ಭಾರತದ ದಶದಿಕ್ಕುಗಳ ಕಥನಗಳು
ಭಾರತದ
ದಶದಿಕ್ಕುಗಳ ಲೆಕ್ಕಾಚಾರದಲ್ಲಿ ಪೂರ್ವ, ಪಶ್ಚಿಮ,
ಉತ್ತರ, ದಕ್ಷಿಣ, ಈಶಾನ್ಯ, ನೈಋತ್ಯ, ವಾಯುವ್ಯ, ಆಗ್ನೇಯ ಗಳ ಜೊತೆಗೆ ಆಕಾಶ ಮತ್ತು ಪಾತಾಳವೂ ಸೇರಿಕೊಂಡಿದೆ.
ಅಂದರೆ ಭಾರತವು ಬರೇ ವಿಸ್ತಾರವನ್ನು ಮಾತ್ರ ಪರಿಗಣಿಸದೆ, ಅದರ ಎತ್ತರ ಮತ್ತು ಆಳವನ್ನೂ ಒಳಗೊಳ್ಳುತ್ತದೆ.
ಈ ಅರ್ಥದಲ್ಲಿ ಪ್ರಾಚೀನ
ಭಾರತವು ಅಲ್ಲಿರುವ ಮಹಾಕಾವ್ಯಗಳ ಹಾಗೇ ಬಹು ವಿಸ್ತಾರವೂ, ಆಳವೂ, ಗಂಭೀರವೂ ಆಗಿದೆ. ಪಂಪನು ತನ್ನ
ಕಾವ್ಯದ ಬಗ್ಗೆ ಹೇಳಿಕೊಂಡ ‘ಇದು ನಿಚ್ಚಂ ಪೊಸತು ಅರ್ಣವಂಬೋಲ್ ಅತಿ ಗಂಭೀರಂ’ ಎಂಬ ಮಾತು
ಭಾರತ ದೇಶಕ್ಕೂ ಅನ್ವಯವಾಗುತ್ತದೆ. ಹಾಗೆ ನೋಡಿದರೆ, ಇಡೀ ದೇಶವೇ ಒಂದು
ಮಹಾಕಾವ್ಯದ ಹಾಗೆ ಇತ್ತು. ಮಹಾಭಾರತ ಕಾವ್ಯವನ್ನು
ಅನೇಕರು ಮತ್ತೆ ಮತ್ತೆ ಬರೆದಂತೆ ಭಾರತ ದೇಶವನ್ನೂ ಅನೇಕರು ಮತ್ತೆ ಮತ್ತೆ ಬರೆದರು. ಹಾಗೆ
ಬರೆದವರಲ್ಲಿ ಉದಾತ್ತ ವ್ಯಕ್ತಿಗಳಿದ್ದರು., ಚಾರಿತ್ರ್ಯವಂತರಿದ್ದರು, ದೈವಭಕ್ತರಿದ್ದರು, ನಾಸ್ತಿಕರಿದ್ದರು, ಪ್ರತಿನಾಯಕರಿದ್ದರು, ಸಾಮಾನ್ಯರೂ ಇದ್ದರು. ಎಲ್ಲ
ರೀತಿಯ, ಎಲ್ಲ ಮಟ್ಟದ ವ್ಯಕ್ತಿಗಳೂ ಈ ದೇಶವನ್ನು ಕಾಲಕಾಲಕ್ಕೆ ರೂಪಿಸಿದರು. ಆದರೆ ಭಾರತೀಯ ಸಾಹಿತ್ಯವು ಉದಾತ್ತವಾದ
ವ್ಯಕ್ತಿಗಳನ್ನು ಮಾತ್ರ ತನ್ನ ಕಾವ್ಯದ ನಾಯಕರನ್ನಾಗಿಸಿಕೊಂಡು ಕೃತಿ ರಚಿಸಿಕೊಂಡಿದೆ. ಈ ನಾಯಕರ
ಅಸಾಧಾರಣತೆ ಅತ್ಯಂತ ಉಜ್ವಲವಾಗಿ ಪ್ರಕಟವಾಗುವುದು ನಡತೆಗಳಲ್ಲಿ ಹಾಗೂ ಅವರು ಭಾಗವಹಿಸುವ ಮಹಾ
ಯುದ್ಧಗಳಲ್ಲಿ. ಆದರೆ ಯಾವ ಕಾರಣಕ್ಕೂ ನಾಯಕ ಸಮರದಲ್ಲಿ ಸಾಯುವಂತಿಲ್ಲ. ಸಂಸ್ಕೃತ ವಿದ್ವಾಂಸ
ದಂಡಿಯು ( ಕ್ರಿಸ್ತ ಶಕ 650), ‘ ಯಾವ ಕಾರಣಕ್ಕೂ ನಾಯಕನ ವಧೆ ಅಥವಾ ಸಾವನ್ನು ಕಾವ್ಯದಲ್ಲಿ
ತರಬಾರದು; ಪ್ರತಿನಾಯಕನ ವಧೆಯನ್ನು ವರ್ಣಿಸಬೇಕೇ ಹೊರತು ನಾಯಕನ ವಧೆಯನ್ನು ವರ್ಣಿಸಬಾರದು; ಆದರೆ
ಒಂದು ವೇಳೆ ನಾಯಕನು ಅದೇ ಶರೀರದಿಂದ ಪುನಃ ಬದುಕಿಕೊಳ್ಳುವಂಥ ಸಂದರ್ಭವಿದ್ದರೆ ಅವನ, ಎಂದರೆ
ನಾಯಕನ ವಧೆಯನ್ನು ವರ್ಣಿಸಬಹುದು’ ಎನ್ನುತ್ತಾನೆ. ವಿಷ್ಣು ಧರ್ಮೋತ್ತರ ಪುರಾಣ ( ಕ್ರಿಸ್ತ ಶಕ
ಸುಮಾರು 7ನೇ ಶತಮಾನ)ವು ‘ ನಾಯಕಾಭ್ಯುದಯವೇ ಮಹಾಕಾವ್ಯದ ಮುಖ್ಯ ಗುರಿ. ನಾಯಕನ ಸಾವನ್ನು
ವರ್ಣಿಸಬಾರದು, ನಾಯಕ ಎಂದರೆ, ನಮ್ಮೆಲ್ಲರ ಆಸೆ, ಹಾರೈಕೆ, ಆದರ್ಶಗಳ ಪ್ರತೀಕ; ಸತ್‌ಶಕ್ತಿಗಳು
ಗೆದ್ದಂತೆ ತೋರಿಸಬೇಕಾದದ್ದು ಅತ್ಯಂತ ಅಗತ್ಯ. ಆದುದರಿಂದ ನಾಯಕನ ಸೋಲು, ನಮ್ಮೆಲ್ಲ
ಉನ್ನತಾಭೀಪ್ಸೆಗಳ, ಆದರ್ಶಗಳ, ಮೌಲ್ಯಗಳ ಸೋಲು; ಅವನ ಗೆಲವು, ಇವೆಲ್ಲವುಗಳ ಗೆಲುವು’ ಎಂದು
ಉದ್ಘೋಷಿಸುತ್ತಾನೆ. ಮಹಾಕಾವ್ಯದ ನಾಯಕನೇ
ಮಹಾಕಾವ್ಯದ ಕೇಂದ್ರ ಬಿಂದು. ಇತರ ಪಾತ್ರಗಳು, ಆ ಕೃತಿ ರಚಿತವಾದ ಕಾಲದ ಮೌಲ್ಯಗಳ,
ಪ್ರತಿನಿಧಿಗಳೆಂಬಂತೆ ತೋರಿದರೂ, ಅವರೆಲ್ಲರಿಗಿಂತ ಮಿಗಿಲಾಗಿ ನಾಯಕನು, ಆ ಕಾಲದ ಸಮಸ್ತ ಸತ್ವಗಳ
ಆದರ್ಶಗಳ ಪ್ರತೀಕವೆಂಬಂತೆ ತೋರುತ್ತಾನೆ.
ಭಾರತದ ಅತ್ಯುತ್ತಮ ಲೇಖಕರು ತಮ್ಮ ನಾಯಕನ ಸಾವನ್ನು ಬಯಸಲೇ
ಇಲ್ಲ. ನಾಯಕನ ಯುದ್ದೋತ್ಸುಕತೆಯನ್ನೂ ಅವರು ಪ್ರಶ್ನಿಸಿದ್ದಾರೆ. ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಧರ್ಮರಾಯನಿಗೆ
ಪಟ್ಟಾಭಿಷೇಕ ನಡೆಯುವ ಸಂದರ್ಭದಲ್ಲಿ ಚಾರ್ವಾಕನು- ‘ ಕೇವಲ ರಾಗಾಂಧನಾಗಿ, ರಾಜ್ಯಭೋಗದ
ಲಾಲಸೆಯಿಂದ, ಸ್ತ್ರೀ ಬಾಲರಾದಿಯಾಗಿ ಲಕ್ಷಾನುಗಟ್ಟಳೆ ಜನರ ನಾಶ ಮಾಡಿ, ಸತ್ತವರಿಗೆ ಸ್ವರ್ಗ
ಬರುವುದೆಂದು ಸಾಯುವುದಕ್ಕೆ ಪ್ರೋತ್ಸಾಹಿಸಿದ ಮಹಾ ಪಾಪಿಷ್ಠನೆಂದು’ ಧರ್ಮರಾಯನ್ನು
ದೂಷಿಸುತ್ತಾನೆ. ಧರ್ಮ ಪುತ್ರ ಧರ್ಮರಾಯನು ಈ ಪ್ರಶ್ನೆಯಿಂದ ವಿಚಲಿತನಾಗುತ್ತಾನೆ. ಆದರೆ ಈ
ಪ್ರಶ್ನೆಯನ್ನು ಸಹಿಸಲಾರದ ಬ್ರಾಹ್ಮಣರು ಶಾಪದಿಂದ
ಚಾರ್ವಾಕನನ್ನು ಕೊಂದೇ ಬಿಡುತ್ತಾರೆ. ಕನ್ನಡದ
ಅತ್ಯಂತ ಮಹತ್ವದ ಕವಿಯಾದ ರನ್ನನೂ ‘ ನೀಮಿಲ್ಲದೆ ಅಜ್ಜ, ಬಿಲ್ಲಗುರುಗಳ್ ತಾಮಿಲ್ಲದಾ, ಕರ್ಣನಿಲ್ಲದೆ,
ದುಶ್ಯಾಸನನನಿಲ್ಲದೆ ಆರೊಡನೆ ರಾಜ್ಯಂಗೈವೆ? ಆರ್ಗೆನ್ನ ಸಂಪದಮಂ ತೋರುವೆ? ಆರ್ಗೆ ತೋರಿ ಮೆರೆವೆಂ
ನಾನಾ ವಿನೋದಂಗಳಂ? ಎಂಬ ಮಾತನ್ನು ಕೌರವನ ಬಾಯಿಂದ ಆಡಿಸುತ್ತಾನೆ.
ಕನ್ನಡ ಸಾಹಿತ್ಯವನ್ನು ಅದರ ಮೊದಲ
ಹಂತದಲ್ಲಿ ಅದ್ಭುತವಾಗಿ ಬೆಳೆಸಿದ ಜೈನರು ಮೂಲತ: ಅಹಿಂಸಾವಾದಿಗಳು. ಆದರೆ ಅವರು ಬರೆಯುವ
ಕಾಲದಲ್ಲಿ ಕರ್ನಾಟಕವು ಅನೇಕ ಯುದ್ಧಗಳಲ್ಲಿ ತೊಡಗಿಕೊಂಡಿತ್ತು. ಅದಕ್ಕೆ ವಿಮರ್ಶಕರು ಆ ಕಾಲವನ್ನು
ವೀರಯುಗವೆಂದು ಕರೆದರು. ಈ ಯುಗದಲ್ಲಿ ಕಲಿಯೂ ಕವಿಯೂ ಆಗಿದ್ದ ಪಂಪನು ತನ್ನ ಆದಿ ಪುರಾಣದಲ್ಲಿ
ಅಹಿಂಸೆಯನ್ನು ಸಾರುವ ಉದಾತ್ತ ನಾಯಕನ್ನು ಸೈಷ್ಟಿಸಿದ. ಮೊದಲನೆಯ ತೀರ್ಧ೦ಕರ ವೃಷಭನಾಥನ ಪ್ರಥಮ
ಪುತ್ರನಾದ ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ.
ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೊಹಿತರು ಹೇಳಿದರು. ಕಾಣಿಕೆಗಳೊಡನೆ ಬರುವ೦ತೆ
ತಮ್ಮ೦ದಿರಿಗೆ ಹೇಳಿಕಳಿಸಿದಾಗ ಬಾಹುಬಲಿಯನ್ನುಳಿದು ಇತರರು ವೃಷಭನಾಥರ ಬಳಿ ಹೋಗಿ ದೀಕ್ಷೆ
ಪಡೆದರು. ಬಾಹುಬಲಿಯು ತ೦ದೆಯ ಹೊರೆತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ
ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆ೦ದು ಭರತನ
ದೂತರಿಗೆ ಹೇಳಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು
ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ
ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ.
ಆದ್ದರಿ೦ದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎಂದು
ತೀರ್ಮಾನಿಸಿದರು.
ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು
ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ.
ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ
ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು
ಹೀಗೆ ಮಾಡಬಾರದೆ೦ದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು
ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆನಿ೦ತಿತು. ಬಾಹುಬಲಿ
ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉ೦ಟಾಗಿ ರಾಜ್ಯವನ್ನು
ತೊರೆದು ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗುತ್ತಾನೆ. ಬಹುಶ: ಯುದ್ಧದ ನಿಷ್ಪಲತೆಯನ್ನು ಮತ್ತು ಸಾವಿನ
ಅನಾಹುತಗಳನ್ನು ಇದಕ್ಕಿಂತ ಚೆನ್ನಾಗಿ ಹೇಳಲು ಸಾಧ್ಯವಿಲ್ಲವೆಂದು ತೋರುತ್ತದೆ. ಅರಸನ ಗೆಲುವಿನಿಂದ
ಮಿಗಿಲಾಗಿ ಗೆದ್ದವನ ತ್ಯಾಗಕ್ಕೆ ಸಂಭ್ರಮಿಸಿದ ನಾಡಿದು.
ಬಾಹುಬಲಿಯ ತ್ಯಾಗ ದೌರ್ಬಲ್ಯಮೂಲವಾದುದಲ್ಲ. ಅವನದು ಹೇಡಿಯ ಕ್ಷಮೆಯಲ್ಲ. ನಿಜವಾದ
ಅಹಿಂಸೆಯನ್ನು ಅವನ ಅಪೂರ್ವ ವರ್ತನೆಯಲ್ಲಿ ಕಾಣುತ್ತೇವೆ. ವೈರವು ವೈರದಿಂದ ಶಾಂತವಾಗುವುದಿಲ್ಲ
ಎಂಬ ಸತ್ಯವನ್ನು ಪಂಪ ಕೂಗಿ ಹೇಳುತ್ತಾನೆ.
ಪಂಪ ಬರೆದ ಸುಮಾರು 600 ವರ್ಷಗಳ
ಆನಂತರ ರತ್ನಾಕರವರ್ಣಿಯೂ ಯುದ್ಧದ ಹಾಗೂ ಸಾವಿನ ಅನಾಹುತಗಳ ಕುರಿತು ತನ್ನ ಭರತೇಶ ವೈಭವದಲ್ಲಿ ಬರೆದ. ಯುದ್ಧ ಮನುಕುಲಕ್ಕೇ ಮಾರಕವಾದುದು. ಅತಿ ಘೋರ, ಯುದ್ಧವು
ಸೋಲು ಗೆಲುವನ್ನಷ್ಟೆ ತರುವುದಿಲ್ಲ. ಜೊತೆಗೆ ಸಾವು ನೋವುಗಳನ್ನೂ ತರುತ್ತದೆ. ಬೆವರು ಬಸಿದು ಕಟ್ಟಿಕೊಂಡ
ಮನೆಗಳು ನಾಶವಾಗುತ್ತವೆ. ಊರು, ಸಮಾಜ, ರಾಜ್ಯ ಕೋಶ, ಯುವಕರು, ಮಹಿಳೆಯರು, ಮಕ್ಕಳು ಹೀಗೆ ಎಲ್ಲವನ್ನೂ
ಯುದ್ಧ ನಿರ್ನಾಮ ಮಾಡುತ್ತದೆ. ರಕ್ತಪಾತ, ಜೀವಹಾನಿ ಎರಡೂ ಕಡೆಯೂ ನಡೆಯುತ್ತದೆ. ಜನರು ಮಾನಸಿಕವಾಗಿ,
ದೈಹಿಕವಾಗಿ ಹಾಗೂ ಸಾಮಾಜಿಕವಾಗಿ ಕುಸಿದು ಹೋಗುತ್ತಾರೆ. ಇಂಥ ಭೀಕರ ಪರಿಸ್ತಿತಿಯಲ್ಲಿ ಸಮರವೇ ಇಲ್ಲದ ಲೋಕಕ್ಕಾಗಿ ರತ್ನಾಕರ ಕನವರಿಸುತ್ತಾನೆ. .
ಹೀಗೆ ಕಾವ್ಯಗಳು ಮತ್ತು ಕಾವ್ಯಮೀಮಾಂಸಕರು ‘ಉದಾತ್ತ ನಾಯಕ’ನ ಬಗೆಗೆ
ತುಂಬ ಉದಾರವಾಗಿ ಸದಾ ಬರೆದಿರುವ ನೆಲದಲ್ಲಿಯೇ 20ನೇ ಶತಮಾನದ ಉದಾತ್ತ ನಾಯಕ ಗಾಂಧಿಯ
ಕೊಲೆಯಾಯಿತು. ಈ ಕೊಲೆಯೇ ಭಾರತದ ಬಹುದೊಡ್ಡ ಸಾಂಸ್ಕೃತಿಕ ಪರಂಪರೆಯ ಪತನಮುಖತೆಯನ್ನು
ಸಂಕೇತಿಸುತ್ತದೆ. ನಾಯಕನ ಸಾವಿನ ಆನಂತರ ನಾಯಕನ ಕೊಲೆಗಾರನ್ನು ನಾಯಕನ ಹಂತಕ್ಕೆ
ಏರಿಸಲಾಯಿತು. ಹುಸಿ ನಾಯಕನ ಅಥವಾ
ಪ್ರತಿನಾಯಕನೇ ದೇಶಕ್ಕೆ ಮಾದರಿ ಎಂಬಂತೆ ಜನರನ್ನು
ನಂಬಿಸುವ ಕೆಲಸಗಳು ನಡೆದುವು. ಈ ಕುರಿತು ಯಾವ ಗಂಭೀರವಾದ ವಾಗ್ವಾದಗಳೂ
ಸಾಧ್ಯವಾಗದ ವಾತಾವರಣವನ್ನೂ ನಿರ್ಮಾಣ ಮಾಡಲಾಯಿತು. ಈ ಬಗೆಯ ಬೆಳವಣಿಗೆಗಳು, ಅಧಿಕಾರ ರಾಜಕಾರಣಕ್ಕೆ
ಬೇಕಾದ ಅನುಕೂಲಗಳನ್ನೇನೋ ಸೃಷ್ಟಿಸಿಕೊಟ್ಟವು. ಆದರೆ ಮಹಾಕಾವ್ಯ, ಸಂಸ್ಕೃತಿ, ರಾಷ್ಟ್ರ್ರೀಯತೆಯಂಥ ಮಹತ್ವದ ವಿಷಯಗಳ
ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲಾರದೇ ಹೋದುವು. ರಾಷ್ಟ್ರ ಪ್ರೇಮದ ಹೆಸರಲ್ಲಿ ದೇಶದಾದ್ಯಂತ
ನಡೆಯುತ್ತಿರುವ ಉನ್ಮಾದದ ಚರ್ಚೆಗಳು ಮತ್ತು ಹುಟ್ಟಿಸಲಾಗುತ್ತಿರುವ ಭಯಾನಕ ಘೋಷಣೆಗಳು, ಮಹಾಕಾವ್ಯದಲ್ಲಿ
ಪ್ರತಿನಾಯಕನನ್ನು ಸೃಷ್ಟಿಸುವ ಕೆಲಸದಂತೆ ತೋರುತ್ತದೆ.
ಹೀಗೆ
ಭಾರತದ ಕಾವ್ಯಗಳು ಸೃಷ್ಟಿಸಿದ ಉದಾತ್ತ ಕಲ್ಪನೆಗಳನ್ನು ವಸಾಹತು ಕಾಲ ಸೃಷ್ಟಿಸಿದ ರಾಷ್ಟ್ರೀಯತೆಗೆ
ಜೋಡಿಸಿ, ಮುಂದಿನ ದಿನಗಳಲ್ಲಿ ಹಲವು ಬಗೆಯ ಗೊಂದಲಗಳನ್ನು ಹುಟ್ಟು ಹಾಕಲಾಯಿತು. ರಾಮಾಯಣ ಕಾವ್ಯದ ಉದಾತ್ತ
ನಾಯಕ, ಮರ್ಯಾದಾ ಪುರುಷೋತ್ತಮನ್ನು ಅಯೋಧ್ಯೆಗೆ ಕಟ್ಟಿಹಾಕಿ ರಾಜಕೀಯಗೊಳಿಸಲಾಯಿತು. ಭಾರತದಾದ್ಯಂತ
ನೂರಾರು ಭಾಷೆಗಳಲ್ಲಿ, ನೂರಾರು ಪ್ರದೇಶಗಳಲ್ಲಿ ಹುಟ್ಟಿ ಬಹುರೂಪಿಯಾಗಿದ್ದ ರಾಮ 1992ರ ಆನಂತರ ಒಂದೇ ಊರಿಗೆ, ಒಂದೇ ಕಥನಕ್ಕೆ ಸೀಮಿತವಾದ. 1992ರ ಆನಂತರ
ಹುಟ್ಟಿದ ಭಾರತೀಯರಿಗೆ ಈ ಏಕರೂಪೀ ಕಥನ ಮಾತ್ರ ತಿಳಿದಿದೆ.
ಈ
ಏಕರೂಪೀ ಕಥನಗಳು ಬೆಳೆದು ಬಂದ ಬಗೆಯೂ ಕುತೂಹಲಕರವಾಗಿದೆ. ಭಾರತೀಯ ಸಂಸ್ಕೃತಿಗೆ ಸುದೀರ್ಘವಾದ ಇತಿಹಾಸ
ಇರುವುದು ನಿಜ. ವೇದಕಾಲೀನ ಭಾರತ ಅಥವಾ ಪುರಾಣ ಕಾಲೀನ ಭಾರತವು ತುಂಬ ಹಳೆಯದೇ ಹೌದು. ಆದರೆ ಈಗ ರಾಷ್ಟ್ರೀಯ
ಕಾವ್ಯಗಳೆಂದು ಕರೆಯಿಸಿಕೊಳ್ಳುತ್ತಿರುವ ರಾಮಾಯಣ, ಮತ್ತು ಮಹಾಭಾರತಗಳು ಎಂದಿನಿಂದ ‘ರಾಷ್ಟ್ರೀಯ ಕಾವ್ಯ’ಗಳಾದುವು?
ನಮ್ಮಲ್ಲಿ ರಾಷ್ಟ್ರೀಯತೆಯ ಪ್ರಜ್ಞೆ ಮೂಡಿದ್ದು ಎಂದಿನಿಂದ?
ಆದಿ
ಶಂಕರರು ಕೇರಳದ ಕಾಲಟಿಯಿಂದ ಉತ್ತರದ ಕಾಶ್ಮೀರದ ವರೆಗೆ ಓಡಾಡಿದ್ದರು. ವಾಲ್ಮೀಕಿಗೆ ಸಾಂಸ್ಕೃತಿಕ ಭಾರತದ
ಬಗ್ಗೆ ಒಂದು ಕಲ್ಪನೆಯಿತ್ತು. ಕುರುಕ್ಷೇತ್ರ ಯುದ್ಧದಲ್ಲಿ ಬಹುಮಟ್ಟಿಗೆ ಇಡೀ ಭಾರತವೇ ಪಾಲ್ಗೊಂಡಿತ್ತು.
ಬುದ್ಧನ ಅನುಯಾಯಿಗಳು ಭಾರತದಾದ್ಯಂತ ಹರಡಿಕೊಂಡಿದ್ದರು. ಕನ್ನಡದ ಮೊದಲ ಗದ್ಯ ಕೃತಿ ವಡ್ಡಾರಾಧನೆಯಲ್ಲಿ
( ಕ್ರಿಸ್ತ ಶಕ 890) ಬರುವ ಭದ್ರಬಾಹು ಭಟಾರರ ಕತೆಯ
ಪ್ರಕಾರ ಬಿಹಾರದಲ್ಲಿ 12 ವರ್ಷಗಳ ಕಾಲ ಕ್ಷಾಮ ಬಂದಾಗ ಸಂಪ್ರತಿ ಚಂದ್ರಗುಪ್ತರು ಕರ್ನಾಟಕದ ಶ್ರವಣ
ಬೆಳಗೊಳದಲ್ಲಿ ಬಂದು ನೆಲೆಸಿದರು. ಹೀಗೆ ಸಾಂಸ್ಕೃತಿಕ
ಬೃಹದ್ಭಾರತವು ವಿಸ್ತಾರವಾಗಿ ಬೆಳೆದಿತ್ತು. ಆದರೆ ಅಷ್ಟೇ ಸುದೀರ್ಘವಾದ ಚರಿತ್ರೆ ಭಾರತದ ರಾಷ್ಟ್ರೀಯತೆಗೆ
ಇಲ್ಲ. ಏಕೆಂದರೆ ಮೇಲೆ ಹೇಳಿದ ಭಾರತೀಯ ಸಂಸ್ಕೃತಿಗೆ
ಆಯಾ ಕಾಲದ ರಾಜಕೀಯ ಆಡಳಿತಗಳೊಂದಿಗೆ ಯಾವ ಸಂಬಂಧವೂ ಇರಲಿಲ್ಲ. ನೂರಾರು ರಾಜ್ಯಗಳ ನಡುವೆ ಹಂಚಿಹೋಗಿದ್ದ
ಭಾರತದಲ್ಲಿ ಕುರುಗಳು ಪಾಂಚಾಲರೊಂದಿಗೆ ದ್ವೇಷ ಸಾಧಿಸುತ್ತಿದ್ದರು. ಉತ್ತರ ಭಾರತದ ಅನೇಕ ಅರಸರು ಗಂಗಾ
ಯಮುನಾ ನಡುವಣ ಫಲವತ್ತಾದ ಭೂಮಿಯ ಒಡೆತನಕ್ಕಾಗಿ ನಿರಂತರವಾಗಿ ಹೋರಾಡುತ್ತಿದ್ದರು. ಚೋಳರು ಕನ್ನಡದ
ತಿರುಳಾಗಿದ್ದ ಕೊಪಣ ( ಕೊಪ್ಪಳ) ದಲ್ಲಿ ನೆಲೆ ಊರಿದ್ದರು. ಚಾಲುಕ್ಯರು ಉತ್ತರದ ಹರ್ಷವರ್ಧನನ್ನು ನರ್ಮದಾ ತಟದಲ್ಲಿ
ಸೋಲಿಸಿದ್ದನ್ನು ಕನ್ನಡಿಗರು ಸಂಭ್ರಮಿಸುತ್ತಾರೆ. ಹೀಗೆ ಬೇರೆ ಬೇರೆ ಸಂಸ್ಥಾನಗಳನ್ನು ಕಟ್ಟಿಕೊಂಡು
ಆಡಳಿತ ಮಾಡುತ್ತಿದ್ದ ಅರಸರನ್ನು ಸಮಗ್ರ ಭಾರತದ ಪ್ರಜ್ಞೆಗೆ ಅನುಸಂಧಾನಗೊಳಿಸುವ ಯಾವ ಪ್ರಕ್ರಿಯೆಗಳೂ
ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ಬರುವವರೆಗೆ ನಡೆದೇ ಇರಲಿಲ್ಲ. ಭಾರತೀಯರ ಸಾಂಸ್ಕೃತಿಕ ಪ್ರಜ್ಞೆಗೆ
ಅಂದಂದಿನ ರಾಜಕೀಯ ರಚನೆಗಳೊಂದಿಗೂ, ರಾಜಕೀಯ ರಚನೆಗಳು ನಿರ್ವಚಿಸುತ್ತಿದ್ದ ಅನಿಶ್ಚಿತ ಭೌಗೋಳಿಕ ಪ್ರಜ್ಞೆಗೂ
ಯಾವುದೇ ಸಂಬಂಧ ಇರಲಿಲ್ಲ. ಹೆಚ್ಚು ಕಡಿಮೆ ವಸಾಹತು ಕಾಲದವರೆಗೂ ಈ ಮೂರೂ ಪ್ರಜ್ಞೆಗಳ ನಡುವಿನ ಅಂತರ
ಹಾಗೆಯೇ ಉಳಿದುಕೊಂಡು ಬಂದಿತ್ತು. ರಾಜಕೀಯ ಅಸ್ಮಿತೆ ಮತ್ತು ದೇಶಭಕ್ತಿ ಎನ್ನುವುದು ಪ್ರಾದೇಶಿಕತೆಯ
ಮಿತಿಯೊಳಗೇ ಇದ್ದುವು. ಹಾಗೆಯೇ ಸಾಂಸ್ಕೃತಿಕ ಎಲ್ಲೆಗಳು ಆ ಕಾಲದ ರಾಜಕೀಯ ಎಲ್ಲೆಗಳನ್ನು ಮೀರಿದ್ದುವು.
ಅಂದರೆ ಭಾರತೀಯರ ಸಾಂಸ್ಕೃತಿಕ ಪರಿಕಲ್ಪನೆಯು ಇಂದು
ನಾವು ಭಾವಿಸುವ ರಾಷ್ಟ್ರೀಯತೆಯಾಗಿರಲಿಲ್ಲ. ಐತಿಹಾಸಿಕವಾಗಿ ಇಲ್ಲಿ ಸಣ್ಣ ಸಣ್ಣ ಸಮುದಾಯಗಳು ತಮ್ಮದೇ
ಸ್ವತಂತ್ರ ಜೀವನ ಕ್ರಮಗಳನ್ನು ಹೊಂದಿದ್ದು, ಅವುಗಳೇ ಭಾರತವಾಗಿತ್ತು ಎಂಬುದನ್ನು ನಾವು ಮರೆಯಬಾರದು.
ರಾಜಕೀಯವಾಗಿ
ಸಮಗ್ರವಾಗಿರದ ಭಾರತವು ವಸಾಹತು ಶಕ್ತಿಗಳಿಗೆ ಒಂದು ಸಮಸ್ಯೆಯಾಗಿತ್ತು. ಸುಮಾರು ಐದು ನೂರು ವರ್ಷಗಳ
ಹಿಂದೆ ಬ್ರಿಟಿಷರು ಭಾರತಕ್ಕೆ ಕಾಲಿರಿಸಿದಾಗ ಅವರಿಗೆ ಇಲ್ಲಿ ಕಂಡದ್ದು ಇಲ್ಲಿನ ಅಪಾರ ಸಾಂಸ್ಕೃತಿಕ
ವೈವಿಧ್ಯ, ಅನೇಕ ಭಾಷೆಗಳು, ಸಣ್ಣ ಸಣ್ಣ ಸಮುದಾಯಗಳು, ಆಚರಣೆಗಳು, ಮತ್ತು ಅಸಾಮಾನ್ಯ ಭೌಗೋಳಿಕ ವ್ಯತ್ಯಾಸ.
ಈ ವೈವಿಧ್ಯಗಳನ್ನು ಒಂದು ಬಲವಾದ ಚೌಕಟ್ಟಿನೊಳಗೆ ತಾರದ
ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು
ಅವರು ಮನಗಂಡು, ಭಾರತವನ್ನು ಯಾವುದಾದರೂ ಒಂದು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಹೆಣಗುತ್ತಿದ್ದರು.
ಸಾಮ್ರಾಜ್ಯಶಾಹೀ ಶಕ್ತಿಗಳಿಗೆ ತಮ್ಮ ಆಳ್ವಿಕೆಯನ್ನು ವಿಸ್ತರಿಸಲು ಹಾಗೂ ಗಟ್ಟಿಗೊಳಿಸಲು ಯಾವಾಗಲೂ
ಒಂದು ವ್ಯಾಕರಣ ಬೇಕಾಗಿರುತ್ತದೆ. ಈ ಧೋರಣೆಯು ಸಾಂಸ್ಕೃತಿಕವಾಗಿ
ಹೇಗೆ ಕೆಲಸ ಮಾಡಿತು ಎಂಬುದನ್ನು ತಿಳಿಯಲು ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಪ್ರಯೋಗಗಳನ್ನು
ಗಮನಿಸಬೇಕು. ಉದಾಹರಣೆಗೆ ಬ್ರಿಟಿಷರು ಬಳಕೆಗೆ ತಂದ ಗ್ರಂಥ ಸಂಪಾದನಾ ಶಾಸ್ತ್ರದಲ್ಲಿ ಲಭ್ಯವಿರುವ ಹಲವು
ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸಲಾಗುತ್ತದೆ. ಹೀಗೆ ಸಿದ್ಧಗೊಳಿಸಿದ ಒಂದು ಪಠ್ಯವೇ ಮುಂದೆ
ಅಧಿಕೃತವಾಗುತ್ತದೆ, ಕಾಲಾಂತರದಲ್ಲಿ ಇತರ ಹಲವು ಪಠ್ಯಗಳು ಮೂಲೆ ಸೇರಿಬಿಡುತ್ತವೆ. ಸಂಸ್ಕೃತಿಯ ಭಿನ್ನ
ರೂಪಗಳನ್ನು ಸಾಮ್ರಾಜ್ಯಶಾಹೀ ಶಕ್ತಿಗಳು ಒಂದು ಕೇಂದ್ರಕ್ಕೆ ಜೋಡಿಸುವ ಕೆಲಸ ಮಾಡಿದಾಗ ರಾಷ್ಟ್ರೀಯತೆಯ
ಪರಿಕಲ್ಪನೆ ರೂಪುಗೊಳ್ಳಲು ಆರಂಭವಾಗುತ್ತದೆ. ಈ ಅರ್ಥದಲ್ಲಿ ರಾಷ್ಟ್ರೀಯತೆಯು ಒಂದು ಆಧುನಿಕ ಸೃಷ್ಟಿ.
ಭಾರತದ ಮಟ್ಟಿಗೆ ಅದು ಬ್ರಿಟಿಷ್ ವಸಾಹತು ಶಕ್ತಿಗಳ ಕಾಲದಲ್ಲಿ ಹುಟ್ಟಿಕೊಂಡದ್ದು.
ಈ
ರಾಷ್ಟ್ರೀಯತೆಯನ್ನು ಸಮರ್ಥಿಸಲು ಸಂಸ್ಕೃತದಲ್ಲಿ ಬರೆಯಲಾದ ಪಠ್ಯಗಳನ್ನು ಆಧರಿಸುವುದು ಈಚಿನ ಕ್ರಮ.
ಈ ಕ್ರಮದ ಆರಂಭವೂ ವಸಾಹತು ಕಾಲದಲ್ಲಿಯೇ ಆಯಿತು. ಲಿಖಿತ ಪಠ್ಯಗಳನ್ನು ಆಧರಿಸಿ ಭಾರತೀಯ ಸಂಸ್ಕೃತಿಯ
ಬಗ್ಗೆ ಗ್ರಂಥಗಳನ್ನು ಬರೆಯಲು ಆರಂಭಿಸಿದ ಬ್ರಿಟಿಷರಿಗೆ ಸಹಾಯಕರಾಗಿದ್ದುದು ಉದೀಯಮಾನ ವಿದ್ಯಾವಂತ
ವರ್ಗಕ್ಕೆ ಸೇರಿದ ಬ್ರಾಹ್ಮಣರು. ಅಂದರೆ ಭಾರತದ ಲಿಖಿತ ಚರಿತ್ರೆಯನ್ನು ವಸಾಹತು ಶಕ್ತಿಗಳು ಮತ್ತು
ಬ್ರಾಹ್ಮಣರು ಒಟ್ಟು ಸೇರಿ ಬರೆದರು. ಇದನ್ನೆ ಇವತ್ತು ಅಧಿಕೃತ ಚರಿತ್ರೆ ಎಂದು ನವ ರಾಷ್ಟ್ರೀಯವಾದಿಗಳು
ನಮ್ಮ ಮೇಲೆ ಹೇರುತ್ತಿದ್ದಾರೆ.
ಈ ವಾತಾವರಣದಿಂದ ಸ್ವಲ್ಪ ಬಿಡಿಸಿಕೊಂಡು ನಮ್ಮ ದೇಶವನ್ನು ನಾವು
ಮತ್ತೊಮ್ಮೆ ನೋಡಿಕೊಳ್ಳಬೇಕಾಗಿದೆ. ಕಳೆದ ಸುಮಾರು 20 ವರ್ಷಗಳಿಂದ ನಾನು ಉತ್ತರ ಭಾರತದಲ್ಲಿ ಓಡಾಡುತ್ತಿದ್ದೇನೆ.
ಅಲ್ಲಿನ ಮೌಖಿಕ ನಿರೂಪಣೆಗಳನ್ನು ಅರ್ಥ ಮಾಡಿಕೊಳ್ಳಲು ಹಿಂದಿ ಭಾಷೆಯ ಪ್ರಾದೇಶಿಕ ಪ್ರಬೇಧಗಳು ಒಂದು
ದೊಡ್ಡ ತೊಡಕಾದರೂ ಪಂಡ್ವಾನಿ, ಪಾಂಡವಲೀಲಾ ಮೊದಲಾದ ಪ್ರದರ್ಶನಗಳನ್ನು ಕಂಡು ಸಂತಸ ಪಟ್ಟಿದ್ದೇನೆ.
ಹಿಮಾಲಯದ ತಪ್ಪಲಿನಲ್ಲಿರುವ ಜನರಿಗೆ ಮಹಾಭಾರತ ಎಂದರೆ ಅದು ಹಿಡಿಂಬೆಯ ಕತೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ
ಹಿಡಿಂಬಾ ದೇವಸ್ಥಾನವೂ ಇದೆ. ಈಗಿನ ಉತ್ತರಾ ಖಂಡದಾದ್ಯಂತ ಇರುವ ಗಡ್ಡಿ ಬುಡಕಟ್ಟಿನ ಜನರಿಗೆ ಜರಾಸಂಧನೇ
ದೈವ. ಅವರ ನಂಬಿಕೆಯ ಪ್ರಕಾರ ಜರಾಸಂಧನು ಕಲಿಯುಗವನ್ನು ಬಂಧಿಸಿಟ್ಟು, ಜನರನ್ನು ಅನಾಹುತಗಳಿಂದ ರಕ್ಷಿಸಿದ್ದ,
ಆದರೆ ಭೀಮನೆಂಬ ದ್ರೋಹಿಯು ಮೋಸದಿಂದ ಜರಾಸಂಧನನ್ನು ಕೊಂದು ಕಲಿಯುಗವನ್ನು ಸೆರೆಯಿಂದ ಬಿಡಿಸಿದ್ದರಿಂದ
ಈಗ ಕೆಟ್ಟ ಘಟನೆಗಳೆಲ್ಲ ನಡೆಯುತ್ತಿವೆ. ಕಾಂಗ್ರಾ
ಪ್ರದೇಶದಲ್ಲಿ ದೊರೆಯುವ ನಿರೂಪಣೆಗಳ ಪ್ರಕಾರ ಪಾಂಡು ಸತ್ತ 12 ವರ್ಷಗಳ ಆನಂತರ ಕುಂತಿಗೆ ಮಾಂಸ ತಿನ್ನುವ
ಬಯಕೆಯಾಗುತ್ತದೆ. ಆಗ ಭೀಮಾರ್ಜುನರು ಜೊತೆಯಾಗಿ ಬೇಟೆಯಾಡುತ್ತಾರೆ. ಕಥನದ ಮುಂದಿನ ವಿವರಗಳೆಲ್ಲ ಭೀಮಾರ್ಜುನರ
ಬೇಟೆಗೇ ಸೀಮಿತವಾಗಿದೆ. ಈಗಿನ ಹಿಮಾಚಲ ಪ್ರದೇಶದ ಕಿನ್ನೂರ್ ಪ್ರದೇಶದಲ್ಲಿ ಜನಪ್ರಿಯವಾಗಿರುವ ನಿರೂಪಣೆಗಳ
ಪ್ರಕಾರ ಮರಿಗಳೊಡನೆ ಆಡುವ ಮಂಗಗಳನ್ನು ನೋಡಿದ ಕುಂತಿಗೆ ಮಗುವಿನ ಬಯಕೆ ಮೂಡಿ, 12 ವರ್ಷಗಳ ವರೆಗೆ
‘ಋಷಿ ಮಾಮ’ನ ಸೇವೆ ಮಾಡಿ, ಮಕ್ಕಳನ್ನು ಪಡೆಯುತ್ತಾಳೆ. ಇಲ್ಲಿನ ದಲಿತರ ಪ್ರಕಾರ, ಪಾಂಡವರು ಬೆಟ್ಟದ
ಮೇಲೆಯೂ, ಕೌರವರು ಅದೇ ಬೆಟ್ಟದ ಬುಡದಲ್ಲಿಯೂ ವಾಸಿಸುತ್ತಿದ್ದರು. ಪಾಂಡವರಿಗೆ ಒಬ್ಬಳು ತಂಗಿಯೂ ಇದ್ದಳು. ಅವಳೇ ಬೂರಾದೇವಿ. ನೀರಿನ ವಿಷಯದಲ್ಲಿ
ಅವರ ನಡುವೆ ಜಗಳ ಬಂದಾಗ ಸೆಗಣಿಯ ಮನೆಮಾಡಿ ಪಾಂಡವರನ್ನು ಕೊಲ್ಲಲು ಕೌರವ ಪ್ರಯತ್ನಿಸುತ್ತಾನೆ. ಗಢವಾಲದ
ಜನಪ್ರಿಯ ಪಾಂಡವ ಲೀಲಾದಲ್ಲಿ ಐವರು ಪಾತ್ರಧಾರಿಗಳ ಮೇಲೆ ಪಾಂಡವರು ಆವೇಶಿತರಾಗಿ ಜನರನ್ನು ಹರಸುತ್ತಾರೆ.
ಜಮ್ಮು ಪ್ರದೇಶದ ಜನರು ತಮ್ಮನ್ನು ಶಲ್ಯ ಮಹಾರಾಜನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ವನವಾಸದ ಸಂದರ್ಭದಲ್ಲಿ
ಪಾಂಡವರು ಅಲ್ಲಯೇ ತಂಗಿದ್ದರಂತೆ. ಸ್ಥೂಲವಾಗಿ ಉತ್ತರ ಭಾರತೀಯ ಜನಪದರ ಪ್ರಕಾರ ಕೌರವರ ಒಟ್ಟು ಸಂಖ್ಯೆ
60, ಪಾಂಡವರ ಸಂಖ್ಯೆ ಐದು. ಪಾಂಡವರ ತಾಯಿ ಕಾತಮ,
ಕೌರವರ ತಾಯಿ ನಿತಿನಿ. ಭಾರತದ ಈಶಾನ್ಯ ಭಾಗಗಳಿಗೆ ಹೋದರೆ ಅಲ್ಲಿ ಕೌರವನ ಪಕ್ಷದವರೇ ಹೆಚ್ಚು ಪ್ರಸಿದ್ಧರು.
ಭಗದತ್ತ, ಬಾಣಾಸುರ, ರುಕ್ಮ, ಬಭ್ರುವಾಹನರನ್ನು ಅಸ್ಸಾಮಿನ ಜನರು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಬೋಡೋಗಳ ಪ್ರಕಾರ ಕೃಷ್ಣನ ಹೆಂಡತಿ ರುಕ್ಮಿಣಿಯು
ಬೋಡೋ ಕನ್ಯೆ. ಮಧ್ಯಬಾರತದ ಮಹಾಭಾರತ ಕಥನಗಳಲ್ಲಿ ಭೀಮನೇ ನಾಯಕ. ಕೊಂಡ ಬುದಕಟ್ಟಿನ ಜನರಲ್ಲಿ ಬಹಳ ಪ್ರಿದ್ಧವಾಗಿರುವ
‘ಭೀಮ ಸಿದಿ’ ಎಂಬ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹಾರಕ. ಚೆಂದದ ಹುಡುಗಿಯರನ್ನು ನೋಡಿದಾಗ ಆತ
ತನ್ನ ತಂದೆ ಪವನಾರ್ ದೇವನನ್ನು ಪ್ರಾರ್ಥಿಸುತ್ತಾನೆ. ಪವನಾರ್‍ನು ಜೋರಾಗಿ ಬೀಸಿ ಹುಡುಗಿಯರ ಬಟ್ಟೆ
ಹಾರಿಸುತ್ತಾನೆ. ಭೀಮನು ಅಲ್ಲಿ ಮಳೆ ತರುವ ದೈವವೂ ಆಗಿರುವುದು ಇದಕ್ಕೆ ಪೂರಕವಾದ ವಿಚಾರ. ಕೊಂಡರಿಗೆ
ಭೀಮನು ಫಲವಂತಿಕೆಯ ದೈವವೂ ಹೌದು. ಬಿಂಜಾಲ್ ಬುಡಕಟ್ಟಿನವರಿಗೆ ಕೀಚಕನೆಂದರೆ ಇಷ್ಟ.
ದ್ರೌಪದಿ
ಮತ್ತು ಕೃಷ್ಣರ ನಡವಣ ಸಂಬಂಧವೂ ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಕುತೂಹಲ ಹುಟ್ಟಿಸುವ ರೀತಿಯಲ್ಲಿ
ಪ್ರತೀತಗೊಂಡಿದೆ. ಚತ್ತೀಸಗಢ ಪರಿಸರದಲ್ಲಿ ಪ್ರಚಲಿತದಲ್ಲಿರುವ ಪುಟ್ಟ ಕಥನ ಕಾವ್ಯವೊಂದರಲ್ಲಿ ಬಾಣದ
ಮೊನೆಯನ್ನು ಕೃಷ್ಣನು ಹರಿತಗೊಳಿಸುತ್ತಿರುವಾಗ ಕೈಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿಯು ತನ್ನ
ಸೆರಗಿನಿಂದ ಹರಿದ ಬಟ್ಟೆಯ ತುಂಡೊಂದನ್ನು ಕೃಷ್ಣನ ಬೆರಳಿಗೆ ಕಟ್ಟಿ, ರಕ್ತ ಒಸರುವುದನ್ನು ನಿಲ್ಲಿಸುತ್ತಾಳೆ.
ಅದೇ ಪ್ರದೇಶದ ಇನ್ನೊಂದು ನಿರೂಪಣೆಯ ಪ್ರಕಾರ, ಒಮ್ಮೆ ಕೃಷ್ನನು ಪಾಂಡವರೊಡನೆ ಕೆರೆಯೊಂದರಲ್ಲಿ ಈಜುತ್ತಿರುವಾಗ
ಆತನ ಲಂಗೋಟಿ ಕಳೆದು ಹೋಗುತ್ತದೆ. ಪಾಂಡವರು ಸ್ನಾನದ ಆನಂತರ ಮೇಲೆ ಬಂದರೂ ಕೃಷ್ಣ ಬಾರದಾದ.ಆಗ ಪಕ್ಕದ
ಕೆರೆಯಲ್ಲಿ ಗೆಳತಿಯರೊಂದಿಗೆ ಈಜಾಡುತ್ತಿದ್ದ ದ್ರೌಪದಿಗೆ ಅದು ಗೊತ್ತಾಗುತ್ತದೆ. ಅವಳು ಸೆರಗಿನಿಂದ
ಹರಿದ ಸೀರೆಯ ತುಣುಕನ್ನು ಕೃಷ್ಣನೆಡೆಗೆ ಎಸೆಯುತ್ತಾಳೆ. ಅದನ್ನು ಲಂಗೋಟಿ ಮಾಡಿಕೊಂಡ ಕೃಷ್ಣನು ಮೇಲೆ
ಬಂದು-‘ನನ್ನ ಕಷ್ಟಕ್ಕೆ ಆದೆ, ನಿನ್ನ ಕಷ್ಟಕ್ಕೆ ಸಹಾಯ ಮಾಡುತ್ತೇನೆ ‘ ಅನ್ನುತ್ತಾನೆ. ಹೀಗೆ ದ್ರೌಪದಿ
ಕೊಟ್ಟ ಒಂದು ತುಂಡು ಬಟ್ಟೆಯನ್ನು ಮುಂದೆ ಕೃಷ್ಣನು ಅಕ್ಷಯಾಂಬರ ಮಾಡಿ ಕೃತಜ್ಞತೆ ಸಲ್ಲಿಸುತ್ತಾನೆ.
ಏನಿದ್ದರೂ ಬೆರಳು, ರಕ್ತ, ಸೆರಗು ಮತ್ತು ಲಂಗೋಟಿಗಳ ಸುತ್ತ ಹೆಣೆಯಲಾದ ಈ ಕತೆಯು ಮತ್ತಷ್ಟು ವಿಶ್ಲೇಷಣೆಗೆ
ಅರ್ಹವಾದುದು.
ಇವೆಲ್ಲವನ್ನೂ
ಸೂಕ್ಷ್ಮವಾಗಿ ಗಮನಿಸಿದರೆ, ಮಹಾಭಾರತವು ಕೇವಲ ಪಠ್ಯಗಳ ಸಮೂಹವಲ್ಲ, ಬದಲು ಒಂದು ದೊಡ್ಡ ಪರಂಪರೆ ಎಂಬ
ಅಂಶ ತಾನೇ ತಾನಾಗಿ ಪ್ರತೀತಗೊಳ್ಳುತ್ತದೆ. ಮೌಖಿಕ ಮಹಾಭಾರತಗಳು ಆಕಾಶದಲ್ಲಿರುವ ನಕ್ಷತ್ರಗಳ ಹಾಗೆ.ಅವುಗಳನ್ನು
ನಾವು ಎಣಿಸಲಾರೆವು, ಅವುಗಳಿಗೆ ವ್ಯಾಕರಣವನ್ನೂ ಬರೆಯಲಾರೆವು.
ಹೀಗೆ
ಸಾಂಸ್ಕೃತಿಕವಾಗಿ ಭಿನ್ನ ಭಿನ್ನವೂ, ಸೃಜನಶೀಲವೂ ಆಗಿದ್ದ ಭಾರತವು ವಸಾಹತು ಕಾಲದಲ್ಲಿ ತನ್ನ ವೈವಿಧ್ಯಗಳನ್ನು
ಕಳೆದುಕೊಳ್ಳುತ್ತಾ ಏಕರೂಪಿಯಾಗಿ ಬೆಳೆಯುತ್ತಾ ಹೋಯಿತು. ಅದಕ್ಕೆ ಮುಖ್ಯ ಕಾರಣ ಭಾರತೀಯರು ಬ್ರಿಟಿಷ್ ಸಾಮ್ರಾಜ್ಯಶಾಹಿ ಶಕ್ತಿಯ
ವಿರುದ್ಧ ಸಂಘಟಿತರಾಗುತ್ತಾ ಹೋದದ್ದು. ಬ್ರಿಟಿಷರು ಭಾರತದ ಮೇಲೆ ತಮ್ಮ ಹಿಡಿತವನ್ನು ಸಾಧಿಸುತ್ತಿದ್ದಂತೆ
ಭಾರತೀಯರಲ್ಲಿ ರಾಷ್ಟ್ರೀಯ ಭಾವನೆ ಜಾಗೃತವಾಗುತ್ತಾ ಹೋಯಿತು. ಈ ಜಾಗೃತಭಾವನೆಯ ಮೊದಲ ಸೂಚನೆಯೇ
1857ರ ‘ಮೊದಲ ಸ್ವಾತಂತ್ರ್ಯ ಸಂಗ್ರಾಮ’. ಮುಂದೆ ಶಿಕ್ಷಣ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಸಂಭವಿಸಿತು.
ಇಂಗ್ಲಿಷ್ ಶಿಕ್ಷಣ ಪದ್ಧತಿ ಜ್ಯಾರಿಗೆ ಬಂದಾಗ ಅದು ರಾಷ್ಟ್ರೀಯತೆಯನ್ನು ನಿರ್ಣಾಯವಾಗಿ ಪ್ರಭಾವಿಸಿತು.
ಈ ಹಂತದಲ್ಲಿ ಪ್ರಾರಂಭವಾದ ಆರ್ಯ ಸಮಾಜ, ಬ್ರಹ್ಮ ಸಮಾಜ ಮತ್ತು ರಾಮಕೃಷ್ಣ ಮಿಶನ್ ಮೊದಲಾದ ಸಂಸ್ಥೆಗಳು ಭಾರತಾದ್ಯಂತ ಕೆಲಸ ಮಾಡುತ್ತಾ, ಭಾರತೀಯರಲ್ಲಿ ದೇಶದ ಬಗ್ಗೆ
ಹೊಸ ಅರಿವು ಮೂಡಿಸಿದುವು. ವೃತ್ತಪತ್ರಿಕೆಗಳ ಆರಂಭವೂ ರಾಷ್ಟ್ರೀಯ ಪ್ರಜ್ಞೆಯನ್ನು ಬಲವಾಗಿ
ರೂಪಿಸಿದವು. ಅದರಲ್ಲೂ ದೇಸೀ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳೇ ಬ್ರಿಟಿಷರ ವಿರುದ್ಧ
ಬರೆಯುತ್ತಾ ಜನರನ್ನು ಸಂಘಟಿಸಿ, ಆಳುವವರ ಕೆಂಗಣ್ಣಿಗೆ ಗುರಿಯಾದುವು. ರೈಲು ಮಾರ್ಗಗಳ ಜೋಡಣೆ, ಅಂಚೆ
ಮತ್ತು ತಂತಿ ವ್ಯವಸ್ಥೆ, ಪುಸ್ತಕಗಳ ಪ್ರಕಟಣೆ, ಭಾರತದಿಂದ ಲಂಡನ್‍ಗೆ ಹರಿದುಹೋಗುತ್ತಿದ್ದ ಸಂಪತ್ತು,
ಇದರ ಪರಿಣಾಮವೋ ಎಂಬಂತೆ 1875ರಿಂದ 1900ರ ನಡುವೆ ಕಾಣಿಸಿಕೊಂಡ 22 ಕ್ಷಾಮಗಳೇ ಮೊದಲಾದ ಘಟನೆಗಳು ಭಾರತೀಯರನ್ನು ಹತ್ತಿರ ಹತ್ತಿರ ತಂದುವು. ಈ ಭಾವನಾತ್ಮಕ
ಒಗ್ಗೂಡುವಿಕೆಯಿಂದಲೇ 1880ರ ದಶಕದಲ್ಲಿ ಅನೇಕ ರಾಷ್ಟ್ರೀಯ ಸಮ್ಮೇಳನಗಳು ನಡೆದುವು. ‘ಯಾವುದೇ ಸುಸಂಘಟಿತ
ಪ್ರಯತ್ನಗಳು ಅಖಿಲಭಾರತ ಮಟ್ಟದಲ್ಲಿ ನಡೆದರೆ ಮಾತ್ರ
ಸರಕಾರದ ಗಮನ ಸೆಳೆಯಲು ಸಾಧ್ಯ’ ಎಂಬ ಆ ಕಾಲದ ನಾಯಕರ ಅರಿವು ದೇಶವನ್ನು ಮೊದಲ ಬಾರಿಗೆ ಒಂದು
ಪಾತಳಿಯಲ್ಲಿ ನಿಲ್ಲಿಸಿತು. . ಹೀಗೆ ಉದಯವಾಗುತ್ತಿದ್ದ
ರಾಷ್ಟ್ರೀಯತೆಗೂ ವಸಾಹತು ಶಕ್ತಿಗಳಿಗೂ ನಡುವೆ ಸಂಘರ್ಷ ಅನಿವಾರ್ಯವಾಗಿತ್ತು. ಈ ಸಂಘರ್ಷ ಹೆಚ್ಚಾದಷ್ಟೂ
ರಾಷ್ಟ್ರೀಯತೆ ಬಲವಾಗಿ ಬೇರೂರುತ್ತಾ ಹೋಯಿತು.
ಹೀಗೆ
ರಾಷ್ಟ್ರೀಯ ವಿಮೋಚನಾ ಹೋರಾಟ ನಡೆಯುತ್ತಿದ್ದ ಕಾಲದಲ್ಲಿ, ನಾನು ಈ ಲೇಖನದ ಆರಂಭದಲ್ಲಿ ವಿವರಿಸಿದ ವೈವಿಧ್ಯಮಯ
ಸಾಂಸ್ಕೃತಿಕ ಘಟಕಗಳು ಕೂಡಾ ‘ಒಂದು ರಾಷ್ಟ್ರದ’ ಭಾಗವಾಗಿ
ಬೆಳೆಯುವಂತೆ ಪ್ರೋತ್ಸಾಹಿಸುವ ಚಿಂತನೆಗಳು ಬೆಳೆದುವು. ಇದು ಎಲ್ಲ ಕಡೆಯೂ ಏಕಪ್ರಕಾರವಾಗಿರಲಿಲ್ಲ.
ಈ ಪ್ರಕ್ರಿಯೆಯ ಒಳಗೂ ಹಲವಾರು ದ್ವಂದ್ವಗಳೂ ವ್ಯಕ್ತವಾಗುತ್ತಿದ್ದವು. ಕೆ ಎನ್ ಪಣಿಕ್ಕರ್ ಗುರುತಿಸಿದಂತೆ,
ಇಡೀ ಪ್ರಕ್ರಿಯೆಯನ್ನು ರಾಷ್ಟ್ರೀಯ ಎಂದು ಹೇಳುವುದನ್ನು ಪ್ರಶ್ನೆಸುವ ಪರಿಸ್ಥಿತಿ ಕೂಡಾ ಉಂಟಾಗುತ್ತಿತ್ತು.
ಅದು ಏನೇ ಇದ್ದರೂ ರಾಷ್ಟ್ರೀಯತೆಯ ಕುರಿತ ಸಿದ್ಧಾಂತಗಳು ಹೆಚ್ಚು ಕಡಿಮೆ ಆಧುನಿಕ ಕಲ್ಪನೆಯನ್ನು ಅವಲಂಬಿಸಿದ್ದುವು
ಎಂಬುದಂತೂ ನಿಜ.
ಇದಕ್ಕೆ
ಪೂರಕವಾಗಿ ಭಾರತೀಯ ಕಲಾಕ್ಷೇತ್ರದ ಅತಿ ಹಿರಿಯ ವಿದ್ವಾಂಸರಾದ ಆನಂದ ಕುಮಾರಸ್ವಾಮಿ, ವಸಾಹತು ವಿರೋಧೀ
ಆಂದೋಲನದ ಸೃಜನಶೀಲ ನಾಯಕ ಮಹಾತ್ಮಾ ಗಾಂಧಿ, ಹಿಂದೂ ಧರ್ಮಪ್ರತಿಪಾದಕ ವಿ ಡಿ ಸಾವರ್ಕರ್ ಮತ್ತು ರಾಷ್ಟ್ರೀಯತೆಯ
ಬಗ್ಗೆ ಅನುಮಾನ ಹೊಂದಿದ್ದ ವಿಶ್ವ ಕವಿ ರವೀಂದ್ರನಾಥ ಠಾಗೋರ್ ಅವರು ತಮ್ಮ ಪ್ರಖರ ಚಿಂತನೆಗಳ ಮೂಲಕ
ರಾಷ್ಟ್ರೀಯತೆಯ ಪರಿಕಲ್ಪನೆಯ ಮೇಲೆ ಪ್ರಭಾವ ಬೀರಿದ್ದರು. ಆನಂದ ಕುಮಾರ ಸ್ವಾಮಿಯವರು ಭಾರತದ ರಾಷ್ಟ್ರೀಯತೆಯನ್ನು
ಜನರ ಸಾಂಸ್ಕೃತಿಕ ಅನುಭವದಲ್ಲಿ ಗುರುತಿಸಿಬೇಕೆಂದು ಹೇಳಿದರಲ್ಲದೆ, ರಾಷ್ಟ್ರೀಯತೆಯನ್ನು ರಾಜಕಾರಣಿಗಳು
ಮತ್ತು ವ್ಯಾಪಾರಿಗಳು ನಿರ್ವಚಿಸಬಾರದು ಬದಲು ಕಲಾವಿದರು ಮತ್ತು ಕವಿಗಳು ನಿರ್ವಚಿಸಬೇಕೆಂದು’ ಹೇಳಿದರು.
ಗಾಂಧಿಯವರ ವಿಚಾರಧಾರೆ ಇದಕ್ಕಿಂತ ಸ್ವಲ್ಪ ಭಿನ್ನ. ಅವರು ಭಾರತದ ರಾಷ್ಟ್ರೀಯತೆಯನ್ನು ರಾಜಕೀಯ, ಆರ್ಥಿಕ,
ನಾಗರಿಕ, ಮತ್ತು ನೈತಿಕತೆಯ ಮೇಲೆ ಕಟ್ಟುವ ಬಹಳ ವಿಸ್ತಾರವಾದ ನೋಟವನ್ನು ಹೊಂದಿದವರು. ಇವೆರಡೂ ವಿಚಾರಧಾರೆಗಳಿಗೆ
ಭಿನ್ನವಾಗಿ ಅಥವಾ ಬಹುಮಟ್ಟಿಗೆ ವಿರೋಧವಾಗಿ ಸಾವರ್ಕರ್ ಅವರು ಹಿಂದೂ ಧರ್ಮಾಧರಿತವಾದ ರಾಷ್ಟ್ರೀಯತೆಯನ್ನು
ಪ್ರತಿಪಾದಿಸಿ, ಪಿತೃಭೂಮಿ, ಮಾತೃಭೂಮಿಯಂಥ ಪರಿಕಲ್ಪನೆಗಳನ್ನು ಪ್ರತಿಪಾದಿಸಿದರು. ಇವರ ಪರಿಕಲ್ಪನೆಯ
ಭಾರತದಲ್ಲಿ ಹಿಂದೂಗಳೇ ಪ್ರಧಾನವಾಗಿರುತ್ತಾರೆ. ಭಾರತದಲ್ಲಿ ‘ರಾಷ್ಟ್ರ ಜೀವನ’ ಎಂದರೆ ಅದು ‘ಹಿಂದೂ
ರಾಷ್ಟ್ರ ಜೀವನ’ ಎಂದು ವಾದಿಸುವ ಇವರು ‘ಹಿಂದೂ’ ಪರಿಕಲ್ಪನೆಯನ್ನು ಬಹುಮಟ್ಟಿಗೆ ಬ್ರಾಹ್ಮಣ್ಯಕ್ಕೆ
ಸೀಮಿತವಾಗಿರಿಸುತ್ತಾರೆ. ಕಾರಣ ಅವರಿಗೆ ಪುರಾಣ ಕಾಲದ ಶ್ರೀರಾಮನು ಆದರ್ಶ ಪುರುಷನಾಗಿ ಕಾಣುತ್ತಾನೆ.
ಇವರಿಗೆಲ್ಲ
ಹೋಲಿಸಿದರೆ ರವೀಂದ್ರನಾಥ ಠಾಗೋರರು ಬಹಳ ಕ್ರಾಂತೀಕಾರೀ ಧೋರಣೆಯನ್ನು ಅನುಸರಿಸುತ್ತಾರೆ. ರಾಷ್ಟ್ರೀಯತೆಯು ಉಂಟು ಮಾಡಿದ ಅನೇಕ ಅನಾಹುತಗಳನ್ನು ಕಂಡ
ಅವರಿಗೆ ರಾಷ್ಟ್ರೀಯತೆಯು ಒಂದು ಪಿಡುಗಿನಂತೆ ಕಂಡಿದೆ. ‘ಸ್ವಾರ್ಥ ಮತ್ತು ಆಕ್ರಮಣಶೀಲತೆ’ ಅದರ ಗುಣ
ಎಂದು ಅವರು ಭಾವಿಸಿದರು. ‘ರಾಷ್ಟ್ರಾಭಿಮಾನವಿದ್ದೆಡೆ ಎಳೆತನದಿಂದಲೇ ಎಲ್ಲರಿಗೂ ಇತರರ ಬಗೆಗೆ ದ್ವೇಷವನ್ನೂ
ಮಹತ್ವಾಕಾಂಕ್ಷೆಗಳನ್ನೂ ಉಪದೇಶಿಸಲಾಗುತ್ತದೆ. ಇತಿಹಾಸ ಕುರಿತಂತೆ ಅರೆ ಸತ್ಯ ಮತ್ತು ಮಿಥ್ಯೆಗಳನ್ನು
ಹೇಳಿಕೊಡಲಾಗುತ್ತದೆ. ಮಿಕ್ಕ ಜನಾಂಗಗಳ ಬಗ್ಗೆ ಇತರ ಸಂಸ್ಕೃತಿಗಳ ಬಗ್ಗೆ ಸುಳ್ಳು ಸುಳ್ಳು ತಿಳಿವು
ನೀಡಲಾಗುತ್ತದೆ. ಅನೇಕ ಸ್ಮಾರಕಗಳನ್ನು ಅದರಲ್ಲೂ ಬಹಳವಾಗಿ ವಿಕೃತಗೊಳಿಸಿದ ಸಂಗತಿಗಳ ಆಧಾರದ ಮೇಲೆ
ರಚಿಸುತ್ತಾರೆ. ಇಡೀ ಮಾನವ ಜನಾಂಗದ ಹಿತದೃಷ್ಟಿಯಿಂದ ಇವನ್ನೆಲ್ಲ ಶೀಘ್ರವಾಗಿ ಕೈಬಿಡಬೇಕು’ ಎಂಬುದು
ಅವರ ಖಚಿತ ತಿಳುವಳಿಕೆಯಾಗಿತ್ತು. ಈಚಿನ ದಿನಗಳಲ್ಲಿ ಅವರು ಮಾತು ನಿಜವಾಗುತ್ತಿರುವುದನ್ನು ನಾವು ನಿತ್ಯ
ಕಾಣುತ್ತಿದ್ದೇವೆ. ಆಧುನಿಕ ಅರಿವಿನ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಪುನಾರೂಪಿಸುವ ಪ್ರಯತ್ನಗಳು
ಹೇಗೆ ಪ್ರಶ್ನೆಗೆ ಉತ್ತರ ನೀಡದೆ, ಮೂಲಕ್ಕೆ ಹಿಂದಿರುಗಿ ಎಂಬ ವಾದವನ್ನೂ, ವರ್ತಮಾನದ ವಾಸ್ತವದ ನಿರಾಕರಣೆಯನ್ನೂ
ಒಟ್ಟಿಗೆ ನಿರ್ವಹಿಸುತ್ತವೆ ಎಂಬುದನ್ನು ಠಾಗೋರ್ ತುಂಬ ಪರಿಣಾಮಕಾರಿಯಾಗಿ ಹೇಳುತ್ತಾರೆ. ಅಂಬೇಡ್ಕರ್
ಅವರು ಸಂವಿಧಾನ ಬರೆವಾಗ ಇಂಥ ವಾದಗಳನ್ನು ಗಂಭೀರವಾಗಿ ಪರಿಶೀಲಿದ್ದರು.
ಹೀಗೆ
ಚಾರಿತ್ರಿಕವಾದ ಭಾರತೀಯ ಸಂಸ್ಕೃತಿಗೂ, ಆಯಾ ಕಾಲದ ಪ್ರಭುತ್ವಕ್ಕೂ, ಮತ್ತು ಇಂದು ನಾವು ಭಾವಿಸಿಕೊಳ್ಳುವ
ರಾಷ್ಟ್ರೀಯತೆಗೂ ಅಂಥ ಜೈವಿಕ ಸಂಬಂಧವೇನಿಲ್ಲ. ಆದರೆ ಇಂದು ಅವಕ್ಕೆ ಗಾಢವಾದ ಸಂಬಂಧಗಳನ್ನು ನೇಯಲಾಗುತ್ತಿದೆ.
ಆ ಮೂಲಕ ಒಂದು ರಾಷ್ಟ್ರದ ನಿರ್ಮಾಣದಲ್ಲಿ ಹಲವು ಸಂಸ್ಕೃತಿಗಳು ನಿರ್ವಹಿಸುವ ಪಾತ್ರವನ್ನು ಗೌಣಗೊಳಿಸಲಾಗುತ್ತದೆ.
ಉಗ್ರ ಮತ್ತು ಭಾವುಕ ರಾಷ್ಟ್ರೀಯತೆಯು ಸಾಂಸ್ಕೃತಿಕ
ವೈವಿಧ್ಯಗಳನ್ನು ಸಮಾನವಾಗಿ ಗೌರವಿಸುವುದಿಲ್ಲ. ಬ್ರಿಟಿಷರು ಬಹುರೂಪೀ ಮಹಾಭಾರತವನ್ನು ಒಂದು ಪಠ್ಯವಾಗಿ
ಮಾರ್ಪಡಿಸಿದಂತೆ ಹುಸಿ ರಾಷ್ಟ್ರೀಯತೆಯು ಬಹು ಸಂಸ್ಕೃತಿಯ ನೆಲೆಗಳನ್ನು ಏಕರೂಪಗೊಳಿಸುತ್ತದೆ.
ಈಚೆಗೆ
2011ರ ಜನಗಣತಿ ಪ್ರಕಟವಾಗಿದೆ. ಅದರಲ್ಲಿ ಉಲ್ಲೇಖಿತವಾದ ಪ್ರಕಾರ ಭಾರತ ದೇಶದಲ್ಲಿ 125 ಕೋಟಿಗೂ ಹೆಚ್ಚು
ಜನರಿದ್ದಾರೆ, 19569 ಮಾತೃಭಾಷೆಗಳಿವೆ. 4635 ಭಿನ್ನ ಭಿನ್ನ ಸಮುದಾಯಗಳಿವೆ. ನೂರಾರು
ಬಗೆಯ ಧರ್ಮಗಳಿವೆ. ಲಕ್ಷಾಂತರ ರೀತಿಯ ಆಚರಣೆಗಳಿವೆ. ಇಲ್ಲಿರುವ ಬಗೆ ಬಗೆಯ ದೇವರುಗಳ ಸಂಖ್ಯೆಯನ್ನು
ಲೆಕ್ಕ ಹಾಕಿದವರಿಲ್ಲ. ಭಾರತದ ಭೌಗೋಳಿಕ ವ್ಯಾಪ್ತಿಯೂ
ಹಿರಿದಾದುದು. ಅದರ ಭೂ ಲಕ್ಷಣವೂ ವೈವಿಧ್ಯಮಯವಾಗಿದೆ. ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮಗಳೆಂಬ ಸ್ಥೂಲ ಪ್ರಬೇಧಗಳನ್ನು
ಗಮನಿಸುವುದರ ಜೊತೆಗೆ ಇವತ್ತಿನ 29 ರಾಜ್ಯಗಳನ್ನು
ಒಮ್ಮೆ ಗಮನಿಸಿದರೂ ಸಾಕು. ಪ್ರತಿಯೊಂದು ರಾಜ್ಯವೂ ಒಂದೊಂದು ದೇಶದ ಹಾಗೆ ಕಾಣುತ್ತದೆ. ಮಳೆ
ಕಡಿಮೆ ಇರುವ ರಾಜಸ್ಥಾನವೂ ನಮ್ಮದೇ, ಅತಿವೃಷ್ಟಿಯಾಗುವ ಅಸ್ಸಾಂ ಕೂಡಾ ನಮ್ಮದೇ. ನಮ್ಮ ದೇಶದಲ್ಲಿ ನಮಗೆ
ಗೊತ್ತಿಲ್ಲದ ಭಾಷೆಗಳೇ ಜಾಸ್ತಿ. ಗೋಧಿ, ಜೋಳ, ಅಕ್ಕಿ, ನವಣೆ, ರೊಟ್ಟಿ, ದೋಸೆ, ಚಪಾತಿ, ಗೊಜ್ಜು,
ಚಟ್ನಿ, ಕೋಳಿ, ಕುರಿ, ಹಂದಿ, ಚೂಡಿದಾರ್, ಸೀರೆ ರವಿಕೆ,
ಅಂಗಿ, ಪಂಚೆ, ಶಾಲು, ಜುಬ್ಬಾ- ಹೀಗೆ ಎಷ್ಟೊಂದು ಅವತಾರಗಳಲ್ಲಿ ಭಾರತ ಪ್ರತ್ಯಕ್ಷವಾಗುತ್ತಿದೆ ಎಂದು
ಯಾರೂ ವಿವರಿಸಲಾರರು. ಭಾರತದ ಎಷ್ಟೊಂದು ಭಾಷೆಗಳಲ್ಲಿ ಸಾಹಿತ್ಯವೂ ರಚನೆಯಾಗುತ್ತಿದೆ! ಸಂತಾಲಿಯಿಂದ
ಸಂಸ್ಕೃತದವರೆಗಣ ಅವುಗಳ ಆಳ ಮತ್ತು ವಿಸ್ತಾರಗಳನ್ನು ಸರಿಯಾಗಿ ಅಳೆದವರಿಲ್ಲ. ನಾವು ದೂರದಿಂದ ‘ಒಂದು’
ಎಂದು ಭಾವಿಸುವ ಸಂಸ್ಕೃತದಲ್ಲಿಯೇ ನೂರಾರು ಪ್ರಾದೇಶಿಕ ವ್ಯತ್ಯಾಸಗಳಿವೆ. ವ್ಯಾಸರು ಬರೆದ ಮಹಾಭಾರತದಲ್ಲಿಯೇ
1129 ಭಿನ್ನ ಪಾಠಗಳನ್ನು ಗುರುತಿಸಲಾಗಿದೆ. ಭಾರತದ
ಯಾವ ಶಾಸ್ತ್ರಗಳೂ ಈ ದೇಶದ ವೈವಿಧ್ಯಕ್ಕೆ ಸರಿಯಾದ ವ್ಯಾಕರಣ ಬರೆದಿಲ್ಲ.
ಇಷ್ಟೊಂದು
ವ್ಯಾಪಕವಾದ ಭಾರತವನ್ನು ನಾವು ಉತ್ತರ ಮತ್ತು ದಕ್ಷಿಣಗಳನ್ನಾಗಿ ಬಹಳ ಪುರಾತನ ಕಾಲದಿಂದಲೂ ನೋಡಿಕೊಂಡು
ಬಂದಿದ್ದೇವೆ. ಹೀಗೆ ನೋಡುವುದರಲ್ಲಿ ಉತ್ತರದವರದ್ದೇ ಒಂದು ದೃಷ್ಟಿ, ದಕ್ಷಿಣದವರದ್ದೇ ಒಂದು ದೃಷ್ಟಿ.
ಇದನ್ನು ಗಮನಿಸಿದ್ದ ರಾಜಗೋಪಾಲಾಚಾರಿಯವರು ‘ಉತ್ತರ ಮತ್ತು ದಕ್ಷಿಣ ಎಂಬೆರಡು ಪ್ರತ್ಯೇಕ ಗಣತಂತ್ರಗಳನ್ನು
ರಚಿಸಿ, ಭಾರತವನ್ನು ಸಂಯುಕ್ತ ಗಣತಂತ್ರವನ್ನಾಗಿ ರೂಪಿಸೋಣ’ ಎಂಬ ಅಭಿಪ್ರಾಯವನ್ನೂ ಪ್ರಕಟಪಡಿಸಿದ್ದುಂಟು.
ಅಂಬೇಡ್ಕರ್ ಅವರು ಕೂಡಾ ದಕ್ಷಿಣದವರಿಗೆ ಹೈದರಾಬಾದ್ ಎರಡನೇ ರಾಜಧಾನಿಯಾದರೆ ಒಳ್ಳೆಯದು ಎಂದೂ ಭಾವಿಸಿದ್ದುಂಟು.
ಹಾಗಾದರೆ,
ದಕ್ಷಿಣ ಭಾರತ ಮತ್ತು ಉತ್ತರ ಭಾರತಗಳು ಭಿನ್ನ ಭಿನ್ನ ಗುಣಗಳನ್ನು ಹೊಂದಿರುವ ಜನರನ್ನು ಹೊಂದಿರುವ
ಭೂ ಭಾಗಗಳೇ? ಈ ಕುರಿತು ನಮ್ಮ ಸಾಹಿತ್ಯ ಕೃತಿಗಳು ಏನು ಹೇಳುತ್ತವೆ? ಒಂದು ಉದಾಹರಣೆಯನ್ನು ಗಮನಿಸೋಣ:
ಪ್ರಾಚೀನ
ಭಾರತದ ಎರಡು ಮಹತ್ವದ ಮಹಾ ಕಾವ್ಯಗಳೆಂದರೆ ರಾಮಾಯಣ ಮತ್ತು ಮಹಾಭಾರತ. ಈ ಎರಡು ಕಾವ್ಯಗಳಲ್ಲಿ ಯಾವುದು ಪ್ರಾಚೀನ ಎಂಬುದರ ಬಗ್ಗೆ
ಚರ್ಚೆಗಳು ನಡೆಯುತ್ತಲೇ ಇವೆ. ಐದು ಜನ ಗಂಡಂದಿರನ್ನು ಹೊಂದಿರುವ ದ್ರೌಪದಿಯನ್ನುಳ್ಳ ಮಹಾಭಾರತದ ಕಥೆಯು
ಒಬ್ಬಳೇ ಹೆಂಡತಿಯನ್ನು ಹೊಂದಿದ್ದ ರಾಮನ ಕತೆಯ ರಾಮಾಯಣಕ್ಕಿಂತ ಹೆಚ್ಚು ಪ್ರಾಚೀನವಾದದ್ದು ಎಂಬುದು ಒಂದು ವಾದ. ಇನ್ನೊಂದು ವಾದದ
ಪ್ರಕಾರ ರಾಮಾಯಣವು ತ್ರೇತಾಯುಗದಲ್ಲಿ ನಡೆದಿದ್ದು, ಮಹಾಭಾರತವು ದ್ವಾಪರ ಯುಗದಲ್ಲಿ ನಡೆದ್ದರಿಂದ ರಾಮಾಯಣವೇ
ಪ್ರಾಚೀನವಾದದ್ದು. ಇವುಗಳು ರಚನೆಯಾದ ಕಾಲದ ಕುರಿತಾದ ಚರ್ಚೆಗಳೂ ಕೊನೆಗೊಂಡಿಲ್ಲ. ಹೆಚ್ಚಿನ ವಿದ್ವಾಂಸರು
ರಾಮಾಯಣದ ಕಾಲವನ್ನು ಕ್ರಿ. ಪೂ 9ನೇ ಶತಮಾನಕ್ಕೆ ತಂದು ನಿಲ್ಲಿಸಿದರೆ, ಮಹಾಭಾರತವನ್ನ ಕ್ರಿ. ಪೂ
8ನೇ ಶತಮಾನಕ್ಕೆ ತಲುಪಿಸುತ್ತಾರೆ. ಏನೇ ಇರಲಿ, ಈ ಎರಡೂ ಮಹಾ ಕಾವ್ಯಗಳು ಅಖಂಡ ಭಾರತವನ್ನು ತಮ್ಮ ಕಾವ್ಯಭಿತ್ತಿಯಲ್ಲಿ
ಹಿಡಿದಿಟ್ಟಿರುವುದು ಮುಖ್ಯವಾಗಿದೆ. ಇವು ದಕ್ಷಿಣೋತ್ತರ ಭಾರತವನ್ನು ಹೇಗೆ ಕಂಡಿವೆ?
ಅಷ್ಟು
ಕಾಲದ ಹಿಂದೆಯೇ, ವಾಲ್ಮೀಕಿ ಮತ್ತು ವ್ಯಾಸರಿಗೆ ಅಖಿಲ ಭಾರತದ ಒಂದು ಕಲ್ಪನೆಯಂತೂ ಇತ್ತು. ಈ ಬೃಹತ್
ಭಾರತವು ಈಗಿನ ಭಾರತಕ್ಕಿಂತ ವ್ಯಾಪ್ತಿಯಲ್ಲಿ ಎಷ್ಟೋ ಹಿರಿದಾಗಿದ್ದು, ಇವತ್ತಿನ ಅಫ್ಘಾನಿಸ್ಥಾನದ ವರೆಗೆ
ಹರಡಿಕೊಂಡಿತ್ತು. ಧೃತರಾಷ್ಟನ ಪತ್ನಿಯಾದ ಗಾಂಧಾರಿಯು ಈಗಿನ ಕಂದಹಾರ ಪ್ರದೇಶಕ್ಕೆ ಸೇರಿದ ಗಾಂಧಾರ
ದೇಶದವಳು.
ಆದರೆ
ಈಗಿನಂತೆ, ಆಗಣ ಬೃಹತ್ ಭಾರತವನ್ನು ಒಂದು ಸೂತ್ರದಲ್ಲಿ
ಹಿಡಿದಿಡುವ ಒಂದು ಸಂವಿಧಾನವಾಗಲಿ, ರಾಷ್ಟ್ರಗೀತೆಯಾಗಲಿ, ಸೈನ್ಯವಾಗಲಿ ಇರಲಿಲ್ಲ. ಎಲ್ಲವೂ ತುಂಡು ತುಂಡಾದ ಸ್ವತಂತ್ರ ದೇಶಗಳೇ.
ಜನಪ್ರಿಯ ನಂಬಿಕೆಗಳ ಪ್ರಕಾರ ಅಂಥ ದೇಶಗಳ ಸಂಖ್ಯೆ ಒಟ್ಟು 56. ಇಷ್ಟಿದ್ದರೂ ಭೌಗೋಳಿಕ ಮತ್ತು ಹವಾಮಾನದ ಕಾರಣಗಳಿಗಾಗಿ ಇಲ್ಲಿಯ ಜನರು
ಹಲವು ಸಮಾನ ಗುಣಗಳನ್ನು ಹೊಂದಿದ್ದರು. ವಾಯುವ್ಯ ದಿಕ್ಕಿನ ಸಿಂಧೂ ನದಿಯ ಇಕ್ಕೆಲಗಳಲ್ಲಿನ ಫಲವತ್ತಾದ
ನೆಲ, ಉತ್ತರ ಭಾರತದ ಗಂಗಾ ಯಮುನಾ ನದಿಗಳ ಮೆಕ್ಕಲು ಮಣ್ಣಿನ ಬಯಲು ಪ್ರದೇಶ, ಮಧ್ಯ ಭಾರತದ ಜೀವ ನದಿಗಳಾದ
ನರ್ಮದಾ ಹಾಗೂ ತಪತಿಗಳ ಕಾಡು ಪ್ರದೇಶ, ವಿಂಧ್ಯಾ ಪರ್ವತಗಳ ದಕ್ಷಿಣಕ್ಕಿರುವ ಕೃಷ್ಣಾ, ತುಂಗ ಭದ್ರಾ
ಹಾಗೂ ಕಾವೇರಿ ನದಿಗಳ ದಡಗಳಲ್ಲಿ ಪ್ರಾಚೀನ ಕಾಲದಿಂದಲೂ ಜನ ವಾಸಿಸುತ್ತಿದ್ದರು. ಇಲ್ಲಿಯೇ ಮುಂದೆ ಮಹಾ
ಸಾಮ್ರಾಜ್ಯಗಳೂ ತಲೆ ಎತ್ತಿದುವು. ಎರಡು ನದಿಗಳ ನಡುವಣ ಫಲವತ್ತಾದ ಸ್ಥಳದ ಮೇಲಿನ ಒಡೆತನಕ್ಕಾಗಿ ಮಹಾಯುದ್ಧಗಳೇ
ನಡೆದವು. ಈ ವಿವಿಧ ಸಾಮ್ರಾಜ್ಯಗಳು ತಮಗೆ ಬೇಕಾದಂತೆ
ತಮ್ಮ ತಮ್ಮ ಪ್ರದೇಶವನ್ನು ಆಳಿಕೊಂಡಿದ್ದವು. ಇವಕ್ಕೆ ಉತ್ತರ ಭಾರತ, ದಕ್ಷಿಣ ಭಾರತ ಎಂದೆಲ್ಲಾ ಪ್ರಾದೇಶಿಕ
ಕುತೂಹಲ ಇದ್ದಂತಿಲ್ಲ. ಆದರೆ ಕವಿಗಳಿಗೆ ಇವುಗಳ ಕುರಿತು ಆಸಕ್ತಿ ಇದ್ದಂತೆ ತೋರುತ್ತದೆ. ಮಹಾಭಾರತವೂ
ಸೇರಿದಂತೆ ಕೆಲವು ಕಾವ್ಯಗಳು ನಿರೂಪಿಸುವ ಹಾಗೆ, ಇಡೀ ದೇಶದಲ್ಲಿ ನಡೆಯುತ್ತಿದ್ದ ಯುದ್ದಗಳು ಕೆಲವು
ನಿಯಮಗಳನ್ನು ಉತ್ತರ ದಕ್ಷಿಣ ಬೇಧವಿಲ್ಲದೆ ಸಮಾನವಾಗಿ ಪಾಲಿಸುತ್ತಿದ್ದವು. ಉದಾಹರಣೆಗೆ: ಸೂರ್ಯಾಸ್ತದ
ಮುನ್ನ ಹಾಗೂ ಸೂರ್ಯಾಸ್ತದ ಆನಂತರ ಯುದ್ದ ನಡೆಯಬಾರದು, ಒಬ್ಬ ಯೋಧನ ಮೇಲೆ ಅನೇಕರು ಹಲ್ಲೆ ಮಾಡಬಾರದು,
ಒಂದೇ ರೀತಿಯ ಅಥವಾ ಸಮಾನವಾದ ಆಯುಧಗಳನ್ನು ಹಿಡಿದವರು ಮಾತ್ರ ಪರಸ್ಪರ ಹೋರಾಡಬೇಕು, ಮಹಿಳೆಯರ ಮೇಲೆ ಆಕ್ರಮಣ ಮಾಡಬಾರದು, ಶರಣಾಗತನಾದ ಯೋಧನನ್ನು
ಕೊಲ್ಲಬಾರದು ಇತ್ಯಾದಿ. ಹೀಗೆ ಯುದ್ಧದ ನಿಯಮಗಳು ಇಡೀ ದೇಶಕ್ಕೆ ಅನ್ವಯವಾಗುತ್ತಿತ್ತು.
ವಿಂಧ್ಯೆಯೇ
ವಿಭಜನೆ ರೇಖೆ
ಅಖಿಲ
ಭಾರತ ಮಟ್ಟದಲ್ಲಿ ಅರಸಾಡಳಿತಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಅನ್ವಯವಾಗುವ ಕೆಲವು ಸಾಮಾನ್ಯ ನಿಯಮಗಳಿದ್ದದ್ದು
ನಿಜ. ಈ ನಡುವೆ ಭಾರತವನ್ನು ಭೌಗೋಳಿಕವಾಗಿ ಉತ್ತರ ಹಾಗೂ ದಕ್ಷಿಣವೆಂದು ವಿಭಜಿಸಿದ್ದು ನಿರ್ವಿವಾದವಾಗಿ
ವಿಂಧ್ಯಾ ಪರ್ವತ ಶ್ರೇಣಿಗಳು. ಇವತ್ತಿನ ಗುಜರಾತ್, ಉತ್ತರ ಪ್ರದೇಶ, ಬಿಹಾರ, ಛತ್ತಿಸ್‍ಘಡ್‍ನ್ನು ಆವರಿಸಿಕೊಂಡಿರುವ ವಿಂಧ್ಯಾಂಚಲ ಪರ್ವತ
ಶ್ರೇಣಿಯ ಉತ್ತರಕ್ಕಿರುವ ಜಾಗವನ್ನು ನಮ್ಮ ಪ್ರಾಚೀನ ಸಾಹಿತ್ಯಿಕ ಪಠ್ಯಗಳು ‘ಆರ್ಯಾವೃತ್ತ’ ಎಂದು ಕರೆದಿವೆ.
ವಿಂಧ್ಯದ ದಕ್ಷಿಣಕ್ಕಿರುವ ಭಾಗವನ್ನು ಸ್ಥೂಲವಾಗಿ ದ್ರಾವಿಡ ದೇಶವೆಂದು ಗುರುತಿಸಿವೆ. ಇದಕ್ಕೆ ಪೂರಕವಾಗಿ
ಉತ್ತರ ಭಾರತದಲ್ಲಿ ಇಂಡೋ - ಆರ್ಯನ್ ಭಾಷಾ ಗುಂಪಿಗೆ ಸೇರಿದ ಸಾವಿರಾರು ಭಾಷೆಗಳಿವೆ ಮತ್ತು ವಿಂಧ್ಯದ
ದಕ್ಷಿಣಕ್ಕೆ ದ್ರಾವಿಡ ಭಾಷಾ ಗುಂಪಿಗೆ ಸೇರಿದ 36ಕ್ಕೂ ಹೆಚ್ಚು ಭಾಷೆಗಳಿವೆ. ಈ ಎರಡೂ ಭಾಷಾ ಗುಂಪುಗಳ
ಲಿಪಿ, ಪದಕೋಶ, ವ್ಯಾಕರಣ, ಚರಿತ್ರೆ, ಲೋಕದೃಷ್ಟಿ ಮತ್ತು ಸಾಹಿತ್ಯಗಳಲ್ಲಿ ಅಪಾರ ವ್ಯತ್ಯಾಸಗಳಿವೆ.
ಆದಿ
ಶಂಕರರು ದಕ್ಷಿಣದ ಕೇರಳದಿಂದ ಉತ್ತರದ ಕಾಶ್ಮೀರದ ವರೆಗೆ ಮಾಡಿದ ಬೌದ್ದಿಕ ದಿಗ್ವಿಜಯ ಹೊರತು ಪಡಿಸಿದರೆ
ಉತ್ತರದವರು ದಕ್ಷಿಣದ ಮೇಲೆ ಮಾಡಿದ ಆಕ್ರಮಣವೇ ಹೆಚ್ಚು. ಉತ್ತರದವರ ದಕ್ಷಿಣ ದಿಕ್ಕಿನ ಪಯಣಕ್ಕೆ ತೊಂದರೆ
ಉಂಟು ಮಾಡುತ್ತಿದ್ದುದು ಮಧ್ಯ ಭಾರತದ ವಿಂಧ್ಯಾ ಪರ್ವತವೇ. ಇದುವೇ ಕಾರಣವಾಗಿ ಉತ್ತರ ಭಾರತದ ಅನೇಕ
ಪುರಾಣ ಪಠ್ಯಗಳು ವಿಂಧ್ಯ ಪರ್ವತವನ್ನು ಅಹಂಕಾರಿಯಾಗಿ ಚಿತ್ರಿಸಿವೆ. ವಿಂಧ್ಯನು ಆಕಾಶದುದ್ದಕ್ಕೆ ಬೆಳೆದು
ನಿಂತು ಸೂರ್ಯನ ಚಲನೆಗೆ ಅಡ್ಡಿಯುಂಟು ಮಾಡಿದಾಗ ಅಗಸ್ತ್ಯ ಮುನಿಯು ಅವನ ಅಹಂಕಾರವನ್ನು ಮುರಿದ ಕತೆÉಯು
ಜನಪ್ರಿಯವಾಗಿದೆ ಈ ಕತೆÉಯ ಸೃಷ್ಠಿ ಯಾವಾಗ ಆಯಿತೋ ತಿಳಿಯದು, ಆದರೆ ಉತ್ತರದ ಅಗಸ್ತ್ಯರು ವಿಂಧ್ಯ ಪರ್ವತದ
ಅಹಂಕಾರವನ್ನು ಮುರಿದು ದಕ್ಷಿಣಕ್ಕೆ ಬಂದು ನೆಲೆ ನಿಂತದ್ದನ್ನು
ಇದು ಹೇಳುತ್ತದೆ. ಜಗತ್ತನ್ನು ಸುತ್ತುವ ನಾರದರು ವಿಂಧ್ಯಾ ಪರ್ವತಕ್ಕೆ ತಲೆ ಬಾಗಿ ಗೌರವ ಸಲ್ಲಿಸಿದ್ದೂ
ಇದೆ. ಭಾರತದ ಉತ್ತರ ದಕ್ಷಿಣಗಳ ನಡುವೆ ತಲೆ ಎತ್ತಿ ನಿಂತಿರುವ ವಿಂಧ್ಯವನ್ನು ಭಾರತೀಯ ಪ್ರಾಚೀನ ಸಾಹಿತ್ಯವು
ಹೀಗೆ ಸಾಂಕೇತಿಕವಾಗಿ ಮರುಸೃಷ್ಟಿಸಿದೆ.
ರಾಮಾಯಣ
ಪ್ರಾಚೀನ
ಪಠ್ಯವಾದ ವಾಲ್ಮೀಕಿಯ ರಾಮಾಯಣವು ಬಹುಶ: ಮೊದಲ ಬಾರಿಗೆ ಉತ್ತರದ ಆಯೋಧ್ಯೆಯ ರಾಮನು ವಿಂಧ್ಯ ಪರ್ವತವನ್ನು
ದಾಟಿ ದಕ್ಷಿಣಕ್ಕೆ ಬಂದಿದ್ದನ್ನು ವಿವರಿಸಿದೆ. ಈ ಮಹಾಕಾವ್ಯದ ಪ್ರಕಾರ, ಶ್ರೀರಾಮನು ಗುಹನ ಸಹಾಯದಿಂದ
ಪ್ರಯಾಗ ಎಂಬಲ್ಲಿ ಗಂಗೆಯನ್ನು ದಾಟಿ, ಚಿತ್ರಕೂಟದ
ಕಡೆ ಬರುತ್ತಾನೆ. ಅಲ್ಲಿಂದ ದಂಡಕಾರಣ್ಯ ಪ್ರವೇಶಿಸಿ, ದಕ್ಷಿಣ ಭಾರತದ ಪಂಚವಟಿಗೆ ತಲುಪುತ್ತಾನೆ. ಈ
ಪಂಚವಟಿಯೇ ಕಿಷ್ಕಿಂಧ ಎಂದು ಜನಪ್ರಿಯವಾಗಿದ್ದು ಅದು ಇವತ್ತಿನ ಹಂಪಿಯಾಗಿದೆ. ಕಿಷ್ಕಿಂದೆಯ ವಾನರರೊಡಗೂಡಿಕೊಂಡು
ತಮಿಳುನಾಡಿನತ್ತ ನಡೆದ ರಾಮನು ರಾಮೇಶ್ವರ ತಲುಪಿ, ಅಲ್ಲಿ ಶಿವನನ್ನು ಪೂಜಿಸಿ, ಅಂತಿಮವಾಗಿ ಲಂಕೆಯನ್ನು
ಸೇರುತ್ತಾನೆ. ರಾಮನ ಈ ಪಯಣವು ರಾಜಕೀಯ ದಿಗ್ವಿಜಯದಂತೇನೂ ಕಾಣುವುದಿಲ್ಲ. ಏಕೆಂದರೆ ಪಂಚವಟಿಯಲ್ಲಿ ವಾಲಿಯನ್ನು ಸೋಲಿಸಿ ಆತ ಸುಗ್ರೀವನಿಗೆ ಪಟ್ಟವನ್ನು
ಕಟ್ಟುತ್ತಾನೆ, ತಾನು ಗೆದ್ದ ಲಂಕೆಯನ್ನು ವಿಭೀಷಣನಿಗೆ ಬಿಟ್ಟು ಹಿಂದೆ ಬರುತ್ತಾನೆ ಮತ್ತು ಆ ಭೂಪ್ರದೇಶಗಳ
ಮೇಲೆ ಎಂದೂ ತನ್ನ ಒಡೆತನವನ್ನು ಸ್ಥಾಪಿಸುವ ಉತ್ಸಾಹವನ್ನೂ ತೋರುವುದಿಲ್ಲ. ಅವನಿಗೆ ತನ್ನ ಹೆಂಡತಿಯನ್ನು ಹಿಂದೆ ತರಬೇಕಾಗಿತ್ತು ಅಷ್ಟೇ. ಹೀಗಾಗಿ
ರಾಮನ ದಕ್ಷಿಣ ಭಾರತದ ಪಯಣವನ್ನು ಒಂದು ಆಕ್ರಮಣವೆಂಬಂತೆ ಭಾವಿಸಿಕೊಳ್ಳುವುದು ಅನಗತ್ಯ. ಜೊತೆಗೆ ಮಹಾಕಾವ್ಯಗಳ
ಯಾನಕ್ಕೆ ಗಡಿ ರೇಖೆಗಳ ಹಂಗಿಲ್ಲವಲ್ಲ.
ಮಹಾಭಾರತ
ಮಹಾಭಾರತ
ಕಾವ್ಯದಲ್ಲಿ ಉತ್ತರದ ಅರಸರು ದಕ್ಷಿಣಕ್ಕೆ ಚಲಿಸಿದ್ದರ ಬಗ್ಗೆ ಯಾವುದೇ ಸೂಚನೆಗಳಿಲ್ಲ. ಜೂಜಿನಲ್ಲಿ
ಸೋತ ಪಾಂಡವರು 12 ವರ್ಷ ವನವಾಸವನ್ನೂ, ಒಂದು ವರ್ಷ ವನವಾಸವನ್ನೂ ಉತ್ತರ ಭಾರತದಲ್ಲಿಯೇ ಕಳೆದರು. ಕೃಷ್ಣನೂ
ಮಥುರಾ, ದ್ವಾರಕೆ, ಹಸ್ತಿನಾವತಿಗಳ ನಡುವೆಯೇ ಓಡಾಡಿದಂತಿದೆ. ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಲು
ಮಾತ್ರ ದಕ್ಷಿಣದ ಅರಸರು ಉತ್ತರದ ಕುರುಕ್ಷೇತ್ರದವರೆಗೆ ಹೋದಂತೆ ಉಲ್ಲೇಖಗಳು ಸಿಗುತ್ತವೆ. ಮಹಾಭಾರತದಲ್ಲಿ ದೊರೆಯುವ ವಿವಿಧ ದೇಶಗಳ ವಿವಿಧ ಅರಸು ಮನೆತನಗಳ ಹೆಸರುಗಳಲ್ಲಿ ಕರ್ನಾಟರು, ಆಂಧ್ರರೂ,
ದಮಿಳರು ಮತ್ತು ಚೇರರು ಇದ್ದಾರೆ. ಈಗಿನ ಹರಿಯಾಣಕ್ಕೆ ಸೇರಿದ ಕುರುಕ್ಷೇತ್ರದಲ್ಲಿ ನಡೆದ ಮಹಾ ಯುದ್ದದಲ್ಲಿ
ಒಟ್ಟು ಹನ್ನೊಂದು ಅಕ್ಷೋಹಿಣಿ ಸೈನ್ಯ ಸೇರಿತ್ತು ಎನ್ನಲಾಗಿದೆ. ಬಹುಶಃ ಭಾರತ ದೇಶದ ವಿವಿಧ ರಾಜರುಗಳು
ಒಂದೆಡೆ ಸೇರಿ ಮಾಡಿದ ಯುದ್ದ ಇದುವೆ ಮೊದಲಿರಬೇಕು ಈ ಯುದ್ದದಲ್ಲಿ ವಿರಾಟರು, ಕೇಕಯ, ಮಗಧ, ಚೇದಿ,
ಮತ್ಸ್ಯ, ಪಾಂಡ್ಯ, ಯದು, ಪ್ರಾಗ್ಜೋತಿಷÀ, ಕಳಿಂಗ, ಅಂಗ, ಸಿಂಧೂ, ಅವಂತಿ, ಗಾಂಧಾರ, ಪಾಂಚಾಲ, ಕುರು,
ಮಾದ್ರ, ಮಾಹಿಷ್ಮತಿ, ಕಾಂಬೊಜ, ಚೋಳ ಮೊದಲಾದ ಅರಸರು ಸೇರಿದ್ದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ದಕ್ಷಿಣದ
ಅರಸರು ಉತ್ತರದ ಕಡೆಗೆ ಹೋದದ್ದು ಅದುವೇ ಮೊದಲು ಮತ್ತು ಅದುವೇ ಕೊನೆ.
ಕುರುಕ್ಷೇತ್ರ
ಯುದ್ಧದಿಂದ ಇವತ್ತಿನವರೆಗೆ ಉತ್ತರ ಭಾರತವು ಅನೇಕ ಮಹಾ ಯುದ್ಧ್ದಗಳಿಗೆ ಸಾಕ್ಷಿಯಾಗಿದೆ. ಮಧ್ಯ ಏಷಿಯಾ,
ಮಂಗೋಲಿಯಾ ಮೊದಲಾದ ಕಡೆಗಳಿಂದ ಭೂ ಮಾರ್ಗವಾಗಿ ಭಾರತಕ್ಕೆ ಬಂದವರು ಖೈಬರ್ ಮತ್ತು ಬೋಲಾನ್ ಕಣಿವೆಗಳನ್ನು
ದಾಟಿ ಭಾರತಕ್ಕೆ ಪ್ರವೇಶ ಮಾಡಿದ್ದೇ ಉತ್ತರದಿಂದ. ಬಂದವರು ನೆಲೆ ನಿಂತದ್ದು, ಸಿಂಧೂ, ಸರಸ್ವತಿ, ಯಮುನಾ
ಮತ್ತು ಗಂಗಾ ನದಿಗಳ ದಂಡೆಗಳಲ್ಲಿ. ಒಂದು ಕಾಲದಲ್ಲಿ ತುಂಬಿ ಹರಿಯುತ್ತಿದ್ದ ಸರಸ್ವತಿ ನದಿ ತೀರವು
ಹೀಗೆ ಬಂದವರನ್ನು ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳುತ್ತ ಮಹಾಜ್ಞಾನಿಗಳ ನೆಲೆವೀಡಾಯಿತು.ಬಂದವರು ಮೊದಲೇ
ಇದ್ದವರೊಡನೆ ಸಂಘರ್ಷಿಸಲೇಬೇಕು. ಸಂಘರ್ಷದ ಆನಂತರ ಸಮನ್ವಯಕ್ಕೂ ತೆರೆದುಕೊಳ್ಳಬೇಕು. ಇವೆಲ್ಲವೂ ದೊಡ್ಡ
ಮಟ್ಟದಲ್ಲಿ ನಡೆದದ್ದು ಉತ್ತರ ಭಾರತದಲ್ಲಿಯೇ. ಮೂರು ಕಡೆ ಸಮುದ್ರ ಇರುವ ದಕ್ಷಿಣ ಭಾರತದಲ್ಲಿ ಅಷ್ಟೊಂದು
ದೊಡ್ಡ ಮಟ್ಟದಲ್ಲಿ ಸಂಘರ್ಷ ನಡೆದದ್ದೇ ಕಡಿಮೆ.
ಕ್ರಿ.ಪೂ
14ನೇ ಶತಮಾನದಷ್ಟು ಹಿಂದೆ ಪಂಜಾಬ್‍ನ ರಾವಿ ನದಿಯ ದಂಡೆಯಲ್ಲಿ ನಡೆದ ರಾಜಾ ಸುದಾಸನ ಯುದ್ಧ , ಕ್ರಿ
ಪೂ ಸುಮಾರು 9 ನೇ ಶತಮಾನದಲ್ಲಿ ನಡೆದ ಕುರುಕ್ಷೇತ್ರ ಯುದ್ಧ, ಕ್ರಿ.ಪೂ 262 ರಲ್ಲಿ ನಡೆದ ಮೌರ್ಯ ಯುದ್ಧ,
ಕ್ರಿ ಶ 4ನೇ ಶತಮಾನದಲ್ಲಿ ನಡೆದ ನಂದ ಅರಸರ ಯುದ್ಧ,
ಸುಮಾರು ಅದೇ ಕಾಲಕ್ಕೆ ನಡೆದ ಪುರೂರವನ ಪ್ರಖ್ಯಾತ ಯುದ್ಧ, ಕ್ರಿ.ಶ 712 ರ ಗುಜರ ಪ್ರತಿಹಾರ ಯುದ್ಧ್ದ,
1526 ರ ಪಾಣಿಪತ್ ಯುದ್ಧÀ್ದ, 1739 ರ ಕರ್ನಾಲ್ ಯುದ್ಧ, 1540 ರ ಕನೌಜ್ ಯುದ್ಧ, 1757 ರ ಪ್ಲಾಸಿ
ಯುದ್ಧ, 1764 ರ ಬಕ್ಸರ್ ಯುದ್ಧ ಮೊದಲಾದುವು ಬಹಳ
ಪ್ರಸಿದ್ದವಾದವು. ಮೌರ್ಯರು, ಗುಪ್ತರು, ಕುಶಾಣರು, ಮೊಗಲರು, ಮರಾಠರು ಮತ್ತು ಬ್ರಿಟಿಷರು ಮಹಾಯುದ್ದಗಳನ್ನು
ನಡೆಸಿದುದು ಉತ್ತರ ಭಾರತದಲ್ಲಿಯೇ.
ಸ್ವಾತಂತ್ರ್ಯೋತ್ತರ
ಭಾರತದಲ್ಲಾದರೂ ಅಷ್ಟೆ. ಭಾರತ-ಚೀನಾ, ಭಾರತ ಪಾಕಿಸ್ಥಾನ ಯುದ್ಧಗಳ ಬಿಸಿ ಮೊದಲು ತಟ್ಟಿದ್ದು ಉತ್ತರ
ಭಾರತಕ್ಕೆ. ಇಂಥ ನೂರಾರು ಘಟನೆಗಳು ಉತ್ತರ ಭಾರತವನ್ನು ಆಳವಾಗಿ ಘಾಸಿಗೊಳಿಸಿವೆ. ಭೌಗೋಳಿಕವಾಗಿ ಬಹಳ
ದೂರ ಇರುವ ದಕ್ಷಿಣ ಭಾರತ ಈ ಯುದ್ದಗಳಿಗೆ ಪ್ರತಿಕ್ರಿಯಿಸಿರುವುದು ಹೌದಾದರೂ ಉತ್ತರ ಭಾರತದಷ್ಟು ಅದು
ದಣಿದಿಲ್ಲ. ಚರಿತ್ರೆಯ ನಿರಂತರ ಯುದ್ಧಗಳು ಉತ್ತರ ಭಾರತೀಯರನ್ನು ಆಕ್ರಮಣಕಾರಿಯಾಗಿ ಬೆಳೆಸಿವೆ. ಮಾನವ
ಸಂಬಂಧಗಳನ್ನು ಅವು ಶಿಥಿಲಗೊಳಿಸಿವೆ.
ಈ
ಮಟ್ಟದ ಬೆಳವಣಿಗೆಗಳು ದಕ್ಷಿಣ ಭಾರತದಲ್ಲಿ ನಡೆದಿರುವುದು ಕಡಿಮೆ. ಚಾಲುಕ್ಯ, ಪಲ್ಲವರ ಮತ್ತು ಚೋಳರ
ನಡುವಣ ಯುದ್ಧಗಳು, ವಿಜಯನಗರ ಪತನಗೊಂಡ ತಾಳಿಕೋಟೆ
ಯುದ್ಧ, ಬ್ರಿಟಿಷರು ಮತ್ತು ಹೈದರಾಲಿ/ಟಿಪ್ಪುವಿನ
ನಡುವೆ ನಡೆದ ಅಂಗ್ಲೋ ಮೈಸೂರು ಯುದ್ಧಗಳು ಸಾಕಷ್ಟು ಅನಾಹುತಗಳನ್ನು ಉಂಟು ಮಾಡಿರುವುದು ನಿಜ. ಆದರೆ
ಅವನ್ನು ಉತ್ತರ ಭಾರತದ ಆಕ್ರಮಣಗಳೊಂದಿಗೆ ಹೋಲಿಸಿ ನೋಡಲಾಗದು. ಇದರಿಂದಾಗಿ ಉತ್ತರ ಭಾರತೀಯರಿಗೆ ದಕ್ಷಿಣ ಭಾರತೀಯರು ತುಂಬ
ಶಾಂತಿ ಪ್ರಿಯರಾಗಿರುವಂತೆ ಕಾಣುತ್ತದೆ.
ಸ್ವಾತಂತ್ರ್ಯ
ಚಳುವಳಿ
ಕಳೆದ
ಸುಮಾರು 150 ವರ್ಷಗಳಿಂದೀಚೆ ನಡೆದ ಭಾರತದ ಸ್ವಾತಂತ್ರ್ಯ ಸಂಗ್ರಾಮವೂ ಉತ್ತರ ಭಾರತದಲ್ಲಿ ನಡೆದಷ್ಟು
ತೀವ್ರವಾಗಿ ದಕ್ಷಿಣದಲ್ಲಿ ನಡೆದಿಲ್ಲ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮವು ಉತ್ತರ ಭಾರತದ ಬಹುಭಾಗವನ್ನು
ಒಳಗೊಂಡಿತ್ತು. ಈ ಹೋರಾಟದಲ್ಲಿ ಭಾಗವಹಿಸಿದ, ಪ್ರಾಣ ಕಳೆದುಕೊಂಡ, ಗಲ್ಲಿಗೇರಿದ ಅನೇಕ ವೀರರ ಕುರಿತು
ಅವಧ್. ಬುಂದೇಲ್‍ಖಂಡ್, ಬೋಜಪುರ್, ಮೀರತ್ ಮೊದಲಾದ ಕಡೆಗಳಲ್ಲಿ ನೂರಾರು ಜನಪದ ಹಾಡುಗಳು ಹುಟ್ಟಿಕೊಂಡವು.
ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಬೇಗಂ ಹಜ್ರತ್ ಮಹಲ್, ರಾಣಾ ಮಾಧವ್ ಸಿಂಗ್, ಕುನ್ವರ್ ಸಿಂಗ್ ಮೊದಲಾದವರ
ಕುರಿತ ಜನಪದ ಕಾವ್ಯಗಳು ಇಂದಿಗೂ ಜನಮಾನಸದಲ್ಲಿ ವ್ಯಾಪಕವಾಗಿ ಉಳಿದಿದೆ.
ಉತ್ತರ
ಭಾರತದಲ್ಲಿ ಮೈಥಿಲಿ, ಭೋಜಪುರಿ, ಅವಧಿ, ಗರ್ವಾಲಿ, ಉರ್ದು ಮೊದಲಾದ ಅನೇಕ ಭಾಷೆಗಳಿದ್ದರೂ ಸ್ವಾತಂತ್ರ್ಯ
ಸಂಗ್ರಾಮದ ಸಮಯದಲ್ಲಿ ಅವೆಲ್ಲವೂ ‘ಹಿಂದಿ ಭಾಷಿಕ ಸಮುದಾಯ’ವಾಗಿ ಪರಿವರ್ತನೆ ಹೊಂದಿ, ಒಂದು ಬಗೆಯ ಒಗ್ಗಟ್ಟನ್ನು ಭಾಷೆಯ ಮೂಲಕವೇ ಸಾಧಿಸಿಕೊಳ್ಳುವಲ್ಲಿ
ಯಶಸ್ವಿಯಾದುವು. ಹಿಂದಿ ಪತ್ರಿಕೋದ್ಯಮ ಮತ್ತು ಸಾಹಿತ್ಯ ದೊಡ್ಡದಾಗಿ ಬೆಳೆದದ್ದೇ ಆ ಹೊತ್ತಿಗೆ.
1860 ಮತ್ತು 75 ರ ನಡುವಿನ 15 ವರ್ಷಗಳ ಅವಧಿಯಲ್ಲಿ ಉತ್ತರ ಭಾರತದ ಹಿಂದೀ ಭಾಷೆಯ ಸುಮಾರು 30 ಪತ್ರಿಕೆಗಳನ್ನು
ಬ್ರಿಟಿಷರು ನಿಷೇಧಿಸಿದ್ದರು ಎಂದರೆ ಈ ಚಟುವಟಿಕೆಗಳ ಗಾಂಭೀರ್ಯ ಅರ್ಥವಾಗುತ್ತದೆ. ಆದರೆ ದಕ್ಷಿಣ ಭಾರತವು ಕನ್ನಡ, ತಮಿಳು, ತೆಲುಗು ಮಲೆಯಾಳ
ಮತ್ತಿತರ ಭಾಷೆಗಳ ನಡುವೆ ಹಂಚಿ ಹೋಗಿತ್ತು. ಹೀಗಾಗಿ
ಉತ್ತರ ಭಾರತದಲ್ಲಿ ಒಟ್ಟಾರೆಯಾಗಿ ಜನಾಂದೋಲನವು ಒಂದು ಸಂಘಟಿತ ರೋಷವನ್ನು ಪ್ರಕಟಿಸಿದ ಹಾಗೆ ದಕ್ಷಿಣ ಭಾರತದಲ್ಲಿ
ಪ್ರಕಟಿಸಲಾಗಲಿಲ್ಲ. ದಕ್ಷಿಣ ಭಾರತವು ಸ್ವಾತಂತ್ರ್ಯ ಸಂಗ್ರಾಮದ ಜೊತೆಗೆ ಭಾಷಾವಾರು ರಾಜ್ಯಗಳ ರಚನೆಯ
ಬಗೆಗೆಯೂ ಗಮನ ಕೇಂದ್ರೀಕರಿಸಿದ್ದು ಇದಕ್ಕೆ ಇನ್ನೊಂದು ಕಾರಣ.
ಸ್ವಾತಂತ್ರ್ಯ
ಹೋರಾಟಕ್ಕೆ ಹಿಂದಿ ಸಾಹಿತ್ಯವು ಬಹಳ ತೀವ್ರವಾಗಿ ಪ್ರತಿಕ್ರಿಯಿಸಿತು, ಬನಾರಾಸ್, ಅಲಹಾಬಾದ್, ಖಾನ್
ಪುರ್, ಝಾನ್ಸಿ, ಛಾಪ್ರಾ, ಚಂಡೀಗಡ್, ಕಲ್ಕತ್ತಾ, ಪಾಟ್ನಾ ಮೊದಲಾದ ಪ್ರದೇಶಗಳು ಕ್ರಾಂತೀಕಾರೀ ಸಾಹಿತ್ಯದ
ಸೃಷ್ಟಿಗೆ ಕಾರಣವಾದ ಮಹತ್ವದ ಕೇಂದ್ರಗಳಾದುವು. ಭರತೇಂದು ಹರಿಶ್ಚಂದ್ರ. ಮಹಾವೀರ್ ಪ್ರಸಾದ್ ದ್ವಿವೇದಿ,
ಜಯಶಂಕರ್ ಪ್ರಸಾದ್, ಸೂರ್ಯಕಾಂತ್ ತ್ರಿಪಾಟಿ ( ನಿರಾಲ ),ಮಹಾದೇವಿ ವರ್ಮ, ಸುಮಿತ್ರಾನಂದ ಪಂಥ್, ರಾಮ್ದಾರಿ ಸಿಂಗ್ ಮೊದಲಾದ ಹಿಂದಿ
ಲೇಖಕರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಮಹತ್ವವಾದುದು. ಈ ಮಟ್ಟದ ನೇರ ಮತ್ತು ತಕ್ಷಣದ
ಪ್ರತಿಕ್ರಿಯೆ ದಕ್ಷಿಣ ಭಾರತದಲ್ಲಿ ಕಾಣಿಸಲಿಲ್ಲ.
ಹೀಗೆ
ಪುರಾಣ ಮತ್ತು ಚಾರಿತ್ರಿಕ ಕಾಲದಿಂದಲೂ ಉತ್ತರ ಮತ್ತು
ದಕ್ಷಿಣ ಭಾರತಗಳು ತಮ್ಮ ಭಿನ್ನತೆಗಳನ್ನು ಮೆರೆಯುತ್ತಲೇ ಬಂದಿವೆ. ಆದರೆ ಈ ಭಿನ್ನತೆಗಳು ಈಗ ಕಡಿಮೆಯಾಗುತ್ತಿವೆ.
ಸಮೂಹ ಸಂಪರ್ಕಗಳಲ್ಲಾದ ಕ್ರಾಂತೀಕಾರೀ ಬದಲಾವಣೆ, ಬದಲಾಗುತ್ತಿರುವ ಭಾರತೀಯ ರಾಜಕಾರಣ , ಮತ್ತು ಜಾಗತೀಕರಣ
ತಂದಿತ್ತಿರುವ ಹೊಸ ಬಗೆಯ ಆರ್ಥಿಕ ನೀತಿ ಇದಕ್ಕೆ ಮುಖ್ಯ ಕಾರಣವಾಗಿದೆ.