ನು ನಿರ್ವಚಿಸಿದುವು. ಈ ಕೆಲಸಗಳು ವಸಾಹತು ಕಾಲದ ಧೋರಣೆಗಳಿಗೆ ಅನುಗುಣವಾಗಿಯೇ ಇರುವುದು ಸಹಜವಾಗಿತ್ತು, ಮತ್ತು ನಮಗೆ ಅದರಿಂದ ಆ ಕಾಲದಲ್ಲಿ ಬಿಡುಗಡೆಯಿರಲಿಲ್ಲ.
ಈ ಆರಂಭಿಕ ಕೆಲಸಗಳನ್ನು 20ನೇ ಶತಮಾನದಲ್ಲಿ ಅರ್ಥಪೂರ್ಣವಾಗಿ ಮತ್ತು ವಿದ್ವತ್ ಪೂರ್ಣವಾಗಿ ಮುಂದುವರಿಸಲಾಯಿತು. ಈ ಕೆಲಸಗಳ ಸಮೀಕ್ಷೆಯು ಪ್ರಸ್ತುತ ಪ್ರಬಂಧದ ಉದ್ದೇಶಕ್ಕೆ ಹೊರತಾದುದಾದರೂ ಕೆಲವು ಮಹತ್ವದ
ಹೆಸರುಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಶ್ರೀಗಳಾದ ಕೆ ಬಿ ಪಾಠಕ್, ಪಿ ಬಿ ದೇಸಾಯಿ, ಕೆ ಜಿ ಕುಂದಣಗಾರ, ಟಿ ಎಸ್ ವೆಂಕಣಯ್ಯ, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್, ರಾ. ನರಸಿಂಹಾಚಾರ್, ಡಿ ಎಲ್ ನರಸಿಂಹಾಚಾರ್, ಎಲ್ ಬಸವರಾಜು, ಶಂಭಾ ಜೋಷಿ, ಫ ಗು ಹಳಕಟ್ಟಿ, ಚನ್ನಪ್ಪ ಉತ್ತಂಗಿ ಮೊದಲಾದವರ ಕೆಲಸಗಳು ಕನ್ನಡ ಸಂಶೋಧನೆಯ ಮಹತ್ವದ ಘಟ್ಟವೊಂದನ್ನು ಸೂಚಿಸುತ್ತದೆ. ಇವರಲ್ಲಿ ಪ್ರತಿಯೊಬ್ಬರೂ ಹೊಸ ಹಾದಿ ಹಿಡಿಯಲು ಪ್ರಯತ್ನ ಪಟ್ಟವರು. ಕೆಲವರು ಸಂಶೋಧನೆಗೆ ಭಾಷಾ ಶಾಸ್ತ್ರದ ಮೂಲಕ ಪ್ರವೇಶಿಸಿದರೆ, ಮತ್ತೆ ಕೆಲವರು ಶಾಸನಗಳ ಮೂಲಕ ಪ್ರವೇಶಿಸಿದರು. ಐತಿಹಾಸಿಕ ಪ್ರಜ್ಞೆಯಿಂದ ಸಂಶೋಧನೆಗೆ ಘನತೆ ತಂದವರು ಹಲವರು. ಹಳಕಟ್ಟಿಯವರ ಅಸಾಮಾನ್ಯ ವಚನ ಸಂಪುಟಗಳು ಮತ್ತು 30 ವರ್ಷ ದುಡಿದು ಸಿದ್ಧಪಡಿಸಿದ ಆರ್ ನರಸಿಂಹಾಚಾರ್ಯರ ಕವಿಚರಿತೆ ಸಂಪುಟಗಳು ಇಂದಿಗೂ ನಮಗೊಂದು ವಿಸ್ಮಯದ ಹಾಗೆ ಭಾಸವಾಗುತ್ತದೆ. ಡಿ ಎಲ್ ನರಸಿಂಹಾಚಾರ್ಯರು ಭಿನ್ನ ಪಠ್ಯಗಳ ಸಮೇತ ಸಂಪಾದಿಸಿ ಕೊಟ್ಟ ಪ್ರಾಚೀನ ಗ್ರಂಥಗಳು ಹಾಗೂ ಬರೆದ ಲೇಖನಗಳು ಕನ್ನಡ ಪಂಡಿತ ಪರಂಪರೆಯು ತಲುಪಬಹುದಾದ ಎತ್ತರವನ್ನು ನಿರ್ವಿವಾದವಾಗಿ ಸಂಕೇತಿಸುತ್ತದೆ. ಮಂಜೇಶ್ವರದಂಥ ಪುಟ್ಟ ಊರಿನಲ್ಲಿ
ಕುಳಿತುಕೊಂಡು, ಗೋವಿಂದ ಪೈಗಳು ಮಾಡಿದ ಸಾಧನೆ ಅಸಾಧಾರಣವಾದುದು. ಸಂಶೋಧನೆಗಾಗಿ ಅವರು ಕಲಿತ ಭಾಷೆಗಳೆಷ್ಟು!.
ಆ ಕಾಲದ ವಿದ್ವಾಂಸರ ಹಠ, ಕಠಿಣ ಶ್ರಮ, ವಿದ್ವತ್ತು ಮತ್ತು ಸಂಶೋಧನೆಯ ಮೇಲಣ ಬದ್ಧತೆಯನ್ನು ಇಂದು ನಮಗೆ ಊಹಿಸಿಕೊಳ್ಳುವುದೂ ಕಷ್ಟವಾಗುತ್ತಿದೆ. ಸಂಶೋಧನೆಯ ಪರಿಕರಗಳು ಏನೇನೂ ಇಲ್ಲದ ಕಾಲದಲ್ಲಿ ಇವರೆಲ್ಲ ಮಾಡಿದ ಕೆಲಸಗಳು ಚಾರಿತ್ರಿಕವಾದುವು.
ಈ ಹಿರಿಯ ವಿದ್ವಾಂಸರುಗಳ ನೇರ ಶಿಷ್ಯರಾಗಿಯೋ,
ಪರೋಕ್ಷ ಶಿಷ್ಯರಾಗಿಯೋ ತರಬೇತು
ಪಡೆದು,
ಆನಂತರದ ಕಾಲ ಘಟ್ಟದ
ಸಂಶೋಧನಾ ಕ್ಷೇತ್ರದಲ್ಲಿ ದುಡಿದ ವಿದ್ವಾಂಸರು ಕೂಡಾ ಸ್ವಾತಂತ್ರ್ಯೋತ್ತರ ಭಾರತದ ಶೈಕ್ಷಣಿಕ ಅಗತ್ಯಗಳಿಗನುಗುಣವಾಗಿ ಕನ್ನಡ ಸಂಶೋಧನೆಯ ಅಗತ್ಯಗಳನ್ನು ಪುನಾರಚಿಸಿಕೊಂಡು, ಅದರ ಕ್ಷಿತಿಜಗಳನ್ನು ಗಮನಾರ್ಹವಾಗಿ ವಿಸ್ತರಿಸಿದರು. ಮುಖ್ಯವಾಗಿ ಮೈಸೂರು, ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಆ ಕಾಲಕ್ಕೆ ದೊರಕಿದ ಸಾಂಸ್ಥಿಕ ಬೆಂಬಲ ಮತ್ತು ಸಂಶೋಧನಾ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಈ ವಿದ್ವಾಂಸರು ಹಿಂದೆ ಬೀಳಲಿಲ್ಲ. ಶ್ರೀಗಳಾದ ಆರ್ ಸಿ ಹಿರೇಮಠ, ರಂ ಶ್ರೀ ಮುಗಳಿ, ಎಂ ಚಿದಾನಂದ ಮೂರ್ತಿ, ಎಂ ಎಂ ಕಲಬುರ್ಗಿ, ಸಾ ಶಿ ಮರುಳಯ್ಯ, ಎಸ್ ವಿದ್ಯಾಶಂಕರ, ಎಂ ಬಿ ನೇಗಿನಹಾಳ, ಆರ್ ವೈ ಧಾರವಾಡಕರ್, ವೃಷಭೇಂದ್ರ ಸ್ವಾಮಿ, ವರದರಾಜ ರಾವ್,
ಶ್ರೀನಿವಾಸ ಹಾವನೂರು, ಹಂ ಪ ನಾಗರಾಜಯ್ಯ, ಹಾಮಾ ನಾಯಕ, ಟಿ ವಿ ವೆಂಕಟಾಚಲ ಶಾಸ್ತ್ರಿ,
ಆರ್
ವಿ ಎಸ್ ಸುಂದರಂ, ಕೆ ಕುಶಾಲಪ್ಪ ಗೌಡ, ಎಚ್ ಎಸ್ ಗೋಪಾಲ ರಾವ್, ದೇವರ ಕೊಂಡಾ ರೆಡ್ಡಿ, ಜಿ ವೆಂಕಟಸುಬ್ಬಯ್ಯ, ಜಿ ಎಸ್ ಶಿವರುದ್ರಪ್ಪ, ಮೊದಲಾದ ಘನ ವಿದ್ವಾಂಸರು ತಾವೇ ಅತ್ಯುತ್ತಮವಾದ ಮಹಾಪ್ರಬಂಧಗಳನ್ನು ಬರೆದು ಪ್ರಕಟಿಸಿದ್ದಲ್ಲದೆ, ತಮ್ಮ ವಿದ್ಯಾರ್ಥಿಗಳೂ ಅಂಥ ಮಹತ್ವದ ಕೆಲಸಗಳನ್ನು ಮಾಡಲು ಪ್ರಚೋದನೆ ನೀಡಿದರು. ಡಾ. ಚಿದಾನಂದ ಮೂರ್ತಿ ಅವರ
‘ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ ಕೃತಿಯು ಇಂದಿಗೂ ಒಂದು ಮಾದರಿ ಸಂಶೋಧನಾ ಗ್ರಂಥ. ಕನ್ನಡ
ಸಂಶೋಧನೆಗೆ ಶೈಕ್ಷಣಿಕ ಆಯಾಮ ದೊರಕಿದ ಮಹತ್ವದ ಕಾಲವಿದು. 1960ರಿಂದ ಸುಮಾರಾಗಿ 1990ರ ವರೆಗಣ ಕಾಲದಲ್ಲಿ ನಡೆಯುತ್ತಿದ್ದ ವಿಚಾರಸಂಕಿರಣಗಳಲ್ಲಿ ಮಂಡಿತವಾಗುತ್ತಿದ್ದ ಪ್ರಬಂಧಗಳ ಗುಣ ಮಟ್ಟ ಕೂಡಾ ಮಿಗಿಲಾದುದು.
ಮುಂದೆ ಅವು ಮೈಸೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ ಪ್ರಬುದ್ಧ ಕರ್ನಾಟಕದಲ್ಲಿ , ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ ಕರ್ನಾಟಕ ಭಾರತಿಯಲ್ಲಿ
ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಕಟವಾಗುತ್ತಿದ್ದ ಸಾಧನೆಯಲ್ಲಿ ತಪ್ಪದೆ
ಪ್ರಕಟವಾಗಿ ರಾಜ್ಯದಾದ್ಯಂತ ಕೆಲಸ ಮಾಡುತ್ತಿದ್ದ ತರುಣ ಸಂಶೋಧಕರಿಗೆ ತಲುಪುತಿದ್ದುವು.
ಈ ಮೂರು ಪತ್ರಿಕೆಗಳು ಪ್ರಕಟಿಸುತ್ತಿದ್ದ ಸಂಶೋಧನಾ ಲೇಖನಗಳ ಬಗ್ಗೆ ಹಾಗೂ ಆಗ ನಡೆಯುತ್ತಿದ್ದ ವಿಚಾರ ಸಂಕಿರಣಗಳ ಗುಣ ಮಟ್ಟಗಳ ಬಗ್ಗೆ ನಾವೀಗ ನಮ್ಮ ಅರಿವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.
ಇದೇ ಹೊತ್ತಿನಲ್ಲಿ ಜಾನಪದವೂ ತನ್ನ ಆರಂಭಿಕ ಸಂಗ್ರಹದ ಕೆಲಸಗಳನ್ನು
ದಾಟಿಕೊಂಡು ಕನ್ನಡ ಸಂಶೋಧನೆಯ ಮುಖ್ಯ ವಸ್ತುವಾಗಿ ಕಾಣಿಸಿಕೊಂಡಿತು. 1955ರಷ್ಟು ಹಿಂದೆ ಉತ್ತರ ಕರ್ನಾಟಕದ
ಜನಪದ ಸಾಹಿತ್ಯದ ಬಗ್ಗೆ ಮಹಾ ಪ್ರಬಂಧವನ್ನು ಬರೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಬಿ.ಎಸ್. ಗದ್ದಗೀಮಠರ ‘ಕನ್ನಡ ಜಾನಪದ ಗೀತೆಗಳು’ ಕೃತಿಯು 1963ರಲ್ಲಿ ಪ್ರಕಟವಾಯಿತು. ದಕ್ಷಿಣ ಕರ್ನಾಟಕದಿಂದ ಜಿ.ಶಂ.ಪರಮಶಿವಯ್ಯ ಅವರು 1972ರಲ್ಲಿ ‘ದಕ್ಷಿಣ ಕರ್ನಾಟಕ ಜನಪದ ಕಾವ್ಯಪ್ರಕಾರಗಳು’ ಎಂಬ ತಮ್ಮ ಉತ್ಕೃಷ್ಟ ಮಹಾಪ್ರಬಂಧವನ್ನು ಕ್ಷೇತ್ರ ಕಾರ್ಯಾಧರಿತವಾಗಿ ಮಾಡಿದರೆ,
ಕರಾವಳಿ ಕರ್ನಾಟಕದಿಂದ ಬಿ.ಎ.ವಿವೇಕ ರೈ ಅವರು ತಮ್ಮ ‘ ತುಳು ಜನಪದ ಸಾಹಿತ್ಯ’ ಎನ್ನುವ ಹೆಸರಿನ ಮಹಾಪ್ರಬಂಧವನ್ನು 1985ರಲ್ಲಿ ಪ್ರಕಟಿಸಿದರು. ಈ ಮೂರೂ ಮಹಾಪ್ರಬಂಧಗಳು ಮುಂದೆ ಆಯಾ ಪರಿಸರದಲ್ಲಿ ಜಾನಪದ
ಸಂಶೋಧನೆಗಳಿಗೆ ಬಹುವಾದ ಪ್ರೇರಣೆ ನೀಡಿದುವು.
1966ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ‘ಜನಪದ ಸಾಹಿತ್ಯ - ಅದರ ಸ್ವರೂಪ’ ಎನ್ನುವ ವಿಷಯದ ಕುರಿತು ಪ್ರಬಂಧ ಮಂಡಿಸಿದ ಹಾ.ಮಾ.ನಾಯಕರು ‘ಜನಪದ -
‘ಜಾನಪದ
‘ ಪರಿಕಲ್ಪನೆಗಳನ್ನು ಮೊದಲ ಬಾರಿಗೆ ಸ್ಪಷ್ಟಪಡಿಸಿ, ಕನ್ನಡ ಜಾನಪದ ಅಧ್ಯಯನವು ಆಧುನಿಕವೂ ವೈಜ್ಞಾನಿಕವೂ ಆಗಬೇಕಾದ್ದರ ಕಡೆಗೆ ನಾಡಿನ ವಿದ್ವಾಂಸರ ಗಮನ ಸೆಳೆದರು. ಅದೇ ವರ್ಷ ಮೈಸೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಶಿಕ್ಷಣದಲ್ಲಿ ಜಾನಪದವೂ ಸೇರ್ಪಡೆಯಾಯಿತು. 1972 ರಿಂದ ಅಲ್ಲಿ ಸ್ನಾತಕೋತ್ತರ ಜಾನಪದ ಡಿಪ್ಲೋಮಾ ಶಿಕ್ಷಣ ಜಾರಿಗೆ ಬಂತು. 1974 ರಿಂದ ಸ್ನಾತಕೋತ್ತರ ಪದವಿ ಶಿಕ್ಷಣವೂ ಅಲ್ಲಿ ಆರಂಭವಾಯಿತು. ಚಂದ್ರಶೇಖರ ಕಂಬಾರ, ಡಿ.ಕೆ. ರಾಜೆಂದ್ರ, ಕೆ. ಆರ್. ಸಂಧ್ಯಾರೆಡ್ಡಿ, ನಂ ತಪಸ್ವಿಕುಮಾರ, ತೀ ನಂ ಶಂಕರ ನಾರಾಯಣ. ಬಸವರಾಜ ಮಲಶೆಟ್ಟಿ ದೇವೇಂದ್ರಕುಮಾರ ಹಕಾರಿ, ಎನ್.ಆರ್. ನಾಯಕ, ಎಸ್.ಪಿ. ಪದ್ಮಪ್ರಸಾದ, ಟಿ ಎಸ್ ಸತ್ಯನಾಥ್, ಕೃಷ್ಣಮೂರ್ತಿ ಹನೂರ, ಕೆ. ಚಿನ್ನಪ್ಪಗೌಡ ಶ್ರೀರಾಮ ಇಟ್ಟಣ್ಣವರ, ಪಿ.ಕೆ. ಖಂಡೋಬ, ಕೆ ಆರ್ ದುರ್ಗಾದಾಸ್, ಹಿ ಚಿ ಬೋರಲಿಂಗಯ್ಯ, ಸೋಮಶೇಖರ ಇಮ್ರಾಪೂರ, ಡಿ. ಅರ್. ಪಾಂಡುರಂಗ, ಆನಂದರಾಮ ಉಪಾಧ್ಯಾಯ, ನಿಂಗಣ್ಣ ಸಣ್ಣಕ್ಕಿ, ಅಂಬಳಿಕೆ ಹಿರಿಯಣ್ಣ, ಹಿ.ಶಿ. ರಾಮಚಂದ್ರೇಗೌಡ, ಶ್ರೀಕಂಠ ಕೂಡಿಗೆ, ಪಿ.ಕೆ. ರಾಜಶೇಖರ, ವೀರಣ್ಣ ದಂಡೆ, ಕಾಳೇಗೌಡ ನಾಗವಾರ, ಎಂ.ಜಿ. ಈಶ್ವರಪ್ಪ, ವಾಮನ ನಂದಾವರ, ಪ್ರಭಾಕರ ಜೋಷಿ, ಮೊದಲಾದವರು ತಮ್ಮ ಪಿಎಚ್.ಡಿ. ಪದವಿಯನ್ನು ಜಾನಪದವನ್ನು ಅಧ್ಯಯನ ಮಾಡುವುದರ ಮೂಲಕವೇ ಪಡೆದುಕೊಂಡರು.
ಕರ್ನಾಟಕದಲ್ಲಿರುವ ಎಲ್ಲ ವಿಶ್ವವಿದ್ಯಾಲಯಗಳೂ ಕರ್ನಾಟಕ ಜಾನಪದ ಅಧ್ಯಯನವನ್ನು ಪ್ರೋತ್ಸಾಹಿಸಿದುವು. ಮಾರ್ಥಾ ಆಷ್ಟನ್, ಪೀಟರ್ ಕ್ಲಾಸ್, ಲಾರೀ ಹಾಂಕೋ ಅವರಂಥ ವಿದ್ವಾಂಸರು ಕರಾವಳಿ ಕರ್ನಾಟಕದಲ್ಲಿ ಅನೇಕ ವರ್ಷಗಳ ಕಾಲ ನೆಲೆ ನಿಂತು ತುಳು ಜಾನಪದ ಅಧ್ಯಯನಗಳಿಗೆ ಪ್ರೇರಣೆ ನೀಡಿದ್ದಲ್ಲದೆ ಆ ಭಾಗದ ಜಾನಪದ ಅಧ್ಯಯನಗಳಿಗೆ ಅಂತಾರಾಷ್ಟ್ರೀಯವಾದ ಆಯಾಮವನ್ನೂ ತಂದುಕೊಟ್ಟರು. ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಜಾನಪದ ಅಧ್ಯಯನವು ಸಾಕಷ್ಟು ವಿಸ್ತೃತವೂ ಗಂಭೀರವೂ ಆಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.
ಈ
ತಲೆಮಾರಿನ ಆನಂತರ ಕಾಣಿಸಿಕೊಂಡ ಇವತ್ತಿನ ಸಂಶೋಧಕರಿಗೆ ಎಲ್ಲ ಅವಕಾಶಗಳು ಇದ್ದು ಕೂಡಾ ಯಾಕೋ ಸಂಶೋಧನೆ ನಿರೀಕ್ಷಿತ
ಮಟ್ಟದಲ್ಲಿ ಮುಂದುವರಿಯುತ್ತಿಲ್ಲ. ಜಾತಿ, ಕೋಮು, ಅತಿಯಾದ ಪ್ರಾದೇಶಿಕತೆ, ಅನೈತಿಕ ವ್ಯವಹಾರಗಳು,
ಅಧಿಕಾರ ರಾಜಕಾರಣದ ಮೇಲಿನ ಮೋಹ, ಹುಸಿ ಬೌದ್ಧಿಕತೆ ಮೊದಲಾದ ಅನೇಕ ಕಾರಣಗಳಿಂದ ಕನ್ನಡ ಸಂಶೋಧನೆ ಇವತ್ತು
ಸೊರಗುತ್ತಿದೆ.
ಅದೇನಿದ್ದರೂ,
ಕನ್ನಡ ಸಂಶೋಧನೆಯ ಚರಿತ್ರೆ ಸಾಕಷ್ಟು ಸುದೀರ್ಘವಾಗಿದೆ ಮತ್ತು ಅದರ ತಳಹದಿ ಭದ್ರವಾಗಿದೆ. ಆದರೆ ಈಗ ಆ ಕ್ಷೇತ್ರಕ್ಕೆ ಏನಾಗಿದೆ ಎಂದು ಯೋಚಿಸಿದಾಗ ತುಂಬಾ ನಿರಾಶೆಯಾಗುತ್ತದೆ. ಪ್ರೊ. ಎಸ್ ಶೆಟ್ಟರ್, ಹಂಪ ನಾಗರಾಜಯ್ಯ, ಪ್ರೊ. ಬಿ ಎ ವಿವೇಕ ರೈ, ಪ್ರೊ. ರಹಮತ್ ತರೀಕೆರೆ ಮೊದಲಾದ ಬೆರಳೆಣಿಕೆಯ ಕೆಲವು ಹಿರಿಯರ ಕೆಲಸಗಳನ್ನು ಬಿಟ್ಟರೆ ಕನ್ನಡ ಸಂಶೋಧನೆಯು ಇಂದು ತನ್ನ ನೆಲೆಯನ್ನು ಕಳಕೊಂಡಂತೆ ಭಾಸವಾಗುತ್ತದೆ. ಕಳೆದ ಸುಮರು 25 ವರ್ಷಗಳಲ್ಲಿ ಪ್ರಕಟವಾದ ನಾಲ್ಕಾರು ಪುಸ್ತಕಗಳನ್ನು ಹೊರತು ಪಡಿಸಿದರೆ, ಯಾವುದೇ ಮಹತ್ವದ ಸಂಶೋಧನಾ ಗ್ರಂಥ ಪ್ರಕಟವಾದ್ದು ನನ್ನ ಗಮನಕ್ಕೆ ಬಂದಿಲ್ಲ. ಈ ಪರಿಸ್ಥಿತಿಯಿಂದ ಸಂಶೋಧನೆಯನ್ನು ಪಾರು ಮಾಡುವ ಜವಾಬ್ದಾರಿಯನ್ನು ವಿಶ್ವವಿದ್ಯಾಲಯಗಳು ಹೊರದೆ ಬೇರೆ ಹಾದಿಯಿಲ್ಲ. ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ ( 2007), ಹಳಗನ್ನಡ -ಲಿಪಿ ಲಿಪಿಕಾರ , ಲಿಪಿ ವ್ಯವಸಾಯ ( 2014) ಗಳಂಥ ಅತ್ಯಂತ ಉದ್ಭೋಧಕ ಕೃತಿಗಳನ್ನು ರಚಿಸಿದ ಷ. ಶೆಟ್ಟರ್ ಅವರು ಬೇರೆ ಶಿಸ್ತಿನಿಂದ ಬಂದವರು ಎಂಬುದನ್ನು ನೆನಸಿಕೊಂಡರೆ ಕನ್ನಡದ ಕರುಣಾಜನಕ ಸ್ಥಿತಿ ಕಣ್ಣಮುಂದೆ ಬಂದು ನಿಲ್ಲುತ್ತದೆ. ನಾವು ಈ ಪರಿಸ್ಥಿತಿಯಿಂದ ಪಾರಾಗಲು ಹಾದಿಗಳನ್ನು ಕಂಡುಕೊಳ್ಳುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ.
ಸಮಕಾಲೀನ
ಆತಂಕಗಳು:
ಹೀಗೆ
ಕನ್ನಡ ಸಂಶೋಧನೆಯು ಕುಸಿಯುತ್ತಿರುವ ಕಾಲದಲ್ಲಿ ಗಂಭೀರ ಸಂಶೋಧನೆಯಲ್ಲಿ ತೊಡಗಿಕೊಂಡ ಸಂಶೋಧಕರ ಮುಂದೆ
ಕೆಲವು ಅಪಾಯಗಳು ಮತ್ತು ಸವಾಲುಗಳು ಇದಿರಾಗುತ್ತಿವೆ.
ಇತಿಹಾಸ,
ಶಾಸನ, ಹಸ್ತಪ್ರತಿ, ಗ್ರಂಥ ಸಂಪಾದನೆ, ಜಾನಪದ, ಛಂದಸ್ಸು, ಸ್ಥಳನಾಮ, ಮೊದಲಾದ ಕನ್ನಡದ ಮಾಹಿತಿಗಳ ಮೂಲಕವೇ ಕನ್ನಡವನ್ನು ಕಟ್ಟಿದ ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ
ತಮ್ಮ ಸಂಶೋಧನೆಯ ಸತ್ಯಗಳಿಂದಾಗಿಯೇ ಅಮಾನುಷವಾಗಿ ಕೊಲೆಯಾದರು. ಸಂಶೋಧಕ ಆಗಾಗ ಶಿಲುಬೆಗೇರಬೇಕಾಗುತ್ತದೆ
ಎಂಬ ಅವರ ಮಾತು ಅವರಲ್ಲಿಯೇ ನಿಜವಾಯಿತು. ಅವರು ಬರೆದ ಸಾವಿರಕ್ಕೂ ಹೆಚ್ಚು ಲೇಖನಗಳು ಮತ್ತು ನೂರಕ್ಕೂ
ಹೆಚ್ಚು ಕೃತಿಗಳು ಕನ್ನಡ ಸಂಶೋಧಕನೊಬ್ಬನ ಚರಮ ಸಿದ್ಧಿಯ ಹಾಗೆ ಭಾಸವಾಗುತ್ತದೆ. ಆದರೆ ಸಮಕಾಲೀನ ಸಮಾಜದ
ಕೆಲವರಿಗೆ ಅದು ಬೇಡವಾಯಿತು. ಅಂದರೆ ಗಂಭೀರ ಸಂಶೋಧಕರು ಇಂದು ತಮ್ಮ ಓದಿನಲ್ಲಿ ಕಂಡುಕೊಂಡ ಅಥವಾ ಕ್ಷೇತ್ರಕಾರ್ಯದಲ್ಲಿ
ತಾವು ಸಂಗ್ರಹಿಸಿದ ಮಾಹಿತಿಗಳ ಆಧಾರದ ಮೇಲೆ ತಮ್ಮ ಸಂಶೋಧನೆಯನ್ನು ಮುಂದುವರಿಸುವುದು ಕಷ್ಟವಾಗುತ್ತಿದೆ. ಬದಲು ಸಮಕಾಲೀನ ಸಮಾಜ ಏನನ್ನು ನಿರೀಕ್ಷಿಸುತ್ತದೆಯೋ ಅದನ್ನೇ
ಹೇಳಬೇಕಾಗಿರುವ ಒತ್ತಡದಲ್ಲಿ ಸಂಶೋಧಕ ಸಿಲುಕಿಕೊಂಡಿದ್ದಾನೆ. ಟಿಪ್ಪೂ ಸುಲ್ತಾನನ ಲಾವಣಿಯೊಂದರಲ್ಲಿ ಬರುವ –
ಟೀಪು
ರಾಜ್ಯದೊಳು ಶರಾಬು, ಶೇಂದಿ, ಗಾಂಜಾ ಅಫೀಮು ಇರಲಿಲ್ಲ,
ಟೀಪುವಿನ
ಕಾಲದೊಳು ಜೂಜಿನಾಟ ಮೇಣ್ ವೈಭಿಚಾರದ ಸುಳಿವಿಲ್ಲ’
ಎಂಬ
ಸಾಲುಗಳನ್ನು ಲೇಖನವೊಂದರಲ್ಲಿ ಉದ್ಧರಿಸಿದ್ದಕ್ಕೆ ನಾನು ಅನೇಕ ಕೆಟ್ಟ ಮತ್ತು ಅಶ್ಲೀಲ ಮಾತುಗಳನ್ನು
ಸಾರ್ವಜನಿಕವಾಗಿಯೇ ಕೇಳಬೇಕಾಯಿತು. ಪಂಡರಾಪುರ ವಿಠ್ಠಲನು ವಲಸೆಗಾರ ಪಶುಪಾಲಕರ ದೈವವಾಗಿರುವ ಸಾಧ್ಯತೆ
ಇದೆ ಎಂಬ ಮಾತನ್ನು ಸಾಧಾರವಾಗಿ ಬರೆದದ್ದಕ್ಕೆ ನಾನು ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ‘ದೇವನಹಳ್ಳಿಯಲ್ಲಿ
ಟಿಪ್ಪು ಹುಟ್ಟಿದ್ದರಿಂದ ಅವನ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬಹುದಾಗಿತ್ತು’ ಎಂಬ ಒಂದು ಸಣ್ಣ ಅಭಿಪ್ರಾಯನ್ನು ಗಿರೀಶ್ ಕಾರ್ನಾಡರು
ವ್ಯಕ್ತಪಡಿಸಿದ್ದೇ ದೊಡ್ಡ ಅಪರಾಧವಾಗಿ ಅನೇಕರಿಗೆ ಕಂಡು ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕಾಯಿತು.
ಕರ್ನಾಟಕವೂ
ಸೇರಿದಂತೆ, ಈ ದೇಶದ ಸುದೀರ್ಘ ಇತಿಹಾಸದಲ್ಲಿ ಇಲ್ಲಿಗೆ ವಲಸೆ ಬಂದು ನೆಲೆಸಿದ ಜನಾಂಗಗಳ ಮತ್ತು ಸಮುದಾಯಗಳ
ಲೆಕ್ಕ ಇಟ್ಟವರಿಲ್ಲ. ಒಂದು ಬಗೆಯ ನಿರಂತರತೆಯನ್ನು ಸದಾ ಕಾಪಾಡುತ್ತಲೇ, ಜೊತೆ ಜೊತೆಗೆ ಬದಲಾಗುತ್ತಾ
ಹೋಗಿರುವ ಈ ನೆಲವು, ಬಗೆ ಬಗೆಯ ಸಂಸ್ಕೃತಿಗಳನ್ನು
ಉದಾರವಾಗಿ ಸ್ವೀಕರಿಸಿ ಬೆಳೆಯಲು ಅನುವು ಮಾಡಿಕೊಟ್ಟಿದೆ. ಈ ಹಂತದಲ್ಲಿ ನಡೆದ ಹೊಸ ಆವಿಷ್ಕಾರಗಳು,
ಸೇರ್ಪಡೆಗಳು, ನಿರಾಕರಣೆಗಳು, ಸಂಘರ್ಷಗಳು ಮತ್ತು ಸಮನ್ವಯಗಳು ನಮ್ಮ ದೇಶವನ್ನು ಇತರ ದೇಶಗಳಿಂದ ಬೇರೆಯಾಗಿಸಿದೆ. ಜಗತ್ತಿನ ಮೂಲೆ
ಮೂಲೆಗಳಿಂದ ಇಲ್ಲಿಗೆ ಬೌದ್ಧಿಕತೆ ಹರಿದು ಬಂದಿದೆ, ಭೌತಿಕ ಸಾಮಗ್ರಿಗಳು ಸಾಗಿ ಬಂದಿವೆ. ಅವು ಕಾಲಾಂತರದಲ್ಲಿ
ಇಲ್ಲಿಯವರಿಗೆ ಗೊತ್ತಾಗದ ಹಾಗೆ ಇಲ್ಲಿಯವೇ ಆಗಿವೆ. ಇಂದು ಕರ್ನಾಟಕ ಸಂಗೀತದ ಮೂಲ ದ್ರವ್ಯವಾಗಿರುವ
ವಯೋಲಿನ್, ಮಧ್ಯ ಏಷಿಯಾದಿಂದ ಇಲ್ಲಿಗೆ ಆಗಮಿಸಿದೆ.
ಜನಪದ ಸಂಗೀತದ ಅದರಲ್ಲೂ ಭಾರತದ ದಲಿತರ ಸುಖ ದು:ಖಗಳ ಭಾಗವಾಗಿರುವ ದಪ್ಪು ಕೂಡಾ ಮೂಲತಹ ನಮ್ಮದಲ್ಲ.
ಅದೇ ರೀತಿ ಭಾರತೀಯ ಅಥವಾ ದೇಸೀ ಎಂದು ನಂಬಿಸಿ ಕೊಡುತ್ತಿರುವ ತಿಂಡಿ ತಿನಿಸುಗಳಲ್ಲಿ ಅನೇಕವು ಮೂಲತಹ
ಭಾರತೀಯವೇ ಅಲ್ಲ. ವರ್ತಮಾನ ಕಾಲದ ಸಸ್ಯಾಹಾರೀ ಭಾರತೀಯರ ಊಟದ ಪ್ರಧಾನ ಘಟಕಗಳಾದ ಬಟಾಟೆ, ಟೊಮೇಟೋ,
ಬೀನ್ಸ್, ಗೆಣಸು, ಮರಗೆಣಸು, ಗೇರು ಬೀಜ, ದೊಣ್ಣೆ ( ದೊಡ್ಡ) ಮೆಣಸಿನ ಕಾಯಿ, ಜೋಳ, ರಾಜ್ಮಾ, ಪಪ್ಪಾಯಿ
ಇತ್ಯಾದಿಗಳು ನಮ್ಮಲ್ಲಿ ಇರಲೇಇಲ್ಲ. ಹಾಗಾಗಿ ಇವ್ಯಾವೂ ನಮ್ಮ ದೇವರುಗಳಿಗೆ ಅರ್ಪಿತವಾಗುವುದಿಲ್ಲ.
ಮೆಣಸು ದಕ್ಷಿಣ ಅಮೆರಿಕಾದಿಂದ ಬಂತು, ಅನನಾಸು, ಪೇರಳೆ, ಚಿಕ್ಕು, ಚೆಕ್ಕೆ, ನೇರಳೆ, ಚಹಾ ಮೊದಲಾದುವುಗಳು
ಮುಖ್ಯವಾಗಿ ಚೈನಾದ ಮೂಲಕವಾಗಿಯೇ ಭಾರತಕ್ಕೆ ಬಂದುವು. ಹೂಕೋಸು ಯುರೋಪಿನಿಂದ ಬಂದರೆ, ನೀರುಳ್ಳಿ ಮಧ್ಯ
ಏಷಿಯಾದಿಂದ ಭಾರತಕ್ಕೆ ಬಂದಿದೆ. ಹೊರಗಿನಿಂದ ಆಮದಾದ ಮಸಾಲೆ ಪದಾರ್ಥಗಳಾದ, ಬೆಳ್ಳುಳ್ಳಿ, ಅರಸಿನ,
ಶುಂಟಿ, ಮೆಂತೆ ಮೊದಲಾದುವುಗಳು ಇಂದು ನಮ್ಮ ದೇಸೀ ವೈದ್ಯ ಪದ್ಧತಿಯೊಂದಿಗೆ ಕೂಡಾ ಸೇರಿಕೊಂಡಿವೆ. ಜೊತೆಗೆ ಹಲ ಕೆಲವು ತಿಂಡಿಗಳೂ ಹೊರಗಿನಿಂದ ಬಂದು ನಮ್ಮದಾಗಿವೆ.
ಪ್ರಸಿದ್ಧ ಆಹಾರ ವಿಜ್ಞಾನಿಯಾಗಿದ್ದ ಕರ್ನಾಟಕದ ಶ್ರೀ ಕೆ ಟಿ ಅಚಾರ್ಯ ಅವರ ಪ್ರಕಾರ ಇಂದು ದಕ್ಷಿಣ
ಭಾರತದ ಸಂಕೇತವಾಗಿರುವ ಇಡ್ಲಿಯು ಈಗಿನ ರೂಪದಲ್ಲಿ
ಇಂಡೋನೇಶಿಯಾದಿಂದ ಬಂದಿದೆ. ಅದಕ್ಕೂ ಮನ್ನ ಅದು, ರೈಮುಂಡೋ ಪಣಿಕ್ಕರ್ ಅವರ ಪ್ರಕಾರ ಚೈನಾದಲ್ಲಿ ಅನ್ನದ
ಉಂಡೆಯಾಗಿ ಪ್ರಚಲಿತದಲ್ಲಿತ್ತು. ಅದೇ ರೀತಿ ಜಿಲೇಬಿ,
ಬಿರ್ಯಾನಿ, ಪುಲಾವ್‍ಗಳು ಪರ್ಷಿಯಾದ ಕೊಡುಗೆ. ಎಲ್ಲಿಂದಲೋ ಬಂದು ಅವೀಗ ನಮ್ಮವಾದುವು. ಹೀಗೆ ಸ್ಥಳೀಯವಾಗುವ
ಪ್ರಕ್ರಿಯೆಯಲ್ಲಿ ನಡೆದ ಪವಾಡಗಳು ಅನಂತ. ಚೈನಾದ ಹುರಿದ ಅನ್ನ, ಭಾರತದ ಕಾಳು ಮೆಣಸು, ಊರಿನ ಕೋಳಿ
ಮಾಂಸ ಮತ್ತು ಪರ್ಶಿಯಾದ ಅಡುಗೆ ವಿಧಾನವು ಹೇಗೊ ಹೇಗೋ ಒಟ್ಟು ಸೇರಿ ಇಂದಿನ ಇಂಡಿಯಾದ ಬಹುತೇಕ ಅಡುಗೆ
ಮನೆಯನ್ನು ರೂಪಿಸಿದೆ.
ಇಂಥ
ಘಟನೆಗಳು ನಮಗೆ ಸಹನೆಯನ್ನು ಹೇಳಿಕೊಟ್ಟಿವೆ. ಈ ನೆಲದಲ್ಲಿ
ನಡೆದ ಬಹುದೊಡ್ಡ ವಾಗ್ವಾದಗಳು ಇಂದು ನಮ್ಮ ಪ್ರಜಾಪ್ರಭುತ್ವದ ತಳಹದಿಯಾಗಿ ಕೆಲಸ ನಿರ್ವಹಿಸುತ್ತಿದೆ.
ಕ್ಷಮೆಯನ್ನು ಧರ್ಮದ 10 ಲಕ್ಷಣಗಳಲ್ಲಿ ( ಕ್ಷಮಾ ದಮೋ ಆಸ್ತೇಯಂ..) ಒಂದು ಎಂದು ಪ್ರಾಚೀನ ಹಿಂದೂಗಳು
ನಂಬಿದ್ದರು. ಆದರೆ ಈಗ ಏನನ್ನು ಹೇಳಿದರೆ ನಾನು ಅಪಾಯದಿಂದ ಪಾರಾಗಬಹುದು ಎಂದು ಎರಡೆರೆಡು ಬಾರಿ ಯೋಚಿಸಿ
ಬರೆಯಬೇಕಾದ ಮತ್ತು ಮಾತಾಡಬೇಕಾದ ವಾತಾವರಣ ನಿರ್ಮಾಣವಾಗುತ್ತಿರುವಾಗ ನಮ್ಮ ಸಂಶೋಧನೆಗಳು ಪೇಲವವಾಗುವುದರಲ್ಲಿ
ಅನುಮಾನವಿಲ್ಲ.
ಈ
ಸಮಸ್ಯೆ ಇನ್ನೂ ಜಟಿಲವಾಗಿರುವುದು ಸಂಶೋಧನೆಗೆ ಜಾತಿ ಮತ್ತು ಸಮುದಾಯಗಳು ಗಟ್ಟಿಯಾಗಿ ಅಂಟಿಕೊಂಡಿರುವುದರಿಂದ.
ಪಂಪ, ಬಸವಣ್ಣ, ಕನಕದಾಸ, ಕುವೆಂಪು, ಸಂಗೊಳ್ಳಿ ರಾಯಣ್ಣ , ಕೆಂಪೇ ಗೌಡ ಮೊದಲಾದ ಇತಿಹಾಸ ಪ್ರಸಿದ್ಧರು,
ಎಲ್ಲ ಕನ್ನಡಿಗರ ಸೊತ್ತಾಗಿ ಬೆಳೆಯಬೇಕಾಗಿತ್ತು, ಆದರೆ ಅವರೆಲ್ಲ ಇಂದು ಒಂದೊಂದು ಸಮುದಾಯಗಳಿಗೆ ಸೀಮಿತವಾಗಿ
ಕಾಣಿಸಿಕೊಳ್ಳುತ್ತಿದ್ದಾರೆ, ಮತ್ತು ನಿರೀಕ್ಷೆಗೂ ಮೀರಿ ಎಲ್ಲ ಬಗೆಯ ವಿಮರ್ಶೆಗಳ ಗಡಿದಾಟಿ ಬೆಳೆದು
ನಿಲ್ಲುತ್ತಿದ್ದಾರೆ. ಕರ್ನಾಟಕದ ಅನೇಕ ಚಾರಿತ್ರಿಕ ಘಟನೆಗಳನ್ನು, ಇತಿಹಾಸ ನಿರ್ಮಾಪಕರನ್ನು ಮತ್ತು
ಸಾಹಿತಿಗಳನ್ನು ಜಾತಿಯ ಕಬಂಧ ಬಾಹುಗಳಿಂದ ಬಿಡಿಸದೇ ಹೋದರೆ ಯಾವ ಬಗೆಯ ಚರ್ಚೆಯೂ ಸಾಧ್ಯವಿಲ್ಲ, ಸಂಶೋಧನೆಯೂ
ಸಾಧ್ಯವಿಲ್ಲ. ಈ ಮಾತು ಅನೇಕ ಜನಪದ ಕಲೆಗಳಿಗೂ ಅನ್ವಯವಾಗುತ್ತದೆ. ಯಕ್ಷಗಾನದಂಥ ಜನಪ್ರಿಯ ಕಲೆಯಲ್ಲಿ
ವಿದೂಷಕನಿಗಿದ್ದ ಮುಕ್ತ ಅವಕಾಶ ಈಗ ಸಂಕುಚಿತವಾಗಿಬಿಟ್ಟಿದೆ. ಅರಸರನ್ನೂ, ದೇವಾನು ದೇವತೆಗಳನ್ನು,
ಋಷಿಗಳನ್ನೂ ರಂಗದ ಮೇಲೆ ಎಗ್ಗಿಲ್ಲದೆ ಹಾಸ್ಯ ಮಾಡುವ ಅವಕಾಶ ಸಂಸ್ಕೃತ ರಂಗಭೂಮಿಯಿಂದ ತೊಡಗಿ ಜನಪದ ರಂಗಭೂಮಿಯವರೆಗೆ ವಿದೂಷಕನಿಗೆ
ಮೊದಲಿನಿಂದಲೂ ಇತ್ತು. ಆದರೆ ಈಗ ಇಲ್ಲ ಅಥವಾ ಅಂಥ ಅವಕಾಶ ಕಡಿಮೆಯಾಗಿದೆ. ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ
ವಿರುದ್ಧವಾಗಿ ಕಲಾವಿದರ ಮುಕ್ತ ಅಭಿವ್ಯಕ್ತಿಗೆ ಈಗ
ಅಂಕುಶ ಬಿದ್ದಿದೆ. ಇಂಥಲ್ಲಿ ಸೃಜನಶೀಲತೆ, ಸಂಶೋಧನೆ ಮತ್ತು ವಿಮರ್ಶೆ ಆರೋಗ್ಯಕರವಾಗಿ ಬೆಳೆಯುವುದು
ಅಸಾಧ್ಯ. ಮಾರ್ಗ-4 ರಲ್ಲಿ ಕಲಬುರ್ಗಿಯವರು ಹೀಗೆ ಬರೆಯುತ್ತಾರೆ-
‘ಇತ್ತೀಚೆಗೆ ಸಮಾಜದಲ್ಲಿ ಸಹಜ ಬದಲಾವಣೆಯ ಜೊತೆಗೆ
ರಾಜಕೀಯ –ಧಾರ್ಮಿಕ ಧುರೀಣರಿಂದಾಗಿ ಕೃತಕ ಬದಲಾವಣೆಗಳು ಸಂಭವಿಸುತ್ತಲಿವೆ. ಇವರು ಸುಳ್ಳು ಇತಿಹಾಸದ
ಮೂಲಕ ವರ್ತಮಾನದಲ್ಲಿ ಹುಟ್ಟು ಹಾಕುತ್ತಲಿರುವ ಶೋಷಣೆಯನ್ನು ಹತ್ತಿಕ್ಕಲು ನಿಜ ಇತಿಹಾಸವನ್ನು ಶೋಧಿಸಿಕೊಡುವುದು
ಸಂಶೋಧಕನ ಕರ್ತವ್ಯವಾಗಿದೆ. ಅಂದರೆ ಸಂಶೋಧನೆ ಎನ್ನುವುದು ಕೇವಲ ಇತಿಹಾಸದ ಶೋಧವಲ್ಲ, ಇತಿಹಾಸವನ್ನು
ಮುಂದು ಮಾಡಿಕೊಂಡು ವರ್ತಮಾನವನ್ನು ದುರುಪಯೋಗ ಮಾಡಿಕೊಳ್ಳುವವರೊಂದಿಗೆ ನಡೆಸುವ ಹೋರಾಟವಾಗಿದೆ ( ಮಾರ್ಗ-4,
ಮಾರ್ಗಕ್ಕೆ ಮೊದಲು, 2004).
ಬಹುಶ:
ಕನ್ನಡ ಎಂದೂ ಇಂಥ ಪರಿಸ್ಥಿತಿಯನ್ನು ಇದಿರಿಸಿಲ್ಲ ಎಂಬ ಅಂಶವು ಸಂಶೋಧನೆಯ ಭವಿಷ್ಯದ ಬಗೆಗಣ ನಮ್ಮ ಆತಂಕವನ್ನು
ಇನ್ನೂ ಹೆಚ್ಚು ಮಾಡುತ್ತಿದೆ.
ಅರಿಕೇಸರಿಯ
ಆಸ್ಥಾನ ಕವಿಯಾಗಿದ್ದ ಪಂಪನಿಗೆ ‘ಓಲಗಿಸಿ ಬಾಳ್ವುದು ಕಷ್ಟಂ ಇಳಾಧಿನಾಥರಾ’ ಎಂದು ಹೇಳುವ ಧೈರ್ಯವಿತ್ತು. ‘ಮೂರ್ಧಾಭಿಷಿಕ್ತರಾದ
ಹಲವು ಅರಸರು ವಿಷಯ ಭೋಗಗಳಿಂದಾಗಿ ಮದೋನ್ಮತ್ತರಾಗಿ ತಮ್ಮಂ ಮರೆತು ಧರ್ಮವೆಂಬ ದೋಣಿಯಿಂದ ಜಾರಿ ಬೀಳುತ್ತಾರೆ’ ಎಂದು ಅವನು ಕೆಂಡ ಕಾರುತ್ತಾನೆ. ಊರೆಲ್ಲಾ ತುಂಬಿಕೊಂಡಿರುವ
ಬ್ರಹ್ಮಚಾರಿಗಳನ್ನು ಕಂಡ ಉರಿಲಿಂಗ ಪೆದ್ದಿಯು –‘ಹೊನ್ನ ಬಿಟ್ಟು, ಹೆಣ್ಣ ಬಿಟ್ಟು, ಮಣ್ಣ ಬಿಟ್ಟು,
ಬ್ರಹ್ಮಚಾರಿಗಳಾಗಬೇಕೆಂದು ಬಣ್ಣವಿಟ್ಟು ನುಡಿವ ಅಣ್ಣಗಳ ಪರಿಯ ನೋಡಿರೋ’ ಎಂದು ಕೆಣಕುತ್ತಾನೆ. ಮಧ್ಯಕಾಲೀನ ಕರ್ನಾಟಕದ ವೈಭವದ ಅರಸೊತ್ತಿಗೆಯನ್ನು ಕಣ್ಣಾರೆ
ಕಂಡ ಕುಮಾರವ್ಯಾಸನು ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ
ಬಿನ್ನಪವನಿನ್ನಾರು ಕೇಳುವರು, ಉರಿವುರಿವುತಿದೆ ದೇಶ, ನಾವಿನ್ನಿರಲು ಬಾರದು’ ಎಂದು ಗುಡುಗಿದ್ದಲ್ಲದೆ, ‘ಸಿರಿಯನುಳ್ಳವನವನೆ ಕುಲಜನು, ಸಿರಿಯನುಳ್ಳವನೇ ವಿದಗ್ಧನು,
ಸಿರಿಯನುಳ್ಳವನೇ ಮಹಾತ್ಮನು ಸಕಲಗುಣಯುತನು’ ಎಂದು ವ್ಯಂಗ್ಯವಾಡುತ್ತಾನೆ. ಹಂಪಿಯ ಅಪಾರ ಸಂಪತ್ತನ್ನು ತಾತ್ವಿಕವಾಗಿ
ನಿರಾಕರಿಸುವ ಪುರಂದರದಾಸರು
‘ ಲೊಳಲೊಟ್ಟೆ,
ಎಲ್ಲಾ ಲೊಳಲೊಟ್ಟೆ,
ಆನೆಕುದುರೆ ಎಲ್ಲ ಲೊಳಲೊಟ್ಟೆ
ಸೇನೆ ಭಂಡಾರವು ಲೊಳಲೊಟ್ಟೆ
ಮುತ್ತು ಮಾಣಿಕ್ಯ ಲೊಳಲೊಟ್ಟೆ
ಛತ್ರಚಾಮರ ಧ್ವಜ ಲೊಳಲೊಟ್ಟೆ’
ಎಂದು
ಹೇಳಿ ‘ಉತ್ತಮ ಪ್ರಭುತ್ವ ಲೊಳಲೊಟ್ಟೆ’
ಎಂದು
ಘೋಷಿಸುತ್ತಾನೆ. ಆ ಕಾಲದ ವರ್ತಕರು ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರಾಟಮಾಡುತ್ತಿದ್ದಾಗ, ಅದೇ
ಬೀದಿಯಲ್ಲಿ ಓಡಾಡಿದ ದಾಸರು – ‘ ಲಂಗೋಟಿ ಬಲು ಒಳ್ಳೇದಣ್ಣ ಒಬ್ಬರ ಹಂಗಿಲ್ಲದೆ ಮಡಿಗೆ ಒದಗುವುದಣ್ಣ,
‘ ಎಂದು ಹಾಡಿ ಪ್ರತಿಭಟಿಸಿದರು. ‘ಕೆಂಡಗಣ್ಣ ನೊಸಲೊಳಗಿಟ್ಟ ನಮ್ಮ ಶಿವ ಕೆಂಡವ ಸೋಂಕಲು ಅಳುವೆಯಲ್ಲೋ
ಖೋಡಿ’ ಎಂದು
ದೈವವನ್ನೇ ಹಾಸ್ಯ ಮಾಡಲು ಅವರು ಹಿಂಜರಿಯಲಿಲ್ಲ.
ಹೀಗೆ
ಎಲ್ಲ ಬಗೆಯ ಸ್ಥಾಪಿತ ಹಿತಾಸಕ್ತಿಗಳನ್ನು ವಿರೋಧಿಸಿಯೇ ಕನ್ನಡ ಪರಂಪರೆ ಬೆಳೆದಿದೆ. ಈ ಮಾತಿಗೆ ಕನ್ನಡದಲ್ಲಿ ಬರೆದ ಸೂಫಿ ಸಂತರು ಕೂಡಾ ಹೊರತಲ್ಲ.
ಸಾಲಗುಂದ ಗುರು ಖಾದರಿ ಪೀರನು ‘ಮಸೀದಿ ಎಂಬುದು ಹಾಳಾದ ಜಾಗ, ಅದರ ಗೊಡವಿ ನಿನಗ್ಯಾಕಂತೆ ? ಎಂದು ಸಡ್ಡು
ಹೊಡೆಯುತ್ತಾನೆ. ಹೀಗೆ ನಮ್ಮ ಸಾಹಿತ್ಯ ಪರಂಪರೆಗೆ ಅದರದ್ದೇ ಒಂದು ಗುಣವಿದೆ, ಅದು ಕನ್ನಡವನ್ನು ಕರ್ನಾಟಕವನ್ನು ಇದುವರೆಗೆ ಬದುಕಿಸಿದೆ. ಆದರೆ ಈಗ ಅದರ ಹಾದಿ
ಬದಲುವಂತಿದೆಯಾದ್ದರಿಂದ ನಾವೆಲ್ಲ ಅರೆಕ್ಷಣ ನಿಂತು, ಯೋಚಿಸಿ, ಮುಂದುವರೆಯಬೇಕಾಗಿದೆ.
ಹಾಗೆ
ನೋಡಿದರೆ, ಆಧುನಿಕತೆಯ ಪರಿಣಾಮವಾಗಿ ನಮ್ಮ ಸಮಾಜ ತೀವ್ರಗತಿಯಲ್ಲಿ ಬದಲಾಗುತ್ತಾ ಪ್ರಗತಿಗಾಮಿಯಾಗಬಹುದೆಂದು ಸ್ವಾತಂತ್ರ್ಯಾನಂತರದ ಕಾಲಘಟ್ಟದಲ್ಲಿ ಹುಟ್ಟಿದ್ದ ನಾವೆಲ್ಲ
ನಂಬಿದ್ದೆವು. ಆದರೆ ಅದು ಹಾಗಾಗದೆ, ಮತ್ತೆ ನಮ್ಮ ಸಮಾಜದ ಪ್ರತಿಗಾಮೀ ಬೇರುಗಳು ಗಟ್ಟಿಗೊಳ್ಳುತ್ತಿವೆ.
ಜಾತಿಯ ಪ್ರಜ್ಞೆ ಹೊಸ ರೂಪ ತಾಳುವುದರ ಜೊತೆಗೆ ಅದರೊಂದಿಗೆ ಕೋಮುವಾದವೂ ಸೇರಿಕೊಂಡು, ಸೃಜಶೀಲವಾಗಿದ್ದ
ಜನ ಸಂಸ್ಕೃತಿಗಳು ಇಂದು ಪತನಮುಖಿಯಾಗುತ್ತಲಿವೆ. ಈ ಬೆಳವಣಿಗೆಯ ತಕ್ಷಣದ ಪರಿಣಾಮವೆಂದರೆ ಸಮುದಾಯ,
ಜಾತಿ ಮತ್ತು ಕೋಮುಗಳು ತಮ್ಮ ಆಂತರಿಕ ವಿಮರ್ಶನ ಪ್ರಜ್ಞೆಯನ್ನು ಕಳೆದುಕೊಂಡು, ಸ್ವಯಂ ವಿನಾಶದ ಕಡೆಗೆ
ಚಲಿಸುವುದು. ನಿಖರ ಮತ್ತು ಪ್ರಖರ ವಿಮರ್ಶೆಗೆ ತೆರೆದುಕೊಂಡಿದ್ದ ಸಮುದಾಯಗಳು ಇಂದು ಒಂದು ಸಣ್ಣ ಠೀಕೆಗೆ
ಬೆಚ್ಚಿ ಬೀಳುತ್ತಿವೆ ಎಂದರೆ ಅವು ಆಂತರಿಕವಾಗಿ ಕುಸಿದಿವೆ ಎಂದೇ ಅರ್ಥ. ಹಾಗಾಗಿಯೇ ಅವು ತಮ್ಮ ಕೀಳರಿಮೆಯನ್ನು
ಕಳೆದುಕೊಳ್ಳಲು ಇತರರ ಮೇಲೆ ಆಕ್ರಮಣ ಮಾಡಲಾರಂಭಿಸಿವೆ. ಮೊದಲು ದಲಿತರನ್ನು ಸಜೀವವಾಗಿ ಸುಡಲಾಗುತ್ತಿತ್ತು,
ಆದರೆ ಈಗ ದಲಿತರು ಆತ್ಮಹತ್ಯೆ ಮಾಡಿಕೊಳ್ಳುವ ಹಾಗೆ ಮಾಡಲಾಗುತ್ತಿದೆ. ಕೋಮುವಾದಕ್ಕೆ ಕೋಮುವಾದ ಉತ್ತರವಾದರೆ,
ಜಾತಿಗೆ ಜಾತಿ ಉತ್ತರವಾದರೆ, ದ್ವೇಷಕ್ಕೆ ದ್ವೇಷ ಉತ್ತರವಾದರೆ ಅವೆಲ್ಲವೂ ದ್ವಿಗುಣಗೊಳ್ಳುತ್ತವೆ ಎಂಬ ಸರಳ ಸತ್ಯವನ್ನು ನಾವೀಗ ಮನಗಾಣಲಾರದಾಗಿದ್ದೇವೆ.
ಈ
ಬಗೆಯ ಬೆಳವಣಿಗೆಗಳು ಜನರು ಸುದೀರ್ಘ ಕಾಲಾವಧಿಯಲ್ಲಿ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬೆಳೆಸಿಕೊಂಡು
ಬಂದ ಸಂಸ್ಕೃತಿಯನ್ನು ಅಧೋಮುಖಿಯಾಗಿಸುತ್ತವೆ, ಇಲ್ಲವೇ ಅನ್ಯ ಸಂಸ್ಕೃತಿಯ ಅಧೀನಕ್ಕೆ ಒಳಗಾಗಿ ತಮ್ಮ
ಸೃಜನಶೀಲತೆಯನ್ನು ಕಳೆದುಕೊಳ್ಳಲು ಒತ್ತಡ ಹೇರುತ್ತವೆ. ನಮ್ಮ ಸಂಶೋಧನೆಗಳು ಈ ಬಗೆಯ ಬೆಳವಣಿಗೆಗಳಿಗೆ
ಮುಖಾಮುಖಿಯಾಗದೇ ಹೋದರೆ ಅವು ಅನುಪಯುಕ್ತವಾಗಿಬಿಡುತ್ತವೆ. ಸಾಮಾಜಿಕ ಆಯಾಮವಿಲ್ಲದ ಸಂಶೋಧನೆಗಳು ಭಾರತದಲ್ಲಿ
ವಿಶೇಷವಾದ್ದೇನನ್ನೂ ಸಾಧಿಸಲಾರವು.
ಇಂಥ
ಬೆಳವಣಿಗೆಗಳ ಬಗೆಗೆ ಗಂಭೀರವಾದ ಚರ್ಚೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮುಕ್ತವಾಗಿ ನಡೆಯಲು ಸಾಧ್ಯ್ಯವಾದರೆ
ಅದರಿಂದ ಸಮಾಜಕ್ಕೆ ತುಂಬಾ ಪ್ರಯೋಜನವುಂಟು. ಭಾಷೆ, ಗಡಿ ಮತ್ತು ಸಂಸ್ಕೃತಿಯ ವಿಷಯಗಳು ಬಹುಬೇಗ ಜನರನ್ನು ತಪ್ಪುದಾರಿಗೆಳೆದದ್ದನ್ನು ವಿಶ್ವದ
ಇತಿಹಾಸ ರುಜುವಾತು ಪಡಿಸಿದೆ. ಜಗತ್ತಿನ ಎಲ್ಲೆಡೆಯೂ ಈ ಮೂರು ಶಬ್ದಗಳನ್ನು ಉಪಯೋಗಿಸಿಯೇ ಫ್ಯಾಸಿಸ್ಟ್
ಶಕ್ತಿಗಳು ವಿಜೃಂಭಿಸಿವೆ. ಕಾರಣ ನಮ್ಮ ವಿಶ್ವವಿದ್ಯಾಲಯಗಳು
ಮತ್ತು ಸಂಶೋಧನೆಗಳು ಈ ಬೆಳವಣೆಗೆಗಳ ಕುರಿತು ವಿಶೇಷ ಎಚ್ಚರ ವಹಿಸಬೇಕೆಂದು ನಾನು ಭಾವಿಸುತ್ತೇನೆ.
ಒಂದೆಡೆ ಸಂಶೋಧನೆಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಇನ್ನೊಂದೆಡೆ ತಿಳಿವಳಿಕೆಗಳು ಅಂತಾರಾಷ್ಟ್ರೀಯಗೊಳ್ಳುತ್ತಿರುವ
ಆಧುನಿಕ ಪ್ರಕ್ರಿಯೆ, ಮತ್ತೊಂದೆಡೆ ಸರಕಾರಗಳು ಸಂಶೋಧನೆಗಳನ್ನು ನಿಯಂತ್ರಿಸಬಯಸುವ ಹುನ್ನಾರಗಳು- ಇವುಗಳ
ನಡುವೆ ನಾವು ಬದುಕುತ್ತಾ, ನಮ್ಮ ಧ್ವನಿಯು ಇತರರಿಗೆ ಕೇಳುವಂತೆ ನಾವು ನಮ್ಮ ಸಂಶೋಧನೆಗಳನ್ನು ಮುಂದುವರಿಸಬೇಕಾಗಿದೆ. ನಮಗೆ ನಾವೇ ಮಾತಾಡಿಕೊಳ್ಳುವ ಕಾಲ ಮುಗಿದುಹೋಗಿದೆ. ಜಗತ್ತಿನೊಡನೆ
ಗಂಭೀರವಾಗಿ ಸಂವಾದಿಸಬೇಕಾದ ಕಾಲ ಸನ್ನಿಹಿತವಾಗಿದೆ.
ಮುನ್ನೋಟ:
ಮೇಲಿನ ಅರಿವಿನ ಹಿನ್ನೆಲೆಯಲ್ಲಿ ಕನ್ನಡದಲ್ಲಿ ಇದೀಗ ಕೆಲಸ ಮಾಡುತ್ತಿರುವ ಹೊಸ ತಲೆಮಾರಿನ ಸಂಶೋಧಕರು ಈ ಕೆಳಗಿನ ಮೂರು ಅಂಶಗಳ ಬಗೆಗೆ ಗಮನ ನೀಡುವುದರಿಂದ ಕನ್ನಡ ಸಂಶೋಧನೆಗೆ ತುಂಬ ಲಾಭವಿದೆಯೆಂದು ನಾನು ಭಾವಿಸುತ್ತೇನೆ:
1. ಬಹು ಪಠ್ಯಗಳ ಅಧ್ಯಯನ
2. ಪಠ್ಯಗಳ ವಿಸ್ತರಣೆಗಳ ಕಡೆ ಗಮನ
3. ಬಹು ಆಕರಗಳ ಕಡೆಗೆ ಕುತೂಹಲ ಮತ್ತು
4. ಪರ್ಯಾಯ ಸಂಸ್ಕೃತಿಗಳ ಹುಡುಕಾಟ
ಒಂದೆರಡು ಉದಾಹರಣೆಗಳ ಮೂಲಕ ಇದನ್ನು ಇನ್ನಷ್ಟು ಸ್ಪಷ್ಟ ಪಡಿಸಬಯಸುತ್ತೇನೆ.
ಬಹು ಪಠ್ಯಗಳ ಅಧ್ಯಯನ:
ಭಾರತ ದೇಶದ ಇತರ ಅನೇಕ ಭಾಷೆಗಳಿಗಿಂದ ಕನ್ನಡ ತುಂಬಾ ಭಿನ್ನವಾದ ಚರಿತ್ರೆಯನ್ನು ಹೊಂದಿದೆ. ಕ್ರಿ. ಶ. 840ರಲ್ಲಿ ರಚಿತವಾಗಿದೆ ಎನ್ನಲಾದ 'ವಡ್ಡಾರಾಧನೆ' ಎಂಬ ಗದ್ಯ ಕೃತಿಯಲ್ಲಿನ ಭದ್ರಬಾಹು ಭಟಾರರ ಕತೆಯ ಪ್ರಕಾರ ಸಂಪ್ರತಿ ಚಂದ್ರಗುಪ್ತನ ಕಾಲದಲ್ಲಿ ಉತ್ತರ ಭಾರತದಲ್ಲಿ 12 ವರ್ಷಗಳ ಕಾಲ ಭೀಕರ ಬರಗಾಲ ಬರುತ್ತದೆ. ‘ಹನ್ನೆರಡು ವರ್ಷಗಳವರೆಗೆ ಈ ನಾಡೊಳು ಅನಾವೃಷ್ಟಿಯಾಗಿ ಮಹಾರೌದ್ರ ಪ್ರಸವವಾಗಿ, ಮಧ್ಯದೇಶವೆಲ್ಲವೂ ಪಾಳುಬಿದ್ದು, ನಾಡೊಳಿರುವ ಋಷಿಗಳಿಗೆ ವೃತ ಭಂಗವಾಗುವುದರಿಂದಾಗಿ ದಕ್ಷಿಣಾ ಪಥಕ್ಕೆ ಹೋಗೋಣ’ ಎಂದು ಹೇಳುವ ಭದ್ರಬಾಹು ಭಟಾರರು ಮುಂದೆ ಸಂಪ್ರತಿ ಚಂದ್ರಗುಪ್ತರ ಜೊತೆ ದಕ್ಷಿಣಾ ಪಥಕ್ಕೆ ತೆರಳುತ್ತಾರೆ. ದಕ್ಷಿಣಾ ಪಥದಲ್ಲಿ ಅತ್ಯಂತ ಪ್ರಶಸ್ತವಾದ 'ಕಳ್ಬಪ್ಪು ನಾಡು ' (ಈಗಣ ಶ್ರವಣಬೆಳಗೊಳ) ವಿಗೆ ಬಂದು ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಈ ಘಟನೆ ನಡೆದಿರಬಹುದಾದ ಕಾಲ ಸುಮಾರು ಕ್ರಿಸ್ತ ಶಕ ಪೂರ್ವ 3 ನೇ ಶತಮಾನ. ಆ ಕಾಲದ ದಕ್ಷಿಣ ಭಾರತದ ಚರಿತ್ರೆಯನ್ನು ಅವಲೋಕಿಸಿದರೆ, ಕರ್ನಾಟಕದ ಈ ಭೂಭಾಗಕ್ಕಿಂತ ತಮಿಳುನಾಡಿನ ಚೋಳಮಂಡಲದ ತಂಜಾವೂರು ಪ್ರದೇಶ ಹೆಚ್ಚು ಫಲವತ್ತಾಗಿತ್ತು, ಬದುಕುವುದಕ್ಕೆ ಅನುಕೂಲವಾಗಿದ್ದ ಸ್ಥಳವಾಗಿತ್ತು.
ಆದರೆ ಸಂಪ್ರತಿ ಚಂದ್ರಗುಪ್ತ ಮತ್ತು ಭದ್ರಬಾಹು ಭಟಾರರು ತಮ್ಮ ದಕ್ಷಿಣಾ ಪಥದ ವಲಸೆಗೆ ಆಯ್ದುಕೊಂಡದ್ದು ತಮಿಳುನಾಡಿನ ಆ ಫಲವತ್ತಾದ ಭೂ ಭಾಗವನ್ನಲ್ಲ, ಬದಲು ಕರ್ನಾಟಕದ ಕನ್ನಡ ಭಾಷಾ ಪ್ರದೇಶವನ್ನು. ಜೈನರು ಮುಂದೆ ಕರ್ನಾಟಕವನ್ನು "ಜಿನ ಧರ್ಮದ ಆಡುಂಬೊಲಂ" ಮಾಡಿಕೊಂಡರು. ಕನ್ನಡಕ್ಕೆ ಪಂಪ, ಪೊನ್ನ, ರನ್ನ, ನಾಗಚಂದ್ರ, ಜನ್ನ ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟ ಜೈನರು, ಕನ್ನಡ ಸಂವೇದನೆಯನ್ನು ಅತ್ಯಂತ ನವಿರಾಗಿ ರೂಪಿಸಿದರು.
ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳೆಲ್ಲ ವಾಸಿಸಿ ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ಮೇಲು ನೋಟಕ್ಕೆ ಕಾಣೆಯಾದಂತಿರುವ ಬೌದ್ಧ ಧರ್ಮವು ಕರ್ನಾಟಕದ ಅನೇಕ ಜನಪದ ಆಚರಣೆಗಳಲ್ಲಿ ಸೂಕ್ಷ್ಮವಾಗಿ ಇಂದಿಗೂ ಉಳಿದು ಬಂದಿದೆ. ಇಂದು ನಾವು ಕನ್ನಡದ್ದೇ ಎಂದು ಹೇಳುವ ವಚನ ಚಳುವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದ
ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸಲಿಲ್ಲ. ಕ್ರಿಶ್ತ ಶಕ ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಮುಂದೆ ಬಿಜಾಪುರದಿಂದ ನಾಡನ್ನು ಆಳಿದರು. ಕರಾವಳಿಯಲ್ಲಿ ಆಲಿ ಭೂತ, ಬೊಬ್ಬರ್ಯ ಭೂತಗಳು ಸೃಸ್ಟಿಯಾದುವು.
ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ಸಾವಿರಾರು ಮೈಲುಗಳ ದೂರದಲ್ಲಿ ಬಾಯಿಗೆ ನೀರಿಲ್ಲದೆ ಸತ್ತ ಅಸಗರನನ್ನು ಅಭಿಮನ್ಯುಗೆ ಹೋಲಿಸಿ ಕನ್ನಡ ಕಣ್ಣೀರಿಟ್ಟಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗ ಳಲ್ಲಿ ಯಾವ ತೊಂದರೆಗಳಿಲ್ಲದೇ ಕೆಲಸಮಾಡಿದರು. 19-20ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ಭಾವಗೀತೆಯೇ ಮೊದಲಾದ ಅನೇಕ ಪ್ರಕಾರಗಳನ್ನು ಪ್ರತೀತಗೊಳಿಸಿಕೊಳ್ಳುತ್ತಾ ಬೆಳೆದದ್ದು ನಮಗೆಲ್ಲ ತಿಳಿದೇ ಇದೆ.
ಚಾರಿತ್ರಿಕವಾಗಿ ಕನ್ನಡದ ಮಣ್ಣು ಬರಮಾಡಿಕೊಂಡ ಜನ ಸಮುದಾಯಗಳ ನಿಖರವಾದ ಅಧ್ಯಯನ ಇದುವರೆಗೆ ನಡೆದಿಲ್ಲ. ಇಥಿಯೋಪಿಯಾದಿಂದ ಕ್ರಿಸ್ತ ಶಕದಾರಂಭದಲ್ಲಿ ಗುಜರಾತಿನ ಮೂಲಕ ಭಾರತಕ್ಕೆ ಆಗಮಿಸಿದ 'ಹಬಶಿ' ಗುಂಪಿನ ಯೋಧರು, ದೆಹಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿ, 1459ರ ಹೊತ್ತಿಗೆ ದೆಹಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡು, ಕೊನೆಗೆ ಕರ್ನಾಟಕದ ಬಹುಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಅಂತಿಮವಾಗಿ ಕರ್ನಾಟಕದಲ್ಲಿ ನೆಲೆನಿಂತರು. ಮುಂದೆ ಲಂಬಾಣಿಗಳು, ಸಿದ್ಧಿಯರು, ಮತ್ತಿತರ ನೂರಾರು ಸಮುದಾಯಗಳು ಕರ್ನಾಟಕವನ್ನು ತಮ್ಮ ನೆಲೆವೀಡಾಗಿ ಆರಿಸಿಕೊಂಡು ಕನ್ನಡ ಸಂಸ್ಕೃತಿಯ ಭಾಗವಾಗಿ ಬೆಳೆದರು. ಯಾರನ್ನೂ ತಿರಸ್ಕರಿಸದ ಅಥವಾ ಹೊರಹಾಕದ ಕರ್ನಾಟಕವು ಎಲ್ಲ ಧರ್ಮಗಳನ್ನೂ, ಸಮುದಾಯಗಳನ್ನು ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆಯಿತು. ಇಂದಿಗೂ ಉತ್ತರ ಭಾರತದ ಲಕ್ಷಾಂತರ ಜನರು ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಅಸಹನೆ ಕನ್ನಡದ ಗುಣವಲ್ಲ.
ಹೀಗೆ ರೂಪುಗೊಂಡ ಮತ್ತು ರೂಪುಗೊಳ್ಳುತ್ತಿರುವ ಕನ್ನಡವನ್ನು ನಾವು ಬಹಳ ಎಚ್ಚರದಿಂದ ಮತ್ತು ಸೂಕ್ಷ್ಮವಾಗಿ ಅಧ್ಯಯನ ಮಾಡಬೇಕು.
ಪಠ್ಯಗಳ
ಭಿನ್ನ ರೂಪಗಳು:
ಭಾರತದಲ್ಲಿ ಬೇಕಾದಷ್ಟು ನಮೂನೆಯ ಪಠ್ಯಗಳಿದ್ದುವು. ಕೆಲವು ಲಿಖಿತ ಪಠ್ಯಗಳಾಗಿದ್ದರೆ ಹಲವು ಅಲಿಖಿತ ಪಠ್ಯಗಳು ಅಥವಾ ಮೌಖಿಕ ಪಠ್ಯಗಳು. ವಸಾಹತು ಶಕ್ತಿಗಳು ಭಾರತಕ್ಕೆ ಕಾಲಿರಿಸಿದಾಗ ಅವರಿಗೆ ಈ ವೈವಿಧ್ಯಮಯ ಪಠ್ಯಗಳು ದೊಡ್ಡ ಸಮಸ್ಯೆಗಳಾಗಿ ಕಾಡಿದುವು. ಸಾವಿರಾರು ಭಾಷೆಗಳು, ನೂರಾರು ಸಮುದಾಯಗಳು, ವಿಭಿನ್ನ ಆಚರಣೆಗಳು, ವಿಸ್ತಾರವಾದ ಭೌಗೋಳಿಕತೆ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಮತ್ತು ವಿವರಿಸಿಕೊಳ್ಳಬಹುದಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು ಅವರು ಮನಗಂಡಿದ್ದರು.
ಭಾರತವನ್ನು ಯಾವುದಾದರೂ ಒಂದು ವ್ಯಾಖ್ಯಾನಿಸಿಕೊಳ್ಳಬಹುದಾದ ಪರಿಭಾಷೆಯಲ್ಲಿ ವಿವರಿಸಲು ಅವರು ಹೆಣಗುತ್ತಿದ್ದರು. ಇಂಥ ಒಂದು ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರು ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೆಳೆಸಿದರು. ಈ ಶಾಸ್ತ್ರದ ಮುಖ್ಯ ಕೆಲಸವೆಂದರೆ ಒಂದು ಪಠ್ಯದ ಹಲವು ಪಾಠಾಂತರಗಳನ್ನು ಸಂಗ್ರಹಿಸಿ ಅದರಿಂದ ಒಂದು ಪಠ್ಯವನ್ನು ಪ್ರತೀತಗೊಳಿಸಿ, ಅದನ್ನು ಅಧಿಕೃತಗೊಳಿಸುವುದು. ವಸಾಹತು ಕಾಲದ ಗ್ರಂಥ ಸಂಪಾದನಾ ಶಾಸ್ತ್ರದ ಈ ಮುಖ್ಯ ಕೆಲಸವನ್ನು 20ನೇ ಶತಮಾನದ ಅನೇಕ ಗ್ರಂಥ ಸಂಪಾದನಾಕಾರರು ಅನುಸರಿಸಿ ನಮಗೆ ಇಂದಿಗೆ ಅಗತ್ಯವಾಗಿರುವ ಒಂದು ‘ಅಧಿಕೃತ ಪಠ್ಯವನ್ನು’ ಸಿದ್ಧಪಡಿಸಿಕೊಟ್ಟರು. ಆ ಕ್ರಮವನ್ನು ನಾವು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದೇವೆ.
ಆದರೆ
ಈಗ ಸಂಶೋಧಕರು ಬೇರೆಯದೇ ಆದ ಪ್ರಶ್ನೆಯೊಂದನ್ನು ಕೇಳಿಕೊಳ್ಳುವುದಾದರೆ, ಅದು- ‘ಭಾರತದಲ್ಲಿ ಒಂದು ಪಠ್ಯವು
ಯಾಕೆ ಅನೇಕ ಪಠ್ಯಗಳಾಗಿ ಒಡೆಯುತ್ತದೆ? ಎಂದಾಗಿರುತ್ತದೆ. ಈ ಪ್ರಶ್ನೆಯು ವಸಾಹತು ಕಾಲದ ಅಧ್ಯಯನ ಕ್ರಮಗಳಿಗೆ ಹಾಕುವ ಪ್ರಶ್ನೆಯೂ ಹೌದು, ನಮ್ಮನ್ನು ನಾವೇ ನಿರ್ವಸಾಹತೀಕರಣಗೊಳಿಸಿಕೊಳ್ಳುವ
ಪ್ರಕ್ರಿಯೆಯೂ ಹೌದು. ಹೀಗಾಗಿ
ಇವತ್ತಿನ ಸಂಶೋಧನೆಗಳು ಒಂದು ಪಠ್ಯವು ಅನೇಕ ಪಠ್ಯಗಳಾಗಿ ಒಡೆಯುವ ಕ್ರಮಗಳತ್ತ ತುರ್ತಾಗಿ ಗಮನ ಹರಿಸಬೇಕಾಗಿದೆ.
ಈ ಹಂತದಲ್ಲಿ ಸಂಶೋಧಕರು ಕೆಳಗಿನ ನಾಲ್ಕು ಅಂಶಗಳನ್ನು ಗಂಭೀರವಾಗಿ ಅಭ್ಯಸಿಸಬೇಕು-
1. ಸಮುದಾಯಗಳ ಸೃಜನಶೀಲ ಪ್ರಕ್ರಿಯೆಗಳು
2. ಪ್ರಾದೇಶಿಕ ಪ್ರಭಾವಗಳು
3. ಕಾಲದ ಅಗತ್ಯಗಳು ಮತ್ತು
4. ನಿರೂಪಕನ ಸೃಜನಶೀಲ ಪ್ರಕ್ರಿಯೆ.
ಯಾವ ಪಠ್ಯವೂ ಸ್ಥಿರವಾಗಿರುವುದಿಲ್ಲ. ಕಾಲ ಬದಲಾಗುತ್ತಿದ್ದಂತೆ ಅವುಗಳನ್ನು ಓದುವ ಕ್ರಮಗಳೂ ಬದಲಾಗುತ್ತವೆ, ಬರೆಯುವ ಕ್ರಮಗಳೂ ಬದಲಾಗುತ್ತವೆ. 10ನೇ ಶತಮಾನದ ವೀರಯುಗದ ಅಗತ್ಯಗಳಿಗೆ ಅನುಗುಣವಾಗಿ ಪಂಪನು ಕೃಷ್ಣನಿಲ್ಲದ ಕಾವ್ಯವನ್ನು ಬರೆದ. ಅವನಿಗೆ ಛಲ, ನನ್ನಿ, ಔನ್ನತ್ಯ ಮೊದಲಾದ ಗುಣಗಳಿರುವ ಮಹಾಭಾರತ ಬೇಕಾಯಿತು. ಆದರೆ ಈ ಭಾರತವು ಭಕ್ತಿಯುಗದ ಅಗತ್ಯಗಳಿಗೆ ಸಾಲಾದಾಯಿತು. ಕಾರಣ ಕೃಷ್ಣನೇ ಪ್ರಧಾನವಾದ ಮಹಾಭಾರತವನ್ನು ಕುಮಾರವ್ಯಾಸ ಬರೆದ.
ನಡುಗನ್ನಡ
ಕಾಲದಲ್ಲಿ ಕುಮಾರರಾಮನ ಬಗೆಗೆ ಮೂರು ಲಿಖಿತ ಮಹಾಕಾವ್ಯಗಳು ಸುಮಾರು ನೂರು ವರ್ಷಗಳ ಅಂತರದಲ್ಲಿ ಸೃಷ್ಟಿಯಾದುವು. 1512ರಲ್ಲಿ ನಂಜುಂಡ ಕವಿಯು ‘ಕುಮಾರರಾಮ ಚರಿತೆ’ಯನ್ನು
ಬರೆದರೆ, 1650ರಲ್ಲಿ ಪಾಂಚಾಳಗಂಗನು ‘ಚೆನ್ನರಾಮನ ಸಾಂಗತ್ಯ’ವನ್ನು ಮತ್ತು 1750ರಲ್ಲಿ ಮಹಲಿಂಗ ಸ್ವಾಮಿಯು ‘ಬಾಲರಾಮನ ಸಾಂಗತ್ಯ’ವನ್ನು ಬರೆದರು. ಈ ಕಾವ್ಯಗಳ ಸುಮಾರು 80ಕ್ಕೂ ಹೆಚ್ಚು ಹಸ್ತಪ್ರತಿಗಳು ಲಭಿಸುತ್ತಿರುವುದು ಅವುಗಳ ಜನಪ್ರಿಯತೆಯನ್ನು ಸಂಕೇತಿಸುತ್ತದೆ. ನಂಜುಂಡನ ಕಾವ್ಯವು ವಿದ್ವಜ್ಜನ ಪ್ರಿಯವಾಗಿದೆ. ಆತ ಕುಮಾರರಾಮನನ್ನು ರಾಮನೊಡನೆ ಮತ್ತು
ಅರ್ಜುನನೊಡನೆ ಸಮೀಕರಿಸಿ, ಅವನನ್ನು ಭಾರತೀಯ ಸಂಸ್ಕೃತ ಪರಂಪರೆಗೆ ಜೋಡಿಸುತ್ತಾನೆ. ಪಾಂಚಾಳಗಂಗನು ಕುಮಾರರಾಮನನ್ನು ಜಾನಪದ ಲೋಕಕ್ಕೆ ಅನುಸಂಧಾನಗೊಳಿಸಿದ್ದಾನೆ. ಮಾತಂಗಿ ಮತ್ತು ಕಳ್ಳರಾಮನ ಕುರಿತಾಗಿ ಅವನು ನೀಡುವ ವಿವರಗಳೇ ಇದಕ್ಕೆ ಸಾಕ್ಷಿ. ಮಹಲಿಂಗಸ್ವಾಮಿಯ ಕಾವ್ಯವೂ ಭಕ್ತಿಯುಗದಲ್ಲಿ ಹುಟ್ಟಿಕೊಂಡ ಹರಿಕಥೆ ಪರಂಪರೆಗೆ ಹತ್ತಿರವಾಗಿದ್ದು ಬಹುಜನರನ್ನು ತಲುಪುವ ಇರಾದೆಯನ್ನು ಪ್ರಕಟಪಡಿಸುತ್ತದೆ. ಆತನ ಕಾವ್ಯದುದ್ದಕ್ಕೂ ಕಂಡುಬರುವ ಉಪಕಥೆಗಳು ವಾಸ್ತವವಾಗಿ ಹರಿಕಥಾ ಪರಂಪರೆಯ ಹೊಸ ಆವೃತ್ತಿಗಳಾಗಿವೆ. ಜೊತೆಗೆ ಮಹಲಿಂಗಸ್ವಾಮಿಯು ಕುಮಾರರಾಮನನ್ನು ಮಾತಂಗಿ ಪರಂಪರೆಗೆ ಜೋಡಿಸಿ, ಹೊಸತಿರುವು ನೀಡಿದ್ದಾನೆ. ಈ ಎಲ್ಲಾ ರಚನೆಗಳೂ ಆಯಾ ಕಾಲದ ಅಗತ್ಯಗಳನ್ನು ಪೂರೈಸಿವೆ. ಈಗ ನಮ್ಮ ಸಂಶೋಧನೆಗಳು ಕಾಲದ ಅಗತ್ಯಗಳೇನಿದ್ದುವು ಎಂಬುದರ ಕಡೆಗೆ ಬೆಳಕು ಚೆಲ್ಲಬೇಕಾಗಿದೆ.
ಇದು ಇಂದಿನ ದಿನಗಳಲ್ಲಿ ಬಹಳ ಮುಖ್ಯವಾದ ಕೆಲಸ ಏಕೆಂದರೆ, , ಈ ಕಾಲದ ಕೆಲವು ಬೆಳವಣಿಗೆಗಳು ಭಿನ್ನ ಪಾಠಗಳ ಅಧ್ಯಯನಕ್ಕೆ ಪೂರಕವಾಗಿಯೇನೂ ಇಲ್ಲ. ನಮ್ಮ ಇಂದಿನ
ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಯು ಜಗತ್ತಿನ ವ್ಯಾಪಕತೆಯನ್ನು ಕಿರಿದುಗೊಳಿಸಿ, ಎಲ್ಲವನ್ನೂ ಏಕಾಕೃತಿ ಮಾದರಿಯಲ್ಲಿಯೇ ಗ್ರಹಿಸುವ ಮತ್ತು ವಿವರಿಸುವ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸಿದೆ. ಕಂಪ್ಯೂಟರ್ಗಳ ಮುಖ್ಯ ಕೆಲಸವೇ ಅದು. ಅದು ಎಲ್ಲವನ್ನೂ ವ್ಯವಸ್ಥಿತಗೊಳಿಸುತ್ತದೆ. ವರ್ಗೀಕರಿಸುತ್ತದೆ. ಕಚ್ಚಾ ವಸ್ತುಗಳನ್ನು ಸಿದ್ಧವಸ್ತುವನ್ನಾಗಿ ಮಾರ್ಪಡಿಸಿ ನಮ್ಮ ಮುಂದಿಡುತ್ತದೆ. ಇಂಥ ಸಮಕಾಲೀನ ಬೆಳವಣಿಗೆಗಳನ್ನು ನಿರಾಕರಿಸಿ, ಏಕಾಕೃತಿ ಮಾದರಿಗಳಿಗೆ ವಿರುದ್ಧವಾಗಿ ಬಹುರೂಪಿಗಳನ್ನು ನಿಲ್ಲಿಸುವ ಕೆಲಸವನ್ನು ಕನ್ನಡ ಸಂಶೋಧನೆ ಮಾಡಬೇಕಾಗಿದೆ. ನಾನು ಈ ಲೇಖನದ ಆರಂಭದಲ್ಲಿ ಹೇಳಿದ 20ನೆ ಶತಮಾನದ ಆರಂಭಿಕ ಹಂತದಲ್ಲಿ ಕನ್ನಡ ಗ್ರಂಥಗಳನ್ನು ಸಂಪಾದಿಸಿಕೊಟ್ಟ ಹಿರಿಯರು ಮುಖ್ಯ ಪಠ್ಯ ಅಂತ ತಾವು ಗ್ರಹಿಸಿದ ಪಾಠಗಳ ಬುಡದಲ್ಲಿ ಅಡಿ ಟಿಪ್ಪಣಿಯಾಗಿಯಾದರೂ ಭಿನ್ನ ಪಠ್ಯಗಳನ್ನು ನೀಡುತ್ತಿದ್ದರು. ಈಗ ಅದೂ ನಿಂತಿದೆ. ಬಹುರೂಪಿಗಳಾಗಿದ್ದ ಪಠ್ಯಗಳನ್ನು ಏಕರೂಪಗೊಳಿಸುವ ಆಧುನಿಕ ರಾಜಕಾರಣ ಮತ್ತು ಬೌಧ್ದಿಕತೆಯನ್ನು ಇಂಥ ಕೆಲಸಗಳ ಮೂಲಕ ಪರೀಕ್ಷಿಸಲು ನಮಗೆ ಸಾಧ್ಯವಿದೆ.
ವಚನ ಪಠ್ಯಗಳು:
ಇನ್ನೊಂದು ಉದಾಹರಣೆಯನ್ನು ಇಲ್ಲಿಯೇ ಗಮನಿಸಿಬಹುದು.ಕನ್ನಡಕ್ಕೆ ಬಹಳ ಅನನ್ಯವಾದ ವಚನಗಳನ್ನು ನಾವು 'ಸಾಮೂಹಿಕ ಸೃಷ್ಟಿ' ಎಂದೇನೋ ಕರೆದಿದ್ದೇವೆ. ಆದರೆ ವಚನಗಳನ್ನು ಸಂಪಾದನೆ ಮಾಡುವಾಗ 'ಇದು ಬಸವಣ್ಣನ ವಚನ, ಅದು ಅಕ್ಕನ ವಚನ' ಎಂಬಿತ್ಯಾದಿಯಾಗಿ ಗುರುತಿಸಿ, ಬೇರ್ಪಡಿಸಿ, ಸಂಕಲಿಸಿ ಪ್ರಕಟಿಸಿದ್ದೇವೆ; ಚರ್ಚಿಸಿದ್ದೇವೆ. ಅಂದರೆ ತಮ್ಮ ಪಠ್ಯಗಳ ಮೇಲೆ ಹಕ್ಕು ಸ್ಥಾಪಿಸಬಯಸದ ವಚನಕಾರರನ್ನು ಹಕ್ಕು ಸ್ಥಾಪಿಸಿಕೊಳ್ಳಲು ನಾವು ಒತ್ತಾಯಿಸಿದ್ದೇವೆ. ಬಸವಣ್ಣನವರ ಪ್ರಖ್ಯಾತ ವಚನವೊಂದು ಇಂತಿದೆ-
"ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡುವೆ ಬಡವನಯ್ಯ
ಎನ್ನ ಕಾಲೇ ಕಂಬ ದೇಹವೆ ದೇಗುಲ
ಶಿರ ಹೊನ್ನ ಕಳಸವಯ್ಯ"
ಪ್ರಭು ದೇವರ ಈ ಕೆಳಗಿನ ವಚನವನ್ನು ಗಮನಿಸಿ :
"ಕಾಲೇ ಕಂಭಗಳಾದುವೆನ್ನ
ದೇಹವೇ ದೇಗುಳಾದುವೆನ್ನ
ದೇಹವೇ ದೇಗುಲವಾಯಿತ್ತಯ್ಯ
ಎನ್ನ ನಾಲಿಗೆಯೆ ಗಂಟೆ
ಶಿರ ಸುವರ್ಣದ ಕಲಶ-ಇದೇನಯ್ಯ
ಮೇಲಿನ ಎರಡೂ ವಚನಗಳಲ್ಲಿ ಅನೇಕ ಸಾಮ್ಯಗಳಿವೆ. ಈಗ ನಾವು ಇವನ್ನು 'ಇದು ಮೂಲತಃ ಯಾರದಿರಬಹುದು" ಎಂದು ಕೇಳಿಕೊಂಡು ಮುಂದುವರೆಯುವುದಕ್ಕಿಂತ, ಬೇರೆ ಬೇರೆಯವರ ವಚನಗಳನ್ನು ಜನರು ಹೇಗೆ ಸಂಮಿಶ್ರ ಮಾಡಿಕೊಂಡು ತಮಗೆ ಬೇಕಾದ
ಪಠ್ಯಗಳನ್ನು ಸೃಷ್ಟಿ ಮಾಡಿಕೊಂಡರು ಎಂಬ ಅರಿವಿನಲ್ಲಿ ಮುಂದುವರೆದರೆ ನಮಗೆ ನಮ್ಮ ಸಾಹಿತ್ಯವನ್ನು ಮತ್ತು ಸಮಾಜವನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಸರ್ವಜ್ಞನ ಜನಪ್ರಿಯ ವಚನಗಳಲ್ಲಿ ಒಂದಾದ "ಅನ್ನವನು ಇಕ್ಕುವುದು, ನನ್ನಿಯನು ನುಡಿಯುವುದು" ಎಂಬ ಸಾಲು ಪ್ರಭುದೇವರ 'ಅನ್ನವನಿಕ್ಕಿ ನನ್ನಿಯ ನುಡಿದು' ಎಂಬ ಸಾಲನ್ನು ನೆನಪಿಗೆ ತರುತ್ತದೆ.
ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾಗ ಶ್ರೀ ಲಕ್ಷ್ಮಣದಾಸ ಎಂಬ ಹಾಡುಗಾರರೊಬ್ಬರು ಪರಿಚಯವಾಗಿದ್ದರು. ಹಂಪಿಯ ಬೀದಿಗಳಲ್ಲಿ ಅವರು ಹಾಡು ಹೇಳುತ್ತಾ ತಿರುಗಾಡುತ್ತಿದ್ದರು.
ಬಿಡುವಿದ್ದಾಗಲೆಲ್ಲ ಅವರು ನನ್ನ ಮನೆಗೂ
ಬರುತ್ತಿದ್ದರು, ಹಾಡು ಹೇಳುತ್ತಿದ್ದರು. ಅವರ ಹಾಡು ಕೇಳಿದಾಗಲೆಲ್ಲ ನಾನು ಬೆಚ್ಚಿ ಬೀಳುತ್ತಿದ್ದೆ. ಏಕೆಂದರೆ ಅವರ ಎಷ್ಟೋ ಹಾಡುಗಳು ಶಿಶುನಾಳ ಶರೀಫರ ತತ್ವಪದಗಳಿಂದ ಆರಂಭವಾಗಿ, ಪುರಂದರದಾಸರ ಕೀರ್ತನೆಯ ಸಾಲಿನೊಂದಿಗೆ ಮುಂದುವರೆದು 'ಕೂಡಲ ಸಂಗಮದೇವಾ' ಎಂದು ಕೊನೆಗೊಳ್ಳುತ್ತಿತ್ತು. ಸುಮಾರು ಏಳು ನೂರು ವರ್ಷಗಳ ಅವಧಿಯಲ್ಲಿ ರಚಿತವಾದ ಪಠ್ಯಗಳಿಂದ ತಮಗೆ ಬೇಕಾದ ಸಾಲುಗಳನ್ನು ಆರಿಸಿಕೊಂಡು 20ನೇ ಶತಮಾನಕ್ಕೆ ಬೇಕಾದ ಪಠ್ಯವೊಂದನ್ನು ಅವರು ಸೃಜಿಸುತ್ತಿದ್ದರು. ನನ್ನ ವೈಯಕ್ತಿಕ ಸಂಗ್ರಹದಲ್ಲಿರುವ ಲಕ್ಷ್ಮಣ ದಾಸರ ಹಾಡೊಂದರ ಕೊನೆಯ ಸಾಲುಗಳು ಇಂತಿವೆ-
"ಹೀನ ಕೃತ್ಯಗಳ ಮಾಡುತ ನದಿಯಲಿ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಕೂಡಲ ಸಂಗನ ನೆನೆಯದೆ
ಮೌನದ ಮಾಡಿದರೇನು ಫಲ?"
ಪುರಂದರದಾಸ 'ಬೇವು ಬೆಲ್ಲದೊಡಲೇನು ಫಲ" ಕೀರ್ತನೆಯು ಬಸವಣ್ಣನ ಅಂಕಿತನಾಮದೊಂದಿಗೆ ಕೊನೆಯಾದಾಗ ನಾನು ಅವಕ್ಕಾಗಿದ್ದೆ.
ಉತ್ತರ ಕರ್ನಾಟಕದಾದ್ಯಂತ ಅತ್ಯಂತ ವೈಭವದಿಂದ ಜರುಗುವ ಹಂಪಿ ಜಾತ್ರೆ, ಮೈಲಾರನ ಜಾತ್ರೆ, ಬದಾಮಿಯ ಬನಶಂಕರಿ ಜಾತ್ರೆ, ಕುಮಾರ ರಾಮನ ಜಾತ್ರೆ, ತಿಂಥಿಣಿ ಜಾತ್ರೆ, ಹುಲಿಗೆಮ್ಮನ ಜಾತ್ರೆ, ಕೊಡೆಕಲ್ಲು ಜಾತ್ರೆ, ಮೊದಲಾದೆಡೆಗಳಲ್ಲಿ ಲಕ್ಷ್ಮಣದಾಸರ ಹಾಗೆ ಹಾಡುವ ನೂರಾರು ಕಲಾವಿದರನ್ನು ನಾವು ಇಂದಿಗೂ ಕಾಣಬಹುದು. ಇವರುಗಳು ಹಾಡುವ ವಚನಗಳನ್ನು, ಕೀರ್ತನೆಗಳನ್ನು ಮತ್ತು ತತ್ವಪದಗಳನ್ನು ಇದೀಗ ನಾವು ಸಂಗ್ರಹಿಸಬೇಕು. ಅವು 21ನೇ ಶತಮಾನದ ಆರಂಭದ ಕಾಲದ ಪಠ್ಯಗಳಾಗಿ ಕನ್ನಡ ಸಂಸ್ಕೃತಿಯ ಬಗೆಗಣ ನಮ್ಮ ತಿಳುವಳಿಕೆಯನ್ನು ಅಗಾಧವಾಗಿ ವಿಸ್ತರಿಸಬಲ್ಲುವು. ನಮ್ಮ ಸಾಹಿತ್ಯ ಪರಂಪರೆಯಲ್ಲಿ ಪಠ್ಯದ ಹಕ್ಕನ್ನು ಯಾರೋ ಕಾದಿರಿಸಿಲ್ಲ. ಹಾಗಾಗಿ ಪಠ್ಯಗಳೆಲ್ಲ ಒಂದರೊಡನೊಂದು ಸೇರಿಕೊಂಡು, ಒಬ್ಬರ ಸೃಷ್ಟಿ ಎಲ್ಲರ ಸೃಷ್ಟಿಯಾಗಿ ಮಾರ್ಪಟ್ಟು, ಕಾಲಾತೀತವಾದ ಪಠ್ಯಗಳು ನಿರ್ಮಾಣಗೊಂಡಿವೆ. ಇದರ ಕಡೆಗೆ ನಮ್ಮ ಸಂಶೋಧಕರ ಗಮನಹರಿಯಬೇಕಾದ್ದು ಇಂದಿನ ಅಗತ್ಯಗಳಲ್ಲೊಂದಾಗಿದೆ.
ಭಿನ್ನ ಆಕರಗಳು:
ವಸಾಹತು ಕಾಲದಲ್ಲಿ ರೂಪುಗೊಂಡ ನಮ್ಮ ಅಧ್ಯಯನ ಕ್ರಮಗಳು ನಾವು ಬದುಕುತ್ತಿರುವ ಸಮಾಜವನ್ನು ಒಡೆದು, ಬಹಳ ಸೂಕ್ಷ್ಮವಾಗಿ ನೋಡಲು ಹೇಳಿ ಕೊಟ್ಟಿದ್ದರಿಂದ ಸಾಕಷ್ಟು ಲಾಭವೂ ಆಗಿದೆ, ನಷ್ಟವೂ ಅಗಿದೆ. ಮುಖ್ಯವಾಗಿ ಅವು ನಮ್ಮ ಸಂಶೋಧನೆಗಳನ್ನು ತುಂಬಾ ಸೀಮಿತವಾದ ಚೌಕಟ್ಟಿನೊಳಗೆ ನಡೆಸಲು ಒತ್ತಾಯ ಮಾಡಿವೆ. ಈ ಸಂಶೋಧನಾ ಕ್ರಮಗಳ ಚೌಕಟ್ಟುಗಳನ್ನು ಒಡೆದು ಬಹುಶಿಸ್ತೀಯವಾದ ಒಂದು ವೈಧಾನಿಕತೆಯನ್ನು ನಾವಿಂದು ರೂಪಿಸಿಕೊಳ್ಳಬೇಕಾದ್ದು ಬಹಳ ಅಗತ್ಯ. ಇದರಿಂದ ನಮ್ಮ
ಸಂಶೋಧನೆಗೆ ಹೊಸ ಕಸುವು ದೊರಕಲು ಸಾಧ್ಯ ಎಂದು ನಾನು ಭಾವಿಸುತ್ತೇನೆ.
ಉದಾಹರಣೆಗೆ ಕುಮಾರರಾಮನ ಬಗೆಗೆ ನಡೆದ ಅಧ್ಯಯನಗಳನ್ನೇ ಗಮನಿಸೋಣ. ಡಾ. ವರದರಾಜ ರಾವ್ ಅವರು ‘ಕುಮಾರರಾಮನ ಸಾಂಗತ್ಯಗಳು’( 1966) ಎಂಬ ಬಹಳ ಒಳ್ಳೆಯ ಮಹಾಪ್ರಬಂಧ ಬರೆದ ಮೇಲೆ ನಮ್ಮ ಸಂಶೋಧನೆಗಳು ಅಲ್ಲಿಗೇ ನಿಂತು ಹೋದುವು. ಸಂಶೋಧನಾ
ವಿದ್ಯಾರ್ಥಿಗಳನ್ನು ಕೇಳಿದರೆ- ‘ ಒಂದು ಪುಸ್ತಕ ಬಂದುಬಿಟ್ಟಿದೆಯಲ್ಲಾ?’ ಎಂದು ನಿಟ್ಟುಸಿರು ಬಿಡುತ್ತಾರೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಸಂಶೋಧನೆಗಳನ್ನು ಇಪ್ಪತ್ತೊಂದನೇ ಶತಮಾನದ ಅಗತ್ಯಗಳಿಗನುಗುಣವಾಗಿ ಹೇಗೆ ಮತ್ತೆ ಮುಂದುವರಿಸಬಹುದು ಎಂಬ ಕುರಿತು ನಮಗೆ ತಿಳುವಳಿಕೆಯಿಲ್ಲದಿರುವುದೇ ಈ
ನಿಟ್ಟುಸಿರಿಗೆ ಕಾರಣ. ಈ
ಹಿನ್ನೆಲೆಯಲ್ಲಿ ಕುಮಾರರಾಮನ ಕುರಿತಾಗಿ ಇವತ್ತು ನಮಗೆ ಲಭ್ಯವಿರುವ
ಭಿನ್ನ ಭಿನ್ನ ಮಾಹಿತಿಗಳನ್ನು ಕೆಳಗೆ ಪಟ್ಟಿ ಮಾಡಿ ಕೊಡಲಾಗಿದೆ-
1. ಲಿಖಿತ
ಮಹಾಕಾವ್ಯಗಳು: ನಾಲ್ಕು ಲಿಖಿತ
ಮಹಾಕಾವ್ಯಗಳು ಸುಮಾರು ನೂರು ವರ್ಷಗಳ ಅಂತರದಲ್ಲಿ ಸೃಷ್ಟಿಯಾಗಿವೆ.
2. ಜನಪದ
ಕಾವ್ಯಗಳು: 12 ಜನಪದ ಕಾವ್ಯಗಳು ಪ್ರಕಟವಾಗಿವೆ.
3. ಆರಾಧನೆ:
ಕರ್ನಾಟಕದ ವಿವಿಧೆಡೆಗಳಲ್ಲಿ ಕುಮಾರರಾಮನನ್ನು ದೈವವಾಗಿ ಪೂಜಿಸಲಾಗುತ್ತಿದೆ.
4. ಜಾತ್ರೆ:
ಕುಮ್ಮಟ ದುರ್ಗದಲ್ಲಿ ಕುಮಾರರಾಮನ ಜಾತ್ರೆ ನಡೆಯುತ್ತದೆ.
5. ಕೈಫಿಯತ್ತುಗಳು:
ಡಾ. ಎಂ.ಎಂ. ಕಲಬುರ್ಗಿಯವರು ಸಂಪಾದಿಸಿ ಪ್ರಕಟಿಸಿದ ಮೆಕೆಂಜಿ ಕೈಫಿಯತ್ತುಗಳಲ್ಲಿ ಕನಿಷ್ಠ ಆರು ಕೈಫಿಯತ್ತುಗಳು ಕುಮಾರರಾಮನಿಗೆ ಸಂಬಂಧಿಸಿವೆ.
6. ಐತಿಹ್ಯಗಳು:
ಹೊಸಪೇಟೆ, ಸಂಡೂರು, ಕಂಪ್ಲಿ, ಮರಿಯಮ್ಮನಹಳ್ಳಿ, ಹರಪನಹಳ್ಳಿ, ಸಾಗರ, ಭಟ್ಕಳ ಮೊದಲಾದ ಪ್ರದೇಶಗಳಲ್ಲಿ ಕುಮಾರರಾಮನ ಕುರಿತು ವಿವಿಧ ಬಗೆಯ ಕತೆಗಳು ಐತಿಹ್ಯಗಳು ಲಭಿಸುತ್ತವೆ.
7. ಯಕ್ಷಗಾನ: ದಕ್ಷಿಣಕನ್ನಡ, ಉತ್ತರಕನ್ನಡ, ಶಿವಮೊಗ್ಗ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ‘ಕಡುಗಲಿ ಕುಮಾರರಾಮ’ ಎಂಬ ಹೆಸರಿನ ಯಕ್ಷಗಾನ ಪ್ರಸಂಗವೊಂದು ಅಪಾರ ಜನಪ್ರಿಯತೆಯನ್ನು ಪಡೆದಿದೆ.
8. ತೊಗಲು
ಬೊಂಬೆಯಾಟ: ಮೋರನಾಳ ಮತ್ತು ಹಡಗಲಿ ಪ್ರದೇಶದಲ್ಲಿ ಕಿಳ್ಳೆಕ್ಕಾತರು ಕುಮಾರರಾಮನ ಕತೆಯನ್ನು ತೊಗಲು ಬೊಂಬೆಯಾಟದಲ್ಲಿ ತೋರಿಸುತ್ತಿದ್ದರು.
9. ನಾಟಕ:
‘ಕುಮಾರರಾಮ’ ನಾಟಕ ಅಪಾರ ಜನಪ್ರಿಯತೆ ಪಡೆದಿದೆ.
10. ಕಾದಂಬರಿಗಳು:
20ನೇ ಶತಮಾನದುದ್ದಕ್ಕೂ ವಿವಿಧ ಬರೆಹಗಾರರು ಕುಮಾರರಾಮನ ಕತೆಯನ್ನುಕಾದಂಬರಿ ರೂಪದಲ್ಲಿ
ಬರೆದಿದ್ದಾರೆ.
11. ಗದ್ಯದಲ್ಲಿ ಪುನರ್ ಸೃಷ್ಟಿ: ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಕುಮಾರರಾಮನನ್ನು ದೇಶಪ್ರೇಮಿ ಎಂಬಂತೆ ಅನೇಕ ಲೇಖನಗಳಲ್ಲಿ ಬರೆದಿದ್ದಾರೆ.
12. ಚಲನ
ಚಿತ್ರ : ಕುಮಾರರಾಮನನ್ನು ಆಧರಿಸಿದ ಚಲನಚಿತ್ರಗಳಿವೆ
13. ಹೆಸರುಗಳು:
ಕುಮ್ಮಟ ಪರಿಸರದಲ್ಲಿ ಜನರು ಮಕ್ಕಳಿಗೆ ಕುಮಾರರಾಮನೆಂದು ಈಗಲೂ ಹೆಸರಿಡುತ್ತಾರೆ
14. ತೆಲುಗು
ಭಾಷೆಯಲ್ಲಿ: ಆಂಧ್ರ ಕರ್ನಾಟಕ ಗಡಿಪ್ರದೇಶದಲ್ಲಿ ಕುಮಾರರಾಮನ ಕಥನಗಳು ತೆಲುಗು
ಭಾಷೆಯಲ್ಲಿ ಲಭಿಸುತ್ತವೆ.
ಯಾಕೆ ಹೀಗೆ ನಮ್ಮ ಜನರಿಗೆ ಕುಮಾರರಾಮ ಇಷ್ಟವಾದ ? ಎಂಬ ಗಂಭೀರವಾದ ಪ್ರಶ್ನೆಯನ್ನು ಸಂಶೋಧಕರು ಕೇಳಿಕೊಳ್ಳಬೇಕು.
ಕ್ರಿ.ಶ. ಸುಮಾರು 1323ರ ಸರಿಸುಮಾರಿನಲ್ಲಿ ಬದುಕಿದ್ದ ಕುಮಾರರಾಮನು ಮುಂದಿನ ಸುಮಾರು ಏಳುನೂರು ವರ್ಷಗಳಲ್ಲಿ ಬಗೆಬಗೆಯಾಗಿ ಪುನರ್ಸೃಷ್ಟಿಗೊಂಡು, ಕನ್ನಡ ಸಂಸ್ಕೃತಿಯೊಡನೆ ಒಂದು ಬಗೆಯ ನಿರಂತರ ಅನುಸಂಧಾನವನ್ನು ಏರ್ಪಡಿಸಿಕೊಂಡು ಬಂದಿದ್ದಾನೆ. ಕುಮಾರರಾಮನೆಂಬ ಚರಿತ್ರೆಯ ಒಂದು ಪಠ್ಯವು ಹೀಗೆ ‘ಬಹುಪಠ್ಯ’ವಾಗಿ ಒಡೆದು, ಸಮಕಾಲೀನಗೊಳ್ಳುತ್ತಾ ಬರುತ್ತಿರುವುದು ತುಂಬ ಕುತೂಹಲಕರ ವಿಷಯವಾಗಿದೆ. ನಮ್ಮ ಹೊಸತಲೆಮಾರಿನ ಸಂಶೋಧಕರ ಗಮನ ಆಕಡೆ ಹರಿಯಬೇಕಾಗಿದೆ. ಶಿಷ್ಟ-ಜನಪದ
ಎಂದು ನಾವೇ ಹಾಕಿಕೊಂಡ ಕೃತಕ ಗಡಿಗಳನ್ನು ಒಡೆದು ನಮ್ಮ ಸಂಶೋಧನೆ ಮುಂದೆ ಸಾಗಬೇಕಾಗಿದೆ.
ಭಿನ್ನ
ಸಂಸ್ಕೃತಿಗಳ ಹುಡುಕಾಟ.
ವಸಾಹತು ಕಾಲದ ಲೇಖಕರು ತಮ್ಮ ಬರವಣಿಗೆಗಳಿಗೆ ಲಿಖಿತ ಸಾಮಗ್ರಿಗಳನ್ನೇ ಆಧಾರವಾಗಿರಿಸಿಕೊಂಡಿದ್ದರು. ಈ ಲಿಖಿತ ಸಾಮಗ್ರಿಗಳು ಚಾರಿತ್ರಿಕ ಕಾರಣಗಳಿಂದಾಗಿ ವೈದಿಕ ಪರಂಪರೆಯನ್ನೇ ಕೇಂದ್ರವಾಗಿರಿಸಿಕೊಂಡು ಬೆಳೆದ್ದರಿಂದ ಸಹಜವಾಗಿ ಸಂಸ್ಕೃತಿ ವಿವರಣೆಯಲ್ಲಿ ವೈದಿಕ ಚಿಂತನೆಗೆ ಪ್ರಾಶಸ್ತ್ಯ ದೊರಕಿತು. 19ನೇ ಶತಮಾನದ ವಿದೇಶೀ ವಿದ್ವಾಂಸರಿಗೆ ಕರ್ನಾಟಕದಲ್ಲಿ ಅನೇಕ ಸಂಶೋಧನಾ ಸಹಾಯಕರಿದ್ದರು. ಈ ಸಹಾಯಕರುಗಳು ಬಹುಮಟ್ಟಿಗೆ ಬ್ರಾಹ್ಮಣರಾಗಿದ್ದುದು ಚಾರಿತ್ರಿಕವಾಗಿ ಅನಿವಾರ್ಯವಾಗಿತ್ತು. 1783ರಿಂದ 1820ರವರೆಗಣ ಅವಧಿಯಲ್ಲಿ ಕೆಲಸ ಮಾಡಿದ ಕರ್ನಲ್ ಮೆಕೆಂಜಿಯ ಸಹಾಯಕರಾಗಿದ್ದ ಪುಲಿಗಡ್ಡ ಮಲ್ಲಯ್ಯ, ವೆಂಕಟ ರಾವ್, ನಾರಾಯಣ ರಾವ್, ವಿಠ್ಠಲ ರಾವ್, ಬಾಬೂ ರಾವ್, ಆನಂದ ರಾವ್, ಕಾವಲಿ ವೆಂಕಟಬೋರಯ್ಯ, ವೆಂಕಟ ಲಕ್ಷ್ಮಯ್ಯ, ವೆಂಕಟರಾಮಸ್ವಾಮಿ- ಎಲ್ಲರೂ ಬ್ರಾಹ್ಮಣರಾಗಿದ್ದರು.
ಈ ವಿದೇಶೀ ಮತ್ತು ಬ್ರಾಹ್ಮಣ ಸಂಯೋಜನೆಯು ಪಠ್ಯಗಳನ್ನು ಓದಿದ, ಪರಿಷ್ಕರಿಸಿದ, ಸಂಯೋಜಿಸಿದ ಕ್ರಮಗಳನ್ನು ನಾವೀಗ ಮರುಪರಿಶೀಲನಗೆ ಒಳಪಡಿಸಲು ಸಾಧ್ಯವಿದೆ.
ಈ ಮಿತಿಗಳನ್ನು ಮೀರಿ
ಕನ್ನಡ
ಸಂಸ್ಕೃತಿಯ ಬಹುಮುಖಗಳನ್ನು ಗಂಭೀರವಾಗಿ ಅಧ್ಯಯನ ಮಾಡುವ ಮೂಲಕ ನಾವಿಂದು ಕನ್ನಡ ನಾಡಿನ ಕುರಿತಾದ ನಮ್ಮ ತಿಳಿವಳಿಕೆಗಳನ್ನು ವಿಸ್ತರಿಸಿಕೊಳ್ಳಬೇಕಾಗಿದೆ. ಕರ್ನಾಟಕದಾದ್ಯಂತ ನೂರಾರು ರೂಪಗಳಲ್ಲಿ ಲಭಿಸುವ ಮಹಾಕಾವ್ಯಗಳು, ಕತೆಗಳು, ಗಾದೆಗಳು, ಒಗಟುಗಳು, ನಂಬಿಕೆಗಳು, ಹಾಡುಗಳು, ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು, ಪ್ರದರ್ಶಕ ಕಲೆಗಳು – ಇತ್ಯಾದಿಗಳನ್ನು ಸರಿಯಾಗಿ ಇದುವರೆಗೆ ಲೆಕ್ಕ ಹಾಕಿದವರಿಲ್ಲ. ಅವುಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದವರಿಲ್ಲ. ಮಲೆಯ ಮಾದೇಶ್ವರ, ಜುಂಜಪ್ಪ, ಬೀರಪ್ಪ, ಸಿರಿ, ಕೋಟಿ-ಚೆನ್ನಯ, ಮೈಲಾಲಿಂಗ, ಮೊದಲಾದುವು ನಮ್ಮ ಪ್ರಸಿದ್ಧ ಜನಪದ ಕಾವ್ಯಗಳು. ಇವುಗಳನ್ನು ಒಬ್ಬ ಲೇಖಕ ಬರೆಯುವುದಿಲ್ಲ, ಬದಲು ಇಡೀ ಸಮುದಾಯವೇ ಮತ್ತೆ ಮತ್ತೆ ಇವುಗಳನ್ನು ಬರೆಯುತ್ತಿರುತ್ತದೆ. ಮೌಖಿಕವಾಗಿ ಇವು ಪ್ರಸರಣ ಹೊಂದುತ್ತಿರುತ್ತವೆ.
ಹಾಗಾಗಿ ಇವುಗಳ ಒಡೆತನ ಇಡೀ ಸಮುದಾಯಕ್ಕೆ ಸೇರುತ್ತದೆ ಮತ್ತು ಇದರ ಪಠ್ಯಗಳು ಸ್ಥಿರವಾಗಿರದೆ ತುಂಬ ಚಲನಶೀಲವಾಗಿರುತ್ತವೆ. ಈ ಬಗೆಯ ಮೌಖಿಕ ನಿರೂಪಣೆಗಳು ಶಿಷ್ಟ ನಿರೂಪಣೆಗಳಿಗಿಂತ ಹೇಗೆ ತುಂಬಾ ಭಿನ್ನವಾಗಿರುತ್ತವೆ ಎಂಬುದನ್ನು ತೋರಿಸಲು ಇಂದಿನ ಸಂಶೋಧನೆಗಳು ಕೆಲಸ ಮಾಡಬೇಕು. ಉದಾಹರಣೆಗೆ
ಕೆಲವೇ ಕೆಲವು ಅಪವಾದಗಳನ್ನು ಬಿಟ್ಟರೆ ಜನಪದ ನಿರೂಪಣೆಗಳಲ್ಲಿರುವ ನಾಯಕರು ತಮ್ಮ ಮಧ್ಯವಯಸ್ಸಿನಲ್ಲಿ ಮಹತ್ ಸಾಧನೆ ಮಾಡಿ ಸತ್ತು ಹೋಗುತ್ತಾರೆ. ತುಳುನಾಡಿನ ಜನಪ್ರಿಯ ದೈವ 'ಕಲ್ಕುಡ'ನಿಗೆ ಸಂಬಂಧಿಸಿದ ಪುರಾಣವೊಂದರಲ್ಲಿ ಆತ ಗೊಮ್ಮಟನನ್ನು ಪ್ರತಿಷ್ಠಾಪಿಸಿ, ಅರಸನ ಅವಕೃಪೆಗೆ ತುತ್ತಾಗಿ ಸಾಯುತ್ತಾನೆ. ಕದರಿ ದೇವಸ್ಥಾನದ ಛಾವಣಿಯ ಮೇಲಿದ್ದ ಹಣ್ಣನ್ನು ತಿನ್ನಲು ಹೋದ ದಲಿತ ಕೊರಗ ತನಿಯನು, ಅದೇ ಕಾರಣಕ್ಕೆ ಮಾಯವಾಗುತ್ತಾನೆ. ಸ್ವಾಭಿಮಾನಿಗಳಾದ ಕೋಟಿ-ಚೆನ್ನಯರು ರಣರಂಗದಲ್ಲಿ ಹೋರಾಡಿ ಸಾಯುತ್ತಾರೆ. ಗಂಡಸರ ಅನ್ಯಾಯವನ್ನು ನಿರಂತರವಾಗಿ ಪ್ರತಿಭಟಿಸಿದ ಸಿರಿಯು ಸತ್ತು ದೈವವಾಗುತ್ತಾಳೆ. ಲಿಖಿತ ಪಠ್ಯಗಳಲ್ಲಿ ನಾಯಕರು ಸಾಯಲಾರರು, ಸಾಯಬಾರದು. ವಸ್ತುವಿನ ನಿರ್ವಹಣೆಯ ದೃಷ್ಟಿಯಿಂದಲೂ
ಮೌಖಿಕ ನಿರೂಪಣೆಗಳಲ್ಲಿನ ನಾಯಕನು ತೋರುವ ವೀರತ್ವದಲ್ಲಿ ಒಂದು ಬಗೆಯ ಕ್ರಿಯಾತ್ಮಕ ಗುಣ-ಧರ್ಮ ನೆಗೆದು ತೋರುತ್ತದೆ. ಇಲ್ಲಿಯ ವೀರರು, ವೀರರಾಗಲು ಕಾರಣ ಅವರು ದೈವದ ಅವತಾರವಾಗಿರುವುದು ಅಲ್ಲ. ಅವರಿಗೆ ಯಾವುದೇ ಪೂರ್ವ ಜನ್ಮದ ಪುಣ್ಯ ವಿಶೇಷಗಳಿಲ್ಲ. ಅವರ ತಾಯಂದಿರು ಗರ್ಭ ಧರಿಸುವಾಗ ಯಾವುದೇ ಶುಭ ಶಕುನಗಳು ಸಂಭವಿಸುವುದಿಲ್ಲ. ಅಥವಾ ಅವರು ಜನಿಸುವಾಗ ದೇವತೆಗಳು ಪುಷ್ಟವೃಷ್ಟಿ ಮಾಡುವುದಿಲ್ಲ. ಅವರ ಸಾಮಾಜಿಕ ಸ್ಥಾನಮಾನಗಳು (ಉದಾ: ಬ್ರಾಹ್ಮಣನಾಗಿರುವುದು, ಅರಸು ಕುಮಾರನಾಗಿರುವುದು) ಅವರ ವೀರತ್ವವನ್ನು ನಿರ್ಧರಿಸುವುದಿಲ್ಲ. ಜನಪದ ನಿರೂಪಣೆಗಳ
ನಾಯಕನು ಎಲ್ಲರಂತೆ ಜನಿಸುತ್ತಾನೆ. ಆದರೆ ಬೆಳೆಯುತ್ತಾ ಬೆಳೆಯುತ್ತಾ ಒತ್ತಡಕ್ಕೆ ಒಳಗಾಗುತ್ತಾನೆ. ತನ್ನ ಪ್ರಾಮಾಣಿಕತೆ, ಬುದ್ಧಿಮತ್ತೆ,
ಮತ್ತು ಸಾಹಸಗಳಿಂದ ಜನಾನುರಾಗಿಯಾದ ನಾಯಕನು ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ದಿಟ್ಟವಾಗಿ
ಉತ್ತರಿಸುತ್ತಾನೆ,
ಮತ್ತು ಅದೇ ಕಾರಣಕ್ಕೆ ಸಾಯುತ್ತಾನೆ. ಜೀವನದ ಅತ್ಯಂತ ಕ್ಲಿಷ್ಟಕರ ಸಂದರ್ಭಗಳಲ್ಲಿ ಈ ಬಗೆಯ
ನಾಯಕರು ತೋರುವ ಕ್ರಿಯಾತ್ಮಕಕತೆಯೇ ಅವರನ್ನು ಜನರ ಕಣ್ಣಲ್ಲಿ ನಾಯಕರನ್ನಾಗಿ ಬೆಳೆಸುತ್ತದೆ. ಸಾಮಾನ್ಯ ಕಲ್ಲು ಕುಟಿಗನಾಗಿ ಹುಟ್ಟಿದ ವೀರು ಕಲ್ಕುಡನು ಗೊಮ್ಮಟನ ಪ್ರತಿಮೆ ಸ್ಥಾಪಿಸುವುದು, ಗೌಡರ ಗರ್ಭಿಣಿ ಸೊಸೆ ಊರಿನ ಒಳಿತಿಗಾಗಿ ತಾನೇ ಕೆರೆಗೆ ಬಲಿಯಾಗುವುದು ಇತ್ಯಾದಿಗಳು ಇವಕ್ಕೆ ಒಳ್ಳೆಯ ಉದಾಹರಣೆಗಳು.
ಆದರೆ ಶಿಷ್ಟ ಪರಂಪರೆಯಲ್ಲಿ
ನಾಯಕರು ಹುಟ್ಟುವಾಗಲೇ ಅಸಾಮಾನ್ಯ ಪರಾಕ್ರಮಿಗಳು.
ಜೊತೆಗೆ ಶಿಷ್ಟ ಪರಂಪರೆಯು ಈಗಾಗಲೇ ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ಕಾನೂನುಬದ್ಧಗೊಳಿಸುತ್ತದೆ.
ಜಾತಿ-ವರ್ಣ ವ್ಯತ್ಯಾಸಗಳನ್ನು ಅವು ಬಹುಮಟ್ಟಿಗೆ ಸಮರ್ಥಿಸುತ್ತವೆ. ಹಾಗಾಗಿ ರಾಮನು ಶೂದ್ರ ಯೋನಿಯಲ್ಲಿ ಜನಿಸಿದ ಶಂಭೂಕನ್ನು ಕೊಲ್ಲುವಂಥ ಕಥೆ ರಾಮಾಯಣದೊಳಕ್ಕೆ ಸುಲಭವಾಗಿ ಸೇರಿಕೊಳ್ಳುತ್ತದೆ.
ಆದರೆ ಜನಪದ ನಿರೂಪಣೆಗಳು
ಜಾತಿ ಸಮಾಜದ ಒಳಗಿನ ಕೆಲವು ಸಂಘರ್ಷಗಳನ್ನು ಬಹಿರಂಗಕ್ಕೆ ತರುತ್ತವೆ. ಅದರ ಹುಳುಕುಗಳನ್ನು ಬಯಲಿಗೆಳೆಯುತ್ತವೆ.
ಇದಕ್ಕೆ ಜನಪದ ನಿರೂಪಣೆಗಳಲ್ಲಿ ಅನುಸರಿಸಲಾಗುವ ವಿಧಾನವೂ ತುಂಬಾ ಕುತೂಹಲಕರವಾಗಿರುತ್ತದೆ. ಈ ಜನಪದ
ನಾಯಕರು ಜಾತಿ ಸಮಾಜದ ವೈರುಧ್ಯಗಳಿಗೆ ಬಲಿಯಾಗುತ್ತಾರೆ ಹಾಗೆ ಬಲಿಯಾದಾಗಲೂ ಜನಪದರ
ನಿರೂಪಣಾ ಪ್ರಜ್ಞೆ ನಾಯಕನ ಪರವಾಗಿ ನಿಲ್ಲುವುದರಿಂದಾಗಿ ಆತನನ್ನು ಬಲಿ ತೆಗೆದುಕೊಂಡ ಸಾಮಾಜಿಕ ವ್ಯವಸ್ಥೆಯ ಬಗೆಗೆ ಅಸಹನೆ ಹುಟ್ಟಿಸುತ್ತದೆ. ಈ ಅಸಹನೆ ತೀವ್ರಗೊಳ್ಳುವುದು ನಾಯಕನ ಅಕಾಲ ಮೃತ್ಯುವಿನಲ್ಲಿ. ದಲಿತ ಹುಡುಗನ್ನು ಸಂರಕ್ಷಿಸುವ ಬ್ರಾಹ್ಮಣ ಕನ್ಯೆಯರು, ಕ್ಷತ್ರಿಯರ ಅಹಂಕಾರವನ್ನು ಪ್ರಶ್ನಿಸುವ ಶೂದ್ರ ನಾಯಕರು, ವೈದಿಕ ದೇವರ ಆಜ್ಞೆಗಳನ್ನು ಧಿಕ್ಕರಿಸುವ ಸಾಮಾನ್ಯರು ಜಾನಪದದಲ್ಲಿ
ಹೇರಳವಾಗಿ ಕಂಡು ಬರುತ್ತಾರೆ. ಜನಪದ ನಿರೂಪಣೆಗಳು ಅವುಗಳ ನಾಯಕನ ಸಾವಿನ ಅನಂತರವೂ ಸಾಕಷ್ಟು ದೀರ್ಘವಾಗಿ ಬೆಳೆಯುತ್ತವೆ.
ಅಕಾಲ ಮರಣವನ್ನಪ್ಪುವ ನಾಯಕರು , ಸತ್ತ ಆನಂತರ ಅತಿಮಾನುಷ ವಲಯದಲ್ಲಿ ಉಗ್ರರೂಪಿಯಾಗಿ ಪರಿವರ್ತನೆ ಹೊಂದುತ್ತಾರೆ ಮತ್ತು ತನ್ನ ಸಾವಿಗೆ ಕಾರಣವಾದ ಶಕ್ತಿಗಳ ವಿರುದ್ದ ಹೋರಾಟ ನಡೆಸುತ್ತಾರೆ. ಪ್ರತಿವರ್ಷ ನಿಗದಿತ ದಿನದಂದು ನಡೆಯುವ ಆಚರಣೆಗಳಲ್ಲಿ ಈ ನಾಯಕರು ಪೂಜಾರಿಯೊಬ್ಬನ ಮೂಲಕ ಪ್ರತ್ಯಕ್ಷವಾಗಿ ಜನಗಳ ಕಷ್ಟಗಳಿಗೆ ಕಿವಿಗೊಡುತ್ತಾರೆ. ಪ್ರತಿ ವರ್ಷ ನಡೆಯುವ ಜಾತ್ರೆ
ಅಥವಾ ಆಚರಣೆಗಳಲ್ಲಿ ಈ ನಾಯಕರು ಮತ್ತೆ ಕಾಣಿಸಿಕೊಂಡು, ಜನಮನದಲ್ಲಿ ನಿರಂತರವಾಗಿ ಉಳಿಯುತ್ತಾರೆ.
ಭಾರತದ ಶ್ರೇಣೀಕೃತ ಸಮಾಜದ ಕೆಳ ಹಂತದಲ್ಲಿರುವ ಜನ ವರ್ಗಗಳ ಪರಂಪರೆ, ಆಧುನಿಕತೆ ಮತ್ತು ಭವಿಷ್ಯಗಳೆಲ್ಲ ಬಹುತೇಕವಾಗಿ ಉಳಿದಿರುವುದು ಇಂಥ ಮೌಖಿಕ ರೂಪಗಳಲ್ಲಿ. ಸಾವಿರಾರು ಸಾಲುಗಳಿರುವ, ಅತ್ಯಂತ ಮಹತ್ವದ ತುಳು ಜನಪದ ಕಾವ್ಯ
ಸಿರಿಯು ಬಾಯಿಂದ ಬಾಯಿಗೆ ಹರಿದು ಬಂದು ಇಂದಿಗೂ ಉಳಿದಿದೆ. ದಲಿತರ ಯಾವುದೇ ಆಚರಣೆಗಳನ್ನು ದಾಖಲಿಸುವ ಯಾವುದೇ ಲಿಖಿತ ಪಠ್ಯಗಳಿಲ್ಲ. ಆದರೆ ದಲಿತರು ಪರಂಪರೆಯಿಂದ ದತ್ತವಾದ ಜ್ಞಾನವನ್ನು ಆಧರಿಸಿ ತಮ್ಮ ಆಚರಣೆಗಳನ್ನು ನಡೆಸಿಕೊಂಡು ಬದುಕಿದ್ದಾರೆ. ಕರಾವಳಿಯಲ್ಲಿ ಜನಪ್ರಿಯವಾಗಿರುವ ಸಾವಿರಾರು ಭೂತಗಳ ಆರಾಧನೆಯು ಮೌಖಿಕ ನಿರೂಪಣೆಗಳ ಮೂಲಕವೇ ನಡೆಯುತ್ತದೆ.
ಆದರೆ ನಮ್ಮ ದೌರ್ಭಾಗ್ಯ ಎಂದರೆ
ಮೌಖಿಕ ನಿರೂಪಣೆಗಳನ್ನು ಇನ್ನು
ಕೂಡಾ ನಾವು ಕನ್ನಡ ಸಂಸ್ಕೃತಿಯ ತಿಯ ಮುಖ್ಯಭಾಗವೆಂದು ಪರಿಗಣಿಸದಿರುವುದು. ಕಾರಣ ಸುಮಾರು ಶೇಕಡಾ 90 ರಷ್ಟು ಜನರ ಸಾಂಸ್ಕೃತಿಕ ವಿವರಗಳು ಹಾಗೂ
ಪರಿಭಾಷೆಗಳು ಇಂದಿಗೂ ಉಪೇಕ್ಷೆಗೆ ಗುರಿಯಾಗುತ್ತಿವೆ. ಕರ್ನಾಟಕ
ಜಾನಪದವನ್ನು ಲಿಖಿತ ನಿರೂಪಣೆಗಳ ಜೊತೆಗೆ ಸಮಸ್ಥಾನದಲ್ಲಿ ನಿಲ್ಲಿಸಲಾಗಿಲ್ಲ. ಜಾನಪದದಲ್ಲಿ ಸ್ನಾತಕೋತ್ತರ ಪದವಿಗಳನ್ನು
ಪಡೆದವರನ್ನು ಉದ್ಯೋಗಕ್ಕೆ ಯಾರೂ ಪರಿಗಣಿಸುತ್ತಿಲ್ಲ. ಆಳುವ ವರ್ಗ ತನ್ನ ಆಳ್ವಿಕೆ ಮತ್ತು ರಾಜಕೀಯ ಧೋರಣೆಗಳಿಗೆ ಅನುಗುಣವಾದ ಲಿಖಿತ ನಿರೂಪಣೆಗಳನ್ನು ತನ್ನೆದೆಂದು ಹೇಳುತ್ತಾ, ಅವುಗಳನ್ನು ಮಾಧ್ಯಮಗಳಲ್ಲಿ ನಿರಂತರವಾಗಿ ಪ್ರಚುರ ಪಡಿಸುತ್ತಾ, ಕಾನೂನುಬದ್ಧಗೊಳಿಸುತ್ತವೆ. ಆಳುವ ವರ್ಗದ ಬೆಂಬಲ ಪಡೆದ ನಿರೂಪಣೆಗಳೇ ರಾಷ್ಟ್ರೀಯ ಮನ್ನಣೆ ಪಡೆಯುತ್ತವೆ. ಈ ಕಾಲದಲ್ಲಿ ಅಂಥವುಗಳಿಗೆ ಅಂತರ ರಾಷ್ಟ್ರೀಯ ಮಾರುಕಟ್ಟೆಯೂ ಲಭಿಸುತ್ತದೆ. ಇಂಥ ಸಂದರ್ಭದಲ್ಲಿ ಮೌಖಿಕ ನಿರೂಪಣೆಗಳ ಮೂಲಕ ಚಾಲ್ತಿಯಲ್ಲಿರುವ ಜಾನಪದವು ಮೂಲೆಗೆ ತಳ್ಳಲ್ಪಡುತ್ತವೆ. ಅಕ್ಷರ ರಾಜಕೀಯವೂ ಮೌಖಿಕ ಸಾಮಗ್ರಿಗಳನ್ನು ಅಷ್ಟಾಗಿ ಮನ್ನಿಸುವುದಿಲ್ಲ. ಜೊತೆಗೆ
ಆಳುವ ವರ್ಗಕ್ಕೆ ವರ್ತಮಾನ, ಚರಿತ್ರೆ ಮತ್ತು ಪುರಾಣಗಳ ಬಗ್ಗೆ ತನ್ನದೇ ಆದ ಖಚಿತ ನಿಲುವುಗಳಿರುತ್ತದೆ. ಆ ನಿಲುವುಗಳನ್ನು ಒಮ್ಮೊಮ್ಮೆ ನೇರವಾಗಿ, ಮತ್ತೆ ಕೆಲವು ಬಾರಿ ಪರೋಕ್ಷವಾಗಿ ಇತರರ ಮೇಲೆ ಹೇರುತ್ತದೆ.
ಇಂಥ ಹೇರಿಕೆಯ ವಿರುದ್ಧ ಮೌಖಿಕ ನಿರೂಪಣೆಗಳು ಒಂದು ಬಗೆಯ ಜಾಗೃತ ಸ್ಥಿತಿಯನ್ನು ಸದಾ ಕಾದಿಟ್ಟುಕೊಂಡಿರುತ್ತವೆ. ಆಳುವ ವರ್ಗ ಯಾವುದನ್ನು ಅಕ್ಷರ ಮಾಧ್ಯಮದ ಮೂಲಕ ಮಾನ್ಯ ಮಾಡಲೆತ್ನಿಸುವುದೋ ಅದನ್ನು ಮೌಖಿಕ ಮಾಧ್ಯಮದ ಮೂಲಕ ಜನರು ವಿಮರ್ಶೆಗೆ ಒಳಪಡಿಸುತ್ತಾರೆ. ಎಷ್ಟೋ ಬಾರಿ ಈ ಎರಡೂ ಪ್ರವೃತ್ತಿಗಳು ಪರಸ್ಪರ ವಿರೋಧಿ ನೆಲೆಗಳಲ್ಲಿರುತ್ತವೆ. ಒಂದು ಅಕ್ಷರ ರೂಪದಲ್ಲಿರುವುದನ್ನು
‘ಶಾಶ್ವತ’ ಎಂದೂ, ಇನ್ನೊಂದು ಅನಕ್ಷರ ರೂಪದಲ್ಲಿರುವುದನ್ನು
‘ಅಶಾಶ್ವತ ಎಂದೂ ನಂಬುತ್ತದೆ. ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ,
ಇದು ಅಕ್ಷರದ ಪರವಾಗಿರುವಂಥವರ ತರ್ಕ. ಆದರೆ ಸೂಕ್ಷ್ಮವಾಗಿ ನೋಡಿದರೆ, ಮೌಖಿಕ ರೂಪದಲ್ಲಿರುವಂಥದ್ದು ಅಶಾಶ್ವತ ಏನೂ ಅಲ್ಲ. ಅದು ಕಂಠಸ್ಥ ಪರಂಪರೆಯಲ್ಲಿ ನವೀನಗೊಳ್ಳುತ್ತಾ ಉಳಿಯುತ್ತಿರುತ್ತದೆ.
ಅಕ್ಷರದ ಬಂಧನ ಇಲ್ಲದ್ದರಿಂದ ಅದು ಹೆಚ್ಚು ಲವಲವಿಕೆಯಿಂದ ಬೆಳೆಯುತ್ತದೆ. ಬದಲಾಗುತ್ತಿರುವ ಸಮಾಜದೊಂದಿಗೆ ತನ್ನನ್ನು ಗುರುತಿಸಿಕೊಳ್ಳುತ್ತಾ, ಸಮಕಾಲೀನವಾಗುತ್ತಾ ಕ್ರಿಯಾಶೀಲವಾಗುತ್ತಿರುತ್ತದೆ. ಇಷ್ಟಿದ್ದರೂ ನಮ್ಮ ಮಾನವಿಕಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಬೌದ್ಧಿಕ ಚರ್ಚೆಗಳಲ್ಲಿ
ಮೌಖಿಕ ನಿರೂಪಣೆಗಳಿಗೆ ಅಂಥ ಮನ್ನಣೆ ದೊರಕಿಲ್ಲ. ಕಾರಣ ಮೌಖಿಕ ನಿರೂಪಣೆಗಳು ಸಾಮಾನ್ಯ ಜನರ ಜ್ಞಾನ ವಾಗಿದ್ದು ಅದಕ್ಕೆ ಅಂಥ ಮನ್ನಣೆ ನೀಡಬೇಕಾಗಿಲ್ಲ ಎಂಬ ಪಾರಂಪರಿಕ ನಿಲುವು. ಇದು ಬಹಳ ಅಪಾಯಕಾರಿಯಾದ ಧೋರಣೆ. ಹೀಗಾಗಿ ನಾವು ನಮ್ಮ ಪೂರ್ವಾಗ್ರಹಗಳನ್ನು ಬಿಟ್ಟು ಮೌಖಿಕ ಪರಂಪರೆಯ ನಿರೂಪಣೆಗಳಿಗೆ ಇನ್ನಾದರೂ ಗಂಭೀರವಾಗಿ ಕಿವಿಕೊಡಬೇಕಾಗಿದೆ. ನಮ್ಮ ಸಂಶೋಧನೆಗಳು ಈ ನಿಟ್ಟಿನಲ್ಲಿ ಮುಂದುವರಿಯಬೇಕಾಗಿದೆ.
ಅಪವಾದವೆಂಬಂತೆ ಕೆಲವು ವಿದ್ವಾಂಸರು ಈ ನಿಟ್ಟಿನಲ್ಲಿ ಗಂಭೀರವಾದ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ.
ಆದರೆ ಹೆಚ್ಚಿನವರಿಗೆ ತಮ್ಮ ಕೈಯಲ್ಲಿರುವ ಮಾಹಿತಿಗಳ ಮಹತ್ವವನ್ನು ಒಂದು ನಿರ್ದಿಷ್ಟವಾದ ಚೌಕಟ್ಟಿನಲ್ಲಿರಿಸಿ ವ್ಯಾಖ್ಯಾನ ಮಾಡಲಾಗುತ್ತಿಲ್ಲ. ಇದಕ್ಕೆ ಎರಡು ಕಾರಣಗಳಿವೆ-
1. ವಿಸ್ತಾರವಾದ ಓದಿನ ಕೊರತೆ ಮತ್ತು
2. ಸೈದ್ಧಾಂತಿಕ ತಿಳುವಳಿಕಯ ಕೊರತೆ.
ಇಂಥವರು ಕಷ್ಟ ಪಟ್ಟು ಮಾಹಿತಿಗಳನ್ನು ಕಲೆಹಾಕುತ್ತಾರೆ, ಆದರೆ ಆ ಮಾಹಿತಿಗಳ ವಿಶ್ಲೇಷಣೆಯಲ್ಲಿ ಸೋಲುತ್ತಾರೆ. ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಸಮುದಾಯಗಳ ಅಧ್ಯಯನಗಳನ್ನು ಗಮನಿಸಿದರೂ ಸಾಕು. ಸಂಶೋಧಕರು ತುಂಬಾ ಶ್ರಮವಹಿಸಿ ಕ್ಷೇತ್ರಕಾರ್ಯ ಮಾಡುವುದರ ಮೂಲಕ ಸಾಕಷ್ಟು ವಿಷಯಗಳನ್ನು ಕಲೆಹಾಕುತ್ತಾರೆ. ಹುಟ್ಟಿನಿಂದ ಸಾಯುವ ತನಕದ ವಿವಿಧ ಆಚರಣೆಗಳನ್ನೂ, ಇಡೀ ವರ್ಷದ ಹಬ್ಬ -ಜಾತ್ರೆಗಳ ಬಗ್ಗೆಯೂ ವಿವರ ಸಂಗ್ರಹಿಸುತ್ತಾರೆ. ಆದರೆ ಈ ವಿವರಗಳು ಒಂದು ನಿರ್ದಿಷ್ಟ ಸಮುದಾಯವನ್ನು ಹೇಗೆ ಆಗು ಮಾಡಿದೆ? ಮತ್ತು ಅದು ಇತರ ಸಮುದಾಯಗಳಿಗಿಂತ ಹೇಗೆ ಭಿನ್ನವಾಗಿವೆ? ಎಂದು ಹೇಳುವಲ್ಲಿ ಅವರು ದಯನೀಯವಾಗಿ ಸೋಲುತ್ತಾರೆ. ವಿವರಗಳಷ್ಟೇ ಅತ್ಯುತ್ತಮ ಸಂಶೋಧನೆಯಾಗುವುದಿಲ್ಲ ಎಂಬ ಸತ್ಯವನ್ನು ನಮ್ಮ ಸಂಶೋಧಕರು ಮನಗಾಣಬೇಕು.
ಉದಾಹರಣೆಗೆ,
ಸಮುದಾಯ ಅಧ್ಯಯನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಂತ್ಯ ಸಂಸ್ಕಾರದ ಕುರಿತಾದ ವಿವರಗಳನ್ನು ಗಮನಿಸೋಣ-
ನಮಗೆಲ್ಲ ತಿಳಿದಿರುವ ಹಾಗೆ, ಹಿಂದೂ ಧರ್ಮದ ಅಂತ್ಯ ಸಂಸ್ಕಾರ ವಿಧಿಗಳ ಬಗೆಗೆ ಗೃಹ್ಯ ಸೂತ್ರವು ಮಾಹಿತಿಯನ್ನು ನೀಡುತ್ತದೆ.
ಈ ಪಠ್ಯವನ್ನು ಆಧರಿಸಿ ಅನೇಕ ಸಂಶೋಧನಾ ಗ್ರಂಥಗಳೂ, ಲೇಖನಗಳೂ ಪ್ರಕಟವಾಗಿವೆ. ಭಾರತೀಯರು ಹೇಗೆ ಸತ್ತವರನ್ನು ಮರುಹುಟ್ಟಿಗೆ ಒಳ ಪಡಿಸುತ್ತಾರೆ ಎಂಬುದನ್ನು ಆ ಲೇಖನಗಳಲ್ಲಿ ಸಾಬೀತು ಪಡಿಸಲಾಗಿದೆ. ಭಾರತದಲ್ಲಿ ನಡೆದ ಇಂತಹ ಅಧ್ಯಯನಗಳು ಬ್ರಾಹ್ಮಣರ ಅಂತ್ಯ ಸಂಸ್ಕಾರದ ವಿಶ್ಲೇಷಣೆಗೇ ಸೀಮಿತವಾಗಿರುವುದು ಕುತೂಹಲಕರ. ಭಾರತದಲ್ಲಿ ಅಂತ್ಯ ಸಂಸ್ಕಾರ ವಿಧಿಗಳ ಕುರಿತು ಬರೆದ ಪಾಶ್ಚಾತ್ಯ ವಿದ್ವಾಂಸರೂ ಬ್ರಾಹ್ಮಣರ ಅಂತ್ಯ ಕ್ರಿಯೆಗಳನ್ನೇ ಆಕರವಾಗಿ ಪರಿಗ್ರಹಿಸಿದ್ದಾರೆ. ಇದಕ್ಕೆ ಕಾರಣ ಸ್ಪಷ್ಟವೇ ಇದೆ. ಅಂಥ ವಿಶ್ಲೇಷಣೆಗೆ ಬೇಕಾದ ಆಕರಗಳನ್ನು ವಿದ್ಯಾವಂತ ಬ್ರಾಹ್ಮಣರು ವಿದೇಶಿಯರಿಗೆ ಒದಗಿಸಿಕೊಡಬಲ್ಲವರಾಗಿರುವುದು ಮತ್ತು ಅಂತ್ಯ ಸಂಸ್ಕಾರದ ವಿವರಗಳು ಗೃಹ್ಯ ಸೂತ್ರಗಳಲ್ಲಿ ಸುಲಭವಾಗಿ ದೊರೆಯುತ್ತಿರುವುದು. ಅಂದರೆ ಇಲ್ಲಿ ಸಂಶೋಧಕನಿಗೆ ಅಂತ್ಯ ಸಂಸ್ಕಾರದ ಬಗೆಗಿನ ಒಂದು ‘ಪಠ್ಯ’ ಸುಲಭವಾಗಿ ಲಭಿಸುತ್ತದೆ. ಇಂಥ ಲಿಖಿತ ಪಠ್ಯವನ್ನು ಆಧಾರವಾಗಿರಿಸಿಕೊಂಡು ಅಧ್ಯಯನ, ವ್ಯಾಖ್ಯಾನಗಳು ಸ್ವಲ್ಪ ಮಟ್ಟಿಗೆ ನಡೆದಿವೆ ನಿಜ. ಇಂತಹ ಲಿಖಿತ ಪಠ್ಯಗಳು ಬ್ರಾಹ್ಮಣೇತರರ ಬಗೆಗೆ ದೊರೆಯುವುದಿಲ್ಲಾದ ಕಾರಣ, ಬ್ರಾಹ್ಮಣೇತರರ ಅಂತ್ಯ ಸಂಸ್ಕಾರದ ಕುರಿತಾಗಿ ನಮಗಿಂದು ಲಿಖಿತವಾಗಿ ಯಾವ ಮಾಹಿತಿಯೂ ಲಭ್ಯಸುತ್ತಿಲ್ಲ. ಗೃಹ್ಯ ಸೂತ್ರದ ಲಿಖಿತ ಪಠ್ಯವನ್ನು ವಾಸ್ತವದ ಆಚರಣೆಗಳೊಂದಿಗೆ ಹೋಲಿಸಿ ನೋಡುವ ಪ್ರಯತ್ನವೂ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಸಾವಿಗೆ ಸಂಬಂಧಿಸಿದಂತೆ ವಿವಿಧ ಸಮುದಾಯಗಳ ಜನರು ನಡೆಸುವ ಆಚರಣೆಗಳ ಕುರಿತಾಗಿ ನಾವು ಇನ್ನಷ್ಟೇ ತಿಳುವಳಿಕೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಈ ಅರಿವಿನಲ್ಲಿ ನಮ್ಮ ಸಂಶೋಧಕರು ಇದೀಗ ಬ್ರಾಹ್ಮಣೇತರರಲ್ಲಿ ಪ್ರಚಲಿತದಲ್ಲಿರುವ ಅಂತ್ಯ ಸಂಸ್ಕಾರದ ಬಗೆಗೆ ಬೆಳಕು ಚೆಲ್ಲಲು ಪ್ರಯತ್ನಿಸಬೇಕು. ಹೀಗೆ ಮಾಡುವುದರಿಂದ ಅಂತ್ಯ ಸಂಸ್ಕಾರದ ಬಗೆಗಿನ ಅಧ್ಯಯನಕ್ಕೆ ಬೇರೊಂದು ತಿರುವು ಕೊಡಲು ಸಾಧ್ಯ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇಲ್ಲಿ ಅಧ್ಯಯನಕ್ಕೆ ಸಾಂಪ್ರದಾಯಕವಲ್ಲದ ಆಕರಗಳನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ಬ್ರಾಹ್ಮಣೇತರ ಜನಸಮುದಾಯವೊಂದರ ಸಮಾಜ ಕಲ್ಪನೆಯನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಬ್ರಾಹ್ಮಣೇತರರ ಅದರಲ್ಲೂ ದಲಿತರ ಕುರಿತಾದ ಅಧ್ಯಯನಗಳು ಈ ನಿಟ್ಟಿನಲ್ಲಿ ಸಾಗಬೇಕಾಗಿದೆ.
ಕೊನೆಯದಾಗಿ,
ಕನ್ನಡದಂಥಾ ಭಾಷೆಯೊಂದರಲ್ಲಿ ಸಂಶೋಧನೆ ನಡೆಸಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಭಾವಿಸುವ, ಮತ್ತು
ಅದನ್ನು ಘೋಷಿಸುವ ಜನರ
ನಡುವೆ ನಾವು ಇವತ್ತು ಬದುಕುತ್ತಿದ್ದೇವೆ. ಇಂತಲ್ಲಿ ಸಂಶೋಧನೆಗಳನ್ನು ನಡೆಸಿದರೆ ಏನು ಪ್ರಯೋಜನವಿದೆ
ಎಂಬುದನ್ನು ಗಟ್ಟಿಯಾಗಿ ಹೇಳುವ ಧೈರ್ಯವನ್ನು ನಾವು ಬೆಳೆಸಿಕೊಳ್ಳಬೇಕಾಗಿದೆ.
ಭಾರತ ದೇಶದಲ್ಲಿ ಉನ್ನತ ಸಂಶೋಧನೆಗಳನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ ( ಯು ಜಿ ಸಿ) ಮತ್ತು ಕೆಲವು ಉನ್ನತ ಸಂಶೋಧನಾ ಸಂಬಂಧೀ ಸಂಸ್ಥೆಗಳು ನಿಯಂತ್ರಿಸುತ್ತವೆ. ಅದರಲ್ಲಿ ನಮಗೆ ನೇರವಾಗಿ ಸಂಬಂಧಿಸಿದ ಸಂಸ್ಥೆಯೆಂದರೆ ವಿಶ್ವವಿದ್ಯಾಲಯ ಅನುದಾನ ಆಯೋಗ. ಅದರ ಹೆಸರೇ ಸೂಚಿಸುವಂತೆ ಅದು ವಿಶ್ವವಿದ್ಯಾಲಯಗಳಿಗೆ ಧನ ಸಹಾಯ ಮಾಡಲು ಇರುವ ಸಂಸ್ಥೆ. ಅಂದರೆ ಅದು ನಮ್ಮ ಸಂಶೋಧನೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕಾದ್ದು ನ್ಯಾಯ. ಆದರೆ ಇವತ್ತು ಅದರ ಜವಾಬ್ದಾರಿಗಳು ಹೆಚ್ಚಿ ಅದಕ್ಕೆ ಸಂಶೋಧನೆಯನ್ನು ಪ್ರೋತ್ಸಾಹಿಸುವಷ್ಟು ತಾಳ್ಮೆ ಉಳಿದಿಲ್ಲ. ದೇಶದಲ್ಲಿರುವ ಸುಮಾರು 750 ವಿಶ್ವವಿದ್ಯಾಲಯಗಳ ಆಡಳಿತದಲ್ಲಿಯೇ ಅದರ ಶಕ್ತಿ ಮುಗಿದು ಹೋಗುತ್ತಿದೆ. ಡಾ. ಅಮ್ರಿಕ್ ಸಿಂಗ್ ಅವರು ಸರಿಯಾಗಿ ಗುರುತಿಸಿರುವಂತೆ ಜಗತ್ತಿನಲ್ಲಿ ಎಲ್ಲಿಯೂ ಧನ ಸಹಾಯ ಮಾಡುವ ಸಂಸ್ಥೆಯೊಂದು ವಿಶ್ವವಿದ್ಯಾಲಯಗಳ ಸಂಶೋಧನೆಗಳ
ಗುಣಮಟ್ಟವನ್ನು ನಿರ್ಧರಿಸುವುದಿಲ್ಲ. ( ಅಮ್ರಿಕ್ ಸಿಂಗ್ 2004). ಆದರೆ ನಮ್ಮಲ್ಲಿ ಹಾಗಾಗುತ್ತಿದೆಯಲ್ಲ.? ಯು ಜಿಸಿ ಅಥವಾ ಮಾನವ
ಸಂಪನ್ಮೂಲ ಇಲಾಖೆಯು ನಡೆಸುತ್ತಿರುವ ತರಬೇತಿ ಕಮ್ಮಟಗಳೂ ಕೂಡಾ ಯಾಂತ್ರಿಕವಾಗಿ ಮುಗಿದು ಹೋಗುತ್ತಿವೆ.
ಅಧ್ಯಾಪಕರೂ ತಮ್ಮ ವೇತನದ ಹೆಚ್ಚಳಕ್ಕಾಗಿ ಮತ್ತು ಭಡ್ತಿಗಾಗಿ ಈ ಕಮ್ಮಟಗಳಲ್ಲಿ ಭಾಗವಹಿಸುತ್ತಿದ್ದಾರೆ.
ಯು ಜಿ ಸಿ ಯ ಈಚಿನ ವರದಿಯ ಪ್ರಕಾರ 88.91 ಶೇಕಡಾ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪಡೆದರೆ ,ಅದರಲ್ಲಿ 9.42 ಶೇಕಡಾ ವಿದ್ಯಾರ್ಥಿಗಳು ಮಾತ್ರ ಸ್ನಾತಕೋತ್ತರ ಅಧ್ಯಯನಗಳಿಗೆ ಸೇರುತ್ತಾರೆ, ಮತ್ತು ಕೇವಲ 0.64 ಶೇಕಡಾ ಜನರು ಸಂಶೋಧನೆಗೆ ಬರುತ್ತಾರೆ.
2003-13 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು ಪಿ ಎಚ್. ಡಿ ಪದವಿ ಪಡೆದವರ ಸಂಖ್ಯೆ 45, 561. ಇದು ಪದವಿ ಶಿಕ್ಷಣಕ್ಕೆ ಸೇರಿದವರ ಶೇಕಡಾ 0.25 ಮಾತ್ರ. ಜೊತೆಗೆ ಪಿ ಎಚ್ .ಡಿ ಪದವಿಗೆ ನೋಂದಾಯಿಸಿದವರಲ್ಲಿ ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಮಾತ್ರ
ಅದನ್ನು ಮುಗಿಸುತ್ತಾರೆ. ಪಿ ಎಚ್. ಡಿ ಪದವಿ ಪಡೆದವರಲ್ಲಿ ಮತ್ತೆ 66.4 ಶೇಕಡಾ ಹುಡುಗರಾದರೆ 33.6 ಶೇಕಡಾ ಹುಡುಗಿಯರಾಗಿದ್ದಾರೆ ಎಂದು ಅಂಕಿ
ಅಂಶಗಳು ಹೇಳುತ್ತವೆ.
ಪ್ರಸ್ತುತ ಈ ಅಂಕಿ ಅಂಶಗಳು ಇನ್ನೂ ಕಡಿಮೆಯಾಗಲಿವೆ. ಭಾರತವು ಅಭಿವೃದ್ದಿಯಾಗಬೇಕಾದರೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಪ್ರಾಮುಖ್ಯ ನೀಡಬೇಕೆಂಬ ನೆಲೆಯಲ್ಲಿ ಇದೀಗ ಮಾನವಿಕಗಳ ಮೇಲೆ ಇನ್ನಷ್ಟು ಕಡಿತ ಹೇರಲಾಗುತ್ತದೆ. 12ನೇ ಪಂಚವಾರ್ಷಿಕ ಯೋಜನೆಯು 2020ರ ಹೊತ್ತಿಗೆ ಚೀನಾಕ್ಕೆ ಕಳಿಸಬೇಕಾಗಿರುವ
ತಂತ್ರಜ್ಞಾನಿಗಳ ಬಗ್ಗೆ ಉತ್ಸಾಹದಿಂದ ಮಾತಾಡುತ್ತದೆಯೇ ವಿನಾ
ಸಮಾಜ ವಿಜ್ಞಾನಗಳ ಬಗ್ಗೆ ಮಾತಾಡುವುದಿಲ್ಲ.
ಇಂಥ ಸಂದರ್ಭದಲ್ಲಿ ನಾವು ನಮ್ಮ ಸಂಶೋಧನೆಗಳ ಬಗೆಗೆ ಹೊಸದಾಗಿ ಯೋಚಿಸುವ ಕಾಲ ಬಂದಿದೆ. ಒಂದೆಡೆ ಸಂಶೋಧನೆಯ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ಇನ್ನೊಂದೆಡೆ ತಿಳಿವಳಿಕೆಗಳು ಅಂತಾರಾಷ್ಟ್ರೀಯಗೊಳ್ಳುತ್ತಿರುವ ಆಧುನಿಕ ಪ್ರಕ್ರಿಯೆ, ಇವೆರಡರ ನಡುವೆ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸದ ಸಂಶೋಧಕರು – ಇವು ಇಂದಿನ ದೊಡ್ಡ ಸಮಸ್ಯೆಗಳು. ಈ ಜವಾಬ್ದಾರಿಯನ್ನು ಸಂಶೋಧಕರು ತುರ್ತಾಗಿ ಹೊತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ
ನಮ್ಮ ಸಂಶೋಧನಗಳಿಗೆ ಯಾವ ಬೆಲೆಯೂ ಇರಲಾರದು.
ಪರಾಮರ್ಶಿತ ಗ್ರಂಥಗಳು
ಕನ್ನಡ ಪುಸ್ತಕಗಳು:
1. ಕಲಬುರ್ಗಿ ಎಂ ಎಂ 2010, ಮಾರ್ಗ-1; ಬೆಂಗಳೂರು : ಸಪ್ನಾ ಬುಕ್ ಸ್ಟಾಲ್
2. ಗದ್ದಗೀಮಠ ಜಿ ಎಸ್ 1963, ಉತ್ತರ ಕರ್ನಾಟಕದ ಜಾನಪದ ಸಾಹಿತ್ಯ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ
3. ಚಿದಾನಂದ ಮೂರ್ತಿ ಎಂ 1979, ಕನ್ನಡ ಶಾಸನಗಳ ಸಾಂಸ್ಕøತಿಕ ಅಧ್ಯಯನ; ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ
4. ನರಸಿಂಹಾಚಾರ್ ಡಿ ಎಲ್ 1971, ಪಂಪಭಾರತ ದೀಪಿಕೆ; ಮೈಸೂರು: ಪ್ರಸಾರಾಂಗ, ಮೈಸುರು ವಿಶ್ವವಿದ್ಯಾಲಯ
5. ನಾಗರಾಜಯ್ಯ ಹಂಪ, ಪ್ರಾಕೃತ ಕಥಾ ಸಾಹಿತ್ಯ; ಬೆಂಗಳೂರು: ಗೋಧೂಳೀ ಪ್ರಕಾಶನ
6. ನಾಯಕ ಹಾ ಮಾ 1971, ಜಾನಪದ ಸ್ವರೂಪ; ಮೈಸೂರು : ತ ವೆಂ ಸ್ಮಾರಕ ಗ್ರಂಥಮಾಲೆ
7. ಪೀಟರ್ ಜೆ ಕ್ಲಾಶ್ 1987, ತುಳುವ ದರ್ಶನ ( ಅನು: ನಾವಡ ಎ ವಿ, ಸುಭಾಶ್ಚಂದ್ರ ); ಕುಂದಾಪುರ: ಪ್ರಾದೇಶಿಕ ವ್ಯಾಸಂಗ
8. ಪುರುಷೋತ್ತಮ ಬಿಳಿಮಲೆ 1990, ಕರಾವಳಿ ಜಾನಪದ; ಮಂಗಳೂರು
9. ಪುರುಷೋತ್ತಮ ಬಿಳಿಮಲೆ 1997, ಕೂಡುಕಟ್ಟು; ಮಲ್ಲಾಡಿಹಳ್ಳಿ: ಆನಂದಕಂದ ಪ್ರಕಾಶನ
10. ಪುರುಷೋತ್ತಮ ಬಿಳಿಮಲೆ 2010, ಜನ ಸಂಸ್ಕøತಿ; ಬೆಂಗಳೂರು: ಕ್ರೈಸ್ತ ಕಾಲೇಜು
11. ಪುರುಷೋತ್ತಮ ಬಿಳಿಮಲೆ 1985, ಮೆಕೆಂಜಿ ಕೈಫಿಯತ್ತುಗಳು, ಪುತ್ತೂರು: ಸಂಮೀರ ಪ್ರಕಾಶನ
12. ನೇಗಿನಹಾಳ ಎಂ ಬಿ 1992, ಮೈಲಾರಲಿಂಗ ಖಂಡೋಬಾ; ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ
13. ಪರಮಶಿಯಯ್ಯ ಜೀ ಶಂ, ದಕ್ಷಿಣ ಕನಾಟಕದ ಜನಪದ ಕಾವ್ಯ; ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.
14. ರಹಮತ್ ತರೀಕೆರೆ 2014, ಕರ್ನಾಟಕದ ಮೊಹರಂ; ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
15. ವರದರಾಜ ರಾವ್ ಜಿ 1970, ಕುಮಾರರಾಮನ ಸಾಂಗತ್ಯಗಳು; ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ
16. ಶೆಟ್ಟರ್. ಷ (ಸಂ) 2017, ಹಳಗನ್ನಡ; ಬೆಂಗಳೂರು: ಅಭಿನವ ಪ್ರಕಾಶನ
17. ಶೆಟ್ಟರ್. ಷ 2007, ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ; ಬೆಂಗಳೂರು: ಅಭಿನವ ಪ್ರಕಾಶನ
18. ಶೆಟ್ಟರ್. ಷ 2014, ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ; ಬೆಂಗಳೂರು: ಅಭಿನವ ಪ್ರಕಾಶನ
19. ಸತ್ಯನಾಥ ಟಿ ಎಸ್ 1988, ಕನ್ನಡ ಜನಪದ: ಕೆಲವು ಮುಖಗಳು; ಬೆಂಗಳೂರು: ಶಾರದಾ ಪ್ರಕಾಶನ
20. ವಿವೇಕ ರೈ 1985, ತುಳು ಜನಪದ ಸಾಹಿತ್ಯ; ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.
ಇಂಗ್ಲಿಷ್ ಪುಸ್ತಕಗಳು:
1.
Crooke, William
1896, The Popular Religion and Folklore of Northern India Volune 1 and 2,
Westminister: Archibald Constable &Co.
2.
Eichinger,
Gabriella Ferro-Luzzi 1987, The self-milking cow and the bleeding liṅgam: criss-cross
of motifs in Indian temple legends; Wiesbaden:
Harrassowitz
3.
Maheshwari,
Amrita (Ed.) 2011, Indian Higher Education and Globalization, Delhi, Gagandeep
Publications
5.
Panikkar, N and
Nair, Bhaskaran M (2012), Globalization and Higher Education in India, Delhi :
Pearson.
6.
Qamar Furqan (
Ed) 2014, Trends in Internationalization of Higher Education in India; New
Delhi: Association of Indian Universities.
7.
Sontheimer G D
1993, Pastoral Dieties in western India; Delhi: Oxford University Press.
8.
Subrahmanyam,
Sanjay, Narayana Rao Velcheru and Shulman, David 2002, Textures of Time:
Writing History in south India 1600-1800; New Delhi: Permanent Black
9.
Sukthanka V S
1966, Critical edition of the Mahabharata, Pune: The Bhandarakar Oriental
Research Institute.
10. UGC Reports 2006-15
3 comments:
ಸಂಶೋಧನಾ ಮನಸುಳ್ಳ ಎಲ್ಲರಿಗೂ ಸಾಗಬೇಕಾದ ಸೂಕ್ತ ಮತ್ತು ಸಮಂಜಸ route map ನಂತೆ ಈ ಬರಹವಿದೆ. ಇಂದಿನ ದಿನಮಾನಗಳಲ್ಲಿ ಸಾವಿರಾರು ಸಂಪ್ರಬಂಧಗಳು ವಾರ್ಷಿಕ ಹೊರಬರುತ್ತಿದ್ದರೂ ಕನ್ನಡ ಸಂಶೋಧನಾ ಕ್ಷೇತ್ರ ಬತ್ತಿದ ಕೆರೆಯಂತೇ ಇರುವುದಕ್ಕೆ ಈ ಲೇಖನದ ಹೂರಣದಲ್ಲಿರುವ ವಿಚಾರಗಳತ್ತ ಗಮನ ಹರಿಸದಿರುವುದೇ ಕಾರಣ ಎನಿಸುತ್ತದೆ.
ಜಾನಪದೀಯ ಮತ್ತು ಚಾರಿತ್ರಿಕ ವಿಚಾರಗಳ ಕುರಿತ ಸಂಶೋಧನೆಗೆ ಅಣಿಯಾಗುವವರಿಗೆ ಪ್ರೊ.ಬಿಳಿಮಲೆ ಅವರ ಚಿಂತನಾಮಾರ್ಗಗಳು ದಿಯಾಗಳಂತೆ ಇವೆ.
ಲೇಖಕರಿಗೆ ಅಭಿನಂದನಾಪೂರ್ಣ ಧನ್ಯವಾದಗಳು.
-ಡಾ.ಹನಿಯೂರು ಚಂದ್ರೇಗೌಡ
9901609723
Wynn Slots: Casino App Review | The Official US
The 논산 출장안마 Wynn Slots mobile app lets you play casino slots, casino games, 정읍 출장샵 poker and 경상북도 출장마사지 more from 목포 출장안마 the comfort of your 춘천 출장샵 own home!
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ
jayakumarcsj@gmail.com
Post a Comment