Sunday, October 9, 2011

ಕನ್ನಡ ದೇಸೀ ಅಂದರೆ ನೀರುಳ್ಳಿ

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಸಹಜವಾಗಿ ಮತ್ತು ಸುಲಭವಾಗಿ ಸಂಭವಿಸುವ ಎಲ್ಲ ಬಗೆಯ ವಿದೇಶೀ ಪ್ರಭಾವಗಳ ವಿರುದ್ಧ ಕನ್ನಡವನ್ನು ಎತ್ತಿ ಕಟ್ಟಿ ವಿವರಿಸುವ ಜನಪ್ರಿಯ ಚಿಂತನಾಕ್ರಮವೊಂದನ್ನು ನಾವು ಇಂದು ಎಲ್ಲೆಡೆ ಕಾಣುತ್ತಿದ್ದೇವೆ. ಕನ್ನಡಕ್ಕೆ ಕನ್ನಡದ್ದೇ ಆದ ಯೋಚನಾ ಕ್ರಮ ಇದೆಯೆಂದೂ, ಕಾರಣಾಂತರಗಳಿಂದ ನಾವೀಗ ಅದನ್ನು ಮರೆತುಬಿಟ್ಟಿದ್ದೇವೆಯೆಂದೂ, ಜಾನಪದ, ಭಾಷೆ, ವ್ಯಾಕರಣ ಮತ್ತಿತರ ಪರಿಕರಗಳ ಮೂಲಕ ಮತ್ತೆ ಅದನ್ನು ನೆನಪಿಗೆ ತಂದುಕೊಂಡು, ಕನ್ನಡ ದೇಸಿಯೊಂದನ್ನು ಕಟ್ಟಿಬೇಕೆಂದೂ ವಾದಿಸಲಾಗುತ್ತಿದೆ. ಹಾಗಾದರೆ ’ಕನ್ನಡ’ ಅಂದರೆ ಏನು? ಅದು ರೂಪುಗೊಳ್ಳುವ ಬಗೆ ಹೇಗೆ?

ಕನ್ನಡದ ಚರಿತ್ರೆಯನ್ನು ಗಮನಿಸೋಣ. ಕ್ರಿ.ಶ. ೮೪೦ರಲ್ಲಿ ರಚಿತವಾಗಿದೆ ಎನ್ನಲಾದ ’ವಡ್ಡಾರಾಧನೆ’ ಎಂಬ ಗದ್ಯ ಕೃತಿಯಲ್ಲಿನ ಭದ್ರಬಾಹು ಭಟಾರರ ಕತೆಯ ಪ್ರಕಾರ ಸಂಪ್ರತಿ ಚಂದ್ರಗುಪ್ತನ ಕಾಲದಲ್ಲಿ ಉತ್ತರ ಭಾರತದಲ್ಲಿ ೧೨ ವರ್ಷಗಳ ಕಾಲ ಭೀಕರ ಬರಗಾಲ ಬರುತ್ತದೆ. "ಹನ್ನೆರಡು ವರ್ಷಗಳವರೆಗೆ ಈ ನಾಡೊಳು ಅನಾವೃಷ್ಟಿಯಾಗಿ ಮಹಾರೌದ್ರ ಪ್ರಸವವಾಗಿ, ಮಧ್ಯದೇಶವೆಲ್ಲವೂ ಪಾಳುಬಿದ್ದು, ನಾಡೊಳಿರುವ ಋಷಿಗಳಿಗೆ ವೃತ ಭಂಗವಾಗುವುದರಿಂದಾಗಿ ದಕ್ಷಿಣಾ ಪಥಕ್ಕೆ ಹೋಗೋಣ" ಎಂದು ಹೇಳುವ ಭದ್ರಬಾಹು ಭಟಾರರು ಮುಂದೆ ಸಂಪ್ರತಿ ಚಂದ್ರಗುಪ್ತರ ಜೊತೆ ದಕ್ಷಿಣಾ ಪಥಕ್ಕೆ ತೆರಳುತ್ತಾರೆ. ದಕ್ಷಿಣಾ ಪಥದಲ್ಲಿ ಅತ್ಯಂತ ಪ್ರಶಸ್ತವಾದ ’ಕಳ್ಬಪ್ಪು ನಾಡು ’ ( ಈಗಣ ಶ್ರವಣಬೆಳಗೊಳ) ವಿಗೆ ಬಂದು ಅಲ್ಲಿಯೇ ನೆಲೆ ನಿಲ್ಲುತ್ತಾರೆ. ಈ ಘಟನೆ ನಡೆದಿರಬಹುದಾದ ಕಾಲ ಸುಮಾರು ಕ್ರಿಸ್ತ ಶಕ ಪೂರ್ವ ೩ ನೇ ಶತಮಾನ. ಆ ಕಾಲದ ದಕ್ಷಿಣ ಭಾರತದ ಚರಿತ್ರೆಯನ್ನು ಅವಲೋಕಿಸಿದರೆ, ಕರ್ನಾಟಕದ ಈ ಭೂಭಾಗಕ್ಕಿಂತ ತಮಿಳುನಾಡಿನ ಚೋಳಮಂಡಲದ ತಂಜಾವೂರು ಪ್ರದೇಶ ಹೆಚ್ಚು ಫಲವತ್ತಾಗಿತ್ತು. ಬದುಕುವುದಕ್ಕೆ ಅನುಕೂಲವಾಗಿದ್ದ ಸ್ಥಳವಾಗಿತ್ತು ಅದು. ಆದರೆ ಸಂಪ್ರತಿ ಚಂದ್ರಗುಪ್ತರು ಮತ್ತು ಭದ್ರ ಬಾಹುಭಟಾರರು ತಮ್ಮ ದಕ್ಷಿಣಾ ಪಥದ ವಲಸೆಗೆ ಆಯ್ದುಕೊಂಡದ್ದು ತಮಿಳುನಾಡಿನ ಆ ಫಲವತ್ತಾದ ಭೂ ಭಾಗವನ್ನಲ್ಲ, ಬದಲು ಕರ್ನಾಟಕದ ಕನ್ನಡ ಭಾಷಾ ಪ್ರದೇಶವನ್ನು. ಜೈನರು ಮುಂದೆ ಕರ್ನಾಟಕವನ್ನು "ಜಿನ ಧರ್ಮದ ಆಡುಂಬೊಲಂ" ಮಾಡಿಕೊಂಡರು. ಕನ್ನಡಕ್ಕೆ ಪಂಪ , ಪೊನ್ನ, ರನ್ನ, ನಾಗಚಂದ್ರ, ಜನ್ನ ಮೊದಲಾದ ಅತ್ಯಂತ ಮುಖ್ಯ ಕವಿಗಳನ್ನು ಕೊಟ್ಟ ಜೈನರು ಕನ್ನಡ ಸಂವೇದನೆಯನ್ನು ಅತ್ಯಂತ ನವಿರಾಗಿ ರೂಪಿಸಿದರು. ಜೈನರ ಪ್ರಾಬಲ್ಯಕ್ಕೂ ಮುನ್ನ ಕರ್ನಾಟಕಕ್ಕೆ ಆಗಮಿಸಿದ ಬೌದ್ಧರು ಕೂಡಾ ಮಧ್ಯ ಕರ್ನಾಟಕವನ್ನು ಬೌದ್ಧ ಧರ್ಮ ಪ್ರಸಾರದ ಕೇಂದ್ರವನ್ನಾಗಿ ಮಾಡಿಕೊಂಡು, ಸನ್ನತಿ, ಡಂಬಳ, ಕದರಿ, ಕೊಪ್ಪಳ, ಬ್ರಹ್ಮಗಿರಿ, ಮಸ್ಕಿ ಮೊದಲಾದ ಪ್ರದೇಶಗಳೆಲ್ಲ ವಾಸಿಸಿ ಕನ್ನಡ ಸಂಸ್ಕೃತಿಯ ಆದಿಮ ಗುಣಗಳ ರೂಪುಗೊಳ್ಳುವಿಕೆಯಲ್ಲಿ ಗಮನಾರ್ಹವಾಗಿ ಪಾಲ್ಗೊಂಡರು. ಮೇಲು ನೋಟಕ್ಕೆ ಕಾಣೆಯಾದಂತಿರುವ ಬೌದ್ಧ ಧರ್ಮವು ಕರ್ನಾಟಕದ ಅನೇಕ ಜನಪದ ಆಚರಣೆಗಳಲ್ಲಿ ಸೂಕ್ಷ್ಮವಾಗಿ ಇಂದಿಗೂ ಉಳಿದು ಬಂದಿದೆ. ಇಂದು ನಾವು ಕನ್ನಡದ್ದೇ ಎಂದು ಹೇಳುವ ವಚನ ಚಳುವಳಿಯ ಕಾಲದಲ್ಲಿ ಉತ್ತರದ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂz ಜನರು ತಮ್ಮ ಅರಿವಿನ ನೆಲೆಗಳನ್ನು ಕನ್ನಡಕ್ಕೆ ಒದಗಿಸಿಕೊಟ್ಟರು. ತಮಿಳುನಾಡಿನಲ್ಲಿ ಬಗೆಬಗೆಯ ಒತ್ತಡಗಳಿಗೆ ಗುರಿಯಾದ ರಾಮಾನುಜಾಚಾರ್ಯರು ಕೊನೆಗೂ ಕನ್ನಡದ ಮಣ್ಣಿಗೇ ಬಂದಾಗ ಕನ್ನಡಿಗರು ಅವರನ್ನು ತಿರಸ್ಕರಿಸಲಿಲ್ಲ. ಕ್ರಿಶ್ತಶಕ ಪೂರ್ವದಲ್ಲಿಯೇ ಕರಾವಳಿಗೆ ಆಗಮಿಸಿದ ಮುಸ್ಲಿಮರು ಮುಂದೆ ಬಿಜಾಪುರದಿಂದ ನಾಡನ್ನು ಆಳಿದರು. ಕರಾವಳಿಯಲ್ಲಿ ಆಲಿ ಭೂತ, ಬಬ್ಬರ‍್ಯ ಭೂತಗಳು ಸೃಸ್ಟಿಯಾಗಿ ಪೂರ್ಣ ದೇಸೀ ಎಂದೇ ಪರಿಗಣಿತವಾದ ಪಾಡ್ದನಗಳ ಒಳಗೂ ಮುಸ್ಲಿಮ್ ನಾಯಕರು ಕಾಣಿಸಿಕೊಂಡರು. ಇಡೀ ಉತ್ತರ ಕರ್ನಾಟಕವು ಸೂಫಿ ಸಂತರ ನೆಲೆವೀಡಾಯಿತು. ಸಾವಿರಾರು ಮೈಲುಗಳ ದೂರದಲ್ಲಿ ಬಾಯಿಗೆ ನೀರಿಲ್ಲದೆ ಸತ್ತ ಅಸಗರನನ್ನು ಅಭಿಮನ್ಯುಗೆ ಹೋಲಿಸಿ ಕನ್ನಡ ಕಣ್ಣೀರಿಟ್ಟಿತು. ವಸಾಹತು ಕಾಲಘಟ್ಟದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮಂಗಳೂರು, ಬಳ್ಳಾರಿ, ಧಾರವಾಡಗ ಳಲ್ಲಿ ಯಾವ ತೊಂದರೆಗಳಿಲ್ಲದೇ ಕೆಲಸಮಾಡಿದರು. ೧೯-೨೦ನೇ ಶತಮಾನದಲ್ಲಿ ಕನ್ನಡವು ಪಶ್ಚಿಮದ ವಿಚಾರಧಾರೆಗೆ ತನ್ನನ್ನು ಮುಕ್ತವಾಗಿ ತೆರೆದುಕೊಂಡು ಕಾದಂಬರಿ, ಸಣ್ಣಕತೆ, ಭಾವಗೀತೆಯೇ ಮೊದಲಾದ ಅನೇಕ ಪ್ರಕಾರಗಳನ್ನು ಪ್ರತೀತಗೊಳಿಸಿಕೊಳ್ಳುತ್ತಾ ಬೆಳೆದದ್ದು ನಮಗೆಲ್ಲ ತಿಳಿದೇ ಇದೆ.

ಚಾರಿತ್ರಿಕವಾಗಿ ಕನ್ನಡದ ಮಣ್ಣು ಬರಮಾಡಿಕೊಂಡ ಜನ ಸಮುದಾಯಗಳೆಷ್ಟು? ಇಥಿಯೋಪಿಯಾದಿಂದ ಕ್ರಿಸ್ತ ಶಕದಾರಂಭದಲ್ಲಿ ಗುಜರಾತಿನ ಮೂಲಕ ಭಾರತಕ್ಕೆ ಆಗಮಿಸಿದ ’ಹಬಶಿ’ ಗುಂಪಿನ ಯೋಧರು, ದೆಹಲಿ ಸುಲ್ತಾನರ ಕೈಕೆಳಗೆ ಕೆಲಸ ಮಾಡಿ, ೧೪೫೯ರ ಹೊತ್ತಿಗೆ ದೆಹಲಿಯಿಂದ ಬಂಗಾಳದವರೆಗೆ ವ್ಯಾಪಿಸಿಕೊಂಡು, ಕೊನೆಗೆ ಕರ್ನಾಟಕದ ಬಹುಮನಿ ಸುಲ್ತಾನರ ಕೈಕೆಳಗೆ ಮಿಲಿಟರಿ ಅಧಿಕಾರಿಗಳಾಗಿ ಕೆಲಸ ಮಾಡಿ, ಅಂತಿಮವಾಗಿ ಕರ್ನಾಟಕ ದಲ್ಲ್ಲಿಯೇ ನೆಲೆನಿಂತರು. ಮುಂದೆ ಲಂಬಾಣಿಗಳು, ಸಿದ್ಧಿಯರು, ಮತ್ತಿತರ ನೂರಾರು ಸಮುದಾಯಗಳು ಕರ್ನಾಟಕವನ್ನು ತಮ್ಮ ನೆಲೆವೀಡಾಗಿ ಆರಿಸಿಕೊಂಡು ಕನ್ನಡ ಸಂಸ್ಕೃತಿಯ ಭಾಗವಾಗಿ ಬೆಳೆದರು. ಯಾರನ್ನೂ ತಿರಸ್ಕರಿಸದ ಅಥವಾ ಹೊರಹಾಕದ ಕರ್ನಾಟಕವು ಎಲ್ಲ ಧರ್ಮಗಳನ್ನೂ, ಸಮುದಾಯಗಳನ್ನು ಒಳಗೊಳ್ಳುವ ವಿಶಿಷ್ಟತೆಯನ್ನು ಮೆರೆಯಿತು. ಇಂದಿಗೂ ಉತ್ತರ ಭಾರತದ ಲಕ್ಷಾಂತರ ಜನರು ಬೆಂಗಳೂರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದಾರೆ. ಅಸಹನೆ ಕನ್ನಡದ ಗುಣವಲ್ಲ.

ಹೀಗೆ ರೂಪುಗೊಂಡ ಮತ್ತು ರೂಪುಗೊಳ್ಳುತ್ತಿರುವ ಕನ್ನಡವನ್ನು ಅನ್ಯಪ್ರಭಾವಗಳಿಂದ ಮುಕ್ತಗೊಳಿಸಿ ನೋಡಲಾಗುವುದಿಲ್ಲ. ಜೈನ ರಾಮಾಯಣದ ಪ್ರಭಾವದಿಂದ ಕರ್ನಾಟಕದ ಮಣ್ಣಿನ ಕಲೆಯೆಂದೇ ಬಣ್ಣಿಸಲಾದ ಯಕ್ಷಗಾನವು ಪ್ರಭಾವಿತಗೊಂಡು ದುರಂತ ರಾವಣನನ್ನು ಸೃಜಿಸಿಕೊಂಡಿದೆ. ’ಅಬ್ಧಿಯುಂ ಒಮ್ಮೆ ಕಾಲ ವಶದಿಂದ ಮರ್ಯಾದೆಯಂ ದಾಂಟದೇ’ ಎಂಬ ರಾವಣನ ಕುರಿತ ಕವಿವಾಣಿಯನ್ನು ಶೇಣಿ ಗೋಪಾಲಕೃಷ್ಣ ಭಟ್ಟರು ಯಕ್ಷಗಾನ ರಂಗಭೂಮಿಯಲ್ಲಿ ಅನವರತ ಅನುರಣಿಸುವಂತೆ ಮಂಡಿಸುತ್ತಿದ್ದರು. ಬಾಗಲಕೋಟೆಯ ಇಬ್ರಾಹಿಂ ಸುತಾರರು ಕನ್ನಡದಲ್ಲಿ ಪವಿತ್ರ ಕುರಾನಿನ ಸಂದೇಶವನ್ನು ರವಾನಿಸುವ ಪರಿಯನ್ನು ನಾವೆಲ್ಲ ಕೇಳಿದ್ದೇವೆ. ಉತ್ತರದಿಂದ ಆಗಮಿಸಿದ ಬೌದ್ಧರ ಕೇಂದ್ರವಾಗಿದ್ದ ಕದರಿಯು ಇಂದು ಕನ್ನಡಿಗರ ಕೇಂದ್ರವಾಗಿ ಬೆಳೆದಿದೆ. ವ್ಯಾಸನ ಭಾರತ ಕುಮಾರವ್ಯಾಸನ ಭಾರತವಾಗಿ ನಮ್ಮ ಮುಂದಿದೆ. ಜೈಮಿನಿಯ ಭಾರತವು ಲಕ್ಷ್ಮೀಶನ ಜೈಮಿನಿ ಭಾರತವಾಗಿ ಕನ್ನಡದ ಮಣ್ಣಲ್ಲಿ ಆಳವಾಗಿ ಬೇರೂರಿದೆ. ಕರಾವಳಿ ಕರ್ನಾಟಕದಲ್ಲಿ ಕನ್ನಡ ಜೈಮಿನಿ ಭಾರತದ ನಾಲ್ಕಾರು ಪದ್ಯಗಳನ್ನು ಬಾಯಿ ಪಾಠ ಹೇಳದಿದ್ದರೆ ಅವನಿಗೆ ಯಾರೂ ಹೆಣ್ಣುಕೊಡುತ್ತಿರಲ್ಲ ಎಂಬುದು ಈ ಕಾವ್ಯದ ಜನಪ್ರಿಯತೆಗೆ ಸಾಕ್ಷಿ. ಅನೇಕ ಮೌಖಿಕ ಕಾವ್ಯಗಳು ಆರಂಭದಲ್ಲಿ ಅಕ್ಷರ ಮಾತೆಯನ್ನೂ ನೆನಪಿಸಿಕೊಳ್ಳುತ್ತವೆ.

ಹೀಗೆ ಅನ್ಯ ಪ್ರಭಾವಗಳನ್ನು ಅರಗಿಸಿಕೊಂಡು, ಅವನ್ನು ಪುನರ್ ಸೃಸ್ಟಿಸಿಕೊಂಡು ಕನ್ನಡ ಬೆಳೆದಿದೆ. ಕನ್ನಡ ಸಂಸ್ಕೃತಿಗೆ ಅಂಥ ಗುಣವೊಂದಿದೆ. ಭಾರತದ ಅನೇಕ ಭಾಷೆಗಳಿಗೆ ಈ ಗುಣವಿಲ್ಲ. ತಮಿಳು ಭಾಷೆಯೂ ಸೇರಿದಂತೆ ಅನೇಕ ಭಾಷೆಗಳು ಒಂದು ಬಗೆಯ ಪ್ರತಿರೋಧವನ್ನು ಒಡಲಲ್ಲಿ ಇರಿಸಿಕೊಂಡು ಬೆಳಯುತ್ತಿವೆ. ಇಂಥ ಸಂದರ್ಭದಲ್ಲಿ ಕನ್ನಡ ದೇಸಿಯನ್ನು ಅರ್ಥಮಾಡಿಕೊಳ್ಳುವಾಗ, ಅದರ ಬಗ್ಗೆ ಮಾತಾಡುವಾಗ ವಿಶೇಷ ಎಚ್ಚರದ ಅಗತ್ಯವಿದೆ. ಕನ್ನಡ ದೇಸಿಯನ್ನು ಪ್ರತಿಪಾದಿಸುವಾಗ, ಅದರಿಂದ ಉತ್ತರ ಭಾರತದಿಂದ ಆಗಮಿಸಿದ ಜೈನ, ಬೌದ್ಧg ಚಿಂತನ ಕ್ರಮಗಳನ್ನು ತೆಗೆದರೆ, ಸಂಸ್ಕೃತದಿಂದ ಆಗಮಿಸಿದ ವ್ಯಾಸ, ಜೈಮಿನಿ ವಾಲ್ಮೀಕಿಗಳನ್ನು ಮರೆತರೆ, ಕಾಶ್ಮೀರದಿಂದ ಆಗಮಿಸಿದ ಶೈವ ಸಿದ್ಧಾಂತಗಳನ್ನು ಬಿಟ್ಟರೆ, ಸೂಫಿಗಳ ಪ್ರಭಾವದ ತತ್ವ ಪದಗಳನ್ನು ಬದಿಗಿಟ್ಟರೆ, ೨೦ ನೇ ಶತಮಾನದ ವಸಾಹತೀಕರಣದ ಚಿಂತನಾ ಕ್ರಮಗಳನ್ನು ತಿರಸ್ಕರಿಸಿದರೆ, ಹೀಗೆ ಎಲ್ಲವನ್ನೂ ತೆಗೆಯುತ್ತಾ ಹೋದರೆ ಅಲ್ಲಿ ಉಳಿಯುವುದು ಏನ? ಈರುಳ್ಳಿ ಸಿಪ್ಪೆಯನ್ನು ಒಂದೊಂದಾಗಿ ತೆಗೆದರೆ ಅಲ್ಲಿ ಹೇಗೆ ಏನೂ ಉಳಿಯುವುದಿಲ್ಲವೋ ಹಾಗಾದೀತು ಪರಿಸ್ಥಿತಿ. ಹಾಗೆ ಮಾಡುವುದರ ಬದಲು ಕನ್ನಡ ಸಂಸ್ಕೃತಿಯನ್ನು ಇಡಿಯಾಗಿ ಮತ್ತು ಮುಕ್ತವಾಗಿ ಪರಿಭಾವಿಸಿಕೊಳ್ಳುವುದು ಒಳಿತು.
Published in Vijayakarnataka paper on September 04, 2011

No comments: