ನವದೆಹಲಿಯಲ್ಲಿ ತುಳು ಪಾಡ್ದನಗಳ ಹೊಸ ಅಧ್ಯಯನ ವಿಧಾನಗಳ ಕುರಿತು ವಿಚಾರ ಸಂಕಿರಣ
ದೆಹಲಿ ತುಳು ಸಿರಿಯು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು ಹಾಗೂ ದೆಹಲಿ ಕರ್ನಾಟಕ ಸಂಘದ ಸಹಯೋಗದೊಂದಿಗೆ ತುಳು ಪಾಡ್ದನಗಳ ಹೊಸ ಅಧ್ಯಯನ ವಿಧಾನಗಳು ಎಂಬ ಒಂದು ದಿನದ ವಿಚಾರ ಸಂಕಿರಣ ಮತ್ತು ತುಳುನಾಡಿನ ಜಾನಪದ ನೃತ್ಯರೂಪಕವನ್ನು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಇದೇ ಭಾನುವಾರ ೨೭ನೇ ನವೆಂಬರ್ ೨೦೧೬ರಂದು ನಡೆಸಲಿದೆ.
ವಿಚಾರ ಸಂಕಿರಣದ ಉದ್ಘಾಟನೆಯನ್ನು ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಡಾ. ಎಂ. ವೀರಪ್ಪ ಮೊಯಿಲಿ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರು ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಲಿರುವರು.
ತೀವ್ರವಾದ ಜಾಗತೀಕರಣ ಪ್ರಕ್ರಿಯೆಗೆ ಒಳಗಾಗಿರುವ ಕರಾವಳಿ ಕರ್ನಾಟಕದಲ್ಲಿ ಶತಮಾನದಿಂದ ಉಳಿದು ಬಂದಿರುವ ಪಾಡ್ದನಗಳು ಇದೀಗ ನಿರ್ವಹಿಸುತ್ತಿರುವ ಕಾರ್ಯ, ಅದರ ಸ್ವರೂಪದಲ್ಲಾಗುತ್ತರುವ ಬದಲಾವಣೆಗಳು, ಪಾಡ್ದನಗಳು ಸಮಕಾಲೀನ ಸಮಾಜದೊಂದಿಗೆ ಹೊಂದಿರುವ ಸಂಬಂಧ, ಅದರ ಧಾರ್ಮಿಕತೆ, ಪಾಡ್ದನಗಳನ್ನು ಈಗ ಹೇಗೆ ಶೈಕ್ಷಣಿಕವಾಗಿ ಅಧ್ಯಯನ ಮಾಡಬಹುದು ಎಂಬಿತ್ಯಾದಿ ಮಹತ್ವದ ವಿಷಯಗಳ ಕುರಿತು ಈ ವಿಚಾರ ಸಂಕಿರಣದಲ್ಲಿ ಚರ್ಚಿಸಲಾಗುವುದು.
ಮೊದಲ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಪ್ರೊ. ಬಿ.ಎ. ವಿವೇಕ ರೈ ಅವರು ಪಾಡ್ದನಗಳ ಅಧ್ಯಯನ ವಿಧಾನಗಳ ನವೀನ ಕ್ರಮಗಳ ಕುರಿತು ಪ್ರಬಂಧ ಮಂಡಿಸಲಿರುವರು. ಮಂಗಳೂರು ವಿಶ್ವವಿದ್ಯಾಲಯ ಯಕ್ಷಗಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಡಾ. ರಾಜಶ್ರೀ ರೈ ಅವರು ಸಮಕಾಲೀನ ತುಳು ಸಮಾಜ ಮತ್ತು ಪಾಡ್ದನಗಳ ಆಂತರಿಕ ಸಂಬಂಧಗಳ ಸ್ವರೂಪ ನಿಷ್ಕರ್ಷೆ ಕುರಿತು ಮಾತಾಡುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ದಿವಾಕರ ಕೊಕ್ಕಡ ಅವರು ತುಳುನಾಡಿನ ಸಮಕಾಲೀನ ಧಾರ್ಮಿಕತೆ ಮತ್ತು ಪಾಡ್ದನಗಳ ಕುರಿತು ಮಾತಾಡುವರು.
ಎರಡನೇ ಗೋಷ್ಠಿಯಲ್ಲಿ ಶ್ರೀಮತಿ ಎಂ. ಜಾನಕಿ ಬ್ರಹ್ಮಾವರ ಅವರು ಭೂತಾರಾಧನೆ ಮತ್ತು ಪಾಡ್ದನಗಳ ನಡುವಣ ಆಧುನಿಕ ಸಂಬಂಧಗಳ ಕುರಿತು, ಮಂಗಳೂರು ಸೈಂಟ್ ಅಲೋಸಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಯಕ್ಷಗಾನ, ನಾಟಕ, ಸಿನೇಮಾ ಇತ್ಯಾದಿಗಳಲ್ಲಿ ಪಾಡ್ದನಗಳ ಆಧುನಿಕ ವಿಸ್ತರಣೆಗಳು ಕುರಿತು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಬಿ. ಶಿವರಾಮ ಶೆಟ್ಟಿ ಅವರು ಜಾಗತೀಕರಣದ ಸಂದರ್ಭದಲ್ಲಿ ಪಾಡ್ದನಗಳ ಕುರಿತು ಮಾತಾಡಲಿದ್ದಾರೆ.
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ ಮತ್ತು ಮಂಗಳೂರು ವಿಶ್ವವಿದ್ಯಾಲಯ ಈ ಕಾರ್ಯಕ್ರಮಕ್ಕೆ ಸಹಯೋಗ ನೀಡಿವೆ.
No comments:
Post a Comment