Wednesday, November 13, 2013

ಧಾರ್ಮಿಕ ನಂಬಿಕೆ ಮತ್ತು ಮೂಢನಂಬಿಕೆ


ಧಾರ್ಮಿಕ ನಂಬಿಕೆ ಮತ್ತು ಮೂಢನಂಬಿಕೆಗಳ ಬಗ್ಗೆ ಮಾತನಾಡುವುದೆಂದರೆ ಹಗ್ಗದ ಮೇಲೆ ನಡೆದಾಡಿದಂತೆ. ಇದಕ್ಕೆ ಸಂಬಂಧಿಸಿದ ಕಾಯ್ದೆ ರೂಪಿಸುವಾಗಲೂ ತೋಲನವನ್ನು ಕಾಯ್ದುಕೊಳ್ಳುವ ಆವಶ್ಯಕತೆಯಿದೆ. ಎಲ್ಲವೂ ನಂಬಿಕೆಗಳಲ್ಲ, ಎಲ್ಲವೂ ಮೂಢನಂಬಿಕೆಗಳೂ ಅಲ್ಲ. ಆದರೆ, ಇವುಗಳನ್ನು ಗುರುತಿಸುವುದು ಸಂಕೀರ್ಣ ಸಾಂಸ್ಕೃತಿಕ ಸನ್ನಿವೇಶದೊಳಗಿರುವ ಒಂದು ಸವಾಲು.
ಈಚೆಗೆ ಒಂದಿನ ಬೆಳಗಿನ ಹೊತ್ತು ಕನ್ನಡ ಟಿ. ವಿ. ಚಾನಲ್‌ ಒಂದನ್ನು ನೋಡುತ್ತಿದ್ದೆ. ಸ್ವಾಮೀಜಿಯೊಬ್ಬ ಅಕರಾಳ ವಿಕರಾಳವಾಗಿ ಕುಳಿತಿದ್ದ. ಆತನಿಗೆ ದೂರವಾಣಿ ಕರೆಯೊಂದು ಬಂತು- "ನನ್ನ ಮಗುವಿಗೆ ಫಿಟ್ಸ್‌ ಬರುತ್ತಿದೆ, ಏನು ಮಾಡಲಿ?' ಆ ಸ್ವಾಮಿಯು ದುರಹಂಕಾರ ಮತ್ತು ದರ್ಪದಲ್ಲಿ ಹೇಳಿದ ಪ್ರಶ್ನೆ ಏನೋ ಕೇಳಿ ಬಿಡ್ತೀರಾ? "ಉತ್ತರವೂ ಹೇಳೆ¤àನೆ, ಹೇಳಿದ ಹಾಗೆ ಮಾಡಬೇಕಾದ್ದು ನಿಮ್ಮ ಕೆಲಸ!' ಎಂದು ಎಚ್ಚರಿಸಿ, ತಮಿಳುನಾಡು ಮತ್ತು ಕರ್ನಾಟಕದ ಒಟ್ಟು ಆರು ದೇವಸ್ಥಾನಗಳಿಂದ ಒಂದು ವಾರದೊಳಗೆ ತೀರ್ಥ ತಂದು ಮಗುವಿಗೆ ಕುಡಿಸಿ, ಅಪಸ್ಮಾರ ಗುಣವಾಗುತ್ತದೆ ಎಂದ. ಇಂಥ ಅಸಂಬದ್ಧ, ಅವೈಜ್ಞಾನಿಕ ಸಲಹೆ ಸೂಚನೆಗಳನ್ನು ಕೇಳುತ್ತಲೇ ಮೈಯೆಲ್ಲ ಉರಿದು ಹೋಯಿತು. ನನ್ನ ಜಾತಕ ಬರೆದ ಜ್ಯೋತಿಷಿಯೊಬ್ಬ ಅದರಲ್ಲಿ  ಈ ಜಾತಕನಿಗೆ ವಿದ್ಯಾಯೋಗವಿಲ್ಲವು ಎಂದು ಬರೆದದ್ದರಿಂದ ನಾನು ಅನುಭವಿಸಿದ ಕಷ್ಟಗಳೆಲ್ಲ ಕಣ್ಣೆದುರು ಹಾದು ಹೋದುವು. ಈ ಆಘಾತದಿಂದ ಹೊರಬರುವ ಮುನ್ನವೇ ಸ್ವಾಮಿಯೊಬ್ಬನ ಕನಸಿನಲ್ಲಿ ಕಂಡ ಸಾವಿರಾರು ಟನ್‌ ಚಿನ್ನ ಅಗೆಯಲು ನಮ್ಮ ಅಧಿಕಾರಿಗಳ ದಂಡು ಉತ್ತರಪ್ರದೇಶದಲ್ಲಿ ದೌಡಾಯಿಸಿತು. ಎಲ್ಲ ಬಿಟ್ಟ ವಿರಾಗಿಗಳಿಗೆ ಚಿನ್ನದ ಕನಸು ಯಾಕೆ ಬೀಳುತ್ತದೋ ಗೊತ್ತಿಲ್ಲ.

ನಾನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿದ್ದಾಗ ಒಬ್ಬ ಸ್ವಾಮಿ ಬಂದು- "ನನಗೆ ಕನಸಿನಲ್ಲಿ ವಸಿಷ್ಠರು ಕಾಣಿಸಿಕೊಂಡು, ಮೈಮೇಲೆ ಆವಾಹಿತರಾಗುವುದಾಗಿ ಹೇಳಿದ್ದಾರೆ, ಹಾಗಾಗಿ ನಾನೀಗ ವಸಿಷ್ಠರ ಅವತಾರ, ಒಂದು ವಾರ ಇಲ್ಲಿ ಪ್ರವಚನಕ್ಕೆ ವ್ಯವಸ್ಥೆ ಮಾಡಿ' ಎಂದು ಬಿಟ್ಟ. ನಾನು ನಮ್ರವಾಗಿ, "ನನ್ನ ಕನಸಿನಲ್ಲಿ ವಿಶ್ವಾಮಿತ್ರರು ಬಂದಿದ್ದರು. ವಸಿಷ್ಠರು ಬಂದರೆ ಸೇರಿಸಬೇಡ ಎಂದಿದ್ದಾರೆ, ಹಾಗಾಗಿ ಆಗುವುದಿಲ್ಲ' ಎಂದು ಹೇಳಿ ಆತನನ್ನು ಹೇಗೋ ಸಾಗ ಹಾಕಿದೆ. ಇವೆಲ್ಲವನ್ನೂ ಗಮನಿಸಿದಾಗ ದುರದೃಷ್ಟವೋ ಎಂಬಂತೆ, ನಮ್ಮ ಸಮಾಜ ಮುಂದಕ್ಕೆ ಹೋಗದೆ ಮತ್ತೆ ಹಿಂದಕ್ಕೆ ಚಲಿಸಲು ಆರಂಭವಾಗಿದೆ ಎಂದು ಭಾಸವಾಗುವುದು ಸಹಜ. 21ನೇ ಶತಮಾನದ ಈ ಆಧುನಿಕ ಕಾಲದಲ್ಲಿಯೂ ನಮ್ಮ ಸಮಾಜದಲ್ಲಿ ಮೂಢನಂಬಿಕೆಗಳು, ಕಂದಾಚಾರಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಲೇ ಇರುವುದು ದೇಶದ ಪ್ರಗತಿಗೆ ಮಾರಕವಾಗಿದೆ. ಇಂದು ಈ ದೇಶದಲ್ಲಿ "ಮೌಡ್ಯ'ದ ವ್ಯಾಪಾರ ದೊಡ್ಡ ದಂಧೆಯಾಗಿ ಬೆಳೆದಿದೆ. ಫ‌ಲಜ್ಯೋತಿಷ, ಜಾತಕ, ಶಕುನ, ಕಾಲನಿರ್ಣಯ (ಕಾಲಜಾnನ), ನ್ಯೂಮರಾಲಜಿ, ವಾಸ್ತುಶಾಸ್ತ್ರ, ಪವಾಡ, ಯಕ್ಷಿಣಿ ವಿದ್ಯೆ, ಜಾದುಗಾರಿಕೆ, ಮಾಟಮಂತ್ರ, ಮೋಡಿ-ರಣಮೋಡಿ, ಬಾನಾಮತಿ, ವಶೀಕರಣ, ವಾಮಾಚಾರ ಮುಂತಾದವುಗಳಲ್ಲಿ ತೊಡಗಿಸಿಕೊಂಡವರು ಶ್ರೀಮಂತರಾಗುತ್ತಿದ್ದರೆ ಅವನ್ನು ನಂಬಿದವರು ಭಿಕಾರಿಗಳಾಗುತ್ತಿದ್ದಾರೆ. ಇದಕ್ಕೆ ಒಂದು ಬಗೆಯ ಕಡಿವಾಣ ಅಗತ್ಯವೆಂದು ಭಾವಿಸಿರುವ ಕರ್ನಾಟಕ ಸರಕಾರವು ಮೂಢನಂಬಿಕೆಗಳ ವಿರುದ್ಧ ಇದೀಗ ಹೋರಾಟಕ್ಕೆ ಸಜ್ಜಾಗಿದೆ. ಬಾಯಿಗೆ ಬಂದಂತೆ ಗಳಹುವವರನ್ನು ಹದ್ದುಬಸ್ತಿನಲ್ಲಿಡಲು ಕಾನೂನು ರೂಪಿಸಲು ಯೋಚಿಸುತ್ತಿದೆ. ಭಾರತದ ಸಂವಿಧಾನದ ವಿಧಿ 51-ಎ(ಹೆಚ್‌)ಗೆ ತಂದ 42ನೇ ತಿದ್ದುಪಡಿಯಲ್ಲಿ ವೈಜ್ಞಾnನಿಕ ಚಿಂತನೆ, ಪ್ರಶ್ನಿಸುವ ಮನೋಭಾವ, ಮಾನವತಾವಾದ ಹಾಗೂ ಸಾಮಾಜಿಕ ಸುಧಾರಣೆಗಳ ಅಗತ್ಯವನ್ನು ಒತ್ತಿ ಹೇಳಿರುವುದನ್ನು ಗಮನಿಸಿ ಈ ಕ್ರಮವನ್ನು ಕೈಗೊಳ್ಳಲು ಆಲೋಚಿಸಲಾಗುತ್ತದೆ.
"ಸಮಾನತೆ ಮತ್ತು ವೈಜ್ಞಾnನಿಕ ಮನೋಭಾವಗಳ ಆಶಯವನ್ನಿರಿಸಿಕೊಂಡ ಸಂವಿಧಾನವು ಜಾರಿಗೆ ಬಂದು ಆರೂವರೆ ದಶಕಗಳ ನಂತರವೂ ಮೌಡ್ಯಪಾಲಕ ಸ್ಥಾಪಿತ ಹಿತಾಸಕ್ತಿಗಳನ್ನು ಹತ್ತಿಕ್ಕಲಾಗಿಲ್ಲ. ಇದು ಸಮಾನತೆ-ಸೋದರತೆ-ಸಹಬಾಳ್ವೆ ಎಂಬ ಸಂವಿಧಾನಾತ್ಮಕ ಆಶಯಗಳನ್ನು ಕೇವಲ ನೆಪಮಾತ್ರವಾಗಿಸಲು ಮತ್ತೂಂದು ಪ್ರಮುಖ ಕಾರಣವಾಗಿದೆ' ಎಂದು ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವದಲ್ಲಿ ಚಿಂತಕರು ಅಭಿಪ್ರಾಯ ಪಟ್ಟಿದ್ದಾರೆ. ಶಿಬಿರ, ನಾಯಕತ್ವ ತರಬೇತಿ, ವಿಚಾರ ಸಾಹಿತ್ಯ ಕಮ್ಮಟ, ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವ ಹಾಗೂ ವೈಚಾರಿಕ ಅಧ್ಯಯನ ಪ್ರಬಂಧಗಳನ್ನು ಪ್ರಕಟಿಸುವ, ವೈಜಾnನಿಕ ಸಂಶೋಧನೆಗಳಿಗೆ ಇಂಬುಕೊಡುವ ಹಲವಾರು ಯೋಜನೆಗಳನ್ನು ರೂಪಿಸಲು ತಜ್ಞರು ಸಲಹೆಮಾಡಿದ್ದಾರೆ. ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಮತ್ತು ಸಾರ್ವಜನಿಕ ಅಂಗಗಳಲ್ಲಿ ರೂಢಿಗೆ ತಂದಿರುವ ಮೌಡ್ಯಪೂರಿತ ಧಾರ್ಮಿಕ ಆಚರಣೆಗಳನ್ನು ನಿಷೇಧಿಸುವ ಕುರಿತೂ ಸರಕಾರಕ್ಕೆ ಸಲಹೆ ನೀಡಲಾಗಿದೆ. ಯಾವುದೇ ಮತಧರ್ಮಕ್ಕೆ ಸಂಬಂಧಿಸಿದ ಮೌಢಾÂಚರಣೆಗಳ ಹಾಗೂ ಜನತೆಯ ಸಾಮಾಜಿಕ ಸಾಮರಸ್ಯವನ್ನು ಕಲಕುವ ಆಚರಣೆಗಳ ನಿಷೇಧ, ಮಡಿ ಮೈಲಿಗೆ ನೆಪದಲ್ಲಿ ಯಾವುದೇ ಸಮುದಾಯವನ್ನು ಹೊರಗಿಡುವುದನ್ನು ನಿಲ್ಲಿಸುವುದು, ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುವುದು, ಮುಟ್ಟು-ಪ್ರಸವ ಕಾಲದಲ್ಲಿ ಹೆಣ್ಣುಮಕ್ಕಳನ್ನು ಊರಹೊರಗಡೆಯಲ್ಲಿ ಇರಿಸುವುದು, ಮುಂತಾದ ಸಮಾಜ ವಿರೋಧಿ ಆಚರಣೆಗಳನ್ನು ನಿಲ್ಲಿಸುವಂತೆ ಸರಕಾರವನ್ನು ಕೇಳಿಕೊಳ್ಳಲಾಗಿದೆ. ಕರ್ನಾಟಕ ಸಮಾಜದ ಪ್ರಗತಿಯ ದೃಷ್ಟಿಯಿಂದ ಇದೊಂದು ಅಪೂರ್ವ ಹೆಜ್ಜೆ.

ಸಂಕೀರ್ಣ ಸಾಂಸ್ಕೃತಿಕ ಸನ್ನಿವೇಶದಲ್ಲಿ...
ಆದರೆ, ಈ ನಿಷೇಧವನ್ನು ಗಡಿಬಿಡಿಯಲ್ಲಿ ಜಾರಿಗೆ ತರಬಾರದು, ಬದಲು ಹಂತ ಹಂತವಾಗಿ ಯೋಚಿಸಿ ಕಾರ್ಯಗತಗೊಳಿಸಬೇಕು. ಮಂಡಲ್‌ ಕಮಿಷನ್‌ ಜಾರಿಗೆ ಬಂದಾಗ, ಸಮಾಜ ವಿದ್ರೋಹಿ ಶಕ್ತಿಗಳು ಅದನ್ನು ಹೇಗೆ ಮಟ್ಟ ಹಾಕಿದವು ಎಂಬುದು ನಮ್ಮ ನೆನಪಿನಲ್ಲಿರಲಿ. ಈ ಲೇಖನವನ್ನು ಓದುತ್ತಿದ್ದಂತೆ ಹಲವರ ಭಾವನೆಗೆ ನೋವಾಗುತ್ತಿರುವುದನ್ನು ನಾನು ಊಹಿಸಬಲ್ಲೆ. ಇವನ್ನು ಹೇಳದಿದ್ದರೆ, ನನ್ನ ಭಾವನೆಗಳಿಗೆ ನೋವಾಗುತ್ತದೆ ಎಂದು ತಿಳಿದುಕೊಳ್ಳುವ ವಿಶಾಲ ಮನೋಭಾವ ಮೌಡ್ಯ ಬಿತ್ತುವವರಲ್ಲಿ ಇಲ್ಲ. ಏನಿದ್ದರೂ ಅನೇಕ ಬಗೆಯ ಸಾಮಾಜಿಕ ಸಂಕೀರ್ಣತೆಗಳ ನಡುವೆ ಬದುಕುವ ನಾವು ಸಾಮಾಜಿಕ ಕ್ಷೊàಭೆಯಾಗದಂತೆ ಈ ನಿಷೇಧವನ್ನು ಅನುಷ್ಠಾನಕ್ಕೆ ತರಬೇಕಾದ್ದು ಅಗತ್ಯ.

ಉದಾಹರಣೆಗೆ ಬಗೆಬಗೆಯ ಮೂಢನಂಬಿಕೆಗಳ ತವರು ಮನೆಯಾಗಿರುವ ಕರಾವಳಿಯ ತುಳುಪ್ರಾದೇಶಿಕ ಪರಿಸರದ  ಸಂಕೀರ್ಣತೆಯನ್ನೇ ಗಮನಿಸೋಣ. ಇಲ್ಲಿನ ಸಂಸ್ಕೃತಿಗೆ ಸುದೀರ್ಘ‌ವಾದಒಂದು ಚರಿತ್ರೆಯಿದೆ, ಹಾಗೆಯೇ ಬಹಳ ಸಂಕೀರ್ಣವಾದ ಒಂದು ವರ್ತಮಾನವೂ ಇದೆ. ಇವೆರಡರ ಹದವಾದ ಮಿಶ್ರಣದಲ್ಲಿ  ತುಳುನಾಡಿನ ನಂಬಿಕೆಗಳು ರೂಪುಗೊಂಡಿವೆ. ಈ ಚರಿತ್ರೆಯ ಜೊತೆಗೆ ತುಳುನಾಡಿನ ಭೌಗೋಳಿಕ ರಚನೆ, ಪ್ರಾಕೃತಿಕ ಸಂಪತ್ತು, ಭೂ-ಶಿಲಾರಚನೆ, ಜಲಸಮೃದ್ಧಿ, ಹವಾಮಾನದ ವೈಪರೀತ್ಯಗಳು ಕೂಡಾ ಅಲ್ಲಿನ ನಂಬಿಕೆಗಳನ್ನು ರೂಪಿಸಿವೆ. ಈ ನಂಬಿಕೆಗಳನ್ನು ಆಧರಿಸಿ ಬದುಕು ಸಾಗಿಸುತ್ತಿರುವ ವಿವಿಧ ಸಮುದಾಯಗಳೆಲ್ಲ ಒಟ್ಟಾರೆಯಾಗಿ ತುಳು ನಂಬಿಕೆಗಳ ಭಾಗವಾಗಿದ್ದಾರೆ. ಕಾರಣ ತುಳುನಾಡಿನ ನಂಬಿಕೆಗಳಿಗೆ ಅಗಾಧವಾದ ಒಂದು ವ್ಯಾಪಕತೆಯೂ, ವೈವಿಧ್ಯವೂ ಪ್ರಾಪ್ತಿಸಿದೆ. ಇಲ್ಲಿನ ಜನಪ್ರಿಯ ಪ್ರಕಾರಗಳಾದ ಭೂತಾರಾಧನೆ, ಯಕ್ಷಗಾನ, ಕಂಬುಳ, ಕೋಳಿಕಟ್ಟ ಮೊದಲಾದುವುಗಳಲ್ಲಿ ಹುದುಗಿರುವ ಮೂಢನಂಬಿಕೆಗಳ ಲೆಕ್ಕ ಇಟ್ಟವರಿಲ್ಲ. ಸಿರಿ ಜಾತ್ರೆಯಲ್ಲಿ ಮಹಿಳೆಯರ ಶೋಷಣೆ ಇಲ್ಲವೇ. ಕಾರಣ, ಭೂತಾರಾಧನೆ, ನಾಗಾರಾಧನೆ ಮೊದಲಾದುವುಗಳು ಮೂಢನಂಬಿಕೆಯ ಒಂದು ಭಾಗವೆಂದು ತಿಳಿದಿದ್ದೂ ಅದನ್ನು ತಿರಸ್ಕರಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ.

ಚರಿತ್ರೆಯುಗದ ಮುಖ್ಯ ಅನ್ವೇಷಣೆ ಎಂದರೆ "ಕಬ್ಬಿಣ'. ತುಳುವರಲ್ಲಿ ಕಬ್ಬಿಣದ ಬಗೆಗೆ ಅನೇಕ ಬಗೆಯ ನಂಬಿಕೆಗಳಿವೆ. "ಭೂತಾರಾಧನೆಯ ಗುಡಿಗಳಲ್ಲಿ ಒಂದಾದರೂ ಕಬ್ಬಿಣದ ತುಂಡು ಇರಿಸಬೇಕು' ಎಂಬ ನಂಬಿಕೆಯು ಲೋಹಯುಗದ ಜನಸಂಸ್ಕೃತಿಯ ಕಡೆ ನಮ್ಮ ಗಮನ ಸೆಳೆಯುತ್ತದೆ. "ಕಾಯಿಸಿದ ಕಬ್ಬಿಣವನ್ನು ನೀರಲ್ಲಿ ಮುಳುಗಿಸಿ, ಆ ನೀರನ್ನು ಮಗುವಿನ ಮೇಲೆ ಹಾಯಿಸಿದರೆ ಮಗುವಿನಲ್ಲಿ ಸೇರಿಕೊಂಡಿದ್ದ ವಿಚ್ಛಿದ್ರಕಾರೀ ಶಕ್ತಿಗಳು ಓಡಿ ಬಿಡುತ್ತವೆ' ಎಂಬ ನಂಬಿಕೆಯೂ ಬಹಳ ಪ್ರಾಚೀನವಾದದ್ದು. ಮಕ್ಕಳಿಗೆ ಮತ್ತು ದನಗಳಿಗೆ ಖಾಯಿಲೆ ಬಂದರೆ ಕಾಯಿಸಿದ ಕಬ್ಬಿಣದಲ್ಲಿ ಬರೆ ಹಾಕಬೇಕು, ಮುಟ್ಟಿನ ಹೆಂಗಸಿನ ಬಳಿ ಯಲ್ಲಿ ಕಬ್ಬಿಣದ ತುಂಡು ಇರಬೇಕು, ಸೊಂಟದಲ್ಲಿ ಕಬ್ಬಿಣದ ಚೂರು ಇದ್ದರೆ ಭೂತ ಕಾಟ ಇರುವುದಿಲ್ಲ ಎಂಬಿತ್ಯಾದಿ ನಂಬಿಕೆಗಳು ಲೋಹ ಯುಗದಷ್ಟು ಪ್ರಾಚೀನ ವಾದುವುಗಳು. ನಾಗರೀಕತೆ ಬೆಳೆದಂತೆ ಹುತ್ತ, ಕಲ್ಲು, ಮರ, ಕಬ್ಬಿಣಗಳ ಸ್ಥಾನದಲ್ಲಿ ಮಾಡ, ಗುಡಿ, ಗುಂಡ, ಗೋಪುರ, ಚಿನ್ನ ಕಾಣಿಸಿಕೊಡವು. ಹೂವು, ತೆಂಗಿನಗರಿ ಹಾಳೆ ಮತ್ತಿತರ ಜಾಗಗಳಲ್ಲಿ ಚಿನ್ನ, ಬೆಳ್ಳಿ, ಕಂಚುಗಳು ಕಾಣಿಸಿಕೊಂಡವು. ಇಷ್ಟಿದ್ದರೂ ಅವುಗಳ ಕುರಿತಾದ ನಂಬಿಕೆಗಳೇನೂ ಬದಲಾಗಲಿಲ್ಲ.

ಕರ್ನಾಟಕದಲ್ಲಿ ವಿವಿಧ ಸಮುದಾಯಗಳು ಒಟ್ಟಿಗೇ ವಾಸಿಸುತ್ತಿದ್ದು, ಪರಸ್ಪರ ಭಿನ್ನ ಭಿನ್ನ ನಂಬಿಕೆಗಳನ್ನು ಸೃಷ್ಟಿಸಿಕೊಂಡಿವೆ. ಇವು ತುಂಬ ಸೂಕ್ಷ್ಮವಾಗಿದ್ದು ನಾವಿದನ್ನು ಬಹಳ ಜಾಗರೂಕತೆಯಿಂದ ಅರ್ಥಮಾಡಿಕೊಂಡು ಮುಂದಡಿ ಇಡಬೇಕಾಗಿದೆ.

ನಮ್ಮ ನಂಬಿಕೆ-ಮೂಢನಂಬಿಕೆಗಳು ಕೂಡಾ ಕನ್ನಡ ಸಂಸ್ಕೃತಿಗೆ ಬದ್ಧವಾಗಿದ್ದು ಅವನ್ನು ರೂಪಿಸುವ, ನಿಯಂತ್ರಿಸುವ ಹಾಗೂ ಮುನ್ನಡೆಸುವ ಶಕ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ನಿಷೇಧ ಸಾಮಾಜಿಕ ಕ್ಷೊàಭೆಗಳಿಗೆ ಕಾರಣವಾಗಬಾರದು. ರಾಜ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯು ಮೂಢನಂಬಿಕೆಗಳನ್ನು ಶಿಥಿಲಗೊಳಿಸುತ್ತಲೇ ಹೋಗುತ್ತಿರಬೇಕು. ಏನೇ ಇರಲಿ, ಹೊಸ ಹೆಜ್ಜೆ ಇರಿಸಲಾಗಿದೆ. ಅಡಿ ತಪ್ಪದಂತೆ ನೋಡಿಕೊಳ್ಳಬೇಕಾದ್ದು ನಮ್ಮೆಲ್ಲರ ಕರ್ತವ್ಯ.
Published in Udayavani daily

No comments: