Friday, June 12, 2026

ಜಾಗತೀಕರಣ ಮತ್ತು ಕನ್ನಡಿಗರಿಗೆ ಉದ್ಯೋಗ

 

ಜಾಗತೀಕರಣ ಮತ್ತು ಕನ್ನಡಿಗರಿಗೆ ಉದ್ಯೋಗದ ಪ್ರಶ್ನೆ

 

೯೯೦ರ ಆನಂತರ ತೀವ್ರವಾಗಿ ಕಾಣಿಸಿಕೊಂಡ ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವು, ರಾಷ್ಟ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಸಂಪರ್ಕ ಸಾಧಿಸುವ ವಿಧಾನಗಳನ್ನು ಸಂಪೂರ್ಣವಾಗಿ ಪರಿವರ್ತಿಸಿದೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ, ಸಾಂಸ್ಕೃತಿಕ ಮತ್ತು ತಾಂತ್ರಿಕ ಏಕೀಕರಣವನ್ನು ಬೆಳೆಸಿದೆ. ನಾವು ಬಳಸುವ ಗ್ಯಾಜೆಟ್ಗಳಿಂದ ಹಿಡಿದು ಧರಿಸುವ ಬಟ್ಟೆಗಳವರೆಗೆ, ಅದರ ಪ್ರಭಾವವು ನಮ್ಮ ದೈನಂದಿನ ಜೀವನದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಪ್ರಕ್ರಿಯೆಯು ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆಗೆ ಹೊಸ ಅವಕಾಶಗಳನ್ನು ಸೃಷ್ಟಿಸಿದೆ ಎಂದು ಅದರ ಪರವಾಗಿರುವ ಬಂಡವಾಳಶಾಹಿಗಳು ಹೇಳುತ್ತಾರೆ. ಅದನ್ನು ಒತ್ತಟ್ಟಿಗಿರಿಸಿ, ಸಾಂಸ್ಕೃತಿಕವಾಗಿ ನೋಡಿದರೆ, ಕಳೆದ ಸುಮಾರು ಮೂರು ದಶಕಗಳಲ್ಲಿ ಜಗತ್ತಿನಾದ್ಯಂತ ಹಲವು ಭಾಷೆಗಳು ನಾಶವಾಗಿವೆ, ಸಣ್ಣ ಸಣ್ಣ ಸಮುದಾಯಗಳು ಕುಸಿದಿವೆ, ಪರಿಸರ ನಾಶ ಹಲವು ಅಪಾಯಗಳಿಗೆ ಕಾರಣವಾಗಿದೆ. ತತ್ವಶಾಸ್ತ್ರ ನೆಲೆ ಕಳೆದುಕೊಂಡಿದೆ. ಹಿಂದೆಂದೂ ಕಾಣಿಸದ ರೀತಿಯಲ್ಲಿ ಆರ್ಥಿಕ ಅಸಮಾನತೆ ತಲೆ ಎತ್ತಿದೆ. ಖಾಸಗಿಯಾಗಿದ್ದ ಧರ್ಮ ಮತ್ತು ಆಚರಣೆಗಳು ರಾಜಕೀಯ ಶಕ್ತಿಗಳಾಗಿ ಮಾರ್ಪಟ್ಟು ಅರ್ಥಹೀನವಾಗಿವೆ. ಕೇಂದ್ರ ಸರಕಾರದ ವರದಿಯೇ ತಿಳಿಸುವಂತೆ, ೧೯೪೭ರ ಆನಂತರದ ಭಾರತದಲ್ಲಿ ೨೫೦ಕ್ಕೂ ಹೆಚ್ಚು ಭಾಷೆಗಳು ಸತ್ತು ಹೋಗಿವೆ. ಸುಮಾರು ೩೦೦ ಕ್ಕೂ ಹೆಚ್ಚು ಭಾಷೆಗಳು ಅಪಾಯದ ಹಂತ ತಲುಪಿವೆ. ಕರ್ನಾಟಕದ ಕೊಡವ, ಕೊರಗ, ಬಡಗ, ಕೊಂಕಣಿ ಮತ್ತಿತರ ಭಾಷೆಗಳನ್ನಾಡುವವರ ಸಂಖ್ಯೆ ಕುಸಿಯುತ್ತಿದೆ. ಭಾರತದ ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಭಾಷೆಯ ಬೆಳವಣಿಗೆಯೂ ಕಂಠಿತವಾಗಿದೆ.  ಅಮೇರಿಕಾದ ಭಾಷಾ ಶಾಸ್ತ್ರಜ್ಞರ ಪ್ರಕಾರ,  ಮುಂದಿನ ನೂರು ವರ್ಷಗಳಲ್ಲಿ ಎಂಟು ಶೇಕಡಾ ಜನರ ಭಾಷೆಗಳನ್ನು ೯೨ ಶೇಕಡಾ ಜನರು ಮಾತಾಡುತ್ತಾರೆ.

 ಇದು ಏಕೆ ಹೀಗಾಗುತ್ತಿದೆಯೆಂದರೆ, ಜಾಗತೀಕರಣವು ವಿಶ್ವಾದ್ಯಂತ ದೇಶಗಳ ನಡುವೆ ಏಕರೂಪತೆಯನ್ನು ಹೆಚ್ಚಿಸುವುದರ ಜೊತೆಗೆ ಪರಸ್ಪರ ಅವಲಂಬನೆಯನ್ನು ಹುಟ್ಟು ಹಾಕಿದೆ.

ಹಾಕುತ್ತದೆ. ಸರಕುಗಳು, ಸೇವೆಗಳು, ಬಂಡವಾಳ, ತಂತ್ರಜ್ಞಾನ ಮತ್ತು ಸಾಂಸ್ಕೃತಿಕ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳುತ್ತಾ, ಜಾಗತಿಕ ಸಂಪರ್ಕಗಳು ಮತ್ತು ಸಂವಹನಗಳನ್ನು ಹೆಚ್ಚಿಸುತ್ತದೆ. ಇದು ಸ್ಥೂಲವಾಗಿ ಮೂರು ರೀತಿಯಲ್ಲಿ ನಡೆಯುತ್ತದೆ-

1. ಆರ್ಥಿಕ ಜಾಗತೀಕರಣ: ರೀತಿಯ ಜಾಗತೀಕರಣದಲ್ಲಿ, ವಿವಿಧ ದೇಶಗಳು ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಗಳನ್ನು ಸಂಯೋಜಿಸುತ್ತವೆ ಮತ್ತು ಹಣಕಾಸು ವಿನಿಮಯವನ್ನು ಸಂಘಟಿಸುವ ಗುರಿಯನ್ನು ಹೊಂದಿರುತ್ತವೆ.  ಎರಡಕ್ಕಿಂತ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುವ ಬಹುರಾಷ್ಟ್ರೀಯ ಸಂಸ್ಥೆಗಳು, ಒಂದು ರಾಷ್ಟ್ರದ ಆರ್ಥಿಕ ಜಾಗತೀಕರಣದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಆರಂಭದಲ್ಲಿ ಇದು ಅಮೇರಿಕಾ, ಕೆನಡಾ, ಮತ್ತು ಇಂಗ್ಲೆಂಡಿನ ನಡುವೆ ಸುರು ಆಗಿ ಇವತ್ತು ವಿಶ್ವದ ಎಲ್ಲ ರಾಷ್ಟ್ರಗಳನ್ನು ಆವರಿಸಿಕೊಂಡಿದೆ. . ೧೯೯೦ರ ದಶಕದಲ್ಲಿ ಇದು ಭಾರತವನ್ನು ಪ್ರವೇಶಿಸಿತು.

2.ರಾಜಕೀಯ ಜಾಗತೀಕರಣ: ಇದು ಒಂದು ರಾಷ್ಟ್ರವು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಇತರ ರಾಷ್ಟ್ರಗಳಿಗೆ ಹತ್ತಿರವಾಗುವ ಗುರಿಯನ್ನು ಹೊಂದಿರುವ ನೀತಿಗಳನ್ನು ಸೂಚಿಸುತ್ತದೆ. ರಾಜಕೀಯ ಜಾಗತೀಕರಣವು ಪರಸ್ಪರ ದೇಶಗಳ ನಡುವೆ ಬಾಂಧವ್ಯವನ್ನು ಬೆಳೆಸಲು ಸಹಾಯ ಮಾಡುತ್ತವೆ ಎನ್ನಲಾಗಿದೆ.

3.ಸಾಂಸ್ಕೃತಿಕ ಜಾಗತೀಕರಣ: ರೀತಿಯ ಜಾಗತೀಕರಣದಲ್ಲಿ, ಜನರನ್ನು ಒಟ್ಟುಗೂಡಿಸುವ ತಾಂತ್ರಿಕ ಮತ್ತು ಸಾಮಾಜಿಕ ಅಂಶಗಳ ಮೇಲೆ ಗಮನ ಕೇಂದ್ರೀಕರಿಸಲಾಗುತ್ತದೆ. ಸಾಂಸ್ಕೃತಿಕ ಜಾಗತೀಕರಣವು ಸಂವಹನದ ಸುಲಭತೆ, ಸಾಮಾಜಿಕ ಮಾಧ್ಯಮ ಮತ್ತು ವೇಗವಾದ ಹಾಗೂ ಉತ್ತಮ ಸಾರಿಗೆಯ ಪ್ರವೇಶವನ್ನು ಒಳಗೊಂಡಿದೆ.

ಈ ಬಗೆಯ ಬೆಳವಣಿಗೆಗಳ ಪರವಾಗಿರುವವರು ಕೆಳಗಿನ ಪ್ರಯೋಜನಗಳನ್ನು ಜನರ ಮುಂದಿಡುತ್ತಾರೆ-

1.ಹೆಚ್ಚಿದ ವ್ಯಾಪಾರ ಮತ್ತು ಮಾರುಕಟ್ಟೆ ಪ್ರವೇಶ  ಜಾಗತೀಕರಣವು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತೆರೆದಿದೆ, ದೇಶಗಳು ಸರಕು ಮತ್ತು ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ವ್ಯಾಪಾರ ಮಾಡಲು ಅನುವು ಮಾಡಿಕೊಡುತ್ತದೆ. ಇದು ವ್ಯವಹಾರಗಳಿಗೆ ಅವಕಾಶಗಳನ್ನು ವಿಸ್ತರಿಸುವ ಮೂಲಕ ಮತ್ತು ಸ್ಪರ್ಧೆಯನ್ನು ಬೆಳೆಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಿದೆ.

2.ವಿದೇಶಿ ಬಂಡವಾಳದ   ನೇರ ಹೂಡಿಕೆ (FDI) ಬಹುರಾಷ್ಟ್ರೀಯ ಸಂಸ್ಥೆಗಳು (MNCಗಳು) ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಿವೆ, ಇದು ಉದ್ಯೋಗ ಸೃಷ್ಟಿ, ತಂತ್ರಜ್ಞಾನ ವರ್ಗಾವಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಕಾರಣವಾಗುತ್ತದೆ. FDI ಹೆಚ್ಚಾಗಿ ಸ್ಥಳೀಯ ಆರ್ಥಿಕತೆಗಳನ್ನು ಉತ್ತೇಜಿಸುತ್ತದೆ ಮತ್ತು ಜಾಗತಿಕ ಆರ್ಥಿಕ ಏಕೀಕರಣವನ್ನು ಸುಧಾರಿಸುತ್ತದೆ.

3.ತಾಂತ್ರಿಕ ಪ್ರಗತಿಗಳು ತಂತ್ರಜ್ಞಾನದ ವಿನಿಮಯವು ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಉತ್ಪಾದನೆ, ಆರೋಗ್ಯ ರಕ್ಷಣೆ ಮತ್ತು ಐಟಿ ಕ್ಷೇತ್ರಗಳಲ್ಲಿ ನಾವೀನ್ಯತೆ ಮತ್ತು ಉತ್ಪಾದಕತೆಯನ್ನು ತೀವ್ರಗೊಳಿಸಿದೆ. ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿವೆ

4.ಆರ್ಥಿಕ ವೈವಿಧ್ಯೀಕರಣ ಅಭಿವೃದ್ಧಿಶೀಲ ರಾಷ್ಟ್ರಗಳು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಭಾಗವಹಿಸುವ ಮೂಲಕ, ಸಾಂಪ್ರದಾಯಿಕ ಕೈಗಾರಿಕೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ತಂತ್ರಜ್ಞಾನ, ಸೇವೆಗಳು ಮತ್ತು ಉತ್ಪಾದನೆಯಂತಹ ಹೊಸ ವಲಯಗಳನ್ನು ಅನ್ವೇಷಿಸುವ ಮೂಲಕ ತಮ್ಮ ಆರ್ಥಿಕತೆಯನ್ನು ವೈವಿಧ್ಯಗೊಳಿಸಿವೆ.

5.ಸುಧಾರಿತ ಜೀವನ ಮಟ್ಟಗಳು ಜಾಗತೀಕರಣವು ಆದಾಯವನ್ನು ಹೆಚ್ಚಿಸಿದೆ ಮತ್ತು ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಇದು ಅನೇಕ ಪ್ರದೇಶಗಳಲ್ಲಿ ಸುಧಾರಿತ ಜೀವನ ಮಟ್ಟ ಮತ್ತು ಬಡತನ ನಿವಾರಣೆಗೆ ಕಾರಣವಾಗಿದೆ.


ಆದರೆ, ಸೂಕ್ಷ್ಮವಾಗಿ ನೋಡಿದರೆ, ಜಾಗತೀಕರಣವು  ಕೆಳಗಿನ ಕೆಟ್ಟ ಪರಿಣಾಮಗಳನ್ನೂ ಬೀರಿದೆ-

1.ಆರ್ಥಿಕ ಅಸಮಾನತೆ ಜಾಗತೀಕರಣವು ಸಂಪತ್ತನ್ನು ಸೃಷ್ಟಿಸಿದ್ದರೂ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಪ್ರಯೋಜನಗಳು ಹೆಚ್ಚಾಗಿ ಗಣ್ಯರಲ್ಲಿ ಕೇಂದ್ರೀಕೃತವಾಗಿರುವುದರಿಂದ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ.

2.ಜಾಗತಿಕ ಮಾರುಕಟ್ಟೆಗಳ ಮೇಲಿನ ಅತಿಯಾದ ಅವಲಂಬನೆ ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಹೂಡಿಕೆಯ ಮೇಲಿನ ಅವಲಂಬನೆಯು ಆರ್ಥಿಕತೆಗಳನ್ನು ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ಆರ್ಥಿಕ ಬಿಕ್ಕಟ್ಟುಗಳು ಅಥವಾ ಸಾಂಕ್ರಾಮಿಕ ರೋಗಗಳಂತಹ ಅಡೆತಡೆಗಳಿಗೆ ಗುರಿಯಾಗಿಸಿದೆ.

3.ಸ್ಥಳೀಯ ಕೈಗಾರಿಕೆಗಳ ನಷ್ಟ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಹೆಚ್ಚಿದ ಸ್ಪರ್ಧೆಯು ಅಗ್ಗದ ಅಥವಾ ಉತ್ತಮ ಗುಣಮಟ್ಟದ ಆಮದುಗಳೊಂದಿಗೆ ಸ್ಪರ್ಧಿಸಲು ಸಾಧ್ಯವಾಗದ ಸ್ಥಳೀಯ ವ್ಯವಹಾರಗಳ ಅವನತಿಗೆ ಕಾರಣವಾಗಿದೆ.

4.ಕಾರ್ಮಿಕ ಮತ್ತು ಸಂಪನ್ಮೂಲಗಳ ಶೋಷಣೆ ಕೆಲವು ಸಂದರ್ಭಗಳಲ್ಲಿ, ಜಾಗತೀಕರಣವು ಕಳಪೆ ಕೆಲಸದ ಪರಿಸ್ಥಿತಿಗಳು ಮತ್ತು ಪರಿಸರ ನಾಶಕ್ಕೆ ಕಾರಣವಾಗಿದೆ ಏಕೆಂದರೆ ಕಂಪನಿಗಳು ಸುಸ್ಥಿರತೆಗಿಂತ ಲಾಭಕ್ಕೆ ಆದ್ಯತೆ ನೀಡುತ್ತವೆ.

5.ಸಾಂಸ್ಕೃತಿಕ ಮತ್ತು ಆರ್ಥಿಕ ಏಕರೂಪೀಕರಣ ಜಾಗತಿಕ ಬ್ರ್ಯಾಂಡ್ಗಳು ಮತ್ತು ಕೈಗಾರಿಕೆಗಳ ಹರಡುವಿಕೆಯು ಕೆಲವೊಮ್ಮೆ ಸ್ಥಳೀಯ ವ್ಯವಹಾರಗಳು ಮತ್ತು ಸಾಂಸ್ಕೃತಿಕ ಪದ್ಧತಿಗಳನ್ನು ಮರೆಮಾಡಿದೆ, ಇದು ಆರ್ಥಿಕ ವೈವಿಧ್ಯತೆಯನ್ನು ಕಡಿಮೆ ಮಾಡಲು ಕಾರಣವಾಗಿದೆ.

ಹೀಗಾಗಿ ನಾವು ಜಾಗತೀಕರಣದ ಜಾಹೀರಾತಿಗೆ ಬಲಿಯಾಗದೆ, ಹೆಚ್ಚು ಸಂವೇದನಾಶೀಲವಾಗಿ ಪರಿಸ್ಥಿತಿಯ ಬಗ್ಗೆ ಯೋಚಿಸಬೇಕಾಗಿದೆ. ಅದು ಸುಲಭದ ಕೆಲಸವಲ್ಲ, ಏಕೆಂದರೆ, ಜಾಗತೀಕರಣದ ರೀತಿ ನೀತಿಗಳು  ನಿರಂತರವಾಗಿ ಬದಲಾಗುತ್ತಿದೆ ಮತ್ತು ವಿಕಸನಗೊಳ್ಳುತ್ತಿದೆ. ಅದರ ಬದಲಾಗುತ್ತಿರುವ ಚರ್ಯೆಗಳನ್ನು ಗುರುತಿಸುವುದು ಸುಲಭವಲ್ಲ. ಇದು ಸಕಾರಾತ್ಮಕ ಮತ್ತು ನಕಾರಾತ್ಮಕ ಎರಡೂ ಅಂಶಗಳನ್ನು ಹೊಂದಿದ್ದರೂ, ಅದನ್ನು ಈಗ     ಸುಲಭವಾಗಿ ತಡೆ ಹಿಡಿಯಲಾಗದು. ಇದು ರಾಷ್ಟ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಹೇಗೆ ಸಂವಹನ ನಡೆಸುತ್ತವೆ ಎಂಬುದನ್ನು ಮರುರೂಪಿಸುತ್ತಾ ಇರುತ್ತದೆ. ಜಾಗತೀಕರಣವು ಕೇವಲ ಜಾಗತಿಕವಾಗಿ ಅಗತ್ಯಗಳನ್ನು ಮತ್ತು ಆಸೆಗಳನ್ನು ಹರಡುವುದಲ್ಲ, ಬದಲಾಗಿ ಮಾರುಕಟ್ಟೆ ವಿಸ್ತರಣೆಯತ್ತ ನಡೆಯುತ್ತಿರುವ ಒಂದು ಚಳುವಳಿಯಾಗಿದೆ.

ಕನ್ನಡಿಗರ ಮೇಲೆ ಪ್ರಭಾವ

 ಈ ಜಾಗತೀಕರಣವು ಕನ್ನಡಿಗರ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ಮುಂದೆ ಸಂಕ್ಷಿಪ್ತವಾಗಿ ಪರಿಶೀಲಿಸಲಾಗಿದೆ.

ಇವತ್ತಿನ ದಿನದಲ್ಲಿ ಒಂದು ರಾಜ್ಯದ ವೇಗವಾದ ಆರ್ಥಿಕ ಬೆಳವಣಿಗೆಗೆ ಅಲ್ಲಿ ಹುಟ್ಟಿಕೊಂಡ ಬೃಹತ್‌ ಪ್ರಮಾಣದ ಉದ್ಯಮಗಳು ಸಹಕರಿಸುತ್ತವೆ ಎಂದು ಎಲ್ಲರೂ ಹೇಳುತ್ತಾರೆ. ಬೆಂಗಳೂರಿನ ಅತ್ಯುತ್ತಮ ಹವಾಮಾನ, ಕನ್ನಡಿಗರ ಸಜ್ಜನಿಕೆಯ ನಡವಳಿಕೆ, ಸಮತಟ್ಟಾದ ನೆಲ, ಸಂಪರ್ಕ ಸಾಧನಗಳ ಉಪಲಬ್ಧತೆ, ನೀರಿನ ಒದಗಣೆಯೇ ಮೊದಲಾದ ಅನೇಕ ಅಂಶಗಳು ನೂರಾರು ಸಣ್ಣ ಮತ್ತು ದೊಡ್ಡ ಉದ್ಯಮಗಳನ್ನು ಕರ್ನಾಟಕಕ್ಕೆ ಬರಮಾಡಿಕೊಂಡಿತು. ಬೆಂಗಳೂರನ್ನು ʼಭಾರತದ ಸಿಲಿಕಾನ್‌ ವ್ಯಾಲಿʼ ಎಂದು ಕೊಂಡಾಡಲಾಯಿತು.  ಈ ಬೆಳವಣಿಗೆಯು ಒಂದು ಹಂತದಲ್ಲಿ ಮೂವತ್ತು ಶತಕೋಟಿ ಡಾಲರ್‌ ಗಳಿಗಿಂತ ಹೆಚ್ಚಿನ ಹಣವನ್ನು ಬೆಂಗಳೂರಿಗೆ ತಂದಿದೆ. ಇನ್ಪೋಸಿಸ್‌, ವಿಪ್ರೋ, ಟೋಸ್ಟ್, ರಿಂಗ್ಸೆಂಟ್ರಲ್, ಮೊಟೊರೊಲಾ, ಡೆಲ್‌, ನವನ್‌, ಗೂಗಲ್, ಬಯೋಕಾನ್ ,ಪೇಪಾಲ್,  ಅದಯೆನ್, ಅಡೋಬ್, ಆರೋ ಎಲೆಕ್ಟ್ರಾನಿಕ್ಸ್, ಇಂಕ್, ಸಿಸ್ಕೋಮೆರಾಕಿ, ಮ್ಯಾಗ್ನಾಇಂಟರ್ನ್ಯಾಷನಲ್, ಅಮೆಜಾನ್,  ಅಟ್ಲಾಸಿಯನ್ , ಟಾಟಾ ಕನ್ಸಲ್ಟೆನ್ಸಿ, ಮೈಕ್ರೋಸಾಫ್ಟ್ ಮೊದಲಾದ ಅಂತಾರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳು ಬೆಂಗಳೂರಿನ ಹೆಸರನ್ನು ವಿಶ್ವದಾದ್ಯಂತ ಪಸರಿಸಿವೆ. ಈ ಕಂಪೆನಿಗಳು ಕರ್ನಾಟಕದ ಒಟ್ಟು ಆರ್ಥಿಕತೆಗೆ ನೀಡುತ್ತಿರುವ ಕೊಡುಗೆ 43.65% ಕ್ಕೂ ಹೆಚ್ಚು.  ೨೦೨೦ರ ಅಂಕಿ ಅಂಶಗಳ ಪ್ರಕಾರ ಇವು ಬೆಂಗಳೂರಿನಲ್ಲಿ ೩೫ ಲಕ್ಷ ಭಾರತೀಯರಿಗೆ ಉದ್ಯೋಗ ನೀಡಿವೆ.

ಇವುಗಳ ಜೊತೆಗೆ ಕೇಂದ್ರೀಯ ಉದ್ಯಮಗಳೂ ರಾಜ್ಯದಲ್ಲಿ ಕೆಲಸ ಮಾಡುತ್ತಿವೆ. ಭಾರತ್ ಎಲೆಕ್ಟ್ರಾನಿಕ್ಸ್‌  ಲಿಮಿಟೆಡ್‌,  ಭಾರತ್‌ ಹೆವಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್ (BHEL) , ಇಂಡಿಯನ್‌ ಟೆಲಿಫೋನ್‌ ಇಂಡಸ್ಟ್ರೀಸ್ (ITI), ಭಾರತ್ ಅರ್ಥ್ ಮೂವರ್ಸ್‌ ಲಿಮಿಟೆಡ್ (BEML) , ಹಿಂದೂಸ್ತಾನ್‌ ಮೋಟಾರ್ಸ್ (HM), ಹಿಂದೂಸ್ತಾನ್ ಏರೋನಾಟಿ ಕ್ಸ್‌  ಲಿಮಿಟೆಡ್‌,  ನ್ಯಾಷನಲ್  ಏರೋ ಸ್ಪೇಸ್‌ ಲ್ಯಾಬೋರೇಟರೀಸ್ (NAL) ಕೂಡ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನುಹೊಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಕೂಡಾ ಬೆಂಗಳೂರಲ್ಲಿದೆ. ಚಿಕ್ಕಪೇಟೆ ಪ್ರದೇಶದ ಜವಳಿ ಉದ್ಯಮ, ಶಿವಾಜಿನಗರ ಪ್ರದೇಶದ ಆಟೋ ಬಿಡಿ ಭಾಗಗಳು, ವೈಟ್‌ಫೀಲ್ಡ್ ನ ಮಾಹಿತಿ ತಂತ್ರಜ್ಞಾನ ಉದ್ಯಾನವನಗಳು, ಕೋರಮಂಗಲ ಮತ್ತು ಜೆಪಿ ನಗರಗಳ ಸ್ಟಾರ್ಟ್‌  ಅಪ್‌ಗಳು, ಎಲೆಕ್ಟ್ರಾನಿಕ್‌ ಸಿಟಿಯ  ಐಟಿ ಸೇವೆಗಳು ಮಹತ್ವದ್ದವು. ಕರ್ನಾಟಕ ಸರ್ಕಾರವು ಈ ಬಗೆಯ ಉದ್ಯಮಗಳನ್ನು ಉತ್ತೇಜಿಸುತ್ತಲೇ ಬಂದಿದೆ.

ವಿಶ್ವದ ಎಲ್ಲ ಕಡೆಗಳಲ್ಲಿಯೂ ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳ ಹೂಡುವುದು ಲಾಭಕ್ಕಾಗಿಯೇ. ಉದ್ಯೋಗಸೃಷ್ಟಿ, ಸಂಸ್ಕೃತಿ ಇತ್ಯಾದಿ ಪದಗಳು ಕೂಡಾ ಲಾಭವನ್ನು ಗಮನದಲ್ಲಿರಿಸಿಕೊಂಡೇ ಬಳಕೆಯಾಗುತ್ತವೆ. ಲಾಭವೇ ಸಿದ್ಧಾಂತವಾಗಿರುವ ಕಂಪೆನಿಗಳಿಗೆ ಯಾವುದೇ ರಾಜಕೀಯ ಪಕ್ಷಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳುವುದು ಕಷ್ಟವೇನಲ್ಲ. ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳಿಗೆ ಅನುಕೂಲಕರವಾದ ನಿಯಮಗಳನ್ನು ರೂಪಿಸುತ್ತವೆ, ಬಂಡವಾಳಶಾಹಿಗಳು ರಾಜಕೀಯಪಕ್ಷಗಳ ಹಿತಾಸಕ್ತಿಗಳನ್ನು ಕಾಪಾಡುತ್ತವೆ. ಇಂಥಲ್ಲಿ ಕನ್ನಡದಂಥ ಸ್ಥಳೀಯ ಭಾಷೆಯ ಸ್ಥಾನ ಏನು?

ಮಹಿಷಿ ವರದಿ:

ಡಾ. ಸರೋಜಿನಿ ಮಹಿಷಿಯವರು ೧೯೮೬ರಲ್ಲಿ, ಅಂದರೆ ೩೮ವರ್ಷಗಳ ಹಿಂದೆ   ʼಸ್ಥಳೀಯರಿಗೆ ಉದ್ಯೋಗʼ ಎಂದು ಘೋಷಿಸಿಸುವುದರ ಜೊತೆಗೆ, ರೈತರು ನೀರಾವರಿ ಜಮೀನನ್ನು ಪರಪ್ರಾಂತದವರಿಗೆ ಮಾರುವುದು, ಬೆಂಗಳೂರಲ್ಲಿಅನ್ಯಪ್ರಾಂತೀಯರು ಪಡೆಯುವ ನಿವೇಶನಗಳಿಗೆ ಕಡಿವಾಣ ಹಾಕುವುದು ಪ್ರತ್ಯೇಕ ರೈಲ್ವೇವಲಯದ ಸ್ಥಾಪನೆ, ಮೊದಲಾದ ೫೮ ಶಿಫಾರಸುಗಳನ್ನುಸರಕಾರಕ್ಕೆ ಸಲ್ಲಿಸಿದ್ದರು. ಅಂದಿನಿಂದ ಇಂದಿನವರೆಗೆ ಕನ್ನಡಪರ ಸಂಘಟನೆಗಳು ಮಹಿಷಿ ವರದಿ ಜ್ಯಾರಿಗೆ ಒತ್ತಾಯಿಸುತ್ತಲೇ ಇದ್ದಾರೆ. ಆದರೆ ಮಹಿಷಿ ವರದಿಗೆ ಕಾನೂನಿನ ಬೆಂಬಲ ಇಲ್ಲದ್ದರಿಂದ ಅದು ವರದಿಯಾಗಿಯಷ್ಟೇ ಉಳಿಯಿತು. “ಮಹಿಷಿ ವರದಿಗೆ ಶಾಸನಾಧಾರ ಇಲ್ಲದಿರುವುದರಿಂದ ಅದನ್ನು ಅನುಸರಿಸಿ ಎಂದು ನಾವು ಹೇಳುವಂತಿಲ್ಲʼ ಎಂದು ಕರ್ನಾಟಕದ ಉಚ್ಚ ನ್ಯಾಯಾಲಯವು ೨೦೧೩ರಲ್ಲಿಯೇ ಹೇಳಿದೆ. ಇವತ್ತು ಮಹಿಷಿ ವರದಿಯ ಅನೇಕ ಶಿಫಾರಸುಗಳು ಪ್ರಸ್ತುತವಾಗಿಯೂ ಉಳಿದಿಲ್ಲ. ಮಹಿಷಿ ಸಮಿತಿಯು ವರದಿ ನೀಡುವಾಗ ಸರಕಾರೀ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿತ್ತು, ಆದರೆ ಈಗ ಅದು ಖಾಸಗೀ ವಲಯಕ್ಕೆ ವರ್ಗಾವಣೆಯಾಗಿದೆ. ಖಾಸಗೀ ವಲಯದ ಬಗ್ಗೆ ಮಹಿಷಿ ವರದಿಯಲ್ಲಿ ಯಾವ ಉಲ್ಲೇಖವೂ ಇಲ್ಲ. ಈ ನಡುವೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು  ೨೦೧೬ರಲ್ಲಿ  ಮಹಿಷಿ ವರದಿಯನ್ನು ಕೂಲಂಕಷವಾಗಿ ವಿಶ್ಲೇಷಿಸಿ, ಪರಿಷ್ಕರಿಸಿ, ಕಾಯ್ದೆ ಮಾಡಲು ಅಗತ್ಯವಿರುವ  ೧೪ ಅಂಶಗಳನ್ನು ಪಟ್ಟಿಮಾಡಿ ಸರಕಾರಕ್ಕೆ ಸಲ್ಲಿಸಿತು. ಅದರಲ್ಲಿʼಸಿʼಮತ್ತುʼಡಿʼವರ್ಗದ ಹುದ್ದೆಗಳಿಗೆ ನೂರಕ್ಕೆ ನೂರರಷ್ಟು ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು, ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತರಿಗೆ ಕನ್ನಡ ಭಾಷಾಜ್ಞಾನ ಖಡ್ಡಾಯವಾಗಿರಬೇಕು, ಸರಕಾರಿ ವಲಯದ ಎಲ್ಲ ಹುದ್ದೆಗಳೂ ಕನ್ನಡಿಗರಿಗೇ ಸಿಗಬೇಕು, ಗುತ್ತಿಗೆ ಮತ್ತು ಹೊರಗುತ್ತಿಗೆ ನೇಮಕಾತಿಯಲ್ಲಿ ಕನ್ನಡಿಗರೇ ಇರಬೇಕು, ಎಂಬಿತ್ಯಾದಿ ಉತ್ತಮ ಮತ್ತು ಅನುಷ್ಠಾನ ಯೋಗ್ಯ ಶಿಫಾರಸುಗಳಿವೆ. ಜೊತೆಗೆ ೧೫ ವರ್ಷಗಳ ಕಾಲ ಕರ್ನಾಟಕದಲ್ಲಿ ವಾಸವಿದ್ದು ಎಸ್‌ ಎಸ್‌ ಎಲ್‌ ಸಿ ವರೆಗೆ ಕನ್ನಡ ಭಾಷೆ ಕಲಿತವರನ್ನು ಸ್ಥಳೀಯರು ಎಂದು ಪರಿಗಣಿಸಬೇಕೆಂದೂ ಪರಿಷ್ಕೃತ ವರದಿ ಹೇಳಿದೆ. ಆದರೆ ಇದು ಕೂಡಾ ಕಾಯ್ದೆಯ ಅಡಿಯಲ್ಲಿ ಬರಲೇ ಇಲ್ಲವಾದ್ದರಿಂದ ಇದರ ಪ್ರಯೋಜನವೂ ಕನ್ನಡಿಗರಿಗೆ ಆಗಲಿಲ್ಲ.

ಇವನ್ನೆಲ್ಲ ಹೇಳುವುದು, ಬರೆಯುವುದು ಸುಲಭ. ಆದರೆ ಖಾಸಗೀ  ಸಂಸ್ಥೆಗಳ ಮೇಲೆ ಸರಕಾರಗಳಿಗೆ ಹಿಡಿತ ಇದೆಯೋ, ಅಥವಾ ಸರಕಾರಗಳ ಮೇಲೆ ಖಾಸಗೀ ಸಂಸ್ಥೆಗಳೇ ಹಿಡಿತ ಸಾಧಿಸಿವೆಯೋ ಎಂಬ ಪ್ರಶ್ನೆ ಕೇಳಿಕೊಂಡರೆ ಎರಡನೆಯದೇ ಸರಿ ಅನ್ನಿಸುತ್ತದೆ. ಹೀಗಾಗಿ ಕಾನೂನಿನ ಮೂಲಕ ಖಾಸಗೀ ವಲಯದಲ್ಲಿ ಸ್ಥಳೀಯರಿಗೆ ಉದ್ಯೋಗವನ್ನು ಮೀಸಲಿಡುವುದು ಸುಲಭ ಸಾಧ್ಯವಾದ ಸಂಗತಿಯೇನಲ್ಲ.  ಈಚೆಗೆ ಕರ್ನಾಟಕ ಸರಕಾರವು  ‘ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024’ ನ್ನು ( ಕರ್ನಾಟಕದಲ್ಲಿ  ಖಾಸಗಿ ವಲಯದ ಕಂಪನಿಗಳು, ಕಾರ್ಖಾನೆಗಳು ಹಾಗೂ ಸಂಸ್ಥೆಗಳ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.50 ರಿಂದ ಶೇ.75ರವರೆಗೆ ಮೀಸಲಾತಿ ನೀಡಬೇಕು. ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿ ಶೇ.50ರಷ್ಟು, ನಾನ್‌ ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿ ಶೇ.75ರಷ್ಟು ಕನ್ನಡಿಗರಿಗೆ ಮೀಸಲಾತಿ ಸಿಗಬೇಕು, ಇನ್ನು, ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ನೀಡಬೇಕು) ವಿಧಾನ ಸಭೆಯಲ್ಲಿ ಮಂಡಿಸಲು ಮುಂದಾದರೂ ಅದು ಇದುವರೆಗೆ ಯಶಸ್ವಿಯಾಗಲಿಲ್ಲ. ಈ ಮಸೂದೆಗೆ ಉದ್ಯಮಿಗಳು ತೋರಿದ ವಿರೋಧಕ್ಕೆ ಸರಕಾರವೂ ಬೆಚ್ಚಿ ಬಿದ್ದಿತ್ತು.ಕನ್ನಡಿಗರಿಗೆ ಉದ್ಯೋಗಬೇಕೆಂದು ವಾದಿಸುತ್ತಿರುವ ಕೆಲವು ಕನ್ನಡಿಗರೂ ಸರಕಾರದ ಪರವಾಗಿ ನಿಂತಿರುವುದು ಹೌದಾದರೂ ಹಲವರು ಸರಕಾರದ ಜೊತೆ ಗಟ್ಟಿಯಾಗಿ ನಿಲ್ಲಲಿಲ್ಲ. ತಮ್ಮ ರಾಜ್ಯದಲ್ಲಿರುವ ಕಂಪೆನಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ಯಾವ ರಾಜ್ಯಗಳೂ ಇಷ್ಟಪಡುವುದಿಲ್ಲ. ಈ ಹಿನ್ನೆಲೆಯಲ್ಲಿ ಕೆಳಗಿನ ಕೆಲವು ಅಂಶಗಳ ಬಗ್ಗೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಾಗಿದೆ-

1. ೧೯೯೦ರ ದಶಕದ ಆನಂತರ ಕಾಣಿಸಿಕೊಂಡ ಜಾಗತೀಕರಣದ ಪರಿಣಾಮವಾಗಿ ದೊಡ್ಡ ಸಂಖ್ಯೆಯಲ್ಲಿ ಹುಟ್ಟಿಕೊಂಡ ಖಾಸಗೀ ವಲಯದಲ್ಲಿ ಕೆಲಸ ಮಾಡಲು ಬೇಕಾದ ಸಮರ್ಥ ಕೌಶಲಗಳನ್ನು ಹೊಂದಿರುವ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆಯೇ? ನಮ್ಮ ವಿಶ್ವವಿದ್ಯಾಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳು ಜಾಗತಿಕ ಮಟ್ಟದ ತರಬೇತುಗಳನ್ನು ನೀಡಲು ಸಮರ್ಥವಾಗಿವೆಯೇ?

2. ದೊಡ್ಡ ಮಟ್ಟದ ಬಂಡವಾಳ ಹೂಡಿ, ಕೇವಲ ಲಾಭದ ಮೇಲೆ ಕಣ್ಣಿಟ್ಟ ಕಂಪೆನಿಗಳು ಅರ್ಹತೆಯನ್ನು ಪರಿಗಣಿಸುತ್ತವೆಯೇ ವಿನಾ ʼ ಸ್ಥಳೀಯತೆಯನ್ನು ʼಒಂದು ಮಾನದಂಡವಾಗಿ ಪರಿಗಣಿಸುವುದೇ ಇಲ್ಲ. ಸ್ಥಳೀಯ ಗಡಿಗಳು, ಭಾಷೆಗಳು, ಸಮುದಾಯಗಳನ್ನು ಮೀರಿದಾಗ ಮಾತ್ರ ಅವು ʼ ಜಾಗತಿಕ ʼ ಅನ್ನಿಸಿಕೊಳ್ಳುತ್ತವೆ.

3. ೨೦೧೪ರ ಆನಂತರದ ರಾಜಕೀಯ ಬೆಳವಣಿಗೆಗಳು ಸ್ಥಳೀಯತೆಯನ್ನು ಗೌಣಗೊಳಿಸಿ ರಾಷ್ಟ್ರೀಯತೆಯನ್ನು ಬಲಗೊಳಿಸುತ್ತಿರುವುದರಿಂದ, ರಾಜ್ಯಗಳ ಅಸ್ಮಿತೆಯ ಪ್ರಶ್ನೆ ಹಿಂದೆ ಸರಿದು ರಾಷ್ಟ್ರೀಯ ಅಸ್ಮಿತೆ ಪ್ರಬಲವಾಗುತ್ತಿದೆ. ಕರ್ನಾಟಕದಲ್ಲಿ ಪ್ರಬಲವಾದ ಪ್ರಾದೇಶಿಕ ಪಕ್ಷವೂ ಇಲ್ಲದ್ದರಿಂದ ರಾಜ್ಯದ ಅಸ್ಮಿತೆಯ ಪ್ರಶ್ನೆ ಮುನ್ನೆಲೆಗೆ ಬರುತ್ತಿಲ್ಲ. ಹೀಗಾಗಿ ʼಕನ್ನಡಿಗರಿಗೆ ಉದ್ಯೋಗʼಎಂಬ ಜಾಗದಲ್ಲಿʼಭಾರತೀಯರಿಗೆ ಉದ್ಯೋಗʼಎಂಬ ಕೂಗು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಬೆಳೆಯುತ್ತಿರುವ ರಾಜಕೀಯವು ಹಿಂದಿಯನ್ನು ಕನ್ನಡ ತಲೆಯ ಮೇಲೆ ಕುಳ್ಳಿರಿಸಿದೆ.

4. ಭಾರತದ ಒಕ್ಕೂಟ ವ್ಯವಸ್ಥೆಯು ಕೂಡಾ ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ರೂಪಿಸಿಕೊಳ್ಳಲು ಪೂರ್ಣಮಟ್ಟದ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ನಮಗೆ ರಾಜ್ಯ ಭಾಷೆಯಾದ ಕನ್ನಡವನ್ನೇ ಪ್ರಾಥಮಿಕ ಹಂತದಲ್ಲಿ ಮಾಧ್ಯಮವಾಗಿ ಬಳಸಲು ಅಧಿಕಾರ ಇಲ್ಲದಿರುವಾಗ, ಉದ್ಯೋಗದ ಪ್ರಶ್ನೆ ಎಲ್ಲಿ ಬಂತು?

5. ನಮ್ಮ ಸಂವಿಧಾನವು ರಾಜ್ಯಗಳ ಸ್ವಾಯತ್ತೆಯ ವಿಚಾರದಲ್ಲಿ ಬಹಳ ಎಚ್ಚರದ ಹೆಜ್ಜೆಇಟ್ಟು, ಮತ್ತೆ ಭಾರತವು ಅನೇಕ ರಾಜ್ಯಗಳಾಗಿ ಒಡೆದು ಹೋಗುವ ಸಾಧ್ಯತೆಗಳನ್ನು ಇಲ್ಲವಾಗಿಸಿದೆ.  ನಮ್ಮಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ತಮ್ಮ ಅಧಿಕಾರವನ್ನು ಒಂದೇ ಮೂಲದಿಂದ (ಸಂವಿಧಾನ) ಪಡೆಯುತ್ತವೆ. ಎರಡು ಗುಂಪಿನ ಸರಕಾರಗಳ ನಡುವೆ ಶಾಸಕಾಂಗ ಮತ್ತು ಆಡಳಿತಾತ್ಮಕ ಅಧಿಕಾರಗಳ ವಿಭಜನೆಯನ್ನು ಮತ್ತು ಅತಿಕ್ರಮಣಗಳನ್ನು ಕಾಪಾಡಲು, ಸಂವಿಧಾನವು ಸುಪ್ರೀಂಕೋರ್ಟ್ಅನ್ನು ಸ್ಥಾಪಿಸಿದೆ. ಅಮೇರಿಕಾ ಆಸ್ಟ್ರೇಲಿಯಾಗಳಲ್ಲಿಹೀಗಿಲ್ಲ. ಅಲ್ಲಿ ರಾಜ್ಯಗಳು ಹೆಚ್ಚು ಸ್ವಾಯತ್ತವಾಗಿವೆ.

ಈ ಎಲ್ಲಾ ಕಾರಣಗಳಿಂದ ಸದ್ಯಕ್ಕೆʼ ಸ್ಥಳೀಯರಿಗೆ ಉದ್ಯೋಗʼ ಎಂಬ ಮಾತು ಒಂದು ಕೂಗಾಗಿಯಷ್ಟೇ ಉಳಿಯಬಹುದಾದ ಸಾಧ್ಯತೆಗಳು ಹೆಚ್ಚು.



·         

 

No comments: