ಸಂತಾಪ ಸೂಚನೆ
ಡಾ. ಜಿ
ಎಸ್ ಶಿವರುದ್ರಪ್ಪನವರು 20ನೇ ಶತಮಾನದ ಪ್ರಮುಖ ಸಾಹಿತ್ಯಿಕ ಚಳುವಳಿಗಳಾದ ನವೋದಯ, ಪ್ರಗತಿಶೀಲ, ನವ್ಯ
ಮತ್ತು ಬಂಡಾಯಗಳ ಅತ್ಯುತ್ತಮ ಅಂಶಗಳನ್ನೆಲ್ಲ ಮೈಗೂಡಿಸಿಕೊಂಡು
ಬರೆದ ಮಹತ್ವದ ಲೇಖಕ. ಅವರ ಗದ್ಯ ಮತ್ತು ಪದ್ಯಗಳಲ್ಲಿ ನವೋದಯದ ಭಾವುಕತೆ, ಪ್ರಗತಿಶೀಲ ಚಳುವಳಿಯ ಸಾಮಾಜಿಕ ಕಳಕಳಿ,
ನವ್ಯದ ಆಕೃತಿ ಸೂಕ್ಷ್ಮತೆ ಮತ್ತು ಬಂಡಾಯದ ಪ್ರಗತಿಪರ ಚಿಂತನೆಗಳು ತಾನೇ ತಾನಾಗಿ ಮೇಳವಿಸಿತ್ತು. ಹಾಗೆ
ನೋಡಿದರೆ ಅವರ ಗದ್ಯ ಮತ್ತು ಪದ್ಯಗಳ ನಡುವೆ ಅಂಥ ಅಂತರವೇನೂ ಇರಲಿಲ್ಲ. ಎಲ್ಲ ವಯಸ್ಸಿನ ಓದುಗರನ್ನು
ಏಕಕಾಲಕ್ಕೆ ಮುಟ್ಟಬಲ್ಲ ಶಕ್ತಿ ಅವರ ಭಾಷೆಗಿತ್ತು.
ಜಿ ಎಸ್
ಎಸ್ ಒಳ್ಳೆಯ ಆಡಳಿತಗಾರನಾಗಿಯೂ ಹೆಸರು ಪಡೆದವರು. ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು
ಕಟ್ಟಿದ ರೀತಿ ಇದಕ್ಕೆ ಅತ್ಯುತ್ತಮ ಉದಾಹರಣೆ. ನಾಡಿನ ಪ್ರತಿಭಾವಂತರನ್ನೆಲ್ಲ ಒಂದೆಡೆ ಸೇರಿಸಿದ ಹಿರಿಮೆ
ಅವರದು. ಅವರ ನೇತೃತ್ವದಲ್ಲಿ ನಡೆದ ವಿಚಾರ ಸಂಕಿರಣಗಳು ನಾಡಿನ ಚಿಂತನಾಕ್ರಮವನ್ನೇ ಬದಲಾಯಿಸಿದುವು.
ಕುವೆಂಪು
ಅವರ ವಿಚಾರ ಧಾರೆಗಳಿಂದ ಪ್ರಭಾವಿತರಾಗಿದ್ದ ಅವರು, ತಮ್ಮ ಜೀವಿತಾವಧಿಯುದ್ದಕ್ಕೂ, ಕೋಮುವಾದ, ಜಾತಿವಾದ,
ದಲಿತ ಮತ್ತು ಮಹಿಳೆಯರ ಮೇಲಿನ ಅನ್ಯಾಯಗಳನ್ನು ಪ್ರತಿಭಟಿಸುತ್ತಲೇ ಬಂದರು. ಯಾರ ಹಂಗಿಗೂ ಒಳಗಾಗದೆ,
ತಮ್ಮ ಅಭಿಪ್ರಾಯಗಳನ್ನು ತಮ್ಮದೇ ಮೃದು ಭಾಷೆಯಲ್ಲಿ ಪ್ರಕಟಪಡಿಸುತ್ತಿದ್ದ ಅವರು ನಾಡಿನ ವಿವೇಕ ಸದಾ
ಜಾಗೃತರಾಗಿರುವಂತೆ ನೋಡಿಕೊಳ್ಳುತ್ತಿದ್ದರು.
20 ನೇ
ಶತಮಾನದ ಪ್ರಮುಖ ವೈಚಾರಿಕರೂ, ಲೇಖಕರೂ ಆಗಿದ್ದ ಅವರಿಂದ ನಾನು ಮತ್ತು ನನ್ನ ತಲೆಮಾರು ವಿಶೇಷವಾದ ಪ್ರಭಾವಕ್ಕೆ
ಒಳಗಾಗಿದ್ದೇವೆ.
ಅವರ ನಿಧನಕ್ಕೆ
ನಾನು ನನ್ನ ತೀವ್ರ ಸಂತಾಪವನ್ನು ಪ್ರಕಟಪಡಿಸುತ್ತಿದ್ದೇನೆ.
No comments:
Post a Comment