ಎ ಕೆ ರಾಮಾನುಜನ್ ಅವರ ಫೋಕ್
ಟೇಲ್ಸ್ ಫ್ರಂ ಇಂಡಿಯಾ
ಎ.ಕೆ.ರಾಮಾನುಜನ್ (1929-93) ಅವರು ಕನ್ನಡದ
ಕೆಲವು ಕಥನಗಳನ್ನು ವಿಶ್ವಕ್ಕೆ ಅತ್ಯಂತ ಪರಿಣಾಮವಾಗಿ ಪರಿಚಯಿಸಿದ ಮಹಾನು ಭಾವ. ಅಮೇರಿಕಾದ ಕೆಲವು
ವಿಶ್ವವಿದ್ಯಾಲಯಗಳಲ್ಲಿ ದಕ್ಷಿಣ ಏಷಿಯಾ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ಕೆಲಸ ಮಾಡಿದ ಅವರು
ಅಂಥ ಕಡೆಗಳಲ್ಲಿ ಕನ್ನಡದ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸ ಮಾಡಿದರು. ಇವತ್ತು ದಕ್ಷಿಣ
ಏಷಿಯಾದಲ್ಲಿ ಕೆಲಸ ಮಾಡುತ್ತಿರುವ ವಿದ್ವಾಂಸನೇಕರು ರಾಮನುಜನ್ ಶಿಷ್ಯರು. ಈ ಕೆಲಸವನ್ನು
ಅವರಿಗಿಂತ ಮುನ್ನ ಯಾರೂ ಮಾಡಲಿಲ್ಲ, ಅವರಾನಂತರ ಯಾರೂ ಮಾಡಲಿಲ್ಲ. 1980ರ ದಶಕದ ಕೊನೆಯಲ್ಲಿ
ಉಡುಪಿಯಲ್ಲಿ ಸುದೀರ್ಘ ಕಾಲ ನಡೆದ ಅಂತಾರಾಷ್ಟ್ರೀಯ ಜಾನಪದ ಕಮ್ಮಟದಲ್ಲಿ ಅವರು
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಅವರು
ನೀಡಿದ ಉಪನ್ಯಾಸಗಳು
ನಮ್ಮನ್ನೆಲ್ಲ ದಂಗುಪಡಿಸಿತ್ತು. ನಮ್ಮ ಕೈಯೊಳಗಿದ್ದ ಮಾಹಿತಿಗಳನ್ನು ಅವರು ತಮ್ಮ ವಿಶಿಷ್ಟ ಪ್ರತಿಭೆಯಿಂದ
ಹೊಸದುಗೊಳಿಸುತ್ತಿದ್ದರು. ಭಕ್ತಿ ಪರಂಪರೆ ಹಾಗೂ ಜಾನಪದ ಪರಂಪರೆಗೆ ಅವರು ಮಾರು ಹೋಗಿದ್ದರು. ಸ್ವತ: ಒಳ್ಳೆಯ ಕವಿ, ಕತೆಗಾರ, ಮತ್ತು ಅನುವಾದಕ. ಕನ್ನಡದಲ್ಲಿ ನವ್ಯ ಕಾವ್ಯ ಕಾಣಿಸಿಕೊಳ್ಳುತ್ತಿದ್ದ ಕಾಲದಲ್ಲಿ
ಆಶ್ಚರ್ಯಕರವಾಗಿ ಗಾದೆಗಳು ( 1955) ಎಂಬ ಹೆಸರಿನ ತಮ್ಮ
ಪುಟ್ಟ ಕೃತಿಯನ್ನು ಪ್ರಕಟಿಸಿದರು. ಇದರಲ್ಲಿ
ಗಾದೆಯ ರೂಪರಚನೆಯನ್ನು ಅವರು ನವ್ಯ ವಿಮರ್ಶಕನ ಮಾದರಿಯಲ್ಲಿಯೇ ನಡೆಸಿದರು. ಕರ್ನಾಟಕದಲ್ಲಿ ಜಾನಪದ ಅಧ್ಯಯನದ ಬಗ್ಗೆ ವೈಜ್ಞಾನಿಕ
ಮನೋಭಾವ ಅಷ್ಟಾಗಿ ಕಾಣಿಸಿಕೊಂಡಿರದ ಸಮಯದಲ್ಲಿ ಈ ಕೃತಿ ಪ್ರಕಟವಾಗಿ ಅನೇಕರ ಗಮನ ಸೆಳೆದದ್ದು
ಸಹಜವೇ ಆಗಿತ್ತು. ಇಂದಿಗೂ ಗಾದೆಗಳನ್ನು ಕುರಿತ
ಅಧ್ಯಯನಕ್ಕೆ ಈ ಕೃತಿ ಒಂದು ಉತ್ತಮ ಕೈಪಿಡಿ.
ರಾಮಾನುಜನ್ ಒಬ್ಬ ಶ್ರೇಷ್ಠ
ಭಾಷಾಂತರಕಾರರು. ಇವರ ಭಾಷಾಂತರಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ. ಅನುವಾದ ಕ್ಷೇತ್ರದಲ್ಲಿ
ತಮಿಳು ಮತ್ತು ಕನ್ನಡದಿಂದ ಇವರು ಭಾಷಾಂತರಿಸಿದ್ದೇ ಹೆಚ್ಚು. ದಿ ಇಂಟೀರಿಯರ್ ಲ್ಯಾಂಡ್ ಸ್ಕೇಪ್
(1970) ಪ್ರಾಚೀನ ತಮಿಳು ಸಂಗಂ ಸಾಹಿತ್ಯದಿಂದ ಆಯ್ದ ಭಾಗಗಳ ಅನುವಾದ. ಸ್ಪೀಕಿಂಗ್ ಆಫ್ ಶಿವ
(1973) ಹನ್ನೆರಡನೆಯ ಶತಮಾನದ ಪ್ರಮುಖ ವಚನಕಾರರಿಂದ ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು,
ಅಕ್ಕಮಹಾದೇವಿ-ಇವರ ಆಯ್ದ ವಚನಗಳ ಭಾಷಾಂತರ. ಸಾಂಗ್ ಆಫ್ ಅರ್ತ್ ಅಂಡ್ ಅದರ್ ಪೊಯಮ್ಸ್ (1968)
ಎಂ. ಜಿ. ಕೃಷ್ಣಮೂರ್ತಿ ಅವರೊಡಗೂಡಿ ಗೋಪಾಲಕೃಷ್ಣ ಅಡಿಗರ ಕೆಲವು ಕವನಗಳ ಭಾಷಾಂತರ. ಹಿಮ್ಸ್ ಫಾರ್ ದಿ ಡ್ರೋವಿಂಗ್ ಎಂಬುದು ನಮ್ಮಾಳ್ವಾರ್
ಅವರ ಕೆಲವು ಕೃತಿಗಳ ಅನುವಾದ. ಪೊಯಮ್ಸ್ ಆಫ್ ಲವ್ ಅಂಡ್ ವಾರ್ ತಮಿಳಿನ
ಜನಪದ ಪ್ರಣಯ ಗೀತಗಳ ಅನುವಾದ. ಕನ್ನಡದ ಮಹತ್ವದ ಲೇಖಕನಾಗಿರುವ ಅವರು, ‘ಹೊಕ್ಕುಳಲ್ಲಿ’ ಹೂವಿಲ್ಲ
‘ಮತ್ತು ಇತರ ಕವಿತೆಗಳು’ ಹಾಗೂ ಕುಂಟೋಬಿಲ್ಲೆ ಎಂಬ ಹೆಸರಿನ ಕವನ ಸಂಕಲನಗಳನ್ನೂ, ಮತ್ತೊಬ್ಬನ ಆತ್ಮಚರಿತ್ರೆ ಎಂಬ
ಕಾದಂಬರಿಯನ್ನೂ ಬರೆದಿದ್ದಾರೆ. ಹೆಚ್ಚು ಸಣ್ಣ ಕತೆಗಳನ್ನು ಅವರು ಬರೆದಿಲ್ಲವಾದರೂ, ಬರೆದಿರುವ ಅಣ್ಣಯ್ಯನ
ಮಾನವ ಶಾಸ್ತ್ರ ಎಂಬ ಕತೆಯು ಕನ್ನಡದ ಶ್ರೇಷ್ಠ ಕತೆಗಳಲ್ಲಿ ಒಂದು ಎಂಬ ಮನ್ನಣೆಗೆ ಪಾತ್ರವಾಗಿದೆ.
ಅಮೇರಿಕಾದಲ್ಲಿ
ಬಹಳ ವರ್ಷಗಳ ಕಾಲ ಬದುಕಿದ್ದ ಎ ಕೆ ರಾಮಾನುಜನ ಅವರು ತಮ್ಮ ನಗರ ಜೀವನದ ಆಧುನಿಕ ಅನುಭವಗಳನ್ನು
ಹೇಳಲು ಸೃಜನಶೀಲ ಸಾಹಿತ್ಯವನ್ನು ಆಶ್ರಯಿಸಿದರೆ, ಆಧುನಿಕ ಪೂರ್ವದ ಅನುಭವಗಳನ್ನು ಗುರುತಿಸಲು
ಜಾನಪದವನ್ನು ಅಪ್ಪಿಕೊಳ್ಳುತ್ತಿದ್ದರು.
ಭಾರತೀಯ
ಜಾನಪದವು ಅಲ್ಲಿನ ಶಿಷ್ಟ ನಿರೂಪಣೆಗಳಿಗಿಂತ
ತುಂಬಾ ಭಿನ್ನ ಎಂಬುದನ್ನು ರಾಮನ್ ಮತ್ತೆ ಮತ್ತೆ ಹೇಳುತ್ತಿದ್ದರು. ವಸಾಹತು ಕಾಲಘಟ್ಟದಲ್ಲಿ
ರೂಪಿಸಿಕೊಂಡ ಅಧ್ಯಯನ ವಿಧಾನಗಳನ್ನು ನಾವು ಕಷ್ಟ ಪಟ್ಟು ತಿರಸ್ಕರಿಸಿದೇ ಹೋದರೆ, ನಮಗೆ ನಮ್ಮ ದೇಶ
ಅರ್ಥವಾಗುವುದಿಲ್ಲ ಎಂದು ಗಟ್ಟಿಯಾಗಿ ನಂಬಿದ್ದ ಅವರು ಆ ಗ್ರಹಿಕೆಗಳನ್ನು ವಿವರಿಸಲು ಜಾನಪದದಿಂದ
ಉದಾಹರಣೆಗಳನ್ನು ಆಯ್ದುಕೊಂಡು ವಿಶ್ಲೇಷಿಸುತ್ತಿದ್ದರು. ಒಂದು ನಿರ್ದಿಷ್ಟ ಪಠ್ಯವನ್ನು ಇಡೀ
ಕರ್ನಾಟಕ ತನ್ನ ಪ್ರಾದೇಶಿಕ ಅಗತ್ಯಗಳಿಗಾಗಿ ಹೇಗೆ ಪುನಾರಚಿಸಿಕೊಂಡಿದೆ ಎಂಬುದರ ಕುರಿತು ಅವರಿಗೆ
ಅತೀವ ಆಸಕ್ತಿ ಇತ್ತು. 19ನೇ ಶತಮಾನದ ವಿದೇಶೀ
ವಿದ್ವಾಂಸರಿಗೆ ಕರ್ನಾಟಕದಲ್ಲಿ ಅನೇಕ ಸಂಶೋಧನಾ ಸಹಾಯಕರಿದ್ದರು.ಈ ಸಂಶೋಧನಾ ಸಹಾಯಕರು ವಿದೇಶೀ
ವಿದ್ವಾಂಸರ ಕೆಲಸಗಳ ಮೇಲೆ ಬೀರಿರಬಹುದಾದ ಪರಿಣಾಮಗಳ ಬಗ್ಗೆಯೂ ಅವರು ಸೂಕ್ಷ್ಮವಾಗಿ
ಯೋಚಿಸುತ್ತಿದ್ದರು. ಬ್ರಾಹ್ಮಣರು ಹೊಸಕಾಲದ ಅಗತ್ಯಗಳಿಗೆ ತಮ್ಮನ್ನು ತೆರೆದು ಕೊಳ್ಳುವಷ್ಟು
ಬುದ್ಧಿವಂತರಾಗಿದ್ದುದರಿಂದ ಈ ನಿರೂಪಕರುಗಳು
ಬಹುಮಟ್ಟಿಗೆ ಬ್ರಾಹ್ಮಣರಾಗಿದ್ದುದು ಚಾರಿತ್ರಿಕವಾಗಿ ಅನಿವಾರ್ಯವಾಗಿತ್ತು. 1783ರಿಂದ 1820ರವರೆಗಣ
ಅವಧಿಯಲ್ಲಿ ಕೆಲಸ ಮಾಡಿದ ಕರ್ನಲ್ ಮೆಕೆಂಜಿಯ ಸಹಾಯಕರಾಗಿದ್ದ ಪುಲಿಗಡ್ಡ ಮಲ್ಲಯ್ಯ, ವೆಂಕಟ ರಾವ್,
ನಾರಾಯಣ ರಾವ್, ವಿಠ್ಠಲ ರಾವ್, ಬಾಬೂ ರಾವ್, ಆನಂದ ರಾವ್, ಕಾವಲಿ ವೆಂಕಟಬೋರಯ್ಯ, ವೆಂಕಟ
ಲಕ್ಷ್ಮಯ್ಯ, ವೆಂಕಟರಾಮಸ್ವಾಮಿ- ಎಲ್ಲರೂ ಬ್ರಾಹ್ಮಣರಾಗಿದ್ದರು. ಈ ವಿದೇಶೀ ಮತ್ತು ಬ್ರಾಹ್ಮಣ ಸಂಯೋಜನೆಯು ಪಠ್ಯಗಳನ್ನು
ಓದಿದ, ಪರಿಷ್ಕರಿಸಿದ, ಸಂಯೋಜಿಸಿದ ಕ್ರಮಗಳನ್ನು ರಾಮನ್ ಅದ್ಭುತವಾಗಿ ವಿವರಿಸುತ್ತಿದ್ದರು. ವಸ್ತು, ಅದರ ನಿರ್ವಹಣೆ, ಭಾರತೀಯ ಜಾತಿ ಸಮಾಜದ
ಹುಳುಕುಗಳು ಜಾನಪದದಲ್ಲಿ ಹೊರಬರುವ ಬಗೆ, ಮೌಖಿಕ ಮತ್ತು ಲಿಖಿತ ನಿರೂಪಣೆಗಳ ನಡುವಣ ಸಂಬಂಧ,
ಇತ್ಯಾದಿಗಳ ಬಗೆಗೆ ಅವರು ನಿರ್ಣಾಯಕ ನ್ನುವ ಮಾತುಗಳನ್ನು ಹೇಳುತ್ತಿದ್ದರು. ನಮ್ಮ
ಮಾನವಿಕಗಳಲ್ಲಿ, ವಿಚಾರಸಂಕಿರಣಗಳಲ್ಲಿ, ಬೌದ್ಧಿಕ ಚರ್ಚೆಗಳಲ್ಲಿ ಜಾನಪದಕ್ಕೆ ಸಿಗಬೇಕಾದಷ್ಟು ಮನ್ನಣೆ ದೊರಕದ ಬಗ್ಗೆಯೂ
ಅವರು ವಿಷಾದ ವ್ಯಕ್ತ ಪಡಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ರಾಮಾನುಜನ್ ಅವರು ಮೌಖಿಕ ಪರಂಪರೆಯ
ನಿರೂಪಣೆಗಳಿಗೆ ಕಿವಿಗೊಟ್ಟ ಬಗೆಯನ್ನು ನಾವು ಗಂಭೀರವಾಗಿ ಅಭ್ಯಸಿಸಬೇಕಾಗಿದೆ. ಇದಕ್ಕೆ
ಉದಾಹರಣೆಯಾಗಿ ಪ್ರಸ್ತುತ ಲೇಖನದಲ್ಲಿ ಅವರ ಒಂದು ಪುಸ್ತಕವನ್ನು ಮಾತ್ರ ವಿಶ್ಲೇ಼ಷಣೆಗೆ ಎತ್ತಿಕೊಳ್ಳಲಾಗಿದೆ.
ಫೋಕ್ ಟೈಲ್ಸ್‍ಫ್ರಂ ಇಂಡಿಯಾ ಎಂಬುದು ಭಾರತದ
ಬೇರೆ ಬೇರೆ ಭಾಷೆಗಳ ಐವತ್ತು ಜನಪದ ಕಥೆಗಳನ್ನು ಅನುವಾದಿಸಿ ಭಾರತೀಯ ಸಾಹಿತ್ಯದ ಮತ್ತೊಂದು ಸ್ವರೂಪವನ್ನು
ಪಾಶ್ಚಾತ್ಯರಿಗೆ ತಿಳಿಸಿಕೊಟ್ಟಿರುವಂಥ ಕೃತಿ. ಈ ಪುಸ್ತಕದ ಕುರಿತಾದ ಪ್ರಸ್ತುತ ಪ್ರಬಂಧದಲ್ಲಿ ಈ ಕೆಳಗೆ
ಸೂಚಿಸಿದ ಐದು ಪ್ರಮುಖ ಅಂಶಗಳ ಕುರಿತು ಚರ್ಚೆ ನಡೆಸಲಾಗಿದೆ.
1. ಕತೆಗಳ
ಆಯ್ಕೆ
2. ಕೃತಿಯ
ಶೀರ್ಷಿಕೆ
3. ವರ್ಗ
ಸೂಚಿ
4. ಅನುವಾದ
ಮತ್ತು
5. ಸಾಂಸ್ಕೃತಿಕ
ಮಹತ್ವ.
ಕತೆಗಳ ಆಯ್ಕೆ:
ಎ ಕೆ ರಾಮಾನುಜನ್ ಅವರ ‘ಫೋಕ್ ಟೇಲ್ಸ್ ಫ್ರಂ
ಇಂಡಿಯಾ’ ಕೃತಿಯು
ಭಾರತದ 22 ಭಾಷೆಗಳಿಂದ ಆಯ್ದ 102 ಜನಪದ ಕತೆಗಳ ಸಂಕಲನ
(ಪೆಂಗ್ವಿನ್, 1991). ಇಲ್ಲಿ ಒಳಗೊಂಡಿರುವ ಭಾರತೀಯ ಭಾಷೆಗಳೆಂದರೆ –
1. ತಮಿಳು- 11 ಕತೆಗಳು
2. ಗೊಂಡಿ- ಒಂದು ಕತೆ
3. ಬಂಗಾಳಿ-
15 ಕತೆಗಳು
4. ಪಂಜಾಬಿ-
ಆರು ಕತೆಗಳು
5. ಒರಿಯಾ-
ನಾಲ್ಕು ಕತೆಗಳು
6. ಕನ್ನಡ
– 11 ಕತೆಗಳು
7. ತೆಲುಗು-
ಏಳು ಕತೆಗಳು
8. ಕಾಶ್ಮೀರಿ-
ಐದು ಕತೆಗಳು
9. ಸಂತಾಲಿ-
ಐದು ಕತೆಗಳು
10. ಉರ್ದು-
ಎಂಟು ಕತೆಗಳು
11. ಅಸ್ಸಾಮಿ- ಮೂರು ಕತೆಗಳು
12. ಗುಜರಾತಿ-
ನಾಲ್ಕು ಕತೆಗಳು
13. ತುಳು-
ಮೂರು ಕತೆಗಳು
14. ದಿದಾಯಿ- ಒಂದು ಕತೆ
15. ಕೊಂಕಣಿ-
ಒಂದು ಕತೆ
16. ಮಲೆಯಾಳಂ-
ಎರಡು ಕತೆಗಳು
17. ಮರಾಠಿ-
ಐದು ಕತೆಗಳು
18. ಅಂಗಾಮಿ
ನಾಗ- ಒಂದು ಕತೆ
19. ಹಿಂದಿ
( ಕುಮಾವ್ನಿ-1, ರಾಜಸ್ಥಾನಿ-2 ಸೇರಿ) - ಐದು ಕತೆಗಳು
20. ಮಾಳ್ವ
( ಮಾರ್ವಾರಿ) – ಒಂದು ಕತೆ
21. ಸಿಂಧಿ- ಒಂದು ಕತೆ
22. ಕೋಟ- ಒಂದು ಕತೆ
ಇವಲ್ಲದೆ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ
ಸಮಾನವಾಗಿ ದೊರೆಯುವ ಆರು ಕತೆಗಳು ಕೂಡಾ ಸಂಕಲನದಲ್ಲಿದೆ.
ಈ ಪಟ್ಟಿಯಲ್ಲಿ ಬಹುತೇಕವಾಗಿ ಭಾರತದ ಮುಖ್ಯ
ಭಾಷೆಗಳೆಲ್ಲಾ ಸೇರ್ಪಡೆಯಾಗಿದ್ದರೂ, ಡೋಗ್ರಿ, ಬುಂದೇಲಿ,
ಅವಧಿ, ಗರವಾಲಿ, ಮಣಿಪುರಿ, ಭೊಜಪುರಿ, ಮೈಥಿಲಿ, ಬೋಡೋ, ಕುರುಕ್, ಖಾಸೀ, ಮೊದಲಾದ
ಕೆಲವು ಮುಖ್ಯ ಭಾಷೆಗಳ ಕತೆಗಳು ಕಾಣೆಯಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುವ ವಿಚಾರವಾಗಿದೆ. ರಾಮಾನುಜನ್ ಈ ಕತೆಗಳನ್ನು ಸಂಕಲಿಸುವ ಹೊತ್ತಿಗೆ ಈ ಭಾಷೆಗಳಲ್ಲಿ
ಸಾಕಷ್ಟು ಕತೆಗಳ ಸಂಗ್ರಹವಾಗಿದ್ದರೂ ಅವು ಯಾಕೆ ರಾಮಾನುಜನ್ ಕಣ್ಣಿಗೆ ಬೀಳಲಿಲ್ಲ ಎಂದು ಹೇಳಲು ಈಗ ಸಾಧ್ಯವಾಗುತ್ತಿಲ್ಲ. ಹಾಗೆಯೇ ತಮಿಳು, ಕನ್ನಡ
ಮತ್ತು ಬಾಂಗ್ಲಾ ಕತೆಗಳು ಇಲ್ಲಿ ಹೆಚ್ಚು ಸ್ಥಾನ ಗಳಿಸಿವೆ. ಕನ್ನಡ ಮತ್ತು ತಮಿಳು ರಾಮಾನುಜನ್ ಅವರ
ಆಪ್ತ ಭಾಷೆಗಳಾಗಿರುವುದು, ಮತ್ತು ಬಾಂಗ್ಲಾ ಭಾಷೆಯು ವಿದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಅಮೆರಿಕಾದಲ್ಲಿ ಹೆಚ್ಚು ಪರಿಚಿತ ಭಾಷೆಯಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿರಬೇಕು.
ಪುಸ್ತಕದ ಶೀರ್ಷಿಕೆ :
‘ಫೋಕ್
ಟೇಲ್ಸ್ ಫ್ರಂ ಇಂಡಿಯಾ’ ಎಂಬ
ಶೀರ್ಷಿಕೆಯನ್ನು ಈ ಪುಸ್ತಕಕ್ಕೆ ರಾಮಾನುಜನ್ ಅವರು ನೀಡಿದಾಗ, ಅವರು ಅದರ ಬಗ್ಗೆ ತುಂಬ ಗಂಭೀರವಾಗಿ
ಯೋಚಿಸಿದ್ದರು ಎಂದು ಊಹಿಸಲು ಸಾಧ್ಯವಿದೆ. ಏಕೆಂದರೆ
ಈ ಕೃತಿಗೂ ಮುನ್ನ ಪ್ರಕಟವಾದ ಕೆಲವು ಕೃತಿಗಳ ಶೀರ್ಷಿಕೆಗಳಾದ ‘ ದಿ ಓರಲ್ ಟೇಲ್ಸ್ ಆಫ್ ಇಂಡಿಯಾ, ಫೋಕ್
ಟೇಲ್ಸ್ ಆಫ್ ಮಹಾಕೋಶಲ್( ವೆರಿಯರ್ ಎಲ್ವಿನ್ 1944),ಇಂಡಿಯನ್ ಫೇಬಲ್ಸ್ ( ರಾಮರಾಜು
1887), ಟೇಲ್ಸ್ ಆಫ್ ಪಂಜಾಬ್ ( ಫ್ಲೋರಾ ಎನ್ನೀ ಸ್ಟೀಲ್
1894), ಇಂಡಿಯನ್ ಫೋಕ್ ಟೇಲ್ಸ್ ( ನಟೇಶ ಶಾಸ್ತ್ರಿ 1908), ಫೋಕ್ ಲೋರ್ ಆಫ್ ಮಧ್ಯಪ್ರದೇಶ್ ( ಶ್ಯಾಮ್
ಪರ್ಮಾರ್ 1972), ಫೋಕ್ ಟೇಲ್ಸ್ ಆಫ್ ಬೆಂಗಾಲ್,ಇಂಡಿಯನ್ ಫೋಕ್ ಲೋರ್ ( ರಾಮ್ ಸತ್ಯ ಮುಖರ್ಜಿ
1904), ಫೋಕ್ ಟೇಲ್ಸ್ ಆಫ್ ಕಾಶ್ಮೀರ್( ಹಿಂಟೊನ್
1883), ಫೋಕ್ ಲೋರ್ ಆಫ್ ದಿ ಸಂತಾಲ್ ಪರಗಣ ( ಬೊಂಪಾಸ್ 1909), ಫೋಕ್ ಟೇಲ್ಸ್ ಆಫ್ ಅಸ್ಸಾಂ ( ಜೆ
ಬರುವಾ 19915), ಫೋಕ್ ಟೇಲ್ಸ್ ಆಫ್ ಇಂಡಿಯಾ ( ಬ್ರೆಂಡಾ ಬೆಕ್ ಮತ್ತು ಇತರರು, 1985) ಮೊದಲಾದ ಕೃತಿಗಳನ್ನು ರಾಮಾನುಜನ್ ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ.
ಈ ಸಂಕಲನಗಳ ಶೀರ್ಷಿಕೆಗಳಲ್ಲಿ ಬಹುತೇಕವಾಗಿ ಕಂಡು ಬರುವ ‘ ಆಫ್‘ ಪದವು ಭಾರತದ, ಅಸ್ಸಾಮಿನ, ಕಾಶ್ಮೀರದ, ಸಂತಾಲ್ ಪರಗಣದ, ಮಧ್ಯಪ್ರದೇಶದ ಎಂಬರ್ಥದಲ್ಲಿ ಸಂಬಂಧವಾಚಕವಾಗಿ ಬಳಕೆಯಾಗಿದೆ. ಆದರೆ ರಾಮಾನುಜನ್ ಅವರು ಈ ಅರ್ಥದಲ್ಲಿ ಶೀರ್ಷಿಕೆಯನ್ನು
ಬಳಸದೆ ‘ ಫ್ರಂ ( ಇಂದ) ಎಂಬ ಪದವನ್ನು ಬಳಸಿದ್ದಾರೆ. ಹೀಗಂದಾಗ, ಅದು ‘ಭಾರತದಿಂದ ಸಂಗ್ರಹಿಸಿದ ಜನಪದ ಕತೆಗಳು’ ಎಂದು ಅರ್ಥವಾಗುತ್ತದೆಯೇ ವಿನಾ ಅವು ‘ಭಾರತದ
ಕತೆಗಳು’ ಎಂಬ
ಅರ್ಥವನ್ನು ಕೊಡುವುದಿಲ್ಲ. ಈ ಪುಸ್ತಕವನ್ನು ಕನ್ನಡಕ್ಕೆ
ಅನುವಾದ ಮಾಡಿರುವ ಶ್ರೀ ಮಹಾಬಲೇಶ್ವರ ರಾವ್ ಅವರು ಇದನ್ನು ‘ಭಾರತೀಯ ಜನಪದ ಕತೆಗಳು’ ಎಂದು ಕರೆದಿದ್ದಾರೆ ( ಮಹಾಬಲೇಶ್ವರ ರಾವ್
2015). ಈ ಅನುವಾದವೂ ತಪ್ಪೇ ಆಗುತ್ತದೆ ಏಕೆಂದರೆ ‘ಫ್ರಮ್ ಇಂಡಿಯಾ’ ಅಂದಾಗ ಅದಕ್ಕೆ ‘ಭಾರತೀಯ’ ಎಂಬರ್ಥವೇನೂ ಬರುವುದಿಲ್ಲ. ಭಾರತೀಯ ಎಂದಾಗಬೇಕಾದರೆ ಮೂಲದಲ್ಲಿ ‘ಇಂಡಿಯನ್’ ಎಂದಿರಬೇಕಿತ್ತು. ಸಂತೋಷದ ಸಂಗತಿ ಎಂದರೆ ಮಹಾಬಲೇಶ್ವರ
ರಾವ್ ಅವರಿಗೆ ಈ ಕುರಿತು ತಿಳುವಳಿಕೆ ಇದ್ದದ್ದು. ಅವರ ಮಾತುಗಳು-‘ ಎ ಕೆ ರಾಮಾನುಜನ್ ಅವರು ‘ಫೋಕ್
ಟೇಲ್ಸ್ ಫ್ರಂ ಇಂಡಿಯಾ ‘ ಎಂದು ತಮ್ಮ ಗ್ರಂಥಕ್ಕೆ ಹೆಸರಿಟ್ಟಿದ್ದಾರೆ, ಫೋಕ್ ಟೇಲ್ಸ್ ಆಫ್ ಇಂಡಿಯಾ
ಎಂದಲ್ಲ. ಆದರೆ ಇದರ ಯಥಾವತ್ತಾದ ಮೂಲ ಭಾವವನ್ನು ಹಿಡಿದಿಡುವ ಅನುವಾದ ಕಷ್ಟ ಸಾಧ್ಯ. ಕೆ ನರಸಿಂಹ ಮೂರ್ತಿಯವರು
‘ಭಾರತದಿಂದಾಯ್ದ ಜನಪದ ಕತೆಗಳು’
ಎಂದು
ಇದನ್ನು ಹೆಸರಿಸಿದ್ದುಂಟು. ( ನೋಡಿ: ಎ ಕೆ ರಾಮಾನುಜನ್ ನೆನಪಿನ ಸಂಪುಟ, ಸಂ. ಟಿ ಪಿ ಅಶೋಕ, ಕರ್ನಾಟಕ
ಸಂಘ; ಪುತ್ತೂರು 1993) . ನಾನು ಭಾರತೀಯ ಜನಪದ ಕತೆಗಳು ಎಂಬ ಶೀರ್ಷಿಕೆ ಕೊಟ್ಟಿದ್ದೇನೆ. ಮೂಲಾರ್ಥವನ್ನು
ಇದು ಸಂಪೂರ್ಣವಾಗಿ ಬಿಂಬಿಸಲಾರದೆಂಬ ಅರಿವು ನನಗಿದೆ ( 2015, ಪುಟ 42 ).
ಈ ವಿಷಯವನ್ನು ಇಷ್ಟು ದೀರ್ಘವಾಗಿ ಚರ್ಚಿಸಲು
ಕಾರಣವೆಂದರೆ, ಈ ಶೀರ್ಷಿಕೆಯು ಎ ಕೆ ರಾಮಾನುಜನ್ ಅವರು ಜನಪದ ಕತೆಗಳ ಬಗೆಗೆ ಹೊಂದಿದ್ದ ಅಂತಾರಾಷ್ಟ್ರೀಯ
ತಿಳುವಳಿಕೆಯನ್ನು ಸ್ಥೂಲವಾಗಿ ಸಂಕೇತಿಸುತ್ತದೆ. ಇವು ಭಾರತದ್ದೇ ಆದ ಕತೆಗಳು ಎಂದು ಅವರು ಭಾವಿಸಿದ್ದರೆ, ಅವರು ಈ ಪುಸ್ತಕಕ್ಕೆ ಇಂಡಿಯನ್ ಫೋಕ್ ಟೇಲ್ಸ್ ಅಥವಾ ಫೋಕ್
ಟೇಲ್ಸ್ ಆಫ್ ಇಂಡಿಯಾ ಎಂದು ಹೆಸರಿಡುತ್ತಿದ್ದರು.
ರಾಮಾನುಜನ್ ಅವರು ಈ ಕತೆಗಳನ್ನು ಸಂಕಲಿಸುತ್ತಿರುವ
ಹೊತ್ತಿಗೆ ಜನಪದ ಕತೆಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ವರ್ಗ ಸೂಚಿ ಮತ್ತು ಆಶಯಸೂಚಿಗಳ ಬಗ್ಗೆ ಸಾಕಷ್ಟು
ಚರ್ಚೆ ನಡೆಯುತ್ತಿತ್ತು. ಜನಪದ ಕತೆಗಳು ಯಾವುದೇ ಒಂದು ದೇಶದ ಸೊತ್ತಾಗದೆ, ಅವು ಜಗತ್ತಿನಾದ್ಯಂತ ಹರಡಿಕೊಂಡಿರುವುದನ್ನು
ಫಿನ್ಲೆಂಡಿನ ಆಂಟಿ ಆರ್ನೆ ಮತ್ತು ಅಮೇರಿಕಾದ ಸ್ಟಿಥ್ ಥಾಂಸನ್ ( ಂಟಿಣi ಂಡಿಟಿe ಚಿಟಿಜ Sಣiಣh ಖಿhomಠಿsoಟಿ,
1928) ಅವರು ತಮ್ಮ ಪ್ರಸಿದ್ಧವಾದ ವರ್ಗ ಮತ್ತು
ಆಶಯ ಸೂಚಿಯಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ. ಈ ವಾದ ಹುಟ್ಟಿಕೊಂಡ ಆನಂತರ ಥಿಯೋಡರ್ ಬೆನ್ಫೆ ಮೊದಲಾದವರು
( ವಿವರಗಳಿಗೆ ನೋಡಿ: ನ್ಯೂವೆಲ್ 1985) ವಾದಿಸಿದ ಕತೆಗಳ ಭಾರತ ಮೂಲ ಸಿದ್ಧಾಂತ ಬಿದ್ದು ಹೋಯಿತು. ಉದಾಹರಣೆಗೆ ಆರ್ನೆ ಥಾಂಪ್ಸನ್ ( ಎಟಿ ) ವರ್ಗ ಸೂಚಿಯು
ಕ್ರೂರ ಪ್ರಾಣಿ ಕತೆಗಳನ್ನು ( Wiಟಜ ಚಿಟಿimಚಿಟs)
ಸಂಖ್ಯೆ ಒಂದರಿಂದ 99ರ ವರೆಗೆ ಹಿಡಿದಿಡುತ್ತದೆ. ಅದರಲ್ಲಿ ಮತ್ತೆ ಒಂದರಿಂದ 69ರ ವರೆಗೆ ಜಾಣ
ನರಿ ಕತೆಯನ್ನೂ, 70ರಿಂದ 99ರವರೆಗೆ ಇತರ ಪ್ರಾಣಿಗಳನ್ಣೂ ಸೇರಿಸುತ್ತದೆ. ಹಾಗೆಯೇ ಸಾಕು ಪ್ರಾಣಿಗಳನ್ನು
200ರಿಂದ 219ರ ವರೆಗೆ ಸೇರಿಸುತ್ತದೆ. ಇದರಲ್ಲಿ ಮತ್ತೆ ಕುರಿ, ಕೋಳಿ ಮತ್ತು ಬಾತು ಕೋಳಿಯನ್ನು
204ರಲ್ಲಿ ಗುರುತಿಸಲಾಗಿದೆ. ತಮ್ಮ ಸಂಕಲನದ ಕೊನೆಯಲ್ಲಿ ರಾಮಾನುಜನ್ ನೀಡಿದ ಟಿಪ್ಪಣಿಯಲ್ಲಿ ಅವರು
ಹೀಗೆ ಬರೆಯುತ್ತಾರೆ-‘ ಕತೆಯ ನಿರ್ದಿಷ್ಟ ವರ್ಗ, ಅದರ
ಬಗೆಗಿನ ಮಾಹಿತಿಗಳು ಭಾರತದ ಅಥವಾ ಜಗತ್ತಿನ ಯಾವ ಭಾಗಗಳಲ್ಲಿ ಈ ಕತೆಗಳ ಬೇರೆ ಬೇರೆ ಪಾಠಾಂತರಗಳು ಪ್ರಚಲಿತದಲ್ಲಿವೆ
ಎಂಬುದು ಈ ಸೂಚಿಗಳನ್ನು ಗಮನಿಸುವ ಓರ್ವ ಕುತೂಹಲಿ ಓದುಗನಿಗೆ ತಿಳಿದು ಬರುತ್ತದೆ. ಉದಾಹರಣೆಗೆ ಈ ಕೃತಿಯ
ಕೊನೆಯಲ್ಲಿ ಬರುವ ‘ಆ ಮೇಲೆ ಪುರ್ರನೆ ಹಾರಿ ಹೋಯಿತು’ ಕತೆಯನ್ನು ಎ ಟಿ 2300 ‘ಅಂತ್ಯವಿಲ್ಲದ ಕತೆಗಳು’ ಎಂದು ಗುರುತಿಸಲಾಗಿದೆ. ಸ್ಟಿತ್ ಥಾಮ್ಸನ್ ಮತ್ತು
ವ್ಯಾರೆನ್ ರಾಬಟ್ಸ್ ಅವರ ಟೈಪ್ಸ್ ಆಫ್ ಇಂಡಿಕ್ ಓರಲ್ ಟೇಲ್ಸ್ ( ಹೆಲ್ಸಿಂಕಿ 1960) ಗ್ರಂಥವನ್ನು
ಪರಿಶೀಲಿಸಿದಾಗ ಇಂಥದ್ದೇ ಕತೆಗಳನ್ನು ಮರಾಠಿಯಲ್ಲಿ ಮಾನ್ ವಾರಿಂಗ್ ( ಅವರ್ ಟೇಲ್), ಹಿಂದಿಯಲ್ಲಿ
ಕ್ರೂಕ್ ( ನಾರ್ತ್ ಇಂಡಿಯನ್ ನೋಟ್ಸ್ ಅಂಡ್ ಕ್ವೆಯಿರೀಸ್ 1885) ಅವರು ಸಂಗ್ರಹಿಸಿದ್ದಾರೆ ಎಂಬುದು
ಗಮನಕ್ಕೆ ಬರುತ್ತದೆ.( 2015: ಪುಟ: 386) ಹೀಗೆ ಹೇಳುವುದರ ಮೂಲಕ ರಾಮಾನುಜನ್ ಅವರು ಭಾರತದಲ್ಲಿ ಒಂದು
ನಿರ್ದಿಷ್ಟ ಕತೆಯು ಅನೇಕ ಭಾಷೆಗಳಲ್ಲಿ ದೊರೆಯುತ್ತವೆ ಎಂಬುದನ್ನು ಸಾಕ್ಷ್ಯಾಧಾರ ಸಮೇತ ವಿವರಿಸುತ್ತಾರೆ. ಮುಂದೆ ಅವರು ಇದನ್ನು ಮತ್ತೆ ಬೆಳೆಸಿ ಒಂದು ದೇಶದಲ್ಲಿ ದೊರೆಯುವ
ಕತೆಯು ಇನ್ನೂ ಅನೇಕ ದೇಶಗಳಲ್ಲಿ ದೊರೆಯುತ್ತವೆ ಎಂಬುದನ್ನು ಸಾಬೀತು ಮಾಡುತ್ತಾರೆ. ಉದಾಹರಣೆಗೆ ಅವರು
ಮದುಮಗನನ್ನು ಕೊಂದ ಹುಲಿ ಕತೆಗೆ ಬರೆದ ಟಿಪ್ಪಣಿಯನ್ನು ಗಮನಿಸಬಹುದು-‘ ಈ ಕತೆಯು ಎ ಟಿ 934 ಬಿ. ತನ್ನ
ಮದುವೆ ದಿನ ಸಾಯಬೇಕಾದ ತರುಣ. ಅದೃಷ್ಟ ಮತ್ತು ಪ್ರವಾದಿತ್ವದ ಬಗೆಗೆ ಈ ಕತೆ ಮತ್ತು ಇದರ ಮುಂದಿನ ಕತೆ
ತದ್ವಿರುದ್ಧ ಮನೋಭಾವಗಳನ್ನು ಪ್ರಕಟಪಡಿಸುತ್ತದೆ. ಈ ಕತಾ ಮಾದರಿಗೆ ಅಂತಾರಾಷ್ಟ್ರೀಯ ಪಾಠಾಂತರಗಳಿವೆ.
ಅಂದರೆ ಕೆಟಲಾನ್, ಜೆಕ್ ಫಿನ್ನಿಶ್, ಗ್ರೀಕ್, ಹಂಗೇರಿಯನ್, ಐರಿಷ್ ಮತ್ತು ಸ್ವೀಡಿಶ್ ಹೀಗೆ ಹಲವು
ರೂಪಗಳಿವೆ ( 2015: 397). ಹೀಗೆ ಒಂದು ಕತೆಯು ಖಂಡಾಂತರಗಳನ್ನು ದಾಟಿ ಮರು ಸೃಷ್ಟಿ ಹೊಂದುತ್ತಾ,
ಸಾಗುತ್ತಲೇ ಇರುವುದರಿಂದ ಈ ಕತೆಗಳನ್ನು ನಿರ್ದಿಷ್ಟ ದೇಶವೊಂದಕ್ಕೆ ನಿಗದಿ ಪಡಿಸಿವುದು ಕಷ್ಟದ ವಿಷಯ.
ಈ ಹಿನ್ನೆಲೆಯಲ್ಲಿಯೇ ರಾಮಾನುಜನ್ ಅವರು ಫೊಕ್ ಟೇಲ್ಸ್ ಫ್ರಂ ಇಂಡಿಯಾ ಎಂದು ಹೆಸರಿಟ್ಟಿರಬೇಕು. ‘ದಿ ಓರಲ್ ಟೇಲ್ಸ್ ಆಫ್ ಇಂಡಿಯಾ’ ಎಂಬ ಆಶಯ ಸೂಚಿ ಗ್ರಂಥದ ಶೀರ್ಷಿಕೆ ದಾರಿ ತಪ್ಪಿಸುವ
ಹಾಗಿದೆ’
( 2015: ಪುಟ: 386) ಎಂಬ ಅವರ ಮಾತನ್ನು ಮೇಲಿನ ವಾದಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು .
ಕತೆಗಳು ಭಾರತೀಯವಾಗುವ ಬಗೆ:
‘ಇದೊಂದು
ಬಗೆಯ ಟೆಲಿಫೋನ್ ಡೈರೆಕ್ಟರಿ’
ಎಂದು
ಮುಂದಿನ ವಿದ್ವಾಂಸರಿಂದ ಅಪಹಾಸ್ಯಕ್ಕೊಳಗಾದ ಆರ್ನೆ ಥಾಂಸನ್ ಅವರ ವರ್ಗಸೂಚಿಯು ಜಗತ್ತಿನ ಎಲ್ಲಾ ಕತೆಗಳನ್ನು
ವರ್ಗಿಕರಿಸಿ, ಎಲ್ಲ ಬಗೆಯ ಕತೆಗಳು ಎಲ್ಲಾ ದೇಶದಲ್ಲಿ ದೊರಕುತ್ತವೆ ಎಂಬುದನ್ನು ವಿದ್ವತ್ ವಲಯಕ್ಕೆ
ತೋರಿಸಿ ಕೊಟ್ಟಿದ್ದಂತೂ ನಿಜ. ಇವುಗಳ ಜೊತಗೆ ಅದು
ಅದು ಪ್ರತಿ ಕತೆಯ ಅನನ್ಯತೆಯನ್ನು ತೋರಿಸಲೂ ಒಂದು ಅವಕಾಶ ನೀಡಿ, ಅದನ್ನು ಉಪವರ್ಗ ಎಂದು ಗುರುತಿಸಿತು.
ಉದಾಹರಣೆಗೆ ಪ್ರಸ್ತುತ ಸಂಕಲನದಲ್ಲಿರುವ ಸೋನ
ಮತ್ತು ರೂಪ ಎಂಬ ಹೆಸರಿನ ಮಾಳ್ವಿ ಭಾಷೆಯ ಕತೆಯನ್ನು
ಗಮನಿಸಬೇಕು. ಈ ಕತೆಯಲ್ಲಿ ಹೊಳೆಯಲ್ಲಿ ಸಿಕ್ಕಿದ
ನೀಳ ಕೂದಲಿನ ಚೆಲುವಿಗೆ ಮನಸೋತ ರಾಜಕುಮಾರನೊಬ್ಬನು ಆಕೆಯನ್ನು ಮದುವೆಯಾಗಬಯಸುತ್ತಾನೆ. ಆದರೆ ಆ ನೀಳ ಕೂದಲ ಚೆಲುವೆಯರು
ಅವನ ತಂಗಿಯರೆಂದು ತಿಳಿದಾಗ ಅರಮನೆಯಲ್ಲಿ ಕಸಿವಿಸಿ ಉಂಟಾಗುತ್ತದೆ. ಆದರೂ ತೊಟ್ಟ ಪಣದಂತೆ ಅವರನ್ನು
ಮದುವೆಯಾಗ ಹೊರಟ ರಾಜಕುಮಾರನಿಗೆ ಕೊನೆಗೂ ಅವರು ಸಿಗುವುದಿಲ್ಲ. ಕತೆ ಕೊನೆಯಾದಾಗ ರಾಜಕುಮಾರಿಯರು ಭೂಮಿಯೊಳಕ್ಕೆ
ಸೇರಿಕೊಂಡು ಮಾಯವಾಗುತ್ತಾರೆ.( 2015, ಪುಟ 14-16). ರಾಮಾನುಜನ್ ಅವರು ಈ ಕತೆಯನ್ನು ಎ ಟಿ 722 ಎಂದು
ಸಮರ್ಪಕವಾಗಿಯೇ ಗುರುತಿಸಿದ್ದಾರೆ. ಎ ಟಿ 722 ರಲ್ಲಿ
‘ಭೂತಳದಲ್ಲಿರುವ ತಂಗಿ’ ಎಂಬ
ಕಥೆಯಿದ್ದು ಅದರ ವಿವರ ಇಂತಿದೆ : “ಒಬ್ಬ ಸಹೋದರನು ತನ್ನ ಸಹೋದರಿಯನ್ನು ಮದುವೆಯಾಗಬಯಸುತ್ತಾನೆ. ಆದರೆ
ಆಕೆ ನೆಲವನ್ನು ಅಗೆದು ಪಾತಾಳಕ್ಕೆ ಪಯಣಿಸಿ ಬೇರೊಂದು ರಾಜ್ಯವನ್ನು ಸೇರಿಕೊಳ್ಳುತ್ತಾಳೆ. ಅಲ್ಲಿ ಆಕೆ
ಅನೇಕ ಸಾಹಸಗಳನ್ನು ಮಾಡಿ, ಕೊನೆಗೆ ಆ ರಾಜ್ಯದ ಅರಸನನ್ನೇ ಮದುವೆಯಾಗುತ್ತಾಳೆ. ಮದುವೆಯಾದ ಆನಂತರ ಆಕೆ
ತನ್ನ ಸಹೋದರನೊಂದಿಗೆ ರಾಜಿ ಮಾಡಿಕೊಳ್ಳುತ್ತಾಳೆ” ( ಂಡಿಟಿe ಖಿhomಠಿsoಟಿ 1964:250).
ರಾಮಾನುಜನ್ ಇಂಥ ಇನ್ನು ಮೂರು ಕತೆಗಳನ್ನೂ ತಮ್ಮ
ಸಂಗ್ರಹದಲ್ಲಿ ಕೊಡುತ್ತಾರೆ. ಅವುಗಳೆಂದರೆ ಹಂಚಿ ( ಕನ್ನಡ), ಮಗಳನ್ನು ಮದುವೆಯಾಗಬಯಸಿದ ತಂದೆ ( ತುಳು)
ಮತ್ತು ಮಗನನ್ನು ಮದುವೆಯಾದ ತಾಯಿ ( ಮರಾಠಿ). ಸ್ಥೂಲವಾಗಿ ಇದು ಅಗಮ್ಯ ಗಮನದ ( ಇನ್ಸೆಸ್ಟ್) ಕತೆಗಳು.
ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಈ ಕತೆ ತುಂಬಾ ಜನಪ್ರಿಯವಾಗಿದ್ದು, ತುಳುನಾಡಿನಿಂದ ಸಂಗ್ರಹಿಸಿದ
22 ಭಿನ್ನ ಪಠ್ಯಗಳು ನನ್ನ ವೈಯಕ್ತಿಕ ಸಂಗ್ರಹದಲ್ಲಿದೆ ( ಪುರುಷೋತ್ತಮ ಬಿಳಿಮಲೆ 1990). ಕರ್ನಾಟಕದ ಇತರ ಪ್ರದೇಶಗಳಲ್ಲಿಯೂ ಈ ಕಥೆ ಜನಪ್ರಿಯವಾದಂತಿದೆ.
ಕಾಶ್ಮೀರಿ, ತಮಿಳು, ಮಲೆಯಾಳಂ, ತೆಲುಗು, ಒಡಿಯಾ, ಬಂಗ್ಲಾ, ಅಸ್ಸಾಮೀ, ಮಣಿಪುರಿ ಭಾಷೆಗಳಲ್ಲೂ ಇದು
ಜನಪ್ರಿಯವಾಗಿದೆ.
ರಾಮಾನುಜನ್ ಹೇಳುವ ಎ ಟಿ 722 ರಲ್ಲಿ ಅಣ್ಣನಿಂದ
ತಪ್ಪಿಸಿಕೊಂಡ ತಂಗಿ ಪಾತಾಳಕ್ಕೆ ಹೋಗುತ್ತಾಳೆ. ಆದರೆ ಭಾರತದ ಕತೆಗಳಲ್ಲಿ ತಂಗಿಯು ಪಾತಾಳಕ್ಕೆ ಹೋಗುವುದಿಲ್ಲ.
ಅಲ್ಲಿ ಸಾಹಸವನ್ನು ಮಾಡುವುದಿಲ್ಲ. ಬದಲಾಗಿ ಹಲವು ಪಾಠಗಳಲ್ಲಿ ಆಕೆ ಆಕಾಶಕ್ಕೆ ಹೋಗಿ ಸೂರ್ಯನನ್ನೋ
ಚಂದ್ರನನ್ನೋ ಮದುವೆಯಾಗುತ್ತಾಳೆ. ಇಲ್ಲವೇ ಕೆರೆಯೊಂದಕ್ಕೆ
ಧುಮುಕಿ ಮೀನಾಗಿ ಪರಿವರ್ತನೆ ಹೊಂದುತ್ತಾಳೆ. ಮದುವೆಆದ ಆನಂತರ ಅಣ್ಣನೊಂದಿಗೆ ರಾಜಿಯಾಗುವ ಪ್ರಸಂಗ
ಭಾರತದ ಬಹುತೇಕ ಕತೆಗಳಲ್ಲಿ ಇಲ್ಲ. ಆಕೆ ಮೀನಾಗಿಯೋ, ಯಾವುದೋ ಗಿಡದ ಸೊಪ್ಪಾಗಿಯೋ ಪರಿವರ್ತನೆ ಹೊಂದಿದ ಆನಂತರವೂ ಅಣ್ಣನೊಡನೆ ತನ್ನ ದ್ವೇಷವನ್ನು
ಉಳಿಕೊಳ್ಳುತ್ತಾಳೆ. “ನಮ್ಮಿಬ್ಬರನ್ನು ಒಂದೇ ಬುಟ್ಟಿಯಲ್ಲಿ
ಹಾಕಬೇಡ, ಒಂದೇ ಕತ್ತಿಯಲ್ಲಿ ತುಂಡರಿಸಬೇಡ, ಒಂದೇ ಪಾತ್ರೆಯಲ್ಲಿ ಬೇಯಿಸಬೇಡ” ಎಂಬುದೇ ಅವಳ ಅಂತಿಮ ನುಡಿ. ಅಣ್ಣ ತಂಗಿಯನ್ನು
ಮದುವೆಯಾಗಬಯಸುವುದು ಮಾತ್ರ ಎರಡೂ ಕಡೆಯಲ್ಲಿರುವ ಸಮಾನ ಅಂಶವಾಗಿದೆ.
ಡಾ. ಹಿ ಶಿ. ರಾಮಚಂದ್ರೇಗೌಡರು ಈ ಕಥೆಯ ವರ್ಗವನ್ನು
ಂಖಿ 451 ಃ ಎಂದು ಗುರುತಿಸಿದ್ದಾರೆ. (1982: 575) ಅವರು ಹೀಗೆ ಗುರುತಿಸಲು ಕಾರಣವಾದ ಅಂಶವೆಂದರೆ
ತಂಗಿಯ ಅಸ್ವಾಭಾವಿಕವಾದ ಹುಟ್ಟು. ಕನ್ನಡದಲ್ಲಿ ಉಪಲಬ್ಧವಿರುವ ಕಥೆಯೊಂದರಲ್ಲಿ ತಂಗಿಯು ಗುಲಗಂಜಿಯಲ್ಲಿ
ಹುಟ್ಟುತ್ತಾಳೆ. ಸಂಧ್ಯಾರೆಡ್ಡಿಯವರು ಈ ಕಥೆಯ ಆಶಯವೊಂದನ್ನು ಗುರುತಿಸಿ ಅದನ್ನು ಂಖಿ 722
(1982: 156) ಕ್ಕೆ ಸೇರಿಸಿದ್ದಾರೆ. ಅಣ್ಣನು ತಂಗಿಯನ್ನು ಮದುವೆಯಾಗಬಯಸುವ ಅಶಯವನ್ನು ಮಾತ್ರ ಅವರು
ಗಮನಿಸಿದ್ದಾರೆ. ರಾಮಚಂದ್ರೇಗೌಡ ಮತ್ತು ಸಂಧ್ಯಾರೆಡ್ಡಿಯವರು ಈ ಕಥೆಯ ವರ್ಗವನ್ನು ಬೇರೆ ಬೇರೆಯಾಗಿ
ಸೂಚಿಸಿದ್ದರಲ್ಲಿಯೇ ಕಥೆಯ ಸಂಕೀರ್ಣತೆ ಸ್ಪಷ್ಟವಾಗುತ್ತದೆ ಮತ್ತು ಅಂತಾರಾಷ್ಟೀಯ ವರ್ಗಸೂಚಿಯಲ್ಲಿ
ಈ ಕಥೆಗೆ ಸಂಬಂಧಿಸಿದ ಖಚಿತ ವರ್ಗ ವಿಂಗಡನೆ ಇಲ್ಲವೆಂಬುದೂ ಸೂಚಿತವಾಗುತ್ತದೆ. ತುಳುನಾಡಿನಲ್ಲಿ ಇದುವರೆಗೆ
ಸಿಕ್ಕಿದÀ ಈ ಕಥೆಯ ಪಾಠಗಳೆಲ್ಲವೂ ಇತರೆಡೆಗಳಲ್ಲಿ ಸಿಕ್ಕಿದ ಪಾಠಗಳಿಗಿಂತ ಭಿನ್ನವಾಗಿವೆ. ಕಥೆಯ ಅಂತ್ಯವಂತೂ
ತುಂಬಾ ಭಿನ್ನವಾಗಿದೆ. ಮೀನಾಗಿ ಪರಿವರ್ತನೆ ಹೊಂದಿದ ಅಣ್ಣ-ತಂಗಿಯನ್ನು ನಲಿಕೆಯವನೊಬ್ಬನು ಹಿಡಿದು
ತಂದು ಬೇಯಿಸುತ್ತಾನೆ. ಬೇಯಿಸಿದಾಗ ಕಂಡ ರಕ್ತರಂಜಿತ ನೊರೆಯಿಂದಾಗಿ ಬೆದರಿದ ಆತ ಅದನ್ನು ಮತ್ತೆ ಹೊರಕ್ಕೆ
ಎಸೆಯುತ್ತಾನೆ. ಅಲ್ಲಿ ಹರಿವೆ ಮತ್ತು ಬಸಲೆ ಬೆಳೆಯುತ್ತದೆ. ಅದನ್ನು ಬೇಯಿಸಿದಾಗ ಅಲ್ಲಿಯೂ ರಕ್ತರಂಜಿತ
ನೊರೆ, ಪಿಸುಗುಟ್ಟುವ ಧ್ವನಿ ಕೇಳುತ್ತದೆ. ಅದನ್ನು ಮತ್ತೆ ಹೊರಗೆಸೆಯುತ್ತಾನೆ. ಅಲ್ಲಿ ಮತ್ತೆ ಕೆಸು-ತಿಮಾರೆಗಳು
ಹುಟ್ಟುತ್ತವೆ. ಇಲ್ಲಿ ಮುಖ್ಯವಾದ ಅಂಶವೆಂದರೆ ಪರಿವರ್ತನೆ ಹೊಂದಿದ ಅಣ್ಣ-ತಂಗಿಯರು ಮತ್ತೆ ಮತ್ತೆ
ಮನೆಯೊಳಕ್ಕೆ ಬರುವ ಪ್ರಯತ್ನ ಮಾಡಿ ವಿಫಲರಾಗುವುದು. ಕಥೆಯಲ್ಲಿ ಅವರನ್ನು ಮನೆಯೊಳಕ್ಕೆ ತರಲು ಮಾಡಿದ
ಸಾಹಸವನ್ನು ಸಾಕಷ್ಟು ವಿವರವಾಗಿ ಹೇಳಲಾಗಿದೆ. ಕನ್ನಡದ ಪಾಠಗಳಲ್ಲಿಯೂ ಹೊರಗೆ ಎಸೆಯಲ್ಪಟ್ಟ ಅಣ್ಣ-ತಂಗಿಯರು
ದಾಳಿಂಬೆ ಹೂ ಮತ್ತು ನೆಗ್ಗಿಲು ಮುಳ್ಳಾಗಿ ಪರಿವರ್ತನೆ ಹೊಂದುತ್ತಾರೆ. ಸಿಂಪಿ ಲಿಂಗಣ್ಣನವರ ಸಂಗ್ರಹದಲ್ಲಿರುವ
ಕಥೆಯಲ್ಲಿ ತಂಗಿಯು ಮರವೇರಿದ ಅನಂತರ ಸೂರ್ಯ ಲೋಕಕ್ಕೆ ಹೋಗುತ್ತಾಳೆ. ಅಲ್ಲಿ ಸೂರ್ಯನನ್ನು ಮದುವೆಯಾಗುತ್ತಾಳೆ.
ಕೊನೆಗೆ ಸೂರ್ಯನೊಂದಿಗೆ ತನ್ನ ತಂದೆ – ತಾಯಿಯರನ್ನು ನೋಡಲು ಹಿಂದಿರುಗುತ್ತಾಳೆ. ಆದರೆ ಅವರು ಬರುವಾಗ
ಮನೆಯಲ್ಲಿ ಯಾರೂ ಇರುವುದಿಲ್ಲ. ಇದನ್ನು ಗಮನಿಸಿದರೆ ಕನ್ನಡದ ಪಾಠಗಳಲ್ಲಿ ತಂಗಿಗೆ ಮತ್ತೆ ಮನೆಯೊಳಕ್ಕೆ
ಬರಲು ಅವಕಾಶವಿಲ್ಲದಿರುವುದು ಸ್ಪಷ್ಟವಾಗುತ್ತದೆ. ಭಾರತದಲ್ಲಿ ಕಾಣ ಸಿಗುವ ಈ ವಿಶಿಷ್ಟತೆಯನ್ನು ಗಮನಿಸಿ,
ಈ ಕಥೆಯನ್ನು ಒಂದು ಉಪವರ್ಗವನ್ನಾಗಿ ಗುರುತಿಸಿಕೊಳ್ಳುವುದು ಒಳ್ಳೆಯದು ಎಂದು ಅನ್ನಿಸುತ್ತದೆ. ಕಾರಣ
ಂಖಿ 722 ರಲ್ಲಿ ಭಾರತದಲ್ಲಿ ಲಭಿಸುವ ಕತೆಗಳನ್ನು ಒಂದು ಉಪ ವರ್ಗವನ್ನಾಗಿ ಮಾಡಿಕೊಂಡು ಅದನ್ನು ಂಖಿ
722 ಂ ಎಂದು ಕರೆಯಬಹುದು. ಹೀಗೆ ಮಾಡಿದರೆ ಈ ಅಗಮ್ಯ ಗಮನ ಕಥೆಯ ಒಟ್ಟಾರೆ ಸ್ವರೂಪವನ್ನೂ ಎ ಟಿ
722 ಎಂದೂ ಅದರ ಭಾರತೀಯ ವಿಶಿಷ್ಟ್ಟತೆಯನ್ನೂ ಎ ಟಿ 722 ಎ ಎಂದೂ ಗುರುತಿಸಿಕೊಂಡಂತಾಗುತ್ತದೆ. ಈ ಅರ್ಥದಲ್ಲಿ
ಇದು ಭಾರತೀಯ ಕತೆಯೇ ಹೌದು.ಪ್ರಸ್ತುತ ಪುಸ್ತಕದ ಕೊನೆಯಲ್ಲಿ ನೀಡಲಾದ ಟಿಪ್ಪಣಿಗಳಲ್ಲಿ ರಾಮಾನುಜನ್
ಅವರು ಅನೇಕ ಕತೆಗಳು ಆರ್ನೆ ಥಾಂಸನ್ ಅವರ ವರ್ಗ ಸೂಚಿಯಲ್ಲಿ ಎಲ್ಲಿ ಸೇರ್ಪಡೆಯಾಗುತ್ತವೆ ಎಂಬುದರ ಸೂಚನೆ ನೀಡುತ್ತಾರೆ. ಉದಾಹರಣೆಗೆ-
ಪುರ್ರನೆ ಹಾರಿ ಹೋಯಿತು ಕತೆ: ಎ ಟಿ 2300-
ಗೋಡೆಗಳಿಗೆ ಹೇಳಿ: ಎ ಟಿ 516,
ಬೋಪುಲುಚಿ: ಎ ಟಿ 956 ಬಿ
ಮಲ್ಲಿಗೆ ನಗೆಯ ದೊರೆ : ಎ ಟಿ: 1511
ಆವೆ ಮಣ್ಣಿನ ಅತ್ತೆ : ಎ ಟಿ 1653
ಘಾಟಿ ಸೊಸೆ: ಎ ಟಿ 1535
ಬ್ರಹ್ಮ ರಾಕ್ಷಸ ಮತ್ತು ಕ್ಷೌರಿಕ: ಎ ಟಿ
1168ಎ
ಮೀನೇಕೆ ನಕ್ಕಿತು : ಎ ಟಿ 875 ಡಿ
ಅಕ್ಕ ತಂಗಿ: ಎ ಟಿ 780ಎ ಒಂದು ಎರಡು ಮೂರು:
ಎ ಟಿ 1704
ರಾಕ್ಷಸಿ : ಎ ಟಿ 302ಎ
ಹಣೆ ಬರೆಹ: ಎ ಟಿ 934 ಡಿ- ಇತ್ಯಾದಿ.
ನಾನು ಮೇಲೆ ವರ್ಗ ಎ ಟಿ 722 ಕ್ಕೆ ಸಂಬಂಧಿಸಿದಂತೆ
ನೀಡಿದ ವಿವರಗಳಲ್ಲಿ ಎ ಟಿ 722 ಎ ಯನ್ನು ಒಂದು ಉಪ ವರ್ಗವಾಗಿ ಗುರುತಿಸಿದಂತೆ ಪ್ರಸ್ತುತ ಸಂಕಲನದ
ಎಲ್ಲಾ ಕತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ವಿಶ್ಲೇಷಿಸಿ ಸ್ವತಂತ್ರ ವರ್ಗಗಳನ್ನೋ ಉಪ ವರ್ಗಗಳನ್ನೋ
ಗುರುತಿಸಿ, ರಾಮಾನುಜನ್ ಕೆಲಸವನ್ನು ಇದೀಗ ಅರ್ಥಪೂರ್ಣವಾಗಿ ಮುಂದುವರೆಸಲು ಸಾಧ್ಯವಿದೆ. ಉದಾಹರಣೆಗೆ
ಸಂಕಲನದ ಕೊನೆಯ ಕತೆಯಾದ ‘ಆಮೇಲೆ ಪುರ್ರನೆ ಹಾರಿ ಹೋಯಿತು’ ಕತೆಯನ್ನು ರಾಮನ್ ಅವರು ಆರ್ನೆ ಥಾಂಸನ್ ವರ್ಗಸೂಚಿಯ
ಪ್ರಕಾರ ಎ ಟಿ 2300 ಎಂದು ಗುರುತಿಸಿ ಈ ಕತೆಯು ಜರ್ಮನ್, ಲಿಥುವೇನಿಯನ್, ಐಸ್ ಲ್ಯಾಂಡ್, ಸ್ಕಾಟ್
ಲ್ಯಾಂಡ್ ಮೊದಲಾದ ಜಗತ್ತಿನ 12 ರಾಷ್ಟ್ರಗಳಲ್ಲಿ ದೊರೆಯುವ
‘ಅಂತ್ಯವಿಲ್ಲದ ಕತೆಗಳು’ ಸಾಲಿಗೆ ಸರಿಯಾಗಿಯೇ ಸೇರಿಸುತ್ತಾರೆ. ಸ್ಟಿತ್ ಥಾಂಸನ್ ಮತ್ತು
ವಾರೆನ್ ರಾಬಟ್ರ್ಸ್ ಅವರ ‘ಟೈಪ್ಸ್ ಆಫ್ ಇಂಡಿಕ್ ಓರಲ್ ಟೇಲ್ಸ್ ( 1960) ಕೃತಿಯಲ್ಲಿ ಇಂಥದ್ದೇ ಕತೆಯು
ಮರಾಠಿ, ಹಿಂದಿ, ಮತ್ತು ತೆಲುಗು ಭಾಷೆಗಳಲ್ಲಿ ದೊರೆಯುವುದನ್ನು ಉಲ್ಲೇಖಿಸಲಾಗಿದೆ. ತುಳು ಮತ್ತು ಕನ್ನಡ
ಭಾಷೆಗಳಲ್ಲಿ ಈ ಕತೆ ಜನಪ್ರಿಯವಾಗಿರುವುದನ್ನು ನಾನು ಕೇಳಿದ್ದೇನೆ.
ಎ ಟಿ 2300 ಅಂತ್ಯವಿಲ್ಲದ ಕತೆಗಳನ್ನು ಒಂದು
ವರ್ಗದಲ್ಲಿ ಹಿಡಿದಿಡುತ್ತದೆ. ಈ ಕತೆಯಲ್ಲಿ ಮಕ್ಕಳು ಕತೆ ಕೇಳಲಿಚ್ಚಿಸಿದಾದ ನಿರೂಪಕಿಯೊಬ್ಬಳು’ ಒಂದು ಮರದಲ್ಲಿ ತುಂಬಾ ಹಕ್ಕಿಗಳು ಕೂತಿದ್ದುವು’ ಎಂದು ಆರಂಭಿಸುತ್ತಾಳೆ. ಆಗ ಮಕ್ಕಳು ‘ ಮತ್ತೇನಾಯಿತು?’
ಎಂದು ಕೇಳಿದಾಗ ನಿರೂಪಕಿ ‘ ಒಂದು ಹಕ್ಕಿ ಹಾರಿ ಹೋಯಿತು ‘ ಎನ್ನುತ್ತಾಳೆ. ಮಕ್ಕಳು ಮತ್ತೆ? ಎಂದು
ಕೇಳಿದಾಗ, ‘ಮತ್ತೆ ಇನ್ನೊಂದು ಹಕ್ಕಿ ಹಾರಿ ಹೋಯಿತು’ ಎನ್ನುತ್ತಾಳೆ. ಮಕ್ಕಳ ಪ್ರಶ್ನೆಯೂ ನಿಲ್ಲುವುದಿಲ್ಲ,
ಹಕ್ಕಿಗಳು ಹಾರಿ ಹೋಗುವುದೂ ನಿಲ್ಲುವುದಿಲ್ಲ. ಹೀಗಾಗಿ ಇದು ಅಂತ್ಯವಿಲ್ಲದ ಕತೆ. ಭಾರತದ ವಿವಿಧ ಭಾಷೆಗಳಲ್ಲಿ
ದೊರೆಯುವ ಈ ಕತೆಯಲ್ಲಿ ಮಕ್ಕಳು ಕತೆ ಹೇಳಲು ಅಜ್ಜಿಯನ್ನು ಪೀಡಿಸುತ್ತಾರೆ. ಆಗ ಅಜ್ಜಿಯು ‘ ಒಂದು ಊರಿನಲ್ಲಿ
ಒಂದು ಭತ್ತದ ರಾಶಿ ಇತ್ತು’
ಅಂತ
ಕತೆ Àಯನ್ನು ಆರಂಭ ಮಾಡುತ್ತಾಳೆ. ಮಕ್ಕಳು ಕುತೂಹಲಿಗಳಾಗುತ್ತಿರುವಂತೆ
ಅಜ್ಜಿಯು ‘ಆಗ ಅಲ್ಲಿಗೆ ಒಂದು ಗುಬ್ಬಿ ಹಕ್ಕಿ ಬಂತು’ ಅಂತ ಹೇಳಿ ಮಕ್ಕಳನ್ನು ಅವರದ್ದೇ ಲೋಕದೊಳಕ್ಕೆ ಪ್ರವೇಶಿಸಿಲು ಅನುವು ಮಾಡಿಕೊಳ್ಳುತ್ತಾಳೆ.
ಮತ್ತೆ ಮಕ್ಕಳ ಕಿವಿ ನಿಮಿರುತ್ತಿದ್ದಂತೆ ‘ ಗುಬ್ಬಿ ಭತ್ತ ಕಚ್ಚಿಕೊಂಡು ಹೋಯಿತು’ ಎಂದಾಗ ಮಕ್ಕಳು ‘ಮತ್ತೆ?’ಎಂದಾಗ ‘ಇನ್ನೊಂದು
ಗುಬ್ಬಿ ಬಂದು ಇನ್ನೊಂದು ಭತ್ತ ತಗೊಂಡು ಹೋಯಿತು’ ಎಂಬ ಉತ್ತರ ಬರುತ್ತದೆ. ಹೀಗೆ ಇದು ಮುಗಿಯದ
ಕತೆಯಾಗಿ ಮುಂದುವರಿಯುತ್ತದೆ. ಭಾರತದ ಕತಗಳಲ್ಲಿ ಭತ್ತ ಮತ್ತು ಗುಬ್ಬಿ ನಿರ್ದಿಷ್ಟವಾಗಿ ಬರುವುದರಿಂದ
ಈ ಕತೆಯನ್ನು ಎ ಟಿ 2300ರ ಉಪವರ್ಗವಾಗಿ ಗ್ರಹಿಸಿ, ಎ ಟಿ 2300 ಎ ಎಂದು ಹೇಳಲು ಸಾಧ್ಯವಿದೆ. ಇದು
ಕತೆಯೊಂದರ ಅಂತಾರಾಷ್ಟ್ರೀಯ ಪ್ರಸರಣವನ್ನೂ, ಅದರ ಪ್ರಾದೇಶಿಕ ವಿಶಿಷ್ಟತೆಯನ್ನೂ ಗುರುತಿಸಲು ನೆರವಾಗುತ್ತದೆ.
ಈ ಪುಸ್ತಕವನ್ನು ಆಧರಿಸಿ ಇಂಥ ಒಂದು ಮುಖ್ಯವಾದ ಮತ್ತು ಅಗತ್ಯದ ಕೆಲಸವನ್ನು ಯಾರಾದರೂ ಈಗ ಮಾಡಬೇಕಾಗಿದೆ.
ಕತೆಗಳ ಅನುವಾದ: ಅವರದು ಭಾಷಾಂತರ ಅಲ್ಲ, ಮರು
ಸೃಷ್ಟಿ.
ಎ ಕೆ ರಾಮಾನುಜನ್ ಅವರಿಗೆ ಪ್ರತಿ ಕತೆಯೂ ಒಂದು
ಹೊಸ ಸೃಷ್ಟಿ. ಎಳವೆಯಿಂದಲೇ ಕತೆ ಕೇಳಲು ಮತ್ತು ತಮ್ಮ 20 ನೇ ವಯಸ್ಸಿನಿಂದ ಜನಪದ ಕತೆಗಳನ್ನು ಸಂಗ್ರಹಿಸಲು
ಆರಂಭಿಸಿದ್ದ ಅವರಿಗೆ ಜನಪದ ಕತೆಗಳ ಜಾಯಮಾನಗಳ ಬಗ್ಗೆ ಆಳವಾದ ತಿಳುವಳಿಕೆಯಿತ್ತು. ತಮಿಳಿನ ತೋಳ್ಕಾಪ್ಪಿಯಂನಲ್ಲಿ
ಉಲ್ಲೇಖಿಸಲಾದ ಅಗಂ ಮತ್ತು ಪುರಂ ಪ್ರಭೇದಗಳನ್ನು ಆಧರಿಸಿ ಸಂಗಂ ಸಾಹಿತ್ಯ ಪರಂಪರೆಯನ್ನು ವಿಶ್ಲೇಷಿಸಿ
ಹೆಸರು ಮಾಡಿಕೊಂಡ ರಾಮನ್ ಅವರು ಆರಂಭಿಕ ಹಂತದಲ್ಲಿ ಜಾನಪದವನ್ನು ಸಾರ್ವಜನಿಕ ( ಪುರಂ) ಮತ್ತು ಖಾಸಗೀ
( ಅಗಂ) ಎಂದು ವಿಭಜಿಸಿಕೊಂಡು ಜನಪದ ಕತೆಗಳನ್ನು ‘ಅಗಂ’ ನ ಭಾಗವಾಗಿ ವಿವರಿಸಲು ಪ್ರಯತ್ನಿಸಿದ್ದುಂಟು
( ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಜಾನಪದ ಕಮ್ಮಟ 1988 ಮತ್ತು ಈ ಸಂಕಲನದ ಪ್ರಸ್ತಾವನೆ: ಪುಟ
24) ಆದರೆ ಮುಂದೆ ಅವರು ಜನಪದ ಕತೆಗಳ ನಿರೂಪಕ ಹಾಗೂ
ಕೇಳುಗರನ್ನು ಕಾಲ, ದೇಶ, ಸಮುದಾಯ ಮತ್ತು ವ್ಯಕ್ತಿಗಳ ಚೌಕಟ್ಟಿನಲ್ಲಿರಿಸಿ’ ಇವುದರಲ್ಲಿ ಯಾವೊಂದರಲ್ಲಿ ಬದಲಾವಣೆಯಾದರೂ ಕತೆಯಲ್ಲಿ
ಬದಲಾವಣೆ ಸಂಭವಿಸುತ್ತದೆ’ ಎಂದು ಭಾವಿಸಿಕೊಂಡರು. ಈ ಸೈದ್ಧಾಂತಿಕ ಚೌಕಟ್ಟಿನಲ್ಲಿಯೇ
ಅವರು ಇಲ್ಲಿಯ ಕತೆಗಳನ್ನು ಹೊಸ ಓದುಗರಿಗೆ ಹೇಳ ಹೊರಟಿದ್ದಾರೆ. ಅವರ ಮಾತುಗಳು-‘ ಕತೆಗಾರರು ಕತೆ ಹೇಳುತ್ತಿರುವಾಗಲೇ
ಕೇಳಿ, ಲಿಖಿತ ರೂಪಕ್ಕೆ ತಂದ ಇಲ್ಲಿನ ಕತೆಗಳನ್ನು ನೀವು ಅಥವಾ ಬೇರೆ ಯಾರಾದರೂ ಓದಿ, ಅಲ್ಪ ಸ್ವಲ್ಪ
ಮಾರ್ಪಾಟುಗಳೊಂದಿಗೆ ಅನ್ಯರಿಗೆ ಹೇಳಿದಾಗ ಅವು ಮತ್ತೆ ಜೀವಂತವಾಗುತ್ತವೆ. ಈ ಕತೆಗಳನ್ನು ನಾನು ಅವರಿವರಿಂದ
ಕೇಳಿ ಸಂಗ್ರಹಿಸಿದೆ. ಕತೆಗಳನ್ನು ಆಯ್ದುಕೊಳ್ಳುವಾಗ, ವ್ಯವಸ್ಥಿತವಾಗಿ ಪೋಣಿಸುವಾಗ ಮತ್ತು ಅನುವಾದಿಸುವಾಗ
ಅನಿವಾರ್ಯವಾಗಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ. ಹಾಗಾಗಿ ನನ್ನನ್ನು ಈ ಕತೆಗಳ ತೀರ
ಈಚಿನ ನಿರೂಪಕನೆಂದೂ ನೀವು ತೀರ ಈಚಿನ ಶ್ರೋತೃ ಎಂದೂ ಕೇಳಿದ ಕತೆಗಳನ್ನು ಪುನಹ ಬೇರೆಯವರಿಗೆ ಹೇಳುವವರೆಂದೂ
ಭಾವಿಸಿಕೊಳ್ಳಿ..ಈ ಸಂಕಲನದ ಸಂದರ್ಭದಲ್ಲಿ ನನ್ನ ನಿಮ್ಮ ನಡುವೆ ಕತೆಯ ಅರ್ಥಗಳು ಉತ್ಪನ್ನವಾಗುತ್ತವೆ’ ( 2015: ಮೊದಲ ಮಾತು). ಹೀಗೆ ಜನರ ನಡುವೆ ಯಾರ ಖಾಸಗೀ ಸೊತ್ತಾಗಿಯೂ ಉಳಿಯದೆ ಎಲ್ಲ
ಬಗೆಯ ಗಡಿಗಳನ್ನು ದಾಟುತ್ತಾ ಬೆಳೆದು ಬಂದ ಇಲ್ಲಿನ ಕತೆಗಳು ಕೊನೆಗೂ ರಾಮನ್ ಅವರ ಸೊತ್ತಾದುವು. ಹಾಗಾಗಿಯೇ
ಪುಸ್ತಕದ ಡಿಕ್ಲರೇಶನ್ ಪುಟದಲ್ಲಿ ಕತೆಗಳ ಹಕ್ಕನ್ನು ರಾಮಾನುಜನ್ ಅವರಿಗೆ ಪೆಂಗ್ವಿನ್ ಕೊಟ್ಟು ಬಿಟ್ಟಿತು.
ಇದನ್ನು ಒಂದು ಆರೋಪವಾಗಿ ನಾನು ಹೇಳುತ್ತಿಲ್ಲ, ಬದಲಾಗಿ ಭಾರತದಲ್ಲಿ ಬೌದ್ಧಿಕ ಹಕ್ಕಿನ ಕುರಿತಾಗಿ
ಇನ್ನಷ್ಟು ಚರ್ಚೆ ನಡೆಯಬೇಕಾದ ಅಗತ್ಯ ಇದೆ ಎಂಬುದರ ಕಡೆಗೆ ನಿಮ್ಮ ಗಮನವನ್ನು ಸೆಳೆಯುವುದಷ್ಟೇ ನನ್ನ
ಉದ್ದೇಶ.
ರಾಮಾನುಜನ್ ತಾವು ಆಯ್ದುಕೊಂಡ ಕತೆಗಳ ಗುಣಮಟ್ಟ,
ಅದನ್ನು ಇಂಗ್ಲಿಷ್ ಭಾಷೆಗೆ ಒಗ್ಗಿಸಿದ ಪರಿ, ಅವುಗಳನ್ನು ವಿಂಗಡಣೆ ಮಾಡಿಕೊಂಡ ಕ್ರಮ, ಇಂಗ್ಲಿಷಿಗೆ
ಅನುವಾದಿಸಿಕೊಂಡಾಗ ಮೂಲದಿಂದ ಮಾಡಿಕೊಂಡ ಬದಲಾವಣೆ ಮೊದಲಾದ ಹಲವು ವಿಷಯಗಳ ಬಗೆಗೆ ಸಾಕಷ್ಟು ವಿಸೃತವಾದ
ಚರ್ಚೆ ಸಾಧ್ಯ. ಈ ವಿಷಯದಲ್ಲಿ ಅವರು ಹೇಳಿಕೊಂಡದ್ದು ಹೀಗೆ- ‘ ಕತೆಯೊಂದರ ಮೂಲ ನಿರೂಪಣೆಯನ್ನು ಬೇರೆ
ಯಾವ ಬಗೆಯಲ್ಲೂ ಪುನರ್ ಸೃಷ್ಟಿಸಲು ಸಾಧ್ಯವಿಲ್ಲ. ವಿವಿಧ ಕಾಲ ದೇಶಗಳಲ್ಲಿ ವಿವಿಧ ವಿದ್ವಾಂಸರು ಇಲ್ಲಿನ
ಕೆಲವು ಕತೆಗಳನ್ನು ಅನುವಾದಿಸಿದ್ದು, ನಾನು ಅಲ್ಲಿ ಇಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿದ್ದೇನೆ.
ಪೆಡಸಾದ ಶೈಲಿ, ಅತಿ ಅಲಂಕಾರಿಕತೆ, ಹಾಗೂ ಅಸಹ್ಯ ಹುಟ್ಟಿಸುವ ನಿರೂಪಣೆ ಇತ್ಯಾದಿಗಳನ್ನು ತಿದ್ದಿದ್ದೇನೆ.
ಮೂಲ ಕಥಾ ನಿರೂಪಣಾ ಕ್ರಮವನ್ನು ಆದಷ್ಟು ಮಟ್ಟಿಗೆ ಅನುಸರಿಸಲು ಯತ್ನಿಸಿದ್ದೇನೆ. ಕಥಾ ಸಂವಿಧಾನವನ್ನು
ಹಾಗೆಯೇ ಉಳಿಸಿಕೊಂಡಿದ್ದೇನೆ. ಕತೆಯ ಯಾವುದೇ ವಿವರವನ್ನಾಗಲೀ, ಆಶಯವನ್ನಾಗಲೀ ಕೈಬಿಟ್ಟಿಲ್ಲ. ಕತೆಗಳ
ಮೂಲ ಸ್ವರೂಪಕ್ಕೆ ಚ್ಯುತಿ ಬರದಂತೆ ನೋಡಿಕೊಂಡಿದ್ದೇನೆ. ವಿವಿಧ ಪಾಠಾಂತರಗಳಲ್ಲಿ ಕಂಡು ಬರುವ ವ್ಯಾಖ್ಯಾನಗಳನ್ನು
ಆಯ್ದುಕೊಂಡು ಕಲಬೆರಕೆ ಮಾಡಿ ಕತೆಗಳು ಇನ್ನಷ್ಟು ನಾಟಕೀಯವಾಗಿ ಅಥವಾ ಕಲಾತ್ಮಕವಾಗಿ ಕಾಣುವಂತೆ ಮಾಡಲು
ಹೋಗಿಲ್ಲ. ( 2015: ಮೊದಲ ಮಾತು). ಈ ಮಾತುಗಳು ಅವರ ಅನುವಾದದ ಅಥವಾ ಮರು ಸೃಷಿಯ ಬಗೆಗೆ ಎಲ್ಲವನ್ನೂ
ಹೇಳುವುದರಿಂದಾಗಿ ಇನ್ನೂ ಹೆಚ್ಚಿನ ವಿವರಣೆ ಅಗತ್ಯವಿಲ್ಲವೆಂದು ಭಾವಿಸಿದ್ದೇನೆ. ಈ ನಡುವೆ ಯಾರಾದರೂ
ಈ ಸಂಕಲನದ ಒಂದು ಕನ್ನಡ ಕತೆಯನ್ನು ಆಯ್ದುಕೊಂಡು ( ಹೂಬಿಡುವ ಮರ ಅಥವಾ ಹಂಚಿ), ಇದು ಇಂಗ್ಲಿಷಿನಲ್ಲಿ
ಮರುಸೃಷ್ಟಿಗೊಂಡಾಗ ಆದ ಬದಲಾವಣೆಗಳನ್ನು ಪ್ರಾಯೋಗಿಕ ಅಧ್ಯಯನಕ್ಕೆ ಒಳಪಡಿಸಿದರೆ ಕುತೂಹಲಕರ ಅಂಶಗಳು
ಹೊರಬಂದಾವು.
ಸಂಕಲನದ ಸಾಂಸ್ಕೃತಿಕ ಮಹತ್ವ:
ಕೊನೆಯದಾಗಿ ಈ ಸಂಕಲನದ ಸಾಂಸ್ಕøತಿಕ ಮಹತ್ವದ
ಬಗ್ಗೆ ಕೆಲವು ಮಾತುಗಳನ್ನು ಗಮನಿಸಬೇಕು.
ಭಾರತೀಯ ಜಾನಪದದ ಮೂಲಕ, ವಿಶೇಷವಾಗಿ ಜನಪದ ಕತೆಗಳ
ಮೂಲಕ, ಪಾಶ್ಚಾತ್ಯರಿಗೆ ಭಾರತದ ಬಗ್ಗೆ ಹೊಸ ತಿಳುವಳಿಕೆಗಳನ್ನು ಕೊಡಲು ಸಾಧ್ಯ ಎಂದು ಗಟ್ಟಿಯಾಗಿ ನಂಬಿದವರಲ್ಲಿ
ರಾಮನ್ ಕೂಡಾ ಒಬ್ಬರು. ‘ ಉತ್ತರ ಹೇಳಲೆಂದು ಹಕ್ಕಿಗಳು ಹಾಡುವುದಿಲ್ಲ, ಒಳಗಿನ ಹಾಡು ಹೇಳಲೆಂದು ಅವು
ಹಾಡುತ್ತವೆ’
( 2015: ಮೊದಲ ಮಾತಿನಲ್ಲಿ) ಎಂಬ ಚೈನಾದ ಗಾದೆಯನ್ನು ಉಲ್ಲೇಖಿಸುವ ಅವರು’ ಕತೆಗಳನ್ನು ಆನಂದಕ್ಕಾಗಿ, ಸೌಂದರ್ಯಾನುಭೂತಿಗಾಗಿ
ಓದಬೇಕು’ ಎಂದು
ಹೇಳಿದರೂ, ಕತೆಗಳನ್ನು ಆಯುವಾಗ, ಅವುಗಳನ್ನು ವರ್ಗೀಕರಿಸುವಾಗ ಅವುಗಳು ಹೇಗೆ ಭಿನ್ನ ಅನುಭವವನ್ನು
ನೀಡುತ್ತವೆ ಎಂದು ಹೇಳಲು ಮರೆಯುವುದಿಲ್ಲ. ಪ್ರಸ್ತಾವನೆಯಲ್ಲಿರುವ ಮಾತುಗಳನ್ನು ಗಮನಿಸಿ- ‘ ತೀರ ಈಚಿನವರೆಗೂ
ಭಾರತೀಯ ನಾಗರೀಕತೆಯನ್ನು ಕುರಿತಾದ ಅನೇಕ ಅಧ್ಯಯನಗಳು ಸಂಸ್ಕøತ ಭಾಷೆಯಲ್ಲಿ, ಇನ್ನಿತರ ಲಿಖಿತ ಪಠ್ಯಗಳಲ್ಲಿ,
ಸಂಸ್ಕøತಿಯ ಅಧಿಕ ಜ್ವಾಜ್ವಲ್ಯಮಾನ ಕ್ಷೇತ್ರಗಳಲಿ ‘ದೀಪದಡಿ ಹುಡುಕು’ ಎಂಬ ಎಂಬ ತತ್ವಕ್ಕೆ ಅನುಗುಣವಾಗಿ ನಡೆದಿದೆ.
ಈ ಕ್ಷೇತ್ರಗಳಲ್ಲಿ ನಾವು ಅನೇಕ ಮೌಲಿಕ ಸಂಗತಿಗಳನ್ನು ಕಂಡುಕೊಂಡಿದ್ದೇವೆ. ಇಂಥ ಒಂದು ತಿಳುವಳಿಕೆಯನ್ನು
ಇನ್ನಷ್ಟು ವಿಸ್ತರಿಸದೆ ಹೇಳುವುದಾದರೆ, ನಾವೀಗ ನಮ್ಮ ಮನೆವಾರ್ತೆಯ ಭಾವಪ್ರಧಾನ ಸಂಸ್ಕøತಿಯ ಒಳಕೋಣೆಗಳಲ್ಲಿ
ಕೀಲಿ ಕೈಗಳನ್ನು ಹುಡುಕುವ ಕೆಲಸ ಮಡುತ್ತಿದ್ದೇವೆ. ನಾವು ಹುಡುಕುತ್ತಿರುವ ಕೀಲಿ ಕೈಗಳು ನಮ್ಮ ಕೈಗೆ
ಸಿಗದೇ ಹೋಗಬಹುದು, ಹೊಸ ಕೀಲಿ ಕೈಗಳನ್ನು ಮಾಡಿಕೊಳ್ಳಬೇಕಾಗಬಹುದು. ನಾವು ಕಳೆದುಕೊಂಡಿರುವುದೇನೆಂದು
ನಮಗೇ ಗೊತ್ತಿಲ್ಲದ ಎಷ್ಟೋ ಸಂಗತಿಗಳು ನಮ್ಮ ಕಣ್ಣಿಗೆ ಬೀಳಬಹುದು ಅಥವಾ ಹಿಂದೆಂದೂ ನಮ್ಮಲ್ಲಿ ಇದ್ದಿರದ
ಅನೇಕ ಹೊಸ ಸಂಗತಿಗಳು ಗೋಚರಿಸಬಹುದು ( 2015: ಮೊದಲ ಮಾತು). ಈ ಲಹರಿಯಲ್ಲಿಯೇ ರಾಮನ್ ಅವರು ಇಲ್ಲಿನ
ಕತೆಗಳ ಮೂಲಕ ಭಾರತವನ್ನು ಅರ್ಥಮಾಡಿಕೊಳ್ಳಲು ಬೇಕಾದ ಅನೇಕ ವಿಷಯಗಳನ್ನು ತಮ್ಮದೇ ಶೈಲಿಯಲ್ಲಿ ಕತೆಗಳ
ಸಾಕ್ಷ್ಯದಲ್ಲಿ ತೆರೆದಿಡುತ್ತಾ ಹೋಗುತ್ತಾರೆ.ಭಾರತದಲ್ಲಿ ಒಂದು ಸತ್ಯ ಎಂಬುದಿಲ್ಲ, ಭಾರತೀಯ ನಾಗರೀಕತೆಯನ್ನು
ಅಧ್ಯಯನ ಮಾಡಿದವರು ಭಾರತೀಯ ಪಿರಮಿಡ್ ನ ಮೇಲ್ತುದಿಗೇ ಹೆಚ್ಚು ಬೆಲೆ ಕೊಟ್ಟಿದ್ದಾರೆ, ಭಾರತದ ಹಿರಿಯ
ಪರಂಪರೆ ಮತ್ತು ಕಿರಿಯ ಪರಂಪರೆಗಳು ಸದಾ ಚಲನಶೀಲವಾಗಿದ್ದು, ಒಂದಕ್ಕೊಂದು ಪ್ರತಿಸ್ಪಂದಿಸುತ್ತಾ, ನಿರಂತರವೂ
ಚಲನಶೀಲವೂ ಆದ ಸಂವಾದದಲ್ಲಿ ತೊಡಗಿವೆ, ಪುರುಷ ಕೇಂದ್ರಿತ ಕತೆಗಳಲ್ಲಿ ನಾಯಕನ ಶೋಧ ಹಾಗೂ ಸಾಹಸಗಳೇ
ಪ್ರಧಾನವಾದರೆ, ಸ್ತ್ರೀ ಕೇಂದ್ರಿತ ಕತೆಗಳಲ್ಲಿ ಬದುಕಿಸುವುದು, ಪಾರು ಮಾಡುವುದು, ಸತ್ತವನನ್ನು ಮತ್ತೆ
ಬದುಕಿಸುವುದು, ಅವನ ಪರವಾಗಿ ಒಗಟುಗಳನ್ನು ಬಿಡಿಸುವುದು, ಸಮಸ್ಯೆಗಳನ್ನು ಪರಿಹರಿಸುವುದು, ನಾಯಕಿಯ
ಜೀವನ ಧ್ಯೇಯವಾಗಿರುತ್ತದೆ, ಭಾರತೀಯ ಮಹಾಕಾವ್ಯಗಳಲ್ಲಿ ಕಂಡು ಬರುವ ಕರ್ಮದ ಕಲ್ಪನೆಗೆ ಈ ಕತೆಗಳಲ್ಲಿ
ಯಾವ ಸ್ಥಾನವೂ ಇಲ್ಲ, ಅಧಿಕಾರದ ಕೇಂದ್ರಬಿಂದುಗಳಾದ ರಾಜರು, ಬ್ರಾಹ್ಮಣರು, ಗುರುಗಳು, ದೇವರು ಶಾಸ್ತ್ರಗಳು
–ಇವರೆಲ್ಲರೂ ಮೂರ್ಖರು ಮತ್ತು ಸುಲಭವಾಗಿ ವಂಚನೆಗೆ ಒಳಗಾಗುವವರು ಹಾಗೂ ತಪ್ಪಿತಸ್ಥರೆಂದು ಈ ಕತೆಗಳಲ್ಲಿ
ಚಿತ್ರಿಸಲಾಗಿದೆ, ಎಂಬಂಥ ಮೌಲಿಕ ಮಾತುಗಳನ್ನು ಇಲ್ಲಿ ಹೇಳಲಾಗಿದೆ. ಇವುಗಳನ್ನು ಆಧರಿಸಿಕೊಂಡು ಇದೀಗ
ನಾವು ಜನಪದ ಕತೆಗಳನ್ನು ಮತ್ತೆ ಮರು ಪರಿಶೀಲನೆಗೆ ಒಳಪಡಿಸಲು ಸಾಧ್ಯವಿದೆ.
ಭಾರತದ ಶಿಷ್ಟ ಮತ್ತು ಜನಪದ ಪಠ್ಯಗಳನ್ನು ಆಧರಿಸಿ
ರಾಮಾನುಜನ್ ಅವರು ಬರೆದ ಲೇಖನಗಳು, ಮಾಡಿದ ಅನುವಾದಗಳು ಮತ್ತು ಭಾಷಣಗಳು ಭಾರತಕ್ಕೆ ಶೈಕ್ಷಣಿಕ ಕ್ಷೇತ್ರದಲ್ಲಿ
ಅಂತಾರಾಷ್ಟ್ರೀಯವಾದ ಒಂದು ಮನ್ನಣೆಯನ್ನು ತಂದುಕೊಟ್ಟಿತು. ಪ್ರೊ. ವೆಂಡಿ ಡಾನಿಗರ್ ಅವರು ಎ ಕೆ ರಾಮಾನುಜನ್
ಅವರ ಬಗ್ಗೆ ಬರೆದಿರುವ ಮಹತ್ವದ ಮಾತುಗಳನ್ನು ಗಮನಿಸಿ: ‘
ಅವರು ಅಮೇರಿಕಾದಲ್ಲಿ ಒಬ್ಬ ಅದ್ಭುತ ಪಾರ್ಟಿಸಿಪೆಂಟ್ ಒಬ್ಸರ್ವರ್. ಅವರು ತಮ್ಮ ಭಾರತೀಯ ಒಳನೋಟಗಳನ್ನು
ಕೇವಲ ಇಂಗ್ಲಿಷ್ ಗೆ ಅನುವಾದಿಸುತ್ತಿಲ್ಲ, ಬದಲು ಚೋಮ್ಸ್ಕಿ, ಡಿ ಸಸೂರ್, ಡೆರಿಡಾ, ಸ್ಟಿತ್ ಥಾಂಸನ್,
ಫ್ರಾಯ್ಡ್ ಮೊದಲಾದವರ ಚಿಂತನಾಕ್ರಮಗಳನ್ನು ಅವರು ವಿಸ್ತರಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಬೌದ್ಧಿಕ ಚರ್ಚೆಗಳಿಗೆ ಭಾರತವನ್ನು
ಸಮರ್ಥವಾಗಿ ಸೇರಿಸಿದ ರಾಮಾನುಜನ್ ಅವರ ಹರಿತವಾದ ಚಿಂತನಾ ಕ್ರಮ, ಅಪೂರ್ವ ಒಳನೋಟ, ವಸ್ತುವಿನ ಆಯ್ಕೆ,
ಭಾಷೆ ಮತ್ತು ವಿಶ್ಲೇಷಣಾ ಸಾಮಥ್ರ್ಯಕ್ಕೆ ಫೋಕ್ ಟೇಲ್ಸ್
ಫ್ರಂ ಇಂಡಿಯಾ ಅತ್ಯುತ್ತಮವಾದ ಉದಾಹರಣೆಯಾಗಿದೆ.
ಆಕರ ಸೂಚಿ
1. ಅಶೋಕ
ಟಿ ಪಿ 1993 (ಸಂ), ಎ ಕೆ ರಾಮಾನುಜನ್ ನೆನಪಿನ ಸಂಪುಟ;
ಪುತ್ತೂರು: ಕರ್ನಾಟಕ ಸಂಘ
2. ಪುರುಷೋತ್ತಮ
ಬಿಳಿಮಲೆ 1990, ಕರಾವಳಿ ಜಾನಪದ; ಮಂಗಳಗಂಗೋತ್ರಿ
3.
ಮಹಾಬಲೇಶ್ವರ ರಾವ್2015, ಭಾರತೀಯ ಜನಪದ ಕತೆಗಳು;
ನವದೆಹಲಿ: ನ್ಯಾಶನಲ್ ಬುಕ್ ಟ್ರಸ್ಟ್, ಇಂಡಿಯಾ.
4.
Arne and Thompson 1964, The types of the Folktale; Helsinki: FF
Communications No184
5. Bompas CH 1909;
Folklore of the Santal Paraganas; London: Devid Nutt
6. Borooah J 1915,
Folktales of Assam; Gauhati: Lawyers Book stall
7.
Dharwadkar Vinay 1999 (Ed.), The
collected essays of AK Ramanujan; New Delhi: OUP
8. Flora Annie Steel
1894, Tales of the Punjab; London: Macmillan
9.
Girish Karnad 2012, AK Ramanujan
memorial lecture; Delhi: Ramjas College,
Delhi University
10. Hinton Knowles
1893, Folktales of Kashmir; London: Keagan Paul
11. Kavita S. Kusugal
2014, Indian Folktales: Ramanujan’s interpretations; JIRAS, Volume-1, Issues-1
12. Lal Behari Dey
1883, Folktales of Begal; London: Macmillan
13. Laurits Bodkar
1957, Indian Animal tales; Helsinki: FF Communications 170
14. Natesa Shastri
1908, Indian Folktales; Madras: Guardian Press
15. Newell WW 1895, Theories of Diffusion of Folk-Tales ( In the
Journal of American Folklore, Vol. 8, No. 28 (Jan. -
Mar., 1895), Bloomington: American Folklore society
16. Ramanujan AK 2015,
Folktales from India; New Delhi: Penguin books
17. Sahab Lal,
Srivastava, 1974, Folk Culture and Oral Tradition (A Comparative Study of
Regions in Rajasthan and Eastern U.P.) New Delhi: Abhinava Publications.
18. Shyam Parmar 1972,
Folklore of Madhya Pradesh; New Delhi: NBT
19. Stith Thompson
1946, The Folktale; New York: holt, Rineharat and Winston
20. Stith Thompson
1955, Motif Index of Folk literature; Bloomington: Indiana University Press
21. Stith Thompson and
Jonas Balys 1958, the Oral tales of India;
Bloomington: Indiana University Press.
22. Stith Thomson and
Warren Roberts 1960, Types of Indic Oral tales; Helsinki: FF Communications No.
80
23. Verrier Elvin 1944,
Folktales of Mahakoshal; London: OUP
No comments:
Post a Comment