Wednesday, June 12, 2019

ಬಂಗಾಳದ ಕತೆಯೇನು?


ಬಂಗಾಳದ ಕತೆಯೇನು?

ಭಾರತದ ಅಷ್ಟೆಲ್ಲಾ ರಾಜ್ಯಗಳ ನಡುವೆ ಕನ್ನಡದವರಿಗೆ ಮಾನಸಿಕವಾಗಿ ಹತ್ತಿರ ರಾಜ್ಯವೆಂದರೆ ಬಂಗಾಳವೇ. ಗಳಗನಾಥ, ಬಿ.ವೆಂಕಟಾಚಾರ್ಯ,  ಕುವೆಂಪು, ಬೇಂದ್ರೆ, ಡಿವಿಜಿ , ಗೋಕಾಕ,  ಆರ್ ಕೃಷ್ಣಶಾಸ್ತ್ರಿ, ಅವರಂತ ಮಹಾ ಲೇಖಕರ ಮೂಲಕ ನಮಗೆ ರಾಮಕೃಷ್ಣ ಪರಮಹಂಸ, ಬಂಕಿಂಚಂದ್ರ, ನಜುರಲ್ ಇಸ್ಲಾಂ, ಠಾಗೋರ್, ವಿವೇಕಾನಂದ, ಅರಬಿಂದೋ, ಶರಶ್ಚಂದ್ರ,  ಮಹಾಶ್ವೇತಾ ದೇವಿ, ಮೊದಲಾದವರು ಕನ್ನಡ ಚಿಂತನೆಯ ಭಾಗವಾದರು. ಆರ್ಯಸಮಾಜ, ಬ್ರಹ್ಮ ಸಮಾಜ, ರಾಮಕೃಷ್ಣ ಮಿಶನ್ ಗಳು ಒಂದು ಕಾಲಕ್ಕೆ ಕನ್ನಡ ಸಮಾಜವನ್ನೂ ಪ್ರಗತಿಗಾಮಿಯಾಗಿಸಲು ಯತ್ನಿಸಿದ್ದುವು.  ಅಪರ್ಣಾ ಸೇನ್, ರಿತುಪರ್ಣಾ ಘೋಷ್ ಮೃಣಾಲ್ ಸೇನ್, ಸತ್ಯಜಿತ್ ರಾಯ್, ರಿತ್ವಿಕ್ ಘಟಕ್, ಉತ್ಪಲಾ ದತ್ ಮೊದಲಾದ ನಿನೇಮಾ ನಿರ್ದೇಶಕರು ಕನ್ನಡಿಗರ ನೆನಪಿನ ಭಾಗವೇ ಆಗಿದ್ದಾರೆ. ಬಂಗಾಳದ ಬಾವುಲ್ ಹಾಡುಗಳಿಗೂ, ಪುರುಲಿಯಾದ ಚಾವು ನೃತ್ಯಕ್ಕೂ ಮನಸೋಲದವರುಂಟೇ? ಬಿಷ್ಣುಪುರದ ಟೆರಕೋಟಾ ಜಗತ್ ಪ್ರಸಿದ್ಧವಾಗಿದೆ. ಜೆಮಿನಿ ರಾಯ್ ಅತ್ಯದ್ಭುತ ಕಲಾವಿದ. ದುರ್ಗಾ ಪೂಜ ಬಂಗಾಳಿಗಳ ಅಸ್ಮಿತೆಯ ಸಂಕೇತ. ಕರಾವಳಿ ಕರ್ನಾಟಕದಿಂದ ಹೋಗಿದ್ದ ಬಲ್ಲಾಳ ಸೇನ ಎಂಬವನು 1160 ಸುಮಾರಿನಲ್ಲಿ ಒರಿಸ್ಸಾ, ಬಂಗಾಳವನ್ನು ಆಳಿದ್ದನ್ನು ಬಂಗಾಳಿಗಳೂ ಹೆಮ್ಮೆಯಿಂದ ನೆನಸಿಕೊಳ್ಳುತ್ತಾರೆ. ಐಶ್ವರ್ಯ ರಾಯ್ ನಮ್ಮವರು ಎಂದು ಹೇಳಿಕೊಂಡು ಓಡಾಡುತ್ತಿರುವ  ಬಂಗಾಳಿಯರಿಗೆ ಅವರು ರಾಯ್ ಅಲ್ಲ ಮಾರಾಯರೇ, ರೈ ಅಂತ ಹೇಳಿ ಅವರಿಗೆ ತುಳು ಕೇಳಿಸುವುದು ನನ್ನ ನೂರಾರು ಕೆಲಸಗಳಲ್ಲಿ ಒಂದು. ಬಂಗಾಳಿ ಕಾಟನ್ ಸೀರೆಯನ್ನು ಇಷ್ಟ ಪಡದ ಕನ್ನಡತಿಯರು ಯಾರಿದ್ದಾರೆ?
ಬಂಗಾಳ ಹೆಸರು ದ್ರಾವಿಡ ಮೂಲದ್ದು ಎನ್ನಲಾಗುತ್ತಿದೆ. ಬಂಗ ( ಕರಾವಳಿಯ ಬಂಗರನ್ನು ನೆನಸಿಕೊಳ್ಳಿ) ಎಂಬ ದ್ರಾವಿಡ ಬುಡಕಟ್ಟು ಕ್ರಿಸ್ತ ಪೂರ್ವ 1000 ವರ್ಷಗಳ ಹಿಂದೆ ಅಲ್ಲಿತ್ತಂತೆ!. ಸಂಸ್ಕø ಪಠ್ಯಗಳಲ್ಲಿ ಇದು ವಂಗ ( ಅಂಗವಂಗ ಕಳಿಂಗ..) ದೇಶ ಎಂದು ಕರೆಯಿಸಿಕೊಂಡಿದೆ. ಕ್ರಿಸ್ತಪೂರ್ವ 100 ಸುಮಾರಿನ ಗ್ರೀಕ್ ಪಠ್ಯಗಳು ಈಗಿನ ಬಂಗಾಳವನ್ನು ಗಂಗಾರಿದೈ ಎಂದು ಕರೆದಿವೆ. ಬಂಗಾಳಕ್ಕಿದ್ದ ಕಡಲ ಸಂಪರ್ಕವು ಅದನ್ನು ವಿಶ್ವದ ಇತರ ಭಾಗಗಳಿಗೆ ಸುಲಭವಾಗಿ ಜೋಡಿಸಿತ್ತು.
ಈಗ ಸುಮಾರು 10 ಕೋಟಿ ಜನರಿರುವ ಬಂಗಾಳದ ಚರಿತ್ರೆಯೂ ಸುದೀರ್ಘವಾದುದು. ಮೌರ್ಯರು,  ಮಗಧರು, ಗುಪ್ತರು, ಪಾಲರು, ಗೌಡರು, ಸೇನರು, ಅದನ್ನಾಳಿದ್ದಾರೆ. 1021ರಿಂದ 1023 ವರೆಗೆ ದಕ್ಷಿಣದ ರಾಜೇಂದ್ರ ಚೋಳನೂ ಬಂಗಾಳದ ಕೆಲವು ಭಾಗಗಳನ್ನು ಆಳಿದ್ದ. 12ನೇ ಶತಮಾನದಲ್ಲಿ ಇಸ್ಲಾಂ ಬಂಗಾಳವನ್ನು ಪ್ರವೇಶಿಸಿತು. 
1757 ಪ್ರಖ್ಯತವಾದ ಪ್ಲಾಸೀ ಕದನದ ಅನಂತರ ಬಂಗಾಳವು ಬ್ರಿಟಿಷರ ಕೈಕೆಳಗೆ ಬಂತು. 1773ರಿಂದ ಕಲ್ಕತ್ತಾವು ಭಾರತದ ರಾಜಧಾನಿಯೂ ಅಯಿತು.  1943 ಭೀಕರವಾದ ಬಂಗಾಳ ಕ್ಷಾಮದಲ್ಲಿ 30ಲಕ್ಷಕ್ಕೂ ಹೆಚ್ಚು ಜನ ಸತ್ತರು. ವಸಾಹತು ಆಡಳಿತವು ಬಂಗಾಳಿಗಳಿಗೆ ಆಧುನಿಕತೆಯ ಪಾಠವನ್ನೂ ಕಲಿಸಿತು. ಫಲವಾಗಿ, ಭಾರತದಲ್ಲಿ ಬಂಗಾಳಿಗಳು ಬುದ್ದಿವಂತರು ಎಂಬ ಪ್ರಶಂಶೆಯೂ ಅವರಿಗೆ ದೊರೆಯಿತು. ಸುಭಾಶ್ಚಂದ್ರ ಬಸು ಅವರೂ ಸೇರಿದಂತೆ, ಸ್ವಾತಂತ್ರ್ಯ ಚಳುವಳಿಗೆ ಬಂಗಾಳಿಗಳ ಕೊಡುಗೆ ಮಹತ್ವದ್ದು. 1947ರಲ್ಲಿ ಬಂಗಾಳವು ಒಡೆದು, ಪೂರ್ವ ಬಂಗಾಳವು ಪಾಕಿಸ್ಥಾನದ ಪಾಲಾಯಿತು. 1977ರಿಂದ 2011ರವರೆಗೆ ಪಶ್ಚಿಮ ಬಂಗಾಳವನ್ನು ಕಮ್ಯುನಿಷ್ಟರು ಆಳಿದರು. 1987 ಅಸೆಂಬ್ಲಿ ಚುನಾವಣೆಯಲ್ಲಿ 294 ಸೀಟುಗಳಲ್ಲಿ 251 ಸೀಟುಗಳನ್ನು ಗೆಲ್ಲುವಷ್ಟರ ಮಟ್ಟಿಗೆ ಅವರು ಜನಪ್ರಿಯರೂ ಆಗಿದ್ದರು. ಜ್ಯೋತಿ ಬಸು ಅವರಂತ ಧೀಮಂತ ನಾಯಕನ್ನು ಕಮ್ಯನಿಷ್ಟರು ದೇಶಕ್ಕೆ ಕೊಟ್ಟರು. ಬಂಗಾಳದ ನಕ್ಸಲ್ ಬಾರೀ ಎಂಬ ಹಳ್ಳಿಯಲ್ಲಿ ಚಾರುಮುಜುಂದಾರ್ ನೇತೃತ್ವದಲ್ಲಿ ಆರಂಭವಾದ  ಕ್ರಾಂತಿಕಾರೀ ಚಳುವಳಿಯು ಇಂದು ನಕ್ಸಲ್ ಚಳುವಳಿಯೆಂದೇ ಎಂದೇ ಪ್ರಸಿದ್ಧವಾಗಿದೆ.

ನನ್ನ ಬಂಗಾಳೀ ಗೆಳೆಯರೆಲ್ಲ ( ಪ್ರೊ. ಆದಿತ್ಯ ಮುಖರ್ಜೀ, ಬಿಷ್ಣುಪ್ರಿಯಯಾ ದತ್  ಪಾರ್ತೋ ದತ್, ಕುಣಾಲ್   ಮೊದಲಾದವರು) ತುಂಬ ಸೌಮ್ಯವಾದಿಗಳು. ಮನೆಯಲ್ಲಿ ನಮಗೆಲ್ಲ ಅಡುಗೆ ಮಾಡಿ ಹಾಕುವ ಮೊಯಿನಾ ವಾರಕ್ಕೊಮ್ಮೆ ಸಾಸಿವೆ ಹಾಕಿದ ಮೀನು ( ಮಾಚೆರ್ ಜೋಲ್) ಮಾಡಿದರೆ ನಮಗೆಲ್ಲ ದಿನ ಏನೋ ಸಂಭ್ರಮ!.
ಈಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸೆ, ಸಾವು , ರಕ್ತದ ಹರಿವು, ಪ್ರತಿಮಾ ಭಂಜನೆಗಳು ಬಂಗಾಲದ ಬಗೆಗಣ ಉತ್ಸಾಹವನ್ನು ಕಡಿಮೆ ಮಾಡಿ, ಮನಸನ್ನು ಮುದುಡಿಸುತ್ತಿದೆ. ಶಕ್ತಿ ರಾಜಕಾರಣವು ಎಷ್ಟೊಂದು ಹೇಯವಾದ ಹಂತಕ್ಕೆ ತಲುಪಿಬಿಟ್ಟಿದೆ! ತನ್ನ ಶ್ರೀಮಂತ ಪರಂಪರೆಯನ್ನು ಬಂಗಾಳ ಉಳಿಸಿಕೊಳ್ಳುವುದೇ ತಿಳಿಯದು.

No comments: