Thursday, February 26, 2009

ರಂಗೋಲಿ

ಅಜ್ಜಿ

ಸೂರ್ಯ ಹುಟ್ಟುವ ಮೊದಲೇ

ಅಂಗಳಕೆ ನೀರು ಚೆಲ್ಲಿ ರಂಗೋಲಿ ಬರೆಯುತ್ತಿದ್ದಳು

ಸರಳ ರೇಖೆಗಳ ನೇರ ನಡೆ

ಎಲ್ಲವೂ ಕ್ರಮಬದ್ಧಚಿತ್ರ ಚಿತ್ತಾರಗಳು

ಬಳ್ಳಿ ಹೂವುಗಳುಸದಾ ಚಿಗುರಿ ಆಕಾಶಕ್ಕೆ

ಅಮ್ಮ

ಸೂರ್ಯ ಹುಟ್ಟುವಾಗ

ಅಂಗಳ ಗುಡಿಸಿ ಧೂಳು ಸಾರಿಸಿ

ರಂಗೋಲಿ ಬರೆಯುತ್ತಿದ್ದಳು

ಅಮ್ಮನ ರಂಗೋಲಿಯಲ್ಲಿ ಬಣ್ಣ ಬಹಳ

ಅಡ್ಡ ದಿಡ್ಡಿ ರೇಖೆಗಳಿಗೆ ಜೋಡಣೆ

ಹಣ್ಣು ಕಾಯಿಗಳ ಮೊಳಕೆ ಬೇರುಗಳು

ಸದಾ ನೀರಿನಾಳಕ್ಕೆ

ಹುಡುಗಿ

ಸೂರ್ಯ ಹುಟ್ಟಿದ ಮೇಲೆ

ಕೈಕಾಲುಗಳು ಸವರಿ ನೆಲ ತೆವರುಗಳ ತೀಡಿ

ರಂಗೋಲಿ ಬರೆಯುತ್ತಾಳೆ

ಅಲ್ಲೊಂದು ಇಲ್ಲೊಂದು ಅಡ್ಡ ದಿಡ್ಡಿ ಚುಕ್ಕೆಗಳ ಇಟ್ಟು

ಹೇಗೆ ಹೇಗೋ ಒಂದರೊಡನೊಂದು ಸೇರಿಸಿ

ಬರೆಯುತ್ತಲೇ

ಎಲ್ಲಿಂದೆಲ್ಲಿಗೋ ಬಂಧ ನಿಗೂಢ

ಸದಾ ಸಂಕೇತದಾಳಕ್ಕೆ.

ಡಾ. ಪುರುಷೋತ್ತಮ ಬಿಳಿಮಲೆ

4 comments:

ಬಾನಾಡಿ said...

ನಿಮ್ಮ ಈ ಕವನ ಮತ್ತೆ ಮತ್ತೆ ಓದಿಸಿಕೊಳ್ಳುತ್ತದೆ...

PARAANJAPE K.N. said...

ಸರ್,
ಕವನ ತು೦ಬಾ ಚೆನ್ನಾಗಿದೆ. ನನ್ನ ಬ್ಲಾಗಿಗೆ ಭೆಟ್ಟಿ ಕೊಡಿ. ಹೊಸ ಲೇಖನಗಳಿವೆ. ಅ೦ದಹಾಗೆ ನಿಮಗೆK.N.Bhat Shiradipal ಗೊತ್ತಿರಬೇಕಲ್ಲಾ ? ಅವರು ನನ್ನ ತ೦ದೆ.ಅವರ ಬಗ್ಗೆಯೇ ಒ೦ದು ಲೇಖನವಿದೆ.

ತೇಜಸ್ವಿನಿ ಹೆಗಡೆ said...
This comment has been removed by the author.
ತೇಜಸ್ವಿನಿ ಹೆಗಡೆ said...

really good one... nice comparison too :)