Thursday, February 28, 2019

Yakshagana at JNU


ಜೆ. ಎನ್ ಯು ಕನ್ನಡ ಅಧ್ಯಯನ ಪೀಠವು ಫೆಬ್ರವರಿ 16 2019 ರಂದು ಜವಾಹರಲಾಲ ನೆಹರೂ  ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಗದಾಯುದ್ದಂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಸ್ತತಪಡಿಸಿದ ಯಕ್ಷಗಾನ ಕಾರ್ಯಕ್ರಮದ ಲಿಂಕ್ ಇಲ್ಲಿದೆ. (ಪ್ರಸ್ತುತಿ:  ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ)
Gadayuddham in Yakshagana: https://youtu.be/V-xhWywhdS8

Harikathe at JNU


ಜೆ. ಎನ್ ಯು ಕನ್ನಡ ಅಧ್ಯಯನ ಪೀಠವು ಫೆಬ್ರವರಿ 16 2019 ರಂದು ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಗದಾಯುದ್ದಂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಸ್ತುತ ಪಡಿಸಿದ ಹರಿಕಥೆ ಕಾರ್ಯಕ್ರಮದ ಲಿಂಕ್ ಇಲ್ಲಿದೆ. ( ಡಾ. ಲಕ್ಷ್ಮಣ್‍ದಾಸ ಮತ್ತು ಬಳಗ )
Gadayuddham in Harikathe: https://youtu.be/Y2JIOklsz6A

Gamaka at JNU


ಜೆ. ಎನ್ ಯು ಕನ್ನಡ ಅಧ್ಯಯನ ಪೀಠವು ಫೆಬ್ರವರಿ 16 2019 ರಂದು ಜವಾಹರಲಾಲ ನೆಹರೂ  ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಗದಾಯುದ್ದಂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಸ್ತತ ಪಡಿಸಿದ ಗಮಕ ಕಾರ್ಯಕ್ರಮದ ಲಿಂಕ್ ಇಲ್ಲಿದೆ. ( ಗಮಕಿ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್, ವ್ಯಾಖ್ಯಾನ ಶ್ರೀ ಕೃಷ್ಣ ಕುಲಕಣೀ)
Gadayuddham in Gamaka: https://youtu.be/mUYTR7gq_EI

Gadayuddam Book release at JNU


ಜೆ. ಎನ್ ಯು ಕನ್ನಡ ಅಧ್ಯಯನ ಪೀಠವು ಫೆಬ್ರವರಿ 16 2019 ರಂದು ಜವಾಹರಲಾಲ ನೆಹರೂ  ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಗದಾಯುದ್ದಂ ಪುಸ್ತಕ ಬಿಡುಗಡೆ ಸಮಾರಂಭದ ಸಭಾ ಕಾರ್ಯಕ್ರಮದ ಲಿಂಕ್ ಇಲ್ಲಿದೆ. ( ಭಾಷಣಕಾರರು:  ಡಾ. ವೆಂಕಟಾಚಲ ಹೆಗಡೆ, ಆರ್. ವಿ. ಎಸ್ ಸುಂದರಂ ಮತ್ತು ಅಮ್ಮೇಲ್ ಶೆರೋನ್)
https://www.youtube.com/watch?v=1Nv1LdvEL48&feature=youtu.be

Tuesday, February 26, 2019

Mahabharata Seminar by Kannada Language Chair, JNU

ಕನ್ನಡ ಅಧ್ಯಯನ ಪೀಠವು ಆಯೋಜಿಸಿದ ಭಾರತದ ಅಭಿಜಾತ ಭಾಷೆಗಳಲ್ಲಿನ ಮಹಾಭಾರತ ವಿಚಾರ ಸಂಕಿರಣದಲ್ಲಿನ ಎಲ್ಲ ಭಾಷಣಗಳೂ ಇದೀಗ ಯು ಟ್ಯೂಬಲ್ಲಿ ಲಭ್ಯವಿದೆ. ಆಸಕ್ತರು ಗಮನಿಸಬಹುದು-

Gadayuddham Book release by Kannada Chair, JNU

Sunday, February 17, 2019

ರನ್ನನ ಗದಾಯುದ್ಧಂ - ಪಠ್ಯದ ಪಯಣದ ಹೆಜ್ಜೆ ಗುರುತುಗಳು

ಕನ್ನಡ ಅಧ್ಯಯನ ಪೀಠ
ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ, ನವದೆಹಲಿ

ರನ್ನನ ಗದಾಯುದ್ಧಂ - ಪಠ್ಯದ ಪಯಣದ ಹೆಜ್ಜೆ ಗುರುತುಗಳು

ಶ್ರೀವಿಜಯನ ಕವಿರಾಜಮಾರ್ಗ ಕೃತಿಯನ್ನು ಯಶಸ್ವಿಯಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಜೆ ಎನ್ ಯು ಕನ್ನಡ ಅಧ್ಯಯನ ಪೀಠವು ಇದೀಗ 10ನೇ ಶತಮಾನದ ಅತ್ಯಂತ ಶಕ್ತಿಶಾಲೀ ಕವಿ ರನ್ನನ ಗದಾಯುದ್ಧಂ ಕೃತಿಯನ್ನು ಇಂಗ್ಲೀಷಿಗೆ ಅನುವಾದ ಮಾಡಿ ಇವತ್ತು ಬಿಡುಗಡೆ ಮಾಡುತ್ತಿದೆ.  ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಬಹುಭಾಷಾ ವಿಶಾರದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕಿ ಅಮ್ಮೇಲ್ ಶೆರೋನ್ ಅವರು ಕೃತಿಯನ್ನು ಅನುವಾದ ಮಾಡಿದ್ದಾರೆ. ಪ್ರೊ. ಅಕ್ಕಮಹಾದೇವಿ ಅವರು ಸಂಪಾದನಾ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕನ್ನಡ ಪೀಠ ಮತ್ತು ದೆಹಲಿಯ ಮನೋಹರ ಪ್ರಕಾಶನದವರು ಜಂಟಿಯಾಗಿ ಪುಸ್ತಕವನ್ನು ಹೊರತಂದಿದ್ದಾರೆ.

ಕವಿಚಕ್ರವರ್ತಿ ರನ್ನ ( ಕ್ರಿಸ್ತ ಶಕ ೯೪೯-೧೦೨೦): ರನ್ನನು ಹತ್ತನೆಯ ಶತಮಾನದ ಮಹತ್ವದ ಕವಿ, ರತ್ನತ್ರಯಲ್ಲಿ ಒಬ್ಬ. ಅವನ ಹುಟ್ಟಿದ್ದು ಮುಧೋಳದಲ್ಲಿ. ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ. ಆ ಕಾಲದ ಪ್ರಸಿದ್ಧ ಗುರು ಅಜಿತಸೇನಾಚಾರ್ಯರ ಬಳಿ ರನ್ನನ ವಿದ್ಯಾಭ್ಯಾಸ.   ಚಾಲುಕ್ಯರ ಎರಡನೆಯ ತೈಲಪ ಚಕ್ರವರ್ತಿ ಆಹವಮಲ್ಲ ಹಾಗೂ ಅವನ ಮಗ ಸತ್ಯಾಶ್ರಯ ಇರಿವಬೆಡಂಗ ಇವರ ಆಸ್ಥಾನಕವಿಯಾಗಿದ್ದು ಕವಿಚಕ್ರವರ್ತಿ ಎಂಬ ಬಿರುದನ್ನು ಪಡೆದಿದ್ದನು. ಚಾವುಂಡರಾಯ ಮತ್ತು ಅತ್ತಿಮಬ್ಬೆಯರು ರನ್ನನನ್ನು ಬಹುವಾಗಿ ಪ್ರೋತ್ಸಾಹಿಸಿದ್ದಾರೆ. ರನ್ನನು ತನ್ನ ಕಾವ್ಯಶಕ್ತಿಯನ್ನು ಹೇಳಿಕೊಳ್ಳುವಾಗ ‘  ವಾಗ್ದೇವಿಯ ಭಂಡಾರದ ಮುದ್ರೆಯ ನೊಡೆದಂ’ ಎಂದೂ, ತನ್ನ ‘ಕೃತಿಯನ್ನು ಪರೀಕ್ಷಿಪಂಗೆಂಟೆರ್ದೆಯೇ’ ಎಂದು ಬರೆದುಕೊಂಡಿದ್ದಾನೆ.  ತನ್ನ ಕಾವ್ಯಶಕ್ತಿಯ ಬಗ್ಗೆ ಪೂರ್ಣ ವಿಶ್ವಾಸವಿರುವ ಕವಿಗೆ ಮಾತ್ರ ಹೀಗೆ ಹೇಳಿಕೊಳ್ಳಲು ಸಾಧ್ಯ.
ರನ್ನನ ಪ್ರಧಾನ ಕೃತಿಗಳು: ರನ್ನು ಒಟ್ಟು ಐದು ಕೃತಿಗಳನ್ನು ರಚಿಸಿದ್ದು ಅದರಲ್ಲಿ ಅಜಿತ ತೀರ್ಥಂಕರಪುರಾಣತಿಲಕ ಮತ್ತು  ಸಾಹಸ ಭೀಮವಿಜಯ (ಗದಾಯುದ್ಧ) ಎಂಬ ಎರಡು ಕಾವ್ಯಗಳು ಪ್ರಸಿದ್ಧವಾಗಿವೆ.
ಅಜಿತ ತೀರ್ಥಂಕರಪುರಾಣವು ಒಂದು  ಧಾರ್ಮಿಕ ಕಾವ್ಯ. ಎರಡನೆಯ ತೀರ್ಥಂಕರನ ಕಥೆ ಇದರ ವಸ್ತು. ಇದನ್ನು 'ಪುರಾಣ ತಿಲಕ ಎಂದು ಕವಿಯೇ ಹೇಳಿಕೊಂಡಿದ್ದಾನೆ. ಇದರಲ್ಲಿ ಹನ್ನೆರಡು ಆಶ್ವಾಸಗಳಿದ್ದು, ಮೊದಲನೆಯ ಆಶ್ವಾಸ ಪೂರ್ಣವಾಗಿ ಆಶ್ರಯದಾತೆ ಅತ್ತಿಮಬ್ಬೆಯ ಚಿತ್ರಣಕ್ಕೆ ಮೀಸಲಾಗಿದೆ. ಕೊನೆಯ ಆಶ್ವಾಸದಲ್ಲಿ ಗ್ರಂಥಸಮಾಪ್ತಿ, ಹಾಗೂ ಕವಿಕಾವ್ಯ ಆಶ್ರಯದಾತರ ವಿಚಾರವಿದೆ. ಇನ್ನುಳಿದ ಹತ್ತು ಆಶ್ವಾಸಗಳಲ್ಲಿ ಏಳರಲ್ಲಿ ಅಜಿತತೀರ್ಥಂಕರನ ಕಥೆಯೂ ಆಮೇಲಿನ ಮೂರರಲ್ಲಿ ಸಗರ ಚಕ್ರವರ್ತಿಯ ಕಥೆಯೂ ಬಂದಿದೆ. ಭವಾವಳಿಯ ಗೊಂದಲವಿಲ್ಲದಿರುವುದು ಈ ಕೃತಿಯ ವಿಶೇಷ. ಗ್ರಂಥದ ರಸವತ್ತಾದ ಭಾಗಗಳೆಂದರೆ ಅತ್ತಿಮಬ್ಬೆ ಮತ್ತು ಸಗರಚಕ್ರವರ್ತಿ ಕಥೆಗಳ ಭಾಗಗಳೆ ಆಗಿವೆ. ಜೈನಧರ್ಮಕ್ಕೆ ಸಂಬಂಧಿಸಿದ ವಿಷಯಗಳನ್ನು ತೊಡಕಿಲ್ಲದೆ ನಿರೂಪಿಸಿರುವುದರಿಂದ ಆ ಕುರಿತು ಒಂದು ಶಾಸ್ತ್ರೀಯ ಗ್ರಂಥವೂ ಆಗಿದೆ.
ರನ್ನನ ಕೃತಿಗಳಲ್ಲಿ ಸಾಹಸಭೀಮವಿಜಯ ಅತಿ ಮುಖ್ಯವಾದುದು. ಸಂದರ್ಭ ಒದಗಿದಾಗಲೆಲ್ಲಾ ಹಿಂದಿನ ಕಥೆಯನ್ನು ಸೂಚಿಸುವ ವಿಧಾನವನ್ನು ಅನುಸರಿಸುವುದರಿಂದ (ಸಿಂಹಾವಲೋಕನ ಕ್ರಮ) ಕಾವ್ಯಕ್ಕೆ ಸಮಗ್ರತೆ ಪ್ರಾಪ್ತವಾಗಿದೆ. ಹತ್ತು ಆಶ್ವಾಸಗಳಲ್ಲಿ ಹರಡಿಕೊಂಡಿರುವ ಈ ಕಾವ್ಯದಲ್ಲಿ ಭೀಮ-ದುರ್ಯೋಧನರ ಗದಾಯುದ್ಧವೇ ಕೇಂದ್ರಬಿಂದು. ಕೃತಿಗೆ 'ಸಾಹಸಭೀಮವಿಜಯ ಎಂದು ಹೆಸರಿದ್ದರೂ ಗದಾಯುದ್ಧ ಎಂದೇ ಇದರ ಖ್ಯಾತಿ.
ಗದಾಯುದ್ಧ ಕಾವ್ಯವು ಹಳಗನ್ನಡದ ಅಪೂರ್ವ ಸಾಧನೆ ಮತ್ತು ಅನರ್ಘರತ್ನ.  ವ್ಯಾಸಮಹಾಭಾರತದ ಕುರುಕ್ಷೇತ್ರ ಸಂಗ್ರಾಮದಲ್ಲಿ ಅರ್ಧದಿನ ನಡೆದ ಕಥೆಯನ್ನು ಸ್ವೀಕರಿಸಿ ಒಂದು ಮಹಾಕಾವ್ಯ ನಿರ್ಮಿಸಿದ ರನ್ನನ ಪ್ರತಿಭೆ ಅಸಾಮಾನ್ಯ. ಸಿಂಹಾವಲೋಕನದ ಕ್ರಮದಲ್ಲಿ ಮಹಾಭಾರತದ ಕಥೆಯನ್ನು ನಿರೂಪಿಸಿದ ರೀತಿ ಆಶ್ಚರ್ಯಕರ. ರನ್ನನ ಗದಾಯುದ್ಧವನ್ನು  ಓದುತ್ತಿದ್ದರೆ ಒಂದು ನಾಟಕವನ್ನು ನೋಡಿದ ಅನುಭವ ಉಂಟಾಗುತ್ತದೆ. ಅಲ್ಲಿರುವುದು ಗದ್ಯಪದ್ಯಗಳೇ  ಆದರೂ ಅವು ಸಂಭಾಷಣಾ ಶೈಲಿಯಲ್ಲಿರುತ್ತವೆ. ಒಂದೊಂದು ಪಾತ್ರವೂ  ನಾಟಕದ ಪಾತ್ರಗಳಂತೆ ಮಾತನಾಡುತ್ತದೆ, ಅಭಿನಯಿಸುತ್ತದೆ.  ಭಾಸನ 'ಊರುಭಂಗ', ಭಟ್ಟನಾರಾಯಣನ 'ವೇಣೀಸಂಹಾರ' ಪ್ರೇರಣೆಯಾಗಿದ್ದರೂ  ರನ್ನ ತನ್ನದೇ ಆದ ಪ್ರತಿಭೆಯಿಂದ ಅನೇಕ ಸನ್ನಿವೇಶಗಳನ್ನು ಕಲ್ಪಿಸಿದ್ದಾನೆ. ಪಾತ್ರಗಳ ಚಿತ್ರಣಕ್ಕೆ  ಹೊಸ ಮೆರಗನ್ನು ನೀಡಿದ್ದಾನೆ. ಗದಾಯುದ್ಧಕಾವ್ಯ ಒಂದು ಪಠ್ಯವಾಗಿಮಾತ್ರವಲ್ಲದೆ ಒಂದು ಸಂಪ್ರದಾಯವಾಗಿ ಜೀವಂತವಾಗಿದೆ.

ಪಠ್ಯಗಳು ಬದುಕುಳಿವ ಚೋದ್ಯ: 

ಕನ್ನಡ ಅಭಿಜಾತ ಪರಂಪರೆಯ ಕೃತಿಗಳು ಕಾಲ ಮತ್ತು ದೇಶಗಳ ಚೌಕಟ್ಟುಗಳಲ್ಲಿ ಸ್ಥಗಿತವಾಗಿ ಉಳಿದಿಲ್ಲ. ಕುಮಾರವ್ಯಾಸನು ಕಾವ್ಯದ ಕೇಳುಗರ ಪಟ್ಟಿಯಲ್ಲಿ ‘ ಜಂಗಮ ಜನಾರ್ಧನ’ರನ್ನೂ ಸೇರಿಸಿದ್ದಾನೆ. ನಮ್ಮ ಕಾವ್ಯಗಳು ಜಂಗಮ ಜನಾರ್ಧನರನ್ನು ತಲುಪಿದ್ದು ಹೇಗೆ ಎಂದು ಕೇಳಿಕೊಂಡರೆ ನಮ್ಮಲ್ಲಿ ಜನಪ್ರಿಯವಾಗಿದ್ದ ಗಮಕ ಪರಂಪರೆಯ ಬಗ್ಗೆ ಒಂದು ತಿಳುವಳಿಕೆ ಮೂಡುತ್ತದೆ. ಹಾಡಲು ಅನುಕೂಲವಾಗುವಂತೆ ಮರುಸೃಷ್ಟಿಕೊಂಡ ಕನ್ನಡ ಕಾವ್ಯಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ಗಮಕವು ಪ್ರಧಾನ ಪಾತ್ರ ವಹಿಸಿದೆ. ಇದನ್ನು ಬಲ್ಲ ಎಲ್ಲ ಕವಿಗಳೂ ‘ಕವಿ-ಗಮಕಿ’ಗಳಿಗೆ ಗೌರವ ಸಲ್ಲಿಸುತ್ತಲೇ ಬಂದಿದ್ದಾರೆ. ಮುಂದೆ ಹರಿಕತಾ ಪರಂಪರೆಯು ಗಮಕ ಪರಂಪರೆಯನ್ನು ತನ್ನೊಡನೆ ಜೋಡಿಸಿಕೊಂಡು, ಕನ್ನಡ ಕಾವ್ಯಗಳನ್ನು ಮತ್ತಷ್ಟು ವಿಸ್ತರಿಸಿತು. ಈ ಹರಿದಾಸರುಗಳು ಕನ್ನಡ ಕಾವ್ಯಗಳನ್ನು ಮರುಸೃಷ್ಟಿಸಿ ಜನರಿಗೆ ತಲುಪಿಸಿದ ರೀತಿಯ ಕುರಿತು ನಾವು ಇನ್ನಷ್ಟೇ ಗಂಭೀರವಾದ ಅಧ್ಯಯನ ನಡೆಸಬೇಕಾಗಿದೆ. ಮುಂದೆ 17 ಮತ್ತು 18ನೇ ಶತಮಾನದಲ್ಲಿ ಕನ್ನಡ ಕಾವ್ಯಗಳನ್ನೇ ಆಧರಿಸಿ ಬರೆಯಲಾದ  ನೂರಾರು ಸಂಖ್ಯೆಯ ಯಕ್ಷಗಾನ ಪ್ರಸಂಗಗಳು ಕಾಣಿಸಿಕೊಂಡುವು. ಈ ಯಕ್ಷಗಾನ ಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಾಗಿಯೇ ಎತ್ತಿಕೊಂಡು, ಅವುಗಳನ್ನು ಅಲ್ಪ ಸ್ವಲ್ಪ ಮಾರ್ಪಡಿಸಿ ಪ್ರಸಂಗ ರೂಪದಲ್ಲಿ ರಂಗಭೂಮಿಗೆ ಅಳವಡಿಸಿದರು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಬಣ್ಣ, ಕುಣಿತ, ವೇಷಭೂಷಣ ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ಕಾವ್ಯಗಳು ರಂಗ ಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು.  ಅವುಗಳನ್ನು ಲಕ್ಷಾಂತರ ಜನ ನೊಡುವಂತಾಯಿತು.

ಹೀಗೆ 10ನೇ ಶತಮಾನದ ಗದಾಯುದ್ಧ ಪಠ್ಯವು ಬಹುರೂಪಿಯಾಗಿ ವಿಸ್ತಾರಗೊಳ್ಳುತ್ತಾ  ಇವತ್ತಿನ ವರೆಗೆ ಬದುಕುಳಿದ ಬಗೆಯ ಚೋದ್ಯವನ್ನು  ನಾವು ಸಾಕ್ಷಾತ್ಕರಿಸಿಕೊಳ್ಳಬೇಕು.

 ಗಮಕ-ಒಂದು ಟಿಪ್ಪಣಿ :
ಹಾಡಲು ಅನುಕೂಲವಾಗುವಂತೆ ಮರುಸೃಷ್ಟಿಕೊಂಡ ಕನ್ನಡ ಕಾವ್ಯಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ಗಮಕವು ಪ್ರಧಾನ ಪಾತ್ರ ವಹಿಸಿದೆ. ಗಮಕವು ಸಾಹಿತ್ಯಕ್ಕೆ ಸಂಗೀತವನ್ನು ಬೆರೆಸಿ ಅದರ ಮಾಧುರ್ಯವನ್ನು ಇಮ್ಮಡಿಗೊಳಿಸಿತು. 
ಪ್ರಾಚೀನ ಸಂಗೀತಶಾಸ್ತ್ರಜ್ಞನಾದ ಶಾರ್ಙ್ಗದೇವನು (1230) ತನ್ನ ಸಂಗೀತರತ್ನಾಕರ ಗ್ರಂಥದಲ್ಲಿ ತಿಳಿಸಿರುವಂತೆ, “ಕೇಳುಗರಿಗೆ ಸುಖವೀಯುವ ರೀತಿಯಲ್ಲಿ ಸ್ವರಗಳನ್ನು ಕಂಪಿಸುವುದೇ ಗಮಕ. ವಾಚಸ್ಪತ್ಯ ಕೋಶದ ಪ್ರಕಾರ, ಸ್ಪಷ್ಟಪಡಿಸುತ್ತ, ಯಾವುದು ಮೂರ್ಛನಾದಿ (ಇಲ್ಲಿ ಮೂರ್ಛನಾ ಎಂದರೆ ಸಂಗೀತದಲ್ಲಿ ಸಪ್ತಸ್ವರಗಳ ಏರಿಳಿತಗಳ ಆಲಾಪನೆ. ಗಮಕ ಕಲೆಯಲ್ಲಿ ಪದ್ಯಗಳನ್ನು ಹಾಡುವಾಗ, ಆಯಾ ಸನ್ನಿವೇಶ-ರಸ-ಧ್ವನಿಗಳಿಗೆ ಸಂಬಂಧಿಸಿದಂತೆ ಆಯಾ ರಾಗಗಳಲ್ಲಿ ವಾಚಿಸುವುದರಿಂದ ಅದ್ಭುತ ಪರಿಣಾಮ ಮನದ ಮೇಲಾಗುವುದೆಂಬುವ ಅಂಶ) ಲಕ್ಷಣಗಳಿಂದ ತನ್ನನ್ನೇ ಹೊಂದಿಸುವುದೋ ಅದು ಗಮಕ. ನಿಜಗುಣಶಿವಯೋಗಿ ತನ್ನ ವಿವೇಕ ಚಿಂತಾಮಣಿ ಕೃತಿಯಲ್ಲಿ - 'ತಾನಮಾನಂದೋಱಿ ವಿಶ್ರಮಣನನಱಿದು ಪದನಂ ವ್ಯಕ್ತಿಗೈದು ಕೇಳ್ವರ ಕಿವಿಗೊಳಿಸಿ ಮೃದುಮಧುರ ವರ್ಣೋಚ್ಚಾರಣಂ ಮಾಳ್ಪರ್ ಗಮಕಿಗಳ್' ಎನ್ನುತ್ತಾನೆ. ವಾಲ್ಮೀಕಿಯು ಬರೆದ ರಾಮಾಯಣವನ್ನು ಕುಶ ಲವರು ಹಾಡಿ, ವಶಿಷ್ಠರ ಆಶ್ರಮದಲ್ಲಿದ್ದ ಎಲ್ಲ ಮುನಿಗಳಿಗೆ ದಾಟಿಸಿದ್ದನ್ನು ವಿದ್ವಾಂಸರು ಈಗಾಗಲೇ ಗುರುತಿಸಿದ್ದಾರೆ. ಕನ್ನಡ ಶಾಸನಗಳು ಗಮಕವನ್ನು ಕೊಂಡಾಡಿರುವುದನ್ನು ಆರ್ ನರಸಿಂಹಾಚಾರ್ಯರೇ ಮೊದಲಾದ ವಿದ್ವಾಂಸರು ಗುರುತಿಸಿದ್ದಾರೆ. ಕೆಳಗಿನ ಶಾಸನದಲ್ಲಿ ಕವಿಯನ್ನೂ ಗಮಕಿಯನ್ನೂ ಒಟ್ಟೊಟ್ಟಿಗೇ ಪ್ರಶಂಸಿಸಲಾಗಿದೆ.

ಕವಿಗಮಕಿ ವಾದಿ ವಾಗ್ಮಿಗ
ಳವಿವೇಕದ ದೆಸೆಯನರಿಯರಾಶ್ರಿತ ಜನಮು
ತ್ಸವದಿಂ ಬೇಡಲ್ಕೀವರ್
ಸವಿಲಾಸಿಗಳ್ತೆ ಶಿವೆಯಗೇರಿಯನೂರ್ವರ್
(ಶಾಸನ ಪದ್ಯಮಂಜರಿ-ಪುಟ 147, ಪದ್ಯ 862)

ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಬರುವ ಮಾತುಗಳನ್ನು ಗಮನಿಸೋಣ-

ಕವಿ ಗಮಕಿ ವಾದಿ ವಾಗ್ಮಿ
ಪ್ರವರರ ಪಂಡಿತರ ನೆಗೞ್ದ ಮಾತಱಿವರ ಸ
ಬ್ಬವದವರೊಡನಂತೆಸೆದ
ನ್ನವಾಸದೋಲಗದೊಳಿರ್ಪನಾಗಳ್ ಹರಿಗಂ

ಇಲ್ಲಿಯೂ ಕವಿ ಮತ್ತು ಗಮಕಿಗಳನ್ನು ಒಟ್ಟಿಗೇ ಉಲ್ಲೇಖಿಸಲಾಗಿದೆ.

ಪೊನ್ನನು  ತನ್ನ ಶಾಂತಿಪುರಾಣ ಕಾವ್ಯದಲ್ಲಿ ತನ್ನನ್ನು ಪ್ರಶಂಸೆ ಮಾಡಿಕೊಂಡಿರುವ ಸಂದರ್ಭದ ಪದ್ಯವೊಂದರಲ್ಲಿ ಗಮಕಿಯ ವಿಚಾರ ಹೀಗೆ ನಿರೂಪಣೆಗೊಂಡಿದೆ :

ಇದಿರ್ಗೆ ಬರೆ ಪೊನ್ನಿಗಂ ಕಿಡಿ
ಸದಿರಂ ಕವಿ ಗಮಕಿ ವಾದಿ ವಾಗ್ಮಿಗಳ ಕವಿ
ತ್ವದ ಗಮಕಿತ್ವದ ವಾದಿ
ತ್ವದ ವಾಗ್ಮಿತ್ವದ ಪೊಡರ್ಪುಮಂದರ್ಪಮುಮಂ

ಹರಿಹರ ತನ್ನ ನಂಬಿಯಣ್ಣನ ರಗಳೆಯಲ್ಲಿ ನಂಬಿಯಣ್ಣನು ‘ಗೇಯಗೋಷ್ಠಿ, ಗಮಕಿತ್ವದ ವಾಗ್ಮಿವೃಂದದೊಳ್’ ಇದ್ದನೆಂದು ಹೇಳುತ್ತಾನೆ. ವಾರ್ಧಿಕ ಷಟ್ಪದಿಯ ಸಾಧ್ಯತೆಗಳೆಲ್ಲವನ್ನೂ ಸೂರೆಗೊಂಡ ಲಕ್ಷ್ಮೀಶನಲ್ಲಿ ಸ್ಪಷ್ಟವಾಗಿ ಕವಿಗಮಕಿಗಳ ಕುರಿತ ಚಿತ್ರಣ ದೊರೆಯುತ್ತದೆ. ದುರ್ಗಸಿಂಹ ತನ್ನ ಕನ್ನಡ ಪಂಚತಂತ್ರದಲ್ಲಿ ಶ್ರೀಮಾದಿರಾಜ ಎಂಬುವವನನ್ನು ‘ ಕವಿಗಮಕಿವಾದಿ ವಾಗ್ಮಿ ಪ್ರವರನೆಂದು’ ಕೊಂಡಾಡುತ್ತಾನೆ.

ಗಮಕಿಗಳಿಗೆ ಗುರುವಾದ ಕುಮಾರವ್ಯಾಸನೇ ಹೀಗೆ ಹೇಳಿದ್ದಾನೆ-

ನುಡಿದು ತಲೆದೂಗಿಸುವಮರೆಗ
ನ್ನಡಕೆ ಹಾಹಾಯೆನಿಸಿ ಮೆಚ್ಚನು
ಪಡೆವ ವಾಗ್ಮಿಗಳೋದಿ ಹೊಗಳಿಸಿಕೊಂಬ ಗಮಕಿಗಳು
 (ಕುಮಾರವ್ಯಾಸಭಾರತ - ಸಂಧಿ 8 - ಪದ್ಯ 38)

ಹಾಡಲೆಂದೇ ಬರೆಯಲಾದ ಕನಕದಾಸರ ಮೋಹನತರಂಗಿಣಿ ಯಲ್ಲಿ ಈ ಕೆಳಗಿನ ಸಾಲುಗಳು ಬರುತ್ತವೆ (3-40)-

ರವಿ ಸಿದ್ಧಾನ್ತ ಪಾಠಕರಷ್ಟಭಾಷಾ
ಕವಿ ಗಮಕಿಗಳು ತಾರ್ಕಿಕರು
ವಿವಿಧ ವಿದ್ವತ್ಸಭೆ ನೆಱೆದುದು ಲಲಿತಾ ಭಾರ್ಗವಿಯ ಕಾಂತನ ಪುರದೊಳಗೆ

ಶಿವ ಪಾರಮ್ಯವನ್ನು ಮೆರೆದ ಭೀಮಕವಿಯ ಬಸವಪುರಾಣದಲ್ಲಿ ಕವಿ ಗಮಕಿವಾದಿ ವಾಗ್ಮಿಗಳ ಸಂಪುರ್ಣ ಚಿತ್ರಣವಿದೆ.
ಪುರಂದರದಾಸರ ಒಂದು ಕೀರ್ತನೆಯಲ್ಲಿ 

ತಾಳ ಬೇಕು, ತಕ್ಕ ಮೇಳ ಬೇಕು
ಶಾಂತ ವೇಳೆ ಬೇಕು-
ಗಾನವ ಕೇಳಬೇಕೆನ್ನುವಗೆ

ಎಂಬ ವಿವರಣೆ ಬರುತ್ತದೆ.

ಒಡೆಯರ ಕಾಲದ ಗೋವಿಂದ ವೈದ್ಯನೆಂಬುವ ಕವಿ ತನ್ನ ಚಂಪುಕೃತಿ ಕಂಠೀರವ ನರಸರಾಜ ವಿಜಯದಲ್ಲಿ ಭಾರತಿಗಳು ರಂಜಿಸಿದರು ಎನ್ನುತ್ತಾನೆ. ಅಂದರೆ, ಅವನ ಕಾಲಕ್ಕೆ ಹಾಡುವ ಗಮಕಿಗಳಿದ್ದರು ಎಂಬುದು ಇದರ ಸೂಚನೆ. ಭಾರತಿನಂಜನ ಮೂಲಕ ರಾಜ ಇಡೀ ಕಾವ್ಯವನ್ನೆ ಹಾಡಿಸಿದನಂತೆ. ಹೀಗೆಯೇ ರತ್ನಾಕರವರ್ಣಿಯ ಭರತೇಶ ವೈಭವದಲ್ಲಿಯೂ ದಂಡಿಗೆ ಮಿಡಿಯುತ್ತ ಗಮಕಿ ಹಾಡಿದಳೆಂಬುವ ಅಂಶವು ಧ್ವನಿತಗೊಂಡಿದೆ.
ಹೀಗೆ ಕನ್ನಡದ ಬಹುತೇಕ ಕವಿಗಳು ಗಮಕಿಗಳನ್ನು ತಮ್ಮ ಜೊತೆಗಾರರಾಗಿಯೇ ಇರಿಸಿಕೊಂಡಿದ್ದಾರೆ. ತಮ್ಮ ಕಾವ್ಯವನ್ನು ಜನರಿಗೆ ಮುಟ್ಟಿಸುವವರು ಗಮಕಿಗಳು ಎಂಬ ವಿಷಯದಲ್ಲಿ ಹಳಗನ್ನಡ ಹಾಗೂ ನಡುಗನ್ನಡ ಕವಿಗಳ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ.

ಗಮಕದ ಕುರಿತು ಕನ್ನಡೆ ವಿಶ್ವಕೋಶ ಹೀಗೆ ಹೇಳುತ್ತದೆ- ‘ ಈ ಎಲ್ಲ ಅಂಶಗಳನ್ನೂ ಗಮನಿಸಿ, ಶ್ರದ್ಧಾಭಕ್ತಿಯಿಂದ ಕವಿಕೃತಿಯನ್ನು ಚೆನ್ನಾಗಿ ಅಭ್ಯಾಸ ಮಾಡಿ, ಅದರ ಸಂಪುರ್ಣ ರಸಭಾವಗಳು ಶ್ರೋತೃಗಳಲ್ಲಿ ಉದ್ಬೋಧವಾಗುವಂತೆ ಮಾಡುವ ಗಮಕಿ ನಿಜವಾಗಿ ಆ ಹೆಸರಿಗೆ ತಕ್ಕವನಾಗುತ್ತಾನೆ. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಬೀಭತ್ಸ, ಅದ್ಭುತ, ಶಾಂತವೇ ಮೊದಲಾದ ನವರಸಗಳೂ ಮೂಡಿಬರುವಂತೆ ಮಾಡುವುದು ನಿಜವಾದ ವಾಚನ ವೈಖರಿಯ ಅಗ್ಗಳಿಕೆ. ಯತಿ, ಗಣ, ಪ್ರಾಸ ಇತ್ಯಾದಿಗಳನ್ನೂ ಷಟ್ಪದಿ, ಸಾಂಗತ್ಯ, ರಗಳೆ, ಶತಕ, ತ್ರಿಪದಿ, ಕಂದ ಮೊದಲಾದ ಛಂದೋವೈವಿಧ್ಯವನ್ನೂ ಗಮಕಿ ಅರಿತಿರಬೇಕು. ಸುಶ್ರಾವ್ಯವಾಗಿ ವಾಚನ ಮಾಡಲು ಶ್ರುತಿ, ಗತಿಗಳನ್ನು ಅನುಸರಿಸಬೇಕು. ಸುಕಂಠದಿಂದ ಸ್ಫುಟವಾಗಿ ಕಾವ್ಯದ ನುಡಿಯನ್ನು ನಾಲಗೆಯಲ್ಲಿ ಕುಣಿಸಬೇಕು. ತಾನು ಆನಂದಪಟ್ಟು ವಾಚಿಸಿದಲ್ಲಿ ಕೇಳುವವರಿಗೂ ಆನಂದವಾಗುವುದು. ಅವರ ಹೃದಯವೂ ಮಿಡಿಯುವುದು. ಶ್ರುತಿಭೇದ, ರಾಗಭೇದ, ಸಂಗೀತದ ಸ್ವರಸ್ಥಾಯಿ, ಗಮಕ, ವರ್ಣ, ಕೃತಿಯ ಜೀವಾಳ - ಇವನ್ನು ತಿಳಿದುಕೊಳ್ಳದಿದ್ದರೆ ಗಮಕ ಹಿತವಾಗಿರುವುದಿಲ್ಲ. ಇನ್ನು ತಾಳದ ವಿಷಯ. ಪದ್ಯದ ಸಹಜವಾದ ಗತಿ, ಲಯ, ಏರಿಳಿತಗಳ ಕಡೆ ಗಮನವಿರಬೇಕು. ಎಲ್ಲಿ ಮುರಿಯಬೇಕು, ಎಲ್ಲಿ ನಿಲ್ಲಿಸಬೇಕು, ಎಲ್ಲಿ ನೆರವಲು ಮಾಡಬೇಕು ಎಂಬುದನ್ನರಿತು ಅರ್ಥವಾಗುವಂತೆ ಜಾಗೃತಿಯಿಂದ ಪದಗಳ ಜಾಡು ಹಿಡಿಯಬೇಕು. ವಾಚಿಸುವಾಗಲೇ ಅರ್ಥ ಮೂಡಬೇಕು. ಅಭಿನಯದ ಮುದ್ರೆಗಳ ಪರಿಚಯ ಪಡೆದುಕೊಂಡು ಸಮಯವರಿತು ಅವನ್ನು ಪ್ರಯೋಗ ಮಾಡುವುದು ಲೇಸು. ಸರಾಗದಿಂದ ಸುಮ್ಮನೆ ವಾಚನ ಮಾಡುವುದೂ ಗಮಕವೇ.
ಕನ್ನಡ ಸಾಹಿತ್ಯದಲ್ಲಿ ಬಗೆಬಗೆಯ ಕಾವ್ಯ ರಚನೆಯಾಗಿರುವುದರಿಂದ ಅವನ್ನು ಗಮಕಿಸುವ ರೀತಿಯೂ ಬಗೆಬಗೆಯಾಗಿದೆ. ಅದರ ಪ್ರಯೋಗವನ್ನು ಗಮಕಿಯಾದವನು ಸಾಧಿಸಬೇಕಾಗಿದೆ. ಮೊದಲು ಹಳೆಯ ಚಂಪುಕಾವ್ಯವನ್ನು ನೋಡಬಹುದು. ಅದರಲ್ಲಿ ಗದ್ಯ, ಪದ್ಯ ಮಿಶ್ರವಾಗಿರುತ್ತದೆ; ಕಂದ, ವೃತ್ತಗಳಿರುತ್ತವೆ. ಗದ್ಯವನ್ನು ಸ್ಫುಟವಾಗಿ ಸರಾಗವಾಗಿ ಓದಬೇಕು. ಅನೇಕ ವೃತ್ತಗಳಿಗೆ ಹಾಗೂ ಕಂದಕ್ಕೆ ತಾಳವಿಲ್ಲ. ಲಯವುಂಟು. ಅರ್ಥ ಕೆಡದಂತೆ, ನಿಲುಗಡೆ ಅರಿತು ಸೂಕ್ತ ರಾಗಗಳನ್ನು ಸಂಯೋಜಿಸಿ ಹಾಡಿದಾಗ ಮನರಂಜನೆಯಾಗುವುದು. ಆದಿಕವಿ ಪಂಪನ ಸಮಸ್ತಭಾರತವನ್ನೂ ಮಹಾಕವಿ ರನ್ನನ ಗದಾಯುದ್ಧವನ್ನೂ ವಾಚಿಸುವ ಬಗೆಯನ್ನು ಅರಿತುಕೊಳ್ಳಬೇಕು; ಜನ್ನನ ಯಶೋಧರ ಚರಿತೆ ಬರಿ ಕಂದಗಳಲ್ಲಿ ಬಂದಿದೆಯಾದರೂ ಸುಲಲಿತವಾಗಿದೆ, ಸುನಾದಮಯವಾಗಿದೆ. ವಿವಿಧ ರಾಗಗಳಲ್ಲಿ ಅದನ್ನು ಗಮಕಿಸಬಹುದು.

ಷಟ್ಪದಿ ಕಾವ್ಯಗಳಲ್ಲಿ ಕುಮಾರವ್ಯಾಸನ ಮಹಾಭಾರತ ಗಮಕಿಗಳ ಭಾಗ್ಯನಿಧಿ ಎನಿಸಿದೆ. ಕುಮಾರವಾಲ್ಮೀಕಿಯ ತೊರವೆ ರಾಮಾಯಣಕ್ಕೆ ಅನಂತರದ ಸ್ಥಾನ. ಇವೆರಡೂ ತುಂಬ ಜನಪ್ರಿಯವಾಗಿವೆ. ಭಾರತ ಬಿಂದೂರಾಯರು, ಕೃಷ್ಣಗಿರಿ ಕೃಷ್ಣರಾಯರು ವಾಚನ ಮಾಡಿ ನಾಡಿನಾದ್ಯಂತ ಇವನ್ನು ಪ್ರಚಾರ ಮಾಡಿದ್ದಾರೆ. ಜನಸಾಮಾನ್ಯರು ಗುರುತಿಸಬಲ್ಲ ನವರಾಗಗಳೇ ಸಾಕು. ಆದ್ದರಿಂದ ಗಮಕಿಗೂ ಸಂಗೀತಾಭ್ಯಾಸ ಬಹಳ ಮುಖ್ಯ. ರಾಗಗಳ ಪರಿಚಯ, ಅವುಗಳನ್ನು ಇಂಪಾಗಿ ಹಾಡುವ ಯೋಗ್ಯತೆ ಅವನಿಗಿರಬೇಕಾಗುತ್ತದೆ. ಸಾಹಿತ್ಯದಲ್ಲಿ ಅಡಗಿರುವ ನವರಸಗಳನ್ನು ಗುರುತಿಸಿ ಅದನ್ನು ಪೋಷಿಸುವ ರಾಗಶಕ್ತಿಯನ್ನು ಗಮಕಿ ಗಳಿಸಿರಬೇಕಾಗುತ್ತದೆ.

ಛಂದಸ್ಸಿನ ವಿಚಾರಕ್ಕೆ ಬಂದರೆ ಕವಿಯು ತನ್ನ ಕೃತಿಯ ಪದ್ಯಗಳನ್ನು ಯಾವ ತಾಳಗತಿಯಲ್ಲಿ ನಡೆಸಿದ್ದಾನೆಂಬ ಅರಿವು ಗಮಕಿಗೆ ಅಗತ್ಯ. ತಾಳಯುತವಾಗಿ ವಾಚಿಸುವುದು ರೂಢಿಯಲಿಲ್ಲದಿದ್ದರೂ ಕವಿಕೃತಿಯನ್ನು ವಾಚಿಸುವಾಗ ತಾಳಕ್ಕೆ ಆಧಾರವಾದ ಗತಿಯನ್ನು ಗುರುತಿಸಿ ಆ ಗತಿಯನ್ನು ಮೆರೆಸಬೇಕು. ಕವಿಗೆ ಸ್ಫೂರ್ತಿ, ಆವೇಶ ಬಂದಾಗ ಅವನ ಮಾತೂ ಲಯಬದ್ಧವಾಗುತ್ತದೆ, ರಾಗಬದ್ಧವಾಗುತ್ತದೆ. ಆಗ ಅವನ ಪದ್ಯಗಳು ಒಂದು ಗತಿಯಲ್ಲಿ ಅಳವಡುವಂತಾಗುತ್ತದೆ. ಅದನ್ನರಿತು ಗಮಕಿ ವಾಚಿಸಿದರೆ ವಾಚನದ ವೈಶಿಷ್ಟ್ಯ ಹೆಚ್ಚಾಗುವುದರೊಂದಿಗೆ ಕೃತಿಯ ಆಸ್ವಾದವೂ ಹೆಚ್ಚುತ್ತದೆ.
ಹೀಗೆ ಗಮಕಿಗಳು ಕನ್ನಡ ಕಾವ್ಯಗಳನ್ನು ಮರು ಸೃಷ್ಟಿಸಿ ಜನರಿಗೆ ತಲುಪಿಸಿದ್ದಾರೆ. ಸುಶ್ರಾವ್ಯತೆ, ಕಾವ್ಯದ ಅರ್ಥವಂತಿಕೆ, ರಸಾನುಭವ, ಭಾಷಾಸೌಂದರ್ಯ ಇವೆಲ್ಲದರ ಸಮರ್ಥ ಅಭಿವ್ಯಕ್ತಿಗೆ ಪೂರಕವಾದ ರಾಗ ಭಾವಗಳನ್ನು ಅಳವಡಿಸಿಕೊಂಡ ಗಮಕಿಗಳು ಆ ಮೂಲಕ ಕನ್ನಡ ಕಾವ್ಯಕ್ಕೆ ಹೊಸ ಆಯಾಮ ನೀಡಿದ್ದಾರೆ. 
ರಾಜರ ಆಸ್ಥಾನಗಳಲ್ಲಿ ಪಂಡಿತರಿಗೆ, ಕವಿಗಳಿಗೆ, ಸಂಗೀತಗಾರರಿಗೆ, ನೃತ್ಯಕಲಾವಿದರಿಗೆ ಮಾನ್ಯತೆಗಳಿದ್ದಂತೆಯೇ ಗಮಕಿಗಳಿಗೂ ಅತ್ಯುತ್ತಮ ಸ್ಥಾನಗಳಿದ್ದವು.

ಆದರೆ ಹಳಗನ್ನಡ-ನಡುಗನ್ನಡ ಕಾಲಘಟ್ಟಗಳಲ್ಲಿ ಯಾವ ಗಮಕಿಗಳು ನಮ್ಮ ಕಾವ್ಯಗಳನ್ನು ಹಾಡುತ್ತಿದ್ದರು ಎಂಬ ಕುರಿತು ಸದ್ಯಕ್ಕೆ ನಮ್ಮಲ್ಲಿ ಮಾಹಿತಿಗಳಿಲ್ಲ. ಸಾವಿರಾರು ಸಂಖ್ಯೆಯಲ್ಲಿರುವ ಕನ್ನಡ ಶಾಸನಗಳಲ್ಲಿ ಇಂಥವರ ಬಗ್ಗೆ ಮಾಹಿತಿಗಳಿದ್ದರೂ ಇರಬಹುದು. ಆದರೆ19-20ನೆಯ ಶತಮಾನದ ಅವಧಿಯಲ್ಲಿ ಕರ್ನಾಟಕದಲ್ಲಿ ಗಮಕ ಕಲೆ, ಕಾವ್ಯವಾಚನ ಕ್ಷೇತ್ರದಲ್ಲಿ ಶ್ರಮಿಸುತ್ತ ಈ ಪ್ರಾಚೀನ ಕಲೆಯನ್ನು ನಾಡಿನಾದ್ಯಂತ ಪ್ರಸಾರ ಮಾಡಿದ ಹಿರಿಯರನೇಕರ ಮಾಹಿತಿ ನಮಗೆ ದೊರೆಯುತ್ತದೆ. 1935ರಷ್ಟರ ಹಿಂದೆ ಭಾರತಕ್ಕೆ ಬಂದ ಡಚ್ ಸಂಗೀತ ಶಾಸ್ತ್ರಜ್ಞ ಬೆಳಗಾವಿಯಲ್ಲಿ ರನ್ನನ ಗದಾಯುದ್ಧವನ್ನು ರಾಗವಾಗಿ ಹಾಡುವುದನ್ನು ದಾಖಲಿಸಿದ್ದಾನೆ . ಅಭಿನವ ಕಾಳಿದಾಸರೆಂದು ಪ್ರಸಿದ್ಧರಾಗಿದ್ದ ಬಸವಪ್ಪಶಾಸ್ತ್ರಿಗಳು (1843-91) ಗಮಕ ಕಲಾಕ್ಷೇತ್ರದಲ್ಲಿ ದೊಡ್ಡ ಹೆಸರು. ಇವರ ಗಮಕ ವಾಚನವನ್ನು ಕುರಿತಂತೆ ಹಿರಿಯ ವಿದ್ವಾಂಸರಾದ ಆರ್. ನರಸಿಂಹಾಚಾರ್ಯರು ಹೀಗೆ ಹೇಳಿದ್ದಾರೆ- ‘ ನನಗೆ ತಿಳಿದ ಹಾಗೆ ಭಾರತವನ್ನು ಈಚೆಗೆ ಚೆನ್ನಾಗಿ ಓದುತ್ತಿದ್ದವರು ಮೈಸೂರಿನಲ್ಲಿದ್ದ ಸುಪ್ರಸಿದ್ಧ ಬಸವಪ್ಪಶಾಸ್ತ್ರಿಗಳು. ಇವರು ಮೈಸೂರು ಶ್ರೀಮನ್ಮಹಾರಾಜರ ಆಸ್ಥಾನದಲ್ಲಿ ಕವಿಗಳಾಗಿದ್ದು ಅಭಿನವ ಕಾಳಿದಾಸ ಎಂಬುವ ಬಿರುದು ಪಡೆದಿದ್ದವರು. ಇವರಷ್ಟು ಚೆನ್ನಾಗಿ ಭಾರತವನ್ನು ಓದಿದವರನ್ನು ನಾನು ಕಂಡಿಲ್ಲ’.

ಬಸವಪ್ಪಶಾಸ್ತ್ರಿಗಳ ಶಿಷ್ಯೆ ಹಾಡಿನ ನಾಗಮ್ಮ ಉತ್ತಮ ಗಮಕಿಯೆನಿಸಿಕೊಂಡಿದ್ದರು. ಇನ್ನೂ ಎಷ್ಟು ಶಿಷ್ಯರನ್ನು ಶಾಸ್ತ್ರಿಗಳು ತಯಾರು ಮಾಡಿದ್ದರೆಂಬುದು ಸ್ಪಷ್ಟವಾಗಿ ತಿಳಿಯುವುದಿಲ್ಲ. ಆನಂತರದ ಕಾಲಘಟ್ಟದಲ್ಲಿ ಗಮಕದಲ್ಲಿ ಹೆಸರಾದವರು ಸಂಗೋಬಿಂದೂರಾಯರು (1877-1969). ಅವರು ಭಾರತದ ಬಿಂದೂರಾಯರೆಂದೇ ಪ್ರಸಿದ್ಧರಾಗಿದ್ದರು. ಸಾಹಿತ್ಯಕ್ಕೆ ಒತ್ತುಗೊಟ್ಟು ಸಂಗೀತವನ್ನು ರಸಭಾವಕ್ಕಾಗಿ ಮಾತ್ರ ಅಳವಡಿಸಿಕೊಳ್ಳುತ್ತ ಕಾವ್ಯವನ್ನು ಕೇಳುಗರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುತ್ತಿದ್ದ ಬಿಂದೂರಾಯರ ‘ಕುಮಾರವ್ಯಾಸ ಭಾರತ ಸಾರೋದ್ಧಾರ’ ಎಂಬ ಕೃತಿಯು  ಇಂದು ಗಮಕಿಗಳಿಗೆ ಆಕರ ಗ್ರಂಥವಾಗಿದೆ.  ಅವರ ಹಾದಿಯಲ್ಲಿ ಹೆಜ್ಜೆ ಹಾಕಿದ ಮೈಸೂರಿನ ಭಾರತದ ಕೃಷ್ಣರಾಯರು, ಶಕುಂತಲಾಬಾಯಿ, ಪಾಂಡುರಂಗ ರಾವ್, ಎಂ.ಎಸ್. ಚಂದ್ರಶೇಖರಯ್ಯ, ಧಾರವಾಡದ ಸುಪ್ರಸಿದ್ಧ ಗವಾಯ್ ಗುರುರಾವ್ ದೇಶಪಾಂಡೆ ಮೊದಲಾದವರು ಗಮಕ ಕಲೆಯನ್ನು ಉಳಿಸಿ ಬೆಳೆಸಿದವರು. ಹೊಸ ರೀತಿಯಲ್ಲಿ ಹಾಡುತ್ತಿದ್ದ ಭಾರತ ಕೃಷ್ಣರಾಯರ ಕುರಿತು ಮಹಾ ಕವಿ ಕುವೆಂಪು ಅವರು ‘ ಹಾಡಿದನು ಗಮಕಿ, ನಾಡು ನಲಿದುದು ರಸದ ಕಡಲಿನಲಿ ಧುಮುಕಿ’ ಎಂದು ಪ್ರಶಂಸಿಸಿದ್ದಾರೆ.
ಮೈಸೂರಿನಲ್ಲಿದ್ದ ತಲಕಾಡು ಮಾಯಿಗೌಡರು, ಜವಳಿ ಅಂಗಡಿ ತಮ್ಮಯ್ಯ ನವರು, ಅನೇಕ ಗ್ರಂಥಗಳನ್ನು ಬರೆದ  ಮೈಸೂರು ರಾಘವೇಂದ್ರರಾಯರು, ಕಳಲೆ ಸಂಪತ್ಕುಮಾರಾಚಾರ್ಯರು, ಗೌರೀದೇವುಡು ನರಸಿಂಹಶಾಸ್ತ್ರೀ ಅವರು, ಮೈ.ಶೇ. ಅನಂತಪದ್ಮನಾಭರಾವ್ , ಜೋಳದರಾಶಿ ದೊಡ್ಡನಗೌಡರು, ಅನಂತಪದ್ಮನಾಭಯ್ಯ, ಕೆ.ಎ. ವೆಂಕಟಸುಬ್ಬಯ್ಯ ವ್ಯಾಖ್ಯಾನಕಾರ ಕ.ಲಿ. ವೈದ್ಯನಾಥನ್, ಮಾಲೂರಿನ ಟಿ. ವೆಂಕಟಪ್ಪನವರು, ಗಮಕ ರೂಪಕಗಳೆಂಬ ಹೊಸ ಪ್ರಕಾರವನ್ನು ಸೃಜಿಸಿದ ಹು.ಮ. ರಾಮಾರಾಧ್ಯರು, ಸರೋಜಮ್ಮ ಅನಂತರಾಮಯ್ಯ, ಮತ್ತೂರಿನ ರಾಮಾಶಾಸ್ತ್ರಿಗಳು, ಲಕ್ಷ್ಮೀಕೇಶವ ಶಾಸ್ತ್ರಿಯವರು, ಮತ್ತೂರು ಕೃಷ್ಣಮೂರ್ತಿಯವರು ಹೀಗೆ ಸುಮಾರು 500 ಕ್ಕೂ ಹೆಚ್ಚಿನ ಸಂಖ್ಯೆಯ ಗಮಕಿಗಳು ಕನ್ನಡ ಕಾವ್ಯಗಳನ್ನು ಗಮಕದ ಮೂಲಕ ಉಳಿಸಿದ್ದಾರೆ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇವರಿಗೆ ಅರ್ಹವಾದ ಸ್ಥಾನವೊಂದು ಸಿಗಲೇ ಬೇಕು.

ಹರಿಕತೆ – ಒಂದು ಟಿಪ್ಪಣಿ:

ಕಾವ್ಯಗಳನ್ನು ಕುಳಿತು ಹಾಡುತ್ತಾ ಅದಕ್ಕೆ ಸರಳವಾದ ಅರ್ಥ ವಿವರಣೆ ಮಾಡುವ ಜನರನ್ನು ತಲುಪಿದ ಗಮಕ ಪರಂಪರೆಯನ್ನು ಹರಿಕತಾ ಪರಂಪರೆಯು ಇನ್ನಷ್ಟು ವಿಸ್ತರಿಸಿತು. ಹರಿಕತೆಯು ಒಂದು ಅರೆ ಜಾನಪದ ಕಲೆ.
ಕನ್ನಡ ಶಾಸನಗಳಲ್ಲಿ ಹಾಗೂ ಕಾವ್ಯಗಳಲ್ಲಿ ಹರಿಕತೆಯ ಉಲ್ಲೇಖ ಬರುತ್ತದೆ. ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಹರಿಕತೆ ನಡೆಯುತ್ತದೆ. ಹೆಸರು ಸೂಚಿಸುವಂತೆ ಇದು ವೈಷ್ಣವ ಪರಂಪರೆಗೆ ಸೇರಿದ್ದರೂ ಅದರಲ್ಲಿ ಹೇರಳವಾಗಿ ಶಿವ ಕತೆಗಳೂ ಸೇರಿಕೊಂಡಿದ್ದುವು. 12ನೆಯ ಶತಮಾನದ ಶೈವ ಗುರುಗಳೊಬ್ಬರು ಶಿವಧರ್ಮ ಕಥಾಕಥನ ಮಾಡುತ್ತಿದ್ದರೆಂದು ಡಾ. ಚಿದಾನಂದ ಮೂರ್ತಿ ಅವರು ತಮ್ಮ ಹೊಸತು ಹೊಸತು ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕಥಾಕಥನವು ಹರಿಕತೆಯೋ ತಿಳಿಯದು. ಏನಿದ್ದರೂ ಹರಿಕತೆಯ ಬಗ್ಗೆ ನಿರ್ವಿವಾದವಾದ ಉಲ್ಲೇಖ ದೊರೆಯುವುದು 15ನೇ ಶತಮಾನದ ಹರಿದಾಸರಾದ ಶ್ರೀಪಾದ ರಾಯರಲ್ಲಿ. ‘ತಾಳ ತಂಬೂರಿಗಳಿಂದ ಕಾಲ ಗೆಜ್ಜೆ ದನಿಗಳಿಂದ’ ಎಂಬ ಅವರು ಸಾಲು  ಹರಿದಾಸರೊಬ್ಬರ ವರ್ಣನೆಯೇ ಆಗಿದೆ. ಪುರಂದರ ದಾಸರಂತೂ ಹರಿಕತೆ ಕೇಳಲು ಬಂದ ಸಾಮಾನ್ಯ ಪ್ರೇಕ್ಷಕರ ಒಳ್ಳೆಯ ವಿವರ ನೀಡುತ್ತಾರೆ-

ಹರಿಕತೆ ಕೇಳುವ ಪರಿಜನರು ಈ
ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವವರು
ನೆಲ್ಲು ಒಣಗಲಿಲ್ಲ, ಹಲ್ಲು ನೋವು ಘನ್ನ
ಕಲ್ಲು ಹೋಗದು ಎನ್ನ ಕೈಲೆಂದು
ಫುಲ್ಲ ನಾಭನ ಕತೆ ಪೂರೈಸಿ ಕೇಳದೆ
ಕಲ್ಲ ಗೋವಿನ ಹಾಲ ಕರುವು ಬಯಸುವಂತೆ

ಅವರ ಇನ್ನೊಂದು ಕೀರ್ತನೆಯಲ್ಲಿ ಹರಿಕತೆ ಆ ಕಾಲಕ್ಕೆ ಎಷ್ಟೊಂದು ಜನಪ್ರಿಯವಾಗಿತ್ತೆಂಬುದರ ಕುರಿತು ಸೂಚನೆ ನೀಡುತ್ತದೆ-

ಪರರ ನಿಂದೆಗಳ ಬಿಡದೆ ಕಾಪಾಡುವ
ಮರೆತನೆ ಮನೆಯ ಬಾಗಿಲು ಹಾಕಲು
ಕರುವ ಕಟ್ಟಲಿಕೆ ಮರೆತು ಬಂದೆನೆಂಬ ಈ
ಪರಿಯ ಪುರಾಣಕ್ಕೆ ನೆರೆದು ಕುಳ್ಳಿರುವರು

ಕನಕದಾಸರು ಕೂಡಾ ‘ಮುಟ್ಟಬೇಡ ಮುಟ್ಟ ಬೇಡ ಮುರಹರ ದಾಸರನು, …ಹರಿಕತಾ ಪ್ರಸಂಗದವರನು’ ಎಂದು ಹೇಳುತ್ತಾನೆ. ಹರಿಕತೆ ಕೇಳಲು ಬಂದ ಜನರು ಪಾದರಕ್ಷೆಗಳು ಕಳುವಾಗುತ್ತಿದ್ದುದನ್ನು ವಿಜಯದಾಸರೂ ಉಲ್ಲೇಖಿಸಿದ್ದಾರೆ. ( ಪಾಪೋಸು ಪೋದುವಲ್ಲಾ ). ಕ್ರಿಸ್ತ ಶಕ 1650 ರಲ್ಲಿದ್ದ ಶಾಂತವೀರ ದೇಶಿಕನು ತನ್ನ ಶಿವಲಿಂಗ ಚಾರಿತ್ರ್ಯ ದಲ್ಲಿ ಭಕ್ತರ ಮನೆಗಳಲ್ಲಿ ಹಾಗೂ ರಾಜಾಸ್ಥಾನಗಳಲ್ಲಿ ಪುರಾತನರ ಕಥನ ನಡೆಯುತ್ತಿದ್ದುದನ್ನು ಸ್ಮರಿಸಿಕೊಂಡಿದ್ದಾನೆ.

ಈ ಹರಿದಾಸರುಗಳು ಕನ್ನಡ ಕಾವ್ಯಗಳನ್ನು ಮರುಸೃಷ್ಟಿಸಿ ಜನರಿಗೆ ತಲುಪಿಸಿದ ರೀತಿಯ ಕುರಿತು ನಾವು ಇನ್ನಷ್ಟೇ ಗಂಭೀರವಾದ ಅಧ್ಯಯನ ನಡೆಸಬೇಕಾಗಿದೆ. ಹೆಚ್ಚಿನ ಹರಿದಾಸರಿಗೆ ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಹಾಗೂ ತೊರವೆಯ ರಾಮಾಯಣವೇ ಮೂಲ ಆಕರ. ಅದರಿಂದ ಸ್ತುತಿ ಪದ್ಯಗಳನ್ನೂ ಮುಖ್ಯ ಕತಾಭಾಗಗಳನ್ನು ಆಯ್ದುಕೊಳ್ಳುವ ಇವರು ಕತೆಯನ್ನು ಪ್ರಸ್ತುತ ಪಡಿಸುವಾಗ ಅದಕ್ಕೆ ಬೇಕಾದಲ್ಲಿಂದ ಉಪ ಕತೆಗಳನ್ನು ಸೇರಿಸಿಕೊಳ್ಳುತ್ತಿದ್ದರು. ಈ ಉಪಕತೆಗಳು ಹಳಗನ್ನಡದಿಂದಲೋ, ನಡುಗನ್ನಡಗಳಿಂದಲೋ, ಇಲ್ಲ ಸಮಕಾಲೀನ ಸಮಾಜದಿಂದಲೋ ಬರಬಹುದಿತ್ತು. ಹೀಗಾಗಿ ನಿರೂಪಣೆಯಲ್ಲಿ ಕನ್ನಡ ಕಾವ್ಯಗಳು ಹಿಗ್ಗಿ ವಿಸ್ತಾರವಾಗುತ್ತಿದ್ದುವು. ಹಂಪಿಯಲ್ಲಿ ನಾನು ಭೇಟಿ ಮಾಡಿದ ಲಕ್ಷ್ಮಣದಾಸ ಎಂಬ ಹರಿದಾಸರೊಬ್ಬರು ಹೇಳುತ್ತಿದ್ದ ಹರಿಕತೆ ಹಾಡುಗಳಲ್ಲಿ ಶಿಶುನಾಳ ಶರೀಫರ ತತ್ವಪದಗಳೊಂದಿಗೆ ಪುರಂದರದಾಸರ ಕೀರ್ತನೆಯ ಸಾಲು ಸೇರಿಕೊಂಡು,  'ಕೂಡಲ ಸಂಗಮದೇವಾ' ಎಂದು ಕೊನೆಗೊಳ್ಳುತ್ತಿತ್ತು. ಸುಮಾರು ಏಳು ನೂರು ವರ್ಷಗಳ ಅವಧಿಯಲ್ಲಿ ರಚಿತವಾದ ಪಠ್ಯಗಳಿಂದ ತಮಗೆ ಬೇಕಾದ ಸಾಲುಗಳನ್ನು ಆರಿಸಿಕೊಂಡು, ಅವಕ್ಕೆ ಅನೇಕ ಉಪಕತೆಗಳನ್ನು ಸೇರಿಸಿಕೊಂಡು,  ನಮ್ಮ ಕಾಲಕ್ಕೆ ಬೇಕಾದ ಪಠ್ಯವೊಂದನ್ನು ಹರಿಕತೆಯವರು ಸೃಜಿಸುತ್ತಾರೆ. ಕುಮಾರವ್ಯಾಸ ಭಾರತ, ಜೈಮಿನಿ ಭಾರತ, ತೊರವೆ ರಾಮಾಯಣ, ಪ್ರಭುಲಿಂಗ ಲೀಲೆ, ವಚನಗಳು, ದಾಸರ ಕೀರ್ತನೆಗಳು, ಜನಪದ ಹಾಡುಗಳೆಲ್ಲ ಹರಿದಾಸರ ನಿರೂಪಣೆಯೊಂದರಲ್ಲಿ ಸಮ್ಮಿಳಿತವಾಗುವ ರೀತಿಯು ಅತ್ಯದ್ಭುತವಾಗಿರುತ್ತದೆ. ನಾನು ಎಂಟನೆ ತರಗತಿ ಓದುತ್ತಿದ್ದಾಗ (1968) ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜ ಪ್ರೌಢ ಶಾಲೆಗೆ ಆಗಮಿಸಿದ್ದ ಹರಿದಾಸರೊಬ್ಬರು ಕರ್ಣ ಬೇಧನ ಹರಿಕತೆ ಮಾಡಿದ್ದರು. ಅದರಲ್ಲಿ ಪಂಪನ ಕಾವ್ಯದ ಸಾಲುಗಳೊಂದಿಗೆ ಮುಂದಿನ ಅನೇಕ ಮಹಾಭಾರತಗಳ ಸಾಲುಗಳೆಲ್ಲ ಸೇರಿಕೊಂಡದ್ದನ್ನು ನಾನು ಆ ಮೇಲಿನ ದಿನಗಳಲ್ಲಿ ನೆನಪಿಸಿಕೊಂಡೆ.

ಯಕ್ಷಗಾನ ಪ್ರಸಂಗಗಳು – ಒಂದು ಟಿಪ್ಪಣಿ :

 ‘ಪ್ರಸಂಗ’ ಎಂದರೆ ಘಟನೆ ಎಂದರ್ಥ. ನಿರ್ದಿಷ್ಟ ಯಕ್ಷಗಾನ ಪ್ರಸಂಗವು ಒಂದು ಘಟನೆಯ ಸುತ್ತ ಕೇಂದ್ರಿತವಾಗಿರುತ್ತದೆ . ಉದಾ: ಕೃಷ್ಣ ಸಂಧಾನ, ವಾಲಿ ವಧೆ, ವಸ್ತ್ರಾಪಹಾರ, ಶೂರ್ಪನಖಾ ಮಾನಭಂಗ, ಕರ್ಣಾವಸಾನ ಇತ್ಯಾದಿ. ಈ ಘಟನೆಗಳನ್ನು ವಿಸ್ತರಿಸಿ ಪ್ರಸಂಗವನ್ನು ರಚಿಸಲಾಗುತ್ತದೆ.  ಈ ಕುರಿತು ಯಕ್ಷಗಾನ ಪ್ರಸಂಗ ಕರ್ತರಲ್ಲಿ ಒಬ್ಬರಾದ ರಾಘವ ನಂಬಿಯಾರರು ಹೀಗನ್ನುತ್ತಾರೆ: ‘ಪ್ರಸಂಗ ಮೂಲತಃ ಒಂದು ಗೀತ ರೂಪಕ. ಆದರೆ, ಉದ್ದೇಶ ಸರಸ ಸಂಭಾಷಣೆಯಿಂದ ಕೂಡಿದ ಸೊಗಸಾದ ರಂಗಪ್ರದರ್ಶನವನ್ನು ಏರ್ಪಡಿಸುವುದು. ಕರ್ನಾಟಕದ ಕೆಲವು ಕಡೆಗಳಲ್ಲಿ ಲಿಖಿತವಾಗಿ ಕಾಣಿಸುವ, ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಆಶು ವಚನಗಾರಿಕೆಯಲ್ಲಿ ಕಾಣಿಸುವ ಸಂಭಾಷಣೆಯಿಂದ ಯಕ್ಷಗಾನದ ರಂಗಕೃತಿ ಗದ್ಯಪದ್ಯ ಮಿಶ್ರಿತವಾದ ದೃಶ್ಯ ಕಾವ್ಯಕ್ಕೆ ಸೇರಬೇಕು.’ ವಿದ್ವಾಂಸರಾದ ಟಿ. ಕೇಶವಭಟ್ಟರ ಅಭಿಪ್ರಾಯ ಹೀಗಿದೆ : ‘ಯಕ್ಷಗಾನ ಕಲೆ ಪ್ರಾಯೋಗಿಕವಾಗಿ ತಾಳಮದ್ದಳೆ, ಆಟಗಳ ರೂಪದಲ್ಲಿ ರಾತ್ರಿ ಜಾಗರಣೆಯ ಸುಮಾರು ಎಂಟು ಗಂಟೆ ಅವಧಿಯ ಕಾರ್ಯಕ್ರಮದ ವಿವಿಧ ರಸಾತ್ಮಕ ಕಥಾವಸ್ತುವನ್ನು ಒಳಗೊಂಡಿರುತ್ತದೆ. ಇಂತಹ ಒಂದೊಂದು ಪರಿಪೂರ್ಣ ಕಥಾತ್ಮಕ ಪದಗಳ ಕೃತಿಯನ್ನು ಪ್ರಸಂಗ ಎನ್ನುವರು. ಯಕ್ಷಗಾನ ಸಾಹಿತ್ಯವು ದಾಸಸಾಹಿತ್ಯಕ್ಕಿಂತ ಪ್ರಬುದ್ಧ ಹಾಗೂ ಪ್ರಾಚೀನ ಕಲೆಯಾಗಿ ಕಂಡು ಬರುತ್ತದೆ. ರಾಗ ತಾಳಬದ್ಧ ಕೀರ್ತನೆಗಳ ರೂಪದಲ್ಲಿ ಭಕ್ತಿ ಸಾಹಿತ್ಯವನ್ನು ನಿರ್ಮಿಸಿರುವ ಶಿವದಾಸರು, ಹರಿದಾಸರು, ಜಿನಭಕ್ತರು ಬಲುಮಟ್ಟಿಗೆ ಯಕ್ಷಗಾನ ಪದಗಳನ್ನೇ ಅನುಸರಿಸಿದಂತೆ ಕಂಡು ಬರುತ್ತದೆ. ಏನೇ ಇರಲಿ, ಹೆಚ್ಚಿನ ಯಕ್ಷಗಾನ ಪ್ರಸಂಗಗಳು ಕುಮಾರವ್ಯಾಸ ಭಾರತ ಮತ್ತು ತೊರವೆ ರಾಮಾಯಣವನ್ನು ಆಧರಿಸಿ ಬರೆದುವುಗಳಾಗಿವೆ. ಕುಂಬಳೆ ಪಾರ್ತಿಸುಬ್ಬನು ತೊರವೆ ರಾಮಾಯಣವನ್ನು ಆಧರಿಸಿ ಎಂಟು ರಾಮಾಯಣದ ಯಕ್ಷಗಾನ ಪ್ರಸಂಗಗಳನ್ನು ಬರೆದು ಪ್ರಖ್ಯಾತನಾದನು.

ಯಕ್ಷಗಾನ ಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಾಗಿಯೇ ಎತ್ತಿಕೊಂಡು ಅವುಗಳನ್ನು ಅಲ್ಪ ಸ್ವಲ್ಪ ಮಾರ್ಪಡಿಸಿ ಪ್ರಸಂಗ ರೂಪದಲ್ಲಿ ರಂಗಭೂಮಿಗೆ ಅಳವಡಿಸಿದರು. ಡಿ. ಎಸ್. ಶ್ರೀಧರ್ ಅಭಿಪ್ರಾಯ ಪಡುವಂತೆ ‘ಯಕ್ಷಗಾನ ಪ್ರಸಂಗವೆಂಬುದು ಸಂಪೂರ್ಣ ಸ್ವತಂತ್ರ ಕಾವ್ಯವಲ್ಲ. ನಮ್ಮ ಕವಿಗಳು ಒಂದಿಲ್ಲೊಂದು ರೀತಿಯಿಂದ ಕುಮಾರವ್ಯಾಸ, ಲಕ್ಷ್ಮೀಶ, ಕುಮಾರ ವಾಲ್ಮೀಕಿ ಮುಂತಾದವರ ಕೃತಿಗಳಲ್ಲಿ ಬರುವ ಕತೆಗಳನ್ನು ಆಧರಿಸಿ ಪ್ರಸಂಗ ರಚಿಸಿದರು. ಕೆಲವೆಡೆ ಅವರದೇ ಪದ್ಯಗಳನ್ನು ನೇರವಾಗಿ ಬಳಸುತ್ತಿದ್ದರು. ಆಯಾ ಸಂದರ್ಭಗಳಲ್ಲಿ ಆಯಾ ಕವಿಗಳ ಭಾಗವೇ ಸಮರ್ಥ ಎನ್ನುವ ಒಪ್ಪಿಕೊಳ್ಳುವ ಮನೋಭಾವವೇ ಇದಕ್ಕೆ ಕಾರಣ ಹೊರತು ಕೃತಿ ಚೌರ್ಯದ ಕೆಟ್ಟ ಸಂಪ್ರದಾಯ ಈ ಕವಿಗಳಿಗಿದ್ದಂತಿಲ್ಲ. ಕಾವ್ಯಾಭ್ಯಾಸದ ಪರಿಣಾಮವಾಗಿ ಯಕ್ಷಗಾನದಲ್ಲಿಯೂ ಅದೇ ಹಳೆಯ ವರ್ಣನೆಗಳು, ಹಳೆಯ ಕಾವ್ಯ ಧೋರಣೆಗಳು ನುಸುಳಿಕೊಂಡಿವೆ. ಪ್ರಯೋಗಶೀಲ ಯಕ್ಷಗಾನ ಕವಿಗಳು (ಮುದ್ದಣನಂಥವರು) ಅಲ್ಲಲ್ಲಿ ಕಂಡು ಬಂದರೂ ವಿಶೇಷ ಯಶಸ್ಸು ಅವರಿಗೆ ದೊರೆತಂತಿಲ್ಲ’.
ಕುಂಬಳೆಯ ಪಾರ್ತಿಸುಬ್ಬ (1620), ಗೆರೆಸೊಪ್ಪೆ ಶಾಂತಪ್ಪಯ್ಯ, ಅಳಿಯ ಲಿಂಗರಾಜ, ಕಡಂದಲೆ ರಾಮರಾವ್ ದೇವಿದಾಸ, ಮುದ್ದಣ, ಹಟ್ಟಿಯಂಗಡಿ ರಾಮಭಟ್ಟ, ಹಲಸಿನ ಹಳ್ಳಿ ನರಸಿಂಹ ಶಾಸ್ತ್ರಿ, ಕೀರಿಕ್ಕಾಡು ವಿಷ್ಣು ಮಾಸ್ತರ್, ಅಮೃತ ಸೋಮೇಶ್ವರ, ಬಲಿಪ ನಾರಾಯಣ ಭಾಗವತ, ಅಗರಿ ಶ್ರೀನಿವಾಸ ಭಾಗವತ, ಹೊಸ್ತೋಟ ಮಂಜುನಾಥ ಭಟ್, ರಾಘವ ನಂಬಿಯಾರ್, ಶೇಣಿ ಗೋಪಾಲಕೃಷ್ಣ ಭಟ್, ಮಲ್ಪೆ ರಾಮದಾಸ ಸಾಮಗ, ಗೆರೆಸೊಪ್ಪೆ ಶಾಂತಪ್ಪಯ್ಯ, ಧ್ವಜಪುರದ ನಾಗಪ್ಪಯ್ಯ, ಸಂಕಯ್ಯ ಭಾಗವತ, ಬಳಕಿನ ವಿಷ್ಣ್ವಯ್ಯ, ಸೀತಾನದಿ ಗಣಪಯ್ಯ ಶೆಟ್ಟಿಮುಂತಾದ ಯಕ್ಷಗಾನ ಕವಿಗಳು ತೊರವೆ ರಾಮಾಯಣ, ದಶಾವತಾರ ಚರಿತ್ರೆ, ಹನುಮದ್ ರಾಮಾಯಣ, ಮತ್ತಿತರ ನಡುಗನ್ನಡ ಪಠ್ಯಗಳನ್ನು ಯಕ್ಷಗಾನ ಪ್ರಸಂಗಗಳಾಗಿ ಮಾರ್ಪಡಿಸಿದಾಗ ಕಲಾವಿದರಿಗೆ ಪುರಾಣ ಪಾತ್ರಗಳನ್ನು ಅಭಿನಯಿಸುವ ಅವಕಾಶ ಲಭಿಸಿತು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಕರ್ನಾಟ ಭಾರತ ಕಥಾಮಂಜರಿ, ತೊರವೆ ರಾಮಾಯಣ ಮೊದಲಾದ ಕಾವ್ಯಗಳ ಪಾತ್ರಗಳು ಬಣ್ಣ, ಕುಣಿತ, ವೇಷಭೂಷಣ  ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ರಂಗ ಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು.  ಅವುಗಳನ್ನು ಲಕ್ಷಾಂತರ ಜನ ನೊಡುವಂತಾಯಿತು. ಯಕ್ಷಗಾನದ ಇನ್ನೊಂದು ಪ್ರಕಾರವಾದ ತಾಳಮದ್ದಳೆಯಲ್ಲಿ ಕಲಾವಿದರು ಭಾಗವತರ ಹಾಡಿಗೆ ಕುಳಿತು ಅರ್ಥ ಹೇಳುತ್ತಾರೆ. ಈ ಪರಂಪರೆ ಇಂದಿಗೂ ಮುಂದುವರಿದುಕೊಂಡು ಬರುತ್ತಿದೆ. ಯಕ್ಷಗಾನ ಕಲಾವಿದರನೇಕರು ತೊರವೆ ರಾಮಾಯಣದ ಪದ್ಯಗಳನ್ನು ಎಲ್ಲೆಂದರಲ್ಲಿ ಗುನುಗುನುಸಿಕೊಂಡು ಓಡಾಡುತ್ತಿರುವುದನ್ನು ಯಾರಾದರೂ ಗಮನಿಸಬಹುದು. ಕುಮಾರವ್ಯಾಸ ಭಾರತದ ಉದ್ಯೋಗ ಪರ್ವವನ್ನಾಧರಿಸಿದ, 'ಕೃಷ್ಣ ಸಂಧಾನ' ಲಕ್ಷಾಂತರ ಪ್ರಯೋಗಗಳನ್ನು ಕಂಡಿದೆ.

ಯಕ್ಷಗಾನ ಪ್ರಸಂಗಗಳನ್ನು ಪದೇ ಪದೇ ಓದುವವರಿಗೆ ಮತ್ತು ಪ್ರದರ್ಶನ ನೋಡುವವರಿಗೆ ಪ್ರಸಂಗಗಳ ಪದ್ಯಗಳು ಬಾಯಿಪಾಠ ಬಂದುಬಿಡುತ್ತವೆ. 1980ರ ದಶಕದ ವರೆಗೂ ಉಡುಪಿ, ದ.ಕ. ಕಾಸರಗೋಡು ಜಿಲ್ಲೆಗಳ ಬಹುತೇಕ ಜನರ ಬಾಯಲ್ಲಿ ಪ್ರಸಂಗ ಪದ್ಯಗಳು ನರ್ತಿಸುತ್ತಿದ್ದವು. ಯಕ್ಷಗಾನ ಹಾಡುಗಳ ಕ್ಯಾಸೆಟ್ಟನ್ನು ಎಲ್ಲಾ ಧರ್ಮೀಯರು ಮನೆಗಳಲ್ಲಿ ಟೇಪ್ ರೆಕಾರ್ಡರಿಗೆ ಹಾಕಿ ಕೇಳುತ್ತಿದ್ದರು.

ಈ ಹಾಡುಗಳು ಮೂಲತಃ ಕನ್ನಡ ಕಾವ್ಯ ಪರಂಪರೆಯಿಂದ ಬಂದಿದೆ ಎಂಬ ತಿಳುವಳಿಕೆ ಇಲ್ಲದೇ ಇದ್ದರೂ ಯಕ್ಷಗಾನ ಪ್ರಸಂಗಗಳ ಮೂಲಕ ಹಳಗನ್ನಡ ಮತ್ತು ನಡುಗನ್ನಡ ಕಾವ್ಯಗಳು ಸಾಮಾನ್ಯ ಜನರಿಗೆ ತಲುಪಿದ ರೀತಿ ಮಾತ್ರ ಅದ್ಭುತವಾದುದು. 

ಯಕ್ಷಗಾನ ಪ್ರಸಂಗಗಳಲ್ಲಿ ಮರು ಸೃಷ್ಟಿಗೊಂಡ ಕನ್ನಡ ಕಾವ್ಯದ ಬಗೆಗೂ ಸೂಕ್ಷ್ಮವಾದ ಅಧ್ಯಯನ ನಡೆದಿಲ್ಲ. ಇವತ್ತಿಗೆ ಯಕ್ಷಗಾನದ ಎರಡು ಪ್ರಬೇಧಗಳಾದ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ನಿರಂತರವಾಗಿ ಆರು ತಿಂಗಳುಗಳ ವರೆಗೆ ನಿರಂತರ ಪ್ರದರ್ಶನ ನೀಡುತ್ತಿರುವ ಸುಮಾರು 35 ಯಕ್ಷಗಾನ ಮೇಳಗಳಿವೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ಹವ್ಯಾಸಿ ಮೇಳಗಳಿವೆ. ಇವೆಲ್ಲವುಗಳ ಒಟ್ಟು ಪ್ರದರ್ಶನ ಸಂಖ್ಯೆ ವರ್ಷಕ್ಕೆ ಸುಮಾರು 10000ಕ್ಕೂ ಹೆಚ್ಚು. ಮೇಲೆ ಹೇಳಿದ ನಾಲ್ಕು ಜಿಲ್ಲೆಗಳಲ್ಲಿ ಸುಮಾರು 2000 ಕ್ಕೂ ಹೆಚ್ಚು ಕಲಾವಿದರಿದ್ದಾರೆ. ಏನಿಲ್ಲವೆಂದರೂ ಸುಮಾರು 500000 ಕ್ಕೂ ಹೆಚ್ಚು ಜನ ಇವತ್ತಿಗೂ ವರ್ಷಕ್ಕೊಂದು ಯಕ್ಷಗಾನವಾದರೂ  ನೋಡುತ್ತಾರೆ. ಯಕ್ಷಗಾನದ ಹೆಸರಿನಲ್ಲಿ ಸುಮಾರು 10 ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಯಕ್ಷಗಾನ ಮೇಳ ಸ್ಥಾಪಿಸಲು ಸಾಲ ಕೊಡಲು ಹಿಂಜರಿಯುತ್ತಿಲ್ಲ. ದೇಶ ವಿದೇಶಗಳಲ್ಲಿ ಇಂದಿಗೆ ದೊಡ್ಡ ಸಂಖ್ಯೆಯಲ್ಲಿ ಯಕ್ಷಗಾನಗಳು ಪ್ರ್ರದರ್ಶನಗೊಳ್ಳುತ್ತಿವೆ. ಶಾಲಾ ವಾರ್ಷಿಕೋತ್ಸವ, ಕಂಬಳ, ಕೋಳಿಕಟ್ಟ, ಜಾತ್ರೆ ಇತ್ಯಾದಿಗಳ ಸಂದರ್ಭಗಳಲ್ಲಿ ತಾಳಮದ್ದಳೆಗಳನ್ನೂ ಏರ್ಪಡಿಸಲಾಗುತ್ತಿದೆ.
ಯಕ್ಷಗಾನದ ದೊಡ್ಡ ಕಲಾವಿದರೆಲ್ಲ, ಹಳಗನ್ನಡ ಹಾಗೂ ನಡುಗನ್ನಡ ಕಾವ್ಯಗಳನ್ನು ಗಂಭೀರವಾಗಿಯೇ ಅಭ್ಯಸಿಸಿದವರಾಗಿದ್ದಾರೆ. ಹಿರಿಯ ಕಲಾವಿದರುಗಳಾದ ಶೇಣಿ ಗೋಪಾಲಕೃಷ್ಣ ಭಟ್ಟ, ಮಲ್ಪೆ ಶಂಕರನಾರಾಯಣ ಸಾಮಗ, ರಾಮದಾಸ ಸಾಮಗ, ಪೆರ್ಲ ಕೃಷ್ಣ ಭಟ್ಟ, ಡಾ. ಪ್ರಭಾಕರ ಜೋಷಿ, ಉಡುವೆಕೋಡಿ ಸುಬ್ಬಪ್ಪಯ್ಯ, ಮೂಡಂಬೈಲು ಗೋಪಾಕೃಷ್ಣ ಶಾಸ್ತ್ರಿ, ಕೆರೆಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ತೆಕ್ಕಟ್ಟೆ ಆನಂದ ಮಾಸ್ತರರು, ಮತ್ತಿತರ ಮಹಾ ಕಲಾವಿದರಿಗೆ ಪಂಪ ಭಾರತ, ರನ್ನನ ಗದಾಯುದ್ಧ, ನಾಗಚಂದ್ರನ ರಾಮಚಂದ್ರ ಚರಿತ ಪುರಾಣ, ಕುಮಾರವ್ಯಾಸ ಭಾರತ, ತೊರವೆ ರಾಮಾಯಣ, ಜೈಮಿನಿ ಭಾರತ ಮೊದಲಾದ ಮಹಾ ಕಾವ್ಯಗಳ ಬಗ್ಗೆ ಆಳವಾದ ತಿಳುವಳಿಕೆಯಿತ್ತು. ತಮ್ಮ ಪಾತ್ರ ನಿರ್ವಹಣೆಯ ಸಂದರ್ಭದಲ್ಲಿ ಅವರು ಈ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಗಿಯೇ ಉದ್ಧರಿಸುತ್ತಿದ್ದರು. ಶೇಣಿ ಗೋಪಾಲಕೃಷ್ಣ ಭಟ್ಟರಂತೂ ನಾಗಚಂದ್ರನ ದುರಂತ ರಾವಣನನ್ನೂ ಅಷ್ಟೇ ಸಮರ್ಥವಾಗಿ ರಂಗಕ್ಕೆ ತರುತ್ತಿದ್ದರು. ಕುಂಬಳೆ ಸುಂದರ ರಾಯರು ಕುಮಾರವ್ಯಾಸನ ಕರ್ಣನನ್ನು  ಹಾಗೆಯೇ ರಂಗದಲ್ಲಿ ಅಭಿವ್ಯಕ್ತಿಸುತ್ತಿದ್ದರು. ಆಧುನಿಕ ಪಾರ್ತಿಸುಬ್ಬ ಎಂಬ ಬಿರುದಿಗೆ ಪಾತ್ರರಾದ ಕನ್ನಡ ಪ್ರಾಧ್ಯಾಪಕ ಶ್ರೀ ಅಮೃತ ಸೋಮೇಶ್ವರ ಅವರು ಬರೆದ 20ಕ್ಕೂ ಹೆಚ್ಚಿನ ಪ್ರಸಂಗಗಳಲ್ಲಿ ಪ್ರಾಚೀನ ಕನ್ನಡ ಸಾಹಿತ್ಯದ ಅನೇಕ ಅಂಶಗಳನ್ನು ಭಟ್ಟಿ ಇಳಿಸಲಾಗಿದೆ.

ಕನ್ನಡ ಕಾವ್ಯಗಳನ್ನು ಓದಲಾಗದ ಜನರಿಗೆ ಕನ್ನಡ ಕಾವ್ಯಗಳನ್ನು ತಲುಪಿಸಿದ ಕೀರ್ತಿ ಗಮಕಿಗಳಿಗೆ, ಹರಿದಾಸರಿಗೆ ಮತ್ತು ಯಕ್ಷಗಾನ ಪ್ರಸಂಗಕರ್ತರಿಗೆ ಹಾಗೂ ಕಲಾವಿದರಿಗೆ ಸಲ್ಲಬೇಕು.  ನನಗೆ ವೈಯಕ್ತಿಕವಾಗಿ ಕನ್ನಡ ಕಾವ್ಯಕ್ಕೆ ಪ್ರವೇಶ ದೊರೆತದ್ದೇ ಭದ್ರಗಿರಿ ಕೇಶವ ದಾಸ, ಅಚ್ಯುತ ದಾಸ, ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್ಟ, ಕುಂಬಳೆ ಸುಂದರ ರಾವ್, ಕೋಳ್ಯೂರು ರಾಮಚಂದ್ರ ರಾವ್ ಮೊದಲಾದವರ ಮೂಲಕ.
ಹೀಗೆ ಹಳಗನ್ನಡ ಸಾಹಿತ್ಯಿಕ ಪಠ್ಯಗಳು ಬಹುರೂಪಿಗಳಾಗಿ ವಿಸ್ತಾರಗೊಂಡಿವೆ, ಹಾಗೆ ವಿಸ್ತಾರಗೊಂಡು ಇವತ್ತಿನ ವರೆಗೆ ಬದುಕುಳಿದಿವೆ. ಇವುಗಳನ್ನು ಹೊಸ ಎಚ್ಚರದಿಂದ ನಾವೀಗ ಅಭ್ಯಾಸ ಮಾಡಬೇಕಾಗಿದೆ. ಅದಕ್ಕೊಂದು ಹೊಸ ವಿಧಾನವನ್ನೂ ರೂಪಿಸಿಕೊಳ್ಳಬೇಕಾಗಿದೆ.
( ಇಲ್ಲಿನ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ)


ಪುರುಷೋತ್ತಮ ಬಿಳಿಮಲೆ
ಪ್ರಾಧ್ಯಾಪಕ,
ಕನ್ನಡ ಅಧ್ಯಯನ ಪೀಠ,
ಜೆ ಎನ್ ಯು


Tuesday, February 12, 2019

ಇಂಗ್ಲಿಷಿನಲ್ಲಿ ರನ್ನನ ಗದಾಯುದ್ಧಂ ಬಿಡುಗಡೆ



ಕನ್ನಡ ಅಧ್ಯಯನ ಪೀಠ
ಜವಾಹರಲಾಲ ನೆಹರೂ ವಿಶ್ವವಿದ್ಯಾಲಯ
ನವದೆಹಲಿ -110067


ಇಂಗ್ಲಿಷಿನಲ್ಲಿ ರನ್ನನ ಗದಾಯುದ್ಧಂ ಬಿಡುಗಡೆ

ಪಠ್ಯಗಳು ಬದುಕುಳಿಯುವ ಚೋದ್ಯದ ಕುರಿತೊಂದು ಚಿಂತನೆ :

ಶ್ರೀವಿಜಯನ ಕವಿರಾಜಮಾರ್ಗ ಕೃತಿಯನ್ನು ಯಶಸ್ವಿಯಾಗಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ ಜೆ ಎನ್ ಯು ಕನ್ನಡ ಅಧ್ಯಯನ ಪೀಠವು ಇದೀಗ 10ನೇ ಶತಮಾನದ ಶಕ್ತಿಶಾಲೀ ಕವಿ ರನ್ನನ ಗದಾಯುದ್ಧಂ ಕೃತಿಯನ್ನು ಇಂಗ್ಲೀಷಿಗೆ ಅನುವಾದ ಮಾಡಿ, ಇದೇ ಫೆಬ್ರವರಿ 16ರಂದು ಜೆ ಎನ್ ಯು ವಿನ ಮುಖ್ಯ ಸಭಾಂಗಣದಲ್ಲಿ ಬಿಡುಗಡೆ ಮಾಡಲಿದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ಬಹುಭಾಷಾ ವಿಶಾರದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮೆರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕಿ ಅಮ್ಮೇಲ್ ಶೆರೋನ್ ಅವರು ಕೃತಿಯನ್ನು ಅನುವಾದ ಮಾಡಿದ್ದಾರೆ. ಪ್ರೊ. ಅಕ್ಕಮಹಾದೇವಿ ಅವರು ಸಂಪಾದನಾ ಕೆಲಸಗಳನ್ನು ನಿರ್ವಹಿಸಿದ್ದಾರೆ. ಕನ್ನಡ ಪೀಠ ಮತ್ತು ದೆಹಲಿಯ ಮನೋಹರ ಪ್ರಕಾಶನದವರು ಜಂಟಿಯಾಗಿ ಪುಸ್ತಕವನ್ನು ಹೊರತಂದಿದ್ದಾರೆ.

ಹೊಸ ರೀತಿಯಲ್ಲಿ ಬಿಡುಗಡೆ: 

ಕನ್ನಡ ಅಭಿಜಾತ ಪರಂಪರೆಯ ಕೃತಿಗಳು ಕಾಲ ಮತ್ತು ದೇಶಗಳ ಚೌಕಟ್ಟುಗಳಲ್ಲಿ ಸ್ಥಗಿತವಾಗಿ ಉಳಿದಿಲ್ಲ. ಕುಮಾರವ್ಯಾಸನು ಕಾವ್ಯದ ಕೇಳುಗರ ಪಟ್ಟಿಯಲ್ಲಿ  ‘ ಜಂಗಮ ಜನಾರ್ಧನರ’ನ್ನೂ ಸೇರಿಸಿದ್ದಾನೆ. ನಮ್ಮ ಕಾವ್ಯಗಳು ಜಂಗಮ ಜನಾರ್ಧನರನ್ನು ತಲುಪಿದ್ದು ಹೇಗೆ ಎಂದು ಕೇಳಿಕೊಂಡರೆ ನಮ್ಮಲ್ಲಿ ಜನಪ್ರಿಯವಾಗಿದ್ದ ಗಮಕ ಪರಂಪರೆಯ ಬಗ್ಗೆ ಒಂದು ತಿಳುವಳಿಕೆ ಮೂಡುತ್ತದೆ. ಮುಂದೆ ಹರಿಕತಾ ಪರಂಪರೆಯು ಗಮಕ ಪರಂಪರೆಯನ್ನು ತನ್ನೊಡನೆ ಜೋಡಿಸಿಕೊಂಡು, ಕನ್ನಡ ಕಾವ್ಯಗಳನ್ನು ಮತ್ತಷ್ಟು ವಿಸ್ತರಿಸಿತು. ಮುಂದೆ 17 ಮತ್ತು 18ನೇ ಶತಮಾನದಲ್ಲಿ ಕನ್ನಡ ಕಾವ್ಯಗಳನ್ನೇ ಆಧರಿಸಿ ಬರೆಯಲಾದ  ನೂರಾರು ಸಂಖ್ಯೆಯ ಯಕ್ಷಗಾನ ಪ್ರಸಂಗಗಳು ಕಾಣಿಸಿಕೊಂಡುವು. ಈ ಯಕ್ಷಗಾನ ಕವಿಗಳು ನಡುಗನ್ನಡ ಕಾವ್ಯಗಳ ಸಾಲುಗಳನ್ನು ಇಡಿ ಇಡಿಯಾಗಿಯೇ ಎತ್ತಿಕೊಂಡು, ಅವುಗಳನ್ನು ಅಲ್ಪ ಸ್ವಲ್ಪ ಮಾರ್ಪಡಿಸಿ ಪ್ರಸಂಗ ರೂಪದಲ್ಲಿ ರಂಗಭೂಮಿಗೆ ಅಳವಡಿಸಿದರು. ಚಂಡೆ ಮದ್ದಳೆ ಭಾಗವತಿಕೆಗಳ ಜೊತೆಗೆ ಬಣ್ಣ, ಕುಣಿತ, ವೇಷಭೂಷಣ  ಮತ್ತು ಸೃಜನಶೀಲ ಮಾತುಗಾರಿಕೆಯ ಮೂಲಕ ಕಾವ್ಯಗಳು ರಂಗ ಭೂಮಿಗೆ ಬಂದಾಗ ನೋಡುಗರಿಗೆ ಕುಣಿಯುವ ಕನ್ನಡ ಕಾವ್ಯಗಳು ಕಣ್ಣಿಗೆ ಬಿದ್ದುವು.  ಅವುಗಳನ್ನು ಲಕ್ಷಾಂತರ ಜನ ನೊಡುವಂತಾಯಿತು.

ಈ ಚಿಂತನಾಕ್ರಮವನ್ನು ಆಧರಿಸಿ ಗದಾಯುದ್ಧ ಪುಸ್ತಕ ಬಿಡುಗಡೆಯನ್ನು ವಿಶಿಷ್ಟವಾಗಿ ಆಯೋಜಿಸಲಾಗಿದೆ. ಆ ದಿನ ರನ್ನನ ಗದಾಯುದ್ಧದ ಕೃತಿಯ ಇಂಗ್ಲಿಷ್ ಅನುವಾದವನ್ನು ಪ್ರಾಧ್ಯಾಪಕರಾದ ಪ್ರೊ. ವೆಂಕಟಾಚಲ ಹೆಗಡೆ ಅವರು ಬಿಡುಗಡೆಗೊಳಿಸಲಿದ್ದಾರೆ. ಅನುವಾದಕರಾದ ಪ್ರೊ. ಆರ್ ವಿ ಎಸ್ ಸುಂದರಂ ಮತ್ತು ಅಮ್ಮೇಲ್  ಶೆರೋನ್ ಅವರು ಮೂಲಕೃತಿ ಹಾಗೂ ಅನುವಾದದ ಕುರಿತು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ವಿಜಯಪುರದ ಶ್ರೀ ಕೃಷ್ಣ ಕೊಲ್ಲಾರ ಕುಲಕರ್ಣಿ ಹಾಗೂ ಬೆಂಗಳೂರಿನ ಶ್ರೀ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರು ರನ್ನನ ಗದಾಯುದ್ಧವನ್ನು ಗಮಕದಲ್ಲಿ ಪ್ರಸ್ತುತ ಪಡಿಸಿದರೆ,  ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಕಲಾವಿದರಾದ ಡಾ. ಲಕ್ಷ್ಮಣದಾಸರು ತಮ್ಮ ತಂಡದೊಂದಿಗೆ ಗದಾಯುದ್ಧವನ್ನು ಹರಿಕತೆ ರೂಪದಲ್ಲಿ  ಮಂಡಿಸಲಿದ್ದಾರೆ. ಕೊನೆಯಲ್ಲಿ ಪ್ರಖ್ಯಾತವಾದ ಕೆರೆಮನೆ ಇಡಗುಂಜಿ ಮೇಳದ ಕಲಾವಿದರು ಗದಾಯುದ್ಧ ಯಕ್ಷಗಾನ ಪ್ರಸಂಗವನ್ನೂ ಪ್ರದರ್ಶಿಸಲಿದ್ದಾರೆ. 1930ರಷ್ಟು ಹಿಂದೆ ಅರ್ನಾಲ್ಡ್ ಬಾಕೆಯು ದಾಖಲಿಸಿದ ಗದಾಯುದ್ಧದ ಓದಿನ ಕ್ರಮವನ್ನೂ ಪ್ರಸ್ತುತಪಡಿಸಲಾಗುವುದು.

ಹೀಗೆ 10ನೇ ಶತಮಾನದ ಒಂದು ಪಠ್ಯವು ಬಹುರೂಪಿಯಾಗಿ ವಿಸ್ತಾರಗೊಳ್ಳುತ್ತಾ  ಇವತ್ತಿನ ವರೆಗೆ ಬದುಕುಳಿದ ಬಗೆಯ ಚೋದ್ಯವನ್ನು  ಸಾಕ್ಷಾತ್ಕರಿಸಿಕೊಳ್ಳುವುದು ಕಾರ್ಯಕ್ರಮದಉದ್ಧೇಶ. ಸಂಶೋಧಕರಿಗೆ ಪ್ರಸ್ತುತಗೊಳಿಸಲಾಗುವುದು. ಅಭಿಜಾತ ಕೃತಿಗಳನ್ನು ಅಧ್ಯಯನ ಮಾಡುವ ಸುಮಾರು 250 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.


 ಪುರುಷೋತ್ತಮ ಬಿಳಿಮಲೆ,