Wednesday, October 12, 2011

ಆಡಂ ಮತ್ತು ಈವ್‌ಗಳನ್ನು ಬಿಟ್ಟು ಜಿಗಣೆಗಳ ಕಡೆಗೆ


ಕರ್ನಾಟಕ ಎತ್ತ ನೋಡಿದೆ ಮತ್ತು ಅದೀಗ ನೋಡುತ್ತಿದೆ? ನನಗೆ ಅನ್ನಿಸಿದ ಹಾಗೆ ಅದಲು ಮೊದಲು ನೋಡುತ್ತಿದ್ದುದು ಉತ್ತರದ ವಿಂಧ್ಯ ಪರ್ವತದ ಆಚೆಗೆ ಮತ್ತು ೧೯ನೇ ಶತಮಾನದ ಆನಂತರ ಪಶ್ಚಿಮದ ಕಡಲಾಚೆಯ ಕಡೆಗೆ. ಕನ್ನಡಕ್ಕೆ ಪರ್ವತಗಳನ್ನು ಸುಲಭವಾಗಿ ದಾಟುವ ಮತ್ತು ಕಡಲನ್ನು ಆರಾಮವಾಗಿ ಹಾರು ವಿಶೇಷ ಶಕ್ತಿ ಇರುವುದು ಕೂಡಾ ತುಂಬಾ ಕುತೂಹಲಕಾರಿ ವಿಷಯ. ಮೂಲ ದ್ರಾವಿಡದಿಂದ ನಿಧಾನವಾಗಿ ಬೇರೆಯಾಗಿ, ಆನಂತರದ ಕಾಲದಲ್ಲಿ ಸ್ವತಂತ್ರವಾಗಿ ಬೆಳೆದ ಕನ್ನಡ ಭಾಷೆಯು ಅದರ ಆರಂಭಿಕ ಕಾಲದಲ್ಲಿ ನೋಡಿದ್ದು ಉತ್ತರದ ಕಡೆಗೆ. ಹಾಗೆ ನೋಡಿದ್ದರಿಂದಲೇ ಅದಕ್ಕೆ ಉತ್ತರದಿಂದ ಆಗಮಿಸಿದ ಬೌದ್ಧ-ಜೈನ ಧರ್ಮಗಳು ಆಪ್ತವಾದವು. ಸಂಸ್ಕೃತವನ್ನೂ ಅದು ಆದರದಿಂದ ಸ್ವಾಗತಿಸಿತು. ೧೭೯೯ ರಲ್ಲಿ ಟಿಪ್ಪೂವಿನ ಮರಣಾನಂತರ ವಸಾಹತೀಕರಣಕ್ಕೆ ಒಳಪಟ್ಟ ಕರ್ನಾಟಕವು ನಿಧಾನವಾಗಿ ಉತ್ತರದ ಕಡೆ ನೋಡುವುದನ್ನು ಬಿಟ್ಟು ಪಶ್ಚಿಮದ ಕಡೆ ನೋಡಲು ಆರಂಭಿಸಿತು. ವಸಾಹತೀಕರಣಕ್ಕೆ ಮೊದಲು ಒಳಪಟ್ಟ ಕರಾವಳಿ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಕನ್ನಡದ ಮೊದಲ ಕಾದಂಬರಿಗಳು ಸಹಜವಾಗಿ ಕಾಣಿಸಿಕೊಂಡವು. ಬಿ.ಎಂ. ಶ್ರೀಕಂಠಯ್ಯನವರು ಅನುವಾದಿಸಿಕೊಟ್ಟ ಇಂಗ್ಲೀಷ್ ಗೀತೆಗಳು ಕನ್ನಡ ನವೋದಯ ಕಾವ್ಯಕ್ಕೆ ನಾಂದಿ ಹಾಡಿತು. ಬಿ. ಎಂ.ಶ್ರೀ ಅವರು ’ಅವಳ ತೊಡವೆ ಇವಳಿಗಿಟ್ಟು" ಎಂದಾಗ ಅವರ ಮುಂದೆ ಇದ್ದ ಚೆಲುವೆ ಪಶ್ಚಿಮದವಳು. ಮುಂದೆ ಪಶ್ಚಿಮದ ಪ್ರಭಾವವನ್ನು ಅರಗಿಸಿಕೊಂಡು ಹೊಸಗನ್ನಡ ಸಾಹಿತ್ಯ ವಿಫುಲವಾಗಿ ಬೆಳೆಯಿತು. ಕನ್ನಡ ನವ್ಯ ಕಾವ್ಯ ಮತ್ತೆ ಪಶ್ಚಿಮದ ಅಸ್ತಿತ್ವವಾದವೇ ಮೊದಲಾದ ಬಗೆ ಬಗೆಯ ಚಿಂತನಾ ಕ್ರಮಗಳಿಂದ ಪ್ರೇರಣೆ ಪಡೆಯಿತು. ನವ್ಯದ ಆನಂತರ ಬಂದ ಬಂಡಾಯ-ದಲಿತ ಸಾಹಿತ್ಯವು ಅಂಬೇಡ್ಕರ್-ಮಾರ್ಕ್ಸ್-ಲೋಹಿಯಾ ವಾದಗಳಿಗಿಂದ ಪ್ರಭಾವಿತಗೊಂಡಿತು.
ಹೀಗೆ ಕನ್ನಡವು ಉತ್ತರ ಮತ್ತು ಪಶ್ಚಿಮದಿಂದ ಪ್ರೇರಣೆ ಪಡೆದು ಬೆಳೆದಿದೆ. ಹಾಗೆ ಬೆಳೆದಾಗ ಅದು ತನ್ನ ಸ್ವಂತಿಕೆಯನ್ನು ಬಿಟ್ಟುಕೊಡದಿರುವುದು ಅದರ ಹೆಚ್ಚುಗಾರಿಕೆ. ಆದರೆ ಉತ್ತರ ಮತ್ತು ಪಶ್ಚಿಮದ ಕಡೆ ನೋಡಿದ ಅದು ಯಾಕೆ ದಕ್ಷಿಣ ಮತ್ತು ಪೂರ್ವದ ಕಡೆಗೆ ಯಾಕೆ ಮುಖ ಮಾಡಿಲ್ಲ? ಅಥವಾ ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಹಾಗೆ ಮಾಡಬಾರದೇಕೆ? ಹೀಗೆ ಮಾಡದ್ದರಿಂದ ಅದಕ್ಕಾದ ನಷ್ಟ ಎಷ್ಟು? ಕನ್ನಡವು ದಕ್ಷಿಣ ಮತ್ತು ಪೂರ್ವದಿಂದ ಪ್ರೇರಣೆ ಪಡೆಯಲು ಸಾಧ್ಯವುಂಟೇ? ಇಂಥ ಪ್ರೇರಣೆಗಳು ಕನ್ನಡವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಸಲಾರವೇ?
ಶಿಷ್ಯವೇತನವೊಂದರ ಸಹಾಯದಿಂದ ನಾನು ಪೂರ್ವದ ಕಡೆ ಒಂದೆರೆಡು ವರ್ಷಗಳ ಹಿಂದೆ ಪಯಣ ಬೆಳೆಸಿದ್ದೆ. ಟೋಕಿಯೋದಲ್ಲಿ ಇಳಿದು ಅಲ್ಲಿಂದ ಉತ್ತರಕ್ಕೆ ಸುಮಾರು ೩೦೦ ಕಿ.ಮಿ. ದೂರ ಪ್ರಯಾಣ ಬೆಳೆಸಿ ಹಾಯಚಿನೆ ಎಂಬ ಪರ್ವತದ ತಪ್ಪಲಲ್ಲಿ ಮೂರು ತಿಂಗಳ ಕಾಲ ಬದುಕಲು ನಿರ್ಧರಿಸಿದ್ದೆ. ನಮಗೆಲ್ಲ ಹಿಮಾಲಯ ಪರ್ವತವಿದ್ದ ಹಾಗೆ ಜಪಾನೀಯರಿಗೆ ಹಾಯಚಿನೆ ಪರ್ವತ. ಆ ಪರ್ವತದ ತುತ್ತ ತುದಿಯಲ್ಲಿ ನೀರಿನ ಹೊಂಡವೊಂದಿದ್ದು, ಅದು ಅತ್ಯಂತ ಪವಿತ್ರ ಮಾತ್ರವಲ್ಲ, ಅಲ್ಲಿ ಆಗಲೇ ಸತ್ತ ಹಿರಿಯರ ಆತ್ಮಗಳು ’ಕಮಿ’ಯ ರೂಪದಲ್ಲಿ ವಾಸಿಸುತ್ತವೆ. ಕಮಿಗಳು ಸತ್ತವರ ಆತ್ಮಗಳೂ ಹೌದು, ದೈವಗಳೂ ಹೌದು, ಜೊತೆಗೆ ಊರಿಗೆ ಮಳೆ, ಬೆಳೆ ತಂದುಕೊಟ್ಟು ಜನರ ರೋಗಗಳನ್ನು ದೂರ ಮಾಡುವ ರಕ್ಷಕರೂ ಹೌದು. ಕರಾವಳಿ ಕರ್ನಾಟಕದ ಭೂತಾರಾಧನೆಯನ್ನು ಕಮಿಗಳ ಆರಾಧನೆಯ ಜೊತೆಗೆ ಸುಲಭವಾಗಿ ಹೋಲಿಸಬಹುದು. ಈ ಹಾಯಚಿನೆ ಪರ್ವತದ ಬುಡದಲ್ಲಿರುವ ತಾಕೆ ಎಂಬ ಹಳ್ಳಿಯಲ್ಲಿ ನನಗೆ ಜಪಾನೀಯರ ಉತ್ಪತ್ತಿಯನ್ನು ಹೇಳುವ ’ಕೊಜಿಕಿ’ ಎಂಬ ಮಹಾಕಾವ್ಯದ ಕೆಲವು ಭಾಗಗಳನ್ನು ಕೇಳುವ ಮತ್ತು ಅದರ ಕೆಲವು ಭಾಗಗಳನ್ನು ಅಭಿನಯಿಸಿ ತೋರಿಸುವ ’ಕಾಗುರಾ’ ಎಂಬ ನೃತ್ಯ ಪ್ರಕಾರವನ್ನು ನೋಡುವ ಸದವಕಾಶ ಒದಗಿಬಂದಿತ್ತು. ಆ ಕೊಜಿಕಿ ಕಾವ್ಯದ ಕತಾ ನಾಯಕರು ಇಜನಾಮಿ ಮತ್ತು ಇಜನಾಗಿ ಎಂಬ ದಂಪತಿಗಳು. ಈ ದಂಪತಿಗಳಿಂದ ದಿನ ಬೆಳಗಾಗುವುದರೊಳಗಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಮನುಷ್ಯರು ಹುಟ್ಟಿದರು ಎಂದು ಕೊಜಕಿ ಹೇಳುತ್ತದೆ. ಕಾವ್ಯ ಬೆಳೆಯು ತ್ತಿದ್ದಂತೆ, ಅದರ ವಿವರಣೆಗಳು ದಟ್ಟವಾಗುತ್ತಿರುವಂತೆ ಇಜನಾಮಿ ಮತ್ತು ಇಜನಾಗಿಯರು ಜಿಗಣೆ ದಂಪತಿಗಳೆಂಬುದು ಖಚಿತವಾಗ ತೊಡಗಿತು. ನನ್ನ ಜೊತೆಗೆ ಅನುವಾದಕಿಯಾಗಿ ಸಹಕರಿಸುತ್ತಿದ್ದ ಮಿನಕವ ಅದನ್ನು ಧೃಢ ಪಡಿಸಿದಳು. ಎಲುಬಿಲ್ಲ, ರಕ್ತವಿಲ್ಲ, ಬಾಯಿಯಿಲ್ಲ, ಕಣ್ಣಿಲ್ಲ, ಕಾಲಿಲ್ಲ, ಕೈಯಿಲ್ಲ, ಆದರೆ ಜೀವವಿದೆ. ಕ್ಷಣಮಾತ್ರದಲ್ಲಿ ಇದ್ದಕ್ಕಿದ್ದಂತೆ ಸಹಸ್ರ ಸಂಖ್ಯೆಯಲ್ಲಿ ಸೃಷ್ಟಿಯಾಗಿಬಿಡುವ ಈ ಜಿಗಣೆಗಳನ್ನು ನಾನು ಹುಟ್ಟಿ ಬೆಳೆದ ಬಂಟಮಲೆ, ಎಳವೆಯಲ್ಲಿ ಓಡಾಡಿದ ಕರಿಮಲೆ, ಮೀನು ಹಿಡಿಯತ್ತಿದ್ದ ಗೋಣಗುಂಡಿ (ಪಶ್ಚಿಮ ಘಟ್ಟದ ಭಾಗಗಳು) ಗಲ್ಲಿ ಹೇರಳವಾಗಿ ಕಂಡಿದ್ದೇನೆ. ಅವು ವಾಸನೆ ಹಿಡಿದು ಹಿಂಬಾಲಿಸುತ್ತವೆ, ಗೊತ್ತಾಗದ ಹಾಗೆ ಮೈಮೇಲೇರುತ್ತವೆ. ಹಾಗೆ ನೋಡಿದರೆ ನಾನು ಬೆಳೆದದ್ದೇ ಜಿಗಣೆಗಳ ಜೊತೆಗೆ. ಬೇಸಗೆಯಲ್ಲಿ ಅವು ಕಾಣಿಸುವುದೇ ಇಲ್ಲ. ಆದರೆ ಒಂದು ಮಳೆ ಬಿದ್ದರೆ ಸಾಕು, ಮರುದಿನ ಸಹಸ್ರ ಸಂಖ್ಯೆಯಲ್ಲಿ ತರಗೆಲೆಗಳ ಅಡಿಯಿಂದ ಇದ್ದಕ್ಕಿದ್ದಂತೆ ಹುಟ್ಟಿಕೊಳ್ಳುತ್ತವೆ. ಆಕಾರ ಇದ್ದರೂ, ಇಲ್ಲದಂತಿರುವ, ಜೀವವವಿದ್ದರೂ, ಜೀವಿಗಳ ಯಾವ ಗುಣ ಲಕ್ಷಣವೂ ಇಲ್ಲದಿರುವ ಈ ಜಿಗಣೆಗಳೇ ನಮ್ಮ ಪೂರ್ವಜರು ಎಂಬ ಜಪಾನೀಯರ ನಂಬಿಕೆ ನನಗೆ ’ ನಾವೆಲ್ಲ ಆಡಂ ಮತ್ತು ಈವ್’ ಎಂಬ ದೇವ ದಂಪತಿಗಳಿಂದ ಹುಟ್ಟಿದೆವು’ ಎಂಬ ಪಾಶ್ಚಿಮಾತ್ಯ ಚಿಂತನಾಕ್ರಮದಿಂದ ತುಂಬ ಬೇರೆಯಾಗಿ ಕಂಡದ್ದಲ್ಲದೆ ಹೆಚ್ಚು ಆಪ್ತವಾಗಿಯೂ ಕಂಡಿತು. ಸ್ವರ್ಗದಿಂದ ದೂರವಾಗಿ, ಜಿಗಣೆಗಳಿಗೆ ಹತ್ತಿರವಾಗಿ ಬೆಳೆದ ನನಗೆ ಕೊಜಿಕಿ ಕಾವ್ಯವನ್ನು ಅರ್ಥ ಮಾಡಿಕೊಳ್ಳುವುದು ಸುಲಭ ಅನಿಸಿತು.
ನಮ್ಮ ಜನಪದ ಕಾವ್ಯಗಳ ಕೆಲವು ಭಾಗಗಳು ವಾರ್ಷಿಕ ಜಾತ್ರೆಗಳಲ್ಲಿ ಪುನರಭಿನಯಗೊಂಡು ನವ ನವೀನವಾಗಿ ಬದುಕುಳಿಯುತ್ತವೆ. ಕೊಜಿಕಿ ಕಾವ್ಯದ ಕೆಲವು ಭಾಗಗಳು ಕೂಡಾ ಹಾಯಚಿನೆ ಪರ್ವತದ ಬುಡದಲ್ಲಿ ಕಾಗುರಾ ಎಂಬ ಹೆಸರಿನ ರಂಗರೂಪವಾಗಿ ಕಾಣಿಸಿಕೊಳ್ಳುತ್ತದೆ. ಯಕ್ಷಗಾನದಲ್ಲಿ ಹೇಗೆ ತೆಂಕು -ಬಡಗು ಎಂಬ ಪ್ರಾದೇಶಿಕ ರೂಪಗಳು ಕಾಲಾಂತರದಲ್ಲಿ ಕಾಣಿಸಿಕೊಂಡವೋ ಅದೇ ರೀತಿ ಕಾಗುರಾದಲ್ಲಿಯೂ ಹಾಯಚಿನೆ ಕಾಗುರಾ, ತಾಕೆ ಕಾಗುರಾ, ಒತ್ಸುಗುನಾಯ್ ಕಾಗುರಾ , ಚಿಚಿಬು ಕಾಗುರಾ ಮತ್ತಿತರ ಪ್ರಾದೇಶಿಕ ರೂಪಗಳಿವೆ. ನಾನು ಹಾಯಚಿನೆ ಪರ್ವತದ ಬುಡದ ಹಳ್ಳಿಯಲ್ಲಿ ಇಡೀ ರಾತ್ರಿ ’ಹಾಯಚಿನೆ ಕಾಗುರಾ’ ಪ್ರದರ್ಶನವನ್ನು ನೋಡಿದ್ದೆ. ನಾನು ನೋಡಿದ ಆ ರಾತ್ರಿಯ ಪ್ರಸಂಗವನ್ನು ’ಕೊಜಿಕಿ ಮಹಾಕಾವ್ಯದಿಂದ ಆಯ್ದುಕೊಳ್ಳಲಾಗಿತ್ತು. ಆ ಪ್ರಸಂಗದ ಪ್ರಕಾರ ಜಗತ್ತಿಗೆ ಬೆಳಕು ನೀಡುವ ’ಅಮತೆರಸು’ ಎಂಬ ಸೂರ್ಯದೇವತೆಗೆ (ಜಪಾನೀಯರ ಪ್ರಕಾರ ಸೂರ್ಯ ದೇವತೆ ಹೆಣ್ಣು) ಒಮ್ಮೆ ಬದುಕು ಬೇಸರವಾಗುತ್ತದೆ. ಆಕೆ ಗುಹೆಯೊಳಕ್ಕೆ ನುಗ್ಗಿ ಮಲಗಿ ಬಿಡುತ್ತಾಳೆ. ಲೋಕವೆಲ್ಲ ಕತ್ತಲಾಗುತ್ತದೆ. ಆಗ ಆಕೆಯ ಬೇಸರವನ್ನು ಕಳೆಯಲು ಬಗೆ ಬಗೆಯ ಜಿಗಣೆಗಳ ಜೊತೆಗೆ ಪ್ರಕೃತಿಯ ವಿಭಿನ್ನ ಶಕ್ತಿಗಳು ಬೇರೆ ಬೇರೆ ವೇಷ ಧರಿಸಿ ಚಿತ್ರ ವಿಚಿತ್ರವಾಗಿ ನರ್ತಿಸುತ್ತವೆ. ಈ ನರ್ತನಗಳು ಕೊನೆಗೂ ಅಮತೆರಸುವಿನ ಬೇಸರ ಕಳೆಯುತ್ತಿವೆ. ಆಕೆಯು ಮುಖದಲ್ಲಿ ಮಂದಹಾಸ ಮೂಡುತ್ತದೆ. ಆಕೆ ಗುಹೆಯಿಂದ ಹೊರಬರುತ್ತಾಳೆ. ಲೋಕಕ್ಕೆ ಬೆಳಕು ಮೂಡುತ್ತದೆ. ರಂಗಸ್ಥಳದ ಎಲ್ಲ ಪಾತ್ರಗಳೊಡನೆ ತಾನೂ ನರ್ತಿಸುತ್ತಾಳೆ.
ಸೂರ್ಯನನ್ನು ಗಂಡಾಗಿ ಕಲ್ಪಿಸಿಕೊಂಡ ನಮ್ಮ ಚಿಂತನೆಗಳಿಗೆ ವಿರುದ್ಧವಾಗಿ ಜಪಾನೀಯರು ಸೂರ್ಯನನ್ನು ಹೆಣ್ಣಾಗಿ ಕಲ್ಪಿಸಿಕೊಂಡದ್ದು ನನಗೂನು ಇಷ್ಟವಾಯಿತು. ಎಳವೆಯಲ್ಲಿ ಕರೆದೆಬ್ಬಿಸಿ ಬೆಳಕು ಕಾಣಿಸುತ್ತಲಿದ್ದ ತಾಯಿ, ಈಗ ನಾನೇಳುವ ಮೊದಲೇ ಎದ್ದು ಬೆಳಗಿನ ಸುದ್ಧಿ ಸಾರುವ ಪತ್ನಿ ಇವರೆಲ್ಲ ಹೆಂಗುಸರೇ ತಾನೇ? ಪಶ್ಚಿಮದ ಪುರುಷ ಕೇಂದ್ರಿತ ಯೋಚನಾಕ್ರಮಗಳನ್ನು ಭಂಗಗೊಳಿಸಿಕೊಳ್ಳಲು ಪೂರ್ವದ ಕಡೆ ಹೊರಳಿಕೊಳ್ಳುವುದರಿಂದ ಕನ್ನಡಕ್ಕೆ ಲಾಭವಿದೆ.
Published in Vijayakarnataka paper on September 18, 2011

No comments: