Thursday, October 13, 2011

ಓದುಗ - ಕೇಳುಗ - ನೋಡುಗ

ವಿದ್ಯಾರ್ಥಿ ಆನಂತರ ಅಧ್ಯಾಪಕನಾಗಿದ್ದ ಸಮಯದಲ್ಲಿ ನಾನು ಬಗೆ ಬಗೆಯ ಸಾಹಿತ್ಯ ಚರಿತ್ರೆಗಳನ್ನು ಓದಿದ್ದೆ. ಅವುಗಳಲ್ಲಿ ಕಾದಂಬರಿಯ ಹಾಗೆ ಓದಿಸಿಕೊಂಡು ಹೋಗುವ ರಂ. ಶ್ರೀ. ಮುಗಳಿ ಅವರ ಸಾಹಿತ್ಯ ಚರಿತ್ರೆ ಆಗ ನಮಗೆಲ್ಲಾ ಇಷ್ಟವಾಗಿತ್ತು. ಇವುಗಳ ಜೊತೆಗೆ ತ. ಸು. ಶಾಮರಾಯ, ಎಂ. ಮರಿಯಪ್ಪ ಭಟ್, ಸಿ. ವೀರಣ್ಣ ಮೊದಲಾದವರು ಬರೆದ ಬಗೆ ಬಗೆಯ ಸಾಹಿತ್ಯ ಚರಿತ್ರೆಗಳನ್ನೂ ಓದುತ್ತಿದ್ದೆವು. ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾಲಯಗಳು ಸಿದ್ಧಪಡಿಸಿದ ಸಾಹಿತ್ಯ ಚರಿತ್ರೆಯ ಬೃಹತ್ ಸಂಪುಟಗಳೂ ನಮ್ಮ ಅರಿವಿನ ವಲಯಗಳನ್ನು ವಿಸ್ತರಿಸಿವೆ ಎಂದು ನಾನು ಭಾವಿಸುತ್ತೇನೆ. ಆದರೆ, ಯಾಕೋ ಈಚೆಗೆ ಸಾಹಿತ್ಯ ಚರಿತ್ರೆಯ ಸಂಪುಟಗಳೇ ಬರುತ್ತಿಲ್ಲ.

ಇರಲಿ, ಈಗ ಪ್ರಕಟವಾಗಿರುವ ಸಾಹಿತ್ಯ ಚರಿತ್ರೆಯ ಸಂಪುಟಗಳು ಒಂದೇ ಬಗೆಯಲ್ಲಿ ರಚಿತವಾಗಿವೆ ಎಂದು ಈಗ ಅನ್ನಿಸುತ್ತದೆ. ಅವು ಕವಿಯ ಕಾಲ, ದೇಶ, ಕುಟುಂಬದ ವಿವರಗಳನ್ನು ನೀಡುವುದರ ಜೊತೆಗೆ ಕವಿಯ ಕೃತಿಗಳ ಬಗೆಗೆ ಸಂಕ್ಷಿಪ್ತವಾಗಿಯೋ ಇಲ್ಲ ಸವಿವರವಾಗಿಯೋ ವಿವರ ನೀಡುತ್ತವೆ. ಬಹುಮಟ್ಟಿಗೆ ವಡ್ಡಾರಾಧನೆಯಿಂದ ಆರಂಭವಾಗುವ ಕನ್ನಡ ಸಾಹಿತ್ಯ ಚರಿತ್ರೆಯು ಮೈಸೂರು ಅರಸರ ಕಾಲದಲ್ಲಿ ರಚಿತವಾದ ಕೃತಿಗಳನ್ನು ವಿವರಿಸುವದರೊಂದಿಗೆ ಮುಕ್ತಾಯವಾಗುತ್ತದೆ. ಹೊಸಗನ್ನಡ ಸಾಹಿತ್ಯ ಚರಿತ್ರೆಯನ್ನು ಬರೆಯುವವರು ನವೋದಯದಿಂದ ಆರಂಭಿಸಿ ದಲಿತ - ಬಂಡಾಯ ಸಾಹಿತ್ಯಗಳನ್ನು ಪರಿಚಯಿಸುವದರೊಂದಿಗೆ ಕೊನೆಗೊಳ್ಳುತ್ತದೆ. ಅಂದರೆ ಬಹುಮಟ್ಟಿಗೆ ನಮ್ಮ ಸಾಹಿತ್ಯ ಚರಿತ್ರೆಗಳು ಕೃತಿಯೊಂದನ್ನು ಅಂತಿಮವೆಂದು ಪರಿಭಾವಿಸಿಕೊಂಡು ಬೆಳೆದಿವೆ.

ಈಗ ಈ ಬಗೆಯ ಬರೆಹದ ಕ್ರಮಗಳಿಂದ ನಮ್ಮನ್ನು ಬಿಡಿಸಿಕೊಂಡು, ಬೇರೆ ಬಗೆಯ ಸಾಹಿತ್ಯ ಚರಿತ್ರೆಗಳನ್ನು ಬರೆಯಲು ಸಾಧ್ಯವೇ ಎಂದು ಯೋಚಿಸಬೇಕಾಗಿದೆ. ಸರಳವಾದ ಒಂದು ಉದಾಹರಣೆಯೊಂದಿಗೆ ಇದನ್ನು ಸ್ವಲ್ಪ ವಿಸ್ತರಿಸಬಯಸುತ್ತೇನೆ.

ಕನ್ನಡದಲ್ಲಿ ಪ್ರಕಟವಾಗಿರುವ ರಾಮಾಯಣ ಕಾವ್ಯ ಪರಂಪರೆಯನ್ನು ಗಮನಿಸೋಣ. ಜೈನರು ಮೊದಲು ಕನ್ನಡದಲ್ಲಿ ರಾಮಾಯಣ ಬರೆದರು. ಪೊನ್ನನ ’ಭುವನೈಕ ರಾಮಾಭ್ಯುದಯ’ (ಕ್ರಿ. ಶ. ಸು ೯೫೦), ನಾಗಚಂದ್ರನ ’ರಾಮಚಂದ್ರ ಚರಿತ ಪುರಾಣ’ (ಕ್ರಿ. ಶ. ಸು ೧೧೦೦), ಕುಮುದೇಂದುವಿನ ’ಕುಮುದೇಂದು ರಾಮಾಯಣ’ (೧೨೭೦), ನಾಗರಾಜನ ’ಪುಣ್ಯಾಸ್ರವ’ (೧೨೭೦), ದೇವಪ್ಪನ ’ರಾಮವಿಜಯ’ (೧೩೩೧), ಚಂದ್ರಶೇಖರನ ’ರಾಮಚಂದ್ರ ಚರಿತ (೧೭೦೦), ದೇವಚಂದ್ರನ ’ರಾಮಕಥಾವತಾರ’ (೧೮೦೦) ಮೊದಲಾದುವು ಜೈನ ರಾಮಾಯಣಗಳು. ಇವರು ವಿಮಲಸೂರಿ ಮತ್ತು ಗುಣಭದ್ರರು ಆರಂಭಿಸಿದ ಜೈನ ರಾಮಾಯಣದ ಎರಡು ಪರಂಪರೆಗಳನ್ನು ಕನ್ನಡದಲ್ಲಿ ಪುನರ್‌ಸೃಷ್ಟಿಸಿದರು. ಇವೆಲ್ಲ ಓದುಗ ಕೇಂದ್ರಿತ ಕಾವ್ಯಗಳೆಂಬುದನ್ನು ಗಮನಿಸಬೇಕು. ವಿವಿಧ ಛಂದೋಪ್ರಕಾರಗಳಲ್ಲಿ ರಚಿತವಾದ ಈ ಕಾವ್ಯಗಳು ಕಾವ್ಯ-ಶಾಸ್ತ್ರ ಪರಿಣತರಿಗೆ ತುಂಬ ಸಂತೋಷವನ್ನು ನೀಡಬಲ್ಲುವು.

ಇಂಥ ಓದುಗ ಕೇಂದ್ರಿತ ಕಾವ್ಯಗಳಿಂದ ಭಿನ್ನವಾದ ರಾಮಾಯಣ ಕಾವ್ಯಗಳನ್ನು ಹದಿನಾಲ್ಕನೆ ಶತಮಾನದ ಆನಂತರ ಬ್ಯಾಹ್ಮಣ ಕವಿಗಳು ಬರೆಯಲು ಆರಂಭಿಸಿದರು. ಈ ಬ್ರಾಹ್ಮಣ ಕವಿಗಳು ತಮಗಿಂತ ಪೂರ್ವದಲ್ಲಿ ಬಂದ ಜೈನ ರಾಮಾಯಣಗಳತ್ತ ನೋಡದೆ ಸಂಸ್ಕೃತದಲ್ಲಿದ್ದ ವಾಲ್ಮೀಕಿ ರಾಮಾಯಣದತ್ತ ತಿರುಗಿಕೊಂಡರು. ಕುಮಾರ ವಾಲ್ಮೀಕಿಯ ’ತೊರವೆ ರಾಮಾಯಣ’ (ಕ್ರಿ. ಶ. ೧೫೦೦), ಚಾಮರಾಜನ ’ರಾಮಾಯಣ’ (ಕ್ರಿ. ಶ. ೧೬೩೦), ತಿಮ್ಮರಸನ ’ಮಾರ್ಕಾಂಡೇಯ ರಾಮಾಯಣ’ (೧೬೫೦), ಮಲ್ಲರಸನ ’ದಶಾವತಾರ ಚರಿತೆ’ (೧೬೮೦), ಶಂಕರನಾರಾಯಣನ ’ಆಧ್ಯಾತ್ಮ ರಾಮಾಯಣ’ (೧೭೦೦) ಮತ್ತಿತರ ಕೃತಿಗಳು ಮಧ್ಯಕಾಲೀನ ಕರ್ನಾಟಕದಲ್ಲಿ ರಚಿತವಾದುವು. ಈ ಕಾವ್ಯ ಕೃತಿಗಳು ಮುಖ್ಯವಾಗಿ ಷಟ್ಪದಿಯಲ್ಲಿ ರಚಿತವಾದುವು ಎಂಬುದನ್ನು ಮುಖ್ಯವಾಗಿ ಗಮನಿಸಿದರೆ, ಅವು ’ಕೇಳುಗ’ ಕೇಂದ್ರಿತವಾಗಿ ಬೆಳೆದುವು ಎಂಬುದು ಗೊತ್ತಾಗುತ್ತದೆ. ಅಂದರೆ ಈ ಕಾವ್ಯವನ್ನು ಒಬ್ಬ ರಾಗವಾಗಿ ಹಾಡಿದರೆ ನೂರಾರು ಜನ ಅದನ್ನು ಕೇಳಬಹುದು. ಅದಕ್ಕೆ ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲ. ಕಾರಣ ಈ ಕಾವ್ಯಗಳು ’ಗಮಕ’ ಎಂಬ ಹೊಸ ಶೈಲಿಯೊಡನೆಯೂ ’ಹರಿಕತೆ’ ಎಂಬ ಇನ್ನೊಂದು ನವೀನ ಪ್ರಕಾರದೊಡನೆಯೂ ಸೇರಿಕೊಂಡು ವಿಸ್ತಾರವಾಗತೊಡಗಿದುವು. ಈ ಗಮಕ ಮತ್ತು ಹರಿಕತೆಗಳಿಗೆ ದೇವಸ್ಥಾನ ಮತ್ತಿತರ ಕಡೆಗಳಲ್ಲಿ ಅಭಿವ್ಯಕ್ತಿಗೆ ಅವಕಾಶ ದೊರೆಯುತ್ತಿದ್ದಂತೆ ಅವು ಅಲ್ಲಿನ ವಾಸ್ತು ಮತ್ತು ಶಿಲ್ಪಗಳ ಮೇಲೂ ಪರಿಣಾಮ ಬೀರತೊಡಗಿದವು. ರಾಮಾಯಣ ಸಂಬಂಧಿ ಅನೇಕ ಘಟನೆಗಳು ಸಭಾಂಗಣದ ಸುತ್ತೆಲ್ಲ ಶಿಲ್ಪಗಳಾಗಿ ವರ್ಣ ಚಿತ್ರಗಳಾಗಿ ಮರುಸೃಷ್ಟಿಕೊಂಡವು. ಹೀಗೆ ಓದುಗ ಕೇಂದ್ರಿತ ಸಾಹಿತ್ಯ ಪಠ್ಯಗಳು ಮಧ್ಯಕಾಲೀನ ಕರ್ನಾಟಕದಲ್ಲಿ ಕೇಳುಗ ಕೇಂದ್ರಿತ ಪಠ್ಯಗಳಾಗಿ ಮಾರ್ಪಟ್ಟು ಜನ ಸಮುದಾಯವನ್ನು ತಲುಪಲು ಪ್ರಯತ್ನಿಸಿದ್ದು ತುಂಬ ಕುತೂಹಲಕರ ವಿಷಯವಾಗಿದೆ.

ನಿಧಾನವಾಗಿ ಈ ’ಕೇಳುಗ’ ಕೇಂದ್ರಿತ ಪಠ್ಯಗಳು ೧೬-೧೭ ನೇ ಶತಮಾನದಲ್ಲಿ ’ನೋಡುಗ’ ಕೇಂದ್ರಿತ ಪಠ್ಯಗಳಾಗಿ ಬೆಳೆದದ್ದು ಕೂಡಾ ಇಲ್ಲಿ ಉಲ್ಲೇಖಾರ್ಹ. ಕುಂಬಳೆಯ ಪಾರ್ತಿಸುಬ್ಬ (೧೬೨೦), ಗೆರೆಸೊಪ್ಪೆ ಶಾಂತಪ್ಪಯ್ಯ, ಅಳಿಯ ಲಿಂಗರಾಜ, ಕಡಂದಲೆ ರಾಮರಾವ್ ಮೊದಲಾದ ಯಕ್ಷಗಾನ ಕವಿಗಳು ತೊರವೆ ರಾಮಾಯಣ, ದಶಾವತಾರ ಚರಿತ್ರೆ, ಹನುಮದ್ ರಾಮಾಯಣ, ಮತ್ತಿತರ ಕೇಳುಗ ಕೇಂದ್ರಿತ ಪಠ್ಯಗಳನ್ನು ಯಕ್ಷಗಾನ ಪ್ರಸಂಗಗಳಾಗಿ ಮಾರ್ಪಡಿಸಿದಾಗ ’ನೋಡುಗ’ ಕೇಂದ್ರಿತ ಪಠ್ಯಗಳು ಸೃಷ್ಟಿಯಾದುವು. ಯಕ್ಷಗಾನ ರಂಗಭೂಮಿಯ ಸೂಕ್ಷ್ಮಗಳನ್ನು ಬಹಳ ಚೆನ್ನಾಗಿ ತಿಳಿದಿದ್ದ ಪಾರ್ತಿಸುಬ್ಬ (೧೬೨೦) ನಂತೂ ತೊರವೆ ರಾಮಾಯಣವನ್ನು ಮುಖ್ಯವಾಗಿ ಆಧರಿಸಿ ರಾಮಾಯಣಕ್ಕೆ ಸಂಬಂಧಿಸಿದ ಸುಮಾರು ಎಂಟು ಪ್ರಸಂಗಗಳನ್ನು ಬರೆದುಬಿಟ್ಟ. ಆತನ ಪಠ್ಯಗಳು ಸಂಗೀತ, ಕುಣಿತ, ವೇಷಭೂಷಣ ಮತ್ತು ಮಾತುಗಾರಿಕೆಗಳೆಂಬ ನಾಲ್ಕು ಅಂಗಗಳ ಮೂಲಕ ಯಕ್ಷಗಾನವಾಗಿ ರಂಗಭೂಮಿಯಲ್ಲಿ ಪ್ರತ್ಯಕ್ಷವಾದಾಗ ಅವನ್ನು ಲಕ್ಷಾಂತರ ಜನ ನೊಡುವಂತಾಯಿತು. ಈ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಯಕ್ಷಗಾನ ಕಲಾವಿದರನೇಕರು ತೊರವೆ ರಾಮಾಯಣದ ಪದ್ಯಗಳನ್ನು ಎಲ್ಲೆಂದರಲ್ಲಿ ಗುನುಗುನುಸಿಕೊಂಡು ಓಡಾಡುತ್ತಿರುವುದನ್ನು ಯಾರಾದರೂ ಗಮನಿಸಬಹುದು.

ರಾಮಾಯಣದ ಹಾಗೆ ಭಾರತ ಪರಂಪರೆಯೂ ಕನ್ನಡದಲ್ಲಿ ವಿಸ್ತಾರಗೊಂಡಿದೆ. ಪಂಪನ ವಿಕ್ರಮಾರ್ಜುನ ವಿಜಯವು ಓದುಗ ಕೇಂದ್ರಿತ ಕಾವ್ಯ. ಕುಮಾರವ್ಯಾಸನದ್ದು ಕೇಳುಗ ಕೇಂದ್ರಿತ ಕಾವ್ಯ. ಕುಮಾರವ್ಯಾಸ ಭಾರತದ ಉದ್ಯೋಗಪರ್ವವನ್ನಾಧರಿಸಿದ, ’ಕೃಷ್ಣ ಸಂಧಾನ’ ಲಕ್ಷಾಂತರ ಪ್ರಯೋಗಗಳನ್ನು ಕಂಡ ನೋಡುಗ ಕೇಂದ್ರಿತ ಪಠ್ಯ.

ಹೀಗೆ ಪಠ್ಯಗಳು ಬಹುರೂಪಿಗಳಾಗಿ ವಿಸ್ತಾರಗೊಂಡಿವೆ, ಹಾಗೆ ವಿಸ್ತಾರಗೊಂಡು ಬದುಕುಳಿದಿವೆ. ಈ ನಿಟ್ಟಿನಲ್ಲಿ ಬರೆಯಬೇಕಾದ ಸಾಹಿತ್ಯ ಚರಿತ್ರೆ ಇಂದಿನ ಅಗತ್ಯಗಳಲ್ಲೊಂದಾಗಿದೆ.
Published in Vijayakarnataka paper on October 02, 2011

No comments: