ಪರಿಚಯ:
ಡಾ.ಪುರುಷೋತ್ತಮ
ಬಿಳಿಮಲೆಯವರು ಸುಳ್ಯತಾಲೂಕಿನ ಪಂಜದವರು. ಪುತ್ತೂರಿನಲ್ಲಿ ಪದವಿ ಶಿಕ್ಷಣ ಪಡೆದ ಓದಿದ ಅವರು 1979ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ
ಸ್ನಾತಕೋತ್ತರ ಪದವಿಯನ್ನೂ, 1984ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡರು.
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ
ಸೇವೆ ಸಲ್ಲಿಸಿದ ಡಾ.ಬಿಳಿಮಲೆಯವರು 1998ರಿಂದ ದೆಹಲಿಯ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್
ಸ್ಟಡೀಸ್ ನ ನಿರ್ದೇಶಕರಾಗಿ ಕೆಲಸ ಮಾಡಿ, ಇದೀಗ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ
ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾರೆ.
ಮೆಕೆಂಜಿ
ಕೈಫಿಯತ್ತುಗಳು, ಲಿಂಗರಾಜನ ಹುಕುಂ ನಾಮೆ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಶಿಷ್ಟ ಪರಿಶಿಷ್ಟ,
ಕರಾವಳಿ ಜಾನಪದ, ಕೂಡು ಕಟ್ಟು, ಜನಸಂಸ್ಕೃತಿ, ಬಹುರೂಪ, ಮೆಲುದನಿ ಇವರ ಪ್ರಮುಖ ಕೃತಿಗಳು. ಹೀಬ್ರೂ, ವಸೆದಾ, ನ್ಯೂಯಾರ್ಕ್, ಟೆಕ್ಸಾಸ್, ಲಂಡನ್, ಹೊನುಲುಲು
ಮೊದಲಾದ ಕಡೆಗಳಲ್ಲಿ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಜಾನಪದದ ಬೇರೆ ಬೇರೆ ಮುಖಗಳ ಬಗ್ಗೆ ಪ್ರಬಂಧ
ಮಂಡಿಸಿರುವ ಡಾ. ಬಿಳಿಮಲೆಯವರು ಯಕ್ಷಗಾನ ಕಲಾವಿದರೂ ಹೌದು . ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಾಯವಾಗಿವೆ.
No comments:
Post a Comment