ನಮ್ಮ ತಂದೆಗೆ ಯಕ್ಷಗಾನ ನೋಡುವ, ಅದರಲ್ಲಿ ಆಗೀಗ ವೇಷ ಹಾಕುವ, ತಾಳಮದ್ದಳೆಯಲ್ಲಿ ಕುಳಿತು ಅರ್ಥ ಹೇಳುವ ಹುಚ್ಚಿತ್ತು. ಅದರಿಂದಾಗಿ ಅವರ ಲೋಕಜ್ಞಾನ ಸಾಕಷ್ಟು ವಿಸ್ತಾರವಾಗಿತ್ತು. ಹೀಗಾಗಿ ಮಕ್ಕಳು ಚೆನ್ನಾಗಿ ಓದಿದರೆ, ಭಯಾನಕ ಬಡತನ ಮತ್ತು ಶೋಷಣೆಗಳಿಂದ ಪಾರಾಗಿಬಿಡಬಹುದು ಎಂಬ ಸರಳ ತಿಳಿವಳಿಕೆ ಅವರಿಗಿತ್ತು. ಆದರೇನು ಮಾಡೋಣ? ಜಾತಕದಲ್ಲಿ ವಿದ್ಯಾಯೋಗ ಇಲ್ಲವೆಂದು ಬರೆದಾಗಿದೆಯಲ್ಲ? ಆದರೆ ನನ್ನ ಅಮ್ಮನ ತರ್ಕ ಯಾವಾಗಲೂ ಅಪ್ಪನಿಗಿಂತ ಬೇರೆ. ’ಜಾತಕ ಹೇಗಾದರೂ ಇರಲಿ, ನಾವು ಮಾಡುವ ಪ್ರಯತ್ನ ಮಾಡಲೇಬೇಕು’, ಎಂಬುದು ಅವಳ ವಾದ. ಹಾಗೂ ಹೀಗೂ ಐದು ವರ್ಷ ಕಳೆದು ಆರನೇ ವರ್ಷಕ್ಕೆ ಕಾಲಿಡುವಾಗ ಮಗನನ್ನು ಶಾಲೆಗೆ ಸೇರಿಸುವುದೋ ಬಿಡುವುದೋ ಎಂಬ ಬಗ್ಗೆ ತಂದೆ-ತಾಯಿಯರ ನಡುವೆ ಸಾಕಷ್ಟು ವಾದ-ವಿವಾದ ಬೆಳೆದು ಕೊನೆಗೂ ಶಾಲೆಗೆ ಸೇರಿಸುವುದೆಂದು ನಿರ್ಧರಿಸಲಾಯಿತು. ಈ ವಾದ ವಿವಾದಗಳೆಲ್ಲ ನನಗಿನ್ನೂ ನೆನಪಿದೆ. ಆಗ ನಾವೆಲ್ಲ ಪಶ್ಚಿಮ ಘಟ್ಟದ ದಟ್ಟ ಕಾಡಿನ ನಡುವಣ ’ವಾಟೆಕಜೆ’ ಎಂಬ ಸ್ಥಳದಲ್ಲಿದ್ದೆವು. ಆ ಕಾಡಲ್ಲಿ ನಮ್ಮದೊಂದೇ ಮನೆ. ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರ ಕಾಡಲ್ಲಿ ಇಳಿಯುತ್ತಾ ನಡೆದರೆ, ( ಮಲೆಘಟ್ಟ ಸೋಪಾನ ಕೆಳಪಟ್ಟಿಯಲಿ ಉರುಳು....) ಅಲ್ಲೊಂದು ಧುಮ್ಮಿಕ್ಕಿ ಹರಿಯುವ ಹೊಳೆಯಿದೆ. ಆ ಹೊಳೆಯ ನಡುವಣ ಬಂಡೆಗಳನ್ನು ಚಾಕಚಕ್ಯತೆಯಿಂದ ಹಾರಿ ಹೊಳೆ ದಾಟಿ ಮುಂದೆ ಸುಮಾರು ಮೂರು ಕಿ.ಮೀ. ದೂರ ನಡೆದರೆ ಅಲ್ಲೊಂದು ಶಾಲೆ. ಆ ಶಾಲೆಗೆ ಸೇರುವುದು ನನಗೂ ಆಸೆ. ಬೇರೆ ಮನುಷ್ಯರನ್ನು ನೋಡಲಿರುವ ಏಕೈಕ ಸ್ಥಳವದು.
ಸರಿ. ಶಾಲೆಗೆ ಹೊರಡುವ ಸಕಲ ಸಿದ್ಧತೆಗಳಾದವು. ಜೂನ್ ತಿಂಗಳ ಒಂದು ಮುಂಜಾನೆ ಅಪ್ಪ ನನ್ನನ್ನು ಪಂಜ ಎಂಬ ನಾಲ್ಕಂಗಡಿಗಳ ಪೇಟೆಗೆ ಕರೆದೊಯ್ದರು. ಆ ಪೇಟೆ ಆಗ ನನಗೆ ಮಾಯಾನಗರಿ ಎಂಬಂತೆ ಕಾಣತೊಡಗಿತ್ತು. ಆಲ್ಲಿಯ ’ಮರಿಯಾ ಮಹಲ್’ ಎಂಬ ಅಂಗಡಿಯಲ್ಲಿ ಕುಳಿತಿದ್ದ ದರ್ಜಿಯ ಬಳಿ ಕರೆದೊಯ್ದ ನನ್ನ ತಂದೆ, ’ಈತ ಶಾಲೆ ಸೇರುವವನಿದ್ದಾನೆ. ಇವನಿಗೆ ಎಷ್ಟು ಸಲ ಹಾಕಿದರೂ ಹರಿದು ಹೋಗದಂಥ ದಪ್ಪ ಬಟ್ಟೆಯೊಂದರಿಂದ ಅಂಗಿಯೂ, ಅದಕ್ಕಿಂತ ಇನ್ನೂ ಸ್ವಲ್ಪ ದಪ್ಪದ ಬಟ್ಟೆಯಿಂದ ಚೆಡ್ಡಿಯೊಂದನ್ನು ಹೊಲಿದುಕೊಡಬೇಕೆಂದೂ’ ಕೇಳಿಕೊಂಡರು. ಜೊತೆಗೆ ಸುಮಾರು ೧೦ ಕಿ.ಮೀ. ದಿನನಿತ್ಯ ನಡೆದು ಚೀಲ ಹೆಗಲಿಗೇರಿಸಿಕೊಂಡು ಶಾಲೆಗೆ ಹೋಗಬೇಕಾಗಿರುವುದರಿಂದ ಅಂಗಿಯ ಹೆಗಲ ಭಾಗದಲ್ಲಿ ಅದು ಬೇಗ ಹರಿದು ಹೋಗಿ ಬಿಡುವ ಸಾಧ್ಯತೆ ಇರುವುದರಿಂದ, ಆ ಭಾಗಗಳಲ್ಲಿ ಒಂದೆರಡು ಪಟ್ಟಿ ಹೆಚ್ಚಿಗೆ ಇರಿಸಬೇಕೆಂದೂ ಹೇಳಿದರು. ಎಷ್ಟು ಮಣ್ಣಾದರೂ ಕಾಣಬಾರದೆಂಬ ಉದ್ದೇಶದಿಂದ ಮಣ್ಣಿನ ಬಣ್ಣವನ್ನೇ ಆರಿಸಲಾಯಿತು. ಅಂಗಿ-ಚೆಡ್ಡಿ ಸಿದ್ಧವಾಗುವ ಹೊತ್ತಿಗೆ ಅಪ್ಪ ಮತ್ತೆ ಆ ಜಾತಕ ಬರೆದ ಪುಣ್ಯಾತ್ಮನಲ್ಲಿಗೆ ಹೋಗಿ "ಹೇಗೂ ಮಗನಿಗೆ ವಿದ್ಯಾಯೋಗ ಇಲ್ಲ. ಆದರೂ ಜಾತಕ ನೋಡಿ ಒಳ್ಳೆ ದಿನ ಗೊತ್ತು ಮಾಡಿಕೊಡಿರಿ" ಎಂದು ಬೇಡಿಕೊಂಡ ಪ್ರಕಾರ ಆತ ಆಗಸ್ಟ್ ತಿಂಗಳಲ್ಲಿ ಒಂದು ದಿನ ಗೊತ್ತು ಮಾಡಿಕೊಟ್ಟು, ’ಒಳ್ಳೆಯದಾಗಲಿ’ ಎಂದು ಹರಸಿದ.
ನಿರೀಕ್ಷಿಸಿದಂತೆ ಶಾಲೆಗೆ ಸೇರುವ ಮುನ್ನಾ ದಿನ ಹೊಸ ಅಂಗಿ-ಚೆಡ್ಡಿ ಬಂತು. ಆದರೆ ಅದಕ್ಕೆ ಆತ ಇಸ್ತ್ರಿ ಮಾಡಿರಲಿಲ್ಲ. ಇಸ್ತ್ರಿ ಹಾಕಿದ ಅಂಗಿ ಹೇಗೆ ಗರಿ ಗರಿಯಾಗಿ ಇರುತ್ತದೆ ಎಂಬುದನ್ನು ಪಂಜದ ಜಾತ್ರೆಯಲ್ಲಿ ನೋಡಿದ್ದ ನನಗೆ ಒಂದು ಉಪಾಯ ಹೊಳೆಯಿತು. ನಾನೇ ಅಂಗಿ-ಚೆಡ್ಡಿಗಳನ್ನು ಚೆನ್ನಾಗಿ ಮಡಚಿದೆ. ಪಂಜದಿಂದ ಆಗೀಗ ಅಪ್ಪ ತರುತ್ತಿದ್ದ ಆಗಣ ’ನವಭಾರತ’ ಪತ್ರಿಕೆಯಲ್ಲಿ ಅದನ್ನು ಇರಿಸಿ, ಸ್ವಲ್ಪ ಸ್ಥೂಲ ಕಾಯಕರಾಗಿದ್ದ ಅಪ್ಪನನ್ನು ಅದರ ಮೇಲೆ ಕುಳಿತುಕೊಳ್ಳಲು ವಿನಂತಿಸಿಕೊಂಡೆ. ಅದಕ್ಕೊಪ್ಪಿದ ಅಪ್ಪ ಸಮಯ ಸಿಕ್ಕಾಗಲೆಲ್ಲ ಅದರ ಮೇಲೆ ಕುಳಿತು ’ಕುಂಡೆ ಇಸ್ತ್ರಿ’ಗೆ ಸಹಕರಿಸಿದರು.
ಆ ದಿನ ಶಾಲೆಗೆ ಹೊರಡಲು ಸಿದ್ಧನಾದೆ. ಎಲ್ಲಕ್ಕಿಂತ ಕಾತರ ಅಮ್ಮನದಾಗಿತ್ತು. ’ಮಗುವನ್ನು ಶಾಲೆವರೆಗೂ ಕರೆದುಕೊಂಡು ಹೋಗಬೇಕು. ಅವ ಹಿಂದೆ ಬರುವಾಗ ಹೊಳೆವರೆಗೆ ಬರಲಿ, ಹೊಳೆದಾಟಿಸಲು ನಾನಿದ್ದೇನೆ’ ಅಂತ ಅಪ್ಪನಿಗೆ ಹೇಳಿದರು. ನಾನು ನವಭಾರತದ ಕಟ್ಟೊಳಗಿಂದ ಅಂಗಿ-ಚೆಡ್ಡಿಗಳನ್ನು ತೆಗೆಯತೊಡಗಿದ್ದಂತೆ ನನ್ನ ಕೈಕಾಲುಗಳೆಲ್ಲ ತಣ್ಣಗಾಗಿಬಿಟ್ಟಿತು. ಅಪ್ಪನ ಕುಂಡೆ ಇಸ್ತ್ರಿಯ ಪರಿಣಾಮವಾಗಿ ನವಭಾರತ ಪತ್ರಿಕೆಯ ಅಕ್ಷರಗಳೆಲ್ಲ ನನ್ನ ಹೊಸ ಅಂಗಿಯ ಮೇಲೆ ಅಕರಾಳ-ವಿಕರಾಳವಾಗಿ ಮೂಡಿ ಹೊಸ ವಿನ್ಯಾಸವೊಂದು ಸಿದ್ಧಗೊಂಡಿತ್ತು. ಬಳಬಳನೆ ಕಣ್ಣೀರು ಉರುಳತೊಡಗಿತು. ಮೆಲ್ಲನೆ ಅಂಗಿಯ ಮೇಲೆ ಕೈಯಾಡಿಸಿದೆ. ಪತ್ರಿಕೆಯ ಶಾಯಿ ಇನ್ನಷ್ಟು ಹರಡಿಕೊಂಡಿತು. "ನಿನ್ನ ಹಣೆಯಲ್ಲಿ ವಿದ್ಯೆ ಬರೆದಿಲ್ಲ" ಎಂಬ ಅಪ್ಪನ ಉದ್ಗಾರ ಸ್ವಲ್ಪ ಗಡುಸಾಗಿಯೇ ಕೇಳಿತು.
ಏನಿದ್ದರೂ ಅಂಗಿಯ ಭುಜದ ಭಾಗ ದಪ್ಪಗಾಗಿ ಸುಮಾರಾಗಿ ನನ್ನ ಕಿವಿವರೆಗೆ ತಲುಪಿ ನಿಂತಿತ್ತು. ಚೆಡ್ಡಿ ಕಾಣದಂತೆ ಅಂಗಿ ಮೊಣಕಾಲಿನವರೆಗೆ ಚಾಚಿಕೊಂಡಿತ್ತು. ಅಮ್ಮ ಕೊಟ್ಟ ಚೀಲ ಹೆಗಲಿಗೇರಿಸಿ, ಗೊರಬೆಯೊಳಗೆ ನಿಂತೆ. ಆ ಗೊರಬೆ ನನ್ನ ಸೈಜಿನದಾಗಿರಲಿಲ್ಲವಾಗಿದ್ದರಿಂದ ತಲೆಯ ಮೇಲಿಂದ ಕೆಳಗಿನವರೆಗೆ ಚಾಚಿಕೊಂಡು ನಡೆದಾಗ ನೆಲಕ್ಕೆ ತಾಗಿ ಬರ ಬರನೆ ಸದ್ದು ಮಾಡುತ್ತಿತ್ತು. ಸ್ವಲ್ಪ ಬಗ್ಗಿದರೆ ಗೊರಬೆಯ ಹಿಂಭಾಗ ಮೇಲಕ್ಕೇಳುತ್ತಿತ್ತು, ಹಾಗಾಗಿ ಬೆನ್ನು ಬಗ್ಗಿಸಿ ನಡೆಯುವುದು ಅನಿವಾರ್ಯವಾಗಿತ್ತು. ಹೇಗೋ ಸುಧಾರಿಸಿಕೊಂಡು, ಒಂದು ಕೈಯಲ್ಲಿ ಬುತ್ತಿ, ಇನ್ನೊಂದು ಕೈಯಲ್ಲಿ ಮೈಮೇಲೇರುವ ಜಿಗಣೆಗಳನ್ನು ಉದುರಿಸಲು ಬಟ್ಟೆಯಲ್ಲಿ ಕಟ್ಟಿಕೊಂಡ ಉಪ್ಪು, ಹೆಗಲ ಮೇಲೆ ಚೀಲ, ತಲೆಯ ಮೇಲೆ ಗೊರಬೆ ಇರಿಸಿಕೊಂಡು, ಅಪ್ಪನ ಹಿಂದೆ ಹೆಜ್ಜೆ ಹಾಕುತ್ತಾ ಸುಮಾರು ೫ ಕಿ.ಮೀ. ನಡೆದು ೧೨ ಗಂಟೆ ಸುಮಾರಿಗೆ ಶಾಲೆಗೆ ತಲುಪಿದೆ.
ಜಾತಕ ಬರೆದ ಜೋಯಿಸರು ತಿಳಿಸಿದಂತೆ ಆ ದಿವಸ ಬಹಳ ಒಳ್ಳೆಯ ದಿವಸವಾಗಿತ್ತು. ಆ ಕಾರಣಕ್ಕಾಗಿಯೇ ಶಾಲೆಗೆ ರಜೆ ಸಾರಲಾಗಿತ್ತು! ಅಪ್ಪ ದಿಗ್ಭ್ರಾಂತರಾಗಿದ್ದರು. ನನಗೇನೂ ತೋಚಲಿಲ್ಲ. ನನ್ನನ್ನು ಮನೆಗೆ ಹಿಂದಿರುಗಲು ಹೇಳಿ ಅಪ್ಪ ಪಂಜದ ಕಡೆ ನಡೆದರು. ನಾನು ಮನೆ ಕಡೆಗೆ ಹಿಂದಿರುಗಿದೆ.
ನಿರೀಕ್ಷಗೂ ಮುನ್ನ ಒಂಟಿಯಾಗಿಯೇ ಮನೆಗೆ ಹಿಂದಿರುಗಿದ ನನ್ನನ್ನು ಕಂಡ ಅಮ್ಮನ ಕಣ್ಣಲ್ಲಿ ನೀರು. ಈಗ ಅಪ್ಪ ಅಮ್ಮ ಇಬ್ಬರೂ ಇಲ್ಲ. ಜಾತಕ ಬರೆದ ಜೋಯಿಸರೂ ಇಲ್ಲ. ನನಗೆ ಇವನ್ನೆಲ್ಲ ಬರೆಯುವಷ್ಟು ವಿದ್ಯೆ ಸಿಕ್ಕಿದೆ. ಜಾತಕ ಅನಾಥವಾಗಿ ಬಿದ್ದುಕೊಂಡಿದೆ
Published in Vijayakarnataka paper on October16, 2011
Published in Vijayakarnataka paper on October16, 2011