Saturday, December 11, 2010

ಎಂಜಲು ಎಲೆಯ ಮೇಲೆ ಉರುಳು

ಇಂದಿನ ಪೇಪರ್ ನಲ್ಲಿ (ಪ್ರಜಾವಾಣಿ, ೧೧.೧೨.೨೦೧೦) ) ಎಂಜಲು ಎಲೆಯ ಮೇಲೆ ಉರುಳುವ ದಯನೀಯ ಘಟನೆಯ ಬಗ್ಗೆ ಓದಿ ವಿಷಾದವಾಯಿತು. ನಾನು ಹುಟ್ಟಿದ ಊರು ಕುಕ್ಕೆ ಸುಬ್ರಹ್ಮಣ್ಯದ ಹತ್ತಿರದ ಪಂಜ ಎಂಬ ಹಳ್ಳಿ, ಓದಿದ್ದು ಸುಬ್ರಹ್ಮಣ್ಯದಲ್ಲಿ . ನಾನು ಚಿಕ್ಕವನಿದ್ದಾಗ ವಾಂತಿ ಮಾಡಿದೆ ಅಂತ ನನ್ನ ಅಮ್ಮ ಸುಬ್ರಹ್ಮಣ್ಯದಲ್ಲಿ .ಎಂಜಲು ಎಲೆಯ ಮೇಲೆ ಉರುಳುವ ಹರಕೆ ಹೇಳಿಕೊಂಡಿದ್ದರಂತೆ. ನಾನು ದೊಡ್ಡವನಾದಾಗ ಅಮ್ಮ ಅದನ್ನು ನೆನಪಿಸಿ ಸುಬ್ರಹ್ಮಣ್ಯದಲ್ಲಿ ಬ್ರಾಹ್ಮಣರು ಉಂಡೆಸೆದ ಎಂಜಲು ಎಳೆಯಲ್ಲಿ ಉರುಳಲು ಒತ್ತಾಯಿಸುತ್ತಿದ್ದರು. ನಾನು ಮೌನವಾಗಿ ಆದರೆ ದಿಟ್ಟವಾಗಿ ನಿರಾಕರಿಸಿದೆ. ನನ್ನ ಮೌನ ಮತ್ತು ಪ್ರತಿಭಟನೆ ಅಮ್ಮನ ಆತಂಕವನ್ನು ತೀವ್ರವಾಗಿ ಹೆಚ್ಚಿಸುತಿತ್ತು. ಕೊನೆಗೊಮ್ಮೆ ಅದು ತೀರ ಅತಿರೇಕಕ್ಕೆ ಹೋದಾಗ ನಾನು ಅಮ್ಮನಿಗೆ ' ಮಗ ಮತ್ತು ಬ್ರಾಹ್ಮಣರ ಎಂಜಲು ಎಲೆಯಲ್ಲಿ ಒಂದನ್ನು ಆಯ್ದುಕೊ' ಎಂದೆ. ಅಮ್ಮ ಕೊನೆಗೂ ಮಗನನ್ನು ಆರಿಸಿಕೊಂಡರು. ಅಮ್ಮನ ಆಯ್ಕೆಯ ಮೂಲಕ ನಾನು ಬದುಕಿಕೊಂಡೆ.
ಈಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವೇ ಎಂಜಲು ಸೇವೆಯನ್ನು ಬಹಿಷ್ಕರಿಸಿ ಮಾನವನ ಘನತೆಯನ್ನು ಎತ್ತಿ ಹಿಡಿಯಬೇಕು

2 comments:

ವಿ.ಆರ್.ಭಟ್ said...

ಮಾನ್ಯ ಪುರುಷೋತ್ತಮರೇ,ಸುಬ್ರಹ್ಮಣ್ಯದಲ್ಲಿ ನಡೆದುಬಂದ ಆ ಪಾದ್ಧತಿಯನ್ನು ವಿರೋಧಿಸೋಣ.ಹಿಂದಕ್ಕೆ ಕೆಳವರ್ಗದವರಿಗೆ ದೇವಳದ ಒಳಾಂಗಣಕ್ಕೆ ಪ್ರವೇವನ್ನೇ ಕೊಡದ ಕಾಲಘಟ್ಟದಲ್ಲೂ ಕೂಡ ಇಲ್ಲಿ ಬ್ರಾಹ್ಮರು ಉಂಡ ಎಲೆಯಮೇಲೆ ಬ್ರಾಹ್ಮಣರೇ ಉರುಳುತ್ತಿದ್ದ ದಾಖಲೆಗಳು ಸಿಕ್ಕಿವೆ, ಸಿಗುತ್ತವೆ. ಈಗೀಗ ಎಲ್ಲವನ್ನೂ ಹಳದಿಗಣ್ಣಿಂದ ನೋಡುವ ಕೆಟ್ಟ ಚಾಳಿ ಬೆಳೆಯುತ್ತಿದೆ. ಕಾಗೆ ಕೂರುವುದಕ್ಕೂ ಕೋಲು ಮುರಿಯುವುದಕ್ಕೂ ನಾವು ಮೇಳಕಟ್ಟಿ ಕುಣಿಯತೊಡಗುತ್ತೇವೆ.ಅಷ್ಟಾಗಿ ನನಗನಿಸಿದ್ದು ಈ ದೇಶದಲ್ಲಿ ಬ್ರಾಹ್ಮಣರ ಅವಶ್ಯಕತೆಯೇ ಇಲ್ಲ, ಅವರೆಲ್ಲಾ ಪಾರ್ಸಿಗಳಂತೇ ಬೇರೇ ದೇಶ ಅರಸಿ ಹೋದರೆ ಅದು ಅವರಿಗೇ ಒಳಿತು ಎಂಬುದಾಗಿ! ಯಾಕೆಂದರೆ ಇಅವ್ವ್ತು ಅಲ್ಪಸಂಖ್ಯಾತರಿದ್ದರೆ ಅವರು ಮಾತ್ರ ಎಂಬುದನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಶಾಸ್ತ್ರ,ಮೀಮಾಂಸೆ, ತರ್ಕ, ವೇದ ಇವನ್ನೆಲ್ಲಾ ಓದುವುದು, ಅನುಸರಿಸುವುದು ಹೋಟೆಲ್ ಊಟ ಮಾಡಿ ನಡೆಸಲು ಆಗುವಷ್ಟು ಸುಲಭವಾಗಿದ್ದರೆ ಉಪವಾಸ, ಅಂತಃಕರಣ ನಿಗ್ರಹ, ಸಸ್ಯಾಹಾರ, ಕ್ಷಮೆ, ದಯೆ, ಅನುಕಂಪ, ಸಹಾನುಭೂತಿ ಇವನ್ನೆಲ್ಲಾ ರೂಢಿಸಿಕೊಳ್ಳುವ ಕಷ್ಟದ ಜವಾಬ್ದಾರಿ ಯಾರಿಗೆಬೇಕಿತ್ತು ಅಲ್ಲವೇ? ಆದರೂ ಮಹತ್ವಾಕಾಂಕ್ಷಿಗಳಾಗಿ ಕೇವಲ ದುಡ್ಡಿಗಾಗಿ ದುಡಿಯುವ ಬದಲು ಪರಹಿತದ, ಪರಲೋಕದ ಚಿಂತನೆಗೆ ತೊಡಗಿಸಿಕೊಂಡು ನಡೆಯುವ ಈ ಜನಾಂಗ ನಿಜವಾಗಿ ಇಂದು ಇಲ್ಲದ ಅಪವಾದಕ್ಕೆ ಗುರಿಯಾಗಿದ್ದಾರೆ. ದೈವೇಚ್ಛೆಯೇ ಬ್ರಾಹ್ಮಣರನ್ನು ಇರಗೊಡದಿದ್ದರೆ ಅದರ ವಿರುದ್ಧ ಸೆಣಸಾಡಲು ಯಾರು ತಾನೇ ನಿಂತಾರು? ಎಲ್ಲ ವರ್ಗದವರಿಗೂ ಗುರುಸ್ಥಾನದಲ್ಲಿ ನಿಂತು ವ್ಯವಹರಿಸಿ ಎಂದು ಗೀತೆಯ ಕೃಷ್ಣ ಹೇಳಿದ್ದೇ ಬಂತು! ಇಂದು ಆ ಮಾತಿಗೆ ಯಾರೂ ಮಣೆಹಾಕುತ್ತಿಲ್ಲ, ಬದಲಾಗಿ ಎಲ್ಲೇ ಯಾವುದೇ ತಪ್ಪು ನಡೆದರೂ ’ಅಲ್ಲಿ ಬ್ರಾಹ್ಮಣರಿದ್ದಾರಾ ನೋಡಿ’ ಎಂಬುದೇ ಉಳಿದೆಲ್ಲಾ ಜನರ ಅನಿಸಿಕೆಗಳಾಗಿರುವಾಗ ಪೇಜಾವರ ಶ್ರೀಗಳ ಥರದವರು ವ್ರಥಾ ಯಾಕೆ ದಲಿತರ ಸಂಪರ್ಕ ಎಂದು ಹೋರಾಡಿ ’ಸ್ವಾಮಿ ಮಾಂಸ ತಿನ್ನಲಿ’ ಎಂದೆಲ್ಲಾ ಹೇಳಿಸಿಕೊಳ್ಳುತ್ತಾರೋ ಅರ್ಥವಾಗುತ್ತಿಲ್ಲ. ಮಾಂಸವನ್ನೂ ತಿನ್ನುತ್ತಾ ಸನ್ಯಾಸಿಯೋ ಪುರೋಹಿತನೋ ಆಗಲು ಸಾಧ್ಯವಾಗುವುದಿಲ್ಲ ಎಂಬುದು ಕೊನೇಪಕ್ಷ ತಮ್ಮಂತಹ ಲೇಖಕರಿಗಾದರೂ ಅರಿವಾದೀತೇನೋ ಎಂಬ ಅನಿಸಿಕೆಯಿಂದ ಹೀಗೆ ಬರೆದೆ. ’ಸರ್ವೇಷಾಂ ಮಹಾಜನಾನಾಂ ಯೋಗಕ್ಷೇಮಾಭ್ಯುದಯ ಸಿದ್ಧ್ಯರ್ಥಂ’ ಎಂದು ನಿತ್ಯವೂ ಬ್ರಹ್ಮಾಂಡದ ಎಲ್ಲರ ಒಳಿತಿಗಾಗಿ ಸಂಕಲ್ಪಿಸಿ ಪೂಜಿಸುವ ಕರ್ಮಠ ಬ್ರಾಹ್ಮಣರು ಇನ್ನೂ ಜೀವ ಹಿಡಿದು ಬದುಕಿದ್ದಾರೆ ಸ್ವಾಮೀ, ಅಂಥವರು ಇರುವವರೆಗಾದರೂ ಲೋಕದಲ್ಲಿ ಮಳೆಬೆಳೆ ಸ್ವಲ್ಪವಾದರೂ ನಡದೀತು. ಹೀಗಾಗಿ ಹಲವು ರಂಗಗಳಲ್ಲಿ ಮುಂಚೂಣಿಯಲ್ಲಿರುವ ತಮ್ಮಂತಹ ಅಸಂಖ್ಯ ಜನರು ಕುಳಿತು ಯೋಚಿಸಬೇಕಾದ ವಿಷಯವೇನೆಂದರೆ ಬ್ರಾಹ್ಮಣರು ನಿಜವಾಗಿಯೂ ಯಾರನ್ನಾದರೂ ತುಳಿದರಾ ಎಂಬುದು! ಯೋಚಿಸಿನೋಡಿ ಆಗದೇ?

prabhamani nagaraja said...

ಅರ್ಥವಿಲ್ಲದ ಕೆಲವು ಆಚಾರಗಳು ಇನ್ನೂ ರೂಢಿಯಲ್ಲಿರುವುದು ವಿಷಾಧನೀಯ. ಚಿಕ್ಕ೦ದಿನಲ್ಲಿಯೆ ಅದನ್ನು ಪ್ರತಿಭಟಿಸಿದ ನಿಮ್ಮ ಸ್ಥೈರ್ಯ ಅನುಸರಣೀಯ. ಧನ್ಯವಾದಗಳು